Friday, 13th December 2024

ಅಂದಹಾಗೆ ಈಗ ಅಲ್ಲಿ ಟೈಮ್ ಎಷ್ಟು ?

ಶಿಶಿರ ಕಾಲ
ಶಿಶಿರ್‌ ಹೆಗಡೆ ನ್ಯೂಜೆರ್ಸಿ

ಸಾಮಾನ್ಯವಾಗಿ ಭಾರತದಲ್ಲಿರುವ ಸ್ನೇಹಿತರಿಗೆ ಫೋನ್ ಮಾಡಿದಾಗಲೆಲ್ಲ ನಮ್ಮ ಸಂಭಾಷಣೆ ಶುರುವಾಗುವುದೇ ಹೀಗೆ. ಹೇಗಿದ್ದೀಯಾ, ಎಲ್ಲಾ ಕ್ಷೇಮವೇ? ಅಂದಹಾಗೆ ಈಗ ಅಲ್ಲಿ ಟೈಮ್ ಎಷ್ಟು?. ಈ ಟೈಮ್ ಎಷ್ಟು ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಉಭಯ ಕುಶಲೋಪರಿಯ ಭಾಗವೇ ಆಗಿರುತ್ತದೆ. ವಿದೇಶದಲ್ಲಿರುವವರು ನಮ್ಮ ದೇಶದಲ್ಲಿರುವವರಿಗೆ ಫೋನ್ ಮಾಡಿದಾಗ ಈ
ಪ್ರಶ್ನೆ ಎದರಿಸಿಲ್ಲ ಅಂದರೆ ಆ ಮಾತುಕತೆಯೇ ಅಪೂರ್ಣ.

ಬೇರೆ ಟೈಮ್ ಜೋನ್ ನಲ್ಲಿರುವವರಲ್ಲಿ ಮಾತನಾಡುವಾಗ ಅಲ್ಲಿನ ಸಮಯವನ್ನು ಗ್ರಹಿಸಿ ಮಾತನಾಡಿದರೆ ಏನೋ ಒಂದು
ಸಮಂಜಸ ಭಾವ, ಸಮಾಧಾನ. ಮೊದಲೆಲ್ಲ ಅನಲಾಗ್ ವಾಚ್ ನ ಕಾಲದಲ್ಲಿ ವಿದೇಶದಲ್ಲಿರುವವರೆಲ್ಲ ಸಾಮಾನ್ಯವಾಗಿ ಎರಡು
ಟೈಮ್ ಇರುವ ಗಡಿಯಾರವನ್ನು ಆ ಕಾರಣಕ್ಕೆ ಧರಿಸುತ್ತಿದ್ದರು. ನಾನಂತೂ ಭಾರತಕ್ಕೆ ರಜೆಗೆ ಹೋಗಿ ವಾಪಾಸ್ ಬಂದ ಮೇಲೆ
ಅದೆಷ್ಟೋೋ ದಿನ ಅಲ್ಲಿನ ಸಮಯವನ್ನು ವಾಚ್‌ನಲ್ಲಿ ಹಾಗೆಯೇ ಇರಿಸಿ ಕೈಗೆ ಕಟ್ಟಿಕೊಂಡೇ ತಿರುಗಾಡುತ್ತಿದ್ದೆ. ದೇಶ ಬಿಟ್ಟು ಬಂದ ಬೇಸರದ ಮಧ್ಯೆ ಈ ಸಮಯವನ್ನು ಬದಲಿಸಿಕೊಳ್ಳುವುದು ಅದ್ಯಾಕೋ ಒಂದು ರೀತಿ ಹಿಂಸೆಯೆನಿಸುತ್ತಿತ್ತು. ಆಮೇಲೆ ಕೆಲ
ದಿನಗಳ ನಂತರ ಇದು ಕಿರಿ ಕಿರಿಯಾಗಿ ಇಲ್ಲಿನ ಲೋಕಲ್ ಟೈಮ್ ಗೆ ಗಡಿಯಾರದ ಮುಳ್ಳುಗಳನ್ನು ಸರಿಪಡಿಸಿಕೊಳ್ಳುತ್ತಿದ್ದೆ.
ಈಗಂತೂ ಸ್ಮಾರ್ಟ್ ವಾಚ್ ಬಂದ ಮೇಲೆ ಅದಾಗಿಯೇ ಸಮಯ ಬದಲಾಗಿಬಿಡುತ್ತದೆ.

ಮೊದಲೆಲ್ಲ ವಿದೇಶದಲ್ಲಿರುವವರು ಭಾರತದ ಸಮಯವನ್ನು ಗಣನೆಗೆ ತೆಗೆದುಕೊಂಡು ಫೋನ್ ಮಾಡುತ್ತಿದ್ದರು. ತೀರಾ
ತುಟ್ಟಿಯ ಐ.ಎಸ್.ಡಿ ಕರೆಯ ಸಮಯದಲ್ಲಿ ಸಾಮಾನ್ಯವಾಗಿ ವಿದೇಶದಲ್ಲಿರುವವರೇ ಮನೆಗೆ, ಆಪ್ತೆಷ್ಟರಿಗೆ ಕರೆ ಮಾಡುತ್ತಿದ್ದುದ್ದು. ಈಗಂತೂ ಎಲ್ಲರ ಕೈಯಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಬಂದ ಮೇಲೆ – ಅದರಲ್ಲಿಯೂ ವಾಟ್ಸ್ ಆಪ್ ನಲ್ಲಿ ಫೋನ್ ಕರೆ ಮಾಡುವ ಸೌಲಭ್ಯ ಬಂದ ಮೇಲೆ, ಅಂತಾರಾಷ್ಟ್ರೀಯ ಕರೆಗಳನ್ನು ಮಾಡಿ ಮಾತನಾಡುವುದು ಬಹಳ ಸುಲಭವಾಗಿದೆ.

ವಾಟ್ಸ್ಆಪ್ ಕರೆ ಮಾಡುವ ಸೌಲಭ್ಯ ಬಂದ ಹೊಸತರಲ್ಲಂತೂ ಸ್ನೇಹಿತರು, ಬಂಧು ಮಿತ್ರರು ಯಾವಯಾವಗಲೋ, ಇಲ್ಲಿನ ಮಧ್ಯರಾತ್ರಿ, ಬೆಳಗಿನ ಜಾವ ಎನ್ನದೇ ಕರೆ ಮಾಡುತ್ತಿದ್ದರು. ಅವರಿಗೆ ಇಲ್ಲಿನ ಸಮಯದ ಅಂದಾಜಿರುತ್ತಿರಲಿಲ್ಲ. ಹೆಚ್ಚಿನ ಬಾರಿ ನಿದ್ರೆಗಣ್ಣಲ್ಲಿ ಕರೆ ಸ್ವೀಕರಿಸಿದರೆ ಪ್ರಶ್ನೆ ಅದೇ ಹೇಗಿದ್ದೀಯಾ? ಅಂದಹಾಗೆ ಈಗ ಅಲ್ಲಿ ಸಮಯ ಎಷ್ಟು?. ಬೆಳಗ್ಗಿನ ಜಾವ ಮೂರು ಗಂಟೆ ಎಂದು ನಿದ್ರೆಯ ಒಡಕು ಸ್ವರದಲ್ಲಿ ಎಂದಾಕ್ಷಣ ಒಹ್ ಹೌದಾ ಹೌದಾ.. ಸೋರಿ ಸೋರಿ ಎಂದು ಫೋನ್ ಕಟ್ ಮಾಡು ತ್ತಿದ್ದರು.

ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುವವರಾಗಿದ್ದರೆ ಸಾಮಾನ್ಯವಾಗಿ ಕನಿಷ್ಠ ಎರಡು ಅಥವಾ ಮೂರು ಟೈಮ್
ಜೋನ್‌ನ ಕಲ್ಪನೆ ಮತ್ತು ಲೆಕ್ಕಾಚಾರ ಇಟ್ಟಿಕೊಂಡೇ ವ್ಯವಹರಿಸಬೇಕು. ಈ ಫೀಲ್ಡ್ನಲ್ಲಿ ಅಂತಾರಾಷ್ಟ್ರೀಯ ಟೆಲಿಫೋನ್ –
ಜೂಮ್ ಮೀಟಿಂಗ್‌ಗಳು ಸರ್ವೇ ಸಾಮಾನ್ಯ. ಯಾವುದೇ ಮೀಟಿಂಗ್ ಇಟ್ಟುಕೊಳ್ಳುವಾಗ ಮೀಟಿಂಗ್‌ಗೆ ಆಹ್ವಾನ ಕಳಿಸುವಾಗ ಆಹ್ವಾನಿಸಲ್ಪಡುವವರು ಯಾವ ಯಾವ ಟೈಮ್ ಜೋನ್ ನಲ್ಲಿರುವವರು ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡಿರ
ಬೇಕಾಗುತ್ತದೆ. ಕೆಲವೊಮ್ಮೆ ಎಲ್ಲರಿಗೆ ಸರಿಯಾಗುವ ಒಂದು ಸಮಯವನ್ನು ಮೀಟಿಂಗ್‌ಗೆ ನಿಗದಿ ಪಡಿಸಿಕೊಳ್ಳುವುದೇ ಒಂದು
ದೊಡ್ಡ ಕೆಲಸವಾಗಿಬಿಡುತ್ತದೆ. ಭಾರತ ಮತ್ತು ಅಮೆರಿಕಾದ ತಂಡಗಳನ್ನು ಒಟ್ಟುಗೂಡಿಸಿ ಒಂದು ಮೀಟಿಂಗ್ ಮಾಡಬೇಕೆಂದರೆ ಭಾರತದಲ್ಲಿ ಇರುವ ತಂಡಕ್ಕೆ ರಾತ್ರಿ ತೀರಾ ತಡವಾಗಿರಬಾರದು, ಅಮೆರಿಕಾದಲ್ಲಿರುವವರಿಗೆ ಬೆಳಿಗ್ಗೆ ತೀರಾ ಬೇಗವಾಗಿರಬಾರದು. ಇನ್ನು ಕೆಲವೊಮ್ಮೆ ಆಸ್ಟ್ರೇಲಿಯಾ ಅಥವಾ ಜಪಾನ್, ಭಾರತ ಮತ್ತು ಅಮೆರಿಕಾದ ತಂಡಗಳನ್ನು ಸೇರಿಸಿ ಮೀಟಿಂಗ್ ಮಾಡುವ ಸಂದರ್ಭ ಬಂದರೆ ಕಥೆ ಮುಗಿದೇ ಹೋಯಿತು.

ಮೀಟಿಂಗ್ ನ ಸಮಯ ನಿಗದಿಗೆ ಒಂದು ಮೀಟಿಂಗ್ ಇಟ್ಟುಕೊಳ್ಳುವಂಥಹ ಪರಿಸ್ಥಿತಿ. ಇದು ಇನ್ಫರ್ಮೇಷನ್ ಟೆಕ್ನಾಲಜಿ
ಫೀಲ್ಡಿನಲ್ಲಿ ತೀರಾ ಸಾಮಾನ್ಯ. ನಿಮ್ಮ ಮನೆಯಲ್ಲಿ ಐಟಿಯಲ್ಲಿ ಕೆಲಸಮಾಡುವವರಿದ್ದರೆ ಇದೆಲ್ಲ ನಿಮಗೆ ಹೊಸತಲ್ಲ. ಈ ಟೈಮ್ ಜೋನ್ ಗಳು ಯಾವಾಗ ಮತ್ತು ಹೇಗೆ , ಯಾವ ಅನಿವಾರ್ಯಕ್ಕೆ ಹುಟ್ಟಿಕೊಂಡವು ಎನ್ನುವುದೇ ಒಂದು ರೋಚಕ ಕಥೆ. ಎರಡು ಶತಮಾನದ ಹಿಂದೆ – ಹತ್ತೊಂಬತ್ತನೆಯ ಶತಮಾನಕ್ಕಿಂತ ಮೊದಲು ಜಗತ್ತು ಹೀಗಿರಲೇ ಇಲ್ಲ. ಗಡಿಯಾರದ ಆವಿಷ್ಕಾರ ಹದಿನಾಲ್ಕನೇ ಶತಮಾನದಲ್ಲಾಗಿದ್ದರೂ ಆಗೆಲ್ಲ ಒಬ್ಬೊಬ್ಬರ ಗಡಿಯಾರ ಒಂದೊಂದು ಸಮಯ ತೋರಿಸುತ್ತಿತ್ತು.

ಕೆಲವರು ಸೂರ್ಯೋದಯವಾದ ಕೂಡಲೇ ಬೆಳಗಿನ ಜಾವ ಆರು ಗಂಟೆ ಎಂದು ಪ್ರತೀ ದಿನ ಗರಿಯಾರದ ಮುಳ್ಳನ್ನು ಮುಂದೆ ಹಿಂದೆ ಮಾಡಿಕೊಳ್ಳುತ್ತಿದ್ದರು. ಈಗೆಲ್ಲ ಸಮಯವನ್ನು ಶಿಸ್ತಿನ ಜೊತೆ ನಂಟು ಹಾಕಿ ನೋಡುತ್ತಾರೆ ಆದರೆ ಆಗೆಲ್ಲ ಸಮಯಕ್ಕೇ ಒಂದು ಶಿಸ್ತಿರಲಿಲ್ಲ. ಸ್ಪ್ರಿಂಗ್ ಗಡಿಯಾರದ ಸಮಯದಲ್ಲಂತೂ ಕೆಲವು ಗಡಿಯಾರಗಳು ಜೋರಾಗಿ ಓಡುತ್ತಿದ್ದವು – ಕೆಲವು ತೀರಾ ನಿಧಾನವಾಗಿ ಓಡುತ್ತಿದ್ದವು. ಬಹುಷಃ ಗಂಟೆ ಎಷ್ಟಾಯಿತು ಎನ್ನುವುದೇ ಅಪ್ರಸ್ತುತವಾಗಿದ್ದ ಕಾಲವದು. ಬೆಳಿಗ್ಗೆ ಮದ್ಯಾಹ್ನ ಸಂಜೆ ಎನ್ನುವುದನ್ನು ಸೂರ್ಯನೇ ಹೇಳುತ್ತಿದ್ದ ಸಮಯ. ಜನರಿಗೂ ಅಷ್ಟೇ ಸಾಕಿತ್ತು. ಅಂದಿನ ಬದುಕೇ ಹಾಗಿತ್ತು – ಚಿಕ್ಕ ಮಕ್ಕಳ ಬದುಕಿನಂತೆ. ಬೆಳಿಗ್ಗೆ ಮದ್ಯಾಹ್ನ ಸಂಜೆ- ಸೂರ್ಯೋದಯ ಸೂರ್ಯಾಸ್ತ ಎನ್ನುವುದಷ್ಟೇ ಮುಖ್ಯವಾಗುತ್ತಿದ್ದ ಸಮಯವದು.

ಹಾಗಾದರೆ ಯಾವ ಕಾರಣಕ್ಕೆ ಸಮಯಕ್ಕೊಂದು ಶಿಸ್ತನ್ನು ಕೊಡುವುದು ಮುಖ್ಯವಾಯಿತು? ಅದಕ್ಕೆ ಮೂಲ ಕಾರಣ ರೈಲ್ವೆ ವ್ಯವಸ್ಥೆ. ಮೊದಲೆಲ್ಲ ಒಂದು ಹಳಿಯಲ್ಲಿ ಒಂದೇ ರೈಲು ಈ ಕಡೆಯಿಂದ ಆ ಕಡೆ, ಈ ಕಡೆಯಿಂದ ಆ ಕಡೆ ಓಡಾಡುತ್ತಿತ್ತು. ಕ್ರಮೇಣ ರೈಲು ಜನಪ್ರಿಯವಾದಂತೆ ರೈಲು ಸಂಖ್ಯೆಗಳು ಹೆಚ್ಚಿಸುವುದು ಅವಶ್ಯಕವಾಯಿತು. ಹೊಸ ರೈಲಿಗೆ ಹೊಸದೊಂದು ಹಳಿಯನ್ನೇ ನಿರ್ಮಿಸಿವುದು ಪ್ರಯೋಗಿಕವಾಗಿರಲಿಲ್ಲ. ಒಂದೇ ಹಳಿಯಲ್ಲಿ ಒಂದಕ್ಕಿಂತ ಹೆಚ್ಚು ರೈಲನ್ನು ಓಡಿಸುವುದು ಆ ಕಾರಣಕ್ಕೆ ಅನಿವಾರ್ಯವಾಯಿತು. ಹೀಗೆ ಒಂದಕ್ಕಿಂತ ಹೆಚ್ಚು ರೈಲು ಓಡಾಡಲು ಪಾಸಿಂಗ್ ಅವಶ್ಯಕ. ರೈಲು ಸರಿ ಸಮಯದಲ್ಲಿ ಹೊರಟು ಸರಿಯಾದ ಸಮಯದಲ್ಲಿ ಸ್ಟೇಷನ್ ನಲ್ಲಿ ನಿಲ್ಲದಿದ್ದರೆ ಇನ್ನೊಂದು ಎದುರಿನಿಂದ ಬರುವ ರೈಲಿಗೆ ಡಿಕ್ಕಿ ಹೊಡೆಯು ವುದು ಪಕ್ಕಾ. ಈ ಕಾರಣಕ್ಕೆ ಇಡೀ ರೈಲ್ ವ್ಯವಸ್ಥೆ ಒಂದೇ ಸಮಯವನ್ನು ಪಾಲಿಸುವುದು ತೀರಾ ಅವಶ್ಯಕವಾಯಿತು. ಸರಿಯಾದ ಸಮಯದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಹಳಿಗಳನ್ನು ಸ್ವಿಚ್ ಮಾಡದ್ದಿದ್ದಲ್ಲಿ ಸ್ಟೇಷನ್ನಿನಲ್ಲೇ ಡಿಕ್ಕಿ ಸಂಭವಿಸುವ ಪರಿಸ್ಥಿತಿ. ಈ ಕಾರಣಕ್ಕೆ 1847 ರಲ್ಲಿ ಮೊದಲ ಬಾರಿ ಯುನೈಟೆಡ್ ಕಿಂಗ್ಡಮ್ ರೈಲ್ವೆ ವ್ಯವಸ್ಥೆ ದೇಶದುದ್ದಗಲಕ್ಕೂ ಏಕ ಸಮಯ ಪದ್ಧತಿ ಜಾರಿಗೆ ತಂದಿತು. ಅದಕ್ಕಿಂತ ಮೊದಲು ಇಂಗ್ಲೆೆಂಡಿನಲ್ಲೇ ಊರಿಗೊಂದು ಸಮಯವಿತ್ತು. ಗ್ರೀನ್ವಿಚ್ ಎನ್ನುವ ಜಾಗದ ಸಮಯವನ್ನು ಆ ದೇಶ ಬೇಸ್ ಆಗಿ ಬಳಸಿಕೊಂಡು ಇಡೀ ದೇಶದ ರೈಲು ವ್ಯವಸ್ಥೆೆ ಆ ಊರಿನ ಲೋಕಲ್ ಟೈಮ್ ಅನ್ನು ಪಾಲಿಸುವಂತೆ ಆದೇಶ ಹೊರಡಿಸಲಾಯಿತು.

ಗ್ರೀನ್ವಿಚ್ ನಲ್ಲಿ ಈ ನಿಮಿತ್ತ ಒಂದು ಕಚೇರಿಯನ್ನು ರೈಲ್ವೆ ಇಲಾಖೆ ತೆರೆಯಿತು. ಸಮಯ ಸರಿಯಾಗಿದೆಯೇ ಇಲ್ಲವೇ ಎಂದು ಟೆಲಿಗ್ರಾಂ ನ ಮುಲಕ ದೇಶದ ಎಲ್ಲ ರೈಲುಗಳು ಮತ್ತು ರೈಲ್ವೆೆ ಸ್ಟೇಷನ್ ಗಳು ಖಚಿತಪಡಿಸಿಕೊಳ್ಳುತ್ತಿದ್ದವು. ಅದಕ್ಕನುಗುಣವಾಗಿ ತಮ್ಮ ಗಡಿಯಾರವನ್ನು ದಿನಕ್ಕೆೆ ಹಲವು ಬಾರಿ ಸರಿಮಾಡಿಕೊಳ್ಳಲಾಗುತ್ತಿತ್ತು. ಸಮಯ ಎಷ್ಟು ಎಂದು ರೈಲ್ವೆೆಗೆ ಹೇಳುವುದೇ ಈ ಸಂಸ್ಥೆಯ ಕೆಲಸವಾಗಿತ್ತು. ಇದೊಂದು ಸಮಯಪಾಲಕ ರೈಲ್ವೆ ಕಚೇರಿಯಾಗಿತ್ತು. ಆದರೆ ದೇಶದ ಜನರೆಲ್ಲಾ ಒಂದೇ  ಸಮಯ ವನ್ನು ಪಾಲಿಸುತ್ತಿರಲಿಲ್ಲ – ಕಾರಣ ಆಗ ಕೂಡ ಅದೊಂದು ಜನಸಾಮಾನ್ಯರ ಅವಶ್ಯಕತೆಯಾಗಿರಲಿಲ್ಲ. ಅದು ಕೈಗಾರಿಕಾ ಕ್ರಾಂತಿಯ ಸಮಯ. ಅಂದಿನ ಇಂಗ್ಲೆೆಂಡಿನ ಫ್ಯಾಕ್ಟರಿ ಮಾಲೀಕರು ತಮ್ಮ ಕೆಲಸಗಾರರನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ – ಕತ್ತಲಾಗುವವರೆಗೆ ದುಡಿಸಿಕೊಳ್ಳುತ್ತಿದ್ದರು. ಈ ಮಾಲೀಕರು ಹೇಳಿದ್ದೇ ಸಮಯ. ಈ ಮಾಲೀಕರು ಹಗಲಲ್ಲಿ – ಫ್ಯಾಕ್ಟರಿ ಸಮಯ ದಲ್ಲಿ ಗಡಿಯಾರ ನಿಧಾನಕ್ಕೆ ಓಡುವಂತೆ ನೋಡಿಕೊಳ್ಳುತ್ತಿದ್ದರು – ಇದರಿಂದ ಕೆಲಸಗಾರರು ಹೆಚ್ಚು ಸಮಯ ಕೆಲಸ ಮಾಡ ಬೇಕಾಗಿ ಬರುತ್ತಿತ್ತು.

ಇದು ಕ್ರಮೇಣ ಕೆಲಸಗಾರರ, ಲೇಬರ್ ಯೂನಿಯನ್‌ನ ಕೆಂಗಣ್ಣಿಗೆ ಗುರಿಯಾಯಿತು. ಈ ಕಾರಣಕ್ಕೆ ಅಲ್ಲಲ್ಲಿ ದಂಗೆಗಳೇ ಎದ್ದವು. ಇದಲ್ಲದೇ ಆಲ್ಕೋಹಾಲ್ ಮಾರಾಟಕ್ಕೆ ಸಮಯ ನಿರ್ಧರಿವ ಸ್ಥಿತಿ ಇಂಗ್ಲೆೆಂಡಿನಲ್ಲಿ ನಿರ್ಮಾಣವಾಗಿತ್ತು. ಈ ನಿಟ್ಟಿನಲ್ಲಿ ಆಗ ಅಲ್ಲಿನ ಸರಕಾರ – ರಾಣಿ ಅನಿವಾರ್ಯವಾಗಿ ಒಂದೇ ಸಮಯವನ್ನು ಕರಾರುವಕ್ಕಾಗಿ ಪಾಲಿಸುವಂತೆ ಆದೇಶಿಸಲೇ ಬೇಕಾಯಿತು. ಅಲ್ಲಿಂದ ಮುಂದೆ ಬೇಕಾಬಿಟ್ಟಿ ತಮ್ಮಿಚ್ಛೆಗೆ ತಕ್ಕಂತೆ ಗಡಿಯಾರದ ಸಮಯವನ್ನು ಮುಂದೆ ಹಿಂದೆ ಮಾಡುವುದು ನಿಂತಿತು. ಇಡೀ ದೇಶ ಒಂದೇ ಸಮಯವನ್ನು ಪಾಲಿಸಲು ಶುರುಮಾಡಿಕೊಂಡಿತು.

ಇಂಥದ್ದೇ ಸ್ಥಿತಿ ಆಧುನಿಕವಾದಂತೆ ಅಮೆರಿಕಾದಲ್ಲೂ ನಿರ್ಮಾಣವಾಯಿತು. ಆದರೆ ಅಮೆರಿಕಾ ಯುನೈಟೆಡ್ ಕಿಂಗ್ಡಮ್ ನಂತೆ ಚಿಕ್ಕ ದೇಶವಲ್ಲವಲ್ಲ. ದೇಶದ ಅಗಲವೇ ಸುಮಾರು ಮೂರುವರೆ ಸಾವಿರ ಮೈಲಿ – ಐದೂಮುಕ್ಕಾಲು ಸಾವಿರ ಕಿಲೋಮೀಟರ್.
ಇಂತಹ ವಿಸ್ತಾರವಾದ ದೇಶಕ್ಕೆ ಒಂದೇ ಸಮಯ ಇಟ್ಟುಕೊಂಡರೆ ಹೇಗೆ ಸಾಧ್ಯ? ಸೂರ್ಯ ಪೂರ್ವದ ನ್ಯೂಯೋರ್ಕ್ ನಿಂದ
ಪಶ್ಚಿಮದ ಸ್ಯಾನ್ಫ್ರಾನ್ಸಿಸ್ಕೋಗೆ ಹೋಗಿ ಮುಟ್ಟಲು ಸುಮಾರು ಮೂರು ತಾಸು ಬೇಕು. ಬೆಳಿಗ್ಗೆ ನ್ಯೂಯಾರ್ಕ್‌ನಲ್ಲಿ ಎಂಟುಗಂಟೆ
ಯಾಗಿದ್ದು ಅದೇ ಸಮಯ ದಲ್ಲಿ ಇಡೀ ದೇಶದ ಕೆಲಸಗಾರರನ್ನು ಕೆಲಸಕ್ಕೆ ಕರೆಸಿಕೊಂಡರೆ ಅತ್ತ ಪಶ್ಚಿಮದ  ಸ್ಯಾನ್ಫ್ರಾನ್ಸಿಸ್ಕೋ ದಲ್ಲಿ ಸೂರ್ಯೋದಯವಾಗಿ ರುವುದೇ ಇಲ್ಲ. ಈ ಕಾರಣಕ್ಕ ದೇಶವನ್ನು ನಾಲ್ಕು ಜೋನ್ ಗಳಾಗಿ ವಿಂಗಡಿಸಿ ಅದಕ್ಕನುಗುಣ ವಾಗಿ  ಸಮಯ ವನ್ನು ನಿರ್ಧರಿಸಬೇಕಾಯಿತು. 1883 ರಲ್ಲಿ ಅಮೆರಿಕಾ ಈ ರೀತಿ ಸಮಯದ ಜೋನ್‌ಗಳನ್ನು ಪ್ರಮಾಣೀಕರಿಸಿತು.

ಸಮಯಕ್ಕೊಂದು ಕಾನೂನು ರೂಪಿಸಿ ಎಲ್ಲರೂ ನಿಗದಿತ ಸಮಯವನ್ನು ಪಾಲಿಸುವಂತೆ ನೋಡಿಕೊಳ್ಳಲಾಯಿತು. ನಂತರ ಆಧುನಿಕತೆ ಇನ್ನಷ್ಟು ಬೆಳೆದಂತೆ ಉಳಿದ ದೇಶಗಳಸಮಯವನ್ನು ನಿಗದಿ ಪಡಿಸುವ ಅನಿವಾರ್ಯತೆ ಸಹಜವಾಗಿ ನಿರ್ಮಾಣ ವಾಯಿತು. ಈ ಕಾರಣಕ್ಕೆ ಅಂದಿನ ಅಮೆರಿಕಾದ ಅಧ್ಯಕ್ಷ ಚೆಸ್ಟರ್ ಅರ್ಥರ್ ಅಂತಾರಾಷ್ಟ್ರೀಯ ಒಪ್ಪಂದವನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಹಲವು ದೇಶದ ಮುಖಂಡರನ್ನು ಕರೆದು ಒಂದು ಸಭೆ ಏರ್ಪಡಿಸಿದ. ಈ ಸಭೆಯಲ್ಲಿ ಯಾವ ದೇಶದ ಸಮಯವನ್ನು ಆಧಾರವಾಗಿಟ್ಟುಕೊಂಡು ಉಳಿದ ದೇಶಗಳ ಸಮಯವನ್ನು ನಿಗದಿಪಡಿಸಬೇಕು ಎನ್ನುವ ವಿಚಾರದ ಮೇಲೆ ಚರ್ಚೆ ನಡೆದು ನಂತರ ಇಂಗ್ಲೆೆಂಡಿನ ರೈಲ್ವೆ ಸಮಯವನ್ನು ಎಂದರೆ ಗ್ರೀನ್ವಿಚ್ ಎನ್ನುವ ಚಿಕ್ಕ ಊರಿನ ಸಮಯವನ್ನೇ ಆಧಾರಕ್ಕೆ ಬಳಸಿಕೊಳ್ಳು ವಂತೆ ನಿರ್ಧರಿಸಲಾಯಿತು. ಕ್ರಮೇಣ ಕೆಲವು ದೇಶಗಳು ಗ್ರೀನ್ವಿಚ್‌ನ ಸಮಯವನ್ನು ಆಧಾರವಾಗಿಟ್ಟು ಕೊಂಡು ತಮ್ಮ ಸಮಯ ವನ್ನು ನಿರ್ಧರಿಸಿಕೊಂಡವು. ಆದರೆ ಜಗತ್ತಿನ ಎಲ್ಲ ದೇಶಗಳು ಇದನ್ನು ಒಪ್ಪಿಕೊಂಡು ಸಮಯವನ್ನು ಪಾಲಿಸಲು ಸುಮಾರು ಒಂದು ಶತಮಾನವೇ ಹಿಡಿಯಿತು. ಹೀಗೆ ಬೇರೆ ಬೇರೆ ಟೈಮ್ ಜೋನ್ ಗಳು ಹುಟ್ಟಿಕೊಂಡವು.

ಇಂದು ಅಮೆರಿಕಾದಲ್ಲಿ ಒಟ್ಟೂ ಒಂಭತ್ತು ಟೈಮ್ ಜೋನ್ ಗಳಿವೆ. ದೇಶದ ಬಹು ಭಾಗವನ್ನು ನಾಲ್ಕು ಟೈಮ್ ಜೋನ್ ಗಳಲ್ಲಿ ವಿಂಗಡಿಸಲಾಗಿದೆ. ನಮ್ಮ ದೇಶ ಭಾರತದಲ್ಲಿ ಇರುವುದು ಒಂದೇ ಟೈಮ್ ಜೋನ್. ಇದರಿಂದ ಕರ್ನಾಟಕದಲ್ಲಿರುವವರಿಗೆ
ಅಷ್ಟೊಂದು ಫರಕ್ ಬೀಳುವಿದಿಲ್ಲ. ಆದರೆ ತೀರಾ ಉತ್ತರಕ್ಕಿರುವ ಅಸ್ಸಾಂ ಮತ್ತು ಪಶ್ಚಿಮಕ್ಕಿರುವ ರಾಜಸ್ತಾನದಲ್ಲಿ ಸಮಯ
ಒಂದೇ. ಹಾಗಾಗಿ ಸೂರ್ಯಾಸ್ತ ಮತ್ತು ಸೂರ್ಯೋದಯದ ಸಮಯದಲ್ಲಿ ತೀರಾ ಅಂತರವಿದೆ. ಉದಾಹರಣೆಗೆ ಅಸ್ಸಾಂನ
ತಿನ್ಸುಕಿಯಾದಲ್ಲಿ ಐದುಗಂಟೆಗೆಲ್ಲ ಸೂರ್ಯೋದಯವಾಗಿ ಬಿಡುತ್ತದೆ. ಆದರೆ ಪಶ್ಚಿಮದ ರಾಜಸ್ತಾನದ ಭುಜ್ ನಲ್ಲಿ ಸೂರ್ಯೋ ದಯ ವಾಗುವುದು ಸುಮಾರು ಏಳು ಗಂಟೆಗೆ.

ಸೂರ್ಯಾಸ್ತದಲ್ಲಿ ಕೂಡ ಸುಮಾರು ಎರಡು ತಾಸಿನ ಅಂತರವಿದೆ. ನೀವು ಕರ್ನಾಟಕದಿಂದ ಕೊಲ್ಕಾತಾಗೆ ಹೋದಲ್ಲಿ ವ್ಯತ್ಯಾಸ ಮಾರನೆಯ ದಿನವೇ ತಿಳಿಯುತ್ತದೆ. ಕೊಲ್ಕಾತ್ತಾದ ಒಂಭತ್ತು ಗಂಟೆ ಎಂದರೆ ಉರಿಬಿಸಿಲು – ಇತ್ತ ಅಹ್ಮದಾಬಾದಿನ ಒಂಭತ್ತು ಗಂಟೆ ಎಂದರೆ ಆಗಿನ್ನೂ ಅಲ್ಲಿ ಎಳೆ ಬಿಸಿಲು. ಹೀಗೆ ಬೇರೆ ಬೇರೆ ಟೈಮ್ ಜೋನ್ ಇರದಿರುವುದರಿಂದ ಆಯಾ ರಾಜ್ಯಗಳಲ್ಲಿ ಸಮಯಾ ಧಾರಿತ ಕಾರ್ಯಕಲಾಪಗಳಲ್ಲಿ ವ್ಯತ್ಯಾಸವನ್ನು ಮಾಡಿಕೊಂಡು ಹೇಗೋ ಅಡ್ಜ್ಟ್ ಮಾಡಿಕೊಳ್ಳಲಾಗುತ್ತಿದೆ.

ಭಾರತದ ಮಟ್ಟಿಗೆ ಕನಿಷ್ಠ ಎರಡು ಟೈಮ್ ಜೋನ್ ನಿರ್ಮಿಸಿಕೊಂಡಿದ್ದರೆ ಹಲವು ವ್ಯವಹಾರಗಳಿಗೆ ಸುಲಭವಾಗುತ್ತಿತ್ತು. ನಮ್ಮ
ದೇಶದಂತೆಯೇ ಚೀನಾ ಕೂಡ ಒಂದೇ ಟೈಮ್ ಜೋನ್ ಅನ್ನು ಹೊಂದಿದೆ. ನಮ್ಮ ದೇಶಕ್ಕಿಂತ ಅಗಲಕ್ಕೆ ಹರಡಿರುವ ದೇಶ
ಚೀನಾದಲ್ಲಿ ಈ ಕಾರಣಕ್ಕೆ ಪೂರ್ವದಲ್ಲಿ ಏಳು ಗಂಟೆಗೆ ಸೂರ್ಯೋದಯವಾದರೆ ಪಶ್ಚಿಮದಲ್ಲಿ ಸುಮಾರು ಹನ್ನೊಂದು ಗಂಟೆಗೆ ಸೂರ್ಯೋದಯವಾಗುತ್ತದೆ.

ಈ ಟೈಮ್ ಜೋನ್ ಗಳನ್ನು ಅಳವಡಿಸಿಕೊಳ್ಳುವ ಸಮಯದಲ್ಲೇ ಇಂಟರ್‌ನ್ಯಾಷನಲ್ ಡೇಟ್ ಲೈನ್ ಅನ್ನು ಕೂಡ ಒಪ್ಪಿಕೊಳ್ಳ ಲಾಯಿತು. ಇಂಟರ್‌ನ್ಯಾಷನಲ್ ಡೇಟ್ ಲೈನ್ ಇರುವುದು ಪೆಸಿಫಿಕ್ ಮಹಾಸಾಗರದ ಮಧ್ಯದಲ್ಲಿ. ಸೂರ್ಯ ಈ ಕಾಲ್ಪನಿಕ ಗೆರೆಯನ್ನು ದಾಟಿದ ಕೂಡಲೇ ಅಲ್ಲಿಂದ ಪಶ್ಚಿಮದಲ್ಲಿರುವ ದೇಶಗಳಿಗೆಲ್ಲ ಬೆಳಗಾಗುತ್ತ ಹೋಗುತ್ತದೆ – ಈ ಗೆರೆಯ ಪೂರ್ವ ದಲ್ಲಿರುವ ದೇಶಗಳಿಗೆಲ್ಲ ರಾತ್ರಿಯಾಗುತ್ತ  ಹೋಗುತ್ತದೆ. ಆ ಕಾರಣಕ್ಕೆ ಜಪಾನ್ ಅನ್ನು ಸೂರ್ಯೋದಯದ ನಾಡು ಎಂದು ಕರೆಯುವುದು – ಏಕೆಂದರೆ ಅಲ್ಲಿ ಮೊದಲು ಬೆಳಗಾಗುತ್ತದೆ – ಆಮೇಲೆ ಉಳಿದ ದೇಶಗಳಿಗೆ ಬೆಳಗಾಗುವುದು. ಒಂದು ಮಜವೆಂದರೆ ಈ ಇಂಟರ್‌ನ್ಯಾಷನಲ್ ಡೇಟ್ ಲೈನ್ ನೇರ ರೇಖೆಯಲ್ಲ. ಸುಮ್ಮನೆ ಒಮ್ಮೆ ಗೂಗಲ್ ಮಾಡಿ ನೋಡಿ. ಈ ರೇಖೆ ಹಲವು ರಾಜಕೀಯ ಮತ್ತು ಆಡಳಿತಾತ್ಮಕ ಕಾರಣಗಳಿಂದ ಸೊಟ್ಟ ಪಟ್ಟ ಎಳೆಯಲಾಗಿದೆ. ಈ ಕಾರಣಕ್ಕೆ ಈ  ರೇಖೆಯ ಅಕ್ಕ ಪಕ್ಕದ ಚಿಕ್ಕ ದ್ವೀಪಗಳಲ್ಲಿ ಸಮಯದ ಅಂತರ ಇಪ್ಪತ್ತನಾಲ್ಕು ಗಂಟೆ. ಈ ಟೈಮ್ ಜೋನ್ ಗಳ ಅಂತರದ ಕಾರಣದಿಂದ ಹಲವು ವಿಚಿತ್ರ  ಅನುಭವ ಗಳಾಗುತ್ತವೆ.

ಉದಾಹರಣೆಗೆ ನೀವು ಭಾರತದಿಂದ ವಿಮಾನದಲ್ಲಿ ಹೊರಟು ಅಮೆರಿಕಾವನ್ನು ತಲುಪಿದರೆ ಸುಮಾರು ಹತ್ತು ಹನ್ನೆರಡು ತಾಸುಗಳನ್ನು ಆ ಪ್ರಯಾಣದ ಸಂದರ್ಭದಲ್ಲಿ ಗಳಿಸುತ್ತೀರಿ – ಏಕೆಂದರೆ ನೀವು ಸೂರ್ಯನ ಜೊತೆ ಜೊತೆ ಭೂಮಿಯ ಪೂರ್ವ ದಿಂದ ಪಶ್ಚಿಮಕ್ಕೆ ಪ್ರಯಾಣ ಮಾಡಿರುತ್ತೀರಿ. ಹೀಗೆ ಗಳಿಸಿದ ಸಮಯವನ್ನು ಮತ್ತೆ ನೀವು ಕಳೆದುಕೊಳ್ಳುವುದು ಅಮೆರಿಕಾ ದಿಂದ ಭಾರತಕ್ಕೆ ವಾಪಾಸ್ ಆಗುವ ಸಂದರ್ಭದಲ್ಲಿ. ವಿಮಾನದಲ್ಲಿ ಸಾಮಾನ್ಯವಾಗಿ ಹೊರಟ ಜಾಗದ ಸಮಯ, ವಿಮಾನ ಆ ಕ್ಷಣ ಇರುವ ಜಾಗದ ಸಮಯ ಮತ್ತು ತಲುಪುವ ಜಾಗದ ಸಮಯ ಹೀಗೆ ಮೂರು ಸಮಯವನ್ನು ವಿಮಾನದ ಸ್ಕ್ರೀನ್ ನ ಮೇಲೆ ತೋರಿಸಲಾಗುತ್ತದೆ.

ಬಹುತೇಕ ಟೈಮ್ ಜೋನ್‌ನ ರೇಖೆಗಳು ನೇರ ರೇಖೆಗಳಲ್ಲದಿರುವುದರಿಂದ ಈ ರೇಖೆಯ ಗುಂಟ ಯಾರಾದರೂ ಪ್ರಯಾಣ ಮಾಡುತ್ತಿದ್ದರೆ ರೇಖೆಯ ಆಚೀಚೆ ದಾಟಿದಾಗಲೆಲ್ಲಸಮಯ ಬದಲಾಗುತ್ತದೆ. ಮೊಬೈಲ್ ಗಳು ಸ್ವಯಂ ಸಮಯವನ್ನು ಬದಲಿಸಿ ಕೊಳ್ಳುವುದರಿಂದ ಕೆಲವೊಮ್ಮೆ ನಿಜ ಸಮಯ ಯಾವುದು ಎನ್ನುವುದೇ ತಿಳಿಯುವುದಿಲ್ಲ. ಇನ್ನು ಈ ಟೈಮ್ ಜೋನ್‌ನ ಅಂಚಿ ನಲ್ಲಿ ಒಂದು ಕಡೆ ಕಚೇರಿ ಇನ್ನೊಂದು ಕಡೆ ಮನೆ ಇದ್ದರೆ ಪ್ರತೀ ದಿನ ಹೋಗುವಾಗ ಮತ್ತು ಬರುವಾಗ ತಾಸಿನ ಲೆಕ್ಕದಲ್ಲಿ ವ್ಯತ್ಯಾಸವಾಗಿರುತ್ತದೆ. ಕೆಲವೊಂದು ಕಡೆ ಈ ಟೈಮ್ ಜೋನ್ ನ ಅಂತರ ಒಂದು ತಾಸಿಗಿಂತ ಜಾಸ್ತಿ. ಆಗ ಒಂದು ಕಿಲೋಮೀಟರ್ ದಾಟುವಾಗ ಮೂರೋ ನಾಲ್ಕೋ ತಾಸು ಹಿಂದೆ ಅಥವಾ ಮುಂದೆ ಸಮಯ ಆಗುವ ಜಾಗ ಯುರೋಪಿನಲ್ಲಿದೆ. ಈ ಟೈಮ್ ಜೋನ್‌ನ ಕಾಲ್ಪನಿಕ ರೇಖೆಯ ಅಕ್ಕಪಕ್ಕದಲ್ಲಿ ವಾಸಿಸುವವರ ಪಿಕಲಾಟಗಳ ಮೇಲೆ ಹಲವಾರು ವಿಡಿಯೋಗಳನ್ನು ಯುಟ್ಯೂಬ್ ನಲ್ಲಿ ಹುಡುಕಿ ನೋಡಬಹುದು. ಇದೆಲ್ಲ ಭಾರತದಲ್ಲಿ ಏಕ ಸಮಯ ಜಾರಿಯಲ್ಲಿರುವುದರಿಂದ ಅನುಭವಕ್ಕೆ ಬರುವುದಿಲ್ಲ.

ಈ ಸಮಯದ ವ್ಯತ್ಯಾಸದ ಕಾರಣದಿಂದ ನೀವೆಲ್ಲ ಬೆಳಿಗ್ಗೆ ಎದ್ದು ವಿಶ್ವವಾಣಿ ಪತ್ರಿಕೆಯನ್ನು ಓದಿದರೆ ಅಮೆರಿಕಾದಲ್ಲಿ ನಾವು
ಪೇಪರ್ ಅನ್ನು ರಾತ್ರಿ ಓದಿ ಮಲಗುತ್ತೇವೆ. ಅಲ್ಲಿನ ಟಿವಿ ಚ್ಯಾನಲ್ ಅನ್ನು ಇಲ್ಲಿನ ಸಂಜೆ ಹಚ್ಚಿದರೆ ಸುಪ್ರಭಾತದ ಹಾಡುಗಳು, ಪೂಜೆ ಅರ್ಚನೆಯ ಕಾರ್ಯಕ್ರಮಗಳು ಬರುತ್ತಿರುತ್ತವೆ. ಇನ್ನು ದಿನದ ಭವಿಷ್ಯ ಹೇಳುವ ಕಾರ್ಯಕ್ರಮ ಅಕಸ್ಮಾತ್ ಆಗಿ ನೋಡಿ ದರೆ ಇದು ನಾಳೆಯ ಭವಿಷ್ಯವೋ ಅಥವಾ ಮುಗಿದು ಹೋದ ಇಂದಿನ ದಿನದ್ದೋ ಎನ್ನುವ ಪ್ರಶ್ನೆ ಏಳುತ್ತದೆ. ಇನ್ನು ನಾವು ಬೆಳಿಗ್ಗೆ ಎದ್ದು ಟಿವಿ ಹಚ್ಚಿದರೆ ಪ್ರೈಮ್ ಟೈಮ್ ವಾರ್ತೆಯಲ್ಲಿ ಆಂಕರ್‌ಗಳು ಅರಚುತ್ತಿರುತ್ತಾರೆ.

ವಿದೇಶದಲ್ಲಿರುವ – ತನ್ನ ದೇಶಕ್ಕೆ ಕನೆಕ್ಟೆಡ್ ಇರುವ ಪ್ರತಿಯೊಬ್ಬನೂ ಈ ಎರಡು ಸಮಯವನ್ನು ಸದಾ ತಲೆಯಲ್ಲಿಟ್ಟುಕೊಂಡೇ ವ್ಯವಹಾರ/ ಜೀವನ ನಡೆಸುತ್ತಿರುತ್ತಾನೆ. ಮುಂದಿನ ಸಲ ಪರದೇಶದಲ್ಲಿರುವ ಸ್ನೇಹಿತನ ಜೊತೆ ಮಾತನಾಡುವಾಗ, ಅಲ್ಲಿ ಈಗ ಟೈಮ್ ಎಷ್ಟು? ಎಂದು ಕೇಳಿ – ಮಾತನಾಡಿ ಮುಗಿಸಿದ ಮೇಲೆ ಈ ಎಲ್ಲ ವಿವರಣೆಗಳು ನೆನಪಿಗೆ ಬರಲಿ.