ವೀಕೆಂಡ್ ವಿತ್ ಮೋಹನ್
camohanbn@gmail.com
‘ನೆಹರು ಕುಟುಂಬದ ಕುಡಿ’ ಎಂಬ ಅರ್ಹತೆಯಿದ್ದರೆ ಸಾಕು ಕಾಂಗ್ರೆಸ್‌ನಿಂದ ದೇಶದ ಪ್ರಧಾನಮಂತ್ರಿ ಆಗಬಹುದೆಂಬುದು ಕೆಲ ಕಾಂಗ್ರೆಸ್ಸಿಗರ ಗ್ರಹಿಕೆ. ನೆಹರು ಕಾಲವಾದ ನಂತರ ಕಾಮರಾಜ್‌ರಂಥ ನಾಯಕರಿಗೆ ಪ್ರಧಾನಿಯಾಗುವ ಅರ್ಹತೆಯಿದ್ದರೂ ಇಂದಿರಾ ಗಾಂಧಿಯವರು ಬಿಡಲಿಲ್ಲ.
ಭಾರತವನ್ನು ವಿಭಜಿಸಿದ ಕುಟುಂಬದ ಕುಡಿಯಿಂದ ಭಾರತ್ ಜೋಡೋ ಹೆಸರಿನಲ್ಲಿ ಪಾದಯಾತ್ರೆಯೊಂದು ನಡೆಯುತ್ತಿದೆ. ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರರ ಮಾತು ಕೇಳಿ ನೆಹರು ಕುಟುಂಬದ ಕುಡಿಯನ್ನು ವೈಭವೀಕರಿಸುವ ಮಾರ್ಕೆಟಿಂಗ್ ತಂತ್ರಗಾರಿಕೆಯ ಮತ್ತೊಂದು ಭಾಗವಿದು.
ಸೋನಿಯಾ ಗಾಂಧಿಯವರು ಪುತ್ರವ್ಯಾಮೋಹದ ಸುಳಿಯಲ್ಲಿ ಸಿಲುಕಿ ಒದ್ದಾಡುವುದನ್ನು ನೋಡಲಾಗುತ್ತಿಲ್ಲ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರಿಗೆ ಇದ್ದಂಥ ರಾಜಕೀಯ ಪ್ರಬುದ್ಧತೆ ರಾಹುಲರಿಗಿಲ್ಲ. ತಮಗೆ ಬಲವಿರುವ ರಾಜ್ಯಗಳಲ್ಲಿ ಅತಿಹೆಚ್ಚು ದಿನಗಳ ಕಾಲ ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್, ಕರ್ನಾಟಕದಲ್ಲಿ ಅದನ್ನೀಗ ಮುಂದು ವರಿಸುತ್ತಿದೆ.
ಯಾತ್ರೆ ಗುಂಡ್ಲುಪೇಟೆಗೆ ಪ್ರವೇಶಿಸಿದ ದಿನವೇ, ಫ್ಲ್ಯಾಕ್ಸ್‌ಗಳ ಹರಿಯುವಿಕೆಯ ಸ್ವಾಗತ ಅದಕ್ಕೆ ಸಿಕ್ಕಿತ್ತು. ಯಾತ್ರೆಯ ಮೊದಲ ದಿನವೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರರನ್ನು ವೇದಿಕೆಯ ಮೇಲೆ ಅಕ್ಕಪಕ್ಕ ನಿಲ್ಲಿಸಿಕೊಂಡು ಇಬ್ಬರ ಕೈಗಳನ್ನೂ ಮೇಲೆತ್ತಿಸಿ ಡೋಲು ಬಾರಿಸುವ ಮೂಲಕ ಕರ್ನಾಟಕ ಕಾಂಗ್ರೆಸ್ಸಿನ ಒಳಜಗಳ ವನ್ನು ಶಮನಮಾಡಲು ಯತ್ನಿಸಿದ್ದ ರಾಹುಲ ರಿಗೆ ಕಾಂಗ್ರೆಸ್ ಪಕ್ಷವನ್ನು ಜೋಡಿಸುವ ಅವಕಾಶ ಸಿಕ್ಕಿತ್ತು.
ಹಳ್ಳಿಗಳಲ್ಲಿನ ಜನರು ‘ರಾಹುಲ್ ಗಾಂಧಿ ಬಂದಿದ್ದಾನಂತೆ, ನೋಡಿಬರೋಣ’ ಎಂದುಕೊಂಡು ರಸ್ತೆಗಳ ಪಕ್ಕದಲ್ಲಿ ನಿಂತು ನೋಡಿ, ನಂತರ ತಮ್ಮ ದಿನನಿತ್ಯದ ಕೆಲಸಗಳೆಡೆಗೆ ಹೊರಟರೇ ಹೊರತು, ರಾಹುಲರಲ್ಲಿ ಪರ್ಯಾಯ ನಾಯಕನನ್ನು ಕಾಣಲಿಲ್ಲ. ಮಾರ್ಕೆಟಿಂಗ್ ಕಂಪನಿಯ ಪೂರ್ವಯೋಜನೆಯಂತೆ ಅಲ್ಲಲ್ಲಿ ಯುವಕ-ಯುವತಿಯರು ಅವರ ಕೈಹಿಡಿದು ತಮ್ಮ ಬೆಂಬಲ ಸೂಚಿಸುವ ರೀತಿಯ ಸಿನಿಮಾ ದೃಶ್ಯಗಳು ಮನರಂಜಿಸಿದವು.
ಕೇರಳ-ತಮಿಳುನಾಡುಗಳಲ್ಲೂ ಇದು ಕಂಡುಬಂದಿತ್ತು. ಕಾರ್ಖಾನೆಯ ಪಾಳಿಯಂತೆ ದಿನದಲ್ಲಿ ಕನಿಷ್ಠವೆಂದರೂ 4 ಬಾರಿ ಅಲ್ಲಲ್ಲಿ ಸಾಮಾನ್ಯ ಜನರ ವೇಷತೊಟ್ಟ ಕಾಂಗ್ರೆಸ್ಸಿನ ನಟರು ರಾಹುಲರನ್ನು ಪ್ರೀತಿಯಿಂದ ಆಲಿಂಗಿಸುವ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು! ರಾಹುಲ್ ನೇತೃತ್ವದ ಈ ಪಾದಯಾತ್ರೆಯನ್ನು ಮಾಧ್ಯಮದವರು ಎಷ್ಟೇ ಬಿತ್ತರಿಸಿದರೂ ವೀಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಗುವುದಿಲ್ಲ, ಬದಲಾಗಿ ಇಳಿಮುಖವಾಗುತ್ತದೆ ಎಂಬುದು ಎಲ್ಲರೂ ಒಪ್ಪಿಕೊಳ್ಳಬೇಕಿರುವ ಸತ್ಯ.
ಕನ್ನಡದ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ‘ಡ್ರಾಮಾ ಜೂನಿಯರ‍್ಸ್’ ಎಂಬ ಕಾರ್ಯಕ್ರಮದ ಮುಂದುವರಿದ ಭಾಗ ವಾಗಿ ಕಾಂಗ್ರೆಸ್ಸಿನ ಈ ‘ಡ್ರಾಮಾ ಸೀನಿಯರ‍್ಸ್’ ಪಾದಯಾತ್ರೆ ಕನ್ನಡಿಗರನ್ನು ರಂಜಿಸುತ್ತಿದೆ. ಮಾರ್ಕೆಟಿಂಗ್ ಕಂಪನಿಯವರು ಹೇಳಿಕೊಟ್ಟ ಹಾಗೆ ತಾವು ಕಂಠಪಾಠ ಮಾಡಿದ ವಿಷಯವನ್ನು ಹೇಳಿದರೆ ಎಲ್ಲಿ ಅನಾಹುತವಾಗುತ್ತದೋ ಎಂಬ ಭಯದಿಂದ ಪಾದಯಾತ್ರೆಯಲ್ಲಿ ರಾಹುಲ್ ಹೆಚ್ಚಾಗಿ ಮಾತನಾಡುತ್ತಿಲ್ಲ.
ಪಾಪ, ಅವರ ಬದಲಿಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಮಾತನಾಡುವ ಪರಿಸ್ಥಿತಿ ಎದುರಾಗಿದೆ. ಸಿನಿಮಾದಲ್ಲಿ ನಟನೊಬ್ಬನ ಪಾತ್ರಕ್ಕೆ ಮತ್ತೊಬ್ಬ ಕಂಠದಾನ ಮಾಡಿದಂತಾಗಿದೆ ರಾಹುಲ್‌ರ ಮೂಕಯಾತ್ರೆ. ಅತ್ತ, ಯಾರು ಹೆಚ್ಚು ಮಾತನಾಡಬೇಕೆಂಬ ಬಗ್ಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಪೈಪೋಟಿ ಶುರುವಾಗಿತ್ತು, ಅದನ್ನು ಶಮನಗೊಳಿಸುವ ಯತ್ನದಲ್ಲೂ ರಾಹುಲ್
ವಿಫಲರಾದರು.
ಈ ಗಾಯದ ಮೇಲೆ ಉಪ್ಪು ಸುರಿದಂತೆ ಇತ್ತ ಗೋವಾ ರಾಜ್ಯದಲ್ಲಿ ಕಾಂಗ್ರೆಸ್ಸಿನ ೮ ಶಾಸಕರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ದರು, ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಥ್ -ಸಚಿನ್ ಪೈಲಟ್ ನಡುವೆ ಮನಸ್ತಾಪ ಶುರುವಾಗಿ ದೊಡ್ಡ ನಾಟಕವೇ ನಡೆಯಿತು. ಈ ಯಾತ್ರೆಯ ವೇಳೆ, ರಾಹುಲ್ ಜತೆಗೆ ಯಾರು ಹೆಚ್ಚು ಕಾಣಿಸಿಕೊಳ್ಳಬೇಕೆಂಬ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಪೈಪೋಟಿ ನಡೆಯುತ್ತಿದೆಯೇ ಹೊರತು, ಒಗ್ಗಟ್ಟಿನ ಮಂತ್ರ ಜಪಿಸಿ ಪಕ್ಷ ಸಂಘಟಿಸುವ ವರ್ತನೆ ಕಾಣುತ್ತಿಲ್ಲ.
ಅತ್ತ ಡಿಕೆಶಿ ಸಿಕ್ಕಸಿಕ್ಕ ನಾಯಕರನ್ನು ಎಳೆತಂದು ರಾಹುಲರ ಪಕ್ಕದಲ್ಲಿ ನಿಲ್ಲಿಸಿ ೨ ನಿಮಿಷ ಮಾತಾಡಿಸಿ ಫೋಟೋ ಕ್ಲಿಕ್ಕಿಸಿ ಕಳುಹಿಸುತ್ತಿದ್ದರೆ, ಇತ್ತ ಸಿದ್ದರಾಮಯ್ಯ ಬುರುಡೆ ಬಿಟ್ಟುಕೊಂಡು ಮಾಧ್ಯಮಗಳಲ್ಲಿ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ. ಕರ್ನಾಟಕ ದಲ್ಲಿ ಸಾಗುತ್ತಿರುವ ಈ ಪಾದಯಾತ್ರೆಯಲ್ಲಿ ಪರಮೇಶ್ವರ್, ಎಂ.ಬಿ. ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ರಾಮಲಿಂಗಾರೆಡ್ಡಿ, ಜಾರ್ಜ್, ದೇಶಪಾಂಡೆ, ಕೃಷ್ಣ ಭೈರೇಗೌಡರಂಥ ಕಾಂಗ್ರೆಸ್ಸಿಗರಿಗೆ ರಾಹುಲರ ಜತೆ ಫೋಟೋ ತೆಗೆಸಿ ಕೊಂಡಿದ್ದಷ್ಟೇ ಸಿಕ್ಕಿದ್ದು.
ಅಬ್ಬಬ್ಬಾ ಎಂದರೆ ಬಳ್ಳಾರಿಯ ಸಮಾವೇಶದಲ್ಲಿ ವೇದಿಕೆಯಲ್ಲಿ ಕೂರಲು ಜಾಗ ಸಿಗಬಹುದು ಅಥವಾ ೫ ನಿಮಿಷದ ಮಾತಿಗೆ ಮೈಕು ಸಿಗಬಹುದಷ್ಟೇ. ಈ ಯಾತ್ರೆಯ ಬಹುದೊಡ್ಡ ವಿಪರ್ಯಾಸವೆಂದರೆ, ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿಯವರು ನಿರ್ಮಿಸಿರುವ ರಸ್ತೆಯ ಮೇಲೆ ನಡೆಯುತ್ತ, ಬಿಜೆಪಿ ವಿರುದ್ಧ ಸುಳ್ಳು ಹೇಳಬೇಕು, ಭ್ರಷ್ಟಾಚಾರ ನಿಗ್ರಹದ ಕುರಿತು ಮಾತಾಡಬೇಕು!
‘ನೆಹರು ಕುಟುಂಬದ ಕುಡಿ’ ಎಂಬ ಅರ್ಹತೆಯಿದ್ದರೆ ಸಾಕು ಕಾಂಗ್ರೆಸ್ ಪಕ್ಷದಿಂದ ದೇಶದ ಪ್ರಧಾನಿಮಂತ್ರಿ ಆಗಬಹುದೆಂಬುದು ಕೆಲ ಕಾಂಗ್ರೆಸ್ಸಿಗರ ಗ್ರಹಿಕೆ. ನೆಹರು ಕಾಲವಾದ ನಂತರ ಕಾಮರಾಜ್‌ರಂಥ ನಾಯಕರಿಗೆ ಪ್ರಧಾನಮಂತ್ರಿಯಾಗುವ ಎಲ್ಲ ಅರ್ಹತೆಯಿದ್ದರೂ ಇಂದಿರಾ ಗಾಂಧಿಯವರು ಬಿಡಲಿಲ್ಲ. ಅವರು ಪ್ರಧಾನಿಯಾಗುವುದಕ್ಕೆ ಕಾರಣವಾಗಿದ್ದು ‘ನೆಹರು ಪುತ್ರಿ’ ಎಂಬ ಅರ್ಹತೆಯಷ್ಟೇ.
ಕುಟುಂಬ ರಾಜಕಾರಣಕ್ಕೆ ಮಣೆಹಾಕುವ ಕಾಂಗ್ರೆಸ್ಸಿಗರು ಅಂದು ಈ ಬೆಳವಣಿಗೆಯನ್ನು ವಿರೋಽಸುವುದಕ್ಕೇ ಹೋಗಲಿಲ್ಲ. ಇಂದಿರಾ ಮರಣದ ನಂತರ ಅವರ ‘ಬಚ್ಚಾ’ ರಾಜೀವ್ ಗಾಂಧಿ ಕಾಂಗ್ರೆಸ್‌ನಿಂದ ಪ್ರಧಾನಿಯಾದಾಗಲೂ ಕಾಂಗ್ರೆಸ್ಸಿಗರು ಉಸಿರೆತ್ತಲಿಲ್ಲ. ರಾಜೀವರ ಮರಣಾನಂತರ ಸೋನಿಯಾರ ‘ಬಚ್ಚಾ’ ತುಂಬ ಸಣ್ಣವನಿದ್ದ ಕಾರಣ ಪ್ರಧಾನಿ ಪಟ್ಟಕ್ಕೇರಿಸ ಲಾಗಲಿಲ್ಲ.
2004ರಲ್ಲಿ ಸ್ವತಃ ಸೋನಿಯಾರವರು ಪ್ರಧಾನಿಯಾಗಬೇಕೆಂದುಕೊಂಡಾಗ ಅಡ್ಡಬಂದಿದ್ದು ಸುಬ್ರಹ್ಮಣ್ಯ ಸ್ವಾಮಿ. ಇದಾದ ತರುವಾಯ, ಸತತ ೮ ವರ್ಷಗಳಿಂದಲೂ ತಮ್ಮ ‘ಬಚ್ಚಾ’ ರಾಹುಲರನ್ನು ಪ್ರಧಾನಿಯಾಗಿಸಲು ಸೋನಿಯಾ ಭಗೀರಥ ಯತ್ನದಲ್ಲಿ ನಿರತರಾಗಿದ್ದಾರೆ. ಈಗಲೂ ಅಷ್ಟೇ, ಸೋನಿಯಾರ ‘ಬಚ್ಚಾ’ನನ್ನು ಪ್ರಧಾನಿಯಾಗಿಸಿದರೆ ತಮ್ಮ ಹಿತಾಸಕ್ತಿಗಳನ್ನೆಲ್ಲ ನೆರವೇರಿಸಿಕೊಳ್ಳಬಹುದೆಂಬ ಏಕೈಕ ಉದ್ದೇಶದಿಂದ ಕಾಂಗ್ರೆಸ್ಸಿಗರು ಅವರ ಪರವಾಗಿ ಒಲ್ಲದ ಮನಸ್ಸಿನಿಂದ ಪಾದಯಾತ್ರೆ ಮಾಡುತ್ತಿದ್ದಾರೆ.
ಯಡಿಯೂರಪ್ಪನವರು ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿ ಕುರಿತಾಗಿ ‘ಬಚ್ಚಾ’ ಎಂದು ಉಲ್ಲೇಖಿಸಿದ್ದು ನೆಹರು ಕುಟುಂಬದ ರಾಜಕಾರಣಕ್ಕೆ ಪರಿಪೂರ್ಣವಾಗಿ ಹೊಂದಿಕೊಳ್ಳುವಂತಿತ್ತು ಎನ್ನಬೇಕು. ಏಕೆಂದರೆ ಕಾಂಗ್ರೆಸ್ ಪಕ್ಷವು ನೆಹರು ಕುಟುಂಬದ ‘ಬಚ್ಚಾ’ಗಳ ಮೂಲಕವಷ್ಟೇ ರಾಜಕೀಯ ಮಾಡುತ್ತ ಬಂದಿದೆ. ನೆಹರು ಕುಟುಂಬದ ‘ಬಚ್ಚಾ’ಗಳ ವಿರುದ್ಧ ಮಾತನಾಡಿದರೆ ಕಾಂಗ್ರೆಸ್ಸಿನಲ್ಲಿ ಉಳಿಗಾಲವಿಲ್ಲ. ಹೀಗೆ ಸೋನಿಯಾರ ‘ಬಚ್ಚಾ’ ಬಗ್ಗೆ ಮಾತನಾಡಿದ್ದರ ಫಲವಾಗಿ ಗುಲಾಮ್ ನಬಿ ಆಜಾದ್ ಅವರು ಪಕ್ಷದಿಂದ ಹೊರಹೋಗುವಂತಾಯಿತು.
ಹೀಗೇ ಮಾತಾಡಿದ ಕಪಿಲ್ ಸಿಬಲ್‌ರಿಗೂ ಪಕ್ಷದಿಂದ ಗೇಟ್‌ಪಾಸ್ ನೀಡಲಾಯಿತು. ನೆಹರು ಕುಟುಂಬದ ‘ಬಚ್ಚಾ’ನನ್ನು ನಾಯಕನನ್ನಾಗಿ ಬಿಂಬಿಸುವ ಸಲುವಾಗಿ ಸಿದ್ದರಾಮಯ್ಯ ಕೂಡ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಚುನಾವಣೆಗೆ ಹೆದರಿ ಅಮೇಥಿ ಕ್ಷೇತ್ರದಿಂದ ಕೇರಳದ ವಯನಾಡ್ ಕ್ಷೇತ್ರಕ್ಕೆ ಪಲಾಯನ ಮಾಡಿದ ರಾಹುಲ್ ಗಾಂಧಿಯನ್ನು, ಚಾಮುಂಡೇಶ್ವರಿ ಕ್ಷೇತ್ರದಿಂದ ಬಾದಾಮಿ ಕ್ಷೇತ್ರಕ್ಕೆ ಪಲಾಯನ ಮಾಡಿದ ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಿರುವುದು ಸರಿಯಾಗೇ ಇದೆ ಬಿಡಿ!
ರಾಹುಲರ ಪಾದಯಾತ್ರೆಗೆ ಅಂದುಕೊಂಡಷ್ಟು ಯಶಸ್ಸು ಸಿಗದ ಕಾರಣ ವಿಚಲಿತರಾಗಿರುವ ಸಿದ್ದರಾಮಯ್ಯ, ದಿನಕ್ಕೆ ಕನಿಷ್ಠವೆಂದರೂ ಹತ್ತು ಟ್ವೀಟ್ ಮಾಡುತ್ತಾರೆ. ಹೀಗೆ ವಿಚಲಿತರಾದ ತಕ್ಷಣ ಅವರಿಗೆ ನೆನಪಾಗುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಅವರು ಆರೆಸ್ಸೆಸ್ ಹೆಸರು ಉಲ್ಲೇಖಿಸದೆ ಮಾತಾಡಿದ್ದೇ ವಿರಳವೆನ್ನಬೇಕು. ಆರೆಸ್ಸೆಸ್ ಕಂಡರೆ ಅವರಿಗಿರು ವಷ್ಟು ಭಯ ಪ್ರಾಯಶಃ ರಾಹುಲ್ ಗಾಂಧಿಯವರಿಗೂ ಇಲ್ಲ. ರಾಹುಲ್‌ರನ್ನು ಯಡಿಯೂರಪ್ಪನವರು ‘ಬಚ್ಚಾ’ ಎಂದು ಕರೆದ ವಿಷಯವಾಗಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯನವರು ಮೋದಿಯವರನ್ನು ‘ಪುಕ್ಕಲು ಗುರು’ ಎನ್ನುವ ಮೂಲಕ ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಹರಿ ಬಿಟ್ಟಿದ್ದಾರೆ.
ಅತ್ತ ಪಾದಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿ ಸುದ್ದಿಯಲ್ಲೇ ಇಲ್ಲ, ಅವರ ಹೆಸರಿನಲ್ಲಿ ದಿನನಿತ್ಯ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಸಿದ್ದರಾಮಯ್ಯನವರು ರಾಹುಲ್‌ಗಿಂತಲೂ ಹೆಚ್ಚು ವಿಚಲಿತರಾಗಿ ಪ್ರತಿಕ್ರಿಯಿಸುತ್ತಿದ್ದಾರೆ! ಸದಾ ತಾವು ಸುದ್ದಿಯಲ್ಲಿರುವಂತೆ ಮಾಡಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ತಯಾರಿರುವ ಸಿದ್ದರಾಮಯ್ಯನವರು ತಮ್ಮದೇ ಪಕ್ಷದ ನಾಯಕರನ್ನು ತುಳಿಯಲೂ ಚಿಂತಿಸುವುದಿಲ್ಲ. ಡಿ.ಕೆ. ಶಿವಕುಮಾರ್ ಕರ್ನಾಟಕ ಕಾಂಗ್ರೆಸ್ಸಿನ ಅಧ್ಯಕ್ಷರಾದಂಥ ಸಂದರ್ಭದಲ್ಲಿ ಅವರ ಪದಗ್ರಹಣ ಕಾರ್ಯಕ್ರಮ ನಡೆಸಲು ಕರೋನ ನಿರ್ಬಂಧಗಳಿದ್ದವು.
ತಂತ್ರಜ್ಞಾನವನ್ನು ಬಳಸಿಕೊಂಡು ಡಿ.ಕೆ. ಶಿವಕುಮಾರ್ ಜಿಲ್ಲಾ ಮಟ್ಟದ ನಾಯಕರ ಸಮ್ಮುಖದಲ್ಲಿ ವಿಭಿನ್ನವಾಗಿ ಪದಗ್ರಹಣ ಮಾಡಿದರು. ಇದನ್ನು ಸಹಿಸದ ಸಿದ್ದರಾಮಯ್ಯನವರು ಮರುದಿನವೇ ಕರೋನ ವಿಚಾರದಲ್ಲಿ ಸರಕಾರದ ಮೇಲೆ ಸುಳ್ಳು ಆರೋಪವೊಂದನ್ನು ಅವರದ್ದೇ ಶೈಲಿಯಲ್ಲಿ ಹೇರುವ ಮೂಲಕ ಮಾಧ್ಯಮದ ಗಮನವನ್ನು ಬೇರೆಡೆಗೆ ತಿರುಗಿಸಿದರು. ಪಾಪ, ಅತ್ತ ಡಿ.ಕೆ. ಶಿವಕುಮಾರರ ಪದಗ್ರಹಣದ ಸುದ್ದಿ ಹೆಚ್ಚು ಪ್ರಚಾರ ಪಡೆಯದೇ ಸತ್ತೇಹೋಯಿತು. ಶಿವಮೊಗ್ಗದ ಸಾವರ್ಕರ್ ಫ್ಲೆಕ್ಸ್ ವಿಚಾರದಲ್ಲಿ ಮೊಟ್ಟೆ ಹೊಡೆಸಿಕೊಂಡ ನಂತರ ರಾಜ್ಯಾದ್ಯಂತ ಸಾವರ್ಕರ್ ಕಿಚ್ಚು ತಮ್ಮನ್ನು ಸುಡುತ್ತಿದೆಯೆಂದು ತಿಳಿದ ಕೂಡಲೆ, ತನ್ನ ಏಜೆಂಟ್ ಗುತ್ತಿಗೆದಾರ ‘ಕೆಂಪಣ್ಣ’ನನ್ನು ಮನೆಗೆ ಕರೆಸಿಕೊಂಡು ಮತ್ತೊಮ್ಮೆ ಆಧಾರರಹಿತ ಅರೋಪ ಮಾಡಿಸಿ ಮಾಧ್ಯಮದ ದಿಕ್ಕು ತಪ್ಪಿಸಿದ್ದರು.
ನೆಹರು ಕುಟುಂಬದ ‘ಬಚ್ಚಾ’ನನ್ನು ನಾಯಕನನ್ನಾಗಿ ಬಿಂಬಿಸುವ ಯತ್ನದಲ್ಲಿ ಕಾಂಗ್ರೆಸ್ ಇಲ್ಲಸಲ್ಲದ ಕಸರತ್ತುಗಳನ್ನು ಮಾಡುತ್ತಿದೆ. ತಮ್ಮ ಅಪ್ಪ, ಅಜ್ಜಿ, ಮುತ್ತಾತ ಮೊದಲಾದವರಿಂದ ರಾಜಕೀಯ ಪ್ರಜ್ಞೆ ದಕ್ಕಿಸಿಕೊಳ್ಳದ ರಾಹುಲ್ ಗಾಂಧಿ ಪ್ರಬುದ್ಧ ರಾಜಕೀಯ ನಾಯಕರಾಗಿ ಹೊರಹೊಮ್ಮುವುದು ಸದ್ಯಕ್ಕಂತೂ ಅಸಂಭವ. ರಾಜ್ಯಕ್ಕೊಂದು ನಾಟಕವೆಂಬಂತೆ ಕೇರಳದ ಪಾದಯಾತ್ರೆಯ ದೃಶ್ಯಗಳು ತಮಿಳು ನಾಡಿನಲ್ಲಿ ಕಂಡುಬರುವುದಿಲ್ಲ ಮತ್ತು ತಮಿಳುನಾಡಿನಲ್ಲಿನ ದೃಶ್ಯಗಳು ಕೇರಳದಲ್ಲಿ ಕಾಣಸಿಗುವುದಿಲ್ಲ.
ಎರಡೂ ರಾಜ್ಯಗಳಲ್ಲಿನ ದೃಶ್ಯಗಳನ್ನು ಕರ್ನಾಟಕದಲ್ಲಿ ಕಾಣಲಾಗುವುದಿಲ್ಲ. ಓದಲು ಬಾರದ ಮಗನೊಬ್ಬನನ್ನು ‘ನೀನು ಡಾಕ್ಟರ್ ಆಗಲೇ ಬೇಕು’ ಎಂದು ಬಲವಂತವಾಗಿ ಕಾಲೇಜಿಗೆ ದೂಡಿದಂತಿದೆ ಸೋನಿಯಾ ಗಾಂಧಿಯವರ ‘ಬಚ್ಚಾ’ ರಾಹುಲ್
ಗಾಂಽಯವರ ಸದ್ಯದ ಪರಿಸ್ಥಿತಿ. ನೆಹರು ಕುಟುಂಬದ ಹೆಸರಿನಲ್ಲಿ ಮೂರು ತಲೆಮಾರಿಗಾಗುವಷ್ಟು ಆಸ್ತಿ ಮಾಡಿಕೊಂಡರೂ, ಮಾಡಿಕೊಂಡ ಆಸ್ತಿಯನ್ನೆಲ್ಲ ಸೋನಿಯಾ ಗಾಂಧಿಯವರ ‘ಬಚ್ಚಾ’ನ ವೈಭವೀಕರಣದಲ್ಲಿ ಕಾಂಗ್ರೆಸ್ಸಿನ ನಾಯಕರು ಕಳೆಯು ತ್ತಿರುವ ದೃಶ್ಯ ಈ ಪಾದಯಾತ್ರೆಯಲ್ಲಿ ಎದ್ದುಕಾಣುತ್ತಿದೆ.