Saturday, 14th December 2024

ಸೇಫ್ ಡಿಪಾಸಿಟ್ ಲಾಕರ್‌ನ ಸುತ್ತಮುತ್ತ

ವಾಣಿಜ್ಯ ವಿಭಾಗ

ರಮಾನಂದ ಶರ್ಮಾ

ಬದುಕಿನ ಜಂಜಾಟದಲ್ಲಿ ಜತನದಿಂದ ಕಾಯ್ದುಕೊಂಡು ಬಂದ ಬೆಳ್ಳಿ-ಬಂಗಾರದ ಒಡವೆ- ವಸ್ತುಗಳು, ಅಮೂಲ್ಯ ದಾಖಲೆಗಳು ಮತ್ತು ಕಾಗದ ಪತ್ರಗಳು ಕೆಲವೊಮ್ಮೆ ಕಳವಾಗುವುದಿದೆ ಅಥವಾ ಕೈತಪ್ಪಿಹೋಗುವುದಿದೆ. ಇಂಥ ವೇಳೆ ಅವನ್ನು ಮರಳಿ ಪಡೆಯು
ವುದು/ಗಳಿಸುವುದು ದುಸ್ತರವೇ. ಹೀಗಾಗಿ ಬ್ಯಾಂಕುಗಳು ‘ಸೇಫ್ ಡಿಪಾಸಿಟ್ ಲಾಕರ್’ ವ್ಯವಸ್ಥೆಯೊಂದಿಗೆ ಈ ನಿಟ್ಟಿನಲ್ಲಿ ಜನರ ಅಮೂಲ್ಯ ವಸ್ತುಗಳಿಗೆ ಭದ್ರತೆ ಒದಗಿಸುವುದುಂಟು.

ಈ ಲಾಕರ್ ವ್ಯವಸ್ಥೆಗೆ ಸೇವಾಶುಲ್ಕವಿದ್ದು, ಇದು ವಿವಿಧ ಕಾಲಘಟ್ಟಗಳಲ್ಲಿ ಇನ್ನಿತರ ಶುಲ್ಕಗಳಂತೆ ಮತ್ತು ಹಣದುಬ್ಬರಕ್ಕೆ
ತಕ್ಕಂತೆ ಏರುತ್ತಾ ಹೋಗುತ್ತದೆ. ಇದು ಬ್ಯಾಂಕುಗಳಿಗೆ ಬಡ್ಡಿಯೇತರ ಆದಾಯದ ಮೂಲವೂ ಆಗಿರುತ್ತದೆ. ಇನ್ನಿತರ ಬಡ್ಡಿಯೇತರ ಆದಾಯಗಳಿಗೆ ಹೋಲಿಸಿದಾಗ ಈ ಆದಾಯವು ಅಷ್ಟು ಗಮನಾರ್ಹವಲ್ಲದಿದ್ದರೂ, ಗ್ರಾಹಕರ ಹಿತದೃಷ್ಟಿಯಲ್ಲಿ ಮತ್ತು ‘ಮೌಲ್ಯ ವರ್ಧಿತ ಸೇವೆ’ಯ ಹೆಸರಿ ನಲ್ಲಿ ಬ್ಯಾಂಕುಗಳು ಈ ಸೇವೆಯನ್ನು ನೀಡುತ್ತವೆ.

ಆದರೀಗ, ಬ್ಯಾಂಕ್ ಲಾಕರ್‌ಗಳು ಗ್ರಾಹಕರು ಭರವಸೆ ಇಟ್ಟುಕೊಂಡಷ್ಟು ಸುರಕ್ಷಿತವೇ? ಎಂಬ ಪ್ರಶ್ನೆ ಉದ್ಭವವಾಗಿದೆ. ಆಗೊಮ್ಮೆ ಈಗೊಮ್ಮೆ ಬ್ಯಾಂಕ್ ಲಾಕರ್‌ಗಳಿಂದ ಗ್ರಾಹಕರ ವಸ್ತುಗಳು ನಾಪತ್ತೆಯಾಗುವ ಸುದ್ದಿ ಮಾತ್ರವಲ್ಲದೆ, ಲಾಕರ್ ನಲ್ಲಿಟ್ಟಿದ್ದ ಕರೆನ್ಸಿ ನೋಟುಗಳನ್ನು ಗೆದ್ದಲುಹುಳು ತಿಂದು ಹಾಕಿರುವ ಸುದ್ದಿಯೂ ಗ್ರಾಹಕರನ್ನು ಚಕಿತಗೊಳಿಸಿದೆ. ಗುಜರಾತ್‌ನ ವಡೋದರಾದಲ್ಲಿ ವರ್ಷಗಳ ಹಿಂದೆ ೨.೨೦ ಲಕ್ಷ ರು. ಮತ್ತು ಇತ್ತೀಚೆಗೆ ನೋಯ್ಡಾದಲ್ಲಿ ೧೮ ಲಕ್ಷ ರು. ಮೌಲ್ಯದ ಕರೆನ್ಸಿಯನ್ನು ಗೆದ್ದಲು ‘ಗುಳುಂ’ ಮಾಡಿದ ಘಟನೆ ವರದಿಯಾಗಿದ್ದು, ಗ್ರಾಹಕರು ಇದಕ್ಕೆ ಬ್ಯಾಂಕನ್ನು ಹೊಣೆ ಮಾಡಿಪರಿಹಾರ ಕೋರಿದ್ದಾರಂತೆ.

ಈ ಘಟನೆಗಳ ಬಗ್ಗೆ ಮಾಧ್ಯಮದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ ಮತ್ತು ಬ್ಯಾಂಕುಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳ ಲಾಗಿದೆ. ಈ ಘಟನೆಗಳ ನಂತರ ಬ್ಯಾಂಕುಗಳೂ ಹೆಚ್ಚಿನ ಎಚ್ಚರಿಕೆ ವಹಿಸುತ್ತಿವೆ. ಬ್ಯಾಂಕ್ ಲಾಕರ್‌ಗೆ ಸಂಬಂಧಪಟ್ಟ ಕಾನೂನು ಮತ್ತು ನೀತಿ-ನಿಯಮಾವಳಿ ಅಡಿಯಲ್ಲಿ, ಬ್ಯಾಂಕು ಗ್ರಾಹಕರಿಗೆ ಈ ನಷ್ಟವನ್ನು ಭರ್ತಿಮಾಡಿಕೊಡುವ ಸಾಧ್ಯತೆ ತೀರಾ ಕಡಿಮೆ. ಈ
ನಿಯಮಾವಳಿಯನ್ವಯ, ಗ್ರಾಹಕರು ಲಾಕರ್ ಸೌಲಭ್ಯವನ್ನು ಬೆಳ್ಳಿ-ಬಂಗಾರದ ಒಡವೆಗಳು, ಮಹತ್ವದ ದಾಖಲೆಗಳನ್ನು ಇರಿಸಲು ಮಾತ್ರ ಉಪಯೋಗಿಸಬೇಕು; ಚಿನ್ನದ ಗಟ್ಟಿ/ ಬಿಸ್ಕಿಟ್, ಕರೆನ್ಸಿ ನೋಟು, ರಾಸಾಯನಿಕ ಮತ್ತು ಸ್ಫೋಟಕ ಗಳನ್ನು ಇರಿಸಲು ಬಳಸಬಾರದು. ಮೇಲೆ ಉಲ್ಲೇಖಿಸಿರುವ ಪ್ರಕರಣಗಳಲ್ಲಿ ಗ್ರಾಹಕರು ಕರೆನ್ಸಿ ನೋಟುಗಳನ್ನು ಇಟ್ಟಿದ್ದು, ಇದು ಲಾಕರ್ ಷರತ್ತಿನ ಉಲ್ಲಂಘನೆಯಾಗಿರುತ್ತದೆ.

ಬ್ಯಾಂಕಿನ ಲಾಕರ್ ಸೌಲಭ್ಯವು, ಬ್ಯಾಂಕು ಮತ್ತು ಗ್ರಾಹಕರ ಮಧ್ಯೆ ಸ್ಟ್ಯಾಂಪ್ ಪೇಪರ್ ಮೇಲೆ ಏರ್ಪಡುವ ಒಪ್ಪಂದವನ್ನು ಆಧರಿ ಸಿರುತ್ತದೆ. ಈ ಒಪ್ಪಂದದಲ್ಲಿ ಷರತ್ತುಗಳು ವಿಸ್ತೃತ ವಾಗಿರುತ್ತವೆ. ಒಪ್ಪಂದಕ್ಕೆ ಸಹಿಮಾಡುವಾಗ ಕಾನೂನಿನ ಪ್ರಕಾರ ‘ಓದಿರುತ್ತಾರೆ’ ಎಂದೇ ತಿಳಿಯಲಾಗುವುದು. ಈ ಷರತ್ತುಗಳು ತಿಳಿದಿರಲಿಲ್ಲ ಎಂದು ಯಾವುದೇ ಕಾರಣಕ್ಕೂ ಹೇಳಲಾಗದು. ಅಂತೆಯೇ, ಗ್ರಾಹಕರ ‘ಪರಿಹಾರ ಬೇಡಿಕೆ’ಯು ಮೇಲ್ನೋಟಕ್ಕೆ ಕಷ್ಟಸಾಧ್ಯ ಎನ್ನಲಾಗುತ್ತದೆ.

ಹಾಗೆಯೇ, ಈ ಪ್ರಕರಣದ ಮುಂದುವರಿದ ಭಾಗವಾಗಿ, ಲಾಕರ್‌ನಲ್ಲಿ ಇರಿಸಿದ ಕರೆನ್ಸಿ ನೋಟುಗಳಿಂದಾಗಿ ಅಂಥ ಗ್ರಾಹಕರು ಆದಾಯ ತೆರಿಗೆ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಬೇಕಾಗಬಹುದು. ಲಾಕರ್‌ನಲ್ಲಿ ಇರಿಸಿದ ವಸ್ತುಗಳ ಬಗ್ಗೆ ನಿರ್ದಿಷ್ಟವಾಗಿ ವಿಮೆ
ಇರುವುದಿಲ್ಲ, ವಿಮಾ ಕಂಪನಿಗಳು ಈ ನಿಟ್ಟಿನಲ್ಲಿ ಸ್ವಲ್ಪ ಹಿಂಜರಿಕೆ ತೋರಿಸುತ್ತವೆ. ಇದಕ್ಕೆ ಕಾರಣ, ಲಾಕರ್‌ನಲ್ಲಿ ಇರಿಸಿದ ವಸ್ತುಗಳ ಮೌಲ್ಯದ ಘೋಷಣೆ ಮತ್ತು ಅವುಗಳ ಪರಿಶೀಲನೆ ಸ್ವಲ್ಪ ಕ್ಲಿಷ್ಟಕರ. ಗ್ರಾಹಕರು ಪ್ರತಿ ಬಾರಿ ಲಾಕರ್ ಅನ್ನು ಆಪರೇಟ್ ಮಾಡಿಹೋಗುವಾಗ, ಲಾಕರ್‌ನಲ್ಲಿ ಉಳಿದಿರುವ ವಸ್ತುಗಳ ಬಗ್ಗೆ ಘೋಷಣೆ ಮತ್ತು ಮೌಲ್ಯಮಾಪನ ಮಾಡಿಸುವುದು ಕಷ್ಟ.

ಹಾಗೆಯೇ ಗ್ರಾಹಕರು ಲಾಕರ್‌ನಲ್ಲಿ ತಾವು ಇರಿಸಿರುವ ವಸ್ತುಗಳನ್ನು ಮೂರನೆಯವರಿಗೆ ತೋರಿಸಲು (ಉದ್ದೇಶ ಯಾವುದೇ ಇದ್ದರೂ) ಹಿಂದೇಟು ಹಾಕುತ್ತಾರೆ. ಇರಿಸಿದ ಚಿನ್ನ-ಬೆಳ್ಳಿಯ ಗೋಪ್ಯತೆ ಕಾಯ್ದುಕೊಳ್ಳಲು ಬಯಸುತ್ತಾರೆ. ನಿಯಮಗಳ ಉಲ್ಲಂಘನೆಯಾದರೆ, ಇಲ್ಲಿಯೂ ಪರಿಹಾರ ದೊರಕುವುದು ಕಷ್ಟ. ವಿಮಾ ಕಂಪನಿಗಳು ಪರಿಹಾರ ನೀಡುವಾಗ, ವಾಹನ ಅಪಘಾತಗಳ ಸಂದರ್ಭದಲ್ಲಿ ಪರೀಕ್ಷಿಸುವಂತೆ ನಿಯಮಾವಳಿಯ ಉಲ್ಲಂಘನೆಯಾಗಿದೆಯೇ ಎಂಬುದನ್ನು ಕೂಲಂಕಷವಾಗಿ
ವಿಶ್ಲೇಷಿಸುತ್ತವೆ ಮತ್ತು ಪರೀಕ್ಷಿಸುತ್ತವೆ.

ಗ್ರಾಹಕರು ಪ್ರತಿಬಾರಿ ಲಾಕರ್ ಆಪರೇಟ್ ಮಾಡಿ, ಕ್ಲೋಸ್ ಮಾಡಿ ಹೋಗುವಾಗ ವಿಮಾ ಕಂಪನಿಯವರು ಬಂದು ವಸ್ತುಗಳನ್ನು ಪರೀಕ್ಷಿಸಲಾಗದು. ಈ ನಿಟ್ಟಿನಲ್ಲಿ ಬ್ಯಾಂಕು, ಗ್ರಾಹಕ ಮತ್ತು ವಿಮಾ ಕಂಪನಿಯ ಮಧ್ಯೆ ಸಮಯ ಹೊಂದಾಣಿಕೆ ಹಾಗೂ ಸಾಮ ರಸ್ಯ ಕ್ಲಿಷ್ಟಕರ. ಲಾಕರ್‌ನಲ್ಲಿ ತಾವಿಟ್ಟ ವಸ್ತುಗಳ ಬಗ್ಗೆ ಗೋಪ್ಯತೆ ಕಾಯ್ದುಕೊಳ್ಳಲು ಗ್ರಾಹಕರು ಇಚ್ಛಿಸುತ್ತಾರೆ. ಈ ನಡೆಯಿಂದಾಗಿ ಸ್ವತಃ ಗ್ರಾಹಕರಿಗೆ, ಬ್ಯಾಂಕಿನವರಿಗೆ ಮತ್ತು ವಿಮಾ ಕಂಪನಿಯವರಿಗೆ ಅನನುಕೂಲವಾಗುತ್ತದೆ. ಬ್ಯಾಂಕುಗಳಿಗೆ ಇರುವ ಸಾಮಾನ್ಯ ವಿಮಾ ರಕ್ಷಣೆ ಅಡಿಯಲ್ಲಿ ಕ್ಲೇಮ್ ಮಾಡಬಹುದಾದರೂ, ಇದು ಹಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಹೀಗಾಗಿ ತಾರ್ಕಿಕ ಅಂತ್ಯ ಕಾಣಿಸುವುದು ಕಷ್ಟಕರವಾಗಿರುತ್ತದೆ.

ಲಾಕರ್ ನಿಯಮಾವಳಿಯಲ್ಲಿ ಇತ್ತೀಚೆಗೆ ಆಮೂಲಾಗ್ರ ಬದಲಾವಣೆಯಾಗಿದ್ದು, ಲಾಕರ್‌ನಿಂದ ಕಾಣೆಯಾದ ವಸ್ತುಗಳಿಗೆ ನೀಡುವ ಪರಿಹಾರವನ್ನು, ಲಾಕರ್‌ನ ವಾರ್ಷಿಕ ಬಾಡಿಗೆಯ ೧೦೦ ಪಟ್ಟು ಪ್ರಮಾಣಕ್ಕೆ ಸೀಮಿತಗೊಳಿಸಲಾಗಿದೆ. ತನ್ನ ಲಾಕರ್‌ ನಲ್ಲಿಟ್ಟ ವಸ್ತುಗಳಿಗೆ ಬ್ಯಾಂಕುಗಳು ಶೇ.೧೦೦ರಷ್ಟು ಗ್ಯಾರಂಟಿ ನೀಡುವುದಿಲ್ಲ ಎಂದು ಹೇಳಲಾಗುತ್ತದೆ. ಒಂದೊಮ್ಮೆ ಬ್ಯಾಂಕು ದಿವಾಳಿಯಾದರೆ ಅಥವಾ ಮುಚ್ಚಿ ಹೋದರೆ, ಅಂಥ ಸಂದರ್ಭದಲ್ಲಿ ಯಾವುದೇ ರೀತಿಯ ವಿಮೆ ದೊರೆಯುವುದಿಲ್ಲ. ಸ್ವಲ್ಪ ಮಟ್ಟಿನ ಪರಿಹಾರ ದೊರಕಬಹುದಷ್ಟೇ. ಲಾಕರ್‌ನಲ್ಲಿಟ್ಟ ವಸ್ತುಗಳು ಅದಕ್ಕಿಂತ ಹೆಚ್ಚು ಮೌಲ್ಯದ್ದಾಗಿದ್ದರೆ, ಯಾವುದೇ ಸುರಕ್ಷತೆ ಇರುವುದಿಲ್ಲ.

ಇದಕ್ಕೆ ಕಾರಣ, ಲಾಕರ್‌ನಲ್ಲಿಟ್ಟ ವಸ್ತುಗಳ ಬಗ್ಗೆ ಬ್ಯಾಂಕುಗಳಿಗೆ ಸ್ಪಷ್ಟತೆ ಇರುವುದಿಲ್ಲ. ಎಷ್ಟೋ ಗ್ರಾಹಕರು, ಮುಖ್ಯವಾಗಿ ಅನಿವಾಸಿ ಗ್ರಾಹಕರು ವರ್ಷಗಟ್ಟಲೆ ಲಾಕರ್ ಆಪರೇಟ್ ಮಾಡದಿರುವುದರಿಂದ ಇಂಥ ಘಟನೆ (ವಸ್ತು ನಾಪತ್ತೆಯಾಗುವಿಕೆ, ಗೆದ್ದಲು ಹಿಡಿಯುವಿಕೆ) ನಡೆದರೆ ತಕ್ಷಣ ಗಮನಕ್ಕೆ ಬರುವುದಿಲ್ಲ. ಅಂತೆಯೇ ಗ್ರಾಹಕರು ವರ್ಷಕ್ಕೆ ಕನಿಷ್ಠ ೨-೩ ಬಾರಿಯಾದರೂ
ತಮ್ಮ ಲಾಕರ್ ಅನ್ನು ಕಡ್ಡಾಯವಾಗಿ ಆಪರೇಟ್ ಮಾಡಬೇಕು ಎಂದು ಬ್ಯಾಂಕುಗಳು ಅವರನ್ನು ಒತ್ತಾಯಿಸುತ್ತವೆ ಮತ್ತು ಈ ನಿಟ್ಟಿನಲ್ಲಿ ನಿಯಮಾವಳಿಯೂ ಇದೆಯಂತೆ. ಬ್ಯಾಂಕುಗಳ ನಿರ್ಲಕ್ಷ್ಯ ಮತ್ತು ಸೇವಾನ್ಯೂನತೆಯಿಂದ ನಷ್ಟವಾಗಿದೆ ಎಂದು
ಕ್ಲೇಮ್ ಮಾಡಬಹುದಾದರೂ, ಇದನ್ನು ಸಮರ್ಥವಾಗಿ ದೃಢೀಕರಿಸುವುದು ತುಂಬಾ ಕಷ್ಟ.

ಗ್ರಾಹಕರು ಲಾಕರ್ ಆಪರೇಟ್ ಮಾಡಿಹೋದ ತಕ್ಷಣ ಪ್ರತಿಬಾರಿಯೂ ಅದನ್ನು ಸರಿಯಾಗಿ ಮುಚ್ಚಿರುವುದನ್ನು ಬ್ಯಾಂಕಿನವರು ಪರೀಕ್ಷಿಸುವುದಿಲ್ಲ. ದಿನದ ಕೊನೆಗೆ ಬ್ಯಾಂಕನ್ನು ಮುಚ್ಚುವಾಗ, ಲಾಕರ್ ಕೋಣೆಯಲ್ಲಿ ಎಲ್ಲ ಲಾಕರ್‌ಗಳೂ ಮುಚ್ಚಿರುವುದನ್ನು ಒಮ್ಮೆ ಖಾತ್ರಿಪಡಿಸಿಕೊಳ್ಳುತ್ತಾರಷ್ಟೇ. ಪ್ರಕರಣವೊಂದರಲ್ಲಿ ‘ವಿಐಪಿ’ ಗ್ರಾಹಕರೊಬ್ಬರು ಲಾಕರ್ ಆಪರೇಟ್ ಮಾಡಿದ ನಂತರ ಅದನ್ನು ಸರಿಯಾಗಿ ಮುಚ್ಚದೆ ತೆರಳಿದ್ದರು; ಇದನ್ನು ಅವರ ಗಮನಕ್ಕೆ ತಂದಾಗ, ಬ್ಯಾಂಕಿನವರೇ ತಮ್ಮ ಲಾಕರ್ ತೆರೆದಿದ್ದಾರೆ ಎಂದು ಆ ಗ್ರಾಹಕರು ಪೊಲೀಸರಿಗೆ ದೂರುನೀಡಲು ಮುಂದಾಗಿದ್ದರಂತೆ!

ಲಾಕರ್ ಸೇವೆ ಬ್ಯಾಂಕುಗಳಿಗೆ ಗಮನಾರ್ಹ ಆದಾಯ ವನ್ನೇನೂ ನೀಡುವುದಿಲ್ಲ. ಈ ವ್ಯವಹಾರದಲ್ಲಿ ಮಾಡುವ ಹೂಡಿಕೆ, ಇದರಲ್ಲಿರುವ ರಿಸ್ಕ್, ತಗಲುವ ಮಾನವಶಕ್ತಿ, ಸಮಯ ಮತ್ತು ಆದಾಯವನ್ನು ಪರಿಗಣಿಸಿ ಕೆಲವು ಬ್ಯಾಂಕುಗಳು ಇದನ್ನು ಉತ್ತೇಜಿಸುವುದಿಲ್ಲವಂತೆ. ಇದರ ಸತ್ಯಾಸತ್ಯತೆ ಬೇರೆ ಮಾತು. ಪ್ರತಿ ವ್ಯವಹಾರದಲ್ಲೂ ರಿಸ್ಕ್ ಇದ್ದೇ ಇರುತ್ತದೆ. ಇಂಥ ರಿಸ್ಕ್‌ಗಳ ಹೊರತಾಗಿಯೂ ಲಾಕರ್ ವ್ಯವಸ್ಥೆಯು ಒಂದು ಶ್ಲಾಘನೀಯ ಸೇವೆಯಾಗಿದ್ದು, ಇದನ್ನು ಹೊಣೆಗಾರಿಕೆಯಿಂದ ಬಳಸುವುದು ಗ್ರಾಹಕರ ಬಾಬತ್ತಾಗಿದೆ.

(ಅರ್ಥಿಕ ಮತ್ತು ರಾಜಕೀಯ ವಿಶ್ಲೇಷಕರು)