ಶಶಾಂಕಣ
ಶಶಿಧರ ಹಾಲಾಡಿ
shashidhara.halady@gmail.com
ಹಳ್ಳಿಯ ವಾತಾವರಣದಲ್ಲಿ ಬಹುಕಾಲ ವಾಸಿಸಿ, ಪೇಟೆ ಮತ್ತು ನಗರಗಳ ಕಡೆ ವಲಸೆ ಬಂದಾಗ ನನಗೆ ಬಾಳೆಹಣ್ಣಿನ ಕುರಿತು ಒಂದು ಅಚ್ಚರಿ ಹುಟ್ಟಿಸುವ ವಿಚಾರ ಗೊತ್ತಾಯಿತು. ಅದೇನೆಂದರೆ, ನಗರದ ಸೋಂಕು ಇರುವ ಕೆಲವು ಸ್ಥಿತಿವಂತರು ಬಾಳೆಹಣ್ಣನ್ನು ತಿನ್ನಲು ಹಿಂದೆ ಮುಂದೆ ನೋಡುತ್ತಾರೆ! ಹಳ್ಳಿಗಳಲ್ಲಿದ್ದ ನಾವು ಸಣ್ಣಮಕ್ಕಳಿಗೂ ಸಂತಸದಿಂದ ತಿನ್ನಲು ನೀಡುತ್ತಿದ್ದ ಬಾಳೆಹಣ್ಣಿಗೆ ನಗರದಲ್ಲಿ ಅಷ್ಟೊಂದು ಶ್ರೇಷ್ಠ ಸ್ಥಾನ ಇಲ್ಲ!
ನಮ್ಮ ಸಹೋದ್ಯೋಗಿಯೊಬ್ಬರು, ಸೀಸನ್ ಅಲ್ಲದ ಕಾಲದಲ್ಲಿ ದುಬಾರಿ ಬೆಲೆ ನೀಡಿ ಸೇಬು ಖರೀದಿಸುತ್ತಿದ್ದುದನ್ನು ಕಂಡು, ಒಮ್ಮೆ ತುಸು ವಿಸ್ಮಯದಿಂದಲೇ ಕೇಳಿದ್ದೆ – ‘ಏನು, ಇಷ್ಟು ದುಬಾರಿ ಬೆಲೆ ನೀಡಿ ಸೇಬು ಖರೀದಿಸುತ್ತಿದ್ದೀರಲ್ಲಾ, ಬಾಳೆ ಹಣ್ಣಿನಲ್ಲೂ ಇದರಷ್ಟೇ ಪೌಷ್ಟಿಕಾಂಶ ಇದೆಯಂತಲ್ಲಾ?’ ಅದಕ್ಕೆ ಅವರು ‘ ಇಲ್ಲಪ್ಪಾ, ನನ್ನ ಮಗ ಬಾಳೆಹಣ್ಣು ತಿನ್ನುವುದೇ ಇಲ್ಲ, ಎಂತಿದ್ದರೂ ಒಬ್ಬನೇ ಮಗ, ನಾವು ದುಡಿಯುವುದು ಅವನಿಗೇ ಅಲ್ಲವೇ? ಅವನಿಗೆ ನಾವು ಸೇಬು ಹಣ್ಣನ್ನೇ ತಿನ್ನಲು ಕೊಡುವುದು. ಅದು ಎಷ್ಟೇ ಬೆಲೆಯಾಗಿದ್ದರೂ ಪರವಾಗಿಲ್ಲ.’ ಎಂದರು.
ಬಾಳೆಹಣ್ಣನ್ನು ತಿನ್ನುವುದು ಸಿರಿವಂತರ ಲಕ್ಷಣ ಅಲ್ಲ ಎಂಬ ಸೂಕ್ಷ್ಮ ಎಳೆಯೂ ಅವರ ಮಾತಿನಲ್ಲಿತ್ತು! ಇನ್ನು ಕೆಲವರು ಬಾಳೆ ಹಣ್ಣು ಥಂಡಿಯಾದ್ದರಿಂದ
ಮಕ್ಕಳಿಗೆ ತಿನ್ನಲು ಕೊಡುವುದಿಲ್ಲ ಎಂದೂ ಹೇಳುವುದುಂಟು. ಆದರೆ ಬಾಳೆಯು ನಮ್ಮ ಬಾಳಿನಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವ ಪರಿ ಮಾತ್ರ
ಅಲ್ಲಗೆಳೆಯುವಂತಿಲ್ಲ. ದೇವರ ಪೂಜೆಗೆ ಬಾಳೆ ಹಣ್ಣು ಶ್ರೇಷ್ಠ ಎಂಬ ವಿಚಾರ ಗೊತ್ತಿರುವಂಥದ್ದೇ. ಜತೆಗೆ ಅದೊಂದು ಉತ್ತಮ ಆಹಾರ ಎಂದೂ ಅದನ್ನು
ಸೇವಿಸುತ್ತೇವೆ. ನಮ್ಮ ಹಳ್ಳಿಯಲ್ಲಿ ನಾನಾ ಬಗೆಯ ಬಾಳೆ ಬೆಳೆಯುತ್ತವೆ. ಆದರೂ, ಕೆಲವೇ ದಶಕಗಳ ಹಿಂದೆ ಬಾಳೆಹಣ್ಣು ಎಂದರೆ ದೇವರ ಪೂಜೆಗೆ ಮಾತ್ರ ಮೀಸಲು ಎಂಬ ಭಾವನೆ ಇತ್ತು. ಜನಸಾಮಾನ್ಯರು ಬಾಳೆಹಣ್ಣನ್ನು ತಿಂದರೂ, ಅದನ್ನು ಪ್ರಸಾದದ ರೂಪದಲ್ಲಿ ತಿನ್ನುವುದೇ ಜಾಸ್ತಿ.
ಕರಾವಳಿಯ ಊರುಗಳಲ್ಲಿ ನಾಗದೇವರಿಗೆ, ಅನಂತಪದ್ಮನಾಭನಿಗೆ ಬಾಳೆಹಣ್ಣನ್ನು ತನು ಎರೆಯುವುದು ಜನಪ್ರಿಯ. ನಮ್ಮ ಅಮ್ಮಮ್ಮನ ತವರು ಮನೆಯ ಸುತ್ತಲೂ ಅಡಕೆ ತೋಟ, ಅದರ ನಡುವೆ ಬಾಳೆಮರಗಳು. ಆದರೂ, ಬಾಳೆಹಣ್ಣನ್ನು ಮಕ್ಕಳು ತಿನ್ನುವುದು ಬಹಳ ಅಪರೂಪಕ್ಕೆ ಮಾತ್ರ ಎಂದು ಅವರು ನೆನಪಿಸಿಕೊಳ್ಳುತ್ತಿದ್ದುದುಂಟು. ಅವರ ಬಾಲ್ಯ ಕಳೆದು ಐವತ್ತು ವರ್ಷಗಳ ನಂತರ, ನನ್ನ ಬಾಲ್ಯಕಾಲದಲ್ಲಿ ಮಲಬದ್ಧತೆ ಉಂಟಾಗಿತ್ತು. ಆಗ ನಮ್ಮ ಹಳ್ಳಿಯ ಸುತ್ತಮುತ್ತಲೂ ಇದ್ದ ಏಕೈಕ ವೈದ್ಯರೆಂದರೆ ನಾವುಡ ಎಂಬ ಮಹನೀಯರು. ನನ್ನ ಮಲಬದ್ಧತೆಗೆ ಅವರು ಸೂಚಿಸಿದ ಔಷಧ ಎಂದರೆ ‘ಪ್ರತಿದಿನ ರಾತ್ರಿ
ಮಲಗುವ ಮುಂಚೆ ಒಂದು ಬಾಳೆ ಹಣ್ಣನ್ನು ತಿನ್ನಲಿ, ಎಲ್ಲಾ ಸರಿ ಹೋಗುತ್ತೆ.’
‘ಆದರೆ,ಡಾಕ್ಟ್ರೆ, ಪ್ರತಿ ದಿನ ಬಾಳೆ ಹಣ್ಣು ತಿನ್ನಲು ಹೇಗೆ ಸಾಧ್ಯ? ನಾವು ಇರುವುದು ಹಳ್ಳಿಯಲ್ಲಿ’ ಎಂದು ನಮ್ಮ ಅಮ್ಮಮ್ಮ ಅಸಹಾಯಕತೆ ತೋಡಿಕೊಂಡಿದ್ದರು.
ನಮ್ಮ ಹಳ್ಳಿ ಮನೆ ಸುತ್ತಲೂ ಕೆಲವು ಬಾಳೆಮರಗಳು ಇದ್ದರೂ, ಅವು ಅಪರೂಪಕ್ಕೊಮ್ಮೆ ಬಿಡುವ ಬಾಳೆಹಣ್ಣುಗಳನ್ನು ಅಂಗಡಿಗೆ ಮಾತಿ ಅಲ್ಪ ಆದಾಯ
ಗಳಿಸಬೇಕೇ ಹೊರತು, ಅದನ್ನು ತಿಂದು ಖಾಲಿ ಮಾಡುವುದಲ್ಲ ಎಂಬುದು ಅಂದಿನ ತಿಳಿವಳಿಕೆ ಎನಿಸಿತ್ತು. ನಂತರದ ವರ್ಷಗಳಲ್ಲಿ ಹೆಚ್ಚಿನ ಬಾಳೆಗಿಡಗಳನ್ನು ನೆಟ್ಟು, ಸಾಕಷ್ಟು ಹಣ್ಣು ಇರುವಂತೆ ನೋಡಿಕೊಂಡು, ನನ್ನ ಆರೋಗ್ಯವನ್ನು ಸುಧಾರಿಸಲು ನಮ್ಮ ಅಮ್ಮಮ್ಮ ಯೋಜಿಸಿದ್ದುಂಟು. ಆಗ ನಮ್ಮೂರಲ್ಲಿ ಇದ್ದುದು ಮೈಸೂರು ಬಾಳೆ, ಪುಟ್ಟಬಾಳೆ ಮತ್ತು ರಸಬಾಳೆ ಮಾತ್ರ.
ಮೈಸೂರು ಬಾಳೆ (ಸೇಲಂ ಬಾಳೆ) ಥಂಡಿ, ಪುಟ್ಟಬಾಳೆಯನ್ನು ಮಕ್ಕಳು ಸಹ ತಿನ್ನಬಹುದು, ರಸಬಾಳೆ ಸರಿಯಾಗಿ ಜೀರ್ಣವಾಗುವುದಿಲ್ಲ ಮೊದಲಾದ ಸ್ಥಳೀಯ ನಂಬಿಕೆಗಳು ನಮ್ಮೂರಿನಲ್ಲಿದ್ದವು. ಅವುಗಳಲ್ಲಿ ಕೆಲವನ್ನು ಮೂಢನಂಬಿಕೆ ಎಂದೂ ಕರೆಯಬಹುದು. ನಮ್ಮ ಹಳ್ಳಿಯಲ್ಲಿ ಬೆಳೆಯುತ್ತಿದ್ದ ರಸಬೇಳೆಯು ರುಚಿ ಜಾಸ್ತಿ,
ಆದರೆ ಆ ಮರ ಫಲ ನೀಡುವುದು ತುಸು ವಿಳಂಬ ಎಂದು ಕೃಷಿಕರು ಅದನ್ನು ಬೆಳೆಯುವುದು ಕಡಿಮೆ. ಬಾಳೆಯು ಬಡವರ ಆಹಾರವಾಗಿಯೂ ಬಳಕೆ ಯಾಗುತ್ತಿತ್ತು ಎಂಬ ವಿಚಾರ ತುಸು ವಿಸ್ಮಯ ಹುಟ್ಟಿಸುತ್ತದೆ. ಕಳೆದ ವರ್ಷ ಹೊರಬಂದ, ಶಿವಾನಂದ ಕಳವೆಯವರ ‘ಮಧ್ಯಘಟ್ಟ’ ಕಾದಂಬರಿಯಲ್ಲಿ ಈ ವಿಚಾರ ವ್ಯಾಪಕವಾಗಿ ಪ್ರಸ್ತಾಪವಾಗಿದೆ. ಮಲೆನಾಡಿನ ಜನರು ಕಳೆದ ಶತಮಾನದಲ್ಲಿ, ಮುಖ್ಯವಾಗಿ ಮಳೆಗಾಲದಲ್ಲಿ, ಅಂದರೆ ಆಹಾರ ಧಾನ್ಯದ ಕೊರತೆಯಿರುವ ದಿನಗಳಲ್ಲಿ, ಬಾಳೆ ಕಾಯಿಯನ್ನು ಬೇಯಿಸಿ, ದಿನದ ಒಂದು ಅಥವಾ ಎರಡು ಹೊತ್ತಿನ ಆಹಾರವಾಗಿ ಸೇವಿಸುತ್ತಿದ್ದರು ಎಂದು ಅವರ ದಾಖಲಿಸಿದ್ದಾರೆ.
ಈ ರೀತಿ ಬೇಯಿಸಿ ತಿನ್ನಲು, ಪಲ್ಯ ಮಾಡಿ ಸೇವಿಸಲು ಸೂಕ್ತ ಎನಿಸುವ ಬಾಳೆ ತಳಿಗಳು ನಮ್ಮ ರಾಜ್ಯದಲ್ಲಿವೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಬೆಳೆಯುವ ಶಾನ್‌ಬಾಳೆ (ತರಕಾರಿ ಬಾಳೆ) ಕಾಯಿಯಿಂದ ಸಿದ್ಧಪಡಿಸಿದ ಪಲ್ಯ, ಸಾಂಬಾರು ಮತ್ತು ಬೋಂಡ ವಿಶೇಷ ರುಚಿಯದು. ಅದೇ ಪ್ರದೇಶದಲ್ಲಿ ಬೆಳೆಯುವ ಕರಿಬಾಳೆಯಿಂದಲೂ ಪಲ್ಯ, ಬೋಂಡ ತಯಾರಿಸಬಹುದು. ಶಾನ್ ಬಾಳೆಯಿಂದ ಚಿಪ್ಸ್ ತಯಾರಿಯೂ ಸಾಧ್ಯ. ಆದರೆ ಪುಟ್ಟಬಾಲೆ, ಮೈಸೂರುಬಾಳೆ ಮತ್ತು
ರಸಬಾಳೆಗಳು ಹಣ್ಣಿನ ರೂಪದಲ್ಲಿ ಮಾತ್ರ ಉಪಯೋಗ. ಕೇರಳದಲ್ಲಿ ನೇಂದ್ರ ಬಾಳೆಯನ್ನು ಬೇಯಿಸಿ ತಿನ್ನುವ ಪರಿಪಾಠ ಸಹ, ಪರ್ಯಾಯ ಆಹಾರದ ರೂಪ ತಾನೆ!
ಹಾಗೆ ನೋಡಹೋದರೆ, ನಮ್ಮ ಹಳ್ಳಿಯ ಜನರಿಗೆ ಬಾಳೆಯು ಕಲ್ಪವೃಕ್ಷ ಸಮಾನ. ಇದರ ಹೆಚ್ಚಿನ ಭಾಗಗಳು ಉಪಯೋಗಕ್ಕ ಬರುತ್ತವೆ. ಬಾಳೆ ಹಣ್ಣು ಪೂಜೆಗೂ ಶ್ರೇಷ್ಠ, ತಿನ್ನಲೂ ರುಚಿಕರ, ಹೊಟ್ಟೆ ತುಂಬಿಸಬಲ್ಲದು. ಇದು ವಿವಿಧ ಖನಿಜಾಂಶಗಳ, ಕ್ಯಾಲ್ಸಿಯಂ ಮತ್ತು ನಾರಿನ ಆಗರ. ಬಾಳೆಹಣ್ಣನ್ನು ಬೆಳಗಿನ ತಿಂಡಿಗೆ ಪರ್ಯಾಯವಾಗಿ ಸೇವಿಸಬಹುದು! ಬಾಳೆಯಲ್ಲಿರುವ ಪೌಷ್ಟಿಕಾಂಶವು ಮನಷ್ಯನಿಗೆ ಎಷ್ಟು ಸೂಕ್ತ ಎಂದರೆ, ಎರಡು ವಾರ ವಯಸ್ಸಿನ ಹಸುಗೂಸುಗಳಿಗೆ, ಬಾಳೆಯ ಹಣ್ಣನ್ನು ಚೆನ್ನಾಗಿ ಕಿವುಚಿ, ಆಹಾರದ ರೂಪದಲ್ಲಿ ನೀಡಬಹುದು ಎಂದು ಅಮೆರಿಕದ ಆಹಾರ ತಜ್ಞರು ಸಾಬೀತುಪಡಿಸಿದ್ದಾರೆ!
ಆರು ತಿಂಗಳ ಮಗುವಿಗೂ ತಿನ್ನಿಸಬಹುದಾದ ಒಂದು ಉತ್ತಮ ಹಣ್ಣು ಎಂದರೆ, ಹದವಾಗಿ ಕಳಿತ ಏಲಕ್ಕಿ ಬಾಳೆಹಣ್ಣು. ತರಕಾರಿಯಾಗಿ ಬಾಳೆಯ ಉಪಯೋಗ ಕರಾವಳಿ ಮತ್ತು ಮಲೆನಾಡಿನಲ್ಲಿ ಜಾಸ್ತಿ. ಬಾಳೆಕಾಯಿಯ ಪಲ್ಯ, ಸಾಂಬಾರು, ಬೋಂಡ, ಬಾಳಹಣ್ಣಿನ ರಸಾಯನ, ಪಾಯಸ, ತುಪ್ಪಬಾಳೆಹಣ್ಣು ಬಹು
ಸಾಮಾನ್ಯ. ಬಾಳೆಯ ಹೂವನ್ನು ಪಲ್ಯ ಮತ್ತು ಚಟ್ನಿ ಮಾಡಿ ಉಪಯೋಗಿಸಬಹುದು. ಇದು ಮಹಿಳೆಯರ ಆರೋಗ್ಯ ಸಮಸ್ಯೆಗೆ ಉತ್ತಮ ಎನ್ನಲಾಗಿದೆ. ಆದರೆ,
ಅದೇಕೋ ಬಾಳೆಯ ಕಾಯಿಯನ್ನು ಮತ್ತು ಹೂವನ್ನು ಕರ್ನಾಟಕದ ಬಯಲು ಸೀಮೆಯ ಮತ್ತು ನಗರದ ಜನರು ತರಕಾರಿಯ ರೂಪದಲ್ಲಿ ಇಂದಿಗೂ ಸ್ವೀಕರಿಸಿಲ್ಲ! ಬಹುದಿನ ಕೆಡದೇ ಉಳಿಯುವ ಬಾಳೆಕಾಯಿಯು ತರಕಾರಿಯಗಿ ಜನಪ್ರಿಯವಾದರೆ, ಕೃಷಿಕರಿಗೆ ಅದೊಂದು ಆದಾಯಮೂಲವಾಗಬಲ್ಲದು.
ನಮ್ಮ ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಕಷ್ಟು ಉಪಯೋಗದಲ್ಲಿರುವ ಬಾಳೆದಿಂಡಿನ ಪಲ್ಯ ಸಹ, ಹೆಚ್ಚು ಪ್ರಚಾರಕ್ಕೆ ಬಂದಿಲ್ಲವೆಂದೇ ಹೇಳಬಹುದು. ಬಾಳೆಗೊನೆ ಬೆಳದು, ಅದನ್ನು ಕತ್ತರಿಸಿದ ನಂತರ, ಬಾಳೆಮರವನ್ನು ಕಡಿದು, ಕಾಂಡದ ಹೊದಿಕೆಯ ಪದರುಗಳನ್ನು ಒಂದೊಂದಾಗಿ ತೆಗೆದರೆ, ಒಳಗೆ ಟ್ಯೂಬ್‌ಲೈಟ್ ಆಕಾರದ ಬಾಳೆದಿಂಡು ಪ್ರತ್ಯಕ್ಷವಾಗುತ್ತದೆ. ಇದು ಒಂದು ಉತ್ತಮ ತರಕಾರಿ. ಇಲ್ಲಿ ಉತ್ತಮ ಎಂದರೆ, ರುಚಿಗೆ ಬದಲಾಗಿ ಔಷಧಿಯ ಗುಣಗಳಿಂದ ಎಂದು ತಿಳಿಯಬೇಕು. ವರ್ಷಕ್ಕೆ ಒಮ್ಮೆಯಾದರೂ ಬಾಳೆ ದಿಂಡಿನ ಪಲ್ಯವನ್ನು ತಿನ್ನಬೇಕು, ಅದರಿಂದಾಗಿ ನಮ್ಮ ಹೊಟ್ಟೆಗೆ ಆಕಸ್ಮಿಕವಾಗಿ ಸೇರುವ ಕೂದಲುಗಳು ಮತ್ತು ಉಗುರು ಕರಗಿ ಹೋಗುತ್ತವೆ ಎಂದು ನಮ್ಮ ಅಮ್ಮಮ್ಮ ಹೇಳುತ್ತಿದ್ದರು.
ಅದು ಅವರ ಪಾರಂಪರಿಕ ಜ್ಞಾನ; ಬಾಳೆ ದಿಂಡು ಯಾವ ವಿಧಾನದಲ್ಲಿ ಕೂದಲನ್ನು ಕರಗಿಸುತ್ತದೆ ಎಂದು ನಾವು ಮಕ್ಕಳು ಅವರನ್ನು ಕ್ವಿಜ್ ಮಾಡುತ್ತಿದ್ದುದುಂಟು. ಆದರೆ ಅವರ ಬಳಿ ವೈಜ್ಞಾನಿಕ ವಿವರವಿರಲಿಲ್ಲ; ಆದರೆ ಆಗಾಗ ಬಾಳೆದಿಂಡಿನ ಪಲ್ಯವನ್ನು ಮಾಡಿ ನಮಗೆ ತಿನ್ನಿಸುತ್ತಿದ್ದರು. ಬಾಳೆ ದಿಂಡನ್ನು ಸಣ್ಣಗೆ ಹೆಚ್ಚಿ ಕೊಸಂಬರಿಯನ್ನು ತಯಾರಿಸುವುದುಂಟು. ಮೂತ್ರಕೋಶದ ಕಲ್ಲುಗಳನ್ನು ಕರಗಿಸುತ್ತದೆ ಎಂಬ ನಂಬಿಕೆಯಿಂದ ಬಾಳೆದಿಂಡಿನ ರಸವನ್ನು ಕುಡಿಯುವ ಪದ್ಧತಿಯೂ ಇದೆ. ನಾಡಿ ವೈದ್ಯಪದ್ಧತಿಯಲ್ಲಿ ಬಾಳೆದಿಂಡಿನ ಔಷಧಿಯ ಗುಣಗಳಿಗೆ ಸಾಕಷ್ಟು ಮಹತ್ವವಿದೆ.
ನಮ್ಮ ಹಳ್ಳಿಯಲ್ಲಿ ಬಾಳೆ ಮರದ ತೊಗಟೆಯೂ ಉಪಯೋಗಕ್ಕೆ ಬರುತ್ತಿತ್ತು. ಅದನ್ನು ಉದ್ದನೆಯ ಹಾಳೆಗಳ ರೂಪದಲ್ಲಿ ಪ್ರತ್ಯೇಕಿಸಿ, ಬೇಕಾದ ಆಕರಕ್ಕೆ
ಕತ್ತರಿಸಿ, ಜೋಡಿಸಿ ಊಟದ ಎಲೆಯನ್ನಾಗಿ ಉಪಯೋಗಿಸುತ್ತಿದ್ದರು. ಆ ಉದ್ದನೆಯ ಹಾಳೆಗಳನ್ನು ಒಣಗಿಸಿದರೆ, ಗಟ್ಟಿಯಾದ ನಾರು ಸಿದ್ಧ. ಹಗ್ಗ ಮಾಡಲು, ಹೂ ಕಟ್ಟಲು, ಉದ್ದಿನ ಮುಡಿ ತಯಾರಿಸಲು ಈ ನಾರು ಉಪಯೋಗಕ್ಕೆ ಬರುತ್ತಿತ್ತು. ಬಾಳೆ ಎಲೆಯ ಉಪಯೋಗ ಗೊತ್ತಿದ್ದದ್ದೇ; ಬಾಳೆ ಹಣ್ಣಿನ ರೀತಿಯೇ ಬಾಳೆ ಎಲೆಯು ಇಂದು ರೈತರ ಪರ್ಯಾಯ ಆದಾಯ.
ಬಾಳೆ ಎಲೆಯ ಬಳಕೆಯಲ್ಲೂ ಕೆಲವು ವಿಧಿ, ವಿಧಾನಗಳಿವೆ. ಪುಟ್ಟಬಾಳೆ ಮರದ ಎಲೆ ಶ್ರೇಷ್ಠ ಎಂಬ ನಂಬಿಕೆ. ಅದರಲ್ಲೂ ಆ ಬಾಳೆ ಎಲೆಯ ಕುಡಿಭಾಗವು
ಸಾಂಪ್ರದಾಯಿಕ ಪೂಜೆಗೆ ಅತ್ಯಗತ್ಯ ಎಂಬ ನಂಬಿಕೆಯೂ ಇದೆ. ತಿಂಡಿ ತಿನಿಸುಗಳ ಪ್ಯಾಕಿಂಗ್ ಮಾಡಲು ಬಾಳೆ ಎಲೆಯ ಉಪಯೋಗ ವ್ಯಾಪಕ. ಹಿಂದಿನ ಕಾಲದಲ್ಲಿ, ಅಕಸ್ಮಾತ್ ಮೈಗೆ ಬೆಂಕಿ ತಗುಲಿ ಸುಟ್ಟರೆ, ಬಾಳೆ ಎಲೆಯ ಮೇಲೆ ಮಲಗಿಸಿ, ನೋವನ್ನು ಉಪಶಮನ ಮಾಡುತ್ತಿದ್ದರಂತೆ. ಬಾಳೆಯ ವಿವಿಧ ತಳಿಗಳ ಕುರಿತು ತಿಳಿಯಹೊರಟರೆ ಕೆಲವು ಅಚ್ಚರಿಯ ಅಂಶಗಳು ಕಾಣಸಿಗುತ್ತವೆ. ಲೇಖಕಿ ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದಲ್ಲಿ ಕಲ್ಲು ಬಾಳೆ ಎಂಬ ತಳಿಯ ವಿಚಾರ ಕುತೂಹಲಕಾರಿಯಾಗಿ ಮೂಡಿಬಂದಿದೆ.
ಅವರ ಮನೆಯ ಮುಂದೆ ಒಂದು ಕಲ್ಲುಬಾಳೆ ಗಿಡವಿತ್ತು. ಒಂದು ರಾತ್ರಿ ಆನೆಯೊಂದು ಬಂದು ಆ ಗಿಡವನ್ನು ಮಾತ್ರ ತಿಂದುಹೋಗಿತ್ತಂತೆ. ಸುತ್ತಲಿನ ಅಡಕೆ
ಮತ್ತಿತರ ಗಿಡಗಳನ್ನು ಮುಟ್ಟಿರಲಿಲ್ಲ. ಅದೇಕೆಂದು ವಿಚಾರಿಸಿದಾಗ, ಕಲ್ಲುಬಾಳೆಯ ಕಾಂಡವು ನೀರಿನ ಆಗರ, ಅದನ್ನು ತಿಂದರೆ ಅವುಗಳ ಹಸಿವು ಮತ್ತು
ಬಾಯಾರಿಕೆ ಕಡಿಮೆಯಾಗುತ್ತದೆಂದು ಸ್ಥಳೀಯರಾದ ಅಂಗಾರ ಎಂಬುವವರು ಅವರಿಗೆ ಮಾಹಿತಿ ನಿಡಿದರು. ಇದನ್ನು ಗಮನಿಸಿದ ಸಹನಾ ಅವರು, ರು.೪೦೦ ತೆತ್ತು ಎರಡು ಕಿಲೊ ಕಲ್ಲುಬಾಳೆ ಬೀಜ ಖರೀದಿಸಿ, ಅರಣ್ಯ ಇಲಾಖೆಯ ಸಹಕಾರ ಪಡೆದು, ಸುತ್ತಲಿನ ಕಾಡಿನಲ್ಲಿ ಕಲ್ಲು ಬಾಳೆಯನ್ನು ಬೆಳೆಸುವ ಪ್ರಯತ್ನವನ್ನೂ
ಮಾಡಿದ್ದರು! ಆ ಗಿಡಗಳು ದೊಡ್ಡವಾದಾಗ, ಆನೆಗಳು ಕಲ್ಲುಬಾಳೆಯನ್ನು ತಿಂದು ತಮ್ಮ ಹಸಿವನ್ನು ಪರಿಹರಿಸಿಕೊಳ್ಳಲಿ, ತಮ್ಮ ತೋಟಕ್ಕೆ ಬಂದು ಹಾವಳಿ
ಮಾಡದಿರಲಿ ಎಂಬ ಸದಾಶಯ ಅವರದು.
ಜಾಸ್ತಿ ಎತ್ತರ ಬೆಳೆಯದ ಕಲ್ಲುಬಾಳೆಗಳು, ಉದ್ದನೆಯ ಮೂತಿ ಬಿಟ್ಟುಕೊಂಡು ದಟ್ಟ ಕಾಡಿನಲ್ಲಿ ಬೆಳೆದಿರುವುದನ್ನು ಕಾಣಬಹುದು. ಕಲ್ಲುಬಾಳೆಯ ಹಣ್ಣು ಸಿಹಿ ಇದ್ದರೂ, ಅದರ ತುಂಬಾ ಕಲ್ಲಿನಂತಹ ಬೀಜಗಳು! ಶಿವಮೊಗ್ಗ ಜಿಲ್ಲೆಯ ಬಾಳೆಬರೆ ಘಾಟಿಯಲ್ಲಿ ಕಲ್ಲುಬಾಳೆ ಗಿಡಗಳು ಹೇರಳ, ಅದಕ್ಕೆಂದೇ ಬಾಳೆಯ ಹೆಸರನ್ನು
ಆ ಕಾಡು ಪಡೆದಿದೆ!ನಮ್ಮ ಹಳ್ಳಿಯ ತೋಟದ ಮೂಲೆಯಲ್ಲೂ, ಕಲ್ಲು ಬಾಳೆಯನ್ನು ಹೋಲುವ ಕಾಡುಬಾಳೆಯ ಮರಗಳಿದ್ದವು. ಅದರ ಹಣ್ಣಿನ ತುಂಬಾ ಕಪ್ಪನೆಯ
ಬೀಜಗಳು; ತಮ್ಮಪಾಡಿಗೆ ತಾವು ಬೆಳೆದಿರುತ್ತಿದ್ದ ಆ ಕಾಡುಬಾಳೆಯ ಹಣ್ಣನ್ನು ನಾವು ಮಕ್ಕಳು ತಿನ್ನುತ್ತಿದ್ದುದುಂಟು! ಆ ಹಣ್ಣು ತಿನ್ನುವಾಗ, ಕಲ್ಲಿನಂತಹ ಬೀಜ ಗಳನ್ನು ಉಗಿಯುವುದೇ ದೊಡ್ಡ ಕೆಲಸ!
ಈಚಿನ ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ಬಾಳೆಯು ವಾಣಿಜ್ಯ ಬೆಳೆಯ ಸ್ವರೂಪ ಪಡೆದಿದೆ. ವಿಶಾಲ ಪ್ರದೇಶಗಳಲ್ಲಿ ಬಾಳೆ ಬೆಳೆದು ಮಾರುತ್ತಿದ್ದಾರೆ. ಆದರೆ
ಬಾಳೆಗೆ ಹೇರಳ ನೀರು ಬೇಕು; ನೀರಾವರಿ ವ್ಯವಸ್ಥೆ ಅಗತ್ಯ. ಈ ನಿಟ್ಟಿನಲ್ಲಿ ಯೋಚಿಸಿದರೆ, ಇದು ಒಂದು ದುಬಾರಿ ಬೆಳೆ. ಹಾಗಿದ್ದರೂ, ಇಂದು ಅತಿ ಕಡಿಮೆ
ಬೆಲೆಯಲ್ಲಿ ವಿವಿಧ ರೀತಿಯ ಬಾಳೆಯ ಹಣ್ಣುಗಳು ನಮ್ಮಲ್ಲಿ ದೊರೆಯುತ್ತಿವೆ. ಇದನ್ನು ಗಮನಿಸಿದರೆ, ಇಂದಿನ ಬಾಳೆ ಕೃಷಿಕನು ಆರ್ಥಿಕವಾಗಿ ಅಷ್ಟೇನೂ
ಲಾಭಗಳಿಸುತ್ತಿಲ್ಲ ಎಂದೇ ಹೇಳಬೇಕು. ಏಲಕ್ಕಿ ಬಾಲೆ, ಪುಟ್ಟ ಬಾಳೆ, ರಸಬಾಳೆ ಮೊದಲಾದವು ನಮ್ಮ ನಾಡಿನ ಶ್ರೇಷ್ಠ ಹಣ್ಣುಗಳ ಸಾಲಿನಲ್ಲಿ ನಿಲ್ಲುತ್ತವೆ. ರುಚಿಯಲ್ಲೂ ಉತ್ತಮ, ಪೌಷ್ಟಿಕಾಂಶದಲ್ಲೂ ಉನ್ನತ.
ವಿಶೇಷವಾಗಿ ಮಕ್ಕಳಿಗೆ ಬಾಳೆಹಣ್ಣು ಬಲು ಹಿತಕರ. ಬಾಳೆ ಹಣ್ಣು ಇಂದು ಜನಸಾಮಾನ್ಯರ, ಬಡವರ ಪ್ರೀತಿಯ ಹಣ್ಣು ಎನಿಸಿದೆ. ಅದೊಂದೇ ಕಾರಣದಿಂದಾಗಿ, ಸ್ಥಿತಿವಂತರು ಇದನ್ನು ತಿನ್ನದೇ ಇರಬೇಡಿ. ‘ನಮಗೆ ಬಾಳೆ ತಿಂದರೆ ಆಗುವುದಿಲ್ಲ’ ಎಂಬ ಯಾವುದಾದರೂ ನೆಪವೊಡ್ಡಿ ಅದನ್ನು ದೂರವಿಟ್ಟರೆ, ಹಾಗೆ ದೂರ ಮಾಡಿದವರಿಗೇ ನಷ್ಟ