ಆಲೂರು ಸಿರಿ
ಡಾ.ಅಶೋಕ್ ಆಲೂರು
alurashok@gmail.com
ಜಗತ್ತಿನಾದ್ಯಂತ ಕಂಡುಬರುವ ಅಪೌಷ್ಟಿಕತೆ ನಿವಾರಣೆಯಲ್ಲಿ ಜೋಳ ಪ್ರಮುಖ ಪಾತ್ರ ವಹಿಸಿದೆ. ಇಂತಹ ಪರಿಣಾಮ ಕಾರಿ ಆರೋಗ್ಯಕರ ಗುಣಧರ್ಮಗಳನ್ನು ಹೊಂದಿದ ಜೋಳದಿಂದ ಹಲವಾರು ಬಗೆಯ ರುಚಿಕರ ಆಹಾರ ಪದಾರ್ಥ ಗಳನ್ನು ಹಾಗೂ ಖಾದ್ಯಗಳನ್ನು ತಯಾರಿಸಬಹುದಾಗಿದೆ.
ವಿಶ್ವದ ಪ್ರಮುಖ ಆಹಾರ ಬೆಳಗಳಲ್ಲಿ ಒಂದಾಗಿದೆ. ತನ್ನದೇ ಹೆಸರು ಛಾಪಿಸಿದ ಒಣ ಬೇಸಾಯ ಬೆಳೆಗಳಲ್ಲಿ ಜೋಳವು ಪ್ರಮುಖ ಧಾನ್ಯ. ವಾತಾವರಣದ ಹಲವಾರು ವೈಪರೀತ್ಯ ಗಳನ್ನು ಸಹಿಸಿಕೊಂಡು ಬೆಳೆಯುವ ಜೋಳ ಉತ್ತಮ ಪೋಷಕಾಂಶಗಳ ಆಗರ. ಜೋಳ ಪ್ರೋಟೀನು, ವಿಟಾಮಿನ್ಗಳು, ಶಕ್ತಿ ಹಾಗೂ ಲವಣಾಂಶಗಳ ಪ್ರಮುಖ ಮೂಲವಾಗಿದೆ.
ಶುಷ್ಕ ಹಾಗೂ ಅರೆಶುಷ್ಕ ಪ್ರದೇಶಗಳಲ್ಲಿ ಕೋಟ್ಯಂತರ ಜನರ ಆಹಾರವಾಗಿದೆ. ಅಕ್ಕಿ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್, ನಾರಿನಾಂಶ, ಫೊಲಿಕ್ಆಮ್ಲ, ರೈಬೋ ಫ್ಲೆವಿನ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಹಾಗೂ ಬೀಟಾ ಕ್ಯಾರೋಟಿನ್ ಹೊಂದಿದೆ. ಆದ್ದರಿಂದ ಜಗತ್ತಿನಾದ್ಯಂತ ಕಂಡುಬರುವ ಅಪೌಷ್ಟಿಕತೆ ನಿವಾರಣೆಯಲ್ಲಿ ಜೋಳ ಪ್ರಮುಖ ಪಾತ್ರ ವಹಿಸಿದೆ.
ಇಂತಹ ಪರಿಣಾಮಕಾರಿ ಆರೋಗ್ಯಕರ ಗುಣಧರ್ಮಗಳನ್ನು ಹೊಂದಿದ ಜೋಳದಿಂದ ಹಲವಾರು ಬಗೆಯ ರುಚಿಕರ ಆಹಾರ ಪದಾರ್ಥಗಳನ್ನು ಹಾಗೂ ಖಾದ್ಯಗಳನ್ನು ತಯಾರಿಸ ಬಹುದಾಗಿದೆ. ಇಂದಿನ ಅಂಕಣದಲ್ಲಿ ಜೋಳದಿಂದ ತಯಾರಿಸಬಹುದಾದ ವಿವಿಧ ಪ್ರಕಾರದ ಖಾದ್ಯಗಳ ವಿವರಗಳನ್ನು ಹಂಚಿಕೊಳ್ಳಲಾಗಿದೆ.
೧. ಜೋಳದ ಉಪ್ಪಿಟ್ಟು-
ಬೇಕಾಗುವ ಸಾಮಗ್ರಿಗಳು: ಜೋಳದ ರವಾ ೧ ಕಪ್, ಕಡ್ಲೆಬೇಳೆ, ಸಾಸಿವೆಕಾಳು, ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಗಜ್ಜರಿ, ಟೊಮ್ಯಾಟೊ, ಕರಿಬೇವು ಸೊಪ್ಪು, ಕೊತ್ತಂಬರಿ ಸೊಪ್ಪು, ಅವಶ್ಯಕತೆಗೆ ತಕ್ಕಂತೆ ಉಪ್ಪು ಹಾಗೂ ಎಣ್ಣೆ.
ತಯಾರಿಸುವ ವಿಧಾನ: ಒಂದು ಕಪ್ ಜೋಳದ ರವೆಯನ್ನು ಅದು ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿಯಬೇಕು. ಇನ್ನೊಂದು ಹಂಚಿನಲ್ಲಿ ಸಾಸಿವೆ ಕಾಳು, ಕಡಲೆಬೇಳೆ, ಈರುಳ್ಳಿ, ಹಸಿರು ಮೆಣಸಿನಕಾಳು, ಗಜ್ಜರಿ, ಟೊಮ್ಯಾಟೊ ಹಾಗೂ ಕರಿಬೇವು
ಎಲೆಯನ್ನು ಎಣ್ಣೆಯಲ್ಲಿ ಬೇಯಿಸಿರಿ. ಮೂರು ಕಪ್ ನೀರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಕುದಿಯುವವರೆಗೆ ಕಾಯಿಸಿರಿ.
ನೀರು ಕುದಿಯಲು ಪ್ರಾರಂಭಿಸಿದ ನಂತರ ಹುರಿದ ಜೋಳದ ರವೆಯನ್ನು ನಿಧಾನವಾಗಿ ಕುದಿಯುವ ನೀರಿಗೆ ಹಾಕಿರಿ. ರವೆ ಚೆನ್ನಾಗಿ ಬೇಯುವವರೆಗೆ ಸಣ್ಣ ಪ್ರಮಾಣದ ಉರಿಯಲ್ಲಿ ಬೇಯಿಸಿರಿ. ಈಗ ಬಿಸಿ ಬಿಸಿ ಜೋಳದ ಉಪ್ಪಿಟ್ಟನ್ನು ಸ್ವಲ್ಪ ಲಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಬಡಿಸಿರಿ.
೨. ಜೋಳದ ರೊಟ್ಟಿ-ಬೇಕಾಗುವ ಸಾಮಗ್ರಿಗಳು: ಜೋಳದ ಹಿಟ್ಟು ೧೦೦ ಗ್ರಾಂ.
ತಯಾರಿಸುವ ವಿಧಾನ: ಅಳತೆ ಮಾಡಿಕೊಂಡ ಜೋಳದ ಹಿಟ್ಟನ್ನು ಸಾಣಿಗೆಯಿಂದ ಸಾಣಿಸಿ ತದನಂತರ ಕುದಿಯುವ ನೀರು (ಅಳತೆಗೆ ತಕ್ಕಷ್ಟು) ಹಾಕಿ ಹಿಟ್ಟನ್ನು ನಾದಿಕೊಳ್ಳಿರಿ. ಸುಮಾರು ೫೦ ಗ್ರಾಂ ನಷ್ಟು ನಾದಿದ ಹಿಟ್ಟನ್ನು ಚಂಡಿನಾಕಾರದಲ್ಲಿ ಮಾಡಿ ಮಣೆಯ ಮೇಲೆ ಅಥವಾ ಉತ್ತಮ ಮೇಲ್ಮೈ ಹೊಂದಿದ ಕಲ್ಲಿನ ಮೇಲೆ ಲಟ್ಟಣಿಗೆಯಿಂದ ವೃತ್ತಾಕಾರದಲ್ಲಿ ತೀಡಿರಿ ಅಥವಾ
ಕೈಯಿಂದ ತಟ್ಟಿರಿ. ತದನಂತರ ಕಾಯಿಸಿದ ಹಂಚಿನ ಮೇಲೆ ಹಾಕಿ ಒದ್ದೆಯಾದ ಅರಿವೆಯಿಂದ ಮೇಲ್ಮೈ ಮೇಲೆ ನೀರು ಹಚ್ಚಿ, ಮೇಲ್ಮೈ ಬೆಂದ ಮೇಲೆ ಅದನ್ನು ತಿರುವಿ ಹಾಕಿ ಕೆಳಮೈಯನ್ನು ಬೇಯಿಸಿರಿ. ಈಗ ಬಿಸಿ ಬಿಸಿ ಜೋಳದ ರೊಟ್ಟಿ ತಿನ್ನಲು ಕೊಡಿ.
೩. ಜೋಳದ ಕಿಚಡಿ-ಬೇಕಾಗುವ ಸಾಮಗ್ರಿಗಳು:
ಜೋಳದ ರವಾ – ೧ ಕಪ್, ಹೆಸರು ಬೇಳೆ ಅರ್ಧ ಕಪ್, ಸಾಸಿವೆ ಕಾಳು, ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು ಎಲೆ, ಹಸಿ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ, ನೀರು, ಉಪ್ಪು ತಯಾರಿಸುವ ವಿಧಾನ: ಹೆಸರು ಬೇಳೆ ಹಾಗೂ ಜೋಳದ
ರವೆಯನ್ನು ಸುಮಾರು ೧೫ ನಿಮಿಷಗಳವರೆಗೆ ನೆನೆಯಲು ಇಡಬೇಕು. ಸಾಸಿವೆ ಕಾಳು, ಈರುಳ್ಳಿ ಹಸಿರು ಮೆಣಸಿನಕಾಯಿ, ಹಸಿ ಶುಂಠಿ ಹಾಗೂ ಬೆಳ್ಳುಳ್ಳಿ ಪೇಸ್ಟ್, ಟೊಮ್ಯಾಟೊ, ಕರಿಬೇವು ಎಲೆ ಹಾಗೂ ಅರಿಶಿಣ ಪುಡಿ ಸೇರಿಸಿ ಮಸಾಲೆ ತಯಾರಿಸಬೇಕು.
ತದನಂತರ ನೆನೆದ ಹೆಸರುಬೇಳೆ ಹಾಗೂ ಜೋಳದ ರವೆಯನ್ನು ಅವಶ್ಯಕತೆಗೆ ತಕ್ಕಷ್ಟು ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ಸರಿಯಾಗಿ ಬೇಯಿಸಬೇಕು. ಈಗ ಬಿಸಿ ಬಿಸಿ ಜೋಳದ ಕಿಚಡಿ ಸವಿಯಿರಿ.
೪. ಜೋಳದ ಪೊಂಗಲ್-ಬೇಕಾಗುವ ಸಾಮಗ್ರಿಗಳು: ಜೋಳದ ಚೆಕ್ಕೆ/ ಫ್ಲೆಕ್ಸ್ ಅರ್ಧ ಕಪ್, ಹೆಸರು ಬೇಳೆ – ಅರ್ಧ ಕಪ್, ಉಪ್ಪು, ಪುಡಿ ಮಾಡಿದ ಮೆಣಸು, ಜೀರಿಗೆ, ಗೋಡಂಬಿ, ಕರಿಬೇವು ಎಲೆ.
ತಯಾರಿಸುವ ವಿಧಾನ: ಅರ್ಧ ಕಪ್ ಹೆಸರು ಬೇಳೆಯನ್ನು ಅದು ಮೃದುವಾಗುವವರೆಗೆ ಬೇಯಿಸಬೇಕು. ತದನಂತರ
ಅರ್ಧ ಕಪ್ ಜೋಳದ ಚೆಕ್ಕೆ ಅಥವಾ ಫ್ಲೆಕ್ಸ್, ೨ ಕಪ್ ಹಾಲು ಸೇರಿಸಿ ಅದು ಸಂಪೂರ್ಣವಾಗಿ ಮೃದುವಾಗುವರೆಗೆ ಬೇಯಿಸಬೇಕು. ಇದಕ್ಕೆ ರುಚಿಗೆ ಅವಶ್ಯಕವಿರುವಷ್ಟು ಉಪ್ಪು ಪುಡಿ ಮಾಡಿದ ಮೆಣಸು, ಜೀರಿಗೆ, ಗೋಡಂಬಿ, ಕರಿಬೇವು ಎಲೆಯೊಂದಿಗೆ ತಯಾರಿಸಿದ ಮಸಾಲೆ ಹಾಕಿ ಸವಿಯಲು ಉಪಯೋಗಿಸಬೇಕು.
೫. ಜೋಳದ ಸಿಹಿ ಪೊಂಗಲ್-ಬೇಕಾಗುವ ಸಾಮಗ್ರಿಗಳು: ಜೋಳದ ಫ್ಲೆಕ್ಸ್ ಅರ್ಧ ಕಪ್, ಹೆಸರು ಬೇಳೆ ಅರ್ಧ ಕಪ್, ಹಾಲು – ೨ ಕಪ್, ಬೆಲ್ಲ – ೧ ಕಪ್, ಏಲಕ್ಕಿ ಪುಡಿ, ತುಪ್ಪ, ಗೋಡಂಬಿ, ತುರಿದ ಒಣ ಕೊಬ್ಬರಿ. ತಯಾರಿಸುವ ವಿಧಾನ: ಅರ್ಧ ಕಪ್ಪು ಹೆಸರು
ಬೇಳೆಯನ್ನು ಅದು ಸಂಪೂರ್ಣವಾಗಿ ಮೃದುವಾಗುವರೆಗೆ ಕುದಿಸಬೇಕು, ತದನಂತರ ಅರ್ಧಕಪ್ ಜೋಳದ -ಕ್, ಎರಡು ಕಪ್, ಹಾಲು ಹಾಕಿ ಅದು ತುಂಬಾ ಮೃದುವಾಗುವವರೆಗೆ ಬೇಯಿಸಬೇಕು. ನಂತರ ಅದಕ್ಕೆ ಒಂದು ಕಪ್ ಬೆಲ್ಲ, ಏಲಕ್ಕಿ ಪುಡಿ, ತುಪ್ಪ ಹಾಗೂ ಹುರಿದ ಗೋಡಂಬಿಯನ್ನು ತುರಿದ ಒಣ ಕೊಬ್ಬರಿಯೊಂದಿಗೆ ಸೇರಿಸಿದರೆ ಜೋಳದ ಸಿಹಿ ಪೊಂಗಲ್ ಸವಿಯಲು ತಯಾರಿ.
೬. ಜೋಳದ ಇಡ್ಲಿ- ಬೇಕಾಗುವ ಸಾಮಗ್ರಿಗಳು: ಜೋಳದ ಇಡ್ಲಿ ರವಾ – ೩ ಕಪ್, ಉದ್ದಿನ ಬೇಳೆ – ೧ ಕಪ್.
ತಯಾರಿಸುವ ವಿಧಾನ: ರಾತ್ರಿಯಿಡಿ ನೆನೆಸಿದ ಉದ್ದಿನ ಬೇಳೆಯಿಂದ ಬ್ಯಾಟರ್ ತಯಾರಿಸಬೇಕು, ತದನಂತರ ತೊಳೆದ ಜೋಳದ
ರವೆಯನ್ನು ಬ್ಯಾಟರ್ಗೆ ಸೇರಿಸಬೇಕು. ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹುದುಗುವಿಕೆ (ಫರ್ಮೇಂಟೆಶನ್) ಇಡಬೇಕು.
ತದನಂತರ ಸಿದ್ಧವಾದ ಇಡ್ಲಿ ಬ್ಯಾಟರನ್ನು ತುಪ್ಪದಿಂದ ಸವರಿದ ಇಡ್ಲಿ ಪ್ಲೇಟ್ ಗಳಿಗೆ ಹಾಕಿ ೧೫ ರಿಂದ ೨೦ ನಿಮಿಷ ಇಡ್ಲಿ ಕುಕ್ಕರಿನಲ್ಲಿ ಹಾಕಿ ಬೇಯಿಸಬೇಕು. ಈಗ ಬಿಸಿಯಾದ ಜೋಳದ ಇಡ್ಲಿ ಸವಿಯಲು ನೀಡಿ.
೭. ಜೋಳದ ಹಲ್ವಾ-ಬೇಕಾಗುವ ಸಾಮಗ್ರಿಗಳು: ಜೋಳದ ಹಿಟ್ಟು – ೧ ಕಪ್, ಬೆಲ್ಲ ೧ ಕಪ್, ಬೆಣ್ಣೆ ೧ ಕಪ್, ಹಾಲು ೧ ಕಪ್.
ತಯಾರಿಸುವ ವಿಧಾನ: ಒಂದು ಹಂಚಿನಲ್ಲಿ ಜೋಳದ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ತುಪ್ಪವನ್ನು ಸೇರಿಸುತ್ತ ಸುಮಧುರ ವಾಸನೆ ಹಾಗೂ ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿಯಬೇಕು, ತದನಂತರ ಹಾಲು ಸೇರಿಸಿ ಬೇಯಿಸಬೇಕು. ಇದಕ್ಕೆ ಕರಗಿಸಿದ ಬೆಲ್ಲ, ತುಪ್ಪ ಸೇರಿಸಿ ಸರಿಯಾಗಿ ಮಿಶ್ರಣ ಮಾಡಬೇಕು. ಹಾಗೆ ಮಾಡುವಾಗ ಯಾವುದೇ ರೀತಿಯ ಹಿಟ್ಟಿನ ಗಂಟುಗಳು ಉಳಿಯದ ಹಾಗೆ ಎಚ್ಚರಿಕೆಯಿಂದ ಬೇಯಿಸಬೇಕು.
ಬೇಯಿಸುವುದು ಮುಗಿದ ನಂತರ ಸೂಕ್ತ ಆಕಾರದ ಪ್ಲೇಟ್ ಇಲ್ಲವೆ ಮೌಲ್ಡ್ಗೆ ಹಾಕಿ ಆರಿಸಬೇಕು. ಆಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ ಸವಿಯಲು ಕೊಡಬೇಕು