ಅವಲೋಕನ
ದಿಲೀಪ್ ಕುಮಾರ್ ಸಂಪಡ್ಕ
ಪ್ರಾಚೀನ ಕಾಲದಿಂದಲೂ ಶಿಕ್ಷಕನಿಗೆ ಉತ್ತಮ ಗೌರವ ಸಲ್ಲಿಸಲಾಗುತ್ತಿದೆ. ಪ್ರಾಚೀನ ಭಾರತದಲ್ಲಿ ಗುರುವಿಗೆ ಅತ್ಯಂತ ಉನ್ನತ ಮಟ್ಟದ ಸ್ಥಾನಮಾನಗಳಿದ್ದವು. ಗುರುವಿನಲ್ಲಿರುವ ಬೌದ್ಧಿಕತೆ ಮತ್ತು ಆಧ್ಯಾತ್ಮಿಕ ಗುಣಲಕ್ಷಣಗಳಿಂದ ಗುರುವನ್ನು ತ್ರಿಮೂರ್ತಿ ಗಳಿಗೆ ಸಮಾನವಾಗಿ ಗುರುತಿಸಲಾಗಿತ್ತು.
ಇದನ್ನು ನಾವು ಗುರು ಬ್ರಹ್ಮಃ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರುಸಾಕ್ಷಾತ್ ಪರಬ್ರಹ್ಮಃ ತಸ್ಮೆ ಶ್ರೀ ಗುರುವೇ ನಮಃ
ಎಂಬ ಶ್ಲೋಕದಿಂದ ತಿಳಿಯಬಹುದು. ಅಂದರೆ ಗುರುವು ಮುಖ್ಯವಾದ ವ್ಯಕ್ತಿ. ಹೀಗಾಗಿ ಸಾಮಾನ್ಯವಾಗಿ ಬ್ರಹ್ಮನಿಗೆ, ವಿಷ್ಣುವಿಗೆ ಮತ್ತು ಶಿವನಿಗೆ ಮೀಸಲಾಗಿರುವ ವಂದನೆಗಳು ಗುರುವಿಗೆ ಸಲ್ಲುತ್ತವೆ ಎಂದರ್ಥ.
ಆಧುನಿಕ ಭಾರತದಲ್ಲಿ ಶಿಕ್ಷಕರ ಪಾತ್ರ ಮತ್ತು ಜವಾಬ್ದಾರಿಗಳ ಕುರಿತು ಅನೇಕ ಚಿಂತಕರು, ಜನ ಸಾಮಾನ್ಯರು ಮತ್ತು ಶಿಕ್ಷಣ ತಜ್ಞರು ವಿಭಿನ್ನವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅವುಗಳಲ್ಲಿ ಹೆಚ್ಚಿನ ಅಭಿಪ್ರಾಯಗಳು ಶಿಕ್ಷಕರ ಬಗ್ಗೆ ಋಣಾತ್ಮಕ ಟೀಕೆಗಳೇ ಹೆಚ್ಚು ಎನ್ನುವುದು ಬೇಸರದ ಸಂಗತಿ. ವಾಸ್ತವದಲ್ಲಿ ಶಿಕ್ಷಕರಿಂದಲೇ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಶಿಕ್ಷಕರ ಅರ್ಪಣೆ ಮತ್ತು ತ್ಯಾಗ ಮನೋಭಾವದ ಕೊರತೆಯಿಂದ ನಿರೀಕ್ಷೆಗೆ ತಕ್ಕಷ್ಟು ಯಶಸ್ಸು ಸಾಧಿಸಿಲ್ಲ ಎನ್ನುವ ರಾಷ್ಟ್ರೀಯ ತಜ್ಞರ ಮಾತೊಂದು ಒಂದು ವರ್ಷದ ಹಿಂದೆ ಭಾರೀ ಸದ್ದು ಮಾಡಿತ್ತು.
ಶಿಕ್ಷಕರ ವೃತ್ತಿ ಎಂದರೆ ಗಂಟೆ ಹೊಡೆದು ಪಗಾರ ಪಡೆಯುವ ಹುದ್ದೆ. ಶಿಕ್ಷಕರ ವೃತ್ತಿಯಲ್ಲಿ ಕೆಲಸ ಮಾಡಿಲ್ಲದಿದ್ದರೂ ವೇತನ
ಸರಿಯಾದ ಸಮಯಕ್ಕೆ ಬ್ಯಾಂಕ್‌ಗೆ ಬಂದು ಬೀಳುತ್ತದೆ. ವರ್ಷದಲ್ಲಿ ಎರಡು ತಿಂಗಳು ರಜೆ ಪಡೆದು ಪುಕ್ಕಟೆ ಸಂಬಳ ಪಡೆಯುವ ವೃತ್ತಿಯೆಂದರೆ ಶಿಕ್ಷಕರ ವೃತ್ತಿ ಮಾತ್ರ. ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೆಲಸ ಆರಾಮದಾಯಕ ಕೆಲಸ ಇಂಥ ಹಲವು ಅಣಕಗಳು
ಶಿಕ್ಷಕರ ಕುರಿತು ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಈಗ ಕರೋನಾ ಸಮಯದಲ್ಲಂತೂ ಇಂಥ ಟೀಕೆಗಳಿಗೆ ಮೊದಲ ಸ್ಥಾನ ಮೀಸಲಾಗಿ ದೆ ಎನ್ನಬಹುದು.
ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿರುವುದರಿಂದ ಇವೆಲ್ಲವೂ ಸ್ವಾಭಾವಿಕ. ಈ ಲೇಖನದ ಮುಖ್ಯ ಉದ್ದೇಶ ಈ ಎಲ್ಲ ಟೀಕೆಗಳು ವಾಸ್ತವ್ಯದಲ್ಲಿ ನಿಜವೇ? ಎಂಬುದನ್ನು ಅವಲೋಕನ ಮಾಡುವುದಷ್ಟೇ ಆಗಿದೆ ವಿನಾ ಯಾರಿಗೂ ಪ್ರತ್ಯುತ್ತರ ನೀಡುವ ಉದ್ದೇಶ ವನ್ನು ಹೊಂದಿಲ್ಲ ಎನ್ನುವುದನ್ನು ಮೊದಲು ಖಚಿತಪಡಿಸುವುದು ನನ್ನ ಜವಾಬ್ದಾರಿ ಕೂಡ ಹೌದು. ಸರಕಾರಿ ಶಾಲೆಯ ಶಿಕ್ಷಕರಾಗುವುದು ದೊಡ್ಡ ಹೆಮ್ಮೆ ಎನ್ನುವುದು ನನ್ನ ಅನಿಸಿಕೆ. ಏಕೆಂದರೆ ಸರಕಾರಿ ಶಾಲೆಯ ಶಿಕ್ಷಕ ಕೇವಲ ಶಿಕ್ಷಕನಾಗಿ ಉಳಿದಿಲ್ಲ,
ಅವನು/ಳು ಸಕಲ ಕಲಾವಲ್ಲಭನ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.
ಯಾವುದೇ ಕೆಲಸಕ್ಕೂ ಸೈ ಎನ್ನುವ ಜಾಯಮಾನದವರು ಈ ಸರಕಾರಿ ಶಾಲಾ ಶಿಕ್ಷಕ ವೃತ್ತಿಯವರು ಎನ್ನುವುದು ಹೆಮ್ಮೆಯ ವಿಚಾರ. ಆರ್.ಟಿ.ಇ ಕಾಯಿದೆಯ ಪ್ರಕರಣ 27ರ ಅನ್ವಯ ದಶವಾರ್ಷಿಕ ಜನಗಣತಿ, ವಿಪತ್ತು ಪರಿಹಾರ ಕಾರ್ಯಗಳು ಅಥವಾ ಚುನಾವಣೆಗಳಿಗೆ ಸಂಬಂಧಿಸಿದ ಕರ್ತವ್ಯಗಳನ್ನು ಹೊರತುಪಡಿಸಿ, ಉಳಿದ ಯಾವುದೇ ಶಿಕ್ಷಣೇತರ ಉದ್ಧೇಶಗಳಿಗಾಗಿ ಶಿಕ್ಷಕರನ್ನು
ನಿಯೋಜಿಸಬಾರದು ಎಂದು ಹೇಳುತ್ತದೆ. ಆದರೆ, ವಾಸ್ತವದಲ್ಲಿ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕಾರ್ಯಭಾರ ಬೇರೆಯೇ ಇದೆ.
ಪ್ರತಿ ಶಾಲೆಯಲ್ಲಿನ ಶಿಕ್ಷಕರು ಬೋಧನೇತರವಾಗಿರುವ ಹೆಚ್ಚುವರಿ ಕಾರ್ಯಭಾರವನ್ನು ಸಹ ಮಾಡಬೇಕಾಗಿರುತ್ತದೆ.
ಅವುಗಳಲ್ಲಿ ಮುಖ್ಯವಾಗಿ ಅಕ್ಷರ ದಾಸೋಹ ಕಾರ್ಯಕ್ರಮದ ಮೂಲಕ ಬಿಸಿಯೂಟದ ಉಸ್ತುವಾರಿಯನ್ನು ನೋಡಿಕೊಳ್ಳುವುದು ಹಾಗೂ ಅದರ ದಾಖಲೆ ನಿರ್ವಹಣೆ. ಬಿಸಿಯೂಟಕ್ಕೆ ತರಕಾರಿಯನ್ನು ತರುವುದು ಅಥವಾ ಶಾಲೆಯಲ್ಲಿಯೇ ತರಕಾರಿಗಳನ್ನು ಬೆಳೆಯುವುದು. ಬೆಳಗ್ಗೆ ವಿದ್ಯಾರ್ಥಿಗಳಿಗೆ ಕ್ಷೀರಬಾಗ್ಯ ಕಾರ್ಯಕ್ರಮದಡಿಯಲ್ಲಿ ಹಾಲು ವಿತರಿಸುವುದು. ಎಲ್ಲಾ ಮಕ್ಕಳಿಗೆ ಆಧಾರ್
ಕಾರ್ಡ್ ಇರುವಂತೆ ನೋಡಿಕೊಳ್ಳುವುದು. ಇಲ್ಲದಿದ್ದಲ್ಲಿಆಧಾರ್ ನೋಂದಣಿ ಮಾಡಿಸಿ ದಾಖಲೆ ನಿರ್ವಹಿಸುವುದು.
ವಿದ್ಯಾರ್ಥಿಗಳಿಗೆ ಮಾತ್ರೆ, ಶೂ,ಬೈಸಿಕಲ್, ಸಮವಸ್ತ್ರ, ಪಠ್ಯಪುಸ್ತಕಗನ್ನು ವಿತರಣೆ ಮಾಡಿ ದಾಖಲೆ ನಿರ್ವಹಣೆ ಮಾಡುವುದು. ಆನ್
ಲೈನ್ ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕ್ರಮವಹಿಸುವುದು. ಮಕ್ಕಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವಂತೆ ಮಾಡುವುದು. ಬೋಧಕೇತರ ಸಿಬ್ಬಂದಿ ಇಲ್ಲದಿರುವುದರಿಂದ ಎಲ್ಲಾ ಶಾಲಾ ದಾಖಲೆಗಳ ನಿರ್ವಹಣೆ ಮಾಡಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಅವರಿಗೆ ಬೇಕಾಗಿರುವ ವಿವಿಧ ಪ್ರಮಾಣ ಪತ್ರಗಳನ್ನು ನೀಡುವುದು.
ವಿವಿಧ ಅನುದಾನಗಳ ಸಮರ್ಪಕ ವೆಚ್ಚಗಳ ದಾಖಲೆ ನಿರ್ವಹಣೆ, ಬ್ಯಾಂಕ್‌ನೊಂದಿಗೆ ಶಾಲೆಯ ವ್ಯವಹಾರ ಖಾತೆಯ ನಿರ್ವಹಣೆ, ಬಿಎಲ್‌ಒ ಕಾರ್ಯಭಾರ, ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಇಲಾಖೆಯೊಂದಿಗಿನ ವ್ಯವಹಾರ, ಶಾಲೆಯಲ್ಲಿ ಶೌಚಾಲಯ ಮತ್ತು ಕುಡಿಯುವ ನೀರಿನ ನಿರ್ವಹಣೆ, ಸ್ವಚ್ಛತೆ ಕಾಪಾಡುವುದು, ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ (ಎಸ್.ಎ.ಟಿ.ಎಸ್) ತಂತ್ರಾಂಶದಲ್ಲಿ ಸಮಗ್ರ ಮಾಹಿತಿಗಳನ್ನು ಕಾಲಕಾಲಕ್ಕೆ ತುಂಬುವುದು. ಇತರ ಅನಿರೀಕ್ಷಿತ ಕಾರ್ಯಕಮಗಳ ನಿರ್ವಹಣೆ, ಚುನಾವಣಾ ಕರ್ತವ್ಯ, ಜನಗಣತಿ, ಜಾತಿಗಣತಿ, ಮಕ್ಕಳ ಗಣತಿ, ವಿವಿಧ ತರಬೇತಿಗಳಲ್ಲಿ ಭಾಗಿಯಾಗುವುದು.
ಇಲಾಖೆಗೆ ಮೇಲಿಂದ ಮೇಲೆ ಸೂಕ್ತ ಮಾಹಿತಿ ಒದಗಿಸುವುದು, ತನ್ನ ಶಾಲೆಯ ಜತೆ ಇತರ ಶಾಲೆಗಳಿಗೆ ನಿಯೋಜನೆ, ಮಕ್ಕಳ
ಹಾಜರಾತಿಯನ್ನು ಆನ್‌ಲೈನ್‌ನಲ್ಲಿ ದಾಖಲಿಸುವುದು, ಗೈರಾಗಿರುವ ಮಕ್ಕಳ ಮನೆಗೆ ಭೇಟಿ ನೀಡುವುದು, ಮುಖ್ಯ ಶಿಕ್ಷಕರಿಲ್ಲಿದಿ ದ್ದಲ್ಲಿ ಪ್ರಭಾರಿ ಮುಖ್ಯಶಿಕ್ಷಕರಾಗಿ ಹೊಣೆ ಇತ್ಯಾದಿ. ಇದಲ್ಲದೆ ನಿತ್ಯ ಒಂದಲ್ಲೊಂದು ಹೊಸ ಸೂಚನೆಗಳು ಬರುತ್ತಿರುತ್ತದೆ, ಅವುಗಳನ್ನು ಪಾಲಿಸುವುದು. ಹೀಗೆ ಶಿಕ್ಷಕ ಏಕಪಾತ್ರಾಭಿನಯಧಾರಿ ಕಾರ್ಯ ನಿರ್ವಹಿಸುತ್ತಿರುತ್ತಾನೆ. ಇದರ ಜತೆ ದಿನಕ್ಕೆ
ಏಳರಿಂದ ಎಂಟು ಅವಧಿಯನ್ನು ಶಾಲಾ ಬೋಧನೆಯಲ್ಲೂ ತೊಡಗಿಸಿಕೊಳ್ಳಬೇಕಾಗಿರುತ್ತದೆ.
ಅವುಗಳಿಗೆ ಪೂರ್ವ ತಯಾರಿಗಳನ್ನು ಮಾಡಿಕೊಳ್ಳಬೇಕಾಗಿರುತ್ತದೆ. ಇಷ್ಟೆಲ್ಲಾ ಕಾರ್ಯಭಾರಗಳನ್ನು ಸರಿದೂಗಿಸಲು ದಿನದ 24 ಗಂಟೆ ಸಮಯವು ಸಾಕಾಗುವುದಿಲ್ಲ ಎಂದು ಹಲವು ಸಲ ಶಿಕ್ಷಕರಿಗೆ ಅನಿಸುತ್ತಿರುತ್ತದೆ. ಈ ಹಲವು ಒತ್ತಡಗಳು ಬೋಧನೆಗೆ
ಅಡ್ಡಿಯುಂಟು ಮಾಡಿ ಕಲಿಕೆಗೆ ಒತ್ತು ನೀಡಲು ಸಮಯ ಸಾಕಾಗುತ್ತಿಲ್ಲ ಎನ್ನುವುದಂತೂ ನಿಜ. ಆದರೆ ಮಕ್ಕಳ ಪಾಲಕರಿಗೆ ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂಬ ಭಾವನೆ ಬೆಳೆಯುತ್ತಿದ್ದು ಅನಿವಾರ್ಯವಾಗಿ ಖಾಸಗಿ
ಶಾಲೆಗಳತ್ತ ಮುಖ ಮಾಡುವಂತಾಗಿದೆ. ವಾಸ್ತವದಲ್ಲಿ ಇದು ಸತ್ಯವೂ ಹೌದು.
ಆದುದರಿಂದ ಶಿಕ್ಷಕರಿಗೆ ಕಲಿಕೇತರ ಅನ್ಯಕಾರ್ಯಭಾರವನ್ನು ಕಡಿಮೆ ಮಾಡಿ ಶಿಕ್ಷಕರು ಪೂರ್ಣವಾಗಿ ಕಲಿಕೆಯಲ್ಲಿ ತೊಡಗಿಸಿ ಕೊಳ್ಳಲು ಅನುವಾಗುವಂತೆ ಕ್ರಮವಹಿಸಬೇಕಿದೆ. ಎಲ್ಲರೂ ಅಂದುಕೊಂಡಂತೆ ಶಿಕ್ಷಕ ಕೇವಲ ಬೋಧನೆಗೆ ಮೀಸಲಾಗಿಲ್ಲ ಅನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಇನ್ನು ನೇರವಾಗಿ ಬೋಧನೆಯ ವಿಚಾರಕ್ಕೆ ಬರುವುದಾದರೆ, ಆರ್‌ಟಿಇ ಕಾಯಿದೆ ಸೆಕ್ಷನ್ 19 ಮತ್ತು 25ನೇ ಪ್ರಕರಣಗಳ ಪ್ರಕಾರ ಶಾಲೆಯ ಸ್ಥಾಪನೆಗಾಗಿ ಇರುವ ಮಾನಕ ಗುಣಮಟ್ಟಗಳನ್ನು ತಿಳಿಸುವ ಅನುಸೂಚಿ ಯಲ್ಲಿ ಶಿಕ್ಷಕರ ನೇಮಕಾತಿಗೆ ವಿದ್ಯಾರ್ಥಿ- ಶಿಕ್ಷಕರ ಪ್ರಮಾಣಾನುಪಾತವನ್ನು ಬಳಸಲಾಗುತ್ತಿದೆ.
ಇದರ ಪ್ರಕಾರ ಒಂದು ಶಾಲೆಯಲ್ಲಿ ಅರವತ್ತರವರೆಗೆ ಮಕ್ಕಳು ದಾಖಲಾತಿ ಹೊಂದಿದಲ್ಲಿ ಎರಡು ಶಿಕ್ಷಕರು, ಅರವತ್ತೊಂದರಿಂದ ತೊಂಬತ್ತರ ನಡುವೆ ಇದ್ದರೆ ಮೂರು ಶಿಕ್ಷಕರು, ತೊಂಬತ್ತೊಂದರಿಂದ ನೂರಿಪ್ಪತರ ನಡುವೆ ಇದ್ದರೆ ನಾಲ್ಕು ಶಿಕ್ಷಕರು, ವಿದ್ಯಾರ್ಥಿ ಗಳ ಸಂಖ್ಯೆ ನೂರ ಇಪ್ಪತ್ತೊಂದರಿಂದ ಇನ್ನೂರರ ನಡುವೆ ಇದ್ದರೆ ಐದು ಶಿಕ್ಷಕರು, ನೂರೈವತ್ತು ಮಕ್ಕಳಿಗೂ ಮೇಲ್ಪಟ್ಟು ಇದ್ದ
ಶಾಲೆಗೆ ಒಬ್ಬರು ಮುಖ್ಯೋಪಾಧ್ಯಾಯರನ್ನು ನೇಮಕ ಮಾಡಿಕೊಳ್ಳಬೇಕು. ಇನ್ನೂ ಆರನೆಯ ತರಗತಿಯಿಂದ ಎಂಟನೆಯ ತರಗತಿಯವರೆಗೆ ಪ್ರತಿಯೊಂದು ತರಗತಿಗೆ ಕಡೇ ಪಕ್ಷ ಒಬ್ಬರು ಶಿಕ್ಷಕರು ಇರತಕ್ಕದ್ದು.
ಇದರಂತೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ, ಸಮಾಜ ವಿಜ್ಞಾನ ಹಾಗೂ ಭಾಷೆಗಳು ಎಂಬ ಮೂರು ಹುದ್ದೆಗಳನ್ನು, ಆರನೆಯ ತರಗತಿಯಿಂದ ಎಂಟನೆಯ ತರಗತಿಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆಯು ಒಂದು ನೂರಕ್ಕೂ
ಮೇಲ್ಪಟ್ಟಿದ್ದರೆ ಒಬ್ಬರು ಪೂರ್ಣಕಾಲಿಕ ಮುಖ್ಯೋಪಾಧ್ಯಾಯರನ್ನು ನೇಮಕಾತಿ ಮಾಡಲು ಕಾಯಿದೆಯಲ್ಲಿ ಅವಕಾಶ ವಿರುವುದು. ಇಲ್ಲಿ ಎಲ್ಲಿಯೂ ವಿಷಯವಾರು ಶಿಕ್ಷಕರ ಉಲ್ಲೇಖವಿಲ್ಲ.
ಆದುದರಿಂದ ಬಹುತೇಕ ಎಲ್ಲ ವಿಷಯಗಳನ್ನು ಬೋಧಿಸುವ ಹೊರೆ ಶಿಕ್ಷಕರ ಮೇಲಿದೆ. ಬಹುತೇಕ ಸರಕಾರಿ ಕಿರಿಯ ಪಾಥಮಿಕ ಶಾಲೆಗಳಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಬೋಧಿಸಲು ಇಬ್ಬರು ಶಿಕ್ಷಕರಿರುತ್ತಾರೆ. ಅದರಲ್ಲಿ ಒಬ್ಬರು ನಲಿ – ಕಲಿ
ಅಂದರೆ ಒಂದರಿಂದ ಮೂರನೇ ತರಗತಿಯನ್ನು ದಿನವಿಡೀ ನಿರ್ವಹಿಸುತ್ತಾರೆ. ಮತ್ತೊಬ್ಬರು ನಾಲ್ಕು ಮತ್ತು ಐದನೇ ತರಗತಿಗೆ ಎರಡು ಭಾಷೆಗಳು, ಮೂರು ಐಚ್ಛಿಕ ವಿಷಯಗಳು ಬೋಧಿಸುತ್ತಿರುತ್ತಾರೆ. ಇನ್ನು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆರರಿಂದ
ಎಂಟನೆಯ ತರಗತಿಯವರೆಗೆ ಮೂರು ಭಾಷೆಗಳು, ಮೂರು ಐಚ್ಛಿಕ ವಿಷಯಗಳ ಜತೆ ದೈಹಿಕ ಶಿಕ್ಷಣವನ್ನು ಬೋಧಿಸುತ್ತಿರುತ್ತಾರೆ.
ವೈಜ್ಞಾನಿಕವಾಗಿ ಹೇಳುವುದಾದರೆ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಕನಿಷ್ಠ ನಾಲ್ಕು ಶಿಕ್ಷಕರ ಅಗತ್ಯವಿದೆ. ಹಿರಿಯ ಪ್ರಾಥಮಿಕ
ಶಾಲೆಗಳಿಗೆ ವಿಷಯವಾರು ದೈಹಿಕ ಶಿಕ್ಷಣ ಶಿಕ್ಷಕರನ್ನು ಒಳಗೊಂಡು ಏಳು ಶಿಕ್ಷಕರ ಅವಶ್ಯಕತೆಯಿದೆ. ಇದಲ್ಲದೆ ವಿಷಯಗಳನ್ನು ಬೋಽಸುವ ಜತೆಗೆ ಮುಖ್ಯ ಶಿಕ್ಷಕರ ಕಾರ್ಯಭಾರವನ್ನು ನಿರ್ವಹಿಸುವ ಅನಿವಾರ್ಯತೆ ಇದೆ. ಅದೇ ರೀತಿ ಸರಕಾರಿ ಹಿರಿಯ
ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ ಏಳನೇ ತರಗತಿ ಬೋಧಿಸಲು ಮೂರು ಅಥವಾ ನಾಲ್ಕು ಜನ ಶಿಕ್ಷಕರಿರುತ್ತಾರೆ. ಅದರಲ್ಲಿ ಒಬ್ಬರು ನಲಿ – ಕಲಿ ತರಗತಿ ನಿರ್ವಹಣೆ ಮಾಡುತ್ತಾರೆ.
ಉಳಿದ ಎರಡು ಅಥವಾ ಮೂರು ಜನರು ನಾಲ್ಕರಿಂದ ಏಳನೇ ತರಗತಿವರೆಗೆ ಆರು ವಿಷಯಗಳನ್ನು ಹಂಚಿಕೊಂಡು ದಿನವಿಡಿ
ಬೋಧನೆಯಲ್ಲಿ ತೊಡಗಿರುತ್ತಾರೆ. ಅದರಲ್ಲಿ ಒಬ್ಬರಿಗೆ ಮುಖ್ಯ ಶಿಕ್ಷಕರ ಜವಾಬ್ದಾರಿ ನಿರ್ವಹಣೆಯ ಅನಿವಾರ್ಯತೆಯಿದೆ. ಇನ್ನೂ 6-7ನೇ ತರಗತಿಗಳಿಗೆ ಆಂಗ್ಲ ಮಾಧ್ಯಮ ತೆರೆದಿರುವ ಶಾಲೆಗಳಲ್ಲಿ ಇದೇ ಶಿಕ್ಷಕರು ಆಂಗ್ಲ ಮಾಧ್ಯಮದಲ್ಲಿಯೂ ಬೋಧಿಸಬೇಕಾ ಗಿದೆ. ಬಹುತೇಕ ಸರಕಾರಿ ಶಾಲೆಗಳಲ್ಲಿ ಒಬ್ಬನೇ ಶಿಕ್ಷಕ ಒಂದೇ ತರಗತಿಯಲ್ಲಿ ದಿನಪೂರ್ತಿ ಕಾರ್ಯನಿರ್ವಹಿಸುತ್ತಾನೆ.
ಶೈಕ್ಷಣಿಕ ಮನೋವಿಜ್ಞಾನದ ಪ್ರಕಾರ ಒಬ್ಬ ಶೇಷ್ಠ ಶಿಕ್ಷಕ ಒಂದು ವಿಷಯದ ಕಡೆಗೆ ಒಂದು ಬಾರಿಗೆ ಗರಿಷ್ಠ 30-40 ನಿಮಿಷಗಳ ಕಾಲ ಮಕ್ಕಳ ಅವದಾನವನ್ನು ಕೇಂದ್ರೀಕರಿಸಬಲ್ಲರು. ಆದರೆ ಸರಕಾರಿ ಶಾಲೆಗಳಲ್ಲಿ ಒಬ್ಬನೇ ಶಿಕ್ಷಕ ಹಲವು ವಿಷಯಗಳನ್ನು ಒಂದೇ ತರಗತಿಗೆ ದಿನಪೂರ್ತಿ ಬೋಧಿಸುತ್ತಾನೆ. ಬಹುವರ್ಗ ಬೋಧನೆಯನ್ನು ಮಾಡುತ್ತಿರುತ್ತಾನೆ. ಕಿರಿಯ ಪಾಥಮಿಕ ಶಾಲೆ ಗಳಲ್ಲಿ ಒಬ್ಬ ಶಿಕ್ಷಕ 1 ರಿಂದ 5ನೇ ತರಗತಿಗಳಿಗೆ ಒಂದು ದಿನದಲ್ಲಿ ಎಲ್ಲಾ ವಿಷಯಗಳನ್ನು ಬೋಧಿಸುತ್ತಿರು ವುದು ಇದೆ. ಹಿರಿಯ ಪಾಥಮಿಕ ಶಾಲೆಗಳಲ್ಲಿ 3-4ವಿಷಯಗಳನ್ನು ಒಬ್ಬನೇ ಶಿಕ್ಷಕ ಬೋಧಿಸುತ್ತಾನೆ.
ಬೋಧನಾ ಶಾಸ್ತ್ರದ ಪ್ರಕಾರ ಒಬ್ಬ ಶಿಕ್ಷಕ ಒಂದೆರಡು ವಿಷಯಗಳ ಬೋಧನಾ ತತ್ತ್ವಗಳನ್ನು ಸಮರ್ಥವಾಗಿ ಕಲಿತು ಅಳವಡಿಸ ಬಹುದು. ಆದರೆ ಒಬ್ಬನೇ ಶಿಕ್ಷಕ ಎಲ್ಲಾ ವಿಷಯಗಳನ್ನು ಬೋಧಿಸುತ್ತಾನೆ. ಇದು ಶಿಕ್ಷಕರಿಗೆ ಒತ್ತಡವಾಗಿ ಪರಿಣಮಿಸಿ ದರೂ ಸಹ ಉಚಿತ ಶಿಕ್ಷಣದ ಮೂಲ ಅಶಯವನ್ನು ಈಡೇರಿಸಲು, ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಕಲಿಕೆಯಲ್ಲಿ ಯಾವುದೇ ತೊಂದರೆಯಾಗ ಬಾರದು ಎಂದು ತನಗೆ ಗೊತ್ತಿಲ್ಲದ ಹೊಸ ವಿಷಯಗಳನ್ನು ಕಲಿತು ಮಕ್ಕಳಿಗೆ ಕಲಿಸುವ ಸರಕಾರಿ ಶಿಕ್ಷಕರ ಶ್ರಮವನ್ನು ಕೇವಲ ಸಂಬಳದ ದೃಷ್ಟಿಕೋನದಲ್ಲಿ ಅಳೆಯುವುದು ಎಷ್ಟರ ಮಟ್ಟಿಗೆ ಸರಿ. ಸರಕಾರಿ ಶಾಲೆ ಮತ್ತು ಅಲ್ಲಿನ ಶಿಕ್ಷಕ ರನ್ನು ವ್ಯಂಗವಾಗಿ ನೋಡುವ ದೃಷ್ಟಿಕೋನವನ್ನು ಎಲ್ಲರೂ ಬದಲಿಸಿಕೊಳ್ಳಬೇಕು.