ಗುರುಸ್ಮರಣೆ
ಬಸವರಾಜ ಶಿವಪ್ಪ ಶಿರಗಾಂವಿ
ಸಂತ-ಮಹಾಂತರ ನೆಲೆವೀಡಾಗಿದೆ ಭಾರತ. ನಮ್ಮ ಸಂತ-ಸಂಸ್ಕೃತಿಯು ಶಾಂತಿ, ಸೌಹಾರ್ದ ಮತ್ತು ಸಹಬಾಳ್ವೆಗಳಿಗೆ ಹೆಸರುವಾಸಿಯಾಗಿರುವುದರಿಂದ, ಜಗತ್ತಿನ ಮೂಲೆ ಮೂಲೆಗಳಲ್ಲಿ ಭಾರತೀಯ ಬೇರುಗಳ ಮಠ-ಮಂದಿರಗಳು ನಿರ್ಮಾಣವಾಗುತ್ತಿವೆ.
ಸಮಾಜದಲ್ಲಿರುವ ಅಂಕು-ಡೊಂಕಗಳನ್ನು ತಿದ್ದುವ ಸಂತರ ತತ್ತ್ವ-ಸಂದೇಶಗಳು ಶಿಸ್ತುಬದ್ಧ ಬದುಕಿಗೆ ದಾರಿದೀಪಗಳಾಗಿವೆ. ಬಸವಣ್ಣ, ಸ್ವಾಮಿ ವಿವೇಕಾ
ನಂದರು, ಶಂಕರಾಚಾರ್ಯರು, ರಾಮ ಕೃಷ್ಣ ಪರಮಹಂಸರು, ಸಿದ್ದಗಂಗಾ ಶ್ರೀಗಳು, ಇಳಕಲ್ಲಿನ ಮಹಾಂತ ಶಿವಯೋಗಿಗಳು, ಹಾನಗಲ್ ಕುಮಾರ ಮಹಾಸ್ವಾಮಿಗಳು, ಅಥಣಿಯ ಮುರು ಘೇಂದ್ರ ಶ್ರೀಗಳು, ಸಂತ ಶಿಶುನಾಳ ಷರೀ-ರು ಸೇರಿದಂತೆ ಅಸಂಖ್ಯಾತ ಸಾದು-ಸಂತರ ಅಮೃತವಾಣಿಗಳು ಸಾರ್ವ ಕಾಲಿಕವಾಗಿವೆ.
ಇಂಥ ಮಹಾತ್ಮರು ಬದುಕಿದ ಪುಣ್ಯಭೂಮಿ ಭಾರತದಲ್ಲಿ, ಯಾವುದೇ ಪ್ರಚಾರವನ್ನು ಬಯಸದೆ ‘ನಡೆದಾಡುವ ದೇವರು’ ಎಂದೇ ಖ್ಯಾತರಾಗಿದ್ದವು
ವಿಜಯಪುರದ ಜ್ಞಾನಯೋಗಾಶ್ರಮದ ‘ಶಾಂತ ಸ್ವರೂಪಿ’ ಸಿದ್ಧೇಶ್ವರ ಮಹಾಸ್ವಾಮಿಗಳು ಎಂದರೆ ತಪ್ಪಾಗಲಿಕ್ಕಿಲ್ಲ. ನಿಷ್ಕಲ್ಮಶ ವ್ಯಕ್ತಿತ್ವದವರಾಗಿದ್ದ ಪೂಜ್ಯರು, ವಿಜಯ ಪುರ ಜಿಲ್ಲೆಯ ಬಿಜ್ಜರಗಿಯಲ್ಲಿ ೧೯೪೧ರ ಅಕ್ಟೋಬರ್ ೨೧ರಂದು ಕೃಷಿ ಮನೆತನವೊಂದರಲ್ಲಿ ಜನಿಸಿದರು. ಸಿದ್ದನಗೊಂಡಪ್ಪ ಇವರ ಪೂರ್ವಾಶ್ರಮದ ಹೆಸರು. ಬಾಲ್ಯದಿಂದಲೇ ಆಧ್ಯಾತ್ಮಿಕತೆಯ ಕಡೆಗೆ ಒಲವು ಮೂಡಿಸಿಕೊಂಡಿದ್ದ ಸಿದ್ದಗೊಂಡಪ್ಪ, ‘ಪ್ರವಚನ ಕೇಸರಿ’ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಗಮನ ಸೆಳೆದು ಸಿದ್ಧೇಶ್ವರ ಶ್ರೀಗಳಾಗಿ ಪರಿವರ್ತನೆಯಾಗಿದ್ದು ಒಂದು ದಿವ್ಯಕ್ಷಣ. ಎಂಟನೆಯ ತರಗತಿಯಲ್ಲಿರುವಾಗಲೇ ಮನೆಯನ್ನು ತೊರೆದ ಅವರು ಮಲ್ಲಿಕಾರ್ಜುನ ಮಹಾಸ್ವಾಮಿಗಳೊಂದಿಗೆ ನೆಲೆಸಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು.
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಮತ್ತು ಕೊಲ್ಹಾಪುರ ವಿಶ್ವವಿದ್ಯಾಲಯದಿಂದ ತತ್ತ್ವಶಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಕೊಂಡರು. ಮಲ್ಲಿಕಾರ್ಜುನ ಶ್ರೀಗಳ ಪ್ರವಚನಗಳಲ್ಲಿನ ಸಾರವನ್ನು ಒಟ್ಟುಗೂಡಿಸಿ ೧೯ನೇ ವಯಸ್ಸಿನಲ್ಲಿ ಪ್ರಪ್ರಥಮವಾಗಿ ‘ಸಿದ್ಧಾಂತ ಶಿಖಾಮಣಿ’ ಪುಸ್ತಕವನ್ನು ರಚಿಸಿದರು. ವೇದಾಂತ, ಉಪನಿಷತ್ತುಗಳು, ಭಗವದ್ಗೀತೆ, ಪತಂಜಲಿ ಯೋಗ ಸೂತ್ರ, ವಚನ ಸಾಹಿತ್ಯ ಸೇರಿದಂತೆ ಹತ್ತ ಹಲವು ಗಹನ ವಿಷಯಗಳನ್ನು ಅಧ್ಯ ಯನ ಮಾಡಿದರು. ಅವುಗಳ ಸಾರವನ್ನು ಸಾಹಿತ್ಯ ಮತ್ತು ಪ್ರವಚನಗಳಲ್ಲಿ ಸರಳವಾಗಿ ಬೋಧಿಸಿದರು.
ಎರಡನೆಯ ಸ್ವಾಮಿ ವಿವೇಕಾನಂದ ಎಂದೇ ಹೆಸರುವಾಸಿಯಾಗಿದ್ದ ಪೂಜ್ಯರ ಪ್ರವಚನಕ್ಕೆ ಯಾವುದೇ ಪ್ರಚಾರವಿಲ್ಲದೆ ಪ್ರತಿದಿನ ಜನಸಾಗರವೇ ಸೇರುತ್ತಿತ್ತು. ಪ್ರವಚನದ ಆರಂಭ ಮತ್ತು ಮುಕ್ತಾಯಗಳಲ್ಲಿ ಒಂದು ನಿಮಿಷವೂ ಬದಲಾವಣೆಯಾಗುತ್ತಿರಲಿಲ್ಲ. ಹೀಗಾಗಿ ಜನಸಾಗರವು ಕ್ಷಣಾರ್ಧ ದಲ್ಲಿಯೇ ಸೇರಿ, ಪ್ರವಚನ ಸಂಪನ್ನಗೊಳ್ಳುತ್ತಿದ್ದಂತೆ ಪವಾಡಸದೃಶವಾಗಿ ಚದುರಿಹೋಗುತ್ತಿತ್ತು. ಸೂಜಿ ಬಿದ್ದರೂ ಸಪ್ಪಳವಾಗುವಷ್ಟರ ಮಟ್ಟಿಗೆ ಪ್ರವಚನದಲ್ಲಿ ಶಾಂತತೆಯು ನೆಲೆಸಿರುತ್ತಿತ್ತು. ಭಾರತದ ಇತಿಹಾಸದಲ್ಲಿ ಸಿದ್ಧೇಶ್ವರ ಮಹಾಸ್ವಾಮಿಗಳ ಪ್ರವಚನಕ್ಕೆ ಸೇರಿ ದಷ್ಟು ಜನ ಸಾಗರವು ಬೇರಾವ ಸಮಾನಸ್ಕಂದರಿಗೂ ಸೇರಿಲ್ಲ ಎನ್ನಲಾಗುತ್ತದೆ.
ಸುತ್ತೂರಿನ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳ ಸಹಕಾರದಿಂದ ಅಮೆರಿಕೆಯಂಥ ದೇಶಗಳಲ್ಲೂ ಪೂಜ್ಯರ ಪ್ರವಚನವು ಜನಪ್ರಿಯವಾಗಿತ್ತು. ಪೂಜ್ಯರ ಚಿಂತನೆಗಳು ವಿಶ್ವದ ಯಾವ ತತ್ತ್ವ ಜ್ಞಾನಿಗಳ ತರ್ಕಕ್ಕೆ ನಿಲುಕುತ್ತಿರಲಿಲ್ಲ. ಅಂತೆಯೇ ಶ್ರೀಗಳನ್ನು ‘ದಿ ಗ್ರೇಟ್ ಫಿಲಾಸಫರ್ ಆಫ್ ಇಂಡಿಯಾ’
ಎಂದು ಜಾಗತಿಕ ಮಟ್ಟದಲ್ಲಿ ಬಣ್ಣಿಸಲಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಭಾಷೆ ಗಳಲ್ಲಿ ನಿರರ್ಗಳವಾಗಿ ಪ್ರವಚನ ನೀಡುತ್ತಿದ್ದ ಪರಮ
ಪೂಜ್ಯರಲ್ಲಿ ವಿಶೇಷ ಪಾಂಡಿತ್ಯ ಕೆನೆಗಟ್ಟಿತ್ತು. ನಿಸರ್ಗ ಪ್ರೇಮ, ಪ್ರಚಲಿತ ವಿದ್ಯಮಾನ, ಮನೋನಿಗ್ರಹ, ಬದುಕುವ ಕಲೆ, ಶರಣ ಸಾಹಿತ್ಯದಂಥ ವಿಷಯ ಗಳು, ಸೂಫಿ ಸಂತರು, ಅರಿಸ್ಟಾಟಲ್, ಹ್ಯೂಯೆನ್ಸ್ ತ್ಸಾಂಗ್, ಷೇಕ್ಸ್‌ಪಿಯರ್, ಏಸುಕ್ರಿಸ್ತ, ಅಲೆಗ್ಸಾಂಡರ್‌ರಂಥ ವಿಶ್ವಪ್ರಸಿದ್ಧ ವ್ಯಕ್ತಿಗಳು ಅವರ ಪ್ರವಚನ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದುದುಂಟು.
ಸಂಸಾರದ ಜಂಜಾಟ ದಿಂದಾಗಿ ಚಟಗಳ ದಾಸರಾದ ಜನರಿಗೆ ಆರೋಗ್ಯದ ಪಾಠ ಗಳನ್ನೂ, ಶಾಂತಿಯುತ ಬದುಕಿನ ಸೂತ್ರಗಳನ್ನೂ ಬೋಧಿಸುತ್ತಿದ್ದ ಶ್ರೀಗಳು, ‘ಮತ್ತೊಬ್ಬರ ಉಸಾಬರಿ ಬೇಡ. ಮತ್ತೊಬ್ಬರಿಗೆ ಬುದ್ಧಿ ಹೇಳುವ ಮುನ್ನ ನಿನ್ನಲ್ಲಿರುವ ಪ್ರಾಮಾಣಿಕತೆಯನ್ನು ಪರೀಕ್ಷಿಸಿ ಕೊಳ್ಳಬೇಕು’ ಎಂಬ ಮಹಾಮಾನವತಾವಾದದ ತಿರುಳನ್ನು ಉಣ ಬಡಿಸುತ್ತಿದ್ದರು. ಇವರ ಪ್ರವಚನ ದಿಂದ ಪ್ರೇರಿತರಾದ ಲಕ್ಷಾಂತರ ವ್ಯಕ್ತಿಗಳು ದುರ್ನಡತೆಗಳನ್ನು ತ್ಯಜಿಸಿ
ಆದರ್ಶ ವ್ಯಕ್ತಿಗಳಾಗಿದ್ದಾರೆ.
ಪೂಜ್ಯರ ಪ್ರವಚನವು ಜಾತಿ-ಧರ್ಮಗಳ ಸಂಕೋಲೆಗಳನ್ನು ಮೀರಿ ಕೋಟ್ಯಂತರ ಅನುಯಾಯಿಗಳನ್ನು ಆಕರ್ಷಿಸಿತ್ತು. ತಿಂಗಳವರೆಗಿನ ಪ್ರವಚನವು
ಸೂರ್ಯೋದಯದೊಂದಿಗೆ ಒಂದು ಗಂಟೆ ನಡೆದರೆ, ಅಪರಾಹ್ನದಲ್ಲಿ ಸಾಮಾಜಿಕ ಕಳಕಳಿಯ ಚಿಂತನಗೋಷ್ಠಿಗಳು ನಡೆಯುತ್ತಿದ್ದವು. ಇಂಥ ಕಾರ್ಯ ಕ್ರಮಗಳಿಂದ ಜ್ಞಾನ ಹಾಗೂ ಮನಃಶಾಂತಿಯನ್ನು ಸಂಪಾದಿಸಲೆಂದೇ ಜನಸಾಗರವು ಸೇರುತ್ತಿತ್ತು. ಪೂಜ್ಯರ ಪ್ರವಚನಗಳ ಸಾರವನ್ನು ಸಂಗ್ರಹಿಸಿ ಹಲವಾರು ಲೇಖಕರು ಸಾವಿರಾರು ಪುಸ್ತಕಗಳನ್ನು ಹೊರತಂದಿದ್ದಾರಲ್ಲದೆ, ಸಾಮಾಜಿಕ ಜಾಲ ತಾಣಗಳಲ್ಲಿಯೂ ಇವರ ಪ್ರವಚನಗಳು ಅಸಂಖ್ಯಾತ ವೀಕ್ಷಣೆಯನ್ನು ಪಡೆದಿವೆ.
ಶ್ರೀಗಳು ಅಧ್ಯಾತ್ಮವನ್ನು ಹೊರತುಪಡಿಸಿ ಮಹತ್ವದ ವಿಷಯಗಳ ಮೇಲೆ ಬೆಳಕನ್ನು ಚೆಲ್ಲಿದರು. ಬರಗಾಲದ ಹಣೆಪಟ್ಟಿಯಲ್ಲಿರುವ ಅಖಂಡ ವಿಜಯಪುರ ಜಿಲ್ಲೆಯ ಮಣ್ಣಿಗೆ ನೀರಾವರಿ ವ್ಯವಸ್ಥೆ ಯನ್ನು ಕಲ್ಪಿಸಿದಲ್ಲಿ, ಅಮೆರಿಕದ ಕ್ಯಾಲಿಪೋರ್ನಿಯಾದಂತೆ ಇಲ್ಲಿಯೂ ಬದಲಾವಣೆಯಾಗುತ್ತದೆಂದು ಶ್ರೀ ಗಳು ತಿಳಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ದಿವಂಗತ ಸಿದ್ದು ನ್ಯಾಮಗೌಡರು ಹಾಗೂ ಡಾ. ಎಂ.ಬಿ.ಪಾಟೀಲರು ಬ್ಯಾರೇಜ್ ನಿರ್ಮಾಣ, ಕೆರೆ ತುಂಬಿಸುವಿಕೆಗೆ ಮುಂದಾಗಿದ್ದರ ಜತೆಗೆ ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿ ಬರದ ಮಣ್ಣಿನಲ್ಲಿ ಬಂಗಾರದಂಥ ಬೆಳೆ ಹೊಮ್ಮುವುದಕ್ಕೆ ಕಾರಣರಾದರು; ಈ ಭಾಗದಲ್ಲಿ ಶಿಕ್ಷಣ, ಕೃಷಿ, ಕೈಗಾರಿಕೆ ಹಾಗೂ ನೀರಾವರಿ ಕ್ರಾಂತಿ ಗಳಿಗೆ ಕಾರಣೀ ಭೂತರಾದರು. ಇದರಿಂದಾಗಿ ಇಲ್ಲಿನ ಒಣದ್ರಾಕ್ಷಿ ಹಾಗೂ ಲಿಂಬೆಯು ವಿಶ್ವದೆಲ್ಲೆಡೆ ಪ್ರಸಿದ್ಧವಾಗಿವೆ.
ಸಾತ್ವಿಕ ಬದುಕನ್ನು ಮೈಗೂಡಿಸಿಕೊಂಡಿದ್ದ ಪೂಜ್ಯರು ಕಿಸೆರಹಿತ ಶ್ವೇತವರ್ಣದ ಅಂಗಿ ಮತ್ತು ಪಂಚೆಯನ್ನು ಧರಿಸುತ್ತಿದ್ದರು. ತಮಗೆ ಕೊಟ್ಟ ಕಾಣಿಕೆ
ಗಳನ್ನು ಸ್ವೀಕರಿಸದೆ, ಕೊಟ್ಟವರಿಗೇ ಅವನ್ನು ಮರಳಿಸು ತ್ತಿದ್ದರು. ವಿಶ್ವವಿದ್ಯಾಲಯವೊಂದರ ಗೌರವ ಡಾಕ್ಟರೇಟ್ ಸೇರಿದಂತೆ ಹಲವಾರು ಸಂಘ- ಸಂಸ್ಥೆ ಗಳು ನೀಡಲು ಮಂದಾದ ಪ್ರಶಸ್ತಿಗಳನ್ನು ವಿನಯದಿಂದಲೇ ನಿರಾಕರಿಸಿದ್ದ ಶ್ರೀಗಳು, ಸನ್ಯಾಸಿ ಯಾದ ತಮಗೆ ಪ್ರಶಸ್ತಿಗಳಲ್ಲಿ ಆಸಕ್ತಿ ಇಲ್ಲವೆಂದು ಪ್ರಧಾನಿ ಮೋದಿ ಯವರಿಗೆ ಪತ್ರ ಬರೆದು ಕೇಂದ್ರ ಸರಕಾರವು ಕೊಡ ಮಾಡಲು ಬಯಸಿದ್ದ ‘ಪದ್ಮಶ್ರೀ’ ಪುರಸ್ಕಾರವನ್ನೂ ನಿರಾಕರಿಸಿದ್ದರು.
೨೦೨೩ರ ಜನವರಿ ೨ರ ಪ್ರಥಮ ಆಷಾಢ ಶುದ್ಧ ಏಕಾದಶಿ ದಿನದಂದು ೮೨ನೇ ವಯಸ್ಸಿನಲ್ಲಿ ಶ್ರೀಗಳು ಲಿಂಗೈಕ್ಯರಾದರು. ಅವರಿದ್ದ ಜ್ಞಾನಯೋಗಾ ಶ್ರಮದಲ್ಲಿ ವೈದ್ಯಲೋಕವನ್ನೇ ಸೃಷ್ಟಿಸಲಾಗಿತ್ತಾದರೂ ಚಿಕಿತ್ಸೆ ಗಳನ್ನು ನಿರಾಕರಿಸುತ್ತ, ಆಹಾರ ಮತ್ತು ನೀರನ್ನು ತ್ಯಜಿಸಿ ಇಚ್ಛಾಮರಣವನ್ನು ಹೊಂದಿ ದರು. ಮರಣಾ ನಂತರ ತಮಗೆ ಸ್ಮಾರಕ ನಿರ್ಮಿಸಬಾರದು ಮತ್ತು ದೇಹವನ್ನು ದಹಿಸಿ ಚಿತಾಭಸ್ಮವನ್ನು ಹಲವು ನದಿಗಳಲ್ಲಿ ವಿಸರ್ಜಿಸಬೇಕೆಂದು ಪೂಜ್ಯರು ವಿನಂತಿಸಿಕೊಂಡಿದ್ದರು. ಸಿದ್ಧೇಶ್ವರ ಶ್ರೀಗಳಂಥ ಪರಮಪೂಜ್ಯರ ಸಂಸ್ಕೃತಿಯು ಸರ್ವಪೂಜ್ಯರಲ್ಲೂ ನೆಲೆಸಿ, ಸಾಮಾಜಿಕ ಮೌಲ್ಯಗಳ ವೈಭವ ಸೃಷ್ಟಿಯಾಗಬೇಕೆಂಬುದು ಭಕ್ತ ವೃಂದದ ಕಳಕಳಿಯ ಮನವಿಯಾಗಿದೆ.
(ಲೇಖಕರು ಕೃಷಿತಜ್ಞರು ಹಾಗೂ
ಸಹಾಯಕ ಮಹಾಪ್ರಬಂಧಕರು)