Wednesday, 11th December 2024

ಅಮೇಥಿ ಕಥೆಗೆ ತಿರುವು ನೀಡಿದ ರಾಬರ್ಟ್ ವಾದ್ರಾ

ಯುದ್ದಕಾಂಡ

ಬರ್ಖಾ ದತ್

ಲೋಕಸಭಾ ಚುನಾವಣೆಯ ಈ ಪರ್ವಕಾಲದಲ್ಲಿ, ಒಂದಿಡೀ ದೇಶವೇ ಕುಟುಂಬ ರಾಜಕಾರಣದ ತಪ್ಪು-ಒಪ್ಪುಗಳ ಕುರಿತು ಮಾತಾಡುತ್ತಿರುವಾಗಲೇ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದ ವತಿಯಿಂದ ಸ್ವಾರಸ್ಯಕರ ಸುದ್ದಿಯೊಂದು ಬಂದಿದೆ.

ಕಾಂಗ್ರೆಸ್  ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ಹಾಗೂ ಉದ್ಯಮಿ ರಾಬರ್ಟ್ ವಾದ್ರಾ ಅವರೇ ಈ ಸುದ್ದಿಯ ಕೇಂದ್ರಬಿಂದು.
ಅಮೇಥಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವರು ಸ್ವತಃ ಮುಂದೆ ಬಂದಿರುವುದು ಏನನ್ನು ಸೂಚಿಸುತ್ತದೆ ಅಥವಾ ಇಂಥದೊಂದು ಬೆಳವಣಿಗೆಯಿಂದ ನಾವು ಏನನ್ನು ಗ್ರಹಿಸಬಹುದು? ಏಕೆಂದರೆ, ‘ಭವಿಷ್ಯದಲ್ಲಿ ಇಂಥ ಬೆಳವಣಿಗೆಯಾಗ ಬಹುದು’ ಎಂಬ ಧಾಟಿಯಲ್ಲಿ ಹಿಂದೆಲ್ಲಾ ಹೊಮ್ಮುತ್ತಿದ್ದ ಒಂದು ಸಾಮಾನ್ಯ ಹೇಳಿಕೆಯು ಈಗ ಸಾಕಾರಗೊಳ್ಳುವ ಘಟ್ಟ ಸನ್ನಿಹಿತವಾದಂತಿದೆ. ಈ ಲೋಕಸಮರದಲ್ಲಿ ಅಮೇಥಿ ಕ್ಷೇತ್ರವು ಒಂದು ಆಯಕಟ್ಟಿನ ಅಖಾಡವಾಗಿ ಪರಿಣಮಿಸುವ ಸಾಧ್ಯತೆ ಗಳು ತೋರುತ್ತಿವೆ.

ಸ್ವತಃ ವಾದ್ರಾ ಅವರೇ ಸುದ್ದಿಸಂಸ್ಥೆಯೊಂದರ ಜತೆ ಮಾತಾಡಿರುವಂತೆ, ಚುನಾವಣಾ ಕಣಕ್ಕೆ ಧುಮುಕುವಂತೆ ಅವರನ್ನು
ಇನ್ನಿಲ್ಲದಂತೆ ಆಗ್ರಹಿಸಲಾಗುತ್ತಿದೆಯಂತೆ; ದೇಶದ ಮೂಲೆಮೂಲೆಯ ‘ಅಭಿಮಾನಿ ದೇವರುಗಳು’ ಇಂಥ ಆಗ್ರಹವನ್ನು
ಒಳಗೊಂಡ ಭಿತ್ತಿಪತ್ರಗಳನ್ನು ಪ್ರದರ್ಶಿಸುತ್ತಿದ್ದಾರಂತೆ. ಕೊಂಚಮಟ್ಟಿಗೆ ರಂಜನೀಯವಾಗಿ ಕಾಣುವ ಈ ಬೆಳವಣಿಗೆಯು ಜನರ ಮತ್ತು ರಾಜಕೀಯ ಎದುರಾಳಿಗಳ ಗಮನವನ್ನು ಬೇರೆಡೆಗೆ ಸೆಳೆಯುವ ಕಸರತ್ತು ಮಾತ್ರವೇ ಅಥವಾ ನಮ್ಮ ಕಣ್ಣಿಗೆ ಗೋಚರಿಸದ ಹೆಚ್ಚಿನ ಸಂಗತಿಯೂ ಇದರ ಹಿಂದೆ ಅಡಗಿದೆಯೇ? ಒಂದು ಕಾಲಕ್ಕೆ ಕಾಂಗ್ರೆಸ್ ಪಕ್ಷದ ಒಡನಾಡಿಯಾಗಿದ್ದು ಪ್ರಸ್ತುತ ಬಿಜೆಪಿ ಯೊಂದಿಗೆ ಗುರುತಿಸಿಕೊಂಡು ರಾಯ್ ಬರೇಲಿ ಸಾದರ್ ವಿಧಾನಸಭಾ ಕ್ಷೇತ್ರದ ಶಾಸಕಿಯೂ ಆಗಿರುವ ಅದಿತಿ ಸಿಂಗ್ ಈ ಕುರಿತು ಮಾತನಾಡುತ್ತಾ, ‘ವೈಯಕ್ತಿಕ ನೆಲೆಯಲ್ಲಿ ಹೇಳುವುದಾದರೆ ನನಗಿದು ತಮಾಷೆಯ ವಿಷಯವಾಗಿಯೂ, ವೃತ್ತಿಪರ ನೆಲೆಯಲ್ಲಿ ಗೊಂದಲಮಯವಾಗಿಯೂ ಕಂಡಿದೆ’ ಎಂದು ಹೇಳಿದ್ದು ಇಲ್ಲಿ ಉಲ್ಲೇಖನೀಯ. ಕಾರಣ, ಅವರ ಈ ಮಾತು ಹಲವು ಸೂಚ್ಯರ್ಥ ಗಳನ್ನು ಧ್ವನಿಸಬಲ್ಲದು.

ಅದೇನೇ ಇರಲಿ. ರಾಬರ್ಟ್ ವಾದ್ರಾ ಅವರು ಚುನಾವಣಾ ರಾಜಕಾರಣದೆಡೆಗಿನ ತಮ್ಮ ಹಪಹಪಿಯನ್ನು ವ್ಯಕ್ತಪಡಿಸಿದ್ದು ಇದೇ ಮೊದಲಲ್ಲ. ಸರಿಸುಮಾರು ೨೦೧೨ರ ಕಾಲಘಟ್ಟದಲ್ಲಿ ಮತ್ತು ಅವರ ಪತ್ನಿ ಪ್ರಿಯಾಂಕಾ ಅವರು ಪಕ್ಷದ ಕಾರ್ಯ ನಿರ್ವಹಣೆ ಯಲ್ಲಿ ಔಪಚಾರಿಕವಾಗಿ ತೊಡಗಿಸಿಕೊಳ್ಳುವುದಕ್ಕೂ ಸಾಕಷ್ಟು ಮೊದಲೇ, ವಾದ್ರಾರನ್ನು ನಾನು ಸಂದರ್ಶಿಸಿದ್ದೆ. ಆಗ ಅವರು, ‘ಒಂದು ವೇಳೆ ನಾನು ರಾಜಕೀಯವನ್ನು ಪ್ರವೇಶಿಸಿದ್ದೇ ಆದಲ್ಲಿ, ನನ್ನ ಪಾಲಿಗೆ ಅದೊಂದು ಪೂರ್ಣಾವಧಿಯ ವೃತ್ತಿಜೀವನ ವಾಗಿರುತ್ತದೆ’ ಎಂದು ಹೇಳಿದ್ದುಂಟು.

ಮಾತ್ರವಲ್ಲದೆ, ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳಲ್ಲಿ ತಾವು ಇದೇ ಉದ್ದೇಶವಿಟ್ಟುಕೊಂಡು ಸಮಯ ವನ್ನು ವಿನಿಯೋಗಿಸಿದ್ದನ್ನು ಅವರು ಈ ಸಂದರ್ಶನದಲ್ಲಿ ಉಲ್ಲೇಖಿಸಿದ್ದುಂಟು. ಆಗಲೂ, ಅಂದರೆ ಒಂದು ದಶಕಕ್ಕೂ ಹಿಂದೆಯೇ, ತಾವು ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳಬೇಕೆಂದು ಜನರು ಬಯಸುತ್ತಿರುವುದು ವಾದ್ರಾರ ಅರಿವಿಗೆ ಬಂದಿತ್ತಂತೆ. ಹಾಗೆ ನೋಡಿದರೆ, ಈ ದೇಶದ ಪ್ರತಿಯೊಬ್ಬ ಅರ್ಹ ನಾಗರಿಕನೂ ಚುನಾವಣೆಯಲ್ಲಿ ಸ್ಪರ್ಧಿಸಲು ಸ್ವತಂತ್ರ ನಾಗಿದ್ದಾನೆ.

ಇದಕ್ಕೆ ವಾದ್ರಾ ಅವರೂ ಹೊರತಲ್ಲ. ಆದರೆ, ಇಂಥದೊಂದು ಹೇಳಿಕೆ ನೀಡಲು ಅವರು ಆಯ್ಕೆ ಮಾಡಿಕೊಂಡಿರುವ ಸಮಯವು ಹಲವರ ಹುಬ್ಬೇರಿಸಿದೆ ಎನ್ನಬೇಕು. ಆದರಿಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ನೆಹರು-ಗಾಂಧಿ ಕುಟುಂಬದ ಪ್ರತಿಯೊಬ್ಬ ಸದಸ್ಯರ ‘ಸಂಭಾವ್ಯ ಪ್ರಧಾನಮಂತ್ರಿಗಿರಿ’ಗೆ ಸಂಬಂಧಿಸಿದಂತೆ ಇದುವರೆಗೂ ‘ಉಡಾವಣಾ ಅಟ್ಟಣಿಗೆ’ಯಾಗಿಯೇ ಗುರುತಿಸಿ ಕೊಂಡಿರುವ ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳೆರಡಕ್ಕೂ ಕಾಂಗ್ರೆಸ್ ಪಕ್ಷವು ಅಭ್ಯರ್ಥಿಗಳನ್ನು ಇನ್ನೂ ಹೆಸರಿಸಿಲ್ಲ.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿಯ ಸ್ಮೃತಿ ಇರಾನಿಯವರು ಅಮೇಥಿಯಲ್ಲಿ ಠಿಕಾಣಿ ಹೂಡಿದ್ದಾರೆ ಮತ್ತು ತಮ್ಮೊಂದಿನ
ಸೆಣಸಾಟಕ್ಕೆ ರಾಹುಲ್ ಗಾಂಧಿಯವರಿಗೆ ಹೆಚ್ಚುಕಮ್ಮಿ ಪ್ರತಿದಿನವೂ ಪಂಥಾಹ್ವಾನವನ್ನು ನೀಡುತ್ತಿದ್ದಾರೆ. ಕೇರಳದ ವಯನಾಡ್‌ ನಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ರಾಹುಲ್ ಗಾಂಧಿಯವರೆಡೆಗೆ ಸ್ಮೃತಿ ಟೀಕೆಯ ಕೂರಂಬುಗಳನ್ನು ಬಿಟ್ಟಿದ್ದು ಇದಕ್ಕೊಂದು ಸಾಕ್ಷಿ.

ಅಮೇಥಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಲ್ಲಿ ವಿಳಂಬಿಸುತ್ತಿರುವುದು ಕಾಂಗ್ರೆಸ್‌ನ ಕಾರ್ಯ ತಂತ್ರವೂ ಆಗಿದ್ದಿರಬಹುದು. ಕೇರಳದ ವಯನಾಡ್‌ನಲ್ಲಿ ಮತದಾನವು ಸಂಪನ್ನಗೊಳ್ಳುವವರೆಗೆ, ಉತ್ತರ ಪ್ರದೇಶದಲ್ಲಿನ ತನ್ನ ‘ಚುನಾವಣಾ ಕೈವಾಡ’ ಅಥವಾ ‘ವ್ಯೂಹಾತ್ಮಕ ಕಾರ್ಯತಂತ್ರ’ದ ಕುರಿತಾಗಿ ಬಹಿರಂಗಪಡಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗೆ ನೋಡಿದರೆ, ವಯನಾಡ್ ಮತ್ತು ಅಮೇಥಿ ಕ್ಷೇತ್ರಗಳಲ್ಲಿನ ಚುನಾವಣಾ ದಿನಾಂಕಗಳ ನಡುವೆ
ಸರಿಸುಮಾರು ಒಂದು ತಿಂಗಳ ಅಂತರವಿದೆ.

ಅಮೇಥಿ ಕ್ಷೇತ್ರದ ಕುರಿತಾಗಿ ಯಾವುದೇ ‘ಸಮಾನಾಂತರ’ ಮಾತುಗಳನ್ನಾಡುವ ಮೂಲಕ ವಯನಾಡ್ ಕ್ಷೇತ್ರದ ಮತದಾರರನ್ನು ಕೆರಳಿಸಬಾರದು/ಕಿರಿಕಿರಿಗೊಳಿಸಬಾರದು ಮತ್ತು ತನ್ಮೂಲಕ ಅಪಾಯಕ್ಕೆ ಸಿಕ್ಕಿಕೊಳ್ಳಬಾರದು ಎಂಬುದು ಕಾಂಗ್ರೆಸ್‌ನ ಚಿಂತನೆ ಯಾಗಿದ್ದಿರಬೇಕು. ಕೇರಳದಲ್ಲಿ ಎಡಪಕ್ಷಗಳ ಪಾರಮ್ಯ ಇರುವುದು ಗೊತ್ತಿರುವ ಸಂಗತಿಯೇ; ವಯನಾಡ್ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯವರ ವಿರುದ್ಧ ಆನಿ ರಾಜಾ ಎಂಬಾಕೆಯನ್ನು ಕಣಕ್ಕಿಳಿಸಿರುವ ಈ ಎಡಪಕ್ಷಗಳು, ‘ಹಿಂದಿ ಭಾಷಿಕರ ಹೃದಯ ಭಾಗವೆ ನಿಸಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ನೇರವಾಗಿ ಎದುರಿಸಲು ಕಾಂಗ್ರೆಸ್ ಹೆದರುತ್ತಿದೆ’ ಎಂಬುದಾಗಿ ಈಗಾಗಲೇ
ಕೈಪಕ್ಷ ವನ್ನು ಲೇವಡಿ ಮಾಡುತ್ತಿವೆ!

ಇಲ್ಲಿ ಇನ್ನೊಂದು ಗಮ್ಮತ್ತನ್ನೂ ನಿಮಗೆ ಹೇಳಬೇಕು- ಆನಿ ರಾಜಾ ಅವರು ತಮ್ಮ ಸ್ವಂತಬಲದ ಮೇಲೆ ದೀರ್ಘಕಾಲದಿಂದಲೂ ಸಕ್ರಿಯ ರಾಜಕಾರಣಿಯಾಗಿರುವುದರ ಜತೆಗೆ, ಭಾರತೀಯ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ನಾಯಕ ಡಿ.ರಾಜ ಅವರ ಪತ್ನಿಯೂ ಆಗಿದ್ದಾರೆ! ರಾಹುಲ್ ಗಾಂಧಿಯವರ ‘ಭಾರತ್ ಜೋಡೋ’ ಯಾತ್ರೆಯ ಮೊದಲ ಚರಣದ ಅಂತ್ಯದ ವೇಳೆ, ಹಿಮಾವೃತವಾದ ಕಾಶ್ಮೀರದಲ್ಲಿ ರಾಹುಲ್ ಗಾಂಧಿಯವರ ಪಕ್ಕದಲ್ಲಿ ನಿಂತು ಪೋಟೋಗಳಿಗೆ ಪೋಸು ನೀಡಿದ್ದು ಇದೇ ಡಿ.ರಾಜ ಅವರೇ ಎಂಬುದು ಪರಿಸ್ಥಿತಿಯ ವ್ಯಂಗ್ಯವಲ್ಲದೆ ಮತ್ತೇನು!

ವಯನಾಡ್‌ಗೆ ರಾಹುಲರ ಪ್ರವೇಶವಾಗುವುದರೊಂದಿಗೆ, ೨೦೧೯ರಲ್ಲಿ ಆ ಕ್ಷೇತ್ರದಲ್ಲಿ ಸಿಪಿಐನ ಮತಗಳ ಪಾಲು ಹತ್ತತ್ತಿರ ೧೫ ಅಂಕಗಳಿಗೆ ಕುಸಿದರೆ, ಕಾಂಗ್ರೆಸ್‌ನ ಮತಗಳ ಪಾಲು ಸುಮಾರು ಶೇ.೬೫ರಷ್ಟಕ್ಕೆ ಜಿಗಿಯಿತು. ಆದರೆ, ೨೦೨೪ರ ಪರಿಸ್ಥಿತಿ ಬೇರೆಯೇ ಇದೆ. ಈಗ ಎಡಪಕ್ಷಗಳು ತಮ್ಮ ಆಕ್ರಮಣಶೀಲತೆಗೆ ಮತ್ತಷ್ಟು ವೇಗ ಮತ್ತು ಹುರುಪನ್ನು ತುಂಬಿರುವುದರ ಜತೆಗೆ, ಕ್ಷೇತ್ರದಲ್ಲಿನ
ರಾಹುಲರ ‘ಅನುಪಸ್ಥಿತಿ’ಯನ್ನೇ ಕೇಂದ್ರವಾಗಿರಿಸಿಕೊಂಡು ತೀವ್ರಟೀಕೆಗೆ ಇಳಿದಿವೆ. ಹೀಗಾಗಿ ಕಾಂಗ್ರೆಸ್ ಪಕ್ಷವು ಪ್ರಾಯಶಃ ಯಾವುದೇ ದುಸ್ಸಾಹಸಕ್ಕೆ ಮುಂದಾಗಲು ಬಯಸುವುದಿಲ್ಲ.

ಹೀಗಾಗಿ, ಕೇರಳದಲ್ಲಿನ ಚುನಾವಣೆಯ ನಂತರವಷ್ಟೇ ಅಮೇಥಿ ಮತ್ತು ರಾಯ್‌ಬರೇಲಿ ಕುರಿತಾಗಿ ಅದು ಘೋಷಿಸಲಿದೆ ಎಂದು ನಿರೀಕ್ಷಿಸಬಹುದು. ಇಷ್ಟು ಹೇಳಿದ ಮಾತ್ರಕ್ಕೆ, ರಾಬರ್ಟ್ ವಾದ್ರಾ ಅವರ ಹೇಳಿಕೆಗಳನ್ನು ವಿವರಿಸಲು ನಮಗೆ ಪೂರಕ ಸುಳಿವುಗಳು
ಸಿಕ್ಕಿಬಿಟ್ಟಿವೆ ಎಂದೇನಲ್ಲ. ಅಮೇಥಿ ಕ್ಷೇತ್ರದ ಸಂಭವನೀಯ ಉಮೇದುವಾರಿಕೆಯ ಬಗ್ಗೆ ಅವರು ಸ್ವಯಂಪ್ರೇರಿತರಾಗಿ ಮಾತಾಡಿ ರುವುದರ ಹಿಂದೆ ಅವರದ್ದೆ ಆದ ಪೂರ್ವಗ್ರಹವಿರುವುದು ಅಥವಾ ಅದು ದಾರಿತಪ್ಪಿಸುವಂತಿರುವುದು ಗೊತ್ತಿರುವ ಸಂಗತಿಯೇ ಆಗಿರುವುದರಿಂದ, ಈ ಹೇಳಿಕೆಯಿಂದ ಕಾಂಗ್ರೆಸ್‌ಗೆ ಯಾವ ಪ್ರಯೋಜನವೂ ಆಗುವುದಿಲ್ಲ ಎಂಬುದು ಸ್ಪಷ್ಟ.

ಒಂದು ವೇಳೆ ಹಾಗಿದ್ದಿದ್ದರೆ, ಈಗಾಗಲೇ ಈ ಚುನಾವಣಾ ಸ್ಪರ್ಧೆಗಳ ಬಗ್ಗೆ ಆತಂಕಗೊಂಡಿರುವಂತೆ ಮತ್ತು ಅನಿಶ್ಚಿತತೆಯಿಂದ ನರಳುತ್ತಿರುವಂತೆ ತೋರುತ್ತಿರುವ ಕಾಂಗ್ರೆಸ್ ಪಾಲಿಗೆ ಇದು ಮುಜುಗರದ ಪರಿಸ್ಥಿತಿಯನ್ನು ಸೃಷ್ಟಿಸುವುದಂತೂ ಖರೆ. ಈ ಬೆಳವಣಿಗೆಯನ್ನು ಮತ್ತೊಂದು ಆಯಾಮದಿಂದಲೂ ನೋಡುವುದು ಒಳಿತು. ತಾವು ಹೇಳಬೇಕಾದ್ದನ್ನು ಹೇಳುವುದಕ್ಕೆ ತಮ್ಮ ಕುಟುಂಬದ ಕಡೆಯಿಂದ ಹಸಿರು-ನಿಶಾನೆ ಸಿಕ್ಕದೆಯೇ ವಾದ್ರಾ ಅವರು ಹೀಗೆ ಮಾತಾಡಿರಬಹುದೇ? ಅದು ಅಸಂಭವ. ಒಂದು ವೇಳೆ ಹಾಗಿದ್ದಿದ್ದರೆ, ನಾವು ಅವರ ಹೇಳಿಕೆಗಳನ್ನು ಅನೌಪಚಾರಿಕವೆಂದಾಗಲೀ ಅಥವಾ ಯಾವುದೇ ಸಿದ್ಧತೆಯಿಲ್ಲದೆ/ಅನಧಿಕೃತ ವಾಗಿ ಹೇಳಿದ್ದು ಎಂದಾಗಲೀ ಪರಿಗಣಿಸಬಾರದು.

ಪ್ರಸಕ್ತ ಸಂದರ್ಭದಲ್ಲಿ ವಾದ್ರಾ ಅವರ ಹೇಳಿಕೆಗಳು ಮೂರು ಸಂಭಾವ್ಯ ವಿವರಣೆಗಳನ್ನು ಹೊಂದಿವೆ. ಮೊದಲನೆಯದಾಗಿ, ಅವರು ನಿಜಾರ್ಥದಲ್ಲೇ ಈ ಹೇಳಿಕೆ ನೀಡಿದ್ದಾರೆ ಮತ್ತು ಅವರು ಕಾಂಗ್ರೆಸ್‌ನ ಅಭ್ಯರ್ಥಿಯಾಗಬಹುದು. ಇಲ್ಲಿ ಒಂದೊಮ್ಮೆ ಸೋಲಾದರೆ ಅದಕ್ಕೆ ಅವರೇ ಹೊಣೆಯಾಗುತ್ತಾರೆ ಮತ್ತು ಗಾಂಧಿ ಕುಟುಂಬಿಕರಿಗೆ ಇದರಿಂದೇನೂ ಬಾಧಕವಿಲ್ಲ. ಒಂದು ವೇಳೆ ಗೆಲುವು ದಕ್ಕಿದರೆ ಅದೊಂದು ಬೋನಸ್ ಆಗಿ ಪರಿಣಮಿಸುತ್ತದೆ.

ಎರಡನೆಯದಾಗಿ, ವಾದ್ರಾ ಅವರು ಪ್ರಿಯಾಂಕಾ ಗಾಂಧಿಯವರ ಬದಲಿಯಾಗಿ ಅಥವಾ ಅವರ ಪರವಾಗಿ ಮಾತನಾಡುತ್ತಿದ್ದಾರೆ ಹಾಗೂ ಆಕೆಗಾಗಿ ಒಂದು ದೊಡ್ಡ ಪಾತ್ರವು ದಕ್ಕುವಂತಾಗಬೇಕು ಎಂದು ಯತ್ನಿಸುತ್ತಿದ್ದಾರೆ. ಇದು ಸೈದ್ಧಾಂತಿಕವಾಗಿ ಕಾರ್ಯ ಸಾಧ್ಯವಾದರೂ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಽಯವರು ಪರಸ್ಪರ ಎಷ್ಟು ಆಪ್ತರಾಗಿದ್ದಾರೆ ಎಂಬುದು ಗೊತ್ತಿರುವ ಸಂಗತಿಯೇ ಆಗಿರುವುದರಿಂದ ಮಹತ್ವದ ಅರ್ಥವನ್ನೇನೂ ಇದು ಹೊಮ್ಮಿಸದು.

ಆದಾಗ್ಯೂ, ಲೇಖಕ ಸುಗತ ಶ್ರೀನಿವಾಸರಾಜು ಅವರು ಹಿಂದೊಮ್ಮೆ ನನಗೆ ಹೇಳಿದಂತೆ, ಇದು ‘ಓರ್ವ ಪತಿಯು ತನ್ನ ಪತ್ನಿಯ ರಾಜಕೀಯ ಉತ್ತರಾಧಿಕಾರದ ಮೇಲೆ ಹಕ್ಕು ಸಾಧಿಸುತ್ತಿರುವ ಒಂದು ಪ್ರಕರಣ’ ಇದ್ದಿರಬಹುದೇ? ಅಂತಿಮವಾಗಿ, ಕೇರಳದ ವಯನಾಡ್‌ನಲ್ಲಿ ಕಾಂಗ್ರೆಸ್ ತನ್ನ ಪರಿಶ್ರಮ ಮತ್ತು ಸಮಯವನ್ನು ವಿನಿಯೋಗಿಸುತ್ತಿರುವಾಗ, ಆ ಪಕ್ಷ, ಗಾಂಧಿ ಕುಟುಂಬಿಕರು ಹಾಗೂ ಅಮೇಥಿಯನ್ನು ಸುತ್ತುವರಿದಿರುವ ಗಾಳಿಸುದ್ದಿಯ ಹುಯಿಲನ್ನು ಮತ್ತಷ್ಟು ಜೀವಂತವಾಗಿಡಲು ಸಮಯೋಚಿತವಾಗಿ ಮಾಡಿರುವ ’ದಾರಿತಪ್ಪಿಸುವ’ ನಡೆ ಇದಾಗಿದೆಯೇ? ನಮಗಂತೂ ಇದು ಖಚಿತವಾಗಿ ತಿಳಿದಿಲ್ಲ.

ಆದರೆ, ಕಾಂಗ್ರೆಸ್ ಪಕ್ಷದ ಪಾಲಿಗೆ ಒಂದು ಅಸ್ತಿತ್ವದ ಪ್ರಶ್ನೆಯಾಗಿ ಪರಿಣಮಿಸಿರುವ ಇಂಥದೊಂದು ಚುನಾವಣೆಯ ಪರ್ವಕಾಲ ದಲ್ಲಿ,  ವಿಧ್ಯುಕ್ತವಾಗಿ ರಾಜಕೀಯದಲ್ಲಿ ಇಲ್ಲದ ಕುಟುಂಬದ ಸದಸ್ಯರೊಬ್ಬರು ಹೀಗೆ ಒಂದು ‘ಸಡಿಲ ಫಿರಂಗಿ’ಯಂತೆ ವರ್ತಿಸಲು ಅನುಮತಿಸಲಾಗುತ್ತದೆ ಎಂದರೆ ಅದನ್ನು ಯಾರೂ ನಂಬುವುದಿಲ್ಲ. ಆದ್ದರಿಂದ, ವಾದ್ರಾ ಅವರ ಹೇಳಿಕೆಗಳನ್ನು ಪಕ್ಷವು ಅನುಮೋದಿಸಿದೆ ಎಂದು ನಾವು ಪರಿಗಣಿಸಬೇಕು ಮತ್ತು ಅದೇ ವಾಸ್ತವವಾಗಿದ್ದಲ್ಲಿ, ಈ ಅಮೇಥಿ ಕಥೆಯಲ್ಲಿ ದಕ್ಕುವ ತಿರುವಿಗಾಗಿ
ಕಾದುನೋಡಬೇಕಾಗುತ್ತದೆ.

(ಕೃಪೆ: ಹಿಂದೂಸ್ತಾನ್ ಟೈಮ್ಸ್)
(ಲೇಖಕಿ ಹಿರಿಯ ಪತ್ರಕರ್ತೆ)