Friday, 13th December 2024

ಸುತ್ತಾಡಿ ಸೋತೆ ಎಂದು ಈವರೆಗೆ ನನಗೆ ಅನಿಸಲೇ ಇಲ್ಲ !

ಇದೇ ಅಂತರಂಗ ಸುದ್ದಿ

vbhat@me.com

ಈ ಬಾರಿ ಹತ್ತು ದಿನಗಳಿಂದ ಇಂಗ್ಲೆಂಡ್ ಪ್ರವಾಸದಲ್ಲಿದ್ದೇನೆ. ಹಾಗೆ ನೋಡಿದರೆ ನನಗೆ ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್ ಸುತ್ತಲಿನ ಯಾವ ದೇಶಗಳೂ ಹೊಸತಲ್ಲ. ಇಂಗ್ಲೆಂಡ್‌ನಲ್ಲೇ ಪತ್ರಿಕೋದ್ಯಮದ ಉನ್ನತ ವ್ಯಾಸಂಗ ಮಾಡುತ್ತಿದಾಗ ಸಾಕಷ್ಟು ಸುತ್ತಾಡಿ ದವ.

ಸುತ್ತಾಟ ನನ್ನ ಬದುಕಿನ ಅವಿಭಾಜ್ಯ ದಿನಚರಿ. ಹೀಗಾಗಿ ಒಮ್ಮೆ ನೋಡಿದ ದೇಶ, ವಿದೇಶ, ರಾಜ್ಯದ ಸ್ಥಳಗಳಾಗಿದ್ದರೂ ಅವಕಾಶ ಸಿಕ್ಕರೆ ಮತ್ತೆ ಮೊದಲಿನ ಕುತುಹಲದಿಂದಲೇ ಸುತ್ತುತ್ತೇನೆ. ಆ ದೃಷ್ಟಿಯಿಂದ ನಾನೊಬ್ಬ ಪಕ್ಕಾ ಅಲೆಮಾರಿ. ಈ ಬಾರಿ ಬ್ರಿಟನ್‌ನ ಲಂಡನ್, ಯೋರ್ಕ್, ಸ್ಕಾಂಟ್ಲೆಂಡ್‌ನ ಡಂಡೀ, ಎಡಿನ್‌ಬರ್ಗ್ ಹೀಗೆ ಸುತ್ತುತ್ತಲೇ ಇದ್ದೇನೆ. ನಿಮ್ಮೊಂದಿಗೆ ಹಂಚಿಕೊಳ್ಳಲು ಸಾಕಷ್ಟು ಸಂಗತಿಗಳಿವೆ. ಬಂದು ಕೆಲ ವಾರಗಳವರೆಗೆ ಬರೆಯುತ್ತೇನೆ.

ಯಾವುದೇ ದೇಶಕ್ಕೆ ಹೋದರೂ, ಬರುವಾಗ ಅಲ್ಲಿನ ನೆನಪಿಗಾಗಿ ಸ್ಮರಣಿಕೆ ಗಳನ್ನು ತರುವುದು ಸಂಪ್ರದಾಯ. ಇನ್ನು ಕೆಲವರು ಚಾಕಲೆಟ್, ಸಿಹಿತಿಂಡಿ ಗಳನ್ನು ತರುತ್ತಾರೆ. ಇನ್ನು ಕೆಲವರು ಕ್ಯಾಪ್, ಟೀ-ಶರ್ಟ್, ಕೀಚೈನ್, ಪೇಪರ್‌ವೇಟ್…  ಇನ್ನಿತರ ವಸ್ತುಗಳನ್ನು ತರುವುದುಂಟು. ನಾಲ್ಕು ವರ್ಷಗಳ ಕೆಳಗೆ ನಾನು ಜರ್ಮನಿಯಿಂದ ಬರುವಾಗ ಸಣ್ಣ ಪೊಟ್ಟಣದಲ್ಲಿ ಕಲ್ಲು, ಕಾಂಕ್ರೀಟ್ ತುಂಡು, ತುಕ್ಕು ಹಿಡಿದ ಕಬ್ಬಿಣಗಳನ್ನು ತೆಗೆದುಕೊಂಡು ಬಂದೆ.

ಅವನ್ನೆಲ್ಲ ಒಂದು ಪೊಟ್ಟಣದಲ್ಲಿ ಹಾಕಿ, ಭದ್ರವಾಗಿ ಕಟ್ಟಿ, ಸರಿಯಾಗಿ ಪ್ಯಾಕ್ ಮಾಡಿ ಸೂಟ್‌ಕೇಸಿನ ಒಂದು ಮೂಲೆಯಲ್ಲಿಟ್ಟು ಹೊತ್ತು ತಂದಿದ್ದೆ. ಏನಿಲ್ಲವೆಂದರೂ ಅದೇ ಅರ್ಧ ಕೆ.ಜಿ.ಯಷ್ಟು ಭಾರವಾಗಿದ್ದಿರಬಹುದು. ಸೂಟ್‌ಕೇಸ್‌ನ್ನು ಬಿಚ್ಚುವಾಗ
ಮನೆಯಲ್ಲಿದ್ದವರಿಗೆ ಕುತೂಹಲ. ಏನು ತಂದಿರಬಹುದು ಎಂಬ ಬಗ್ಗೆ ಆಸಕ್ತಿ. ಈರುಳ್ಳಿ ಸಿಪ್ಪೆ ಬಿಚ್ಚುವಂತೆ, ನಾನು ಒಂದೊಂದೇ
ಪ್ಯಾಕ್‌ಗಳನ್ನು ಬಿಚ್ಚುತ್ತಾ ಹೋದರೆ ಕುತೂಹಲ ಹೆಚ್ಚಾಗುತ್ತಿತ್ತು. ಕೊನೆಯಲ್ಲಿ ತೆರೆದಿಟ್ಟರೆ ಕಲ್ಲು, ಕಾಂಕ್ರೀಟ್, ಕಬ್ಬಿಣ!

‘ಇದೇನು ಈ ಕಲ್ಲು, ಮಣ್ಣುಗಳನ್ನು ಹೊತ್ತು ತಂದಿದ್ದೀರಾ?’ ಎಂದು ಹೆಂಡತಿ ಕೇಳಿದಳು. ನನ್ನ ಮಗ ‘ನೀವೇನೋ ಚಾಕಲೆಟ್ ತಂದಿರಬಹುದು ಅಂದುಕೊಂಡರೆ…?’ ಎಂದು ರಾಗ ಎಳೆದ. ಅಷ್ಟು ದೂರದಿಂದ ಬಂದವ ಇದ್ಯಾಕೆ ಈ ಕೆಲಸಕ್ಕೆ ಬಾರದ
ವಸ್ತುಗಳನ್ನು ತೆಗೆದುಕೊಂಡು ಬಂದರು ಎಂದು ಅನಿಸಿರಬೇಕು. ನಾನು ಜರ್ಮನಿಯ ಬರ್ಲಿನ್ ಗೋಡೆಯ ಅವಶೇಷಗಳನ್ನು
ಅಲ್ಲಿಗೆ ಭೇಟಿ ನೀಡಿದ್ದರ ದ್ಯೋತಕವಾಗಿ ತೆಗೆದುಕೊಂಡು ಬಂದಿದ್ದೆ. ಅಲ್ಲದೇ ನನಗೆ ಅದು ಕಾಂಕ್ರೀಟ್ ಚೂರು, ಕಲ್ಲು, ಮಣ್ಣು ಗಳಾಗಿರಲಿಲ್ಲ. ನನ್ನ ಪಾಲಿಗೆ ಅವು ಇತಿಹಾಸದ ತುಣುಕುಗಳಾಗಿದ್ದವು. ಅವುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ.

ನನ್ನಂಥ ‘ಬಕರಾ’ಗಳು ಅವುಗಳಿಗೆ ಬೆಲೆ ಕಟ್ಟಲು ಸಾಧ್ಯವಾಗದ ಇತಿಹಾಸದ ತುಣುಕುಗಳು ಎಂದು ಭಾವಿಸಿದ್ದರಿಂದ, ಬರ್ಲಿನ್ ನಗರದಲ್ಲಿ ಈ ಸಾಮಾನುಗಳನ್ನು ಮಾರುವುದು ದೊಡ್ಡ ಬಿಜಿನೆಸ್. ಯಾವುದೇ ಪ್ರವಾಸಿ ಆಸಕ್ತ ಅಂಗಡಿಗೆ ಹೋದರೂ ಬರ್ಲಿನ್ ಗೋಡೆ ಅವಶೇಷಗಳನ್ನು ಮಾರಾಟಕ್ಕಿಟ್ಟಿರುವುದನ್ನು ನೋಡಬಹುದು. ರವೆ ಉಂಡೆಯಷ್ಟು ಚಿಕ್ಕದಾದ ಕಾಂಕ್ರೀಟ್ ತುಂಡನ್ನು ಸಹ ಗಾಜಿನ ಪೆಟ್ಟಿಗೆಯಲ್ಲಿಟ್ಟು ಇತಿಹಾಸದ ಅಮೂಲ್ಯ ವಸ್ತು ಎಂಬಂತೆ ಮಾರಾಟ ಮಾಡುತ್ತಾರೆ. ಅಂಥ ಒಂದು ಚಿಕ್ಕ ತುಂಡಿಗೆ ಹತ್ತರಿಂದ ಹದಿನೈದು ಯುರೋ.

ಅಂದರೆ ಸುಮಾರು 850 ರಿಂದ 1200ರುಪಾಯಿ. ಅಷ್ಟು ಸಣ್ಣ ಕಲ್ಲಿಗೆ, ತುಕ್ಕುಹಿಡಿದ ಕಬ್ಬಿಣದ ಚೂರಿಗೆ ಅಷ್ಟು ಹಣ ಕೊಡಬೇಕಾ ಎಂದು ಯಾರಿಗಾದರೂ ಸಂಕಟವಾಗದೇ ಇರದು. ಆದರೆ ಅದು ಈ ಜಗತ್ತಿನ ಇತಿಹಾಸದಲ್ಲಿ ಮಹತ್ವದ ಮೈಲಿ ಗಲ್ಲುಗಳಲ್ಲೊಂದು. ಪೂರ್ವ ಹಾಗೂ ಪಶ್ಚಿಮ ಜರ್ಮನಿಗಳನ್ನು ಬೇರ್ಪಡಿಸಿದ ಆ ಗೋಡೆ ನೆಲಸಮವಾದಾಗ, ಗೋಡೆಯ ಅವಶೇಷಗಳನ್ನು ಜಗತ್ತಿನಿಂದ ಬಂದವರೆಲ್ಲ ನೆನಪಿಗಾಗಿ ತೆಗೆದುಕೊಂಡು ಹೋಗಲಾರಂಭಿಸಿದರು. ಈಗ ಆ ಸಣ್ಣ ಸಣ್ಣ ಚೂರು ಕಲ್ಲು, ಕಾಂಕ್ರೀಟುಗಳಿಗೂ ಭಾರೀ ಬೆಲೆ!

ಬರ್ಲಿನ್‌ಗೋಡೆ ಅಂದರೆ ನನಗಿದ್ದ ಕಲ್ಪನೆಯೇ ಬೇರೆಯಾಗಿತ್ತು. ಹೈಸ್ಕೂಲ್‌ನಲ್ಲಿ, ಕಾಲೇಜಿನಲ್ಲಿ ಓದುವಾಗ ಈ ಗೋಡೆಯ ಪ್ರಸ್ತಾಪ ಬಂದಾಗಲೆಲ್ಲ ಒಂದೆರಡು ಕಿಮಿ ಉದ್ದದ, ಏಳೆಂಟು ಅಡಿ ಎತ್ತರದ ಗೋಡೆಯಾಗಿರಬಹುದು ಎಂದುಕೊಂಡಿದ್ದೆ.
ನಾನು ‘ಸಂಯುಕ್ತ ಕರ್ನಾಟಕ’ ಸೇರಿದಾಗ, ಅಂದಿನ ಸಂಪಾದಕರಾದ ಆರ್.ಎ. ಉಪಾಧ್ಯ ಅವರೊಂದಿಗೆ ಮಾತಾಡುವಾಗ,
ಬರ್ಲಿನ್‌ನಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಪ್ರಸ್ತಾಪವಾಗುತ್ತಿತ್ತು. ಆಗ ತಾನೆ ಬರ್ಲಿನ್ ಗೋಡೆ ನೆಲಸಮ ಕಾರ್ಯ
ಆರಂಭಿಸಲಾಗಿತ್ತು. ಬರ್ಲಿನ್‌ನಲ್ಲಿನ ವಿದ್ಯಮಾನಗಳ ಬಗ್ಗೆ ನನ್ನ ಆಸಕ್ತಿ, ವಿಶ್ಲೇಷಣೆ ಗಮನಿಸಿದ ಉಪಾಧ್ಯರು, ‘ಮುಂದಿನ ತಿಂಗಳ ‘ಕಸ್ತೂರಿ’ಗೆ ಇದೇ ವಿಷಯವಾಗಿ ಕವರ್‌ಪೇಜ್ ಲೇಖನ ಬರೆದುಕೊಡಿ’ ಎಂದು ಹೇಳಿದರು.

ಆಗ ರವಿ ಬೆಳಗೆರೆ ‘ಕಸ್ತೂರಿ’ ಸಂಪಾದಕರಾಗಿದ್ದರು. ನಾನು 1990ರ ಡಿಸೆಂಬರ್ ಸಂಚಿಕೆ (ನನ್ನ ನೆನಪು ಪಕ್ಕಾ ಆಗಿದೆಯೆಂದು ಅಂದುಕೊಂಡಿದ್ದೇನೆ)ಗೆ ಬರ್ಲಿನ್ ಗೋಡೆ ಹಿನ್ನೆಲೆ ಹಾಗೂ ಪೂರ್ವ-ಪಶ್ಚಿಮ ಜರ್ಮನಿಗಳು ಒಂದಾದ
ಐತಿಹಾಸಿಕ ಘಟನೆ ಬಗ್ಗೆ ಸುಮಾರು ಹದಿನೈದು ಪುಟಗಳ ಲೇಖನ ಬರೆದಿದ್ದೆ.(ಇತ್ತೀಚಿನವರೆಗೂ ಆ ಸಂಚಿಕೆ ನನ್ನ ಸಂಗ್ರಹದಲ್ಲಿತ್ತು. ಮೊನ್ನೆ ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ.) ಅಂದಿನಿಂದ ಬರ್ಲಿನ್ ಗೋಡೆ ಬಗ್ಗೆ ನನಗೆ ಏನೋ ವ್ಯಾಮೋಹ, ಏನೋ ಆಸಕ್ತಿ. ಈ ಮೊದಲು ಜರ್ಮನಿಗೆ ಹೋಗಿದ್ದರೂ ಬರ್ಲಿನ್‌ಗೆ ಹೋಗಲು ಆಗಿರಲಿಲ್ಲ.

ಈ ಸಲ ಮುದ್ದಾಂ ಹೋಗಲೇಬೇಕೆಂದು ನಿರ್ಧರಿಸಿದ್ದೆ. (ಆಮೇಲೆ ಎರಡು ಮೂರು ಸಲ ಹೋಗಿಬಂದೆ ಎಂಬುದು ಬೇರೆ ಮಾತು) 1961ರಿಂದ 1989ರವರೆಗೆ ಈ ಗೋಡೆ ಪೂರ್ವ ಹಾಗೂ ಪಶ್ಚಿಮ ಜರ್ಮನಿಗಳನ್ನು ಬೇರ್ಪಡಿಸಿತ್ತು.
ಬರ್ಲಿನ್ ಗೋಡೆಯ ಉದ್ದ ಸುಮಾರು 155 ಕಿಮಿ. ಈ ಗೋಡೆಯುದ್ದಕ್ಕೂ 150 ವಾಚ್ ಟವರ್‌ಗಳನ್ನು ನಿರ್ಮಿಸಲಾಗಿತ್ತು.
ಕೆಲವೆಡೆ ಗೋಡೆಯ ಎತ್ತರ ಹದಿನೈದು ಅಡಿಗಳಷ್ಟು. ಮೊದಲು ಗೋಡೆ ಎಲ್ಲಿತ್ತೋ, ಅಲ್ಲಿ ಈಗ ಗೋಡೆ ಇಲ್ಲ. ಆದರೆ ಗೋಡೆ
ಇದ್ದ ಜಾಗದ ಗುರುತನ್ನು ಹಾಗೇ ಬಿಡಲಾಗಿದೆ.

ಪ್ರತಿ ಹತ್ತು ಮೀಟರ್ ದೂರದಲ್ಲಿ ಹಿತ್ತಾಳೆಯಲ್ಲಿ ಬರ್ಲಿನ್ ಗೋಡೆ (1961-1989) ಎಂದು ಬರೆಯಲಾಗಿದೆ. ಬರ್ಲಿನ್ ನಗರದ ‘ಚೆಕ್ ಪಾಯಿಂಟ್ ಚಾರ್ಲಿ’ ಎಂಬ ಪ್ರದೇಶದಲ್ಲಿ ಸುಮಾರು ನಲವತ್ತು-ಐವತ್ತು ಮೀಟರ್ ಉದ್ದದಲ್ಲಿ ಕಟ್ಟಲಾದ
ಗೋಡೆಯನ್ನು ಕೆಡವದೇ ನೆನಪಿಗಾಗಿ ಹಾಗೇ ಬಿಡಲಾಗಿದೆ. ಗೋಡೆ ಧ್ವಂಸವಾಗಿ 32 ವರ್ಷಗಳಾದವು. ಆದರೆ ಅದರ
ಅವಶೇಷಗಳಿಗೆ ಇಂದು ಭಾರೀ ಬೆಲೆ. ಗೋಡೆ ಇದ್ದಾಗ ಅದಕ್ಕೆ ಬೆಲೆ ಇರಲಿಲ್ಲ. ಕೆಡವಿದ ನಂತರವೇ ಅದಕ್ಕೆ ಎಲ್ಲಿಲ್ಲದ ಬೆಲೆ. ಕೆಡವಿದ ಗೋಡೆಯ ಅವಶೇಷಗಳನ್ನು ಮಾರಾಟ ಮಾಡಿ ಜರ್ಮನ್‌ರು ಅವೆಷ್ಟು ಕೋಟಿ ಸಂಪಾದಿಸಿದರೋ ಆ ದೇವರೇ ಬಲ್ಲ. ಬರ್ಲಿನ್ ನಿಂದ ಸಣ್ಣ ಕಾಂಕ್ರೀಟ್ ತುಂಡು ತಂದರೂ, ಅದು ಬರ್ಲಿನ್ ಗೋಡೆಯ ಅವಶೇಷ ಅಂದರೆ ಸಾಕು ಅದನ್ನು ಖರೀದಿ ಸುವವರಿದ್ದಾರೆ.

‘ಕಾಶಿಯಿಂದ ಯಾವ ನೀರು ತಂದರೂ ಅದು ಗಂಗಾಜಲ’ ಎಂಬ ಹಾಗೆ ಬರ್ಲಿನ್‌ನಲ್ಲಿ ಸಿಕ್ಕ ಕಟ್ಟಡದ ಅವಶೇಷಗಳೆಲ್ಲ
ಇತಿಹಾಸದ ತುಣುಕುಗಳೇ. ಅದು ಯಾವುದೋ ನೆಲಸಮವಾದ ಕಟ್ಟಡದ ಅವಶೇಷವೋ, ಬರ್ಲಿನ್ ಗೋಡೆಯ ಭಾಗವೋ
ಎಂದು ನಿರ್ಧರಿಸುವುದು ಕಷ್ಟ. ಆದರೆ ಆ ನಗರದಲ್ಲಿ ಸಿಗುವ ಪ್ರತಿ ಅವಶೇಷಕ್ಕೂ, ಇತಿಹಾಸದ ಭಾಗವಾಗುವ ಸಾಧ್ಯತೆಯಿದೆ.

ಗುಟ್ಟು ಬಿಡದ ನಗರಗಳು

ಕಳೆದ ಬಾರಿ ಅಮೆರಿಕಕ್ಕೆ ಹೋದಾಗ ನ್ಯೂಯಾರ್ಕಿನಲ್ಲಿ ಐದು ದಿನವಿದ್ದೆ. ಆ ನಗರ ಅತ್ಯಂತ ಕ್ರಿಯಾಶೀಲ, ಜನನಿಬಿಡ ಪ್ರದೇಶ ವೆಂದೇ ಪ್ರಸಿದ್ಧವಾದ ‘ಟೈಮ್ಸ್ ಸ್ಕ್ವೇರ್’ಗೆ ಸನಿಹದಲ್ಲಿರುವ ‘ಹೋಟೆಲ್ ಎಡಿಸನ್’ನಲ್ಲಿ ತಂಗಿದ್ದೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಝಗಮಗಿಸುವ ‘ಟೈಮ್ಸ್ ಸ್ಕ್ವೇರ್’ನ ಪ್ರಕಾಶಮಾನ ದೀಪಗಳು ನನ್ನ ರೂಮಿ ನೊಳಗೆ ತೂರಿ ಬರುತ್ತಿದ್ದವು.

ಒಂದು ರಾತ್ರಿ ಸ್ನೇಹಿ ತನೊಂದಿಗೆ, ಬೆಳಗಿನ ಜಾವ ಮೂರು ಗಂಟೆಗೆ ಎದ್ದು ‘ಟೈಮ್ಸ್ ಸ್ಕ್ವೇರ್’ಗೆ ಹೋದರೆ, ಜನಜಂಗುಳಿ ಗಿಜಗುಡುತ್ತಿತ್ತು. ಅಲ್ಲಿ ಸುಳಿದಾಡುತ್ತಿದ್ದವರನ್ನು ನೋಡಿದರೆ, ಯಾರ ಮುಖದಲ್ಲೂ ನಿದ್ದೆಯ ಸುಳಿವು ಕಾಣುತ್ತಿರಲಿಲ್ಲ. ನನಗೆ ನಿದ್ದೆಯ ಒಂದು ಕೋಟಾ ಮುಗಿದಿತ್ತು. ನಾನು ಹಾಗೂ ನನ್ನ ಸ್ನೇಹಿತ ಒಂದೂ ಮಾತಾಡದೇ, ಸುಮ್ಮನೆ ಹೋಗಿ ಬರುವವ ರನ್ನು ನೋಡುತ್ತ ಕುಳಿತಿದ್ದೆವು. ಎರಡು ತಾಸು ಕಳೆದಿದ್ದೇ ತಿಳಿಯಲಿಲ್ಲ. ಜನಜಂಗುಳಿ ಕರಗುವ ಯಾವ ಸೂಚನೆಯೂ ಕಾಣ ಲಿಲ್ಲ.

ಇನ್ನೊಂದು ಸಲ ಬೆಳಗ್ಗೆ ಐದೂವರೆಗೆ ಎದ್ದು ‘ಟೈಮ್ಸ್ ಸ್ಕ್ವೇರ್’ನತ್ತ ಹೆಜ್ಜೆ ಹಾಕಿದೆ. ಆಗಲೂ ಆ ಪ್ರದೇಶ ತೂಕಡಿಸದೇ ಜಾಗೃತವಾಗಿತ್ತು. ಅಲ್ಲಿದ್ದ ಯಾರೂ ಟೈಮ್ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆಂದು ಅನಿಸಲಿಲ್ಲ. ನನಗೇನೋ ನಿದ್ದೆ ಮುಗಿದಿತ್ತು. ಆದರೆ ಅಲ್ಲಿದ್ದವರೆಲ್ಲ ಮುಗಿಯದ ರಾತ್ರಿಯ ಸೊಬಗನ್ನು ವಿಸ್ತರಿಸುತ್ತಾ ಅಲ್ಲಿ ಅಲೆದಾಡುತ್ತಿದ್ದರು. ಒಂದಂತೂ ನಿಜ, ‘ಟೈಮ್ಸ್ ಸ್ಕ್ವೇರ್’ನಲ್ಲಿ ನಿಂತರೆ, ಟೈಮ್ ಹೋಗಿದ್ದೂ ಗೊತ್ತಾಗುವುದಿಲ್ಲ, ನಿಂತಿದ್ದೂ ಗೊತ್ತಾಗುವುದಿಲ್ಲ. ಇಡೀ ಜಗತ್ತನ್ನು ಬಸಿದು ಇಟ್ಟಂತೆ ಭಾಸವಾಗುವ ಪ್ರದೇಶವಿದು.

ಅದು ದಿನದ ೨೪ ಗಂಟೆ, ವಾರದ ಏಳು ದಿನ, ವರ್ಷವಿಡೀ ದಟ್ಟೈ ಸುವ ಸಂತೆಪೇಟೆ. ‘ಟೈಮ್ಸ್ ಸ್ಕ್ವೇರ್’ ಎಂದಿಗೂ ನಿದ್ರಿಸುವು ದಿಲ್ಲ. ಕಾರಣ ಅಲ್ಲಿ ಒಂದು ಕ್ಷಣವೂ ಕತ್ತಲು ಆವರಿಸುವುದಿಲ್ಲ. ಚಂದ್ರಲೋಕದಿಂದಲೂ ‘ಟೈಮ್ಸ್ ಸ್ಕ್ವೇರ್’ ಝಗಮಗ ಬೆಳಕು ಕಾಣಿಸುತ್ತದೆಯಂತೆ. ನಾನು ಹೊತ್ತು ಗೊತ್ತು ಇಲ್ಲದೇ ಈ ಪ್ರದೇಶದ ಎಲ್ಲಾ ಹಾದಿಬೀದಿಗಳಲ್ಲಿ ಅಲೆದಿದ್ದೇ ಅಲೆದಿದ್ದು. ಅಲ್ಲದೇ ಈ ಪ್ರದೇಶದಲ್ಲಿ ವಿಖ್ಯಾತ ಬ್ರಾಡ್‌ವೇ ಥಿಯೇಟರ್ ಗಳಿವೆ. ಜಗತ್ತಿನ ಎಲ್ಲೆಲ್ಲಿಂದಲೋ ಜನ ಇಲ್ಲಿಗೆ ಬರುತ್ತಾರೆ.

ನಾನು ಹೆಗಲಿಗೆ ಬ್ಯಾಗ್ ಏರಿಸಿಕೊಂಡು ಬೆಳಗ್ಗೆ ಎಂಟಕ್ಕೆ, ಗೊತ್ತು ಗುರಿಯಿಲ್ಲದೇ, ದಾರಿ ತಪ್ಪಿಸಿಕೊಳ್ಳಲೆಂದೇ ಹೊರಟರೆ
ಇನ್ನೆಲ್ಲಿಗೋ ತಲುಪುತ್ತಿದ್ದೆ. ಅಷ್ಟೊತ್ತಿಗೆ ಸಾಯಂಕಾಲ ಏಳು ಗಂಟೆಯಾಗುತ್ತಿತ್ತು. ನಾನು ನನ್ನ ಹೋಟೆಲ್‌ನಿಂದ ಸುಮಾರು ೧೮-೨೦ ಕಿಮೀ ದೂರದಲ್ಲಿರುತ್ತಿದ್ದೆ. ಅಲ್ಲಿಂದ ಟ್ಯಾಕ್ಸಿಯಲ್ಲಿ ವಾಪಸ್ ಹೊಟೇಲ್‌ಗೆ ಬರುವ ಹೊತ್ತಿಗೆ ರಾತ್ರಿ ಎಂಟಾಗಿರುತ್ತಿತ್ತು. ಕಾಲಿನ ಸ್ನಾಯುಗಳು ಚೀರಿಕೊಂಡು ಚಡಪಡಿಸುತ್ತಿದ್ದವು. ಅಷ್ಟೊತ್ತಿಗೆ ಮೊಬೈಲ್‌ನಲ್ಲಿ ಸಾವಿರಾರು ಫೋಟೊಗಳು ಜಮಾ ಆಗಿರುತ್ತಿದ್ದವು.

ನೋಡಿದ್ದೆಲ್ಲವೂ ಹೊಸತು. ಮತ್ತಷ್ಟು ನೋಡಬೇಕೆಂಬ ತುಡಿತ. ಹೀಗೆ ನಿರ್ದಿಷ್ಟ ಗುರಿ, ಉದ್ದೇಶವಿಲ್ಲದೇ ಅಪರಿಚಿತ ಪ್ರದೇಶ ದಲ್ಲಿ ಅಮಾಯಕನಂತೆ ಅಲೆಯುವ ಸುಖವೇ ಸುಖ! ಸುಮಾರು ಎಂಬತ್ತಾರು ಲಕ್ಷ ಜನಸಂಖ್ಯೆಯಿರುವ ನ್ಯೂಯಾರ್ಕ್ ನಗರದಲ್ಲಿ ಓಡಾಡುವಾಗ, ಅದು ಅಸುರಕ್ಷಿತ ನಗರ ಎಂದು ಎಂದೂ ಅನಿಸಲಿಲ್ಲ. ‘ಎಲ್ಲಿಂದಲೋ ಬಂದವರ’ ನಾಡಿನಲ್ಲಿ ಮೂಲನಿವಾಸಿಗಳು ಕಮ್ಮಿಯೇ. ಆದರೆ ಮೊನ್ನೆ ಪತ್ರಿಕೆಯಲ್ಲಿ ಓದುತ್ತಿದ್ದೆ. ಕಳೆದ ವಾರವಿಡೀ ನ್ಯೂಯಾರ್ಕ್ ನಗರದಲ್ಲಿ ಶೂಟಿಂಗ್ ಅಥವಾ ಶೂಟೌಟ್ ಪ್ರಕರಣ ಜರುಗಲಿಲ್ಲವಂತೆ.

ಕಳೆದ ಇಪ್ಪತ್ತೈದು-ಮೂವತ್ತು ವರ್ಷಗಳಲ್ಲಿ, ಇದೇ ಮೊದಲ ಬಾರಿಗೆ ಯಾವುದೇ ಶೂಟಿಂಗ್ ಇಲ್ಲದ ವಾರವೆಂದರೆ ಕಳೆದ ವಾರವೇ ಅಂತೆ. ನಮ್ಮ ಜತೆಯಲ್ಲಿರುವ ಸ್ನೇಹಿತರಂತೆ, ನಗರಗಳೂ ತಮ್ಮ ಗುಟ್ಟು ಬಿಟ್ಟುಕೊಡುವುದಿಲ್ಲ!

ಜೂಜುಗಾರರಿಗೊಂದು ಸಲಹೆ
ಕಾಠ್ಮಂಡುವಿನಲ್ಲಿ ಒಂದು ರೆಸ್ಟೋರೆಂಟ್ ಇದೆ. ಜೂಜುಕೋರರಿಗೆಂದೇ ಮೀಸಲಾದದ್ದು. ಬಹಳ ಕಡಿಮೆ ಬೆಲೆಗೆ ಊಟ,
ತಿಂಡಿಗಳು ಅಲ್ಲಿ ಸಿಗುತ್ತವೆ. ಸಾಮಾನ್ಯವಾಗಿ ಜೂಜಿನಲ್ಲಿ ಸೋತವರು, ದಾರಿ ಖರ್ಚಿಗೆಂದು ಉಳಿಸಿಕೊಂಡು ಇರುತ್ತಾರಲ್ಲ,
ಅಂಥವರಿಗಾಗಿ ಇರುವ ರೆಸ್ಟೋರೆಂಟ್ ಅದು. ಆ ಹೋಟೆಲ್‌ನ ಮಾಲೀಕ ಬಹಳ ಶಾಣ್ಯಾ ಇರಬೇಕು. ತನ್ನ ಹೋಟೆಲ್‌ನ ಮುಂದೆ ಒಂದು ಬೋರ್ಡ್ ಹಾಕಿದ್ದಾನೆ- ‘Eating your betting money and don’t bet on your eating money’

ಯಾರ ನಾಯಿ ಚೆನ್ನಾಗಿದೆ?
ಆ ಇಬ್ಬರು ಸ್ನೇಹಿತರು ಯಾರ ನಾಯಿ ಚೆನ್ನಾಗಿದೆ ಎಂಬ ಬಗ್ಗೆ ತಮ್ಮ ತಮ್ಮಲ್ಲೇ ವಾದ ಮಾಡುತ್ತಿದ್ದರು. ಮೊದಲನೆಯವ
ಹೇಳಿದ- ‘ನನ್ನ ನಾಯಿಯೇ ಸ್ಮಾರ್ಟ್ ಆಗಿದೆ.’ ಅದಕ್ಕೆ ಎರಡನೆಯವ, ‘ಹೇಗೆ ಹೇಳ್ತೀಯಾ?’ ಎಂದು ಕೇಳಿದ. ‘ನೋಡು, ನನ್ನ ನಾಯಿ ಪ್ರತಿದಿನ ಬೆಳಗ್ಗೆ ಹೊರಗೆ ಬಿದ್ದ ದಿನಪತ್ರಿಕೆಗಳನ್ನೆಲ್ಲ ಎತ್ತಿತಂದು ನನ್ನ ಮಂಚದ ಮೇಲಿಡುತ್ತದೆ.

ನಂತರ ಹೊರಗೆ ಇಟ್ಟಿರುವ ಹಾಲಿನ ಪೊಟ್ಟಣಗಳನ್ನು ಅಡುಗೆ ಮನೆಯಲ್ಲಿ ಇಡುತ್ತದೆ. ಹೂ ಮಾರುವವಳಿಂದ ಹೂಗಳನ್ನು ತಂದು, ದೇವರ ಮನೆ ಮುಂದೆ ಇಡುತ್ತದೆ. ನಂತರ ಕೆಲಸದವಳು ಬರುತ್ತಾಳೆ. ಅವಳು ಬೆಲ್ ಮಾಡುತ್ತಿದ್ದಂತೆ ಬಾಗಿಲನ್ನು ತೆರೆಯುತ್ತದೆ. ನಂತರ ನ್ಯೂಸ್ ಚಾನೆಲ್ ಆನ್ ಮಾಡಿ, ನನ್ನನ್ನು ಎಬ್ಬಿಸುತ್ತದೆ’ ಎಂದು ಮೊದಲನೆಯವ ತನ್ನ ನಾಯಿ ಬಗ್ಗೆ ಕೊಚ್ಚಿಕೊಂಡ.

ಅದಕ್ಕೆ ಎರಡನೆಯವ ‘ನನಗೆ ಗೊತ್ತು’ ಎಂದ. ‘ನಿನಗೆ ಹೇಗೆ ಗೊತ್ತು?’ ಎಂದು ಕೇಳಿದ ಮೊದಲನೆಯವ. ಅದಕ್ಕೆ ಎರಡನೆ ಯವ ಹೇಳಿದ- ‘ನನ್ನ ನಾಯಿ ನನಗೆ ಎಲ್ಲವನ್ನೂ ಹೇಳುತ್ತದೆ.’

ಪತ್ರಿಕೆಯಲ್ಲಾಗುವ ತಪ್ಪು ಶಾಶ್ವತ
ನ್ಯೂಸ್ ಚಾನೆಲ್‌ನಲ್ಲಿ ಕೆಲಸ ಮಾಡುವವರು ಬ್ರೇಕಿಂಗ್ ನ್ಯೂಸ್ ಅನ್ನು ಬಿತ್ತರಿಸುವಾಗ, ಕಾಗುಣಿತ ದೋಷಗಳ ಬಗ್ಗೆ
ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲರಿಗಿಂತ ಮೊದಲು ತಾವೇ ಸುದ್ದಿಯನ್ನು ಬ್ರೇಕ್ ಮಾಡಬೇಕು ಎಂಬ ಧಾವಂತದಲ್ಲಿ ಒಮ್ಮೊಮ್ಮೆ ತಪ್ಪುಗಳಾಗುತ್ತವೆ. ಮೊದಲು ಬ್ರೇಕ್ ಮಾಡಿದ ನಂತರ, ಕಾಗುಣಿತ ದೋಷವಿರುವುದು ಗಮನಕ್ಕೆ ಬರುತ್ತದೆ.

ನಂತರ ಅದನ್ನು ಸರಿ ಪಡಿಸುತ್ತಾರೆ. ಇದನ್ನೇ ಕೆಲವರು ಫೋಟೊ ಹೊಡೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಗೇಲಿ ಮಾಡುತ್ತಾರೆ. ನ್ಯೂಸ್ ಚಾನೆಲ್‌ಗಳು ಕನ್ನಡವನ್ನು ಕೊಲೆ ಮಾಡಿದವು, ಭಾಷೆ ಗೊತ್ತಿಲ್ಲ ದವರು ಚಾನೆಲ್‌ಗಳನ್ನು ಸೇರಿಕೊಂಡರೆ ಹೀಗೇ ಆಗೋದು ಎಂದು ಕಾಮೆಂಟ್ ಮಾಡುತ್ತಾರೆ. ಆದರೆ ಈ ರೀತಿ ಪ್ರತಿಕ್ರಿಯಿಸುವವರಿಗೆ, ನ್ಯೂಸ್ ಚಾನೆಲ್‌ನಲ್ಲಿ ಕೆಲಸ ಮಾಡುವವರ ಒತ್ತಡ, ಕಾರ್ಯವೈಖರಿ ಗೊತ್ತಿರುವುದಿಲ್ಲ. ಸುಮ್ಮನೆ ಕಾಮೆಂಟ್ ಮಾಡುತ್ತಾರೆ.

‘ಬೈಕಿಗೆ ಹಂದಿ ಡಿಕ್ಕಿ: ಎರಡು ಸಾವು’ ಎಂಬ ಬ್ರೇಕಿಂಗ್ ನ್ಯೂಸ್ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಹಾಗೆಯೇ, ‘ದೋಣಿಯಲ್ಲಿ ಸಾಗುತ್ತಿದ್ದ ಐವರು ಭಯಗೊಂಡು ಸಾವು’ ಎಂಬ ಶೀರ್ಷಿಕೆಯೂ ಜಾಲತಾಣಿಗರ ಟೀಕೆಗೆ ಗುರಿಯಾಗಿತ್ತು. Five people feared dead ಎಂಬುದನ್ನು ಡೆಸ್ಕ್ ನಲ್ಲಿರುವ ಉಪಸಂಪಾದಕ ತಪ್ಪಾಗಿ ಅನುವಾದ ಮಾಡಿದ್ದ. ಇದು ಉಪ ಸಂಪಾದಕನ ಮೂರ್ಖತನ. ಏಕ ಕಾಲದಲ್ಲಿ ಭಯ ಭೀತರಾಗಿ ಐವರು ಹೇಗೆ ಸಾಯಲು ಸಾಧ್ಯ ಎಂಬ ಸಾಮಾನ್ಯಜ್ಞಾನವೂ ಇಲ್ಲದ್ದರಿಂದ ಆ ಅವಾಂತರವಾಗಿತ್ತು.

ಕೆಲವು ಸಲ ಅಕ್ಷರಗಳ ಸ್ಥಾನ ಪಲ್ಲಟದಿಂದಲೂ ದೋಷಗಳಾಗುವುದುಂಟು. ಹಸ್ತಾಕ್ಷರದಲ್ಲಿ ಬರೆದುಕೊಟ್ಟಿದ್ದನ್ನು ಕಂಪೋಸಿಟರ್ ಗಳು ತಪ್ಪಾಗಿ ಭಾವಿಸಿ ಅಥವಾ ಕಣ್ತಪ್ಪಿನಿಂದ ಏನೋ ಟೈಪಿಸಿ ಅವಾಂತರ ಮಾಡುವುದುಂಟು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನಿಧನರಾದಾಗ, ಎಲ್ಲ ಚಾನೆಲ್‌ಗಳು ಅವರ ಅಂತ್ಯಸಂಸ್ಕಾರವನ್ನು ಲೈವ್ ಪ್ರಸಾರ ಮಾಡಿದವು ತಾನೆ? ಬಂಗಾರಪ್ಪ ಪುತ್ರ ಮಧು, ತಂದೆಯವರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದಾಗ, ನ್ಯೂಸ್ ಚಾನೆಲ್ಲೊಂದು, ‘ಚಿತೆಗೆ ಅಗ್ನಿಸ್ಪರ್ಶ ಮಾಡಿದ ಮಧು ಬಂಗಾರಪ್ಪ’ ಎಂಬ ಬ್ರೇಕಿಂಗ್ ನ್ಯೂಸ್ ತೋರಿಸುವ ಬದಲು ‘ಚಿರತೆಗೆ ಅಗ್ನಿ ಸ್ಪರ್ಶ ಮಾಡಿದ ಮಧು ಬಂಗಾರಪ್ಪ’ ಎಂದು ತೋರಿಸಿತ್ತು.

ತಕ್ಷಣ ಈ ತಪ್ಪನ್ನು ಸರಿಪಡಿಸಲಾಯಿತಾದರೂ, ಎರಡು ಸಲ ಇದೇ ಬ್ರೇಕಿಂಗ್ ನ್ಯೂಸ್ ಪರದೆ ಮೇಲೆ ಸರಿದುಹೋಯಿತು. ಆ
ಶೋಕದ ಸಮಯದಲ್ಲೂ ಟಿವಿ ವೀಕ್ಷಕರು ನಗುವಂತಾಯಿತು!

ಟಿವಿಯಲ್ಲಿ ಮಾಡುವ ಇಂತಹ ತಪ್ಪುಗಳನ್ನು ಸರಿಪಡಿಸಲು ಅವಕಾಶ ಇರುತ್ತದೆ. ಆದರೆ ಪತ್ರಿಕೆಯಲ್ಲಾಗುವ ಪ್ರಮಾದ ಮಾತ್ರ ಶಾಶ್ವತ. ಟಿವಿಯಲ್ಲಿ ಕೆಲಸ ಮಾಡುವ ಉಪ ಸಂಪಾದಕರಿಗಿಂತ, ಪತ್ರಿಕೆಯಲ್ಲಿ ಕೆಲಸ ಮಾಡುವವವರಿಗೆ ಹೆಚ್ಚು ಸಮಯ
ಸಿಗುತ್ತದೆ. ತಾವು ಬರೆದಿದ್ದನ್ನು ಮತ್ತೊಮ್ಮೆ ಓದುವ ಅವಕಾಶವಿರುತ್ತದೆ. ಆದರೂ ತಪ್ಪು ಮಾಡಿದರೆ, ಅದು ಮೂರ್ಖತನ. ಇಲ್ಲವೇ ಬೇಜವಾಬ್ದಾರಿತನ. ಪತ್ರಿಕೆಯಲ್ಲಾಗುವ ಪ್ರಮಾದಗಳಿಗೆ ಕ್ಷಮೆ ಯಾಚಿಸಬಹುದು, ವಿಷಾದ ವ್ಯಕ್ತಪಡಿಸಬಹುದು. ಆದರೆ ಆದ ಪ್ರಮಾದವನ್ನಂತೂ ಅಳಿಸಲು ಸಾಧ್ಯವಿಲ್ಲ. ಅದು ದಡ್ಡತನದ ಪ್ರತೀಕವಾಗಿ ಯಾವತ್ತೂ ಬಾಧಿಸುತ್ತಲೇ ಇರುತ್ತದೆ.

ಅರ್ಥವಿಲ್ಲದ ಮಾತುಗಳು
ಕೆಲವೊಮ್ಮೆ ನಮಗೆ ಅರಿವಿಲ್ಲದಂತೆ ಮೂರ್ಖ ಪ್ರಶ್ನೆಯನ್ನು ಕೇಳುತ್ತೇವೆ. ಯಾರಾದರೂ ಸಿಕ್ಕಾಗ ಏನಾದರೂ ಮಾತಾಡ ಬೇಕಲ್ಲ ಎಂದು ಬಾಯಿಗೆ ಬಂದಿದ್ದನ್ನು ಮಾತಾಡುತ್ತೇವೆ. ನಮಗೂ ಗೊತ್ತಿರುತ್ತದೆ, ಅಂಥ ಮಾತುಗಳಿಗೆ ಹೆಚ್ಚು ಅರ್ಥವಿಲ್ಲವೆಂದು. ಆದರೂ ನಾವು ಮಾತಾಡುತ್ತೇವೆ. ಮೂರ್ಖ ಪ್ರಶ್ನೆಯನ್ನು ಕೇಳುತ್ತೇವೆ.

ಉದಾಹರಣೆಗೆ, ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಪರಿಚಿತರು ಕಾಯುತ್ತಿದ್ದಾರೆನ್ನಿ, ‘ಏನು ಇಲ್ಲಿ? ಆರೋಗ್ಯ ಸರಿ ಇಲ್ವಾ?’ ಅಂತ
ಕೇಳುತ್ತೇವೆ. ಆರೋಗ್ಯ ಸರಿ ಇದ್ದಿದ್ದರೆ, ಯಾರಾದರೂ ಆಸ್ಪತ್ರೆಯಲ್ಲಿ ವೈದ್ಯರ ಮುಂದೆ ಪಾಳಿ ಹಚ್ಚಿ ಕುಳಿತಿರುತ್ತಿದ್ದರಾ?
ಕೆಲವರು ನಮ್ಮ ಮನೆಯ ಲ್ಯಾಂಡ್‌ಲೈನ್‌ಗೆ ಫೋನ್ ಮಾಡುತ್ತಾರೆ. ‘ಸಾರ್, ಎಲ್ಲಿದ್ದೀರಿ?’ ಅಂತ ಕೇಳ್ತಾರೆ. ಏನೆಂದು ಹೇಳುವುದು? ಆಗ ತಾನೆ ಮಳೆ ಸುರಿಯಲಾರಂಭಿಸಿದೆ ಅಂತ ಅಂದುಕೊಳ್ಳಿ, ತಕ್ಷಣ ಯಾರೋ ಎದುರಿಗೆ ಬಂದರು ಅಂತಿಟ್ಟು ಕೊಳ್ಳಿ, ‘ಓಹೋ ಮಳೆಯಲ್ಲಿ ಹೊರಗೆ ಹೊರಟಿರಾ?’ ಅಂತ ಕೇಳ್ತಾರೆ.

ಆಗ ಏನು ಹೇಳೋದು? ಮನೆಯಲ್ಲಿ ಸ್ನಾನ ಮಾಡಿ ಬಾತ್‌ರೂಮ್‌ನಿಂದ ಹೊರಬರುವಾಗ, ‘ಓಹೋ! ಸ್ನಾನ ಆಯ್ತಾ?’ ಅಂತ ಕೇಳಿದರೆ, ಇಲ್ಲ, ಇಲ್ಲ, ಸಂಧ್ಯಾವಂದನೆಗೆ ಹೋಗಿದ್ದೆ ಅಂತ ಹೇಳಲಾಗುತ್ತದೆಯಾ? ಮೊನ್ನೆ ಹಾಗೇ ಆಯ್ತು, ಗ್ರೌಂಡ್-ರ್‌ನಲ್ಲಿ ನಿಂತು ಲಿಫ್ಟ್ ಗಾಗಿ ಕಾಯುತ್ತಿದ್ದೆ. ನನ್ನ ಸಹೋದ್ಯೋಗಿಯೊಬ್ಬರು, ‘ಏನ್ಸಾರ್, ಮೇಲಕ್ಕೆ ಹೋಗಬೇಕಾ?’ ಅಂತ ಕೇಳಿದರು. ‘ಇಲ್ಲ, ಕೆಳಕ್ಕೆ ಹೋಗೋಣ ಅಂತಿದ್ದೆ. ಆದರೆ ಮಹಡಿಗಳಿಲ್ಲವಲ್ಲ, ಏನು ಮಾಡೋದು? ಅದಕ್ಕಾಗಿ ಸುಮ್ಮನೆ ನಿಂತಿದ್ದೇನೆ’ ಅಂತ ಹೇಳಿದ್ದರೆ ಅವರ ಪ್ರತಿಕ್ರಿಯೆ ಏನಿರುತ್ತಿತ್ತೋ ಏನೋ? ಇಂಥ ಮಾತುಗಳಿಗೆ ಹೆಚ್ಚಿನ ಉದ್ದೇಶವಾಗಲಿ, ಮಹತ್ವವಾಗಲಿ
ಇಲ್ಲದಿರುವುದರಿಂದ ಅವುಗಳನ್ನು ಅಷ್ಟೇ ಲಘುವಾಗಿ ಪರಿಗಣಿಸುವುದು ವಾಸಿ. ಆದರೆ ಇಂದು ಹೇರ್ ಕಟಿಂಗ್ ಸೆಲೂನ್‌ನಿಂದ ಹೊರಬರುತ್ತಿದ್ದೆ.

ಪರಿಚಿತರೊಬ್ಬರು ಒಳ ಹೋಗುವಾಗ ಸಿಕ್ಕು, ‘ಏನ್ಸಾರ್ ತಲೆಗೂದಲು ಕಟ್ ಮಾಡಿಸಿಕೊಂಡ್ರಾ?’ ಅಂತ ಕೇಳಿದರು. ‘ಇಲ್ಲ
ಕಟ್ ಮಾಡಿಸಿಕೊಂಡ ಕೂದಲನ್ನು ಅಂಟಿಸಿಕೊಳ್ಳಲು ಬಂದಿದ್ದೆ’ ಅಂತ ಹೇಳಲೇ ಅಂದುಕೊಂಡೆ. ಇದು ಎಲ್ಲರ ಕತೆಯೂ ಹೌದು.