Saturday, 14th December 2024

ತೃಪ್ತಿ ಸಹಜ ಶ್ರೀಮಂತಿಕೆ; ಭೋಗ ಕೃತಕ ಬಡತನ !

ವಿದೇಶವಾಸಿ

dhyapaa@gmail.com

ಅವಶ್ಯಕತೆಗಿಂತ ಹೆಚ್ಚು ಗಳಿಸಿ ಪ್ರಯೋಜನವಿಲ್ಲವೆಂದು ಗೊತ್ತಿದ್ದರೂ ಜನರಲ್ಲಿ ಹೆಚ್ಚು ಗಳಿಸಬೇಕು ಎಂಬ ಮನೋ ಭಾವ ಹೆಚ್ಚುತ್ತಿದೆ. ಹೆಚ್ಚು ಗಳಿಸಬೇಕು ಎಂದರೆ ಹೆಚ್ಚುಶ್ರಮಪಡಬೇಕು, ಹೆಚ್ಚಿನ ಜವಾಬ್ದಾರಿ ಹೊರಬೇಕು, ಹೆಚ್ಚು ಸಂಘರ್ಷ ಎದುರಿಸಬೇಕು, ಹೆಚ್ಚು ರಿಸ್ಕ್ ತೆಗೆದುಕೊಳ್ಳಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಗ್ರೀಕ್ ತತ್ತ್ವಜ್ಞಾನಿ ಎಪಿಕ್ಯೂರಸ್ ಹೇಳಿದ ಮಾತಿದು: ‘ನಿಮ್ಮಲ್ಲಿ ಇಲ್ಲದಿರುವುದಕ್ಕೆ ಆಸೆಪಟ್ಟು ಇರುವುದನ್ನು ಹಾಳು ಮಾಡಿಕೊಳ್ಳ ಬೇಡಿ. ಈಗನಿಮ್ಮ ಬಳಿ ಇರುವುದು ಒಂದು ಕಾಲದಲ್ಲಿ ನೀವು ಬಯಸಿದ್ದು ಎಂದು ನೆನಪಿರಲಿ’. ಜೀವನದಲ್ಲಿ ನೆಮ್ಮದಿಯಿಂದ ಬದುಕಲು ನಮಗೆ ಬೇಕಾಗಿರುವ ವಸ್ತುಗಳು ಕೆಲವೇ ಕೆಲವು.

ನಾವು ಅನೇಕ ಭೌತಿಕ ವಸ್ತುಗಳನ್ನು ಕಂಡು ಅದರೆಡೆಗೆ ಆಕರ್ಷಿತರಾಗುತ್ತೇವೆ. ನಮ್ಮ ಇಂದ್ರಿಯಗಳು ಬೇಡವೆಂದರೂ ನಮ್ಮನ್ನು ಆ ಕಡೆ ಎಳೆದುಕೊಂಡು ಹೋಗುತ್ತವೆ. ನಾವೂ ಅಷ್ಟೇ, ನಮಗೆ ಅದರ ಅವಶ್ಯಕತೆ ಇದೆಯೇ, ಇಲ್ಲವೇ ಎಂದು ಆಲೋಚಿಸದೆ ಅದನ್ನು ಪಡೆಯುವುದಕ್ಕೆ ಆಸೆಪಟ್ಟು, ಅದರ ಬೆನ್ನು ಹತ್ತಿ ಹೋಗುತ್ತೇವೆ. ಒಮ್ಮೆ ಯೋಚಿಸಿ, ನಾವು ಜೀವಮಾನದಲ್ಲಿ ಕಾಣದ, ಕೇಳದ ಅದೆಷ್ಟೋ ವಿಷಯಗಳಿವೆ. ಅದು ನಮಗೆ ದೊರೆತರೆ ನಮ್ಮ ಬದುಕು ಇನ್ನಷ್ಟು ಸುಲಭವೂ, ಹಸನೂ ಆಗಬಹುದು. ಆದರೆ ಅದರ ಕುರಿತಾಗಿ ನಮಗೆ ತಿಳಿದಿರುವುದಿಲ್ಲವಾದ್ದರಿಂದ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವು ದಿಲ್ಲ.

ಅದು ನಮಗೆ ಬೇಕು ಎಂದು ಅನಿಸುವುದೂ ಇಲ್ಲ. ಉದಾಹರಣೆಗೆ, ಆಧುನಿಕವಾಗಿ ಮುಂದುವರಿದ ನಗರಗಳ ವಿಷಯ ಕೇಳರಿ ಯದ ಹಳ್ಳಿಗಾಡಿನ ವ್ಯಕ್ತಿ ಆಧುನಿಕತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದು ಔನ್ಸ್‌ಗೆ ೧೩ ಲಕ್ಷ ಡಾಲರ್ ಬೆಲೆ ಬಾಳುವ ಶುಮುಖ್ ಪರ್-ಮ್, ೩ ಕೋಟಿ ಡಾಲರ್ ಬೆಲೆಯ ಫಾಟೆಕ್ ಫಿಲಿಪ್ ವಾಚು, ಬುಗಾಟಿ,ಲ್ಯಾಂಬರ್ಗಿನಿ ಅಥವಾ ಜಾಗ್ವಾರ್ ಕಾರು ಮುಂತಾದವುಗಳ ಅರಿವು ಇರುವುದಿಲ್ಲವಾದ್ದರಿಂದ ಅವೆಲ್ಲ ಆತನಿಗೆ ಬೇಕು ಎಂದೆನಿಸುವುದಿಲ್ಲ.

ಅಂದರೆ, ಯಾವುದರ ಕುರಿತು ನಮಗೆ ಅರಿವಿಲ್ಲವೋ ಅದರ ಕುರಿತು ನಮ್ಮ ಮನಸ್ಸು ಯೋಚಿಸುವುದಿಲ್ಲ. ಎಷ್ಟೋ ಬಾರಿ ನಾವು ನೋಡಿದ್ದು, ಕೇಳಿದ್ದು ಎಲ್ಲವೂ ಬೇಕು ಎಂದೂ ಅನಿಸುವುದಿಲ್ಲ. ಸಾಕ್ರೆಟಿಸ್‌ನ ಒಂದು ಮಾತಿದು: ‘ನಾವು ಪೇಟೆಗೆ ಹೋದಾಗ ನಮಗೆ ಬೇಡವಾದ ಎಷ್ಟೊಂದು ವಸ್ತುಗಳು ಇಲ್ಲಿವೆ ಎಂದು ತಿಳಿಯುತ್ತದೆ’. ಕೆಲವೊಮ್ಮೆ ನಮಗೆ ಅವಶ್ಯವಿರುವ ಒಂದು ವಸ್ತು ವಿನ ಜತೆಗೆ ೧೦ ಅನವಶ್ಯಕ ವಸ್ತುವನ್ನು ಕೊಳ್ಳುವುದೂ ಇರುತ್ತದೆ. ಈಗ ಅವಶ್ಯವಿಲ್ಲವಾದರೆ ಏನಂತೆ, ಮುಂದೊಂದು ದಿನ ನಮಗೆ ಇದರ ಅವಶ್ಯಕತೆ ಬರಬಹುದು ಎಂಬ ಭವಿಷ್ಯದ ಚಿಂತನೆಯಲ್ಲೂ ಕೆಲವು ವಸ್ತುಗಳು ನಮ್ಮ ಮನೆಯೊಳಗೆ ಸೇರಿ ಕೊಳ್ಳುತ್ತವೆ.

ಕೆಲವೊಮ್ಮೆ ಇನ್ನೊಬ್ಬರ ಮನೆಯಲ್ಲಿ ಅಥವಾ ಇನ್ನೊಬ್ಬರ ಬಳಿ ಕಂಡ ವಸ್ತು ನಮ್ಮ ಕೈಗೆ ಎಟುಕುವಂತಿದ್ದರೆ ನಮ್ಮ ಬಳಿಯೂ ಇರಲಿ ಎಂದು ಖರೀದಿಸುತ್ತೇವೆ. ಬೇಕಾದರೆ ಈಗಲೂ ನಿಮ್ಮ ಮನೆಯಲ್ಲಿ ಒಮ್ಮೆ ನೋಡಿ, ವರ್ಷಾನುಗಟ್ಟಲೆ ಉಪಯೋಗಿಸದ ಎಷ್ಟೋ ಪಾತ್ರೆ, ಬಟ್ಟೆ, ಆಟಿಕೆ, ಮನೆಬಳಕೆಯ, ಬಳಸದ ವಸ್ತುಗಳು ಸಿಗುತ್ತವೆ. ಇವೆಲ್ಲ ನಮ್ಮ ಉಪಯೋಗಕ್ಕೆ ಬಾರದ ವಸ್ತುಗಳು ಎಂದು ಅರಿವಾಗಲು ಬುದ್ಧಿವಂತರಿಗೆ ಸ್ವಲ್ಪ ಕಾಲ ಬೇಕಾಗುತ್ತದೆ. ಇನ್ನು ಕೆಲವರಿಗೆ ಬುದ್ಧಿ ನಶಿಸಿಹೋದರೂ ಅರಿವಿಗೆ ಬರುವು ದಿಲ್ಲ.

ಹಣ ಅಥವಾ ಆಸ್ತಿಯ ವಿಷಯದಲ್ಲೂ ಹಾಗೆಯೇ. ಉಪಯೋಗಿಸಲಾಗದ ಹೆಚ್ಚಿನ ಆಸ್ತಿ ಎಂದರೆ, ಒಂದು ಅಟ್ಲಾಸ್ ನಕಾಶೆ ಯನ್ನಿಟ್ಟುಕೊಂಡು ಅದರೊಳಗಿನ ದೇಶವನ್ನೋ, ರಾಜ್ಯವನ್ನೋ ಅಥವಾ ಭೂಮಿಯ ಒಂದು ತುಂಡನ್ನೋ ತನ್ನದು ಎಂದು ತಿಳಿದುಕೊಂಡಂತೆ. ಅಸಲಿಗೆ ಖರೀದಿಸಿದ್ದು ನಕಾಶೆಯನ್ನೇ ಹೊರತು ಭೂಮಿಯನ್ನಲ್ಲ. ಭೂಮಿ ಖರೀದಿಸಿದ ಕರಾರುಪತ್ರದಲ್ಲಿ ನಕಾಶೆ ಇದ್ದರೆ ಪ್ರಯೋಜನವೇ ಹೊರತು ಅಟ್ಲಾಸ್ ಪುಸ್ತಕದಲ್ಲಿ ನಕಾಶೆ ಇದ್ದರೆ ಸ್ವಂತಕ್ಕೆ ಯಾವ ಲಾಭವೂ ಇಲ್ಲ. ಅಟ್ಲಾಸ್ ನಕಾಶೆಯಲ್ಲಿರುವ ವಸ್ತುಗಳು ನಿಜವಾದ ವಸ್ತುಗಳಲ್ಲ.

ಅಲ್ಲಿ ಯಾವುದೇ ವರ್ಣನೆ ಇದ್ದರೂ ಅದು ನಿಜ ವರ್ಣನೆಯಲ್ಲ. ಕಾಗದದ ಮೇಲಿನ ಆಸ್ತಿಯೂ ಹಾಗೆಯೇ. ಎಷ್ಟೇ ವಿಸ್ತಾರವಾಗಿ ವಿವರಿಸಿದ್ದರೂ, ಎಷ್ಟೇ ರಂಜನೀಯವಾಗಿ ಚಿತ್ರಿಸಿದ್ದರೂ, ಅದನ್ನು ಅನುಭವಿಸದಿದ್ದರೆ ಯಾವ ಪ್ರಯೋಜನವೂ ಇಲ್ಲ. ನಮ್ಮ ಬಳಿ ನೂರು ಗುಲಾಬ್ ಜಾಮೂನ್, ಜಿಲೇಬಿ ಇದೆಯೆಂದು ಊಹಿಸಿಕೊಂಡರೆ ಅಥವಾ ಚಿತ್ರ ನೋಡಿದರೆ ಅದನ್ನು ತಿಂದಂತಾ ಗುತ್ತದೆಯೇ? ಚಿತ್ರದಲ್ಲಿರುವ ಜಾಮೂನು ಸಿಹಿಯೋ, ಕಹಿಯೋ, ಹಳಸಿದೆಯೋ ತಿಳಿಯುವುದು ಹೇಗೆ? ಸಿಹಿಯಾಗಿದೆ ಎಂದೇ ಇಟ್ಟುಕೊಳ್ಳೋಣ, ಎಷ್ಟು ಸಿಹಿಯಾಗಿದೆ ಎಂದು ಗೊತ್ತಾಗುವುದು ಹೇಗೆ? ಅದರ ಆನಂದ ಅನುಭವಿಸಬೇಕು ಎಂದರೆ ಅದನ್ನು ತಿನ್ನಬೇಕು.

ಹಾಗೆಯೇ ನಮ್ಮಲ್ಲಿರುವ ಹಣವನ್ನಾಗಲಿ, ಆಸ್ತಿಯನ್ನಾಗಲಿ ಅನುಭವಿಸಬೇಕು. ಇಲ್ಲವಾದರೆ ಅದು ಚಿತ್ರದಲ್ಲಿರುವ ಜಿಲೇಬಿಗೆ ಸಮ. ಆದರೂ ಕೆಲವರು ಅದರಲ್ಲೇ ಖುಷಿಪಡುತ್ತಾರೆ. ಇನ್ನೊಂದು ವಿಷಯ, ಚಿತ್ರದಲ್ಲಿ ನೂರು ಜಿಲೇಬಿ ಇದ್ದರೂ, ಏಕಕಾಲ ದಲ್ಲಿ ನೂರು ಜಿಲೇಬಿ ತಿನ್ನುವವರು ನೂರಕ್ಕೆ ಒಬ್ಬರೂ ಸಿಗಲಾರರು. ಹಾಗಂತ ಒಮ್ಮೆ ಮಾಡಿದ ಜಿಲೇಬಿಯನ್ನು ನೂರು ದಿನ ಇಟ್ಟುಕೊಂಡು ತಿನ್ನಲೂ ಆಗುವುದಿಲ್ಲ.ತಾಜಾ ಆಗಿದ್ದಾಗ ಮಾತ್ರ ತಿಂಡಿ ರುಚಿ. ತಾಜಾ ಇದೆ ಎಂದು ಹೊಟ್ಟೆಬಿರಿ ತಿನ್ನಲೂ ಆಗುವುದಿಲ್ಲ.

ಯಾವುದೇ ಆದರೂ ಮಿತಿಯಲ್ಲಿದ್ದರೆ ಮಾತ್ರ ಹಿತ. ಆದರೂ ನಾವು ಹೆಚ್ಚು ಹೆಚ್ಚು ಒಟ್ಟುಹಾಕುವುದರಲ್ಲೇ ತಲ್ಲೀನರಾಗಿರುತ್ತೇವೆ.
ಯಾಕೆ, ನಮ್ಮ ಶಾಲಾದಿನಗಳನ್ನೇ ನೆನಪಿಸಿಕೊಳ್ಳಿ, ನಮಗೆ ಅವಶ್ಯಕತೆ ಇರುತ್ತಿದ್ದುದು ಒಂದು ಪೆನ್, ಒಂದು ಪೆನ್ಸಿಲ್. ಎಲ್ಲಾ ದರೂ ಒಂದು ಕೈಕೊಟ್ಟರೆ ಇರಲಿ ಎಂದು ಇನ್ನೊಂದು ಜೊತೆ. ಆದರೂ ಪಕ್ಕದಲ್ಲಿ ಕುಳಿತವನ ಬಾಕ್ಸ್‌ನಲ್ಲಿ ನನಗಿಂತ ಹೆಚ್ಚಿದೆ ಎಂಬ ಕಾರಣಕ್ಕೋ, ಚೆಂದದ, ಬೇರೆ ಬೇರೆ ನಮೂನೆಯದ್ದು ನನ್ನ ಬಳಿಯೂ ಇರಲಿ ಎಂಬ ಕಾರಣಕ್ಕೋ ನಾವು ಪೆನ್, ಪೆನ್ಸಿಲ್ ಒಟ್ಟುಹಾಕುತ್ತಿದ್ದೆವಲ್ಲ!

ನಮ್ಮ ಪೆಟ್ಟಿಗೆ, ಜೋಳಿಗೆ ತುಂಬಿಸಿಕೊಳ್ಳುತ್ತಿದ್ದೆವಲ್ಲ! ನಮ್ಮ ಧೋರಣೆ ಇಂದಿಗೂ ಬದಲಾಗಿಲ್ಲ, ಈಗಲೂ ಕಾರಣ ಅದೇ,
ವಸ್ತು ಮಾತ್ರ ಬದಲಾಗಿದೆ. ಈಗ ನಾವು ದೊಡ್ಡವರಾಗಿದ್ದೇವೆ. ಪೆನ್, ಪೆನ್ಸಿಲ್, ಇರೇಸರ್‌ನ ಜಾಗವನ್ನು ಮನೆ, ಹಣ, ಕಾರು, ಆಸ್ತಿ ಆವರಿಸಿಕೊಂಡಿದೆ. ಅಗತ್ಯ ಇದೆಯೋ, ಇಲ್ಲವೋ; ಬೇಕು ಎಂದರೆ ಬೇಕು ಅಷ್ಟೇ!

ವಿಪರ್ಯಾಸವೆಂದರೆ, ಅವಶ್ಯಕತೆಗಿಂತ ಹೆಚ್ಚು ಗಳಿಸಿ ಪ್ರಯೋಜನವಿಲ್ಲ ಎಂದು ತಿಳಿದಿದ್ದರೂ ಜನರಲ್ಲಿ ಹೆಚ್ಚು ಗಳಿಸಬೇಕು ಎಂಬ ಮನೋಭಾವ ಹೆಚ್ಚುತ್ತಿದೆ. ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಹೆಚ್ಚು ಗಳಿಸಬೇಕು ಎಂದರೆ ಹೆಚ್ಚು
ಶ್ರಮಪಡಬೇಕು, ಹೆಚ್ಚಿನ ಜವಾಬ್ದಾರಿ ಹೊರಬೇಕು, ಹೆಚ್ಚು ಸಂಘರ್ಷ ಎದುರಿಸಬೇಕು, ಹೆಚ್ಚು ರಿಸ್ಕ್ ತೆಗೆದುಕೊಳ್ಳಬೇಕು. ಕೆಲವೊಮ್ಮೆ ನಮಗೆ ಇಷ್ಟವಿಲ್ಲದಿದ್ದರೂ ‘ಜೀ ಹುಜೂರ್’ ಎನ್ನಬೇಕು.

ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಉದ್ಯಮಿಗಳಿಗೆ, ಸಹೋದ್ಯೋಗಿಗೆ, ಮೇಲಧಿಕಾರಿಗೆ, ಮನಸ್ಸಿದ್ದೋ, ಇಲ್ಲದೆಯೋ ಬೆಣ್ಣೆ ಸವರಬೇಕು, ಜೀ ಹುಜೂರ್ ಎನ್ನಬೇಕು. ಒಟ್ಟಾರೆ ಹೆಚ್ಚಿನ ಶಕ್ತಿ, ಸಮಯ ಎರಡನ್ನೂ ಅದಕ್ಕೆ ಮೀಸಲಿಡಬೇಕು. ಹೆಂಡತಿ-ಮಕ್ಕಳು, ಅಪ್ಪ-ಅಮ್ಮ, ಬಂಧು- ಬಾಂಧವರು, ಮಿತ್ರರಿಗಷ್ಟೇ ಅಲ್ಲ, ಕೆಲವೊಮ್ಮೆ ಸ್ವಂತಕ್ಕೂ ಸಮಯ ಕೊಡಲಾಗದೆ ಪರಿತಪಿಸಬೇಕು.

ಹೆಚ್ಚು ಹೆಚ್ಚು ಗಳಿಸಬೇಕು ಎಂದು ಸಾಗುವ ಮಾರ್ಗ ಕೊನೆ ಮುಟ್ಟುವಂಥದ್ದಲ್ಲ. ಆ ಮಾರ್ಗವೇನಿದ್ದರೂ ನಿತ್ಯ ನಿರಂತರ ವಾದದ್ದು. ಅದೊಂದು ರೀತಿಯಲ್ಲಿ ತೀರದ ಬಯಕೆ. ಇಂದು ಒಂದರ ಹಿಂದೆ ಓಡುವುದು, ಅದು ಸಿಕ್ಕಿದಾಕ್ಷಣ ಇನ್ನೊಂದರ ಹಿಂದೆ ಓಡುವುದು, ಅದೂ ದೊರೆತರೆ ಮತ್ತೊಂದರ ಬೆನ್ನು ಬೀಳುವುದು. ಅಂತೂ ಅದಕ್ಕೆ ನಿಲ್ದಾಣ ಎಂಬುದು ಇಲ್ಲವೇ ಇಲ್ಲ!

ಇನ್ನೊಬ್ಬರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವುದಕ್ಕಿಂತ, ‘ಅವರಿಗಿಂತ ನನ್ನಲ್ಲಿ ಕಡಿಮೆಯಿದೆ’ ಎಂಬ ಕೀಳರಿಮೆಯಲ್ಲಿ ಬದುಕುವುದಕ್ಕಿಂತ ನಮ್ಮ ಸ್ಥಿತಿ ಹೇಗಿದೆ ಎಂದು ಅರಿತುಕೊಳ್ಳಬೇಕು. ನಮ್ಮ ಸ್ಥಿತಿ ಈಗ ನಾವಿರುವುದಕ್ಕಿಂತ ಇನ್ನೂ ಕೆಟ್ಟದ್ದಾಗಿರು
ತ್ತಿದ್ದರೆ ಹೇಗಿರುತ್ತಿತ್ತು ಎಂದು ಒಮ್ಮೆ ಯೋಚಿಸಿದರೆ ಸಾಕು, ನಾವೆಷ್ಟು ಸುಖವಾಗಿದ್ದೇವೆ ಎಂದು ಅರ್ಥ ವಾಗುತ್ತದೆ. ನಮ್ಮ ಸ್ಥಿತಿಯೇ ಅತ್ಯಂತ ಕೆಟ್ಟದ್ದು ಎಂದು ನಾವು ಅಂದುಕೊಂಡರೂ, ನಮಗಿಂತಲೂ ಕೆಟ್ಟ ಸ್ಥಿತಿಯಲ್ಲಿ ಇರುವವರು ನಮಗೆ ಸಿಗುತ್ತಾರೆ.

ಅವರಿಗಿಂತ ನಾವು ಸುಖವಾಗಿದ್ದೇವೆ ಎಂದು ನಾವು ಸಮಾಧಾನ ಪಟ್ಟುಕೊಳ್ಳಬಹುದಲ್ಲ! ನಮ್ಮಲ್ಲಿ ಈಗ ಇರುವುದನ್ನು ಅಥವಾ ನಾವು ಈಗಿರುವ ಸ್ಥಿತಿಯನ್ನು ಅರಿತುಕೊಳ್ಳದಿದ್ದರೆ, ಪ್ರಶಂಸಿಸಿಕೊಳ್ಳದಿದ್ದರೆ, ಈಗ ನಮ್ಮಲ್ಲಿ ಎಷ್ಟೇ ವಸ್ತು, ಆಸ್ತಿ, ಹಣವಿದ್ದರೂ ಯಾವುದೇ ಫಲವಿಲ್ಲ. ಅನುಭವಿಸದಿದ್ದರೆ ಅವೆಲ್ಲ ಇದ್ದೂ ಇಲ್ಲದಂತೆಯೇ. ಇನ್ನೂ ಹೆಚ್ಚು ಹೆಚ್ಚು ಗಳಿಸಬೇಕು ಎನ್ನುವ
ಭಾವ ಒಬ್ಬನಲ್ಲಿ ತುಂಬಿದೆ ಎಂದರೆ, ಅವನಲ್ಲಿ ಇನ್ನೂ ಶೂನ್ಯತೆ ಇದೆ, ಇನ್ನೂ ಖಾಲಿ ಬಿಟ್ಟ ಸ್ಥಳ ಇದೆ ಎಂದು ಅರ್ಥ. ಆ ಖಾಲಿ ಬಿಟ್ಟ ಸ್ಥಳವನ್ನು ತುಂಬಿಸುವ ಪ್ರಯತ್ನದಲ್ಲಿ ಆ ವ್ಯಕ್ತಿ ಹಣ, ಆಸ್ತಿಯ ಹಿಂದೆ ಹೋಗುತ್ತಾನೆ.

ತಿಂಗಳ ಕೊನೆಗೋ, ವರ್ಷದ ಕೊನೆಗೋ, ಕಾಗದದ ಮೇಲೆ ಲಾಭಾಂಶ ಕಂಡಾಗ ಸಮಾಧಾನ ಪಟ್ಟುಕೊಳ್ಳುತ್ತಾನೆ. ಸುತ್ತ ಮುತ್ತಲಿನವರ ಹೊಗಳಿಕೆ ಅವನಲ್ಲಿರುವ ಶೂನ್ಯವನ್ನು ತುಂಬಿಸುತ್ತದೆ ಎಂದೇ ಇಟ್ಟುಕೊಳ್ಳೋಣ. ಇದರಿಂದ ಕೆಲವು ಕ್ಷಣವಾದರೂ ಸಂತಸದಿಂದ ಇರಲು ಪ್ರಯತ್ನಿಸುತ್ತಾನೆ. ಅದೇ ಒಬ್ಬ ವ್ಯಕ್ತಿ ಸಂತೃಪ್ತನಾಗಿದ್ದರೆ, ತನ್ನೊಳಗೆ ಸ್ನೇಹ, ಪ್ರೀತಿ, ಪ್ರೇಮ
ತುಂಬಿಕೊಂಡು ನೆಮ್ಮದಿಯಿಂದ ಇದ್ದರೆ, ಅವನಲ್ಲಿ ಯಾವುದೇ ರೀತಿಯ ಶೂನ್ಯಭಾವ ಕಾಡುವುದಿಲ್ಲ. ಏಕೆಂದರೆ ಅವನ ಖಾಲಿಸ್ಥಳ ಪ್ರೀತಿಯಿಂದ ತುಂಬಿರುತ್ತದೆ.

ಹಣದ ನೆಮ್ಮದಿ, ಆಸ್ತಿಯ ಸಂತೃಪ್ತಿಯನ್ನು ಗಳಿಸಬೇಕು ಎನ್ನುವ ಆಸೆಯ ಬೆನ್ನು ಹತ್ತಿ ಓಡುವುದನ್ನು ಆತ ನಿಲ್ಲಿಸುತ್ತಾನೆ. ‘ನಿಜವಾಗಿ ಸಿರಿವಂತನೆಂದೆನಿಸಿಕೊಳ್ಳುವ ವ್ಯಕ್ತಿ ಸದಾ ಹಣದ ಬಗ್ಗೆಯೇ ಯೋಚಿಸಬಾರದು. ಅವನಲ್ಲಿ ಕೋಟಿಗಟ್ಟಲೆ ಹಣವಿದ್ದರೂ ಅವನು ಅದರಿಂದ ಸಂತುಷ್ಟನಾಗದಿದ್ದರೆ, ಸದಾ ಅದನ್ನುಕಳೆದುಕೊಳ್ಳುವ ಭಯದಲ್ಲಿದ್ದರೆ ಅಥವಾ ಅದಕ್ಕೆ
ಇನ್ನೂ ಹೆಚ್ಚು ಕೂಡಿಸಬೇಕು ಎಂದು ಯೋಚಿಸುತ್ತಿ ದ್ದರೆ, ಅದೆಷ್ಟೇ ಹಣವಿದ್ದರೂ ಆತ ಬಡವನೇ’. ಇದು ನನ್ನ ಮಾತಲ್ಲ, ಖ್ಯಾತ ಲೇಖಕ ದೀಪಕ್ ಚೋಪ್ರಾರದ್ದು.

ಆಸೆಯು ವ್ಯಕ್ತಿಯನ್ನು ಭಿಕ್ಷುಕನನ್ನಾಗಿಸುತ್ತದೆ. ಅವನು ಏನನ್ನೇ ಬೇಡಲಿ, ಯಾರನ್ನೇ ಬೇಡಲಿ, ಎಷ್ಟನ್ನೇ ಬೇಡಲಿ, ಬೇಡಿದ್ದಂತೂ ನಿಜ ತಾನೆ? ಆದ್ದರಿಂದ ಇನ್ನೂ ಬೇಕು ಎಂಬ ಬೇಡಿಕೆಯನ್ನು ಕಡಿಮೆ ಮಾಡಿ, ಇದ್ದುದರಲ್ಲೇ ಸಂತುಷ್ಟನಾಗಿರುವುದರಿಂದ, ಬದುಕನ್ನು ಬಂದಂತೆ ಸ್ವೀಕರಿಸುವುದರಿಂದ ಹೆಚ್ಚು ನೆಮ್ಮದಿಯಿಂದಲೂ, ಲವಲವಿಕೆಯಿಂದಲೂ ಇರಬಹುದು. ಬದುಕು ನಮಗೆ ಏನನ್ನು ಕೊಟ್ಟಿದೆಯೋ ಈಗ ನಮ್ಮ ಬಳಿ ಏನಿದೆಯೋ ಅದನ್ನು ಅನುಭವಿಸುವುದರಿಂದ, ನಮಗೆ ಪ್ರಿಯವಾದದ್ದನ್ನು ಮಾಡುವುದರಿಂದ ನಾವು ಹೆಚ್ಚು ಸಂತೃಪ್ತರಾಗಿರಬಹುದು.

ಶ್ರೀಮಂತಿಕೆ ಎಂಬುದು ನಾವು ಎಷ್ಟು ಹೊಂದಿದ್ದೇವೆ ಎಂಬುದಲ್ಲ, ಹೊಂದಿದ್ದನ್ನು ನಾವು ಎಷ್ಟು ಬಳಸುತ್ತಿದ್ದೇವೆ, ಅನುಭವಿ ಸುತ್ತಿದ್ದೇವೆ, ಆನಂದಿಸುತ್ತಿದ್ದೇವೆ ಎಂಬುದು. ಮೆತ್ತನೆಯ ಹಾಸು- ಹೊದಿಕೆ ಇದ್ದರೂ ನಿದ್ರೆಗಾಗಿ ಪರಿತಪಿಸುವವರು ಎಷ್ಟಿಲ್ಲ? ಹೊಟ್ಟೆ ಹಸಿದರೂ ಬೇಕಾದದ್ದನ್ನು ತಿನ್ನಲಾಗದೇ ಇರುವವರು ಎಷ್ಟಿಲ್ಲ? ಇದರರ್ಥ ನಾವು ದುಡಿಯಲೇಬಾರದು, ಕೂಡಿಸಿ ಇಡಲೇಬಾರದು ಎಂದು ಖಂಡಿತ ಅಲ್ಲ. ನಮಗೆ ಬೇಕಾದಷ್ಟನ್ನು ನಾವು (ನಾವೇ) ದುಡಿಯಬೇಕು, ಭವಿಷ್ಯಕ್ಕಾಗಿ ಒಂದಿಷ್ಟನ್ನು ಕೂಡಿ ಇಡಲೇಬೇಕು.

ಊಟಕ್ಕೆ ಕುಳಿತಾಗ ಹೊಟ್ಟೆ ತುಂಬಿದ ನಂತರ ಸಾಕು ಎಂದು ಎದ್ದೇಳುತ್ತೇವೆ. ನಿದ್ರೆ ಮುಗಿದ ನಂತರ ಹಾಸಿಗೆಯಿಂದ ಎದ್ದು ಬರು
ತ್ತೇವೆ, ಆದರೆ ಹಣ ಮತ್ತು ಆಸ್ತಿಯ ವಿಷಯದಲ್ಲಿ ಸಾಕು ಎಂದು ಅನಿಸುವುದೇ ಇಲ್ಲ. ಅದಕ್ಕೂಒಂದು ಕಟ್ಟೆಯನ್ನು ನಾವೇ ಕಟ್ಟಿಕೊಳ್ಳಬೇಕು. ಅದು ಎಲ್ಲರಿಗೂ ಒಂದೇ ರೀತಿ ಆಗಿರಬೇಕೆಂದೇನೂ ಇಲ್ಲ, ಅವರವರಿಗೆ ತಕ್ಕಂತೆಯೇ ಇರಲಿ. ಆದರೆ ನಮಗೆ ನಾವೇ ಒಂದು ಪುಟ್ಟ ನಿಬಂಧ ಹೇರಿಕೊಳ್ಳಬೇಕು. ನಮ್ಮ ಬಳಿ ಇರುವುದನ್ನು ಆ ಕ್ಷಣದಲ್ಲಿ ಅನುಭವಿಸಬೇಕು.

ಇಲ್ಲವಾದರೆ, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವಂತಾಗುತ್ತದೆ. ಕೊನೆಯದಾಗಿ ಸಾಕ್ರೆಟಿಸ್‌ನ ಒಂದು ಮಾತು ನೆನಪಿಗೆ ಬರುತ್ತಿದೆ- ‘ತೃಪ್ತಿ’ ಎಂಬುದು ಸಹಜ ಆಸ್ತಿ; ‘ಭೋಗ’ ಎಂಬುದು ಕೃತಕ ಬಡತನ!