Wednesday, 11th December 2024

ಗೆಳೆಯರ ಹಕ್ಕನ್ನೂ ಗೌರವಿಸುವ ಧರ್ಮ ಸಹಿಷ್ಣುಗಳಾಗೋಣ

ಸುಪ್ತ ಸಾಗರ

rkbhadti@gmail.com

ಅವನು, ಅವನನ್ನು ಹಾಗೆಂದು ಕರೆಯಬೇಕೋ ಬೇಡವೋ ಗೊತ್ತಿಲ್ಲ. ಅಂತೂ ಸರ್ಪಭೂಷಣ ಎಂಬ ಹೆಸರಿಟ್ಟುಕೊಂಡಿದ್ದರಿಂದ ಹಾಗೂ ಅವನು ಗಂಡು ಮಕ್ಕಳ ಡೆಸ್ಕ್‌ನಲ್ಲೇ ಕುಳಿತುಕೊಳ್ಳುತ್ತಿದ್ದರಿಂದ ಸಂಬೋಧನೆ ಹಾಗೆಯೇ ಇರುತ್ತಿತ್ತು. ಬೇರಾರೂ ಭೂಷಣನನ್ನು ಮಾತನಾಡಿಸುತ್ತಿರಲಿಲ್ಲ ಎಂಬ
ಕಾರಣಕ್ಕೋ, ನನ್ನ ಹೆಂಗರುಳಿನ ಸ್ವಭಾವದಿಂದಲೋ ಅಂತೂ ಸ್ವಲ್ಪ ಹೆಚ್ಚೇ ಹತ್ತಿರಾಗಿದ್ದ.

ಕಾಲೇಜು ದಿನಗಳ ಅಷ್ಟೂ ಐದು ವರ್ಷ ಅವನು ನನ್ನ ಬೆಂಚೇ, ಪಕ್ಕದಲ್ಲಿಯೇ ಕುಳಿತುಕೊಳ್ಳುತ್ತಿದ್ದ. ಕ್ಯಾಂಟೀನ್, ಸೋರ್ಟ್ಸ್ ರೂಮ್, ಲೈಬ್ರರಿ…ಕೊನೆಗೆ ಕಾರಿಡಾರ್‌ನಲ್ಲಿಯೂ ಹೆಚ್ಚೂ ಕಡಿಮೆ ಅಂಟಿಕೊಂಡೇ ಇರುತ್ತಿದ್ದ. ಹೌದೌದು, ಬಹಳಷ್ಟು ಸಲ ನನಗೇ ಕಿರಿಕಿರಿ ಆಗಿದ್ದಿದೆ. ಒಬ್ಬಳು ಗೆಳತಿ ಅಂಟಿ ಕೊಂಡಿರಬೇಕೆಂದು ಬಯಸುತ್ತಿದ್ದ ಆ ಯವ್ವನದ ದಿನಗಳಲ್ಲಿ ಇವನು, ಈ ಭೂಷಣ ಭುಜಕ್ಕೆ ಭುಜ ತಾಗಿಸಿಕೊಂಡು ಕೂರುವುದು, ತೋಳಿಗೆ ತೋಳು ಬೆಸೆದುಕೊಂಡು ಓಡಾಡುವುದು, ಹೋದಲ್ಲೆಲ್ಲ ಅಂದರೆ ಸೂಸೂಗೂ ಜತೆಗೇ ಬರುತ್ತಿದ್ದುದು ನನಗೆ ಇನ್ನಿಲ್ಲದ ಮುಜುಗರ ಉಂಟು ಮಾಡುತ್ತಿತ್ತು.

ಕಾರಿಡಾರ್‌ಗಳಲ್ಲಂತೂ ನಮ್ಮನ್ನು ‘ಅಮರಪ್ರೇಮಿ’ಗಳೆಂದೇ ರೇಗಿಸುತ್ತಿದ್ದರು. ಆಗೆಲ್ಲ ನಾನು ಮುಗುಳ್ನಕ್ಕರೆ, ಅವನು ರೇಗಿಕೊಂಡೇ ಹೋಗುತ್ತಿದ್ದ. ಅವನು ಹಾಗೆ ಕೋಪಿಸಿಕೊಂಡು ಹೋಗುವ ಪರಿ, ಆ ಕ್ಷಣದ ಅವನ ಮುಖಭಾವ, ಆಂಗಿಕ ಭಾಷೆ ಇನ್ನಷ್ಟು ನಗೆ ಉಕ್ಕಿಸುತ್ತಿತ್ತು; ಕಾಲೇಜು ಪಡ್ಡೆಗಳಿಗೆ ಇನ್ನಷ್ಟು ಮೋಜಿಗೆ ಗ್ರಾಸ ಒದಗಿಸುತ್ತಿತ್ತು. ಎಷ್ಟೋ ಬಾರಿ ಅವನ ಅಸಹಾಯಕತೆ ಕೋಪದಿಂದ ಕಣ್ಣೀರಿಗೆ ತಿರುಗಿದ್ದುದುಂಟು. ಆಗೆಲ್ಲ ಒಂಥರಾ ಸಂಕಟ, ಬೇಸರ ವಾಗುತ್ತಿದ್ದುದು ಸುಳ್ಳಲ್ಲ. ‘ಅಯ್ಯೋ ಪಾಪ’ ಎಂತಲೂ ಅನಿಸಿ ಅದನ್ನು ವ್ಯಕ್ತಪಡಿಸಿದರೆ ಅವನಿಗೆ ಮತ್ತೆ ಸಿಟ್ಟು.

ಹೌದು, ಆಗ ಅವನಿಗೆ ಬೇಕಿದ್ದುದು ಸಹಾನುಭೂತಿಯೇ ಹೊರತು ಅನುಕಂಪವಾಗಿರಲಿಲ್ಲ. ಕೆಲವೊಮ್ಮೆ ತಲೆ ಚಿಟ್ಟು ಹಿಡಿಸಿಬಿಡುತ್ತಿದ್ದ. ಒಂದಕ್ಕೊಂದು ಅರ್ಥವಿಲ್ಲದ ಪ್ರಲಾಪಗಳು, ಮನೆ, ಮಕ್ಕಳು, ಅಡುಗೆ, ಗಂಡಸರ ಹರವಾದ ಪೊದೆಗೂದಲ ಎದೆ…. ಲಾಲನೆ, ಪೋಷಣೆ ಇಂಥವನ್ನೆಲ್ಲ ಬಿಟ್ಟೂಬಿಡದೆ ಹಲುಬುತ್ತಿದ್ದರೆ ನನಗೊಂಥರಾ ವಿಚಿತ್ರ. ಮಾತ್ರವಲ್ಲ ಅವನು ಹೆಣ್ಣು ಮಕ್ಕಳನ್ನು ಕಂಡರೆ ಉರಿಉರಿದು ಬೀಳುತ್ತಿದ್ದ ಪರಿ, ಅವರ ಬಗ್ಗೆ ತೋರುತ್ತಿದ್ದ ಅಸಹನೆ, ಅದು ಅಸಹನೆಯೋ, ಅಸೂಯೆಯೋ ಅಥವಾ ಅದೆರಡೂ ಆದ ಭಾವವೋ ಅಂತೂ ಅವನಿಂದ ವ್ಯಕ್ತವಾಗುತ್ತಿದ್ದ ವಿಚಿತ್ರವಾದೊಂದು
ಹಾವಭಾವ…ಇವೆಲ್ಲವೂ ನನ್ನೊಳಗೆ ನೂರಾರು ಪ್ರಶ್ನೆಗಳ ರಿಂಗಣದ ಕಣ ಸೃಷ್ಟಿಸುತ್ತಿದ್ದುದು ಸುಳ್ಳಲ್ಲ.

ಹಾಗೆಂದು ಅವನು ಎಲ್ಲ ಹುಡುಗರ ಪಕ್ಕವೂ ಹೋಗಿ ಕುಳಿತುಕೊಳ್ಳುತ್ತಿರಲಿಲ್ಲ. ಎಲ್ಲರಿಗೂ(ಹುಡುಗರಿಗೆ) ಮೈ ತಾಕಿಸುತ್ತಿರಲಿಲ್ಲ. ಬಹಳಷ್ಟು ಸಲ ಬಸ್‌ನಲ್ಲಿಯೂ ಆತ ಹುಡುಕಿಕೊಂಡು ಹೋಗಿ ಕಟ್ಟುಮಸ್ತಾದ ಹುಡುಗರ ಪಕ್ಕವೇ. ನಾನಿದ್ದರೆ ಕಿಟಕಿ ಪಕ್ಕದ ಸೀಟಿನಲ್ಲಿ ಅವನು, ಮಧ್ಯದಲ್ಲಿ ನಾನು. ಅಪ್ಪೀ ತಪ್ಪಿ ಮೂರುಜನರ ಸೀಟಿನಲ್ಲಿ ನನ್ನ ಪಕ್ಕ ಇನ್ನೊಬ್ಬಳು ತರಳೆ ಬಂದು ಕೂತುಬಿಟ್ಟರೆ ಇವನದ್ದು ಇನ್ನಿಲ್ಲದ ತರಲೆ. ಆಗ ಮಾತ್ರ ನನಗೆ ಕಿಟಕಿ ಪಕ್ಕದ ಸೀಟು ಅನಾಯಾಸ ಸಿಗುತ್ತಿತ್ತು. ಇದೇನು ನನ್ನ ಮೇಲೆ ಇಂಥ ಪೊಸೆಸೀವ್‌ನೆಸ್ (ಆಗ ನನಗೆ ಇಂಥ ಪದಗಳು ಗೊತ್ತಿರಲಿಲ್ಲ ಎಂಬುದು ಬೇರೆ ಪ್ರಶ್ನೆ)
ಇವನಿಗೆ? ಮತ್ತದೇ ಬಗೆ ಹರಿಯದ ಪ್ರಶ್ನೆ.

ನಾನು ಯಾವುದೋ ಹುಡುಗಿಗೆ ಲೈನ್ ಹಾಕಿದ್ದೇನೆಂದರೆ ಇವನಿಗೊಂಥರಾ ಉರಿ? ಬಾಲ್ಯದ ಗೆಳತಿ ಮಂಗಳಿ ನನ್ನೊಂದಿಗೆ ಹೆಚ್ಚು ಸಲುಗೆಯಿಂದ ಹರಟಿ ದರೆ ಭೂಷಣನ ಮೂತಿ ಅಮಾವಾಸ್ಯೆ. ನಾನವಳೊಂದಿಗೆ ಕಿತ್ತಾಡಿದರೆ ಊರಗಲ ಅರಳುತ್ತಿದ್ದ. ಆಗೆಲ್ಲ ನನ್ನ ಬಗ್ಗೆ ತೋರುತ್ತಿದ್ದ ಇಂಥ ವರ್ತನೆ ಗಳು ಗೆಳೆಯನ ಕಾಳಜಿಯಷ್ಟೇ ಅಲ್ಲವೆಂದು ಅನ್ನಿಸುತ್ತಿದ್ದರೂ ಪಕ್ಕಾ ಗಾಂಧಿ ಎನಿಸಿಕೊಂಡಿದ್ದ ನನಗೆ ಅದಕ್ಕಿಂತ ಹೆಚ್ಚು ಆತನ ‘ಗೆ’ಳೆತನವನ್ನು ವ್ಯಾಖ್ಯಾ ನಿಸಲು ಗೊತ್ತಿರಲಿಲ್ಲ. ಆದರೂ ಇವನೇಕೆ ಹೀ‘ಗೆ’ ಎಂದು ಒಮ್ಮೆಯೂ ಯೋಚಿಸಲಿಲ್ಲ.

ಎಲ್ಲೋ ಒಮ್ಮೊಮ್ಮೆ ಇವನಿಗೆಲ್ಲೋ ಸ್ವಲ್ಪ ಲೂಸಾ ಎಂಬ ಸಂಶಯ ಬರುತ್ತಿದ್ದರೂ ಇವನು ಹಾ‘ಗೆ’ ಇರಬಹುದು ಎಂದುಕೊಂಡೇ ಇರಲಿಲ್ಲ ಎಂಬು ದಕ್ಕಿಂತ ಹಾಗೊಂದು ಇರುತ್ತದೆ ಎಂಬುದು ನನಗೇ ಗೊತ್ತಿರಲಿಲ್ಲ. ಎಷ್ಟೋ ಬಾರಿ ನನ್ನ ಮದುವೆ ಬಗ್ಗೆ ಮಾತನಾಡುತ್ತಾ ‘ನೀನು ಮದುವೆ ಆಗಬೇಡವೋ, ನಮ್ಮ ಸ್ನೇಹಕ್ಕೆ ಮದುವೆ ಅಡ್ಡ ಬರುತ್ತೆ’ ಅಂತೆಲ್ಲ ಹೇಳಿದಾಗ ಇವನೊಂಥರಾ ಕ್ರಾಕು ಎಂದುಕೊಂಡೆನೇ ಹೊರತೂ, ನನ್ನ ಯೋಚನೆ ಇನ್ನೂ
ಮುಂದಕ್ಕೆ ಹೋಗಲು ಆಗಿರಲಿಲ್ಲ. ಕೊನೆಕೊನೆಗೆ ಈ ಮಹರಾಯ ನಿಜಕ್ಕೂ ನನಗೆ ಮದುವೆ ಆಗಲಿಕ್ಕೇ ಬಿಡೋದಿಲ್ವೇನೋ ಎಂದು ಭಯ ಪಡುವಷ್ಟು ನನ್ನ ಮದುವೆ ಬಗ್ಗೆ ಅವನು ನಕಾರಾತ್ಮಕ ಮಾತುಗಳನ್ನಾಡಿದ್ದ.

ಯಾವತ್ತೂ ಕ್ಲಾಸ್ ತಪ್ಪಿಸದ ಭೂಷಣ ಅವತ್ತೊಂದಿನ ಬರಲಿಲ್ಲ. ಅನಾರೋಗ್ಯ ಎಂದುಕೊಂಡೆ, ಎರಡು ದಿನ ಕಳೆಯಿತು. ಗೆಳೆಯರೆಲ್ಲ ಎಲ್ಲೋ ನಿನ್ನ ‘ಬಾಯ್ ಫ್ರೆಂಡ್’ ಎಂದು ರೇಗಿಸಿದರು. ಒಂದು ಗುಂಪು ಕಿಸಕ್ಕನೆ ನಕ್ಕಿತು. ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ. ಮೂರ‍್ನಾಲ್ಕು ದಿನಗಳು ಕಳೆದಾಗ ತುಸು ಆತಂಕವಾದ್ದು ನಿಜ. ಅವನ ತಂಗಿ ಪಿಯುನಲ್ಲಿದ್ದುದು ನೆನಪಾಯಿತು. ಅವಳನ್ನು ಕೇಳಿದರೆ ಏನೋ ಒಂಥರಾ, ನಾನೇ ಅವನ ಮೇಲೆ ರೇಪ್ ಮಾಡಿ ಬಿಟ್ಟಿದ್ದೀನೇನೋ ಎನ್ನುವಂತೆ ನೋಡಿ ಹೋಗಿ ಬಿಟ್ಟಳು. ಮರುದಿನ ಕಾಲೇಜಿಗೆ ಹೊರಟು ನಿಂತವನು, ದಾರಿ ಬದಲಿಸಿ ಅವನ ಊರಿನ ಬಸ್ ಹತ್ತಿದ್ದೆ.

ಮನೆ ಹುಡುಕಿ ಹೋದರೆ ಕೊಠಡಿಯ ಮೂಲೆಯೊಂದರಲ್ಲಿ ಗುಬ್ಬಚ್ಚಿಯಂತೆ ಮುದುಡಿ ಕೂತಿದ್ದ, ಮಾತಿಲ್ಲ, ಕಥೆಯಿಲ್ಲ. ‘ಏನೋ ಇದು ಭೂಷಣ, ಒಳ್ಳೆ ಅತ್ಯಾಚಾರ ಆದ ರೀತಿ ಕೂತಿದ್ದೀಯಲ್ಲೋ’ ಎಂದೆ. ಆ ಮಾತನ್ನು ಯಾಕೆ ಹೇಳಿದೆನೋ ಎನ್ನಿಸಿದ್ದು, ನನ್ನ ಮಾತು ಮುಗಿದಿತ್ತೋ ಇಲ್ಲವೋ ಭೋರೆಂದು ಅಳುತ್ತಾ ಬಂದು ನನ್ನ ಎದೆಗೊರಗಿ ರಂಪಾಟ ಎಬ್ಬಿಸಿದಾಗಲೇ. ಮೊದಲ ಬಾರಿ‘ಗೆ’ ಇವನ ಬಗ್ಗೆ ಅನುಮಾನ ಹುಟ್ಟಿದ್ದು, ತೀರಾ ಮುಜುಗರವಾದದ್ದು
ಆಗಲೇ. ಥೇಟಾನುಥೇಟು ಅತ್ಯಾಚಾರಕ್ಕೊಳಗಾದ ಹೆಣ್ಣೊಬ್ಬಳ ವರ್ತನೆಯೇ ಭೂಷಣನಲ್ಲಿ ಕಂಡಿತ್ತು. ಅರ್ಧ ಗಂಟೆ ಏನೇನೋ ಹೇಳಿ ಸಮಾಧಾನಿಸಿ ಕೇಳಿದ ಬಳಿಕ ನಿಜಕ್ಕೂ ಅವನ ಮೇಲೆ ಅದೇ ನಡೆದಿದೆ ಎಂಬ ಸತ್ಯ ಹೊರಬಂತು.

ಅರೆ ಇಸ್ಕಿ, ಭೂಷಣನ ಮೇಲೆ ಅತ್ಯಾಚಾರವೇ? ಅದು ಹೇಗೆ ಸಾಧ್ಯ? ಅವನಿಗಿಂತಲೂ ಗೊಂದಲಕ್ಕೆ ಬಿದ್ದುದು ನಾನು. ಆದದ್ದು, ಅಲ್ಲಲ್ಲ ಅವನು ಹೇಳಿದ್ದು ಇಷ್ಟು-ಕಳೆದ ಭಾನುವಾರ ರಾತ್ರಿ ಒಂದಷ್ಟು ಕ್ಲಾಸ್‌ಮೇಟ್ಸ್ ರಾತ್ರಿ ಪಾರ್ಟಿ ಹಮ್ಮಿಕೊಂಡಿದ್ದರು. ಕಾಲೇಜು ಮುಗಿಸಿ ಮನೆಗೆ ಹೋದ ಇವನನ್ನು ಹೇಗೋ ಪುಸಲಾಯಿಸಿ ಪಾರ್ಟಿ ಜಾಗಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ನಡೆಯುತ್ತಿದ್ದುದನ್ನು ಕಂಡು ಇವನಲ್ಲಿ ಪುಕು-ಪುಕು ಶುರುವಾಗಿತ್ತು. ಈ ಪುಂಡರಿಂದ
ಅದೂ ಈ ಮಧ್ಯರಾತ್ರಿ ತೀರಾ ಅವನ ಶೀಲ(?) (ಏಕೆಂದರೆ ನಾನು ಕೇಳಿರುವ ಪ್ರಕಾರ ಅದು ಹೆಣ್ಣಿಗೆ ಮಾತ್ರ ಇರುವಂಥದ್ದಂತೆ- ಹಾಗಂತ ನಮ್ಮ ಸಮಾಜ ನಂಬಿದೆ ಯಂತೆ) ಹೋಗಬಹುದೆಂಬ ಆತಂಕ ಅಲ್ಲದಿದ್ದರೂ ಸಹಜ ಹಿಂಜರಿಕೆ ಇತ್ತು. ಮೊದಮೊದಲೆಲ್ಲ ಆತ ‘ಅನುಭವಿಸಿದ್ದ’ ಆ ಚೇಷ್ಟೆಗಳು ನಂತರ ನಿಜವಾಗಿ ಇಡೀ ರಾತ್ರಿ ಅವನನ್ನು ಹೈರಾಣಾಗಿಸಿತ್ತು… ಬೆಳಗ್ಗೆ ‘ಅದು’ ಅಪ್ಪ ಅಮ್ಮ, ಇಬ್ಬರು ತಂಗಿಯರನ್ನೊಳಗೊಂಡ ಮಧ್ಯಮವರ್ಗದ ಅವರ
ಕುಟುಂಬಕ್ಕೆ ಗೊತ್ತಾಗಿ ರಾದ್ಧಾಂತವಾಗಿತ್ತು. ಮನೆಯಿಂದ ಹೊರಗೆ ಕಾಲಿಡದಂತೆ. ಅವನು ನಿಜಕ್ಕೂ ಸಲಿಂಗಿ ಎನ್ನುವುದು ಅವರಿಗೆ ಗೊತ್ತಿತ್ತೋ, ಇಲ್ಲವೊ. ಅಂತೂ ಇದರಿಂದ ನನಗೆ ಎಲ್ಲವೂ ಅರಿವಾಗಿತ್ತು.

ಇನ್ನೂ ವಿಶೇಷವೆಂದರೆ ಅದಾಗಿ ಮೂರು ದಿನಕ್ಕೆ ಕಾಲೇಜಿಗೆ ಬಂದ ಭೂಷಣ ಸಂಪೂರ್ಣ ಬದಲಾಗಿ ಬಿಟ್ಟಿದ್ದ. ಹಿಂದೆಂದಿಗಿಂತಲೂ ಲವಲವಿಕೆಯಿಂದ ಇರಲಾರಂಭಿಸಿದ್ದ. ಮೊದಲಿದ್ದ ಕೊರಗು, ಕೊರೆತ ಎಲ್ಲ ತನ್ನಿಂದ ತಾನೇ ಕಡಿಮೆ ಆಗಿತ್ತು. ಗುಣಾತ್ಮಕ ಬದಲಾವಣೆ ಅವನಲ್ಲಿ ಕಂಡಿತ್ತು.
***

ಇಷ್ಟೆಲ್ಲವೂ ಇವತ್ತು ಮತ್ತೆ ನೆನಪಾಗಿದೆ. ಸಲಿಂಗ ವಿವಾಹದದ ಕುರಿತಾದ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಕೊನೆಗೂ ಸ್ವೀಕಾರಗೊಂಡು, ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ದೇಶದಲ್ಲಿ ಮತ್ತೊಮ್ಮೆ ‘ನೈತಿಕ’ತೆಯ ಪ್ರಶ್ನೆ ಎದ್ದಿದೆ. ಇದೇ ಸಂದರ್ಭ ಮೂಲಭೂತ ಹಕ್ಕಿನ ಪ್ರತಿಪಾದನೆ ನಡೆಯುತ್ತಿದೆ. ಭೂಷಣನಂಥವರನ್ನು ಆಡಿಕೊಳ್ಳುವ, ಕೀಟಲೆಯೊಂದಿಗೆ ಮಜಾ ತೆಗೆದುಕೊಳ್ಳುವ, ಕುಹಕಕ್ಕೊಳಪಡಿಸುವ, ಹೆಚ್ಚೆಂದರೆ ಅನುಕಂಪ
ಬೀರುವ ಈ ಸಮಾಜ ನೈತಿಕ ಪ್ರಶ್ನೆಯನ್ನು ಎತ್ತುತ್ತಿದೆ.

ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವ ವಿಷಯದ ಕುರಿತು ದೇಶದಾದ್ಯಂತ ವಿವಿಧ ಹೈಕೋಟ್ ಗಳಲ್ಲಿ ಬಾಕಿ ಉಳಿದಿರುವ ಎಲ್ಲ ಅರ್ಜಿ ಗಳನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಒಟ್ಟುಗೂಡಿಸಿ ತನಗೇ ವರ್ಗಾಯಿಸಿಕೊಂಡಿದೆ. ಹಾ‘ಗೆ’ನೋಡಿದರೆ, 2018ರ ಸೆಪ್ಟೆಂಬರ್‌ರೆಗೆ ಸಲಿಂಗ ಕಾಮ ಕೂಡ ಅಪರಾಧವೆಂದೇ ಪರಿಗಣಿಸಲಾಗುತ್ತಿತ್ತು. ಈ ವಿಚಾರದಲ್ಲಿ ಸುದೀರ್ಘ ವಿಚಾರಣೆ ನಡೆಸಿದ್ದ ಸುಪ್ರಿಂ ಕೋರ್ಟ್ ವಿಸ್ತೃತ ಪೀಠ, ಅಂತಿಮವಾಗಿ ಸಲಿಂಗ ಕಾಮವನ್ನು ಮಾತ್ರ ಅಪರಾಧ ಮುಕ್ತಗೊಳಿಸಿತ್ತು.

377ನೇ ಪರಿಚ್ಛೆದದ ಅಡಿಯಲ್ಲಿಯೇ ಸಲಿಂಗ ಕಾಮವನ್ನು ಸಮ್ಮತಿಸಿದ್ದ ನ್ಯಾಯಪೀಠ, ಸಮಾನ ಲಿಂಗಿಗಳ ಮದುವೆ ವಿಚಾರದಲ್ಲಿ ಮೌನ ವಹಿಸಿತ್ತು.
ಇದೀಗ , ಸಲಿಂಗ ವಿವಾಹವನ್ನು ಮಾನ್ಯವೆಂದು ಪರಿಗಣಿಸಲು ಕೋರಿ ಅಭಿಜಿತ್ ಐಯ್ಯರ್ ಮಿತ್ರಾ, ವೈಭವ್ ಜೈನ್, ಕವಿತಾ ಅರೋರಾ, ಅನಿವಾಸಿ ಭಾರತೀಯ ಜೋಯ್ದೀಪ್ ಸೇನ್ ಗುಪ್ತಾ ಹಾಗೂ ಅವರ ಸಹಗಾಮಿ ರಸ್ಸೆಲ್ ಬ್ಲೆನ್ ಸ್ಟೆಪೆನ್ಸ್ ಪ್ರತ್ಯೆಕವಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಹಿಂದೂ ವಿವಾಹ ಕಾಯಿದೆ, ವಿಶೇಷ ವಿವಾಹ ಕಾಯಿದೆ ಮತ್ತು ವಿದೇಶಿ ವಿವಾಹ ಕಾಯಿದೆ ಸೇರಿದಂತೆ ವಿವಿಧ ಕಾಯಿದೆಗಳ ಅಡಿಯಲ್ಲಿ ತಮ್ಮ ನಡುವಿನ ಬಂಧವನ್ನು ವಿವಾಹವಾಗಿ ಮಾನ್ಯ ಮಾಡಲು ಕೋರಿದ್ದಾರೆ.

ಆದರೆ, ಸಲಿಂಗ ಮದುವೆಗೆ 377ನೇ ಪರಿಚ್ಛೆದ ಅನ್ವಯ ಆಗುವುದಿಲ್ಲ. ನವ್ತೇಜ್ ಸಿಂಗ್ ಜೋರ್ಹ ಪ್ರಕರಣದಲ್ಲಿ ನೀಡಿದ ತೀರ್ಪನ್ನು ತಪ್ಪಾಗಿ ಅರ್ಥೈಸ ಲಾಗುತ್ತಿದೆ. ಈ ಪ್ರಕರಣದಲ್ಲಿ ಕೇವಲ ಸಲಿಂಗ ಕಾಮಕ್ಕೆ ಮಾತ್ರವೇ ಅನುಮತಿ ನೀಡಲಾಗಿದೆ. ಸದ್ಯದ ಕಾನೂನುಗಳ ಪ್ರಕಾರ, ಸಲಿಂಗಿಗಳ ಮದುವೆಗೆ ಸಮ್ಮತಿ ಇಲ್ಲಕೇಂದ್ರ ಸರಕಾರ ಈ ಅರ್ಜಿಗಳನ್ನು ಪುರಸ್ಕರಿಸದಂತೆ ಆರಂಭದಿಂದಲೂ ಮನವಿ ಮಾಡುತ್ತಿದೆ. ಸಲಿಂಗ ವಿವಾಹ ಹಿಂದೂ ಸಂಸ್ಕೃತಿ ಅಥವಾ ಕಾನೂನಿನ ಭಾಗವಲ್ಲ. ಅಂತಹ ಸಂಬಂಧಗಳನ್ನು ಕುಟುಂಬ ಎಂದು ಕರೆಯಲಾಗದು ಎಂಬುದು ಕೇಂದ್ರದ ವಾದ.

ಹೊರಗೂ ಈ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಭಾರತದಲ್ಲಿ ಸಲಿಂಗ ಸಂಬಂಧಕ್ಕೆ ಅವಕಾಶ ಇದೆ, ಮದುವೆಗೆ ಯಾವುದೇ ಕಾರಣಕ್ಕೂ ಅನುಮತಿ ಕೊಡ
ಬಾರದು. ಇದೊಂದು ಸಾಮಾಜಿಕ ವಿಚಾರವಾಗಿದ್ದು ಕೋರ್ಟ್ ಈ ಬಗ್ಗೆ ಯಾವುದೇ ತೀರ್ಪು ನೀಡಬಾರದು ಎಂಬುದು ವಿರೋಧಿಗಳ ವಾದ. ಈ ಬಗ್ಗೆ ದೊಡ್ಡಮಟ್ಟದ ಚರ್ಚೆ ನಡೆಯುತ್ತಿರುವುದರ ಹಿಂದೆ ‘ಪಾಶ್ಚಿಮಾತ್ಯ ಹಿತಾಸಕ್ತಿ ಅಡಗಿರಬಹುದು’ ಎಂಬ ಅನುಮಾನವೂ ಕಾಡುತ್ತಿದೆ. ಗಂಡು- ಗಂಡನ್ನು, ಹೆಣ್ಣು-ಹೆಣ್ಣನ್ನು ಮದುವೆ ಆಗುವುದರಿಂದ ಸಾಮಾಜಿಕ ವಿಘಟನೆಗೆ ಕಾರಣ ವಾಗಬಹುದು ಎಂಬ ಆತಂಕ ಮೂಡಿದೆ. ಮಾತ್ರವಲ್ಲ, ಸುಪ್ರಿಂ ಕೋರ್ಟ್ ಹಾಲ್‌ನಲ್ಲಿ ಕುಳಿತ ನ್ಯಾಯಾಧೀಶರು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ನಿರ್ಣಯ ಕೈಗೊಳ್ಳಬಾರದು.

ಇದೊಂದು ಸಾಮಾಜಿಕ ವಿಚಾರ. ಇದರ ಬಗ್ಗೆ ಸಂಸತ್ ಹಾಗೂ ಸಾರ್ವಜನಿಕ ಚರ್ಚೆ ಬಳಿಕವಷ್ಟೇ ನಿರ್ಧಾರ ಕೈಗೊಳ್ಳಬೇಕು ಎಂಬ ಸಲಹೆಯೂ
ಸರಕಾರದ ಮಟ್ಟದಲ್ಲಿ ಕೇಳಿಬಂದಿದೆ. ಈ ವಾದದಲ್ಲಿ ಹುರುಳಿಲ್ಲದಿಲ್ಲ. ಏಕೆಂದರೆ, ಭಾರತದಂಥ ದೇಶದಲ್ಲಿ ‘ಮದುವೆ’ ಎಂಬುದು ಕೇವಲ ಎರಡು
ಜೈವಿಕ ದೇಹಗಳ ಸಂಬಂದವಲ್ಲ. ಅದೊಂದು ಪವಿತ್ರ ಬಂಧ. ಗಂಡು-ಹೆಣ್ಣು ಸೇರಿ ಒಂದಾಗಿ ಬದುಕುವ ಮೂಲಕ ಮನುಕುಲದ ಸಂತತಿ ಮುಂದು ವರಿಸುವ ಒಂದು ಭಾಗ. ಅದನ್ನು ಬಿಟ್ಟು ಗಂಡು- ಗಂಡನ್ನು, ಹೆಣ್ಣ- ಹೆಣ್ಣನ್ನು ಮದುವೆ ಆಗುವುದರಿಂದ ಸಾಮಾಜಿಕ ವಿಘಟನೆಗೆ ಕಾರಣವಾಗಬಹುದು.

ಹೌದು, ಸಾಂಪ್ರದಾಯಿಕ ಭಾರತದಲ್ಲಿ ಇಂದಿಗೂ ಆ ಬಗೆಗೆ ಅಷ್ಟು ಮುಕ್ತವಾಗಿ ನಾವು ತೆರೆದುಕೊಂಡಿಲ್ಲ. ಅಂದ ಮಾತ್ರಕ್ಕೆ ಇನ್ನೂ ನಾವು ಹಾಗೆಯೇ ಸಂಕುಚಿತ ಮನೋಭಾವದಲ್ಲೇ ಇರಬೇಕೆಂದೇನೂ ಇಲ್ಲ. ಲೈಂಗಿಕ ವಿಚಾರದಲ್ಲಿ, ವ್ಯಕ್ತಿಗತ ಅಭಿರುಚಿಯನ್ನು ಕಾನೂನಿನ ಹೇರಿಕೆಯೊಂದಿಗೆ ನಿರ್ಬಂಧಿ ಸುವ ಅಗತ್ಯ ಇಲ್ಲ ಎಂಬ ಕಾರಣಕ್ಕೇ ಸಲಿಂಗ ಕಾಮವನ್ನು ಅಪರಾಧಿಕರಣದಿಂದ ಹೊರಗಿಟ್ಟಾಗಿದೆ. ಆಹಾರ, ನಿದ್ರೆ, ಮೈಥುನ ಮನುಷ್ಯನ ಮೂಲ ಭೂತ ಅಗತ್ಯವೆಂಬ ಸತ್ಯ ಗೊತ್ತಿದ್ದೇ ಮೈಥುನದ ವಿಚಾರದಲ್ಲಿ ಮನುಷ್ಯನನ್ನು ಪ್ರತಿಬಂಧಿಸುವುದನ್ನು ಕೋರ್ಟ್ ತಡೆದಿದೆ. ಸಲಿಂಗ ಕಾಮಕ್ಕೆ ಕಾನೂನು ಸಮ್ಮತಿಯ ಮುದ್ರೆ ಒತ್ತಿ ಆಗಿದೆ. ಅಂದ ಮೇಲೆ ವಿವಾಹಕ್ಕೆ ತಡೆಯೇಕೆ ಎಂಬ ಪ್ರಶ್ನೆ ಎದ್ದಿದೆ.

‘ಕಾಮ’ವೂ ವಿವಾಹದ ಭಾಗವಾಗಿರುವುದರಿಂದ, ಸಲಿಂಗಿಗಳ ವಿವಾಹವೊಂದನ್ನು ತಡೆಯುವುದೇಕೆ ಎಂಬ ವಾದವೂ ಬಲವಾಗಿದೆ. ಒಂದೊಮ್ಮೆ ಆಹಾರದ ವಿಚಾರದಲ್ಲಾದರೂ ಪರ್ಯಾಯವಿದೆ. ಅದನ್ನು ಒಪ್ಪಿಕೊಳ್ಳುತ್ತೇವೆ. ಆಹಾರ ಸ್ವಾತಂತ್ರ್ಯವನ್ನು ಪ್ರಶ್ನಿಸಿದರೆ ಈ ದೇಶದಲ್ಲಿ ಅಸಮಾಧಾನ ಭುಗಿಲೇಳುತ್ತದೆ. ಹೀಗಿರುವಾಗ ಸಲಿಂಗಕಾಮದಕ್ಕೆ ಪೂರ್ಣ ಅಧಿಕೃತತೆಯ ರೂಪದಲ್ಲಿಒ ವಿವಾಹವನ್ನು ಮಾನ್ಯ ಮಾಡಬಾರದೇಕೆ ಎಂಬುದು ಆ ವರ್ಗದವರ ಪ್ರತಿಪಾದನೆ. ಬಂದರೆ, ಭಾರತೀಯ ಸ್ಮೃತಿ, ಪುರಾಣಗಳೇ ಇದನ್ನು ಒಪ್ಪಿಕೊಂಡದ್ದಕ್ಕೆ ಆಧಾರಗಳಿವೆ. ಸ್ವತಃ ಲೋಕ ಪಾಲಕ ಮಹಾವಿಷ್ಣು ಮೋಹಿನಿಯ ರೂಪ ಧರಿಸಿ ಎರಡು ಪ್ರಮುಖ ಸಂದರ್ಭದಲ್ಲಿ ಕಾಣಿಸಿಕೊಂಡದ್ದು ಪುರಾಣ ಕತೆಗಳಲ್ಲಿ ಪ್ರಸ್ತಾಪವಾಗುತ್ತದೆ. ಸ್ವಾಮಿ ಅಯ್ಯಪ್ಪ ಜನನ
ಆದದ್ದೇ ಹರಿ-ಹರರ ಸಮಾಗಮದಿಂದ ಎಂಬ ನಂಬಿಕೆ ನಮ್ಮಲ್ಲಿದೆ. ವೈಯಕ್ತಿಕ ಸ್ವಾತಂತ್ರ್ಯವನ್ನು ಗೌರವಿಸುವುದು ನಾಗರಿಕ ಸಮಾಜವೊಂದರ ಮೂಲ ಭೂತ ಹೊಣೆ.

ಅಷ್ಟಕ್ಕೂ ಖಾಸಗಿ ಹಾಗೂ ಸಹಮತದ ಸಲಿಂಗ ಕಾಮವನ್ನು ಅಪರಾಧವೆಂಬಂತೆ ಪರಿಗಣಿಸುವುದು ನಾಗರಿಕ ಹಕ್ಕುಗಳ ನಿರಾಕರಣೆಯಲ್ಲವೇ?
ಎಲ್‌ಜಿಬಿಟಿ (ಲೆಸ್ಬಿಯನ್, ಗೇ, ಬೈಸೆಕ್ಸುಯಲ್ ಮತ್ತು ಟ್ರಾನ್ಸ್‌ಜಂಡರ್) ಅಸಹಜ ಎನ್ನುವುದನ್ನು ಒಪ್ಪೋಣ. ಹಾಗೆಂದ ಮಾತ್ರಕ್ಕೆ ಇರಲೇಬಾರದು ಎನ್ನಲು ನಾವ್ಯಾರು? ವೇಶ್ಯಾವಾಟಿಕೆಯನ್ನೇ ವೃತ್ತಿಯಾಗಿ ಪರಿಗಣಿಸಬೇಕೆಂಬ ಒತ್ತಾಯ ಕೇಳಿ ಬರುತ್ತಿರುವ ದಿನಗಳಲ್ಲಿ, ಅನಾದಿ ಕಾಲದಿಂದಲೂ ವೇಶ್ಯಾ ವಾಟಿಕೆಯನ್ನು ಪೋಷಿಸಿಕೊಂಡು ಬಂದಿರುವ ಸಮಾಜವೊಂದರಲ್ಲಿ ಖಾಸಗಿ ಲೈಂಗಿಕ ಆಸಕ್ತಿಯನ್ನು ಅಪರಾಧವೆಂದು ಘೋಷಿಸುವುದರಲ್ಲಿ ಅರ್ಥವೇ ಇಲ್ಲ.

ಗಂಡು-ಹೆಣ್ಣಿನ ಪರಸ್ಪರ ಆಕರ್ಷಣೆಯಂತೆಯೇ ಸಲಿಂಗಿಗಳ ಪರಸ್ಪರ ಆಕರ್ಷಣೆಯೂ ಮಾನವೇತಿಹಾಸದಲ್ಲಿ ಅಸ್ತಿತ್ವದಲ್ಲಿ ಬಂದಿದೆ. ರುಚಿ, ಬಣ್ಣ ಇತ್ಯಾದಿಗಳಲ್ಲಿ ಭಿನ್ನತೆ ಇರುವಂತೆಯೇ ಜನರ ಲೈಂಗಿಕತೆಯೂ ಭಿನ್ನವಾಗಿ ಇರುವುದು ಸಹಜ. ಇದಕ್ಕೆ ಇಂಥದ್ದೇ ಕಾರಣ ಎಂದು ಹೇಳಲು ಆಗುವುದಿಲ್ಲ. ಏಕೆಂದರೆ ಇದು ಆನುವಂಶಿಕವೂ ಅಲ್ಲ! ಭಾರತದ ಸನ್ನಿವೇಶದಲ್ಲಿ ಹೇಳುವುದಾದರೆ ಇಲ್ಲಿ ಶತಶತಮಾನಗಳಿಂದ ಸಂಪ್ರದಾಯ, ನಂಬಿಕೆ, ಮಡಿವಂತಿಕೆ ನಡೆದುಕೊಂಡು ಬಂದಿದೆ. ಇದರ ಪರಿಣಾಮ ಮತ್ತು ಲೈಂಗಿಕತೆಯ ವಿಚಾರದಲ್ಲಿ ನಮ್ಮ ಸಮಾಜದಲ್ಲಿರಬಹುದಾದ ಕಟ್ಟುಪಾಡು, ಸಾಮಾಜಿಕ ಭೀತಿಯ ಹಿನ್ನೆಲೆಯಿಂದ ಜನ ತಮ್ಮ ವೈಯಕ್ತಿಕ ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವುದಿಲ್ಲ.

ಆದರೆ, ಎಲ್ಲವೂ ಆಧುನೀಕರಣಗೊಳ್ಳುತ್ತಿರುವಾಗ, ವಿಶ್ವದ ಹಲವು ದೇಶಗಳು ಸಲಿಂಗ ರತಿಗೆ ಕಾನೂನು ಮಾನ್ಯತೆಯನ್ನೇ ನೀಡಿವೆ. ಅಸಹಜ ಹಾಗೂ
ಅನೈಸರ್ಗಿಕವಾದುದನ್ನು ಒಪ್ಪಲು ಸಾಧ್ಯವಿಲ್ಲ ಎಂಬ ವಾದ ಭಾರತೀಯರ ಮಟ್ಟಿಗೆ ಸರಿಯಿದ್ದರೂ ವೈಯಕ್ತಿಕ ಆಸಕ್ತಿಗಳನ್ನು ನಿರ್ಬಂಧಿಸುವುದು ಸರಿಯಲ್ಲ. ಸಾಮ್ರಾಜ್ಯಶಾಹಿ ಆಡಳಿತಾವಧಿಯಲ್ಲಿ ಭಾರತಕ್ಕೆ ಬಂದ ಕಾನೂನಿದು. ಹೆಚ್ಚಿನ ವಸಾಹತುಗಳಲ್ಲಿ ಸೆಕ್ಷನ್ 377ನೇ ವಿಧಿಯ ಕಾನೂನು ಇದೆ. ಕ್ರೈಸ್ತ ಧರ್ಮಗ್ರಂಥ ಬೈಬಲ್ಲಿನಲ್ಲಿ ಸಲಿಂಗ ರತಿ ಸಲ್ಲ ಎಂಬ ಬೋಧನೆ ಇದೆ. ವಾಸ್ತವವಾಗಿ, ಇಂತಹ ಅಪರೂಪದ, ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಪುರಾತನ ಭಾರತೀಯ ಸಮಾಜ ಹೆಚ್ಚು ಔದಾರ್ಯದಿಂದ ನಡೆದುಕೊಂಡಿದೆ.

ಭಾರತೀಯ ಚಿಂತನೆಯಲ್ಲಿ ಕಾಮಕ್ಕೆ ಪ್ರಾಶಸ್ತ್ಯವಿದೆ. ಧರ್ಮ, ಅರ್ಥ ಮತ್ತು ಮೋಕ್ಷಗಳಷ್ಟೇ ಕಾಮವೂ ಮುಖ್ಯ. ಸಂತಾನವೇ ಮುಖ್ಯವಾಗಿದ್ದ ಸನ್ನಿವೇಶ ದಲ್ಲಿ ಗಂಡು ಹೆಣ್ಣಿನ ವೈವಾಹಿಕ ಸಂಬಂಧವಷ್ಟೇ ಸಮ್ಮತ ಎಂಬ ರಿವಾಜು ಹಿಂದೆ ಜಾರಿಯಲ್ಲಿತ್ತು. ಅದೇ ಕಟ್ಟುಪಾಡು, ಕಾನೂನು ಆಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಬದಲಾದ ಸಂದರ್ಭಕ್ಕನುಗುಣವಾದ ತಿದ್ದುಪಡಿ ನಮ್ಮ ಆಡಳಿತ ವ್ಯವಸ್ಥೆಯಿಂದಲೂ ಆಗಬೇಕು. ಆದರೆ ಇಂಥ ವಿಷಯದ ಬಗ್ಗೆ ಮೂಲಭೂತ ತಿಳಿವಳಿಕೆಯೇ ಇಲ್ಲದ ಪ್ರತಿನಿಧಿಗಳಿಂದ ಅರ್ಥಪೂರ್ಣ ಸಂವಾದದ ನಿರೀಕ್ಷೆ ಅಸಾಧ್ಯ. ಸಾಮಾಜಿಕ ಜಾಗೃತಿಯೊಂದೇ ಇದಕ್ಕಿರುವ ಪರಿಹಾರ. ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಇಂಥ ಅಲ್ಪಸಂಖ್ಯಾತ ಸಮುದಾಯದ ಅಳಲನ್ನು ಅರಿಯಲಿ.
***
ಭೂಷಣ ಈಗ ಎಲ್ಲಿದ್ದಾನೋ, ಸಲಿಂಗ ವಿವಾಹದ ಹೋರಾಟ ಕೇವಲ ಯಾವುದೋ ರಾಷ್ಟ್ರದ, ಸಿದ್ಧಾಂತ ಪ್ರೇರಿತ, ರಾಜಕೀಯ ಉದ್ದೇಶದ ಹೋರಾಟ ವಾಗದೇ ನಮ್ಮ ನಡುವೆ ಇರುವ ಭೂಷಣನಂಥ ನೂರಾರು ‘ಗೆ’ಳೆಯರಿಗೆ ನ್ಯಾಯಯುತ ಹಕ್ಕು ಈ ಸಮಾಜದಿಂದ ಸಿಗಲಿ. ಲೈಂಗಿಕ ಅಲ್ಪಸಂಖ್ಯಾತರ ಧರ್ಮವನ್ನೂ ರಕ್ಷಿಸುವ ಮೂಲಕ ನೈಜ ಅರ್ಥದಲ್ಲಿ ಭಾರತ ಧರ್ಮ ಸಹಿಷ್ಣು ಎಂಬುದು ಮತ್ತೆ ಸಾಬೀತಾಗಲಿ.