Friday, 13th December 2024

ಸದ್ಗುರು, ಇವರೇ ಅಲ್ಲವೇ ನಿಜ ಅರ್ಥದ ಜಗದ್ಗುರು ?

ಶಿಶಿರಕಾಲ

shishirh@gmail.com

ಸದ್ಗುರು ಜಗ್ಗಿ ವಾಸುದೇವ್. ಇವರ ಪರಿಚಯದ ಅವಶ್ಯಕತೆ ಇಲ್ಲವೆಂದುಕೊಂಡಿದ್ದೇನೆ. ಸದ್ಗುರು ರೂಪಿಸಿರುವ ಹಲವು ಆಧ್ಯಾ ತ್ಮಿಕ ಕಾರ್ಯಕ್ರಮಗಳಲ್ಲಿ ‘ಇನ್ನರ್ ಎಂಜಿನಿಯರಿಂಗ್’ ಕೂಡ ಒಂದು. ಇದನ್ನು ಇಂಟರ್ನೆಟ್ ಮೂಲಕ ಪಡೆಯಬಹುದು. ಇದರಲ್ಲಿ ಒಟ್ಟು ಏಳು ಅಧ್ಯಾಯಗಳಿವೆ. ಪ್ರತಿ ಅಧ್ಯಾಯಕ್ಕೆ ಎರಡರಿಂದ ಮೂರು ತಾಸು ಬೇಕು. ಕೊನೆಯ ಅಧ್ಯಾಯ ಸ್ವಲ್ಪ ದೀರ್ಘವಾದುದು.

ಮೊದಲ ಆರು ಪಾಠಗಳು ಸೇರಿಸಿ ಸುಮಾರು ೧೨-೧೩ ತಾಸಿನಷ್ಟಾದರೆ ಕೊನೆಯ ಅಧ್ಯಾಯ, ಏಳನೆಯದು ಹನ್ನೆರಡು ತಾಸಿನದು, ಲೈವ್. ಈ ಕೊನೆಯ ಅಧ್ಯಾಯವನ್ನು ಮುಗಿಸಲು ವಾರಾಂತ್ಯದ ಎರಡು ದಿನ ಬೇಕು. ತೀರಾ ವ್ಯವಸ್ಥಿತವಾಗಿ ರೂಪಿಸಲ್ಪಟ್ಟ ಕಾರ್ಯಕ್ರಮ ಇದು. ಯೋಗ, ಅಧ್ಯಾತ್ಮ, ಕ್ರಿಯೆ ಇವೆಲ್ಲ ಇಂದಿನ ಜಮಾನಕ್ಕೆ ಹೊಂದಿಕೆಯಾಗುವಂತೆ ಪುನರ್ ಆವಿಷ್ಕರಿಸಿದ ಒಂದು ಪೂರ್ಣ ಪ್ಯಾಕೇಜ್. ನೀವು ಇನ್ನರ್ ಎಂಜಿನಿಯರಿಂಗ್‌ನಲ್ಲಿ ಭಾಗಿಯಾದ ಯಾರನ್ನೇ ಕೇಳಿ, ‘ಇದೊಂದು ಜೀವನ ಬದಲಾ ಯಿಸಬಲ್ಲ ಕಾರ್ಯಕ್ರಮ’ ಎಂದೇ ಹೇಳುವುದು. ಈ ಕಾರ್ಯಕ್ರಮವೇನೂ ಪುಣ್ಯ ಸಂಪಾದನೆಯ ಕೆಲಸವಲ್ಲ.

ಪುಣ್ಯದಿಂದ ಜೀವನ ಬದಲಾಗುವುದೂ ಅಲ್ಲ. ಅಥವಾ ದೇವರಿಗೆ ಹತ್ತಿರವಾಗುವ ಏನೋ ಒಂದು ಸೀಕ್ರೆಟ್ ಅನ್ನು ಇಲ್ಲಿ ಹೇಳಿ ಕೊಡಲಾಗುವುದಿಲ್ಲ. ಇದೊಂದು ಆಧ್ಯಾತ್ಮಿಕ, ಆಂತರಿಕ ಬದಲಾವಣೆಯ ಪಯಣದ ಮೊದಲ ಹೆಜ್ಜೆ. ಈ ಕಾರ್ಯಕ್ರಮವು ನಾವು ಬದುಕನ್ನು ನೋಡುವ ರೀತಿಯನ್ನು ಬದಲಾಯಿಸಿ, ಜೀವನಕ್ಕೆ ಇನ್ನಷ್ಟು ಸ್ಪಷ್ಟತೆ ನೀಡುವುದರಿಂದ ಇದು ನಿಜ ಅರ್ಥದಲ್ಲಿ ಇನ್ನರ್ ಎಂಜಿನಿಯರಿಂಗ್. ನಮ್ಮ ವಿಚಾರ, ಆಚಾರಗಳಲ್ಲಿ ಸಾತ್ವಿಕ ಮತ್ತು ತೀರಾ ವ್ಯವಸ್ಥಿತ ಬದಲಾವಣೆ ತರಬಲ್ಲ ಒಂದು ದೀಕ್ಷೆ.

ಭಾಗವಹಿಸಿದವರಿಗೆಲ್ಲ ಇದು ಸ್ಪಷ್ಟ ಅನುಭವಕ್ಕೆ ಬರುತ್ತದೆ. ಆಪಲ್ ಫೋನ್ ಕಂಪನಿ ಈಗ ನಾಲ್ಕು ವರ್ಷದ ಹಿಂದೆ ಒಂದು ಅಪ್ಲಿಕೇಶನ್ ಅನ್ನು ತನ್ನ ವಾಚ್‌ನಲ್ಲಿ ಬಿಡುಗಡೆ ಮಾಡಿತು. ಅದರ ಹೆಸರು Mindfulness. ಈ ಅಪ್ಲಿಕೇಶನ್ ಅನ್ನು ವಾಚಿನಲ್ಲಿ ಹಾಕಿಕೊಂಡರೆ ನಾವು ನಿರ್ಧರಿಸಿದ ಇಂತಿಷ್ಟು ತಾಸುಗಳಿಗೊಮ್ಮೆ ವಾಚ್ ನಮ್ಮನ್ನು ಎಚ್ಚರಿಸುತ್ತದೆ ಮತ್ತು ಒಂದಿಷ್ಟು ಸಮಯ ಧ್ಯಾನ ಮಾಡುವಂತೆ, ಸುಮ್ಮನೆ ಕುಳಿತು ನಮ್ಮ ಆಂತರ್ಯವನ್ನು, ಉಸಿರನ್ನು ಗ್ರಹಿಸುವಂತೆ ಪ್ರೇರೇಪಿಸಿ ಸೂಚನೆ ನೀಡುತ್ತದೆ.

Guided Meditation. ಉಚ್ಛ್ವಾಸ ಮತ್ತು ನಿಶ್ವಾಸ ಸಮಯದಲ್ಲಿ ಕೈಗೆ ಕಟ್ಟಿರುವ ವಾಚ್ ಚಿಕ್ಕದಾಗಿ ಅಲುಗಿ (vibrate) ಉಸಿರಿನ ಮೇಲಿನ ನಿಯಮಿತತೆ ಸಾಧಿಸುವಲ್ಲಿ ಸಹಕರಿಸುತ್ತದೆ. ಅಮೆರಿಕದಲ್ಲಿ ಅರ್ಧದಷ್ಟು ವಯಸ್ಕರು, ಸುಮಾರು ೧೪ ಕೋಟಿ ಮಂದಿ ಐಫೋನ್ ಬಳಸುತ್ತಾರೆ. ಇದರಲ್ಲಿ ಬಹುತೇಕರು ಆಪಲ್ ವಾಚ್ ಕೂಡ ಹೊಂದಿರುತ್ತಾರೆ. ಇವತ್ತು ಅಮೆರಿಕದಲ್ಲಿ ಮಾರಾಟ ವಾಗುವ ಕೈಗಡಿಯಾರಗಳಲ್ಲಿ ಆಪಲ್ ವಾಚ್‌ನದು ಮೊದಲ ಸ್ಥಾನ. ಆಪಲ್ ವಾಚ್ ಬಳಸುವ ಶೇ. ೫೫ರಷ್ಟು ಮಂದಿ ಪ್ರತಿದಿನ ಒಮ್ಮೆಯಾದರೂ Mindfulness ಅಪ್ಲಿಕೇಶನ್ ಅನ್ನು ತಮ್ಮ ವಾಚ್‌ನಲ್ಲಿ ಬಳಸುತ್ತಾರೆ ಎಂಬುದು ವರದಿ.

ಅಂದರೆ ಇದೊಂದೇ ಲೆಕ್ಕದ ಪ್ರಕಾರ ಏನಿಲ್ಲವೆಂದರೂ ಸುಮಾರು ಏಳೆಂಟು ಕೋಟಿ ಅಮೆರಿಕನ್ನರು ನಿತ್ಯ ಕೆಲವು ನಿಮಿಷ ಗಳಾದರೂ ಆಪಲ್ ವಾಚ್ ಬಳಸಿ ಧ್ಯಾನಮಾಡುತ್ತಾರೆ. ಈ ಲೆಕ್ಕಕ್ಕೆ ಹೊರತಾಗಿ ಧ್ಯಾನದಲ್ಲಿ ತೊಡಗುವ ಬಹುದೊಡ್ಡ ವರ್ಗವೇ ಇದೆ. ಇವೆಲ್ಲ ಸೇರಿಸಿದರೆ ಇನ್ನೊಂದಿಷ್ಟು ಕೋಟಿ ಅಮೆರಿಕನ್ನರು ಪ್ರತಿನಿತ್ಯ ಧ್ಯಾನದಲ್ಲಿ ತೊಡಗುತ್ತಾರೆ. ಏನಿದರರ್ಥ? ಅವರಿಗೆಲ್ಲ ಇದರಿಂದ ಏನೋ ಒಂದು ಸಮಾಧಾನ, ಪ್ರತಿಫಲ ಸಿಗುತ್ತಿದೆ ಎಂದಾಯಿತಲ್ಲವೇ? ನಾನಿರುವ ಶಿಕಾಗೋದ ಸುತ್ತಮುತ್ತ ಏನಿಲ್ಲ ವೆಂದರೂ ಸುಮಾರು ೨೦-೩೦ ಹಿಂದೂ ದೇವಸ್ಥಾನಗಳಿವೆ.

ಅದರಲ್ಲಿ HTGC- Hindu Temple of Greater Chicago ದೊಡ್ಡ ದೇವಸ್ಥಾನಗಳಲ್ಲಿ ಒಂದು. ಅಲ್ಲಿ ಪ್ರತಿ ಭಾನುವಾರ ಯೋಗಶಿಬಿರ ನಡೆಯುತ್ತದೆ. ಸುಮಾರು ೫೦-೬೦ ಮಂದಿ ಇಲ್ಲಿ ಬಂದು ಯೋಗಾಭ್ಯಾಸ ಮಾಡಿ ಹೋಗುತ್ತಾರೆ. ಮಜಾ ಏನು
ಗೊತ್ತಾ? ಇಲ್ಲಿ ಯೋಗ ಕಲಿಸುವವರು ಭಾರತೀಯರಲ್ಲ, ಬಿಳಿಯ ಅಮೆರಿಕನ್ ಯೋಗಪಟುಗಳು. ಅವರಿಂದ ಭಾರತೀಯರು, ಜತೆಯಲ್ಲಿ ಇನ್ನೊಂದಿಷ್ಟು ಅಮೆರಿಕನ್ನರು ಹಠಯೋಗ ಕಲಿಯುವುದು! ಇಂದು, ಅದರಲ್ಲಿಯೂ ಕೊರೋನಾ ಕಾಲದ ನಂತರ ಎಲ್ಲಿಲ್ಲದ ಪ್ರಮಾಣದಲ್ಲಿ ಮಾನಸಿಕ ಸಮಸ್ಯೆಗಳು ಅಮೆರಿಕದಲ್ಲಿ (ಎಲ್ಲೆಡೆ) ಹೆಚ್ಚಿವೆ. ಆ ಕಾರಣಕ್ಕೆ ದಿನಕಳೆದಂತೆ ಹೆಚ್ಚು ಹೆಚ್ಚು ಅಮೆರಿಕನ್ನರು ಯೋಗ, ಧ್ಯಾನದೆಡೆಗೆ ವಾಲುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಇದರಿಂದಾಗಿ ಎಲ್ಲೆಂದರಲ್ಲಿ ಯೋಗ ಸೆಂಟರ್‌ಗಳು ಕೂಡ ತಲೆಯೆತ್ತಿವೆ. ಪಶ್ಚಿಮದ ದೇಶಗಳಲ್ಲಿ ಬಿಡಿ, ನಮ್ಮಲ್ಲಿಯೇ ಯೋಗ-
ಧ್ಯಾನಗಳ ಬಗ್ಗೆ ಅದೆಷ್ಟೋ ತಪ್ಪು ಕಲ್ಪನೆಗಳಿವೆ. ಅದೆಷ್ಟೋ ಮಂದಿಗೆ ಧ್ಯಾನವೆಂದರೆ ಒಂದಿಷ್ಟು ಹೊತ್ತು ಏಕಾಗ್ರಚಿತ್ತ ವಾಗಿರು ವುದು. ಯೋಗವೆಂದರೆ ಅದೊಂದು ರೀತಿಯ ವ್ಯಾಯಾಮ. ನಾವೆಲ್ಲ ಚಿಕ್ಕಂದಿನಿಂದಲೂ ಯೋಗ-ಧ್ಯಾನಗಳ ಉಪಯೋಗವನ್ನು ಕೇಳಿಕೊಂಡು ಬೆಳೆದಿದ್ದೇವೆ. ಮೊದಲಿ ನಿಂದಲೂ ಯೋಗ-ಧ್ಯಾನದ ಉಪಯೋಗ ಹೇಳಿದವರೇ ಜಾಸ್ತಿ. ಹೇಗೆ ಧ್ಯಾನಿಸಬೇಕೆಂದು ಹೇಳುವವರು ಕಡಿಮೆ.

ಶಾಸ್ತ್ರೀಯವಾಗಿ, ವ್ಯವಸ್ಥಿತವಾಗಿ ತಿಳಿಯುವುದು ಹೇಗೆ ಎಂಬ ಪ್ರಶ್ನೆ ಬಹುಕಾಲ ಕಾಡಿದ್ದಿದೆ. ನಿತ್ಯ ಬದುಕಿನ ಜಂಜಾಟಕ್ಕೆ ಸಿಕ್ಕಿದ
ಬಹುತೇಕರಿಗೆ ಇವೆಲ್ಲವನ್ನೂ ಶಾಸ್ತ್ರೀಯವಾಗಿ ಕಲಿಯುವುದು ಬಹಳ ಕಷ್ಟ. ಎಲ್ಲಿಯೋ ಯೋಗ ಶಿಬಿರಗಳಲ್ಲಿ ಭಾಗಿಯಾದರೂ ಅದನ್ನು ಮುಂದುವರಿಸಿಕೊಂಡು ಹೋಗುವಷ್ಟು ಒಳಮರ್ಮ ತಿಳಿಯುವುದಿಲ್ಲ. ಯೋಗಶಿಬಿರಗಳಲ್ಲಿ ಸರ್ಕಸ್ ಮಾಡಿ ಕೆಲವು ಆಸನಗಳನ್ನು ಕಲಿತರೂ, ದೇಹ ಬಾಗದೆ, ಕಷ್ಟವೆನ್ನಿಸಿ ಅದು ಕೆಲ ಕಾಲವೂ ಮುಂದುವರಿಯುವುದಿಲ್ಲ.

ಇರುವ ಉದ್ಯೋಗ, ಸಂಸಾರವನ್ನು ಬಿಟ್ಟು ಯಾವುದೊ ಹಿಮಾಲಯದ ಸನ್ಯಾಸಿಯ ಬಳಿ ಹೋಗಿ ಕಲಿಯಲಿಕ್ಕೆ ಕೂಡ ಸಾಧ್ಯ ವಿಲ್ಲ. ಬದಲಾದ ಸಮಯದಲ್ಲಿ ಹೆಚ್ಚು ಜನರಿಗೆ ಇಂಥ ಜ್ಞಾನವನ್ನು ವ್ಯವಸ್ಥಿತವಾಗಿ ತಿಳಿಸಲು ಇದನ್ನು ಶಿಕ್ಷಣದ ಭಾಗವಾಗಿಸ ಬೇಕಿತ್ತು ಎಂದು ಅದೆಷ್ಟೋ ಬಾರಿ ಅನ್ನಿಸಿದ್ದಿದೆ. ಆದರೆ ಅದು ನಮ್ಮ ಇಂದಿನ ಜೊಳ್ಳು ಜಾತ್ಯತೀತ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ಅಮೆರಿಕನ್ನರಿಗೆ, ಪಾಶ್ಚಾತ್ಯರಿಗೆ ತಿಳಿದ ಇದರ ಮಜಕೂರು ನಮಗೆ ಗೊತ್ತಿಲ್ಲವಲ್ಲ ಎಂದು ಅದೆಷ್ಟೋ ಬಾರಿ ಅನ್ನಿಸಿದ್ದಿದೆ. ಒಟ್ಟಾರೆ ಬದಲಾದ ಸಮಯಕ್ಕೆ ತಕ್ಕಂತೆ ಇದೆಲ್ಲವನ್ನು ಕಲಿಯುವ ವ್ಯವಸ್ಥೆಯ ಕೊರತೆ ಬಹುಕಾಲದಿಂದ ಇದೆ.

ಆ ಕೊರತೆಯನ್ನು ನೀಗಿಸುವಲ್ಲಿ ಸದ್ಗುರುಗಳ ಕಾರ್ಯ ನಿಜವಾಗಿಯೂ ಶ್ಲಾಘನೀಯ. ನೀವು ಭಾರತದಲ್ಲಿದ್ದರೆ ಇನ್ನರ್ ಎಂಜಿನಿ ಯರಿಂಗ್ ಕೋರ್ಸ್ ಅನ್ನು ಕೇವಲ ಎರಡು ಹೋಟೆಲ್ ಊಟದ ಖರ್ಚಿನಲ್ಲಿ, ನಾಲ್ಕು ನೂರು ರುಪಾಯಿಯಲ್ಲಿ ಪಡೆದು ಪೂರೈಸ ಬಹುದು. ಇದಕ್ಕೆ ನೀವು ಎಲ್ಲಿಗೋ, ವಾರಗಟ್ಟಲೆ ಮನೆಬಿಟ್ಟು ಹೋಗಬೇಕೆಂದಿಲ್ಲ. ೨೧ನೇ ಶತಮಾನಕ್ಕೆ ತಕ್ಕನಾಗಿ ಇದೆಲ್ಲವನ್ನು ಮೊಬೈಲ್ ಅಥವಾ ಲ್ಯಾಪ್‌ಟಾಪ್ ನಲ್ಲಿ ಮನೆಯಲ್ಲಿಯೇ ಪಡೆಯಬಹುದು. ಯೋಗ, ಧ್ಯಾನದ ಒಳಮರ್ಮವನ್ನು ಅರಿಯ ಬೇಕೆಂಬ ಸ್ವಲ್ಪವೇ ಕುತೂಹಲವಿದ್ದರೂ ಇದೊಂದು ಅನನ್ಯ ಕಾರ್ಯಕ್ರಮ. ಇಂದಿನ ನಮ್ಮ ಮಿಂಚಿನ ಓಟದ ಬದುಕಿನ ಅವಶ್ಯಕತೆಯೂ ಹೌದು. ಈ ಕಾರ್ಯಕ್ರಮ ಹಲವು ಭಾಷೆಗಳಲ್ಲಿ ಲಭ್ಯವಿದ್ದರೂ ಇಂಗ್ಲಿಷ್ ನಲ್ಲಿ ಪಡೆಯುವುದೇ ಉತ್ತಮ ಎಂಬುದು ನನ್ನ ಅಭಿಪ್ರಾಯ.

ಇಂಗ್ಲಿಷ್‌ನಲ್ಲಿ ಸದ್ಗುರು ಅವರ ಅಸಲಿ ಧ್ವನಿಯಲ್ಲಿಯೇ ಕೇಳಬಹುದು. ಕನ್ನಡ ಮತ್ತು ಉಳಿದ ಭಾಷೆಗಳಲ್ಲಿ ಕೂಡ ಕಾರ್ಯಕ್ರಮ ಲಭ್ಯವಿದೆ. ಆದರೆ ಕನ್ನಡದ ಅನುವಾದ ನನಗೇಕೋ ಅಷ್ಟು ಸರಿ ಇದೆಯೆನಿಸಲಿಲ್ಲ. ಇನ್ನರ್ ಎಂಜಿನಿಯರಿಂಗ್‌ನಲ್ಲಿ ಇರುವ ಒಂದು ಮುಖ್ಯ ಪಾಠ- ದೇಹ, ಮನಸ್ಸು ಮತ್ತು ನಾನು ಎಂಬ ಭಾವ ಇವು ಮೂರೂ ಪ್ರತ್ಯೇಕ ಎಂಬ ಸೂಕ್ಷ್ಮ ವಿಚಾರ. ಸದ್ಗುರು ಈ
ವಿಷಯವನ್ನು ಬಹಳ ಮನೋಜ್ಞವಾಗಿ ಈ ಕಾರ್ಯಕ್ರಮದಲ್ಲಿ ವಿವರಿಸುತ್ತಾರೆ. ಅಷ್ಟೇ ಅಲ್ಲ, ಅದನ್ನು ಪರಾಮರ್ಶಿಸಲು ಪ್ರಯೋಗ ಮಾಡುವಂತೆ ಪ್ರೇರೇಪಿಸುತ್ತಾರೆ. ನಾನು ಅವರ ಈ ಪಾಠ ಕೇಳಿಸಿಕೊಂಡಾಗ ಇದು ಜಗತ್ತನ್ನು ನೋಡುವ ಇನ್ನೊಂದು ಹೊಸ ಆಯಾಮ ಎಂದಷ್ಟೇ ಅಂದುಕೊಂಡಿದ್ದೆ.

ನಾವು ಭಾರತೀಯರೇ ಹಾಗಲ್ಲವೇ, ಯಾವುದನ್ನೂ ಸುಲಭಕ್ಕೆ ನಂಬುವುದಿಲ್ಲ. ಕೆಲವು ದಿನಗಳ ಹಿಂದೆ ಸದ್ಗುರು ಮಾಧ್ಯಮ
ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದರು. ಅದಾದ ಮೇಲೆ ನಮಗೆಲ್ಲ ತಿಳಿದದ್ದೇನೆಂದರೆ ಆ ಸಮಾವೇಶದಲ್ಲಿ ಮಾತನಾಡು ವಾಗ ಸದ್ಗುರು ವಿಪರೀತ ತಲೆನೋವಿನಿಂದ ಬಳಲುತ್ತಿದ್ದರು ಎಂಬುದು. ಅವರ ಮಾತನ್ನು ಅಂದು ಕೇಳಿದ ಯಾರೊಬ್ಬರಿಗೂ ಇವರ ದೇಹದಲ್ಲಿ ಅನಾರೋಗ್ಯವಿದೆ ಎಂಬ ಒಂದು ಸುಳಿವೂ ಹತ್ತಿರಲಿಲ್ಲ. ಸದ್ಗುರು ಅಂದು ಅಲ್ಲಿ ಮಾತನಾಡುವಾಗ ಅವರ ಮಿದುಳಿನಲ್ಲಿ ರಕ್ತಸ್ರಾವವಾಗಿತ್ತು.

ಮಿದುಳಿನ ರಕ್ತಸ್ರಾವ ಎಂದರೆ ಅದರ ನೋವಿನ ಪ್ರಮಾಣ ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಸಾಮಾನ್ಯವಾಗಿ ಇಷ್ಟು ನೋವು ಇದ್ದ ರೋಗಿಗಳಿಗೆ ಮಾರ್ಫಿನ್ ಒಂದೇ ಪರಿಹಾರ. ಮಾರ್ಫಿನ್ ನಮ್ಮ ಮಿದುಳಿನ ನೋವಿನ ಗ್ರಹಿಕೆಯನ್ನು ತಗ್ಗಿಸಿ ಕೊಂಚ
ಆರಾಮ ಕೊಡುತ್ತದೆ. ಈಗ ಎರಡು ವರ್ಷದ ಹಿಂದೆ ನನ್ನ ಸ್ನೇಹಿತರೊಬ್ಬರಿಗೆ ಇದೇ ರೀತಿ ಮಿದುಳಿನಲ್ಲಿ ರಕ್ತಸ್ರಾವವಾಗಿತ್ತು. ಅವರು ಬೊಬ್ಬೆ ಹೊಡೆದುಕೊಳ್ಳುವ ಸನ್ನಿವೇಶ ನನಗಿನ್ನೂ ಸ್ಪಷ್ಟವಾಗಿ ನೆನಪಿದೆ. ಕೊನೆಯಲ್ಲಿ ಡಾಕ್ಟರ್ ಮಾರ್ಫಿನ್
ಕೊಟ್ಟರು. ಅದಾದ ಕೆಲವೇ ಕ್ಷಣಗಳಲ್ಲಿ ಗೆಳೆಯನ ತಲೆನೋವು ಸ್ವಲ್ಪ ತಡೆದುಕೊಳ್ಳುವಷ್ಟಾಯಿತು. ಆದರೆ ಮಾರ್ಫಿನ್ ಮತ್ತು
ಒಂದಿಷ್ಟು ಔಷಧಿ ದೇಹದೊಳಕ್ಕೆ ಹೋಗುತ್ತಿದ್ದಂತೆ ನನ್ನ ಗೆಳೆಯ ಏನೇನೋ ಹಲುಬಲು ಶುರುಮಾಡಿದ್ದ. ಅವನ ಹೆಂಡತಿಯ,
ಮಕ್ಕಳ ಗುರುತನ್ನೇ ಮರೆತಿದ್ದ. ಗೆಳೆಯನಿಗೆ ಆದ ರಕ್ತಸ್ರಾವದ ಪ್ರಮಾಣ ಸದ್ಗುರು ಅವರ ಮಿದುಳಿನಲ್ಲಾದ ರಕ್ತಸ್ರಾವಕ್ಕೆ
ಹೋಲಿಸಿದರೆ ಅರ್ಧದಷ್ಟು. ಅಷ್ಟಕ್ಕೇ ಅವನು ಪರದಾಡಿಬಿಟ್ಟಿದ್ದ.

ಆದರೆ ಸದ್ಗುರು ಮಿದುಳಿನ ರಕ್ತಸ್ರಾವವದ ನಂತರ ಕೂಡ ಸಮಾವೇಶದಲ್ಲಿ ಭಾಗಿಯಾಗಿದ್ದರು. ಅಷ್ಟೇ ಅಲ್ಲ, ಅಂದು ಅವರು ಮುಂಚಿನಂತೆ ವೈಚಾರಿಕ ಸ್ಪಷ್ಟತೆಯಿಂದ ಮಾತನಾಡಿದ್ದರು. ಇದು ಸದ್ಗುರುಗಳೇ ಹೇಳಿದ ದೇಹ, ಮನಸ್ಸು ಮತ್ತು ಅಹಂ ಈ ಮೂರನ್ನು ಪ್ರತ್ಯೇಕಿಸಿದವರಿಗಷ್ಟೇ ಸಾಧ್ಯ. ನಾನು ಇಲ್ಲಿ ಸದ್ಗುರುಗಳ ಯಾವೊಂದು ಮಹತ್ಕಾರ್ಯದ ಬಗ್ಗೆ ಹೆಚ್ಚಿಗೆ ವಿವರಿಸು ವುದಿಲ್ಲ. ಅವೆಲ್ಲವೂ ಸ್ವಲ್ಪ ಹುಡುಕಿದರೆ ನಿಮಗೆ ಸಿಕ್ಕಿಬಿಡುತ್ತದೆ. ಅವರ ಕೆಲವು ಮಹತ್ವಾಕಾಂಕ್ಷಿ ಕೆಲಸಗಳಾದ ‘ಮಣ್ಣನ್ನು ಉಳಿಸಿ’ (oZqಛಿ oಟಜ್ಝಿ), ‘ಕಾವೇರಿ ಕಾಲಿಂಗ್’ ಮೊದಲಾದ ಅಭಿಯಾನಗಳ ಬಗ್ಗೆ ನಿಮಗೆಲ್ಲ ತಿಳಿದೇ ಇರುತ್ತದೆ. ಅವುಗಳು ಒಂದು ಕಡೆ. ಇಂದು ಇಶಾ ಫೌಂಡೇಷನ್ ಜಗತ್ತಿನ ಹಲವಾರು ದೇಶಗಳಲ್ಲಿ ಕಾರ್ಯನಿರ್ವ ಹಿಸುತ್ತಿದೆ. ಅಲ್ಲೆಲ್ಲ ಯೋಗ, ಧ್ಯಾನ, ಹಿಂದೂ ಧರ್ಮದ ವೈಚಾರಿಕ ಪ್ರಚಾರ ಇವರಿಂದ ನಡೆಯುತ್ತಿದೆ. ಅಮೆರಿಕದ ಟೆನೆಸಿ ರಾಜ್ಯದಲ್ಲಿ ಇಶಾ ಆಶ್ರಮ ಸುಮಾರು ೧೪ ಸಾವಿರ ಎಕರೆ ವಿಸ್ತಾರದ ಜಾಗದಲ್ಲಿದೆ. ಅಲ್ಲಿನ ಧ್ಯಾನ ಮಂಟಪವೇ ೩೯ ಸಾವಿರ ಚದರ ಅಡಿ ವಿಸ್ತಾರದ್ದಿದೆ.

ಅಲ್ಲಿಗೆ ಸದ್ಗುರು ಆಗೀಗ ಭೆಟ್ಟಿ ನೀಡುತ್ತಿರುತ್ತಾರೆ. ಅಷ್ಟೇ ಅಲ್ಲ, ಕೆನಡಾ, ದಕ್ಷಿಣ ಅಮೆರಿಕ, ಇಂಗ್ಲೆಂಡ್, ಸ್ವಿಜರ್ಲೆಂಡ್, ಐರೋಪ್ಯ ರಾಷ್ಟ್ರಗಳು ಹೀಗೆ ಎಲ್ಲೆಡೆ ಆಶ್ರಮಗಳನ್ನು ಕಟ್ಟಿನಿಲ್ಲಿಸಿದ್ದಾರೆ. ಆಯಾ ದೇಶದ ಸ್ಥಳೀಯ ಜನರಿಗೆ ಭಾರತೀಯ ಅಧ್ಯಾತ್ಮವನ್ನು
ಪರಿಚಯಿಸುತ್ತಿದ್ದಾರೆ. ಇವರ ಕಾರ್ಯಕ್ರಮದ ಉದ್ದೇಶ ಮತಾಂತರವಲ್ಲದಿದ್ದರೂ ಇವರಲ್ಲಿ ಬಂದು ಬಹುತೇಕರು ಹಿಂದುತ್ವವನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

ಸದ್ಗುರು ಹಣ ಮಾಡುತ್ತಾರೆ, ಹಿಂದೂ ಜ್ಞಾನವನ್ನು ಮಾರಾಟಕ್ಕಿಟ್ಟಿದ್ದಾರೆ ಎಂಬೆಲ್ಲ ಮಾತುಗಳು ಆಗೀಗ ಕೇಳುವುದಿದೆ. ನೀವು ಸುಮ್ಮನೆ ಯೂಟ್ಯೂಬಿನಲ್ಲಿ Fake Sadhguru ಎಂದು ಹುಡುಕಿದರೆ ಅವರನ್ನು ದ್ವೇಷಿಸುವ ಒಂದು ದೊಡ್ಡ ವರ್ಗ ಕಣ್ಣೆದುರಿಗೆ ಕಾಣಿಸುತ್ತದೆ. ಆರೋಗ್ಯ ಸರಿಯಿಲ್ಲವೆಂದು ಅವರು ಮೊನ್ನೆ ಆಸ್ಪತ್ರೆಗೆ ದಾಖಲಾದಾಗ, ‘ಇದನ್ನೂ ಅವರ ದಿವ್ಯಶಕ್ತಿ ಯಿಂದಲೇ ಸರಿಪಡಿಸಿಕೊಳ್ಳಬೇಕಿತ್ತು’ ಎಂದು ಕುಹಕವಾಡಿದವರಿದ್ದಾರೆ. ಆದರೆ ಸದ್ಗುರು ಆ ರೀತಿಯಲ್ಲಿ ಯೋಗ, ಧ್ಯಾನವನ್ನು ಕಲಿಸುವು ದಿಲ್ಲ ಎಂಬ ಅರಿವು ಇವರಿಗ್ಯಾರಿಗೂ ಇಲ್ಲ.

ಇವರೆಲ್ಲ ಹೊರಗೆ ನಿಂತು ಕಲ್ಲು ಹೊಡೆಯುವುದನ್ನೇ ತಮ್ಮ ಅಸ್ತಿತ್ವವಾಗಿಸಿಕೊಂಡವರು. ಮೊದಲಿನಿಂದಲೂ ಇದೊಂದು ರೋಗ ಭಾರತೀಯರಿಗಿದೆ. ಅದು ನಮ್ಮಲ್ಲಿ ಇಂದಿಗೂ ಜೀವಂತವಾಗಿರುವ ವಸಾಹತುಶಾಹಿ ಬುದ್ಧಿಗೆ ಸಾಕ್ಷಿ. ಅಂತೆಯೇ ಅವರ ಈ ಜನಪ್ರಿಯತೆಯನ್ನು ವ್ಯವಸ್ಥಿತವಾಗಿ ಜರೆಯುವ ಒಂದು ವರ್ಗ ಪಶ್ಚಿಮದಲ್ಲಿಯೂ ಇದೆ. ಅದನ್ನು ಪೋಷಿಸಲು, ಖರ್ಚು ನೋಡಿಕೊಳ್ಳಲು ಅನ್ಯ ಧಾರ್ಮಿಕ ಸಂಸ್ಥೆಗಳಿವೆ. ಅವೆಲ್ಲದಕ್ಕೆ ಅವರದೇ ಆದ ಧಾರ್ಮಿಕ ದುರುದ್ದೇಶಗಳಿವೆ. ಈ ರೀತಿಯ ಅಸಹ್ಯವೆನಿಸುವ ಆರೋಪಗಳು, ದುರುದ್ದೇಶಪೂರಿತ ನಡೆಗಳು, ಪಿತೂರಿಗಳನ್ನು ಹಿಂದೂ ಧರ್ಮದ ಗುರುಗಳೆಲ್ಲ ಅನುಭವಿಸ ಲೇಬೇಕು. ಜೀವಂತವಿರುವ ಗುರುಗಳನ್ನು ಬಿಡಿ, ಅದೆಷ್ಟೋ ಹಿಂದೆ ಬದುಕಿದ್ದ ಮಹಾನ್ ಗುರು ವ್ಯಕ್ತಿತ್ವವನ್ನು ಇಂದಿಗೂ ಜರೆಯುವವರಿದ್ದಾರೆ.

ಇತ್ತೀಚೆಗೆ ಪುರುಷೋತ್ತಮ ಬಿಳಿಮಲೆ ಎಂಬ ಅಧಿಕ ಪ್ರಸಂಗಿಯೊಬ್ಬರು -ಸ್‌ಬುಕ್‌ನಲ್ಲಿ ರಾಮಕೃಷ್ಣ ಪರಮಹಂಸರನ್ನು ಒಬ್ಬ ಕೆಟ್ಟ ಗಂಡ ಎಂಬರ್ಥದಲ್ಲಿ ಬರೆದುಕೊಂಡಿದ್ದರು. ಇದನ್ನು ಯಾರೋ ಹೇಳಿದ್ದು, ಕುವೆಂಪು ರಾಮಕೃಷ್ಣ ಪರಮಹಂಸರ ಬಗ್ಗೆ ಹಗುರವಾಗಿ ಮಾತನಾಡಿದ್ದರು ಎಂದೆಲ್ಲ. ‘ಇವನ್ಯಾರಯ್ಯಾ ಪರಮಹಂಸ, ಹೆಂಡತಿಯ ಜತೆ ನಡೆಯದವ ಲೋಕದ ಜತೆ ನಡೆಯುತ್ತಾನಂತೆ!’ ಎಂದು ಪರಮಹಂಸರ ಬಗ್ಗೆ ಕುವೆಂಪು ಹೇಳಿದ್ದನ್ನು ಇನ್ಯಾರೋ ಇಂದು ಬದುಕಿಲ್ಲದವರು ಹೇಳಿದ್ದರು ಎಂದು ಬರೆದುಕೊಂಡಿ ದ್ದರು. ಈ ರೀತಿ ತೀರಾ ಹೇಸಿಗೆಯೆನಿಸುವ ರೀತಿಯಲ್ಲಿ ನಮ್ಮ ಸನಾತನ ಗುರುಗಳ ಬಗ್ಗೆ ಕೇವಲವಾಗಿ ಮಾತನಾಡುವುದು, ಹಳಿಯುವುದು ತೀರಾ ಸಾಮಾನ್ಯ. ಅಂತೆಯೇ ಇಂಥ ಆರೋಪಗಳು ಸದ್ಗುರುಗಳ ಬಗ್ಗೆಯೂ ಇವೆ.

ನಿಮ್ಮಲ್ಲಿ ಒಂದು ಪ್ರಶ್ನೆ. ಜಗದ್ಗುರು ಎಂಬ ಶಬ್ದವನ್ನು ನಾವು ಹಲವು ಮಠಾಧೀಶರಿಗೆ ಬಳಸುವುದುಂಟು. ಇಂಥ ನಾಮವಿಶೇಷ ಹಲವು ಪೀಠಗಳಿಗಿವೆ. ಆದರೆ ಅವರಲ್ಲಿ ಭಾರತವನ್ನು, ಅದರಾಚೆಯ ವಿಶಾಲ ಜಗತ್ತನ್ನು ಇಂದಿನ ಕಾಲದಲ್ಲಿ ವ್ಯಾಪಿಸಿದವರು ಬಹಳ ಕಡಿಮೆ. ಪೂಜ್ಯ ಸದ್ಗುರು, ಆರ್ಟ್ ಆಫ್ ಲಿವಿಂಗ್‌ನ ಪೂಜ್ಯ ರವಿಶಂಕರರು ಹೀಗೆ ಕೆಲವೇ ಕೆಲವರು. ಸದ್ಗುರು ಮಠಾಧೀಶ ರಂತಲ್ಲ, ಅವರನ್ನು ಹಾಗೆ ನೋಡುವುದು, ಪರಿಭಾವಿಸುವುದು ಕೂಡ ಸಲ್ಲ. ಅವರೊಬ್ಬ ಪ್ರಾಕ್ಟಿಕಲ್ ನವ್ಯಗುರು. ಅವರಿಗೆ ನಿರರ್ಗಳ ಭಾಷೆ ಗೊತ್ತು, ವ್ಯವಹಾರ ಗೊತ್ತು, ಯಾವುದನ್ನು ಹೇಗೆ ನಿಭಾಯಿಸಬೇಕೆಂಬ ಅರಿವು, ಮಾಹಿತಿಯಿದೆ. ಬಹುಶಃ ಸೋಷಿಯಲ್ ಮೀಡಿಯಾವನ್ನು ಸದ್ಗುರು ಬಳಸಿಕೊಂಡಷ್ಟು ಇನ್ನೊಬ್ಬ ಧರ್ಮಗುರು ಬಳಸಿಕೊಂಡದ್ದು ನಾನಂತೂ ನೋಡಿಲ್ಲ.

ನಮ್ಮಲ್ಲಿ ಇಂದಿಗೂ ಅದೆಷ್ಟೋ ಸಮರ್ಥ ಸ್ವಾಮೀಜಿ, ಧಾರ್ಮಿಕ ಗುರುಗಳು ಇದ್ದಾರೆ. ಅವರೆಲ್ಲ ಅಧ್ಯಾತ್ಮದಲ್ಲಿ ಶ್ರೇಷ್ಠ ಸಾಧನೆ ಗೈದವರೇ. ಆದರೆ ಅವರ‍್ಯಾರೂ ಸದ್ಗುರುವಾಗಿಲ್ಲ. ನಮ್ಮಲ್ಲಿ ಧಾರ್ಮಿಕ ವಿಚಾರ ಬಂದಾಕ್ಷಣ ಅಲ್ಲಿ ಹಣ, ವ್ಯವಹಾರ ಬರಬಾ ರದು, ಗುರು, ಸನ್ಯಾಸಿಯಾದವನು ಸರ್ವಸಂಗ ಪರಿತ್ಯಾಗಿಯಾಗಿರಬೇಕು, ಹಣವನ್ನಂತೂ ಮುಟ್ಟಲೇ ಬಾರದು ಎಂಬುದು ನಂಬಿಕೆ. ಓಬಿರಾಯನ ಕಾಲದ್ದಾದರೂ ಅದೇಕೋ ಈ ನಂಬಿಕೆಯ ಮೇಲೆ ನಮಗೆ ಧರ್ಮಕ್ಕಿಂತ ಜಾಸ್ತಿ ಪ್ರೀತಿ ಇದ್ದಂತಿದೆ. ಅದೇ ಕಾರಣಕ್ಕೆ ಸದ್ಗುರು ಇಷ್ಟು ದುಡ್ಡು ಮಾಡಿದರು, ಅವರ ಕಾರ್ಯಕ್ರಮಗಳಿಗೆ ಇಷ್ಟು ಹಣ ಪಡೆಯುತ್ತಾರೆ ಇತ್ಯಾದಿ ಆರೋಪಗಳು. ಈ ನೆಲದಲ್ಲಿ ಅಧ್ಯಾತ್ಮ ವಿಷಯವಿಟ್ಟುಕೊಂಡು ಮೋಸ ಮಾಡಿದ, ಮಾಡುತ್ತಿರುವ ಢೋಂಗಿ ಗುರುಗಳಿಗೇನೂ ಕಡಿಮೆಯಿಲ್ಲ.

ಆದರೆ ಅದೇ ತೂಕದ ತಕ್ಕಡಿಯಲ್ಲಿ ಸದ್ಗುರುವಿನಂಥವರನ್ನು ನೋಡುವ ಕೆಲಸ ಅಕ್ಷಮ್ಯ. ಹಿಂದೂ ಗುರುಗಳನ್ನು, ಮಠಮಾನ್ಯ ಗಳನ್ನು ಜರೆಯುವುದೇ ಪ್ರಗತಿಶೀಲತೆ ಎಂದು ತಿಳಿದುಕೊಂಡಿರುವ ಇಂಥ ಜನರಿಗೆ, ಇದು ಬ್ರಿಟಿಷರು ಈ ದೇಶ ಒಡೆಯಲು ಬಳಸಿಕೊಂಡ ಅಸ ಎಂಬ ಕಿಂಚಿತ್ ಅರಿವೂ ಇಲ್ಲ. ಸದ್ಗುರುಗಳ ಕಾರ್ಯವ್ಯಾಪ್ತಿ, ಅದು ಸಮಾಜದಲ್ಲಿ ತಂದ ಬದಲಾವಣೆ, ಅದರ ಜತೆಯಲ್ಲಿ ಹಿಂದುತ್ವ ಈ ಮೂಲಕ ಹರಡುತ್ತಿರುವುದು ಇವು ಯಾವುದೂ ಈ ಮಂದಿಗೆ ಕಾಣಿಸುವುದಿಲ್ಲ. ‘ಇನ್ನರ್ ಎಂಜಿನಿಯರಿಂಗ್ ಎಂಬ ಹೆಸರಿನಲ್ಲಿ ಸದ್ಗುರು ದುಡ್ಡು ಮಾಡುತ್ತಿದ್ದಾರೆ’ ಎಂಬುದಷ್ಟೇ ಇವರ ಆರೋಪ. ಇವರಿಗೆ ಎಲ್ಲವೂ ಪುಕ್ಸಟ್ಟೆ ಆಗಬೇಕು. ಆಗಲೂ ಇವರ ಪ್ರಶ್ನೆ ನಿಲ್ಲುವುದಿಲ್ಲ. ಇದೆಲ್ಲ ಕಾರ್ಯಕ್ರಮಕ್ಕೆ ತಗಲುವ ಖರ್ಚನ್ನು ಯಾರು ಭರಿಸುತ್ತಾರೆ ಎಂಬ ಪ್ರಶ್ನೆಗೆ ಇವರಲ್ಲಿ ಉತ್ತರವಿಲ್ಲ.

ಸದ್ಗುರು ತಮ್ಮ ದೇಹ ಚೇತರಿಸಿಕೊಂಡ ನಂತರ ಮೊನ್ನೆ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ಅದು ಸಮಾಧಾನ ತರುವಂಥದ್ದು. ಆದರೆ ಇದೇ ಸಮಯದಲ್ಲಿ ಇನ್ನೊಂದು ಪ್ರಶ್ನೆಯೇಳುತ್ತದೆ. ಅವರದು ಯಾವುದೇ ಪೀಠವಲ್ಲ, ಅವರ ನಂತರ ಉತ್ತರಾಧಿಕಾರಿ ನೇಮಿಸುವುದು ಇತ್ಯಾದಿ ಇದ್ದಂತಿಲ್ಲ. ಹೀಗಿರುವಾಗ ಅವರ ನಂತರ ಮುಂದೇನು, ಯಾರು ಈ ಕೆಲಸವನ್ನು ಮುಂದುವರಿಸಿ ಕೊಂಡು ಹೋಗುತ್ತಾರೆ ಎಂಬುದು ಪ್ರಶ್ನೆ. ಏಕೆಂದರೆ ಅವರು ಕಟ್ಟಿ ನಿಲ್ಲಿಸಿದ ವ್ಯವಸ್ಥೆ ಇನ್ನೊಬ್ಬರಿಂದ ನಿರ್ವಹಿಸಲೂ ಅಸಾಧ್ಯ. ಜಗದ್ಗುರುಗಳಿಗೆ ಪರ್ಯಾಯ ಇನ್ನೊಂದು ಜಗದ್ಗುರು ಮಾತ್ರ.