ಶಶಾಂಕಣ
ಶಶಿಧರ ಹಾಲಾಡಿ
ನಮ್ಮ ನಾಡಿನ ಸುಂದರ ಜಲಪಾತಗಳಲ್ಲಿ ಒಂದಾದ ಕಲ್ಹತ್ತಗಿರಿಯ ಜಲಪಾತದ ಮೂಲವನ್ನು ಶೋಧಿಸುತ್ತಾ, ನಾವು ಗೆಳೆಯರು ಕೆಮ್ಮಣ್ಣುಗುಂಡಿಯ ಪರ್ವತ ಭಿತ್ತಿಗಳಲ್ಲಿ ಚಾರಣ ಮಾಡುತ್ತಾ ಇದ್ದೆವು.
1984ನೆಯ ಇಸವಿ. ಕೆಮ್ಮಣ್ಣುಗುಂಡಿಯ ಸುತ್ತಲೂ ಹರಡಿದ್ದ ಬೋಳು ಬೋಳಾಗಿ ಕಾಣಿಸುತ್ತಿದ್ದ ಬೆಟ್ಟಗಳಲ್ಲಿ ಅರಣ್ಯ
ಇಲಾಖೆ ಯವರು ಉದ್ದಕ್ಕೂ ಪಾತಿ ತೋಡಿ, ಸಾಲಾಗಿ ನೂರಾರು ನೀಲಗಿರಿ ಗಿಡಗಳನ್ನು ನೆಟ್ಟಿದ್ದರು. ಅಲ್ಲೇ ಸ್ವಲ್ಪ ಕೆಳಗೆ, ಬೆಟ್ಟದ ಕಣಿವೆಯಲ್ಲಿ, ಹುಲ್ಲುಗಾವಲು ಇಲ್ಲದ ಪ್ರದೇಶದಲ್ಲಿ ಜೀವವೈವಿಧ್ಯತೆಯಿಂದ ತುಂಬಿದ ದಟ್ಟವಾದ ಕಾಡು ಬೆಳೆದಿತ್ತು. ಆದರೂ, ಎತ್ತರದ ಪ್ರದೇಶಗಳಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ನೀಲಿಗಿರಿ ಗಿಡಗಳನ್ನು ಮತ್ತು ನಂತರದ ವರ್ಷಗಳಲ್ಲಿ ಅಕೇಶಿಯಾ
ಗಿಡಗಳನ್ನು ಸರಕಾರವೇ ಏಕೆ ನೆಡಿಸುತ್ತಿದೆ ಎಂದು ನಮಗೆ ಅಚ್ಚರಿ.
ಬೋಳು ಬೆಟ್ಟದಲ್ಲಿ ಗಿಡ ನೆಡುವ ಬದಲು ಅಲ್ಲಿರುವ ದಟ್ಟಕಾಡನ್ನೇ ರಕ್ಷಣೆ ಮಾಡಬಹುದಲ್ಲಾ ಎಂದು ನಮ್ಮ ತರ್ಕ. ‘ಇದೊಂದು ವಣ ಮಹೋತ್ಸವ ಇರಬಹುದು’ ಎಂದು ನಾವು ಚಾರಣಿಗರು ಹಾಸ್ಯ ಮಾಡುತ್ತಾ, ಜಲಪಾತ ಹುಟ್ಟುವ ಜಾಗಕ್ಕೆ ನಡೆದು ಸಾಗಿದ್ದೆವು. ಆ ಬೋಳು ಬೆಟ್ಟಗಳಲ್ಲಿ, ಹುಲ್ಲುಗಾವಲು ಮಾತ್ರ ಬೆಳೆಯುವ ಅಂತಹ ಜಾಗದಲ್ಲಿ ಸರಕಾರವು ಮರಗಳನ್ನೇಕೆ ಬೆಳೆಸುತ್ತಿದೆ ಎಂಬ ಪ್ರಶ್ನೆಗೆ ಅಂದು ನಮಗೆ ಉತ್ತರ ದೊರಕಿರಲಿಲ್ಲ.
ಅದಾಗಿ, ಸುಮಾರು ನಾಲ್ಕು ದಶಕ ಕಳೆದರೂ, ಇಂದಿಗೂ ಆ ಒಂದು ಪ್ರಶ್ನೆಗೆ ಸಮರ್ಪಕ ಉತ್ತರ ದೊರಕಿಲ್ಲ ಬಿಡಿ! ಪಶ್ಚಿಮ ಘಟ್ಟ ಗಳಲ್ಲಿ, ಮಲೆನಾಡಿನಲ್ಲಿ, ಸಹ್ಯಾದ್ರಿಯ ನಿಬಿಡಾರಣ್ಯದ ಅಂಚಿನಲ್ಲಿ, ಹುಲ್ಲು ಮಾತ್ರ ಬೆಳೆಯುವಂತಹ ಪರ್ವತ ತುದಿ ಗಳಲ್ಲಿ ನೀಲಗಿರಿ, ಅಕೇಶಿಯಾಗಳನ್ನು ಸಾರಾಸಗಟಾಗಿ ನೆಡುವ ಮೂಲಕ ಸರಕಾರದ ಇಲಾಖೆಗಳು 1980ರ ದಶಕದಲ್ಲಿ ಒಂದು ಟೈಂ ಬಾಂಬನ್ನೇ ಫಿಕ್ಸ್ ಮಾಡಿವೆ ಎಂದು ಹೇಳಬಹುದು. ಅಂದು ರೂಪುಗೊಂಡ ಏಕಸಸ್ಯ ನೆಡುತೋಪುಗಳು, ಅಕೇಶಿಯಾ ಕಾಡುಗಳು, ಕ್ರಮೇಣ ನಮ್ಮ ಸಹ್ಯಾದ್ರಿಯ ಕೆಲವು ಭಾಗಗಳನ್ನು ಮತ್ತು ಆ ತಪ್ಪಲಿನ ಕಾಡುಗಳನ್ನು ನಾಶ ಮಾಡುವಲ್ಲಿ, ಅಲ್ಲಿನ ಜೀವ ವೈವಿಧ್ಯವನ್ನು ನಿರ್ನಾಮ ಮಾಡುವಲ್ಲಿ ಬಹುತೇಕ ಯಶಸ್ವಿಯಾಗಿದ್ದು, ಸಂಪೂರ್ಣ ವಿನಾಶದ ಸೋಟದ ಸಮಯಕ್ಕಾಗಿ ಟಿಕ್ ಟಿಕ್ ಎನ್ನುತ್ತಾ ಟೈಂ ಬಾಂಬ್ ರೀತಿ ಕಾಯುತ್ತಿವೆ.
ಏಕ ಸಸ್ಯ ನೆಡುತೋಪು ತರುವ ಅನಾಹುತದ ಕುರಿತು ಹೀಗೆಂದರೆ, ಅದು ಕೇವಲ ಊಹಾಪೋಹ ವಲ್ಲ, ಪರಿಸರ ಪ್ರೇಮಿಯೊಬ್ಬನ ಬಡಬಡಿಕೆಯೂ ಅಲ್ಲ. ಇಂತಹ ಅನಾಹುತಗಳು ನಡೆದಿದ್ದಕ್ಕೆ ಅದಾಗಲೇ ಪುರಾವೆಗಳಿವೆ. ಸುಮಾರು ಒಂದು ಶತಮಾನ ದಿಂದಲೂ ಏಕಸಸ್ಯ ನೆಡುತೋಪು ಕಾಮಗಾರಿಯನ್ನು ನಡೆಸಿರುವ ಕೊಡೈಕೆನಾಲ್ ಸುತ್ತ ಮುತ್ತಲಿನ ಬೆಟ್ಟ ಪ್ರದೇಶದಲ್ಲಿ, ಹಲವು ಸಸ್ಯಗಳು, ಪ್ರಾಣಿ ಪಕ್ಷಿಗಳು ಗಣನೀಯವಾಗಿ ಕಡಿಮೆಯಾಗಿವೆ. ಕೆಲವೇ ದಶಕಗಳ ಹಿಂದೆ ಅಲ್ಲಿ ಸಾಮಾನ್ಯ ಎನಿಸಿದ್ದ ನೀಲಗಿರಿ ಪಿಪಿಟ್ ಎಂಬ ಹಕ್ಕಿ ಇಂದು ಅತ್ಯಪೂರ್ವ ಸ್ಥಿತಿಯನ್ನು ತಲುಪಿದೆ.
ಭವಿಷ್ಯದಲ್ಲಿ ಬಂದೆರಗಬಹುದಾದ ಇಂತಹದೇ ಅನಾಹುತಕ್ಕೆ ನಮ್ಮ ಕಾಡುಗಳನ್ನು, ಕುರುಚಲು ಕಾಡನ್ನು, ಹುಲ್ಲುಗಾವಲು ಗಳನ್ನು ‘ಹದಗೊಳಿಸಿವೆ’ ನಮ್ಮ ಸರಕಾರದ ಇಲಾಖೆಗಳು. ನಮ್ಮ ಹಳ್ಳಿಯಲ್ಲಿ ಮುಂಚೆ ಮಂಗನ ಹಾವಳಿ ಇರಲಿಲ್ಲ. ಮಂಗಗಳು ಇದ್ದವು, ಆದರೆ ಮನುಷ್ಯನಿಗೆ ಅವುಗಳ ಕಾಟ ಇರಲಿಲ್ಲ . ಉಡುಪಿ ಜಿಲ್ಲೆಯ ಕಾಡಂಚಿನ ನಮ್ಮೂರು, ಆ ರೀತಿಯ ನೂರಾರು ಹಳ್ಳಿಗಳ ಸುತ್ತಲೂ ಹದವಾದ ಕಾಡು ಇತ್ತು, ಆ ಕಾಡುಗಳಲ್ಲಿ ಬೇಕಷ್ಟು ಮಂಗಗಳಿದ್ದವು, ಮುಸಿಯ ಗಳಿದ್ದವು. ಇದು 1980ರ ದಶಕದ ಮಾತು. ಮಂಗಗಳು ಕಾಡಿನಲ್ಲಿ ಸಿಗುತ್ತಿದ್ದ ನಾನಾ ಜಾತಿಯ ಕಾಯಿ, ಹಣ್ಣು, ಎಲೆ, ಚಿಗುರು, ಕೊಡಿ, ಬೀಳು, ಬೆದೆ, ಟೊಂಗೆ, ಹೂವುಗಳನ್ನು ತಿಂದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು.
ನಮ್ಮ ಮನೆಯ ಸುತ್ತಲಿನ ಹಾಡಿ, ಹಕ್ಕಲುಗಳಲ್ಲಿ ವರ್ಷದುದ್ದಕ್ಕೂ ಒಂದಲ್ಲ ಒಂದು ಗಿಡವು ಅವಕ್ಕೆ ಆಹಾರ ಒದಗಿಸುತ್ತಿತ್ತು. ಕಾಡಿನಲ್ಲಿದ್ದ ಹಣ್ಣು ಮಾತ್ರವಲ್ಲ, ಎಲೆ, ಚಿಗುರು, ಹೂವು, ಹೀಚು ಮತ್ತು ಬಿಳಲು ಸಹ ಮಂಗಗಳ ಆಹಾರ! ನಮ್ಮ ಮನೆಗೆ
ತಾಗಿಕೊಂಡೇ ಇದ್ದ ಹಾಡಿ, ಹಕ್ಕಲುಗಳಲ್ಲಿ ಅಂದು ಇದ್ದ ಜೀವ ವೈವಿಧ್ಯ ಒಂದೇ ಎರಡೇ! ಹಣ್ಣು ಬಿಡುವ ಮುರಿನ, ಕಾಟು ಮಾವು, ಹಲಸು, ಹೆಬ್ಬಲಸು, ತಾರಿ, ಗೇರು, ಜುಳ್ಕ, ಪನ್ನೇರಲು, ನೇರಲು, ಸೊಳ್ಳೆ, ಕಿಸ್ಕಾರು, ಬೆಳಮಾರು, ಬುಕ್ಕಿ, ಚಾರಿ ಮರಗಳೂ ಅಲ್ಲಲ್ಲಿ ಹರಡಿದ್ದವು.
ಮಾವುಗಳಲ್ಲಂತೂ ವಿವಿಧ ಪ್ರಭೇದ ಕಾಟುಮಾವು ಗಳು ಕಾಡಿನ ತುಂಬಾ ಇದ್ದವು. ಇವೆಲ್ಲವೂ ಮಂಗಗಳಿಗೆ ನೆಚ್ಚಿನ ಮರಗಳು. ಜತೆಗೆ ನೇರಳ ಕುಡಿ, ಸಳ್ಳೆ ಕುಡಿ, ಚಗಟೆ ಕೊಡಿ, ನ್ಯಾಗಳ್‌ಬಳ್ಳಿ ಮತ್ತು ಇತರ ಅದೆಷ್ಟೋ ಗಿಡಗಳ ಎಲೆಗಳೂ ಮಂಗನ ಬಾಯಿಗೆ ರುಚಿ. ಮಳೆಗಾಲದಲ್ಲಿ ದೂಪದ ಕಾಯಿ, ವಿವಿಧ ಅಣಬೆಗಳನ್ನೂ ಅವು ತಿನ್ನುತ್ತಿದ್ದವೇನೊ. ಅಂದು ಅವು ರೈತರು ಬೆಳೆಸಿದ್ದ ಎಳನೀರು, ಅಡಕೆ, ಬಾಳೆಗೊನೆ ಯನ್ನು ಸಾಮಾನ್ಯವಾಗಿ ಮುಟ್ಟುತ್ತಿರಲಿಲ್ಲ.
ಇಂದು ನಮ್ಮೂರಿನಲ್ಲಿ ಬೀಡುಬಿಟ್ಟಿರುವ ಮಂಗಗಳ ಚಾಕಚಕ್ಯತೆ, ಕೌಶಲ, ಹಾವಳಿ, ಉಪಟಳವನ್ನು ನೋಡಿಯೇ ನಂಬಬೇಕು! ಚೆನ್ನಾಗಿ ಬೆಳೆದ ಎಳನೀರನ್ನು ಮರದಲ್ಲೇ ಕುಳಿತು ಕಿತ್ತು, ಸರಿಯಾದ ಜಾಗದಲ್ಲೇ ತೂತು ಮಾಡಿ, ಆ ನೀರನ್ನು ಸಂಪೂರ್ಣ ಕುಡಿದು, ಖಾಲಿ ಎಳನೀರನ್ನು ಕೆಳಗೆಸೆಯುತ್ತವೆ. ಮಂಗವೊಂದು ಅಷ್ಟು ಚಂದವಾಗಿ ಕೈ ಮತ್ತು ಬಾಯಿಯಿಂದ ಹೇಗೆ
ಎಳನೀರಿಗೆ ತೂತು ಮಾಡಿ, ಮರದ ತುದಿಯಲ್ಲಿ ಕುಳೀತೇ ಕುಡಿಯುತ್ತದೆ ಎಂಬುದೇ ವಿಸ್ಮಯದ ವಿಷಯ. ಪ್ರತಿ ತೆಂಗಿನ ಮರದ ಬುಡದಲ್ಲಿ ಕನಿಷ್ಟ 50 ಎಳನೀರುಗಳ ರಾಶಿ. ಅಡಕೆಯನ್ನು ಕಿತ್ತು ಕಿತ್ತು, ಕಚ್ಚಿ ಎಸೆಯುತ್ತವೆ. ಬಾಳೆಗಿಡದ ಕಾಯಿಯನ್ನು ತಿಂದು
ಹಾಕುತ್ತವೆ.
ಕೇವಲ ಮೂರು ದಶಕಗಳಲ್ಲಿ ಇದೆಂತಹ ಬದಲಾವಣೆ! ಮನುಷ್ಯ, ಅವನ ಕೃಷಿ ಮತ್ತು ಮನೆಯಂಚಿನ ಕಾಡುಮರಗಳ ಜತೆ ಸಹಬಾಳ್ವೆ ನಡೆಸುತ್ತಿದ್ದ ಮಂಗಗಳು ಏಕಾಏಕಿ ಇದೇಕೆ ಎಳನೀರನ್ನು ಕುಡಿಯಲು ಆರಂಭಿಸಿದವು! ನಮ್ಮೂರಿಗೆ ಇತ್ತೀಚೆಗೆ
ಭೇಟಿ ಕೊಟ್ಟಾಗ ಥಟ್ಟನೆ ಗೋಚರಿಸಿದ್ದು, ಬದಲಾದ ಕಾಡಿನ ಸ್ವರೂಪ. ಅಲ್ಲಿರುವ ಹಾಡಿ-ಹಕ್ಕಲಿನಲ್ಲಿ ಈಗ ಇರುವುದು ರಾಶಿ ರಾಶಿ ಅಕೇಶಿಯಾ ಮರಗಳು. ದಾರಿಯುದ್ದಕ್ಕೂ ಎಡಬಲಗಳಲ್ಲಿ ಎಲ್ಲಿ ನೋಡಿದರೂ ಅಕೇಶಿಯಾ ಮರಗಳು. ಕಳೆದ ದಶಕದಲ್ಲಿ ನೆಟ್ಟ ಅಕೇಶಿಯಾ ಮರಗಳ ನೂರಾರು ಮರಿ ಗಿಡಗಳು ಅಲ್ಲಿ ದೈತ್ಯ ಕಳೆಯ ರೂಪದಲ್ಲಿ ಬೆಳೆದು ನಿಂತಿವೆ.
ಇದೇಕೆ ಹೀಗೆ ಎಂದು ವಿಚಾರಿಸಿದರೆ, ಅಕೇಶಿಯಾ ಬಹುಬೇಗನೆ ಬೆಳೆಯುವುದರಿಂದಾಗಿ, ಅದನ್ನು ಕಡಿದು ಮಾರುವುದು ಉಪ ಆದಾಯ ಎನಿಸಿದೆ ನಮ್ಮೂರಿನ ರೈತರಿಗೆ. ಒಂದೆರಡು ದಶಕಗಳ ಹಿಂದೆ ಎಲ್ಲೆಲ್ಲಾ ಮಾವು, ಹೆಬ್ಬಲಸು, ದೂಪ, ಮುರಿನ, ಜುಲ್ಕ, ಚಾರಿ ಮದಲಾದ ಹಣ್ಣುಗಳನ್ನು ಬಿಡುವ ಮರಗಳಿದ್ದವೋ ಅಲ್ಲೆಲ್ಲಾ ಇಂದು ಅಕೇಶಿಯಾ ಮರಗಳು ತುಂಬಿಹೋಗಿವೆ.
ನಡುನಡುವೆ ಇಂದಿಗೂ ಅಂದಿನ ವೈವಿಧ್ಯಮಯ ಹಾಡಿ, ಗಿಡಮರಗಳು ಅಲ್ಲಲ್ಲಿ ಉಳಿದಿವೆ. ಆದರೆ ಅವು ಕೊನೆಯುಸಿರಿನಲ್ಲಿವೆ – ಸುತ್ತಲೂ ದಟ್ಟವಾಗಿ ಬೆಳೆಯುತ್ತಾ, ನಿಧಾನವಾಗಿ ಆಕ್ರಮಿಸುತ್ತಾ ಬರುತ್ತಿರುವ ಅಕೇಶಿಯಾ ಕಾಡು ಇನ್ನು ಕೆಲವೇ ವರ್ಷಗಳಲ್ಲಿ ಅಲ್ಲಿ ಉಳಿದುಕೊಂಡಿರುವ ಸಹಜ ಕಾಡನ್ನು ನುಂಗಿ ನೀರು ಕುಡಿಯುತ್ತವೆ. ಅದರಲ್ಲಿ ಅನುಮಾನವಿಲ್ಲ.
ಹಾಗಂತ, ಈ ರೀತಿ ಹಾವಳಿ ನಡೆಸುತ್ತಿರುವ ಅಕೇಶಿಯಾ ಕಾಡನ್ನು ಏಕೆ ಬೆಳೆಯುತ್ತೀರಿ ಎಂದು ನಮ್ಮೂರಿನ ರೈತರನ್ನು ಕೇಳಿದರೆ ತಪ್ಪಾದೀತು, ಈ ಅನಾಹುತಕ್ಕೆ ಆ ರೈತರತ್ತ ಬೊಟ್ಟು ಮಾಡುವಂತಿಲ್ಲ. ಏಕೆಂದರೆ, ಅಲ್ಲೆಲ್ಲಾ ಅಕೇಶಿಯಾ ಬೆಳೆಯಿರಿ ಎಂದು ಒಂದೆರಡು ದಶಕಗಳ ಹಿಂದೆ ನಮ್ಮ ಸರಕಾರದ ಇಲಾಖೆಗಳೇ ಅವರನ್ನು ಪ್ರೊತ್ಸಾಹಿಸಿದ್ದವು! ನಮ್ಮ ನಾಡಿನ ಗಿಡವಲ್ಲದ, ದೂರದ ಆಸ್ಟ್ರೇಲಿಯಾದ ಮರುಭೂಮಿಗಳಲ್ಲಿ ಬೇಗನೆ ಬೆಳೆಯುವ ಅಕೇಶಿಯಾ ಪರಿಚಯವಾದರೂ ನಮ್ಮ ರೈತರಿಗೆ ಅದೆಲ್ಲಿತ್ತು? ಪ್ರತಿ ವರ್ಷ ಮಳೆಬಿದ್ದ ಕೂಡಲೇ, ಅಕೇಶಿಯಾ ಗಿಡದ ವಿವಿಧ ಪ್ರಭೇದಗಳನ್ನು ಸರಕಾರದ ಅಂಗಸಂಸ್ಥೆಗಳೇ ಉಚಿತವಾಗಿ ಅಥವಾ ರಿಯಾಯತಿ ದರದಲ್ಲಿ ನಮ್ಮೂರಿನ ರೈತರಿಗೆ ಸರಬರಾಜು ಮಾಡಿದ್ದವು.
(1980ರ ದಶಕ) ಅಂದು ವ್ಯಾಪಕವಾಗಿ ನೆಟ್ಟ ಗಿಡಗಳು ಈಗ ಮರಗಳಾಗಿದ್ದು, ಅವುಗಳನ್ನು ಕಡಿದು ಮಾರುವುದು ಒಂದು ಉದ್ಯೋಗವೂ ಆಗಿದೆ. ಅಕೇಶಿಯಾ ತೊಪಿನ ಒಂದು ದೊಡ್ಡ ದುರ್ಗುಣವಿದೆ. ‘ಅಕೇಶಿಯಾ ಬೆಳೆದಲ್ಲಿ ಬೇರೆ ಬೆಳೆಯಿಲ್ಲ’. ಅಕೇಶಿಯಾ ತೋಪು, ಕಾಡಿನಲ್ಲಿ ಬೇರಾವ ಮರ, ಗಿಡ, ಬಳ್ಳಿ, ಹುಲ್ಲುಗಳು ಬೆಳೆಯುವುದಿಲ್ಲ. ನಮ್ಮ ನಾಡಿಗೆ ಸಹಜ ಗಿಡಮರ ಗಳಾಗಿರುವ, ಕಾಲದಿಂದ ಕಾಲಕ್ಕೆ ಹೂವು, ಹಣ್ಣು ಬಿಡುವ ಕಾಡು ಮರಗಳು, ಅಕೇಶಿಯಾ ನಡುವೆ ಬೆಳೆಯಲಾರವು.
ಜತೆಗೆ, ವಿಪರೀತ ವೇಗವಾಗಿ ಬೀಜ ಪ್ರಸಾರಮಾಡುವ ಅಕೇಶಿಯಾ, ಬಹು ಬೇಗನೆ ತನ್ನ ಸಂತತಿಯನ್ನು ಆ ಸುತ್ತಲೆಲ್ಲಾ ಬೆಳೆಸಿ ಕೊಂಡು, ಬೇರೆ ಗಿಡಗಳು ಮೊಳಕೆಯೊಡೆಯದಂತೆ ಮಾಡುತ್ತವೆ. ಮಾಮೂಲಿ ಗಿಡಗಳಿಗಿಂತ ಎರಡರಿಂದ ಮೂರು ಪಟ್ಟು
ವೇಗವಾಗಿ ಅಂತರ್ಜಲವನ್ನು ಖಾಲಿ ಮಾಡುವ ಅಕೇಶಿಯಾ, ತ್ವರಿತವಾಗಿ ದೊಡ್ಡ ಮರವಾಗುತ್ತದೆ. ಈ ಅಕೇಶಿಯಾ ಕಾಡಿನಲ್ಲಿ, ಹಣ್ಣುಗಳಿಲ್ಲ, ಬಳ್ಳಿಗಳಿಲ್ಲ, ಹಕ್ಕಿ ಗೂಡು ಕಟ್ಟುವುದು ವಿರಳ.
ಇದರಿಂದಾಗಿ, ನಮ್ಮೂರಿನ ಸುತ್ತಲೂ ಬೆಳೆದಿರುವ ಅಕೇಶಿಯಾ ಕಾಡು, ಅಲ್ಲಿರುವ ಮಂಗಗಳಿಗೆ ನೆಲೆಯಿಲ್ಲದಂತೆ ಮಾಡಿವೆ. ಹಸಿರಿದ್ದರೂ, ಅಕೇಶಿಯಾ ಕಾಡು ಎಂದರೆ ಮಂಗಗಳಿಗೆ ಮರುಭೂಮಿಯಿದ್ದಂತೆ. ಅಲ್ಲಿ ಅವುಗಳ ಆಹಾರ ಎನಿಸಿದ ವಿವಿಧ
ಗಿಡಗಳ ಎಲೆ, ಕುಡಿ, ಬಳ್ಳಿ, ಕಾಯಿ, ಹೀಚು, ಹಣ್ಣು, ಹೂವುಗಳು ಬೆಳೆಯುವುದಿಲ್ಲ. ಆದ್ದರಿಂದ ಅವೆಲ್ಲವೂ ಈಗ ಎಳನೀರು ಕುಡಿಯಲು ಕಲಿತಿವೆ. ರೈತ ಬೆಳೆದ ಬೆಳೆಯನ್ನು ತಿಂದು, ಅವನ ಮನೆಯ ಮಾಡಿನ ಹಂಚನ್ನು ಸರಿಸಿ, ಅಡುಗೆ ಮನೆಗೆ ಹೋಗಿ ಅನ್ನದ ಪಾತ್ರೆಗೂ ಕೈ ಹಾಕುತ್ತಿವೆ.
ಅಕೇಶಿಯಾ ಮರಗಳ ಆಕ್ರಮಣಕಾರಿ ಸ್ವರೂಪವು ಮೊದಲೇ ಗೊತ್ತಿತ್ತೆ? ನಮ್ಮ ಸರಕಾರ, ಇಲಾಖೆಗಳಿಗೆ ಖಂಡಿತಾ ಗೊತ್ತಿತ್ತು. ಅಕೇಶಿಯಾದ ‘ಇನ್‌ವೇಸಿವ್’ ಅಥವಾ ಆಕ್ರಮಣಕಾರಿ ಪ್ರವೃತ್ತಿಯು ಹಿಂದೆಯೇ ವ್ಯಾಪಕವಾಗಿ ದಾಖಲಾಗಿದೆ. ಇದನ್ನು 1980-90ರ ದಶಕದಲ್ಲಿ ನಮ್ಮ ನಾಡಿನಲ್ಲಿ ಪ್ರಚುರಗೊಳಿಸಲಾಯಿತು.
ಅದಕ್ಕೂ ಮುಂಚೆಯೇ ಬೇರೆ ದೇಶಗಳಲ್ಲಿ ಇದರ ಪ್ರಯೋಗ ನಡೆದಿತ್ತು. ಆಸ್ಟ್ರೇಲಿಯಾದ ಮರುಭೂಮಿ ರೀತಿಯ ಮತ್ತು ಒಣ ಬಂಜರು ಭೂಮಿಯಲ್ಲಿ ಕಾಣಸಿಗುವ ಈ ಮರ, ಅತಿ ಕಡಿಮೆ ನೀರಿನಲ್ಲೂ ಬದುಕಬಲ್ಲದು. ಅದರ ಬೇರುಗಳ ಜಾಲವು ಬಲಶಾಲಿ,
ಆಕ್ರಮಣಶಾಲಿ ಮತ್ತು ಬಹುಬೇಗನೆ ಅಂತರ್ಜಲವನ್ನು ಹೀರಿ, ಅಷ್ಟೇ ವೇಗವಾಗಿ ಬೆಳೆಯುತ್ತದೆ. ಇದನ್ನು ನೆಡುತೋಪಾಗಿ ಬೆಳೆದ ಜಾಗಗಳಲ್ಲಿ, ಕೆಲವು ದಶಕಗಳ ನಂತರ ಬೇರಾವು ಗಿಡಗಳೂ ಸಮರ್ಪಕವಾಗಿ ಬೆಳೆಯಲಾರವು ಎಂಬ ವಿಚಾರವನ್ನು ಅದಾಗಲೇ ತಜ್ಞರು ಅಧ್ಯಯನ ಮಾಡಿ, ಬರೆದಿಟ್ಟಿದ್ದಾರೆ.
ಆದರೂ ನಮ್ಮ ಸರಕಾರದ ಇಲಾಖೆಗಳು ಈ ಪರಿಸರವಿರೋಧಿ ಸಸ್ಯವನ್ನು ನಮ್ಮ ನಾಡಿನಲ್ಲಿ ವ್ಯಾಪಕವಾಗಿ ಬೆಳೆಯಲು
ಪ್ರಾರಂಭಿಸಿದವು. ಯಾವಾಗ ಸಾವಿರಾರು ಎಕರೆ ಪ್ರದೇಶದಲ್ಲಿ ಅಕೇಶಿಯಾ ಬೆಳೆಯಲು ಆರಂಭಿಸಿದರೋ, ಅಂದೇ ಪರಿಸರ ನಾಶಮಾಡುವ ಟೈಂಬಾಂಬನ್ನು ‘ಫಿಟಿಂಗ್’ ಮಾಡಿದರು ಎಂದರ್ಥ. ಅಕೇಶಿಯಾ ಇಂದು ಮಲೆನಾಡಿನಲ್ಲಿ, ಕರಾವಳಿಯಲ್ಲಿ ಬೆಳೆದು ನಿಂತಿದೆ, ವೇಗವಾಗಿ ಬೀಜಪ್ರಸಾರ ಮಾಡುತ್ತಿದೆ, ದೈತ್ಯ ಕಳೆಯ ಸ್ವರೂಪ ಪಡೆದಿದೆ, ಜೀವವೈವಿಧ್ಯಕ್ಕೆ ಹೆಸರಾಗಿದ್ದ ನಮ್ಮ
ಕಾಡು, ಹಾಡಿ, ಬೆಟ್ಟ, ಹುಲ್ಲುಗಾವಲುಗಳನ್ನು ಆಪೋಶನ ತೆಗೆದುಕೊಳ್ಳುವತ್ತ ದಾಪುಗಾಲಿಟ್ಟಿದೆ.
ಅಕೇಶಿಯಾ ಸಂಬಂಧಿಸಿದಂತೆ ಮತ್ತೊಂದು ದುರಂತ ಈ ವರ್ಷ ನಡೆದಿದೆ. ಕಳೆದ ಎರಡು ವರ್ಷಗಳಿಂದ ಅಕೇಶಿಯಾ ಬೆಳೆಯಲು ನಿಷೇಧವಿದೆ. ಈ ವರ್ಷ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ 20000 ಹೆಕ್ಟೇರು ಪ್ರದೇಶವನ್ನು ಅಕೇಶಿಯಾ ಬೆಳೆಯಲು ಸರಕಾರವೇ ಗುತ್ತಿಗೆ ನೀಡಿದೆ. 2015ರಲ್ಲಿ ತನ್ನ ಕೆಲಸವನ್ನು ನಿಲ್ಲಿಸಿದ ಭದ್ರಾವತಿಯ ಕಾಗದ ಕಾರ್ಖಾನೆಗೆ ನೀಡಿದ ಗುತ್ತಿಗೆ ಅವಧಿ 2020ರಲ್ಲಿ ಮುಗಿದಿದ್ದರೂ, ನಿಷೇಧಿತ ಅಕೇಶಿಯಾ ಬೆಳೆಯಲು ಇಷ್ಟೊಂದು ವಿಶಾಲ ಪ್ರದೇಶವನ್ನು 2026ರ ತನಕ ಗುತ್ತಿಗೆಗೆ ನೀಡಿದೆ.
ಅಪಾಯಕಾರಿ ಸಸ್ಯವೊಂದನ್ನು ಬೆಳೆಯಲು ಸರಕಾರ ಅದೇಕೆ ಪ್ರಯತ್ನ ಮಾಡುತ್ತಿದೆ? ಪ್ರಜಾಪ್ರಭುತ್ವದಲ್ಲಿ ಉತ್ತರ ಸಿಗದ ಪ್ರಶ್ನೆ ಗಳಲ್ಲಿ ಇದೂ ಒಂದು ಇರಬಹುದೆ! ನಮ್ಮ ನಾಡಿನ ಪ್ರಾಕೃತಿಕ ಕಾಡುಗಳನ್ನು, ಹುಲ್ಲುಗಾವಲನ್ನು ಸಂಪೂರ್ಣವಾಗಿ ನಾಶ ಮಾಡುವ ಶಕ್ತಿ ಹೊಂದಿರುವ ಅಕೇಶಿಯಾವನ್ನು ದೂರ ಮಾಡಲೇಬೇಕು. ನಮ್ಮ ಮುಂದಿನ ಪೀಳಿಗೆ ಭವಿಷ್ಯದ ದೃಷ್ಟಿಯಿಂದ,
ಇಂದಿಗೂ ಅಲ್ಲಲ್ಲಿ ಉಳಿದಿರುವ ಕಾಡು, ಹುಲ್ಲು ಗಾವಲನ್ನು ರಕ್ಷಿಸಿ ಉಳಿಸಲು ಅಕೇಶಿಯಾವನ್ನು ನಿಷೇಧಿಸಲೇಬೇಕು.
ಇಲ್ಲವಾದರೆ, ದೈತ್ಯ ಕಳೆಯ ಸ್ವರೂಪದ ಅಕೇಶಿಯಾ, ಬಹು ವೇಗವಾಗಿ ನಮ್ಮ ಪರಿಸರವನ್ನು ಸ್ವಾಹಾ ಮಾಡುತ್ತದೆ. ಹೊಸಕಿ ಹಾಕುತ್ತದೆ. ಆನಂತರ ನಮಗೆ ಉಳಿಯುವುದು ಏಕಪ್ರಭೇದ ಸಸ್ಯದ, ಮರುಭೂಮಿ ಸ್ವರೂಪದ ಕಾಡು. ಹಾಗಾಗದೇ ಇರಲಿ,
ಜೀವ ವೈವಿಧ್ಯ ಉಳಿಯಲಿ.