Wednesday, 18th September 2024

ವಚನಗಳು ರೂಪಿಸಿದ ಸಾಮಾಜಿಕ ಕ್ರಾಂತಿ !

ನೆನಪು

ಮಲ್ಲಿಕಾರ್ಜುನ ಹೆಗ್ಗಳಗಿ

ವೈಚಾರಿಕ ಪ್ರಜ್ಞೆಯುಳ್ಳ ಸಾಮಾಜಿಕ ಬದ್ಧತೆಯ ಜನರ ಒಂದು ಸಣ್ಣ ಸಮೂಹ ಜಗತ್ತನ್ನು ಬದಲಿಸಬಹುದು ಎಂಬುದಕ್ಕೆ ಕರ್ನಾಟಕದ ಕಲ್ಯಾಣದಲ್ಲಿ ೧೨ನೇ ಶತಮಾನದಲ್ಲಿ ನಡೆದ ಶರಣರ ಚಳುವಳಿ ಒಂದು ಅಪೂರ್ವ ಉದಾಹರಣೆ ಯಾಗಿದೆ ಎಂದು ಅಮೆರಿಕದ ಖ್ಯಾತ ಸಾಂಸ್ಕೃತಿಕ ಮಾನವಶಾಸ್ತ್ರಜ್ಞ ಮಾರ್ಗರೇಟ್ ಮೀಡ್ ಹೇಳಿದ ಮಾತು ಗಮನಾರ್ಹವಾಗಿದೆ. ತೀಕ್ಷ್ಣ ಒಳನೋಟದ ಮಾನವ ಶಾಸದ ವಿಶ್ಲೇಷಕಿಯಾಗಿದ್ದ ಮಾರ್ಗರೇಟ್ ಅವರ ಅಭಿಮತ ಅಧ್ಯಯನಕ್ಕೆ ಯೋಗ್ಯ ಸಂಗತಿಯಾಗಿದೆ.

ಬಸವಣ್ಣನವರ ನೇತೃತ್ವದಲ್ಲಿ ಒಂದುಗೂಡಿದ ಶರಣರು ಜಪ -ತಪ, ಪೂಜೆ, ಆರಾಧನೆಗೆ ಮಹತ್ವ ಕೊಡದೆ ಕಾಯಕಕ್ಕೆ ಮೊದಲ ಆದ್ಯತೆಯನ್ನು ಕೊಟ್ಟರು. ತಾವು ಮಾಡುವ ಕೆಲಸವನ್ನು ಪ್ರೀತಿಸುವುದು ಮತ್ತು ದುಡಿದು ಉಣ್ಣುವುದು ಬದುಕಿನ ಮಾರ್ಗವನ್ನಾಗಿ ಮಾಡಿಕೊಂಡರು. ಇದರಿಂದ ಸರಳ ಬದುಕು ರೂಪಿತವಾಯಿತು. ಅವರ ಮುಂದಿನ ಹೆಜ್ಜೆ ಸಮಾಜದಲ್ಲಿ ತುಂಬಿರುವ ಅಸಮಾನತೆ ಮೂಡನಂಬಿಕೆ ಅಸ್ಪೃಶ್ಯತೆ ಮತ್ತು ಲಿಂಗ ತಾರತಮ್ಯ ವನ್ನು ನಿವಾರಿಸುವುದು ಆಗಿತ್ತು. ತಮ್ಮ ಚಿಂತನ ಮಂಥನದಿಂದ ಗಟ್ಟಿಗೊಂಡ ಅನುಭವವನ್ನು ವಚನಗಳ ರೂಪದಲ್ಲಿ ಜನರಿಗೆ ತಿಳಿಸುವ ವಿಧಾನ ಆರಂಭಿಸಿದರು.

ಇದು ಧಾರ್ಮಿಕ ಚಳುವಳಿ ಮಾತ್ರ ಆಗಿರಲಿಲ್ಲ. ಧಾರ್ಮಿಕದ ಜತೆಗೆ ನೈತಿಕ ಸಾಮಾಜಿಕ ಆರ್ಥಿಕ ತಾತ್ವಿಕ ರಂಗದಲ್ಲಿ ನಡೆದ ಉತ್ಕ್ರಾಂತಿ ಎಂಬುದನ್ನು ಗಮನಿಸಬೇಕು ಎಂದು ಅವರು ಹೇಳಿದ್ದಾರೆ. ಬಸವಣ್ಣ ಕುಳಿತು ಚರ್ಚಿಸುತ್ತಿದ್ದ ಸ್ಥಳವೇ ಅನುಭವ ಮಂಟಪವಾಯಿತು. ಇಲ್ಲಿ ಸೇರುತ್ತಿದ್ದ ಶರಣರೆಲ್ಲ
ಸಾಮಾನ್ಯ ಹಿನ್ನೆಲೆಯಿಂದ ಕೆಲವರ್ಗದಿಂದ ಬಂದವರು. ಡೋರ ಕಕ್ಕಯ್ಯ, ಮಡಿವಾಳ ಮಾಚಯ್ಯ, ಹರಳಯ್ಯ, ಚೌಡಯ್ಯ, ಮಾರಯ್ಯ,ಲಕ್ಕಮ್ಮ,
ಸಂಕವ್ವೆ, ಗೊಗ್ಗವ್ವೆ, ಮುಂತಾದವರು ಅನುಭವ ಮಂಟಪದ ಸದಸ್ಯರಾಗಿದ್ದರು.

ಬಸವಣ್ಣ ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದವರೊಂದಿಗೆ ಕುಳಿತು ಚರ್ಚಿಸುವ ಮೂಲಕ ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಹೊಣೆಗಾರಿಕೆ, ದಾಸೋಹದ ಮಹತ್ವ ಅರಿತುಕೊಂಡರು. ತಾವು ಅರಿತುಕೊಂಡಂತೆ ನಡೆದರು ಲಯಬದ್ಧವಾಗಿ ಜನರಾಡುವ ಕನ್ನಡ ಭಾಷೆಯಲ್ಲಿ ವಚನಗಳನ್ನು ರೂಪಿಸಿದರು.

ವಚನಗಳು ಬರಿ ಆದರ್ಶ ನಡೆಯನ್ನು ಮಾತ್ರ ಹೇಳದೆ ಸಾಮಾಜಿಕ ತಪ್ಪುಗಳನ್ನು ಧೈರ್ಯವಾಗಿ ಖಂಡಿಸುತ್ತವೆ. ದಯವೇ ಧರ್ಮದ ಮೂಲವಯ್ಯ, ಕಾಯಕವೇ ಕೈಲಾಸ,ದೇಹವೇ ದೇಗುಲ, ಎಂದು ಹೇಳಿದ ಬಸವಾದಿ ಶರಣರು ಆಚಾರವೇ ಸ್ವರ್ಗ ಅನಾಚಾರವೇ ನರಕ,ಪುರಾಣ ಎಂಬುದು ಪುಂಡರಗೋಷ್ಠಿ, ವೇದಕ್ಕೆ ಒರೆಯ ಕಟ್ಟುವೆ, ಆಗಮದ ಮೂಗು ಕೊಯ್ಯುವೆ ಎಂದು ನಿಷ್ಠುರವಾಗಿ ಶರಣರು ಹೇಳಿದ್ದಾರೆ. ಜಾಗತಿಕ ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ಇಂಥ ಧ್ವನಿ ಈಗ ಕೇಳಿ ಬರಬೇಕಾಗಿದೆ ಎಂದು ಮಾರ್ಗರೇಟ್ ವಿಶ್ಲೇಷಿಸಿದ್ದಾರೆ.

ಶರಣರ ಒಂದೊಂದು ವಚನವೂ ಬದುಕಿಗೆ ಮಹಾ ದಿವ್ಯಾನುಭೂತಿ ಕೊಡುತ್ತವೆ. ಅವುಗಳನ್ನು ಸಾಮಾಜಿಕ ಹಿನ್ನೆಲೆಯಲ್ಲಿ ನೋಡಬೇಕು ಎಂದು ಕೆಲವು
ವಚನಗಳನ್ನು ವಿಶ್ಲೇಷಿಸಿzರೆ. ಆಯ್ದಕ್ಕಿ ಮಾರಯ್ಯ ಬಸವಣ್ಣನವರ ಜೊತೆಗಿದ್ದ ಶರಣ. ಒಂದು ದಿನ ಅಧಿಕ ಅಕ್ಕಿ ಮನೆಗೆ ತೆಗೆದುಕೊಂಡು ಬರುತ್ತಾನೆ . ಇದನ್ನು ಕಂಡು ಅವನ ಹೆಂಡತಿ ಲಕ್ಕಮ್ಮ ಪ್ರತಿಭಟಿ ಸುವ ರೀತಿ ಅಚ್ಚರಿ ಉಂಟುಮಾಡುತ್ತದೆ. ಅಧಿಕ ಅಕ್ಕಿ ಮನೆಗೆ ಯಾಕೆ ತಂದಿರಿ? ಎಂದು ಪ್ರಶ್ನಿಸುತ್ತಾಳೆ. ಸುಲಭವಾಗಿ ಹೆಚ್ಚು ಅಕ್ಕಿ ದೊರಿತವು. ನಾಳೆಗೂ ಒಂದಿಷ್ಟು ಇರಲಿ ಎಂದು ತಂದಿರುವುದಾಗಿ ಮಾರಯ್ಯ ಉತ್ತರ ನೀಡುತ್ತಾನೆ. ಲಕ್ಕಮ್ಮನಿಗೆ ಇದು ಸರಿ ಬರುವುದಿಲ್ಲ. ಈಶ್ವರ ಒಪ್ಪುವುದಿಲ್ಲ ಎಂದು ವಚನ ರೂಪದಲ್ಲಿ ಹೀಗೆ ಹೇಳುತ್ತಾಳೆ.

‘ಒಮ್ಮನವ ಮೀರಿ ಇಮ್ಮದಲಿ ತಂದಿರಿ, ಇದು ನಿಮ್ಮ ಮನವೋ ? ಬಸವಣ್ಣನ ಅನುಮಾನದಚಿತ್ತವೋ? ಇದು ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ
ಸಲ್ಲದ ಬೋನ. ಅಲ್ಲಿಯೇ ಸುರಿದು ಬನ್ನಿ ಮಾರಯ್ಯ!’ ಇಂಥ ಸತ್ಯ ಶುದ್ಧ ಮಾತು ೧೨ನೇ ಶತಮಾನದ ಒಬ್ಬ ಹೆಣ್ಣುಮಗಳಿಂದ ಬರುತ್ತದೆ. ಇದರ ಹಿಂದೆ ಬೆಳಕಾಗಿ ನಿಂತವರು ವಿಶ್ವಗುರು ಬಸವಣ್ಣ. ಬಸವಣ್ಣನವರು ಬಿಜ್ಜಳನ ರಾಜನ ಆಸ್ಥಾನದಲ್ಲಿ ವಿತ್ತ ಸಚಿವ ಆಗಿದ್ದರು. ಉತ್ಪಾದನೆ, ವಿತರಣೆ ಮತ್ತು ದಾಸೋಹದ ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ಮೊದಲು ಪರಿಚಯಿಸಿದರು ಬಸವಣ್ಣ. ಕಂದಾಯ ರೂಪದಲ್ಲಿ ಸಂಗ್ರಹವಾದ ಸಂಪತ್ತನ್ನು ಜನರ ಕಲ್ಯಾಣ ಕೆಲಸಗಳಿಗೆ ಮಾತೃ ಬಳಸಬೇಕುಎಂಬ ದಿಟ್ಟ ನಿಲುವು ತಾಳಿದ್ದರು.

ಕಾಯಕ ಮತ್ತು ದಾಸೋಹ ಅವರ ಆರ್ಥಿಕ ಚಿಂತನೆಯ ಮುಖ್ಯ ಅಂಶಗಳು. ದುಡಿಮೆಯಿಂದ ಸಂಪತ್ತು ಸೃಷ್ಟಿಯಾಗುತ್ತದೆ. ಕೃಷಿಕರು, ಕಮ್ಮಾರರು, ಬಡಿಗರು, ಕಟ್ಟಡ ಕೆಲಸಗಾರರು, ಪಶು ಸಂಗೋಪನೆ ಮಾಡುವವರು,ಕರಕುಶಲ ಕೆಲಸಗಾರರು ಹೀಗೆ ಎಲ್ಲ ದುಡಿಮೆಗಾರರಿಂದ ಸಂಪತ್ತು ಸೃಷ್ಟಿ ಯಾಗುತ್ತದೆ. ಆರೋಗ್ಯವಾಗಿರುವ ಮನುಷ್ಯರು ದುಡಿಯಬೇಕು. ಆರೋಗ್ಯಪೂರ್ಣ ವ್ಯಕ್ತಿಗೆ ದುಡಿಯದೇ ಉಣ್ಣುವ ಹಕ್ಕು ಇಲ್ಲ. ಅತಿಯಾದ ಸಂಪತ್ತಿನ ಸಂಗ್ರಹ ಸಾಮಾಜಿಕ ಹಿಂಸೆ . ಗಳಿಕೆಯ ಉಳಿದ ಭಾಗವನ್ನು ಜನ ಕಲ್ಯಾಣಕ್ಕೆ ವ್ಯಯ ಮಾಡಬೇಕು. ಇವು ಬಸವಣ್ಣನವರು ರೂಪಿಸಿದ ಸಾಮಾಜಿಕ,ಆರ್ಥಿಕ ನೀತಿಯಾಗಿವೆ. ಅವರು ಇನ್ನೊಂದು ವಚನ ಕೆಲಸವೇ ಪೂಜೆ ಎಂದು ಹೇಳುತ್ತದೆ .

ಕಾಯಕದಲ್ಲಿ ಸಣ್ಣದು, ದೊಡ್ಡದು ಎಂಬ ಭೇದವಿಲ್ಲ. ಕೆಲಸವೇ ಪೂಜೆ, ಕೆಲಸವನ್ನು ಪ್ರೀತಿಸಬೇಕು, ಆನಂದ ಪಡಬೇಕು. ದುಡಿಮೆಯಿಂದ ಸಂಪತ್ತು, ದುಡಿಮೆಯಿಂದ ಆರೋಗ್ಯ ಭಾಗ್ಯ ದೊರೆಯುವದೆಂಬ ಮೌಲಿಕ ಸತ್ಯವನ್ನು ಬಸವಣ್ಣ ಜನಸಾಮಾನ್ಯರಿಗೆ ತಿಳಿಸಿದರು. ಶರಣರು ಬಯಲನ್ನು
ಪ್ರೀತಿಸುವವರು. ಅವರು ಗುಡಿ ಕಟ್ಟಲಿಲ್ಲ, ಮಠ ಕಟ್ಟಲಿಲ್ಲ ಜನರ ಮನಸ್ಸನ್ನು ಕಟ್ಟುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಿದರು. ಹಾಗೆಯೇ ಬಡವರು ಶೋಷಿತರು ಕೆಳ ವರ್ಗ ದವರನ್ನು ಒಂದುಗೂಡಿಸುವ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿದರು. ಇವರೆಲ್ಲ ನನ್ನ ಬಂಧುಗಳು ಎಂದು ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಮನಮುಟ್ಟುವಂತೆ ಹೇಳಿದ್ದಾರೆ.

‘ಅಪ್ಪನು ನಮ್ಮ ಮಾದರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ ಚಿಕ್ಕಯ್ಯ ನಮ್ಮಯ್ಯ ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ ಕೂಡಲ ಸಂಗಯ್ಯ.’ ಮುಖ್ಯವಾಗಿ ಅಸ್ಪೃಶ್ಯರನ್ನು ಅವರು ಅಪ್ಪಿಕೊಂಡದ್ದರಿಂದಲೇ ಬಹುದೊಡ್ಡ ಸಾಮಾಜಿಕ ಕ್ರಾಂತಿ ನಡೆಸಲು ಸಾಧ್ಯವಾಯಿತು. ಕಂದಾಚಾರ, ಮೂಢನಂಬಿಕೆ ಹೆಸರಿನಲ್ಲಿ ಜನಸಾಮಾನ್ಯರ ವಿಪರೀತ ಶೋಷಣೆ ನಡೆಯುತ್ತಿತ್ತು. ಅಸ್ಪೃಶ್ಯತೆ ಆಚರಣೆ ಜನರ ಆತ್ಮ ಗೌರವವನ್ನು ನುಂಗಿ ಹಾಕಿತ್ತು. ಶೋಷಣೆಗಾಗಿ ರೂಪಿಸಿದ ತಂತ್ರಇದಾಗಿದೆ ಎಂದು ಬಸವಣ್ಣನವರು ಮನವರಿಕೆ ಮಾಡಿಕೊಟ್ಟರು. ನೆಲವೊಂದೇ ಹೊಲಗೇರಿ ಶಿವಾಲಯಕ್ಕೆ, ಜಲ ಒಂದೇ ಶೌಚಾಚಮನಕ್ಕೆ ಕುಲವೊಂದೇ ತನ್ನ ತಾನರಿದವರಿಗೆ ಎಂದು ಹೇಳುವ ಮೂಲಕ ಜಾಗೃತಿ ಮೂಡಿಸಿದರು.

ವಚನ ಶಬ್ದಕ್ಕೆ ಪ್ರತಿe, ಆತ್ಮಸಾಕ್ಷಿಯ ಮಾತು ಎಂಬ ಅರ್ಥವಿದೆ. ನುಡಿದಂತೆ ನಡೆದ ಆತ್ಮಸಾಕ್ಷಿಯ ವಾಣಿ ವಚನವೆನಿಸುತ್ತದೆ.ವ್ಯಕ್ತಿ ಕಲ್ಯಾಣ ಮತ್ತು ಸಮಾಜ ಕಲ್ಯಾಣ ವಚನ ಚಳುವಳಿಯ ಆಶಯವಾಗಿತ್ತು. ಶರಣರು ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಧ್ವನಿಯಾಗಿ ಸುಮಾರು ೨೦ ಸಾವಿರ ವಚನಗಳನ್ನು ರಚಿಸಿzರೆ. ಶರಣರ ವಚನಗಳನ್ನು ಭಕ್ತಿ ಭಾವ, ಬರಿ ಧಾರ್ಮಿಕ ಹಿನ್ನೆಲೆಯಲ್ಲಿ ನೋಡದೆ ಮಾನವ ಶಾಸದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನಡೆಯಲಿ ಎಂಬುದು ಮಾರ್ಗೇಟ್ ಅವರ ಮಹತ್ವದ ಸಲಹೆಯಾಗಿದೆ.

(ಲೇಖಕರು: ಸಾಹಿತಿ ಹಾಗೂ ಪತ್ರಕರ್ತರು)

Leave a Reply

Your email address will not be published. Required fields are marked *