Saturday, 14th December 2024

ಕೈ ಕಚ್ಚುತ್ತಿದೆ ನ್ಯಾಷನಲ್‌ ಹೆರಾಲ್ಡ್, ಆರ್‌ಎಸ್‌ಎಸ್‌

ವರ್ತಮಾನ

maapala@gmail.com

ಅಧಿಕಾರ ಕಳೆದುಕೊಂಡು ನೀರಿನಿಂದ ಹೊರಬಿದ್ದ ಮೀನಿನಂತೆ ವಿಲವಿಲನೆ ಒದ್ದಾಡುತ್ತಿರುವ ಕಾಂಗ್ರೆಸ್‌ಗೆ ಇರುವ ಏಕೈಕ ಗುರಿ ಮತ್ತೆ ಅಧಿಕಾರ ಹಿಡಿಯುವುದು. ಅದಕ್ಕಾಗಿ ಭರ್ಜರಿಯಾಗಿಯೇ ಮುನ್ನುಗ್ಗುತ್ತಿರುವ ಪಕ್ಷದ ನಾಯಕರು ಪ್ರತಿಯೊಂದು ವಿಚಾರಕ್ಕೂ ಅಗತ್ಯಕ್ಕಿಂತ ಹೆಚ್ಚು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸು ತ್ತಿದ್ದಾರೆ. ಅದು ಮಾತಿನಲ್ಲಿರಲಿ, ಹೋರಾಟದಲ್ಲಿರಲಿ, ಬೇಕಾಗಿರುವುದಕ್ಕಿಂತ ಜಾಸ್ತಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇದಕ್ಕೆ ಕಾರಣ ಹೇಗಾದರೂ ಮಾಡಿ ಮತ್ತೆ ಅಽಕಾರಕ್ಕೆ ಬರಬೇಕು ಎಂಬುದು.

ಆದರೆ, ಆಗುತ್ತಿರುವುದೇನು? ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಉರುಳಿಸಿ 2019ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಕಳೆದ ಮೂರು ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಉತ್ತಮ ಆಡಳಿತ ನೀಡಿಲ್ಲ ಎಂಬುದು ಎಲ್ಲರೂ ಒಪ್ಪಿಕೊಳ್ಳುವ ಸತ್ಯ. ಹೀಗಾಗಿ ಆಡಳಿತ ವಿರೋಧಿ ಅಲೆಯ ಅನುಕೂಲ ಪಡೆದುಕೊಂಡರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಕಷ್ಟವೇನೂ ಅಲ್ಲ. ಏಕೆಂದರೆ, ದೇಶದೆಲ್ಲೆಡೆ ಕಾಂಗ್ರೆಸ್ ನೆಲಕಚ್ಚಿದರೂ ರಾಜ್ಯದಲ್ಲಿ ಇನ್ನೂ ಗಟ್ಟಿಯಾಗಿಯೇ ಉಳಿದಿದೆ.

ಆದರೆ, ಕಾಂಗ್ರೆಸ್ಸಿನ ಈ ಅಕ್ರಮಣಶೀಲತೆ, ಅನಾವಶ್ಯಕ ಬೀದಿ ಹೋರಾಟ ಗಳು, ಅರ್ಥವಿಲ್ಲದ ಟೀಕೆಗಳು, ಅನಗತ್ಯವಾಗಿ ಎಲ್ಲಾ ವಿಚಾರಕ್ಕೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ವನ್ನು ಎಳೆತರುತ್ತಿರುವುದನ್ನು ಗಮಿಸಿದರೆ ಕಾಂಗ್ರೆಸ್ ಸಿಗುವ ಅವಕಾಶವನ್ನು ಕೈಚೆಲ್ಲಲು ಹೊರಟಿದೆಯೇ ಎಂಬ ಅನುಮಾನ ಉಂಟುಮಾಡುತ್ತಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ಪ್ರಸ್ತಾಪಿಸುವುದಾದರೆ, ಸುಪ್ರೀಂ ಕೋರ್ಟ್ ಆದೇಶದಂತೆ ಈ ಪ್ರಕರಣದ ತನಿಖೆಯನ್ನು ಪುನಾರಂಭಿಸಲಾಗಿದೆ. ಇದು ಆರ್ಥಿಕ ಅಪರಾಧಕ್ಕೆ ಸಂಬಂಧಿಸಿದ ವಿಚಾರವಾಗಿದ್ದರಿಂದ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣದ ತನಿಖೆ ನಡೆಸುತ್ತಿದೆ. ತನಿಖೆ ನಡೆಸುವ ಸಂದರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿ ದವರನ್ನು ವಿಚಾರಣೆ ನಡೆಸುವುದು ಸಾಮಾನ್ಯ. ಆದರೆ,ವಿಚಾರಣೆ ನಡೆಸುತ್ತಿದ್ದಂತೆ ಆರೋಪಿಗಳು ಎನಿಸಿಕೊಂಡವರನ್ನು ಬಂಧಿಸಲೇ ಬೇಕು ಎಂದೇನಿಲ್ಲ. ಇನ್ನು ನ್ಯಾಷನಲ್ ಹೆರಾಲ್ಡ್ ವಿವಾದ ಹಳೆಯ ಪ್ರಕರಣವಾಗಿರುವುದರಿಂದ ತನಿಖೆ ವೇಳೆ ಬಂಧನ ಸಾಧ್ಯತೆಯೂ ಬಹಳ ಕಡಮೆ. ಹೀಗಾಗಿ ಕಾನೂನಿನಂತೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ.

ರಾಹುಲ್ ಗಾಂಧಿ ಅವರನ್ನು ಸತತ ಐದು ದಿನ ವಿಚಾರಣೆ ನಡೆಸಿದರೆ ಸೋನಿಯಾ ಅವರನ್ನು ಕೇವಲ ಎರಡು ಗಂಟೆ ವಿಚಾರಣೆ ಮಾಡಿ ಕಳುಹಿಸಿಕೊಟ್ಟಿದೆ. ಆದರೆ, ಈ ವಿಚಾರಣೆಯೇ ತಪ್ಪು ಎಂದು ದೇಶಾದ್ಯಂತ ಹೋರಾಟಕ್ಕಿಳಿದಿರುವ ಕಾಂಗ್ರೆಸ್, ತನ್ನ ಕಾಲ ಮೇಲೆ ತಾನೇ ಚಪ್ಪಡಿ ಎಳೆದುಕೊಳ್ಳುತ್ತಿದೆ. ಹೌದು, ಒಂದೆಡೆ ಇದು ಹಳೆಯ ಪ್ರಕರಣವಾಗಿರುವು ದರಿಂದ ಆರೋಪಿ ಗಳ ಬಂಧನ ಸಾಧ್ಯತೆ ಕಡಮೆಯಾದರೆ, ಇನ್ನೊಂದೆಡೆ ಇಡಿ ಮೇಲೆ ಒತ್ತಡ ಹೇರಿ ಈ ಪ್ರಕರಣದಲ್ಲಿ ಸೋನಿಯಾ ಅಥವಾ ರಾಹುಲ್ ಗಾಂಧಿಯವರನ್ನು ಬಂಧಿಸುವಂತೆ ನೋಡಿಕೊಂಡು ಅಪಾಯ ಮೈಮೇಲೆ ಎಳೆದುಕೊ ಳ್ಳುವಂತಹ ಮೂರ್ಖತನಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮಾಡುವುದಿಲ್ಲ ಎಂದು ತಿಳಿದುಕೊಳ್ಳ ದಷ್ಟು ದಡ್ಡರು ಕಾಂಗ್ರೆಸ್ಸಿಗರು ಅಲ್ಲ.

ಆದರೂ ವಿಚಾರಣೆಯನ್ನೇ ಮಾಡಬಾರದು ಎಂದು ಹೇಳಿ ದೇಶಾದ್ಯಂತ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಅದರಲ್ಲೂ
ಕರ್ನಾಟಕದಲ್ಲಿ ಕಾಂಗ್ರೆಸ್‌ನ ಹೋರಾಟ ಕೊಂಚ ಹೆಚ್ಚಾಗಿಯೇ ಇತ್ತು. ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದಷ್ಟು ದಿನ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೋರಾಟ ಮಾಡಿದರು. ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಸೋನಿಯಾ ಗಾಂಧಿ ಅವರನ್ನು ಇಡಿ ಅಧಿಕಾರಿಗಳು ಕೇವಲ ಎರಡು ಗಂಟೆ ವಿಚಾರಣೆ ನಡೆಸಿದರೂ ಕಾಂಗ್ರೆಸ್‌ನವರು ತೀವ್ರ ಹೋರಾಟ ನಡೆಸಿದರು. ಕಾರಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ತಮ್ಮ ನಾಯಕರನ್ನು ಓಲೈಸಲು, ಪಕ್ಷವನ್ನು ಇಷ್ಟು ವರ್ಷ ಜತನದಿಂದ ಕಾಪಾಡಿಕೊಂಡು ಬಂದ ನೆಹರೂ ಕುಟುಂಬದವರ ಋಣ ತೀರಿಸಲು ಅವರು ಈ ಹೋರಾಟ ಮಾಡಿರಬಹುದು. ಆದರೆ, ಈ ಹೋರಾಟವನ್ನು ವಿರೋಧಿಸಿ ಬಿಜೆಪಿ ಕೇಳಿದ ಒಂದು ಪ್ರಶ್ನೆಗೆ ಉತ್ತರಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಪರಾಧಿಗಳು ಎಂದಲ್ಲ, ಅವರ ಮೇಲೆ ಆರೋಪ ಬಂದಿದೆ. ಹೀಗಾಗಿ ವಿಚಾರಣೆ ನಡೆಸಲಾಗುತ್ತಿದೆ.

ಸಂವಿಧಾನ ಮತ್ತು ಕಾನೂನಿನ ಅಡಿಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ಸೋನಿಯಾ ಮತ್ತು ರಾಹುಲ್
ಗಾಂಧಿ ಅವರನ್ನು ವಿಚಾರಣೆಯೇ ಮಾಡಬಾರದು ಎಂದರೆ ಅವರು ಕಾನೂನಿಗಿಂತ ಅತೀತರೇ? ಅವರಿಬ್ಬರಿಗಾಗಿ ಹೋರಾಟ ನಡೆಸಿ, ಕೋಟ್ಯಂತರ ಜನರಿಗೆ ತೊಂದರೆ ಕೊಡುವುದು ಎಷ್ಟು ಸರಿ? ಎಂಬುದು ಬಿಜೆಪಿಗರ ಪ್ರಶ್ನೆ. ಆದರೆ, ಇದಕ್ಕೆ ಕೇಂದ್ರ ಸರಕಾರ, ನರೇಂದ್ರ ಮೋದಿ ವಿರುದ್ಧ ಟೀಕೆಯ ಪ್ರತಿಕ್ರಿಯೆ ಕಾಂಗ್ರೆಸ್ ಕಡೆಯಿಂದ ಬರುತ್ತಿದೆಯೇ ಹೊರತು ಪ್ರಶ್ನೆಗೆ ಸರಿಯಾದ ಉತ್ತರ ಬರುತ್ತಿಲ್ಲ. ಏಕೆಂದರೆ, ಅವರಲ್ಲಿ ಅದಕ್ಕೆ ಉತ್ತರವೇ ಇಲ್ಲ.

ಇನ್ನು ಅಗತ್ಯಕ್ಕಿಂತ ಹೆಚ್ಚು ಪ್ರತಿಕ್ರಿಯಿಸಿದರೆ ಏನಾಗುತ್ತದೆ ಎಂಬುದಕ್ಕೆ ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆ
ನಡೆಸುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್
ಹೇಳಿದ ಮಾತುಗಳೇ ಸಾಕ್ಷಿ. ಗಾಂಧಿ ಕುಟುಂಬದ ಹೆಸರು ಹೇಳಿಕೊಂಡು 3-4 ತಲೆಮಾರುಗಳಿಗಾವಷ್ಟು ಆಸ್ತಿ ಮಾಡಿರುವ ನಾವೆಲ್ಲರೂ ಈಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬೆಂಬಲಕ್ಕೆ ನಿಂತು ಗಾಂಧಿ ಕುಟುಂಬದ ಋಣ ತೀರಿಸಬೇಕಿದೆ. ಆ ಕರ್ತವ್ಯ ಮಾಡದಿದ್ದರೆ ನಾವು ತಿನ್ನುವ ಅನ್ನಕ್ಕೆ ಹುಳ ಬೀಳುತ್ತದೆ ಎಂದು ರಮೇಶ್ ಕುಮಾರ್ ಹೇಳಿದ್ದರು.

ಈ ಮಾತನ್ನೇ ಈಗ ಕಾಂಗ್ರೆಸ್ ವಿರುದ್ಧ ಬಿಜೆಪಿ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್‌ನವರೆಲ್ಲರೂ ಹಣ ಮಾಡಿದ್ದಾರೆ
ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಈ ವಿಚಾರದಲ್ಲಿ ರಮೇಶ್ ಕುಮಾರ್ ಅವರೇ ಕಾಂಗ್ರೆಸ್‌ನ ಕೈ ಕಟ್ಟಿಹಾಕಿ, ಪ್ರತಿ
ಪಕ್ಷಗಳ ಕೈಗೆ ಕೋಲು ಕೊಟ್ಟು ಏನಾದರೂ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದು ಒಂದೆಡೆಯಾದರೆ, ಆರ್‌ಎಸ್‌ಎಸ್ ವಿರುದ್ಧದ ಟೀಕೆಯೂ ಕಾಂಗ್ರೆಸ್‌ಗೆ ಮಗ್ಗುಲ ಮುಳ್ಳಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಮಾತೆತ್ತಿದರೆ ಆರ್‌ಎಸ್‌ಎಸ್, ಚಡ್ಡಿ
ಎಂದೆಲ್ಲಾ ಹೀಗಳೆಯುತ್ತಿರುವ ಕಾಂಗ್ರೆಸ್‌ನ ರಾಜಕೀಯ ವೈರಿ ಬಿಜೆಪಿಯೇ ಅಥವಾ ಅರ್‌ಎಸ್‌ಎಸ್ಸೇ ಎಂಬ ಅನುಮಾನ
ಬರುವಂತೆ ಆ ಪಕ್ಷದ ನಾಯಕರು ನಡೆದುಕೊಳ್ಳುತ್ತಿದ್ದಾರೆ.

ಆರ್‌ಎಸ್‌ಎಸ್‌ನಲ್ಲಿದ್ದ ನಾಥೂರಾಮ್ ಗೋಡ್ಸೆ ಗಾಂಧೀಜಿ ಯವನ್ನು ಕೊಂದ ಎಂಬ ಒಂದೇ ಕಾರಣವನ್ನು ಇಟ್ಟುಕೊಂಡು
ಆರ್‌ಎಸ್‌ಎಸ್‌ಅನ್ನು ದೇಶದ್ರೋಹಿ, ಭಯೋತ್ಪಾದಕ ಸಂಘ ಟನೆಯೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಕೇಂದ್ರ ಮತ್ತು
ರಾಜ್ಯದ ಬಿಜೆಪಿ ಸರಕಾರಗಳು ತೆಗೆದುಕೊಳ್ಳುವ ಪ್ರತಿ ಯೊಂದು ನಿರ್ಧಾರಕ್ಕೂ ಆರ್‌ಎಸ್‌ಎಸ್‌ಅನ್ನು ಹೊಣೆ ಮಾಡಲಾಗುತ್ತಿದೆ.

ಖಂಡಿತವಾಗಿಯೂ ಬಿಜೆಪಿ ಅಧಿಕಾರದಲ್ಲಿದ್ದಾಗ ತೆಗೆದುಕೊಳ್ಳುವ ನಿರ್ಧಾರಗಳ ಹಿಂದೆ ಆರ್‌ಎಸ್‌ಎಸ್ ಸಿದ್ಧಾಂತ ಕೆಲಸ ಮಾಡಿರುತ್ತದೆ. ಏಕೆಂದರೆ, ಬಿಜೆಪಿಯಲ್ಲಿರುವ ಬಹುತೇಕ ನಾಯಕರು, ಥಿಂಕ್ ಟ್ಯಾಂಕ್‌ಗಳು ಆರ್‌ಎಸ್‌ಎಸ್ ಮೂಲದವರೇ ಆಗಿರುತ್ತಾರೆ. ಅದರಲ್ಲೂ ಬಿಜೆಪಿಯಲ್ಲಿರುವ ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆ ಆರ್‌ಎಸ್‌ಎಸ್ ನವರಿಗೆ ಮೀಸಲಾಗಿರುವಂತಹದ್ದು. ಹಾಗೆಂದು ಬಿಜೆಪಿ ಸರಕಾರಗಳು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆಯೂ ಆರ್‌ಎಸ್‌ಎಸ್ ಕೈವಾಡ ಇರುವುದಿಲ್ಲ. ದಿನ ನಿತ್ಯದ ಆಡಳಿತದಲ್ಲಿ ಅದು ಮೂಗು ತೂರಿಸುವುದೂ ಇಲ್ಲ.

ಹೀಗಿರುವಾಗ ಎಲ್ಲದ್ದಕ್ಕೂ ಆರ್‌ಎಸ್‌ಎಸ್‌ಅನ್ನು ಹೊಣೆ ಮಾಡಿ, ಚಡ್ಡಿ.. ಚಡ್ಡಿ ಎಂದು ಹೀಗಳೆಯುವುದು ಎಷ್ಟರ ಮಟ್ಟಿಗೆ ಸರಿ? ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡಲು ಸಂಚು ಹೂಡುತ್ತಿರುವ ಭಯೋತ್ಪಾದಕ ಸಂಘಟನೆಗಳ ಆರ್‌ಎಸ್‌ಎಸ್‌ಅನ್ನು ಹೋಲಿಸುವುದರಲ್ಲಿ ಅರ್ಥವೇನಿದೆ? ಆರ್‌ಎಸ್‌ಎಸ್‌ನ ರಾಷ್ಟ್ರಭಕ್ತಿಯ ಕುರಿತು ದೇಶದ ಬಹುತೇಕರಿಗೆ ಯಾವುದೇ ಅನುಮಾನ ಇಲ್ಲ.

ಯಾರಾದರೂ ಆರ್‌ಎಸ್‌ಎಸ್ ದೇಶದ್ರೋಹಿ ಸಂಘಟನೆ ಎಂದು ಹೇಳಿದರೆ ಅದನ್ನು ಒಪ್ಪಿಕೊಳ್ಳುವವರು ಯಾರೂ
ಇಲ್ಲ. ಹೀಗಿರುವಾಗ ಪ್ರತಿಯೊಂದಕ್ಕೂ ಆರ್‌ಎಸ್‌ಎಸ್‌ಅನ್ನು ಟೀಕಿಸಿದರೆ ಹಿಂದೂಗಳು ತಿರುಗಿ ಬೀಳುವುದು ಖಚಿತ. ಏಕೆಂ
ದರೆ, ಆರ್‌ಎಸ್‌ಎಸ್‌ನ ಪ್ರಮುಖ ಸಿದ್ಧಾಂತವೇ ಹಿಂದುತ್ವ ಮತ್ತು ಹಿಂದೂ ರಾಷ್ಟ್ರ. ಹಾಗೆಂದು ಆರ್‌ಎಸ್‌ಎಸ್ ಎಲ್ಲೂ ಕೋಮು ಆಧಾರದ ಮೇಲೆ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯವನ್ನು ಯಾವತ್ತೂ ದ್ವೇಷಿಸಿಲ್ಲ.

ಹಿಂದುತ್ವದ ರಕ್ಷಣೆಯಷ್ಟೇ ತನ್ನ ಕೆಲಸ ಎಂದುಕೊಂಡು ಸಂಘಟನೆ ಮಾಡುತ್ತಿದೆ. ಹೀಗಾಗಿ ಕಾಂಗ್ರೆಸ್‌ನ ಆರ್‌ಎಸ್‌ಎಸ್
ವಿರೋಧಿ ಧೋರಣೆಯೂ ಆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕುತ್ತಿದೆ. ಏಕೆಂದರೆ, ಆರ್‌ಎಸ್‌ಎಸ್‌ನ ಕೆಲಸ ಎಂದರೆ ಅದು ಮೀನಿನ ಹೆಜ್ಜೆಯಂತೆ. ಅದು ಯಾವ ರೀತಿ ಕೆಲಸ ಮಾಡುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಇದರ ಪರಿಣಾಮವೇ ದೇಶದಲ್ಲಿ ಕಾಂಗ್ರೆಸ್ ಸೋಲಿನ ಮೇಲೆ ಸೋಲು ಕಾಣುತ್ತಿರುವುದು. ಹೀಗಿರುವಾಗ ಪ್ರತಿಯೊಂದಕ್ಕೂ ತನ್ನನ್ನೇ ಹೊಣೆ ಮಾಡಿದರೆ ಆರ್‌ಎಸ್‌ಎಸ್ ಸುಮ್ಮನೆ ಕೂರುವಂತಹ ಜಾಯಮಾನದ ಸಂಘಟನೆಯಲ್ಲ. ಏಕೆ ಈ ವಿಚಾರ ಕಾಂಗ್ರೆಸ್‌ನ ಘಟಾನುಘಟಿ ನಾಯಕರಿಗೆ ಅರ್ಥವಾಗುತ್ತಿಲ್ಲ?

ಲಾಸ್ಟ್ ಸಿಪ್: ಯಾವುದೇ ಹೋರಾಟ, ಟೀಕೆ, ಆರೋಪಗಳಿಗೆ ಅರ್ಥವಿರಬೇಕು ಮತ್ತು ಜನಹಿತದ ಗುರಿ ಇರಬೇಕು. ಇಲ್ಲದಿದ್ದರೆ ಮಾಡಿದ್ದೆಲ್ಲಾ ನೀರ ಮೇಲಿನ ಹೋಮವಾಗುತ್ತದೆ.