Friday, 13th December 2024

ನಂಬಿಕೆಗಳಿರಲಿ, ಆದರೆ ಮೂಢನಂಬಿಕೆಗಳು ಬೇಡ !

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ನಾವು ತಿಳಿದೋ ತಿಳಿಯದೆಯೋ ನಮ್ಮ ಅನೇಕ ನಂಬಿಕೆಗಳ ನಡುವೆ ಸಾಕಷ್ಟು ಮೂಢನಂಬಿಕೆಗಳನ್ನೂ ಪಾಲಿಸಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ಗೆಳತಿಯೊಬ್ಬರು ಬಹಳ ನೋವಿನಿಂದ ವೈಧವ್ಯದಿಂದಾಗಿ ತಾವು ಎದುರಿಸುತ್ತಿರುವ ಅವಮಾನಗಳನ್ನು, ನೋವನ್ನು ಸಂಕಷ್ಟ ಗಳನ್ನು ಹೇಳಿಕೊಳ್ಳುತ್ತಾ, ಇದಕ್ಕೆಲ್ಲ ನಾನು ಹೇಗೆ ಹೊಣೆಗಾರಳಾಗುತ್ತೇನೆ?

ನಾನು ಸುಮ್ಮನೇ ಗಮನಿಸುತ್ತಿರುತ್ತೇನೆ. ಮುಖವನ್ನು ಮನಸಿನ ಕನ್ನಡಿ ಎನ್ನುತ್ತಾರೆ. ಮನೆಯ ಹೊಸ್ತಿಲು ದಾಟಿ ರಸ್ತೆಗೆ ಕಾಲಿಡುತ್ತಿದ್ದಂತೆಯೇ ಅದೆಷ್ಟೊಂದು ಪರಿಚಿತ, ಅಪರಿಚಿತ ಮುಖಗಳು ಎದುರಾಗುತ್ತಲೇ ಇರುತ್ತವೆ. ಎಳೆಯ ಮುಖಗಳು, ಬಲಿತ ಮುಖಗಳು, ವೃದ್ಧ ಮುಖಗಳು, ಆರೋಗ್ಯ ವಂತ ಮುಖಗಳು, ನೋಡಿದರೆ ಮತ್ತೊಮ್ಮೆ ತಿರುಗಿ ನೋಡಬೇಕೆನಿಸುವಂಥ ಲಕ್ಷಣವಾದ ಮುಖಗಳು. ಅಲಂಕಾರದ ಮುಖಗಳು, ವಿಕಾರ ಮುಖಗಳು, ಆಕರ್ಷಕ ಮುಖಗಳು, ಅಹಂಕಾರದ ಮುಖಗಳು, ಅಧಿಕಾರಯುತ ಮುಖಗಳು, ದೇವಕಳೆಯ ಮುಖಗಳು, ಸ್ನೇಹದ ಮುಖಗಳು, ಸೌಮ್ಯ ಮುಖಗಳು, ನೋವಿನ ಮುಖಗಳು, ದುಗುಡದ ಮುಖಗಳು, ಅನುಮಾನದ ಮುಖಗಳು, ಆಸೆಯ ಮುಖಗಳು, ಲಜ್ಜೆಯ ಮುಖಗಳು, ಅವಮಾನದ ಮುಖಗಳು, ನಂಬಿಕೆಯ ಮುಖಗಳು, ನಂಬಿದಂತೆ ನಟಿಸುವ ಮುಖಗಳು, ಪಂಡಿತ ಮುಖಗಳು, ಪಾಮರ ಮುಖಗಳು, ವ್ಯವಹಾರದ ಮುಖಗಳು, ಮುಗ್ಧ ಮುಖಗಳು, ಜಾಣ-ಜಾಣೆಯರ ಮುಖಗಳು, ಬೇಸರದ ಮುಖಗಳು, ಸಿಟ್ಟಿನ ಮುಖಗಳು, ಸೇಡಿನ ಮುಖಗಳು, ನಗು ಮುಖಗಳು, ಅಂತಃಕರಣದ ಮುಖಗಳು, ಹಾಸ್ಯದ ಮುಖಗಳು, ಗಂಭೀರ ಮುಖಗಳು, ಹುಚ್ಚು ಮನಸಿನ ಹತ್ತು ಮುಖಗಳು, ಚಿಂತಾಮಣಿಯಲ್ಲಿ ಕಂಡ ಮುಖ, ಸಂತೆಯಲ್ಲಿ ಕಂಡ ಸೋದರಮಾವನ ಮುಖ… ಸಾಲದೆಂಬಂತೆ ನವಯುಗಕ್ಕೆ ಕಳಸವಿಟ್ಟಂತೆ ಮುಖಪುಸ್ತಕದಲ್ಲಿನ ಥರಾವರಿ ಮುಖಗಳು.

ಕೆಲವು ಯಾವ ಪ್ರತಿಕ್ರಿಯೆಯೂ ಇಲ್ಲದೆ ಸರಿದು ಹೋದರೆ, ಕೆಲವು ಮುಗುಳ್ನಕ್ಕು ಮುಂದೆ ಸಾಗುತ್ತವೆ. ಕೆಲವು ಮಾತು ಬೆಳೆಸುತ್ತ ಜೊತೆಯಾದರೆ, ಕೆಲವು ಅನುವು-ಆಪತ್ತಿಗೆ ಆಸರೆಯಾಗುತ್ತಾ ನೆರಳಂತೆ ಸಾಗಿ ಬರುತ್ತವೆ. ಇಷ್ಟೊಂದು ಮುಖಗಳ ನಡುವೆ ನಮಗೆ ಹೊಂದುವಂಥ ಮುಖವನ್ನು ಆರಿಸಿ ಕೊಳ್ಳುವುದೇ ಬಹುದೊಡ್ಡ ಸವಾಲು. ಹಣ ಗಳಿಸಲೆಂದೇ ಹಗಲೂ ರಾತ್ರಿ ದುಡಿಯುತ್ತೇವೆ. ಬಂದ ಹಣವನ್ನು ಉಳಿಸಿ ಬೆಳೆಸಿ ಲಾಭ ಪಡೆಯಲು ಚಿನ್ನ, ಭೂಮಿ, ವ್ಯಾಪಾರ, ವ್ಯವಹಾರಗಳೆಂಬ ನೂರಾರು ಮಾರ್ಗಗಳಲ್ಲಿ ಹೂಡಿಕೆ ಮಾಡುವು ದನ್ನು ಕಂಡುಕೊಂಡಿದ್ದೇವೆ.

ಆದರೆ ನೆಮ್ಮದಿಯ ಬದುಕಿಗೆ ಬೇಕಾದ ಸ್ನೇಹ, ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು invest ಮಾಡುವುದರ ಕುರಿತು ಯಾರೂ ಯೋಚಿಸುವುದೇ ಇಲ್ಲ. ಹೊಸ ಪರಿಚಯವಾದ ಕೂಡಲೇ ಅವರಿಂದ ನಮಗೇನೇನು ಲಾಭ? ಅವರನ್ನು ಹೇಗೆ ಬಳಸಿಕೊಳ್ಳಬಹುದು? ಎಂಬುದರ ಸುತ್ತಲೇ ಆಲೋಚಿಸು ತ್ತಿರುತ್ತೇವೆ. ಇದರಿಂದಾಗಿ ನಾವೆಲ್ಲ ರೂ ಹೆಚ್ಚೆಚ್ಚು materialistic ಗಳಾಗಿ ಪರಿವರ್ತಿತರಾಗುತ್ತಾ ನಾವೂ ಸಹ ಭಾವರಹಿತವಾದ material ಗಳೇ ಆಗಿಹೋಗುತ್ತೇ ವೇನೋ ಅನ್ನುವ ಆತಂಕ ನನ್ನನ್ನು ಸದಾ ಕಾಡುತ್ತದೆ. But still I believe in myself. ಡೈನೋಸಾರ್‌ಗಳ ನಡುವೆ ಪುಟ್ಟ ಅಳಿಲಿನಂತೆ ನನ್ನ ದಾರಿಯಲ್ಲಿ ನಡೆಯುವುದು ರೂಢಿಸಿಕೊಂಡಿದ್ದೇನೆ. I am happy.

ಯಾರದ್ದೂ ಒತ್ತಡ-ಹೇರಿಕೆ-ಬೆದರಿಕೆಯಿಲ್ಲದೆ, ಪ್ರe ಪೂರ್ವಕವಾಗಿಯೇ ನನ್ನ ಬದುಕಿನಲ್ಲಿ ನನ್ನ ಹಾದಿಯನ್ನು ಸ್ವಪ್ರೇರಣೆಯಿಂದ ನಾನಾಗೇ ಆಯ್ಕೆ ಮಾಡಿಕೊಂಡೆ. ಇದರಿಂದಾಗಿ ಬದುಕಿನ ನಾನಾ ಮುಖಗಳ ಪರಿಚಯವಾಯ್ತು. ಎಂಥಾ ಆತ್ಮೀಯ ಒಡನಾಟದಲ್ಲೂ ಕೆಲವು ಅಭಿಪ್ರಾಯ ಭೇದಗಳು, ನಿಷ್ಠುರ ಮಾತುಗಳು, ವೈಷಮ್ಯಗಳು ಎದುರಾಗಿ ಮಾತಿನ ಚಕಮಕಿಗಳುಂಟಾಗುತ್ತವೆ. ಆದರೆ ಅದು ಆ ಕ್ಷಣದಲ್ಲಿ ಪರಿಸ್ಥಿತಿಗನುಗುಣವಾಗಿ ಉದ್ಭವಿಸಿದಂ
ಥವುಗಳಾಗಿರುತ್ತವೆಯೇ ಹೊರತು ಯಾವುದೇ ಪೂರ್ವ ನಿರ್ಧಾರದಿಂದಲ್ಲ ಎಂಬ ತಿಳಿವಳಿಕೆ ಎಷ್ಟು ಜನರಿಗಿರುತ್ತದೆ? ಕ್ಷುಲ್ಲಕ ಮಾತಿನಿಂದಾಗಿ ಅದಕ್ಕಿಂತ ಬೆಲೆ ಬಾಳುವಂಥ ಸಂಬಂಧವನ್ನು ಕಳೆದುಕೊಂಡು ಜೀವನಪೂರ್ತಿ ದ್ವೇಷ- ಅಸೂಯೆಯಿಂದ ಬದುಕುತ್ತಾರೆ.

ಅದಕ್ಕಿಂತ ಉತ್ತಮ ಮಾರ್ಗವೆಂದರೆ ಅದನ್ನು ಕ್ಷಮಿಸಿ, ಮರೆತು ಮುಂದೆ ನಡೆಯುವುದು ಎನ್ನುವುದು ನನ್ನ ಅಭಿಪ್ರಾಯ. ನನ್ನ ಅಂಕಣ ವಿಶ್ವವಾಣಿ ಪತ್ರಿಕೆಯಲ್ಲಿ ಆರಂಭವಾದಾಗ ಸಾಕಷ್ಟು ಜನ ಇದರ ಬಗ್ಗೆ ನನ್ನಲ್ಲಿ ಬೇಸರ ವ್ಯಕ್ತ ಪಡಿಸಿದರು. ರವಿ ಬೆಳಗೆರೆಯವರಿದ್ದಾಗ ಅವರಿಬ್ಬರ ನಡುವೆ ಅದೆಂಥಾ ವೈಶಮ್ಯವಿತ್ತು? ಅವರು ಕಾಲವಾದ ನಂತರ ನೀವು ಅವರ ಪತ್ರಿಕೆಗೇ ಬರೆಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಅನ್ನುವ ಮಾತುಗಳಿಗೆ ನನ್ನದು ಒಂದೇ ಉತ್ತರ: ‘ನೀವು ಅವರ ನಡುವಿದ್ದ ವೈಷಮ್ಯವನ್ನಷ್ಟೇ ಕೇಳಿದ್ದೀರಿ, ನೋಡಿದ್ದೀರಿ.

ನಾನು ಅವರ ನಡುವೆಯಿದ್ದ ಅದ್ಭುತವಾದ ಗೆಳೆತ ವನ್ನೂ ನೋಡಿದ್ದೇನೆ. ನಮ್ಮ ಮುಂದಿನ ಪೀಳಿಗೆಯಾದರೂ ವೈಷಮ್ಯವನ್ನು ಮರೆತು ಮತ್ತದೇ ಗೆಳೆತನದ ಸವಿಯನ್ನು ಮೆಲುಕು ಹಾಕುವಂತಾಗಲಿ ಎಂಬ ಉದ್ದೇಶದ ಜತೆಗೆ ಅವರ ನಡುವೆಯಿದ್ದ ಸ್ನೇಹದ ಗೌರವಸೂಚಕವಾಗಿ ಬರೆಯುತ್ತಿದ್ದೇನೆ” ಎಂದು. ವೈಯಕ್ತಿಕವಾಗಿ ನನಗೆ ಯಾರ ಮೇಲೂ ದ್ವೇಷವಾಗಲೀ, ಅಸೂಯೆಯಾಗಲೀ ಖಂಡಿತಾ ಇಲ್ಲ. ಈ ಸ್ವತಂತ್ರ ಭಾರತದಲ್ಲಿ ಅವರವರ ನಂಬಿಕೆ ಗಳಿಗನುಸಾರವಾಗಿ ಅವರವರ ನಡೆಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅದರ ಫಲಾಫಲಗಳಿಗೂ ಸಂಪೂರ್ಣ ಅವರೇ ಹೊಣೆಗಾರರು.

ಅದನ್ನು ಮುಕ್ತ ಮನಸಿನಿಂದ ನಾನು ಗೌರವಿಸುತ್ತೇನೆ. ನನ್ನಿಂದ ಯಾರಿಗೂ ತೊಂದರೆಯಾಗ ಬಾರದೆಂಬ ಉದ್ದೇಶದಿಂದ ಆದಷ್ಟೂ ಜಾಗ್ರತೆ ವಹಿಸು ತ್ತೇನೆ. ಆದರೆ ಈ ಸಾಮಾಜಿಕ ವ್ಯವಸ್ಥೆಯಲ್ಲಿ ನನಗೆ ನನ್ನದೇ ಆದ ಹಲವು ಸವಾಲುಗಳಿವೆ. ಅದೆಲ್ಲವನ್ನೂ ಸಮರ್ಥವಾಗಿ ಎದುರಿಸಿ  ಮಂಜಸ ವಾದ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿದ್ದೇನೆ ಅಷ್ಟೆ. ಕುಟುಂಬ ವ್ಯವಸ್ಥೆ ಎನ್ನುವುದು ಸಾಮಾಜಿಕ ವ್ಯವಸ್ಥೆಯ ಒಂದು ಭಾಗ. ಸಮಾಜದ ಸ್ವಾಸ್ಥ್ಯ ಕೆಡದಂತೆ ಅದನ್ನು ಸುರಕ್ಷಿತವಾಗಿಡಲು ನಮ್ಮದೇ ಆದ ಕೆಲವು ಕಟ್ಟುಪಾಡುಗಳನ್ನು ವಿಧಿಸಿಕೊಂಡು ಧರ್ಮ, ಸಂಸ್ಕಾರ, ಆಚರಣೆಗಳನ್ನು ರೂಢಿಸಿ ಕೊಂಡಿದ್ದೇವೆ. ನಮ್ಮ ದೈನಂದಿನ ಬದುಕಿನಲ್ಲಿ ನಾವು ರೂಢಿಸಿಕೊಂಡ ನಂಬಿಕೆಗಳು, ಆಚರಣೆಗಳು ಮೌಢ್ಯದಿಂದ ಕೂಡಿ ಮೂಢನಂಬಿಕೆಗಳಾಗಿ ಹೇಗೆ ಕೆಲವರಿಗೆ ಅನಿವಾರ್ಯವಾಗಿ ಅನುಭವಿಸುವ ಸಂಕಟವಾಗಿ ಪರಿಣಮಿಸುತ್ತದೆ ಎನ್ನುತ್ತಾ ಅವಲೋಕಿಸುವಾಗ ತಮ್ಮ ನೇರವಂತಿಕೆಯ ಮಾತಿನ ಬರೆದಂತೆ ಬದುಕಿದ ನಿರ್ಬಿಢೆಯ ಸೃಜನಶೀಲ ಬರಹಗಾರರಾದ ಬೀಚಿಯವರ ಬದುಕಿನಲ್ಲಿ ಎದುರಾದ ಒಂದು ಸಂಕಷ್ಟದ ಘಟನೆ ನೆನಪಿಗೆ ಬರುತ್ತಿದೆ.

ತಮ್ಮ ಹಿರಿಮಗನಾದ ಟ್ರಿಮ್ಮಿಗೆ ವಧು ನೋಡಿ, ಎಲ್ಲರಿಗೂ ಮೆಚ್ಚುಗೆಯಾಗಿ ಸಂತೋಷದಿಂದ ಮದುವೆಯನ್ನು ನಿಶ್ಚಯಿಸಿ ಬಂದು ಅದರ ತಯಾರಿ ಯಲ್ಲಿ ಒಂದು ಸೋಮವಾರ ಲಗ್ನ ಪತ್ರಿಕೆ ಬರೆಯುತ್ತಾರೆ. ಎರಡನೆಯ ಸೋಮವಾರದಂದು ತಮ್ಮ ಅತ್ಯಂತ ಪ್ರೀತಿಯ ಕಿರಿಮಗನಾದ ಪಾಪಣ್ಣಿಗೆ ಟೈ-ಯ್ಡ ಆಗಿ ಅದು ದಿನದಿನಕ್ಕೂ ಹೆಚ್ಚಾಗಿ ೧೯೬೭ ನವೆಂಬರ್ ೬ರ ಮೂರನೆಯ ಸೋಮವಾರದಂದು ಕೊನೆಯುಸಿರೆಳೆಯುತ್ತಾರೆ. ಯೌವ್ವನದ ಹೊಸ್ತಿ ಲಲ್ಲಿ ಆರೋಗ್ಯದಿಂದ ಜೀಕುತ್ತ, ಕೆ.ವಿ ಅಯ್ಯರ್ ಗರಡಿಯಲ್ಲಿ ಪಳಗಿದ್ದ ಉಕ್ಕಿನ ಮೈಯ ಒಡೆಯನಾಗಿದ್ದವನು ಬಿಕಾಂ ಮುಗಿಸಿ ಕಾನ್ವೋ ಕೇಷನ್ನಿಗೆ ಹೋಗಲು ತಯಾರಿ ನಡೆಸುತ್ತಿರುವಾಗ ಸಾವೆಂಬುದು ಸದ್ದಿಲ್ಲದೆ ಹದ್ದಿನಂತೆ ಬಂದು ಹಾರಿಸಿಕೊಂಡು ಹೋದಾಗ ಮುಗಿಲೇ ಹರಿದು ಬಿದ್ದು ಎಡೆ ಕಾರ್ಗತ್ತಲು!

ಕೇವಲ ಮೂರೇ ವಾರಗಳಲ್ಲಿ ನಿರೀಕ್ಷಿಸಿರದ ಅನಿರೀಕ್ಷಿತ ಆಘಾತದಿಂದ ಮನೆ- ಮನಸೆಲ್ಲ ಅಲ ಕಲವಾಗುತ್ತದೆ. ವರ್ಷಗಟ್ಟಲೆ ನಕ್ಕು ನಗಿಸಿದ ಹಾಸ್ಯ ಬ್ರಹ್ಮ ನಿಗೆ ತೀರದ ವಿಷಾದ! ಅದು ನನ್ನ ಜೀವನದ ಅತ್ಯಂತ ದುರ್ದಿನ! ಎಂದು ತಮ್ಮ ಆತ್ಮಚರಿತ್ರೆಯಾದ ‘ನನ್ನ ಭಯಾಗ್ರಫಿ’ಯಲ್ಲಿ ಬರೆದುಕೊಳ್ಳುತ್ತಾರೆ. ಆದರೆ ಅದರ ಅಪವಾದದ ಘೋರ ಪರಿಣಾಮ ಎದುರಿಸಬೇಕಾಗಿ ಬಂದದ್ದು ಮಾತ್ರ ಸೊಸೆಯಾಗಿ ಬರಬೇಕಿದ್ದ ಭಾರತಮ್ಮ!(ಅವರ ತಾಯಿಯ ಹೆಸರೂ
ಭಾರತಮ್ಮನೇ.) ಎಂಥಾ ಅಪಶಕುನ! ಸೊಸೆಯ ಕಾಲ್ಗುಣ ಸರಿಯಿಲ್ಲ. ಅದರಿಂದಾಗಿಯೇ ಎದೆಯೆತ್ತರ ಬೆಳೆದಿದ್ದ ಆರೋಗ್ಯವಂತ ಮಗ ಇಲ್ಲವಾದ. ಯಾವ ಕಾರಣಕ್ಕೂ ಈ ಹೆಣ್ಣನ್ನು ಮನೆಗೆ ತರುವುದು ಬೇಡವೇ ಬೇಡ ಎನ್ನುವುದೇ ಬಂಧುವರ್ಗದವರೆಲ್ಲರ ಖಡಾಖಂಡಿತದ ಮಾತಾಗಿದ್ದಾಗ, ನಿಶ್ಚಯ ವಾಗಿ ಮದುವೆಯಂತೂ ಮುರಿಯಿತು ಎಂದೇ ಜನರೆ ನಿಶ್ಚಯಿಸಿದ್ದರು.

ಆಂಥಾ ನೋವಿನ -ವಿಷಾದದ ನಡುವೆಯೂ ‘ಆ ಹುಡುಗಿ ನನ್ನ ಕಿರಿ ಮಗನನ್ನು ಕೊಂದಳೇ? ಇವನು ಸತ್ತರೆ ಅವಳದೇನು ತಪ್ಪು? ಆ ಹುಡುಗಿಯ ತಲೆಯ ಮೇಲೆ ಗೂಬೆಯನ್ನು ಕೂಡಿಸಿ ಬಿಡುವುದೇ? ಅದು ನನ್ನ ಮಗಳಾಗಿದ್ದರೆ? ಎಂದು ಹೇಳಿ ಅದೇ ಹುಡುಗಿಯನ್ನು ಎಲ್ಲರ ವಿರೋಧದ ನಡುವೆಯೂ ಆ ನೋವಿನ ತಮ್ಮ ಮನೆತುಂಬಿಸಿಕೊಳ್ಳುತ್ತಾರೆ. ಇದನ್ನು ಕಂಡ ಕೆಲವರು ಮಹಾನುಭಾವನೆಂದರು ಕೆಲವರು ಮೂರ್ಖನೆಂದರು. ಅದು ಅವರವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯೆಂದು ನಿರ್ಲಕ್ಷಿಸಿ ತಮ್ಮ ನಿರ್ಧಾರವನ್ನು ಅಚಲಗೊಳಿಸಿದರು. ಮುಂದೆ ಅವರು ಸುಖವಾಗಿ ಸಂಸಾರ ಮಾಡಿ ಅದರಿಂದ ಎರಡು ಮಕ್ಕಳಾಗಿ ತುಂಬು ಕುಟುಂಬವಾಗಿ ಬೆಳೆದದ್ದು ಈಗ ಇತಿಹಾಸ. ಆದರೆ ಅಂದು ಅವರಾಡಿದ ಪ್ರಜ್ಞಾವಂತಿಕೆಯ ಮಾತುಗಳು, ತೆಗೆದುಕೊಂಡ ನಿರ್ಧಾರ ಒಂದು ಹೆಣ್ಣನ್ನುಅಪವಾದ ಮುಕ್ತಳನ್ನಾಗಿ ಮಾಡುವ ಮೂಲಕ ಹೇಗೆ ಒಂದು ಮೂಢನಂಬಿಕೆಯನ್ನು ತೊಡೆದುಹಾಕಿದರು ಅನ್ನುವುದು ನೆನೆದಾಗ ಅವರೆಡೆಗೆ ಗೌರವ ತುಂಬಿ ಬರುತ್ತದೆ.

ಹೀಗೆ ನಾವು ತಿಳಿದೋ ತಿಳಿಯದೆಯೋ ನಮ್ಮ ಅನೇಕ ನಂಬಿಕೆಗಳ ನಡುವೆ ಸಾಕಷ್ಟು ಮೂಢನಂಬಿಕೆಗಳನ್ನೂ ಪಾಲಿಸಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ಗೆಳತಿಯೊಬ್ಬರು ಬಹಳ ನೋವಿನಿಂದ ವೈಧವ್ಯದಿಂದಾಗಿ ತಾವು ಎದುರಿಸುತ್ತಿರುವ ಅವಮಾನಗಳನ್ನು, ನೋವನ್ನು ಸಂಕಷ್ಟಗಳನ್ನು
ಹೇಳಿಕೊಳ್ಳುತ್ತಾ, ಇದಕ್ಕೆಲ್ಲ ನಾನು ಹೇಗೆ ಹೊಣೆಗಾರಳಾಗುತ್ತೇನೆ? ಎಲ್ಲ ಪ್ರತಿಭೆಯಿದ್ದರೂ ನಾನೇಕೆ ಎಲ್ಲ ಮಂಗಳಕಾರ್ಯದಿಂದ ಹಿಂದುಳಿಯಬೇಕು? ಮನೆಗೆ ಬಂದವರು ಅಕ್ಷತೆ ಕೊಟ್ಟು ನೀನೂ ಬಾ ಎಂದು ಒಂದು ಮಾತು ಕರೆಯುವುದಿಲ್ಲ ಎಂದು ನೋವಿನಲ್ಲಿ ನುಡಿದಾಗ… ಹೇಳಿದ್ದಿಷ್ಟೆ.

ಯಾರೋ ಬಂದು ನಮ್ಮನ್ನು ಉದ್ಧರಿಸಲಿ ಎಂದು ಕಾಯುತ್ತಾ ಕೂರುವುದನ್ನು ಮೊದಲು ಮನಸಿನಿಂದ ತೆಗೆದು ಹಾಕಿ. ಅದೆಲ್ಲ ಅವಮಾನಗಳನ್ನೂ ಮೀರಿ ನಿಲ್ಲುವಂತೆ ನಿಮ್ಮ ಪ್ರತಿಭೆ ಪ್ರಕಾಶಗೊಳ್ಳುವ ಕಡೆಗಿರಲಿ ನಿಮ್ಮ ಗಮ್ಯವೆಲ್ಲ. ಆಗ ಇದೆಲ್ಲ ವಿಷಯಗಳೂ ಕ್ಷುಲ್ಲಕವೆನ್ನಿಸುತ್ತದೆ ಎಂದು ಹೇಳಿದೆ. ಬೇಡದ ವಿಷಯಗಳಿಗೆ ಒತ್ತು ಕೊಟ್ಟು ಮನಸನ್ನು ಹಾಳು ಮಾಡಿಕೊಳ್ಳುವುದರ ಬದಲಿಗೆ ಆಗಬೇಕಾಗಿರುವ ಕೆಲಸಗಳೆಡೆಗೆ ಗಮನ ಕೊಡುವುದನ್ನು
ರೂಢಿಸಿಕೊಂಡರೆ ಅರ್ಧ ಸಮಸ್ಯೆ ಬಗೆಹರಿದಂತೆಯೇ.

ನಮ್ಮ ನಡೆ, ನುಡಿಗಳೆಲ್ಲವನ್ನೂ ಮೇಲೊಬ್ಬ ನಿರಂತರ ಗಮನಿಸುತ್ತಲೇ ಇರುತ್ತಾನೆ. ಸತ್ಯ ಹೊಸ್ತಿಲು ದಾಟುವಷ್ಟರಲ್ಲಿ ಸುಳ್ಳು ಊರು ಸುತ್ತಿ ಬಂದರೂ ಕೊನೆಗೆ ಉಳಿಯುವುದು ಸತ್ಯವೇ ಹೊರತು ಸುಳ್ಳಲ್ಲ! ಆಡುವವರು ಆಡುತ್ತಲೇ ಇರಲಿ. ನಮ್ಮ ಕೆಲಸವನ್ನು ಶ್ರದ್ಧೆಯಿಂದ ಮುಂದುವರೆಸೋಣ. ಯಾವುದೇ ವಿಷಯ-ವಿಚಾರವನ್ನು ನಂಬುವ ಮೊದಲು ಅದರ ಹಿಂದಿನ ಕಾರಣವನ್ನು ವೈeನಿಕವಾಗಿ ಅರಿಯುವ ಮನಸನ್ನು ಬೆಳೆಸಿಕೊಳ್ಳೋಣ.
ನಂಬಿಕೆಗಳಿರಲಿ ಆದರೆ ಮೂಢನಂಬಿಕೆಗಳಿಂದ ಮುಕ್ತರಾಗೋಣ ಅಲ್ಲವೇ?