Wednesday, 9th October 2024

ಇಂದಿನ ’ಸಮ ನಿಶಾ’ ದಿನದ ಹತ್ತು ರಮಣೀಯ ದೃಶ್ಯಗಳು

ತಿಳಿರು ತೋರಣ

ಶ್ರೀವತ್ಸ ಜೋಶಿ

srivathsajoshi@yahoo.com

ವರ್ಷಕ್ಕೆರಡು ಸಲ ಬರುವ ‘ಸಮ ನಿಶಾ’ ದಿನಗಳಂದು ಮಾತ್ರ ಭೂಗೋಳದ ಉತ್ತರಾರ್ಧಕ್ಕೂ ದಕ್ಷಿಣಾರ್ಧಕ್ಕೂ ಸಮ ಪ್ರಮಾಣ ದಲ್ಲಿ ಸೂರ್ಯರಶ್ಮಿಯ ಹಂಚಿಕೆಯಾಗುತ್ತದೆ. ಈ ಎರಡು ದಿನಗಳಂದು ಮಾತ್ರ ಸೂರ್ಯನು ಪೂರ್ವದಿಕ್ಕಿನ ಅತ್ಯಂತ ನಿಖರ ಬಿಂದುವಿನಲ್ಲಿ ಉದಯಿಸಿ ಪಶ್ಚಿಮ ದಿಕ್ಕಿನ ಅತ್ಯಂತ ನಿಖರ ಬಿಂದುವಿನಲ್ಲಿ ಮುಳುಗುತ್ತಾನೆ. ಸೂರ್ಯೋದಯ ಮತ್ತು ಸೂರ್ಯಾಸ್ತ ಪ್ರಕ್ರಿಯೆಗಳು ಅತ್ಯಂತ ಕ್ಷಿಪ್ರವಾಗಿ ನಡೆಯುವುದೂ ಈ ಎರಡು ದಿನಗಳ ವೈಶಿಷ್ಟ್ಯ.

ಅಕ್ಷಾಂಶ ರೇಖಾಂಶಗಳನ್ನು ಅತಿ ಕರಾರುವಾಕ್ಕಾಗಿ ಗಮನಿಸುವವರು ಮತ್ತು ಅನುಸರಿಸುವವರು ಯಾರು? ಖಗೋಳ ಶಾಸ್ತ್ರಜ್ಞರು. ದೃಗ್ಗಣಿತವನ್ನು ಆಧರಿಸಿ ಪಂಚಾಂಗ ಬರೆಯುವವರು. ಆಕಾಶ ವೀಕ್ಷಣೆಯ ಹವ್ಯಾಸವುಳ್ಳವರು. ಅಂತೆಯೇ ವಾಸ್ತುಶಿಲ್ಪಿಗಳು ಕೂಡ! ಶೃಂಗೇರಿಯ ವಿದ್ಯಾಶಂಕರ ದೇವಸ್ಥಾನವನ್ನು ನೋಡಿದ್ದೀರಾ ದರೆ ಅಥವಾ ಅದರ ಬಗ್ಗೆ ಓದಿದ್ದೀರಾದರೆ ನಿಮಗೆ ಈ ಸಂಗತಿ ಗೊತ್ತಿರುತ್ತದೆ: ವಿದ್ಯಾ ಶಂಕರ ದೇವಾಲಯದ ಒಳಭಾಗದಲ್ಲಿ ಹನ್ನೆರಡು ‘ರಾಶಿ ಕಂಬ’ಗಳ ಮಂಟಪವಿದೆ.

ಸೌರಮಾನ ಪದ್ಧತಿಯ ಹನ್ನೆರಡು ತಿಂಗಳುಗಳಿಗೆ ಅಂದರೆ ರಾಶಿಗಳಿಗೆ ಹೊಂದಿಕೊಂಡು ಈ ಹನ್ನೆರಡು ಕಂಬಗಳು ನಿಂತಿವೆ. ಅವುಗಳ ಮೇಲೆ ಆಯಾ ರಾಶಿಗಳ ಚಿಹ್ನೆ ಮತ್ತು ಅಧಿದೇವತೆಯ ಕೆತ್ತನೆಯಿದೆ. ದೇವಾಲಯದ ಪೂರ್ವ ದ್ವಾರದಲ್ಲಿ ಹಿಂಗಾಲುಗಳ ಮೇಲೆ ನಿಂತುಕೊಂಡ ಭಂಗಿಯಲ್ಲಿರುವ ಸಿಂಹದ ಕೆತ್ತನೆಯೊಂದಿದೆ. ಪ್ರಭಾತ ಸಮಯದಲ್ಲಿ ಅದರ ಮುಂಗಾಲುಗಳ ಸಂದಿಯಿಂದ ಹಾಯ್ದು ಬರುವ ಪ್ರಥಮ ಉಷಾ ಕಿರಣಗಳು ಸೌರಮಾನ ವರ್ಷದುದ್ದಕ್ಕೂ ಒಂದೊಂದು ತಿಂಗಳಲ್ಲಿ ಒಂದೊಂದು ರಾಶಿಯ ಕಂಬದ ಮೇಲೆ ಬೀಳುತ್ತವೆ.

ಸೂರ್ಯಪಥವನ್ನು ಸ್ಪಷ್ಟವಾಗಿ ಮತ್ತು ಸುಂದರವಾಗಿ ತಿಳಿಸುತ್ತವೆ. ಇಂಥದೊಂದು ರಮಣೀಯ ದೃಶ್ಯ ಸಾಧ್ಯವಾದದ್ದು ಹೇಗೆ? ವಿದ್ಯಾಶಂಕರ ದೇವಸ್ಥಾನವನ್ನು 14ನೆಯ ಶತಮಾನದಲ್ಲಿ, ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ-ಬುಕ್ಕರ ಗುರು
ಮಹರ್ಷಿ ವಿದ್ಯಾರಣ್ಯರು ಕಟ್ಟಿಸಿದರು. ಶಿಲ್ಪಸಾಮ್ರಾಟದ್ವಯರಾದ ಜಕಣಾಚಾರಿ ಮತ್ತು ಡಂಕಣಾಚಾರಿಗಳೇ ಅದರ ಶಿಲ್ಪಿಗಳು.
ಅಕ್ಷಾಂಶ-ರೇಖಾಂಶಗಳ ನಿಖರ ಅರಿವು, ಖಗೋಳ ಶಾಸ್ತ್ರದಲ್ಲಿ ಅಪಾರ ಪರಿಣತಿ, ಮತ್ತು ವೈeನಿಕ ಚಿಂತನೆಯ ಹರಹು ಅವರಿಗೆ
ಅದಾಗಲೇ ಇದ್ದುದರಿಂದ ಈ ಅದ್ಭುತ ಸೂರ್ಯರಶ್ಮಿ ಚಮತ್ಕಾರ ಸಾಧ್ಯವಾಯಿತು!

ವಿದ್ಯಾಶಂಕರ ದೇಗುಲವೊಂದೇ ಅಂತಲ್ಲ, ಅಥವಾ ಡಂಕಣ-ಜಕಣರ ಶಿಲ್ಪಕಲೆಗಳಷ್ಟೇ ಅಂತಲ್ಲ, ಭಾರತದಲ್ಲಿ ಬೇರೆ ಕಡೆ ಗಳಲ್ಲೂ ಈ ರೀತಿ ವರ್ಷದ ನಿರ್ದಿಷ್ಟ ದಿನದಂದು ನಿರ್ದಿಷ್ಟ ರೀತಿಯಲ್ಲಿ ಸೂರ್ಯರಶ್ಮಿ-ಛಾಯೆಗಳ ವಿಶಿಷ್ಟ ವಿನ್ಯಾಸಗಳು
ಏರ್ಪಡುವ ಅದೆಷ್ಟು ಉದಾಹರಣೆಗಳಿಲ್ಲ! ಜೈಪುರ ಮತ್ತು ದೆಹಲಿ ಯಲ್ಲಿರುವ ‘ಜಂತರ್ ಮಂತರ್’ಗಳು ತತ್‌ಕ್ಷಣ ನೆನಪಾಗುತ್ತವೆ.
ಹಾಗೆಯೇ ಮಥುರಾ, ವಾರಾಣಸಿ, ಉಜ್ಜಯಿನಿಯಲ್ಲಿರುವ ರಚನೆಗಳು. ಅವುಗಳ ನಿರ್ಮಾತೃ ರಜಪೂತ ದೊರೆ ಜೈಸಿಂಗನೂ
ಖಗೋಳ ಶಾಸ್ತ್ರದಲ್ಲಿ ಅತೀವ ಆಸಕ್ತಿಯುಳ್ಳವನಾಗಿದ್ದವನು.

ಖಗೋಳಕ್ಕೆ ಸಂಬಂಧಿಸಿದ ವಿಷಯಗಳನ್ನು ಅವಲೋಕಿಸುವುದು, ತಾರಾ ಮಂಡಲದಲ್ಲುಂಟಾಗುವ ಹಲವು ಬದಲಾವಣೆಗಳು ಮತ್ತು ಗ್ರಹಣಗಳನ್ನು ಕುರಿತು ತಿಳಿಯುವುದು ಆತನ ಹವ್ಯಾಸವಾಗಿತ್ತು. ಪ್ರಾಚೀನ ಭಾರತದಲ್ಲಿ ಇನ್ನೂ ಎಷ್ಟು ಶಿಲ್ಪಗಳು, ಸಂರಚನೆಗಳು ಹೀಗೆ ‘ನಭೋಮುಖಿ’ಯಾಗಿದ್ದವೋ, ಪರಕೀಯರ ಸತತ ದಾಳಿಗೆ ನಲುಗಿ ಸರ್ವನಾಶವಾದುವೋ ಯಾರಿಗೆ ಗೊತ್ತು.
ಈಗ ಇದು ನೆನಪಾಗಲಿಕ್ಕೆ ಕಾರಣ ಇಂದಿನ ‘ಸಮ ನಿಶಾ’ ದಿನ. ಹಾಗೆಂದರೇನು ಅಂತ ಒಮ್ಮೆ ನಿಮಗೆ ಆಶ್ಚರ್ಯವಾಗಬಹುದು.
ಇದು ಇಂಗ್ಲಿಷ್‌ನ Equinox ಪದಕ್ಕೆ ಪರ್ಯಾಯವಾಗಿ, ಈ ಲೇಖನಕ್ಕಾಗಿಯಷ್ಟೇ ನಾನು ಟಂಕಿಸಿದ ಪದ. ಈಕ್ವಿನಾಕ್ಸ್ ಪದ
ಬಂದದ್ದು ಲ್ಯಾಟಿನ್ ಭಾಷೆಯ aequus(equal) ಮತ್ತು nox(night) ಪದಗಳಿಂದ. ಅಂದಮೇಲೆ ‘ಸಮ ನಿಶಾ’ ಸರಿಯಾಗುತ್ತ ದೆಂದು ನನ್ನ ಅನಿಸಿಕೆ.

ಬಹುತೇಕ ಮಾರ್ಚ್ 21ರಂದು ಬರುವ ಈಕ್ವಿನಾಕ್ಸ್ ಈ ವರ್ಷ ಮಾರ್ಚ್ 20ರಂದು ಬಂದಿದೆ. ನಿಮಿಷದವರೆಗಿನ ನಿಖರತೆ ಯಿಂದ ಹೇಳುವುದಾದರೆ ರವಿವಾರ ಮಾರ್ಚ್ 20ರಂದು ಅಪರಾಹ್ನ 3:33 ಯುಟಿಸಿ ಸಮಯಕ್ಕೆ. ಅಂದರೆ ಭಾರತೀಯ ಸಮಯ ರಾತ್ರಿ 9.03; ನಮಗಿಲ್ಲಿ ವಾಷಿಂಗ್ಟನ್ ಡಿಸಿ.ಯಲ್ಲಿ ಪೂರ್ವಾಹ್ನ 11.33. ವಿಶೇಷವಾಗಿ ಈ ದಿನ ಹಗಲು-ರಾತ್ರಿಗಳದು ತಲಾ ಹನ್ನೆರಡು ಗಂಟೆಗಳ ಸಮಪ್ರಮಾಣ. ಭಾರತ, ಅಮೆರಿಕ ಸೇರಿದಂತೆ ಭೂಗೋಳದ ಉತ್ತರಾರ್ಧದಲ್ಲಿ ಈ ದಿನದಿಂದ ‘ಸ್ಪ್ರಿಂಗ್ ಸೀಸನ್’ (ವಸಂತ ಋತು) ಆರಂಭ. ಆದ್ದರಿಂದಲೇ ಇದಕ್ಕೆ Vernal Equinox ಎಂದು ಹೆಸರು.

ಇನ್ನು ಆರು ತಿಂಗಳಾದ ಮೇಲೆ ಸಪ್ಟೆಂಬರ್ 22ರಂದು ಮತ್ತೊಮ್ಮೆ ತಲಾ ಹನ್ನೆರಡು ಗಂಟೆಗಳ ಸಮಪ್ರಮಾಣದ ಹಗಲು-ರಾತ್ರಿ ಇರುತ್ತದೆ. ಅದಕ್ಕೆ Autumnal Equinox ಎಂದು ಹೆಸರು. ಆಗ ಭೂಗೋಳದ ಉತ್ತರಾರ್ಧದಲ್ಲಿ ಚಳಿಗಾಲ ಆರಂಭ. ದಕ್ಷಿಣಾರ್ಧ ದಲ್ಲಿ ತದ್ವಿರುದ್ಧ. ಹೀಗೆ ವರ್ಷಕ್ಕೆರಡು ಸಲ ಬರುವ ಸಮ ನಿಶಾ ದಿನಗಳಂದು ಮಾತ್ರ ಭೂಗೋಳದ ಉತ್ತರಾರ್ಧಕ್ಕೂ ದಕ್ಷಿಣಾ ರ್ಧಕ್ಕೂ ಸಮಪ್ರಮಾಣದಲ್ಲಿ ಸೂರ್ಯರಶ್ಮಿಯ ಹಂಚಿಕೆಯಾಗುತ್ತದೆ. ಈ ಎರಡು ದಿನಗಳಂದು ಮಾತ್ರ ಸೂರ್ಯನು ಪೂರ್ವ ದಿಕ್ಕಿನ ಅತ್ಯಂತ ನಿಖರ ಬಿಂದುವಿನಲ್ಲಿ ಉದಯಿಸಿ ಪಶ್ಚಿಮ ದಿಕ್ಕಿನ ಅತ್ಯಂತ ನಿಖರ ಬಿಂದುವಿನಲ್ಲಿ ಮುಳುಗುತ್ತಾನೆ.

ಸೂರ್ಯೋದಯ ಮತ್ತು ಸೂರ್ಯಾಸ್ತ ಪ್ರಕ್ರಿಯೆಗಳು ಅತ್ಯಂತ ಕ್ಷಿಪ್ರವಾಗಿ ನಡೆಯುವುದೂ ಈ ಎರಡು ದಿನಗಳ ವೈಶಿಷ್ಟ್ಯ. ಇಲ್ಲಿ ಕ್ಷಿಪ್ರ ಎಂದದ್ದು ಸೂರ್ಯಾಸ್ತದ ವೇಳೆ ಸೂರ್ಯಬಿಂಬವು ಪಶ್ಚಿಮ ದಿಗಂತದ ಅಂಚನ್ನು ಮುಟ್ಟಿ ಪೂರ್ಣ ಮುಳುಗಿ ಹೋಗು ವವರೆಗಿನ ಅವಧಿಯ ಬಗ್ಗೆ; ಸೂರ್ಯೋದಯದಲ್ಲಾದರೆ ಪೂರ್ವ ದಿಗಂತದ ಅಂಚಿನಲ್ಲಿ ಕಾಣಿಸತೊಡಗಿ ಪೂರ್ಣವಾಗಿ ಮೇಲೆದ್ದು ಬರುವವರೆಗಿನ ಅವಧಿ.

ಸಮ ನಿಶಾ ದಿನದ ಬಗೆಗಿನ ಕಿರುಮಾಹಿತಿಯ ಬಳಿಕ ಈಗ ಮತ್ತೆ ವಾಸ್ತುಶಿಲ್ಪಗಳ ವಿಚಾರಕ್ಕೆ ಹೊರಳೋಣ. ಮಾರ್ಚ್‌ನಲ್ಲಿ ಬರುವ
ಸಮ ನಿಶಾ ದಿನದಂದು, ಅಂದರೆ ಈ ವರ್ಷ ಇಂದು, ಪ್ರಪಂಚದ ಹತ್ತು ಕಡೆಗಳಲ್ಲಿರುವ ಹತ್ತು ವಿವಿಧ ವಾಸ್ತುಶಿಲ್ಪಗಳಲ್ಲಿ ಕಂಡು ಬರುವ ಸೂರ್ಯರಶ್ಮಿ ಚಮತ್ಕಾರಗಳನ್ನು ತಿಳಿದುಕೊಳ್ಳೋಣ. ೧. ಮೆಕ್ಸಿಕೊ ದೇಶದ ಚಿಚೆನ್ ಇಟ್ಜಾ ಪಟ್ಟಣದಲ್ಲಿರುವ ಭವ್ಯ ವಾದ ಪಿರೇಮಿಡ್ ಮೇಲೆ ಈಕ್ವಿನಾಕ್ಸ್ ದಿನಗಳಂದು ನಿರ್ದಿಷ್ಟ ಸಮಯಕ್ಕೆ ಕಾಳಸರ್ಪದಂತಹ ಭಯಂಕರ ಆಕಾರದ ನೆರಳು
ಮೂಡುತ್ತದೆ. ಕ್ರಿ.ಶ. ಒಂಬತ್ತನೆಯ ಶತಮಾನದಲ್ಲಿ, ಅದಾಗಲೇ ಇದ್ದ ಒಂದು ರಚನೆಯ ಮೇಲೆ ನಿರ್ಮಾಣವಾದ ಆ ಪಿರೇಮಿಡ್ ಮೂಲತಃ ಮಾಯನ್ ನಾಗರಿಕತೆಯದು ಎಂದು ನಂಬಲಾಗಿದೆ.

ಅದು ‘ಕುಕುಲ್ಕನ್’ ಸರ್ಪದೇವತೆಯ ದೇಗುಲ. ಪ್ರಪಂಚದ ಏಳು ಅದ್ಭುತಗಳಲ್ಲೊಂದು. ಈಕ್ವಿನಾಕ್ಸ್ ದಿನಗಳಂದು ದೇಗುಲದ ಗೋಡೆಗಳ ಮೂಲಕ ಕುಕುಲ್ಕನ್ ಭೂಮಿಗೆ ಇಳಿಯುತ್ತದೆ; ಮಳೆ-ಬೆಳೆ ಎಲ್ಲ ಚೆನ್ನಾಗಿ ಆಗುವಂತೆ, ಆಯುರಾರೋಗ್ಯ ಐಶ್ವರ್ಯ ಪ್ರಾಪ್ತಿಯಾಗುವಂತೆ ತನ್ನ ಭಕ್ತರನ್ನು ಹರಸುತ್ತದೆ; ಆಮೇಲೆ ಪಕ್ಕದ ಸರೋವರದಲ್ಲಿ ಮಿಂದು ಪಾತಾಳಲೋಕಕ್ಕೆ ಮರಳುತ್ತದೆ- ಎಂದು ಮಾಯನ್ ನಾಗರಿಕರು ನಂಬಿದ್ದರು.

ಪಿರೇಮಿಡ್‌ನ ಉತ್ತರಭಾಗದ ಮೇಲ್ತುದಿಯಲ್ಲಿ ಆರಂಭವಾಗುವ ನೆರಳು ಬುಡದಲ್ಲಿರುವ ಹಾವಿನಹೆಡೆ ಆಕೃತಿಯನ್ನು ತಲುಪ ಲಿಕ್ಕೆ ಸುಮಾರು ನಾಲ್ಕೈದು ಗಂಟೆ ಬೇಕಾಗುತ್ತದೆ. 45 ನಿಮಿಷಗಳ ಕಾಲ ಉದ್ದನೆಯ ಸರ್ಪಾಕೃತಿ ಇಡೀ ಪಿರೇಮಿಡ್‌ನ ಆಪಾದ ಮಸ್ತಕ ಹರಡಿರುತ್ತದೆ. ಅದನ್ನು ನೋಡಲಿಕ್ಕೆ ಬರುವ ಪ್ರವಾಸಿಗಳಿಂದಾಗಿ ಅಲ್ಲಿ ಒಂದು ಜಾತ್ರೆಯೇ ಏರ್ಪಟ್ಟಿರುತ್ತದೆ. ೨. ಅಮೆರಿಕದ ಅರಿಝೋನಾ ಸಂಸ್ಥಾನದಲ್ಲಿ ಸ್ಕಾಟ್ಸ್‌ಡೇಲ್ ಎಂಬಲ್ಲಿರುವ ‘ಬಂಡೆಗಳ ಬಂಗ್ಲೆ’ಯಲ್ಲಿ ಒಳಗೋಡೆಯ ಬಂಡೆಯೊಂ
ದರ ಮೇಲಿನ ಅತಿ ಪ್ರಾಚೀನ ಕೆತ್ತನೆಯ ಮೇಲೆ ಸೂರ್ಯಕಿರಣ ಬೀಳುತ್ತದೆ.

ಈ ಬಂಡೆ-ಬಂಗ್ಲೆಯು (ಬೋಲ್ಡರ್ ಹೌಸ್) ಸುಮಾರು 1.6 ಬಿಲಿಯನ್ ವರ್ಷಗಳಷ್ಟು ಹಳೆಯ ಬಂಡೆಗಳನ್ನು ಉಪಯೋಗಿಸಿ 1980ರಲ್ಲಿ ಚಾರ್ಲ್ಸ್ ಜಾನ್ಸನ್ ಎಂಬ ವಾಸ್ತುವಿನ್ಯಾಸಕಾರ ರಚಿಸಿದ್ದು. ದಿ ಎಂ- ಫ್ಯಾಮಿಲಿ ಎಂಬ ಶ್ರೀಮಂತ ಕುಟುಂಬವೊಂದು ಆ ಬಂಗ್ಲೆಯಲ್ಲಿ ನೆಲೆಸಿದೆ. ಈಕ್ವಿನಾಕ್ಸ್ ದಿನದಂದು ಸೂರ್ಯರಶ್ಮಿಯು ಎರಡು ಬಂಡೆಗಳ ನಡುವಿನಿಂದ ಹಾಯ್ದು ಒಳಗಿನ ಬಂಡೆಯ ಮೇಲಿನ ಸುರುಳಿಯಾಕಾರದ ಕೆತ್ತನೆ (ಅದನ್ನು ಪೆಟ್ರೊಗ್ಲಿಫ್ ಎನ್ನುತ್ತಾರೆ) ಮೇಲೆ ಬಿದ್ದು ಬಂಗಾರದ ಬಣ್ಣದ ವಾಲ್-
ಹ್ಯಾಂಗಿಂಗ್‌ನಂತೆ ಕಾಣಿಸುತ್ತದೆ.

೩. ಪೆಸಿಫಿಕ್ ಸಾಗರಮಧ್ಯದ ರಾಪಾ ನೂಯಿ ಅಥವಾ ಈಸ್ಟರ್ ದ್ವೀಪದಲ್ಲಿ ಅಹು ಅಕಿವಿ ಎಂಬಲ್ಲಿರುವ ಏಳು ‘ಮೊಆಯ್’
(ಮನುಷ್ಯನಾಕೃತಿಯ ಶಿಲೆ)ಗಳು ಈಕ್ವಿನಾಕ್ಸ್ ದಿನದಂದು ಸೂರ್ಯಾಸ್ತವಾಗುವ ವೇಳೆಗೆ ನೇರವಾಗಿ ಸೂರ್ಯನನ್ನೇ ದಿಟ್ಟಿಸುತ್ತಿವೆ ಯೇನೋ ಎಂದು ಭಾಸವಾಗುತ್ತದೆ. ಇವು ಕ್ರಿಸ್ತಶಕ 13ರಿಂದ 16ನೆಯ ಶತಮಾನದ ಅವಽಯಲ್ಲಿ ಪೊಲಿನೇಶಿಯಾ ಪ್ರಾಂತದ ರಾಪಾ ನೂಯಿ ಜನಾಂಗದವರೇ ಕೆತ್ತಿ ರಚಿಸಿದ ಶಿಲ್ಪಗಳು ಎನ್ನಲಾಗಿದೆ.

೪. ಯುರೋಪ್ ಖಂಡದಲ್ಲಿ ಐರ್‌ಲ್ಯಾಂಡ್ ದೇಶದ ಲಫ್‌ಕ್ರ್ಯೂ ಎಂಬಲ್ಲಿನ ಸಮಾಧಿ ಸ್ಥಳದಲ್ಲಿ ಸುಮಾರು 5000 ವರ್ಷಗಳಷ್ಟು
ಪುರಾತನವಾದ ನೈಸರ್ಗಿಕ ಏಕಶಿಲಾ ಶಿಲ್ಪಗಳಿವೆ. ಪ್ಯಾಸೇಜ್ ಟೂಂಬ್ಸ್ ಎನ್ನಲಾಗುವ ಇವುಗಳ ನಡುವಿನ ಇಕ್ಕಟ್ಟಾದ ಜಾಗದಲ್ಲಿ ಗುಹೆಯೊಳಗೆ ಪ್ರವೇಶಿಸಿದಂತೆ ಮನುಷ್ಯರು ತೂರಿಕೊಂಡು ಹೋಗುವುದಕ್ಕಾಗುತ್ತದೆ. ಈಕ್ವಿನಾಕ್ಸ್‌ನ ದಿನ ಈ ರಚನೆಗಳ ಮೇಲೆ ಬೀಳುವ ಸೂರ್ಯಕಿರಣಗಳು ಕಿಂಡಿಯಿಂದ ಒಳನುಗ್ಗಿ ಗೋಡೆಯ ಚಿತ್ತಾರಗಳ ಮೇಲೆ ಬೆಳಕು ಬಿದ್ದು ತ್ರೀ-ಡಿ ರಂಗೋಲಿಯಂಥ ವಿನ್ಯಾಸ ರಚಿಸುತ್ತವೆ.

ಸುಮಾರು 50 ನಿಮಿಷಗಳ ಕಾಲ ನಡೆಯುವ ಈ ನೆರಳು-ಬೆಳಕಿನ ನಿಸರ್ಗ ದಾಟವನ್ನು ನೋಡಲಿಕ್ಕೆ ಪ್ರವಾಸಿಗರು ಕಿಕ್ಕಿರಿದು ಸೇರುತ್ತಾರೆ. 5. ಮೆಡಿಟರೇನಿಯನ್ ಸಮುದ್ರ ಮಧ್ಯದ ಮಾಲ್ಟಾ ದ್ವೀಪದ ದಕ್ಷಿಣ ತೀರದಲ್ಲಿರುವ ಮ್ನಾಜ್ದ್ರಾ ಟೆಂಪಲ್ಸ್ ಕೂಡ ಭೂಗರ್ಭ ವೈಚಿತ್ರ್ಯಗಳ ಪಟ್ಟಿಯಲ್ಲಿವೆ. ಅವು ಸುಮಾರು ಕ್ರಿಸ್ತಪೂರ್ವ 3600ರಿಂದ 2500ರವರೆಗಿನ ಅವಧಿಯಲ್ಲಿ ನಿರ್ಮಾಣ ವಾದವು ಎನ್ನಲಾಗಿದೆ.

ಪ್ರಪಂಚದ ಅತಿ ಪ್ರಾಚೀನ, ಕಲ್ಲಿನಿಂದ ರಚಿತ ಕಟ್ಟಡಗಳು ಎಂದು ಕೂಡ ಅವುಗಳ ಖ್ಯಾತಿಯಿದೆ. ಯಾರು ಅವುಗಳನ್ನು ನಿರ್ಮಿಸಿ ದರೆಂಬ ವಿವರಗಳು ದೊರೆತಿಲ್ಲ. ಆದರೆ ಅವರೂ ಆ ಕಟ್ಟಡಗಳನ್ನು ನಭೋಮುಖಿ ಆಗಿಸಿದ್ದರೆನ್ನುವುದು ಈಕ್ವಿನಾಕ್ಸ್ ದಿನದಂದು ಮುಖ್ಯದ್ವಾರದ ಮೂಲಕ ಸೂರ್ಯರಶ್ಮಿ ಹಾಯ್ದು ಒಳಗೆಲ್ಲ ಝಗಮಗಿಸುವುದರಿಂದ ತಿಳಿದುಬರುತ್ತದೆ.

೬. ಆಗ್ನೇಯ ಏಷ್ಯಾದ ಕಾಂಬೋಡಿಯಾ ದೇಶದಲ್ಲಿರುವ ಆಂಗ್ಕೋರ‍್ವಾಟ್ ಹಿಂದೂ ದೇವಾಲಯ ಸಮುಚ್ಚಯ ಪ್ರಖ್ಯಾತ ವಾದುದು. ಕ್ರಿಸ್ತಶಕ 12ನೆಯ ಶತಮಾನದ ಪೂರ್ವಾರ್ಧದಲ್ಲಿ ಇಮ್ಮಡಿ ಸೂರ್ಯವರ್ಮನು ತನ್ನ ರಾಜಧಾನಿಯಾಗಿದ್ದ
ಯಶೋಧರಪುರದ ಪಕ್ಕದಲ್ಲೇ ಈ ಭವ್ಯ ದೇವಾಲಯವನ್ನು ನಿರ್ಮಿಸಿದನು. ಅಲ್ಲಿ ವರ್ಷದ ಯಾವುದೇ ದಿನವಾದರೂ ಸೂರ್ಯೋದಯದ ದೃಶ್ಯವೈಭವ ಅಸಾಮಾನ್ಯವಾದದ್ದು.

ಅದರಲ್ಲೂ ಸಮ ನಿಶಾ ದಿನದಂದು ಸೂರ್ಯೋದಯದ ವೇಳೆ ದೇವಾಲಯದ ಮುಖ್ಯ ಗೋಪುರಶಿಖರದ ಮೇಲೆ ಬೆಂಕಿಯ
ಚೆಂಡು ಉರಿಯುತ್ತಿದೆಯೇನೋ ಎಂಬಂತೆ ಕಂಡುಬರುವ ಸೂರ್ಯನನ್ನು ನೋಡಲು ಅಪಾರ ಜನಸಂದಣಿ ಸೇರಿರುತ್ತದೆ.
Quest for the Lost civilization, by Graham Hancock ಎಂಬ ಶೀರ್ಷಿಕೆಯ ಒಂದು ಸಾಕ್ಷ್ಯಚಿತ್ರ, ಎರಡೂವರೆ ಗಂಟೆಗಳ ಅವಧಿಯದು, ಯುಟ್ಯೂಬ್‌ನಲ್ಲಿದೆ.

ಅದರ 29ನೆಯ ನಿಮಿಷದಲ್ಲಿ ಆಂಗ್ಕೋರ‍್ವಾಟ್ ದೇವಾಲಯ ಗೋಪುರದ ಮೇಲೆ ಮೂಡುವ ಸೂರ್ಯಪ್ರಭಾವಳಿಯ ಸುಂದರ ದೃಶ್ಯವನ್ನು ತೋರಿಸಿದ್ದಾರೆ. ೭. ನ್ಯೂಝೀಲ್ಯಾಂಡ್‌ನ ಉತ್ತರದ್ವೀಪದಲ್ಲಿ ಸ್ಟೋನ್‌ಹೆಂಜ್ ಏಟೇರಾ ಎಂಬೊಂದು ಶಿಲ್ಪ ಇದೆ. 2005ರಲ್ಲಿ ನಿರ್ಮಾಣವಾದ ಇದು ಇಂಗ್ಲೇಂಡ್‌ನಲ್ಲಿರುವ ಮೂಲ ಪ್ರಾಚೀನ (ಕ್ರಿಸ್ತಪೂರ್ವ 3000ದಷ್ಟು ಹಳೆಯ) ಸ್ಟೋನ್‌ ಹೆಂಜ್‌ನ ಆಧುನಿಕ ಪ್ರತಿರೂಪ.

ಪ್ರಾಚೀನ ಕಾಲದಲ್ಲಿದ್ದ ನಕ್ಷತ್ರವೀಕ್ಷಣೆ ಕ್ರಮವನ್ನು ಆಧುನಿಕ ಖಗೋಳಶಾಸ್ತ್ರದೊಡನೆ ಸಮನ್ವಯಗೊಳಿಸಿದ ರಚನೆ. ಈಕ್ವಿನಾಕ್ಸ್ ದಿನದಂದು ಇದರ ಮಧ್ಯಬಿಂದುವಿನಲ್ಲಿ ಪೂರ್ವದತ್ತ ಮುಖ ಮಾಡಿ ನಿಂತರೆ ‘ಸನ್ ಗೇಟ್’ ಪ್ರವೇಶದ್ವಾರದ ನಡುವಿನಿಂದಲೇ ಸೂರ್ಯ ಉದಯಿಸುತ್ತಿದ್ದಾನೇನೋ ಎಂದು ಭಾಸವಾಗುತ್ತದೆ.

೮. ದಕ್ಷಿಣ ಅಮೆರಿಕ ಖಂಡದ ಪೆರು ದೇಶದಲ್ಲಿರುವ ಜಗದ್ವಿಖ್ಯಾತ ಮಾಚು-ಪಿಚು ಟೆಂಪಲ್‌ನ ಗೋಪುರದ ಮೇಲೆ ‘ಇಂಟಿವ್ಹಟಾನ’ ಹೆಸರಿನ ಚಿಕ್ಕದೊಂದು ಏಕಶಿಲಾ ಸ್ತಂಭ ಇದೆ. ಸ್ಪಾನಿಷರ ದಾಳಿಗೆ ತುತ್ತಾಗದೆ ಉಳಿದ ಅಪರೂಪದ ಇಂಟಿವ್ಹಟಾನ ಅದು. ಸೂರ್ಯ ತನ್ನ ಚಲನೆಯ ಪಥವನ್ನು ನಿರ್ಧರಿಸಲಿಕ್ಕೆ ಅದನ್ನೊಂದು ಗೂಟವನ್ನಾಗಿ ಬಳಸುತ್ತಾನೆಂದು ಅಲ್ಲಿಯ ಜನರ ನಂಬಿಕೆ. ಬೇರೆಲ್ಲ ದಿನಗಳಲ್ಲಿ ಮಧ್ಯಾಹ್ನ ಸೂರ್ಯ ನೆತ್ತಿಯ ಮೇಲೆ ಬಂದಾಗ ಆ ಗೂಟದ ನೆರಳು ಒಂದರ್ಧ ಇಂಚಿನಷ್ಟಾದರೂ ಇರುತ್ತದೆ, ಆದರೆ ಈಕ್ವಿನಾಕ್ಸ್ ದಿನದಂದು ಮಧ್ಯಾಹ್ನ ನೆರಳು ನಿಃಶೇಷವಾಗುತ್ತದೆ.

೨೦೦೦ನೆಯ ಇಸವಿಯಲ್ಲಿ, ಬಿಯರ್ ಜಾಹಿರಾತೊಂದರ ಚಿತ್ರೀಕರಣಕ್ಕಾಗಿ ಬಳಸಲಾದ ಒಂದು ಕ್ರೇನ್ ಆಯತಪ್ಪಿ ಆ ಗೂಟದ ಮೇಲೆ ಬಿದ್ದು ಅದನ್ನು ಸ್ವಲ್ಪ ಮುರಿದಿರುವುದು, ಅಂತಹ ಅಪರೂಪದ ಅಮೂಲ್ಯ ಶಿಲ್ಪಗಳ ಬಗ್ಗೆ ಮನುಷ್ಯನ ಅಸಡ್ಡೆ ಹೇಗಿರುತ್ತದೆಂಬುದಕ್ಕೆ ನಿದರ್ಶನ.

೯. ಮೆಕ್ಸಿಕೊ ದೇಶದಲ್ಲಿ ಮಾಯನ್ ನಾಗರಿಕತೆಯ ಇನ್ನೊಂದು ಕುರುಹಾದ ಡ್ಜಿಬಿಲ್ಚಲ್ಟನ್‌ನಲ್ಲಿ ‘ಏಳು ಗೊಂಬೆಗಳ ದೇವಾಲಯ’
ಅಂತೊಂದಿದೆ. ಮನುಷ್ಯನಾಕೃತಿಯ ಏಳು ವಿಗ್ರಹಗಳು ಉತ್ಖನನದ ವೇಳೆ ಅಲ್ಲಿ ಸಿಕ್ಕಿದುವೆಂಬುದು ವಿಶೇಷ. ಈಕ್ವಿನಾಕ್ಸ್
ದಿನ ದಂದು ಸೂರ್ಯೋದಯದ ವೇಳೆ ಕಿರಣಗಳು ಮುಖ್ಯದ್ವಾರದ ಮೂಲಕ ಒಳಪ್ರವೇಶಿಸುತ್ತವೆ. ಗೊಂಬೆಗಳ ಮುಖವನ್ನು ಬೆಳಗಿಸುತ್ತವೆ. ಕೃಷಿ ಕೊಯ್ಲಿನ ಸೀಸನ್ ಮುಗಿದು ಮುಂದಿನ ಬೆಳೆಗೆ ಬೀಜ ಬಿತ್ತನೆಯ ಸೀಸನ್ ಆರಂಭವಾಗುವುದನ್ನು ಸೂಚಿಸುವುದಕ್ಕೆ ಈ ಶಿಲ್ಪದ ನಿರ್ಮಾಣವಾಗಿದೆ ಎಂದು ಪುರಾತತ್ವ ಶಾಸ್ತ್ರಜ್ಞರ ಅಂಬೋಣ.

೧೦.ಅಮೆರಿಕ ಸಂಯುಕ್ತ ಸಂಸ್ಥಾನಗಳ ಮೂಲನಿವಾಸಿಗಳ ಚರಿತ್ರೆಯಲ್ಲಿ ಮಿಸ್ಸಿಸ್ಸಿಪ್ಪಿಯನ್ ಸಾಂಸ್ಕೃತಿಕ ಯುಗ ಪ್ರಮುಖ ವಾದುದು. ಶತಮಾನಗಳ ಹಿಂದೆ ಆ ಪ್ರದೇಶದಲ್ಲಿ ನೆಲೆಸಿದ್ದ ‘ಕಹೋಕಿಯಾ’ ಜನಾಂಗದ ಜನಸಂಖ್ಯೆಯು ಆಗಿನ ಲಂಡನ್ ನಗರದ ಜನಸಂಖ್ಯೆಗಿಂತಲೂ ಹೆಚ್ಚು ಇತ್ತಂತೆ. ಆ ಪ್ರದೇಶದಲ್ಲಿ ಭವ್ಯ ಪಿರೇಮಿಡ್‌ಗಳಷ್ಟೇ ಅಲ್ಲದೆ ಮರದ ಕಂಬಗಳಿಂದ
ಮಾಡಿದ ‘ವುಡ್ ಹೆಂಜ್’ ಎಂಬ ರಚನೆಯೊಂದು ಕಹೋಕಿಯಾ ಜನಾಂಗದ ಚರಿತ್ರೆಗೆ ಸಾಕ್ಷಿಯಾಗಿ ನಿಂತಿದೆ. ಮರದ ಕಂಬ ಗಳನ್ನು ಆ ರೀತಿ ನಿಲ್ಲಿಸಿದ್ದು ಸೂರ್ಯಪಥಕ್ಕೆ ಅನುಗುಣವಾಗಿಯೇ.

ಈಕ್ವಿನಾಕ್ಸ್ ದಿನದಂದು ಸೂರ್ಯೋನು ಒಂದು ಕಂಬ ಮತ್ತು ಆ ರಚನೆಯ ಮುಖ್ಯ ದ್ವಾರಕ್ಕೆ ಎಳೆದ ಸರಳ ರೇಖೆಯ ಮೇಲಿಂದಲೇ ಉದಯಿಸುತ್ತಿರುವಂತೆ ಕಾಣುತ್ತದೆ. ಅಂಕಣದ ಆರಂಭದಲ್ಲಿ ಪ್ರಸ್ತಾವಿಸಿದ ಶೃಂಗೇರಿ ವಿದ್ಯಾಶಂಕರ ದೇವಾಲಯ ವನ್ನಾದರೂ ನಾನು ಒಂದೆರಡು ಸಲ ನೋಡಿದ್ದೇನೆ.

ಇತ್ತೀಚಿನ ವರ್ಷಗಳಲ್ಲಿ ಅಲ್ಲ, ಆದರೆ ‘ಹನ್ನೆರಡು ತಿಂಗಳುಗಳಲ್ಲಿ ಹನ್ನೆರಡು ಕಂಬಗಳ ಮೇಲೆ ಬಿಸಿಲು ಬೀಳುತ್ತದೆ’ ಎಂದು ಅಲ್ಲಿ
ಯಾರೋ ಗೈಡ್ ಹೇಳಿದ್ದು ನನಗೆ ಚೆನ್ನಾಗಿ ನೆನಪಿದೆ. ಅಂಥದೊಂದು ಕೌತುಕವನ್ನು ಊಹಿಸಿ (ನಾನು ಆ ದೇವಾಲಯಕ್ಕೆ ಭೇಟಿಯಿತ್ತದ್ದು ಬೆಳಗಿನ ಸಮಯವಲ್ಲವಾದ್ದರಿಂದ ಯಾವ ಕಂಬದ ಮೇಲೂ ಬಿಸಿಲಿರಲಿಲ್ಲ) ರೋಮಾಂಚನಗೊಂಡಿದ್ದೂ
ನೆನಪಿದೆ. ಆದರೆ ದಯವಿಟ್ಟು ಗಮನಿಸಿ: ಈ ಮೇಲಿನ ಹತ್ತು ದೃಶ್ಯವೈಭವಗಳ ಬಗ್ಗೆ ನಾನು ‘ದೇಶ ಸುತ್ತಿ’ ಅವುಗಳನ್ನು ಕಣ್ಣಾರೆ
ಕಂಡು ಬರೆದಿದ್ದಲ್ಲ.

ಬರೀ ‘ಕೋಶ ಓದಿ’ಯಷ್ಟೇ ಈ ಪಟ್ಟಿಯನ್ನು ದಿನವಿಶೇಷವೆಂದು ಅಂಕಣಬರಹವಾಗಿ ಪ್ರಸ್ತುತಪಡಿಸಿದ್ದು. ಕೌತುಕದ ಸಂಗತಿಗಳನ್ನು ನಾವೆಲ್ಲರೂ ತಿಳಿದುಕೊಂಡಿರಬೇಕು ಎಂಬ ಒಳ್ಳೆಯ ಉದ್ದೇಶದಿಂದ, ಅಕ್ಷರಗಳ ಮೂಲಕ ಪ್ರಪಂಚ ಪರ್ಯಟನೆ ಮಾಡಿದ್ದು. ನೋಡುವಾ, ಇವುಗಳ ಪೈಕಿ ಒಂದೆರಡನ್ನಾದರೂ ಜೀವಮಾನದಲ್ಲೊಮ್ಮೆ ಕಣ್ಣಾರೆ ಕಾಣುವ ಸುಸಂದರ್ಭ ನನಗೂ ನಿಮಗೂ ಬಂದೀತೆಂದು ನನ್ನದೊಂದು ಆಶಯ.