Saturday, 23rd November 2024

ಪುಕ್ಸಟ್ಟೆ ಹಣ ಹಂಚುವುದು ಯಾವ ಸೀಮೆ ಸಮಾಜವಾದ !

ಶಿಶಿರ ಕಾಲ

shishirh@gmail.com

ಯಾರಿಗೆ ಬೇಡ ಪುಕ್ಸಟ್ಟೆ ಭಾಗ್ಯ? ಅದೆಷ್ಟೇ ಶ್ರೀಮಂತನೂ ‘ಫ್ರೀ’ ಎಂದರೆ ಒಂದು ಕ್ಷಣ ನಿಂತು ನೋಡುತ್ತಾನೆ. ಉಚಿತ ಎಂಬ ಶಬ್ದವೇ ಅಷ್ಟು ಆಕರ್ಷಣೀಯ. ಈ ಜಗತ್ತಿನಲ್ಲಿ ಯಾವುದೂ ಉಚಿತವಿರುವುದಿಲ್ಲ ಎಂದು ಎಲ್ಲರಿಗೂ ಗೊತ್ತು. ಆದರೂ ಈ ಒಂದು ಶಬ್ದ ಚಿತ್ತವನ್ನತ್ತ ಸೆಳೆಯದೇ ಇರುವುದಿಲ್ಲ.

ಉಚಿತ ಎಂಬ ಶಬ್ದವಿಲ್ಲದ ಜಾಹೀರಾತು ನಾಲ್ಕಾಣೆ ಗಮನ ಸೆಳೆಯುವು ದಿಲ್ಲ. ಉಚಿತವಾಗಿ ಕೊಟ್ಟರೆ ನನಗೊಂದು, ನಮ್ಮಪ್ಪಂಗೂ ಒಂದು ಎಂಬ ಮಾತಿದೆಯಲ್ಲ. ಪ್ರಾಥಮಿಕ ಶಾಲೆಯಲ್ಲಿ ನಮ್ಮ ಮಾಸ್ತರು ಬಡತನದ ಬಗ್ಗೆ ತೀರಾ ನಾಟುವಂತೆ ಪಾಠ ಮಾಡುತ್ತಿದ್ದರು. ‘ಯಾಕೆ ಸರ್ ನಮ್ಮ ಸರಕಾರ ಒಂದಿಷ್ಟು ನೋಟು ಪ್ರಿಂಟ್ ಮಾಡಿ ಬಡವರಿಗೆಲ್ಲ ಹಂಚಿಬಿಡಬಾರದು’
ಎಂದು ಒಬ್ಬ ಕೇಳಿದ್ದ. ಅದಷ್ಟೇ ನನಪಿಗಿದೆ.

ಅವರು ಏನೆಂದು ಉತ್ತರಿಸಿದರು ಅದೆಲ್ಲ ನೆನಪಿಲ್ಲ. ಬಹುಶಃ ಅವರು ಹಾರಿಕೆಯ ಉತ್ತರ ಕೊಟ್ಟಿರಬಹುದು ಅಥವಾ ಅವರ ಉತ್ತರ ಅಂದು ನಮಗೆ ಅರ್ಥವಾಗಿರಲಿಕ್ಕಿಲ್ಲ. ನಿಮಗೆ ಸರಕಾರವೊಂದು ಹಣವನ್ನು ಬೇಕಾಬಿಟ್ಟಿ ಛಾಪಿಸಿ ತನ್ನ ನಾಗರಿಕರಿಗೆ ಹಂಚಿದರೆ ದೇಶದ ಆರ್ಥಿಕ ಪರಿಸ್ಥಿತಿ, ಹಣದುಬ್ಬರ ಏನಾಗುತ್ತದೆ ಎನ್ನುವುದು ಗೊತ್ತು. ಆದರೂ ಪುಕ್ಸಟ್ಟೆ ಹಣವನ್ನು ಸರಕಾರ
ಹಂಚುತ್ತದೆ ಎಂದಾದರೆ ‘ಹುಚ್ಚನ ಮದುವೆಯಲ್ಲಿ ಮೊದಲು ಊಟ’ ಮಾಡದಿದ್ದ ಹಾಗಾಗುತ್ತದೆ ಅಲ್ಲವೇ? ಹಣ ಶ್ರಮವಿಲ್ಲದೆ ಸಿಕ್ಕರೆ, ‘ಕೆಲಸ ಮಾಡಬೇಕಿಲ್ಲ ತಗೊಳ್ಳಿ’ ಎಂದು ಸರಕಾರವೇ ಕೊಟ್ಟರೆ ಕಿಸೆಗಿಳಿಸಿಕೊಳ್ಳುವಾಗ ದೇಶ, ದೇಶಪ್ರೇಮ,
ಆರ್ಥಿಕತೆ ಇವೆಲ್ಲ ನಾನ್ಸೆನ್ಸ್!

ಇಂದು ಜಗತ್ತಿನ ಹಲವು ದೇಶಗಳು ತಮ್ಮ ಆದಾಯಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತವೆ. ಇನ್ನು ಕೆಲವು, ದೇಶ ವೊಂದರ ಅಭಿವೃದ್ಧಿಗೆ ಪೂರಕವಲ್ಲದ ಹಲವು ಯೋಜನೆ ಗಳಲ್ಲಿ ಹಣವನ್ನು ಪೋಲು ಮಾಡಿ ಅಥವಾ ಮುಫತ್ತಾಗಿ ಹಣವನ್ನು ಹಂಚಿ ಕ್ರಮೇಣ ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತವೆ. ರಾಜಕೀಯ ಪಕ್ಷವೊಂದು ಅಧಿಕಾರಕ್ಕೆ ಬರಬೇಕೆನ್ನುವ ಹವಣಿಕೆ ಯಲ್ಲಿ ತನ್ನನ್ನು ಆರಿಸಿದರೆ ಏನೆಲ್ಲ ಉಚಿತವಾಗಿ ಕೊಡುತ್ತೇವೆ ಎನ್ನುವ ನಿರೂಪಣೆ ಕ್ರಮೇಣ ಮಹತ್ವವನ್ನು ಪಡೆದು ದೇಶದ ಬೆಳವಣಿಗೆಯ ಕುರಿತಾದ ಮಾತುಗಳು ಗೌಣ ವಾಗುತ್ತ ಹೋಗುತ್ತದೆ.

ಹೀಗೆ ಮಾತುಕೊಟ್ಟ ಉಚಿತ ಸವಲತ್ತು ಗಳನ್ನು ಪೂರೈಸದಿದ್ದರೆ ಪುನಃ ಅಧಿಕಾರಕ್ಕೆ ಬರಲಾರೆವು ಎಂದು ಎಲ್ಲ ಆರ್ಥಿಕ ಪ್ರಶ್ನೆಗಳನ್ನು ಮೀರಿ ಪೂರೈಸಲು ಆಡಳಿತ ಮುಂದಾಗುತ್ತವೆ. ಹೇಳಿದ್ದು ಕೊಡಲಿಲ್ಲವೆಂದರೆ ವಚನಭ್ರಷ್ಟ ಎಂಬ ಆರೋಪ.
ದೇಶ ತನ್ನ ತಾಕತ್ತನ್ನು, ಆದಾಯವನ್ನು ಮೀರಿ ಹೆಚ್ಚಿನ ಖರ್ಚು ಮಾಡಿದರೆ ಅದು ವಿತ್ತೀಯ ಕೊರತೆ (fiscal deficit). ಹೆಚ್ಚಿನ ದೇಶಗಳು ಕೊರತೆಗೆ ಒಂದು ಮಿತಿಯನ್ನು ನಿಗದಿಸಿಕೊಂಡಿರುತ್ತವೆ. ಆ ಮಿತಿ ಮೀರಿದರೆ ಮುಂದೊಂದು ದಿನ ದಿವಾಳಿ ಯಾಗುವ ಅಪಾಯ ಪಕ್ಕಾ. ಇದನ್ನು ತಪ್ಪಿಸಲು ಒಂದೋ ತೆರಿಗೆ ಹೆಚ್ಚಿಸಬೇಕು, ಇಲ್ಲ ನೋಟನ್ನು ಪ್ರಿಂಟ್ ಮಾಡಬೇಕು. ಈ ಲೆಕ್ಕ ಮೀರಿ ಮನಸ್ಸಿಗೆ ತೊಚಿದಂತೆ ಹಣ ವನ್ನು ಪ್ರಿಂಟ್ ಮಾಡಿದರೆ ಹಣದುಬ್ಬರ ಹೆಚ್ಚುತ್ತದೆ. ಅದನ್ನು ದಕ್ಕಿಸಿಕೊಳ್ಳ ಬೇಕೆಂದರೆ ನಮ್ಮದು ಡಾಲರಿನಂತೆ ಜಾಗತಿಕ ಕರೆನ್ಸಿಯಾಗಿರಬೇಕು. ಅದಿಲ್ಲದಿದ್ದರೆ ರುಪಾಯಿ ತನ್ನ ಮೌಲ್ಯವನ್ನು ವಿಶ್ವ ಮಟ್ಟದಲ್ಲಿ ಕಳೆದುಕೊಳ್ಳುತ್ತದೆ. ಮೌಲ್ಯ ಕಡಿಮೆ ಆದರೆ ನಾವು ಆಮದು ಮಾಡುವ ವಸ್ತುಗಳಿಗೆ ಹೆಚ್ಚಿನ ಹಣ ತೆರಬೇಕಾಗುತ್ತದೆ. ಇದರ ನೇರ ಪರಿಣಾಮ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಉಳಿದ ಎಲ್ಲ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ.

ದೇಶವೊಂದು ಮೂರು ಪ್ರತಿಶತಕ್ಕಿಂತ ಕಡಿಮೆ ಮಿತಿಯಲ್ಲಿ ವಿತ್ತೀಯ ಕೊರತೆಯನ್ನು ನಿಭಾಯಿಸಿಕೊಂಡರೆ ಒಳಿತು ಎನ್ನುವುದು ಒಂದು ಆರೋಗ್ಯಕರ ಲೆಕ್ಕಾಚಾರ. ನಿಮಗೆ ಗ್ರೀಸಿನ ಕಥೆ ಹೇಳಬೇಕು. ಇಂಥದ್ದೊಂದು ಲೆಕ್ಕಾಚಾರವನ್ನು ಮೀರಿ ಗ್ರೀಸ್ ತನ್ನ ಹಣವನ್ನು ಖರ್ಚು ಮಾಡಿದ್ದು, ಉಚಿತವಾಗಿ ಜನರಿಗೆ ಹಣವನ್ನು ಹಂಚುವಯೋಜನೆಗಳನ್ನು ಜಾರಿಗೆ ತಂದದ್ದು ಮತ್ತು ಅದರ ನಂತರ ವಾದ ಆದ ಅವಾಂತರ ಇವು ಎಯನ್ನು ಮೀರಿ ನಡೆದು ಕೊಂಡರೆ ಏನಾದೀತು ಎನ್ನುವುದಕ್ಕೆ ಒಂದು ಜೀವಂತ ಸಾಕ್ಷಿ.

ಗ್ರೀಕ್, ಯುರೋಪಿಯನ್ ಒಕ್ಕೂಟದ ಒಪ್ಪಂದಕ್ಕೆ ಸಹಿ ಹಾಕಿದ ಮೇಲೆ ಅಲ್ಲಿ ‘ಯುರೋ’ ಚಲಾವಣೆಗೆ ಬಂತು. ಈ ಒಪ್ಪಂದದ
ಪರಿಣಾಮ ಯುರೋಪಿಯನ್ ಯೂನಿಯನ್‌ನ ಸೆಂಟ್ರಲ್ ಬ್ಯಾಂಕ್ ಎಷ್ಟು ಹಣವನ್ನು ಒಕ್ಕೂಟದ ದೇಶಗಳು ಪ್ರಿಂಟ್
ಮಾಡಬಹುದು ಎಂದು ನಿರ್ಧರಿಸುವ ಸಂಸ್ಥೆಯಾಯಿತು. ಅಲ್ಲಿ ಆಯಾಯ ದೇಶಗಳು ಅವರವರ ಖರ್ಚಿಗೆ ಜವಾಬ್ದಾರ
ರಾಗಿದ್ದರು. ಗ್ರೀಸ್‌ನ ಆಡಳಿತ ಪಕ್ಷ ಮಾತ್ರ ತನ್ನ ಜನರಿಗೆ ಕ್ರಮೇಣ ಅಗ್ಗದ ದರದಲ್ಲಿ ಮತ್ತು ಪುಕ್ಸಟ್ಟೆ ಸವಲತ್ತುಗಳನ್ನು
ಕೊಡಲು, ಜನರ ಓಲೈಕೆಯಲ್ಲಿ ತೊಡಗಿಕೊಂಡಿತು. ಕ್ರಮೇಣ ದೇಶದ ಖರ್ಚು ವೆಚ್ಚದ ಲೆಕ್ಕಾಚಾರವನ್ನು 1995ರ ಸಮಯ
ದಲ್ಲಿ ಸರಕಾರ ಸುಳ್ಳು ಹೇಳಲು ಶುರುವಿಟ್ಟುಕೊಂಡಿತು.

ಖೋತಾ ಬಜೆಟ್ಟಿನ ಸತ್ಯವನ್ನು ಹೊರ ಜಗತ್ತಿಗೆ ಮತ್ತು ಯುರೋಪಿಯನ್ ಒಕ್ಕೂಟದಿಂದ ಮುಚ್ಚಿಡಲಾಯಿತು. ನಂತರ ಸರಕಾರ ಬದಲಾಯಿತು ಆದರೆ ಉಚಿತ ಸೌಲಭ್ಯಗಳು ಜನರಿಗೆ ಅದಾಗಲೇ ಅಭ್ಯಾಸವಾಗಿ ಹೋಗಿತ್ತು. ನಂತರ ಬಂದ
ಇನ್ನೊಂದು ಆಡಳಿತ ಪಕ್ಷ ಕೂಡ ಇದೇ ಸುಳ್ಳನ್ನು ಮುಂದುವರಿಸಿಕೊಂಡು ಹೋಗಬೇಕಾದ ಅನಿವಾರ್ಯ. ಉಚಿತ ಸೌಲಭ್ಯ ಮುಂದುವರಿಯಿತು. ಮುಂದೊಂದು ದಿನ 2009ರಲ್ಲಿ ದೇಶ ಹಠಾತ್ತನೆ ದಿವಾಳಿ ತಲುಪಿದ್ದ ಸುದ್ದಿ ಹೊರಗೆ ಬಂತು. ಅಂದಿನ ಸರಕಾರ ಸುಮಾರು ಶೇ.೧೩.೯ ಖೋತಾ ಬಜೆಟ್ ಅನ್ನು ಮಂಡಿಸಿತು ಮತ್ತು ಈ ಹಿಂದಿನ ಸರಕಾರಗಳು ಮುಚ್ಚಿಟ್ಟ ಸತ್ಯವನ್ನು ಬಹಿರಂಗಪಡಿಸಲೇ ಬೇಕಾಯಿತು.

ಅದಾಗಲೇ ಗಾಯವಾಗಿ ಹೋಗಿತ್ತು. ದೇಶದಲ್ಲಿ ಎಲ್ಲಿಲ್ಲದ ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳು ಭುಗಿಲೆದ್ದವು.
ಹೀಗೊಂದು ಸಮಸ್ಯೆಯ ಸುಳಿವೇ ಇಲ್ಲದ ಮತ್ತು ಹಠಾತ್ತನೆ ಎದುರಿಗೆ ಬಂದ ಸತ್ಯದಿಂದಾಗಿ ಅಲ್ಲಿನ ಸ್ಟಾಕ್ ಮಾರ್ಕೆಟ್‌ಗಳು
ಥಟ್ಟನೆ ಒಂದೆರಡು ದಿನದಲ್ಲಿ ಪಾತಾಳವನ್ನು ಕಂಡವು. ಸಾಮಾನ್ಯ ಜನರಿಗೂ ಕೂಡ ಇದರ ಪರಿವೆಯೇ ಇರಲಿಲ್ಲ. ಈ ಸುದ್ದಿ ಗ್ರೀಸ್ ನಾಗರೀಕರನ್ನು ಕೇವಲ ಒಂದು ವಾರದ ಅವಧಿಯಲ್ಲಿ ಕಂಗಾಲು ಮಾಡಿಬಿಟ್ಟಿತು. ದೇಶದ ಸದೃಢತೆಯ ಬಗ್ಗೆ ಇದ್ದ ಎಲ್ಲ ನಂಬಿಕೆಗಳು ಹುಸಿಯಾಗಿದ್ದವು. ಒಂದು ಅತ್ಯದ್ಭುತ ಇತಿಹಾಸ, ಶ್ರೀಮಂತಿಕೆ, ಸಂಸ್ಕೃತಿ ಎಲ್ಲವಿದ್ದರೂ ಅದ್ಯಾವುದು ಆಗ ಕೆಲಸಕ್ಕೆ ಬರಲಿಲ್ಲ.

ಕೇವಲ ೧೦-೧೫ ವರ್ಷ ಗಳಲ್ಲಿ ಮಾಡಿದ ರಾಜಕೀಯ ಪಕ್ಷದ ಬಂಧತನಗಳು ಅದೆಲ್ಲವನ್ನು ಪಕ್ಕಕ್ಕಿರಿಸಿ ಒಂದು ಮಹಾ ಆರ್ಥಿಕ ಹಿಂಜರಿತಕ್ಕೆ ಕಾರಣ ವಾಯಿತು. ಗ್ರೀಸ್ ಈ ಒಂದೆರಡು ದಶಕದಲ್ಲಿ ಮಾಡಿಕೊಂಡ ಅವಾಂತರಗಳು ಶತಾಮಾನಗಳ ದೇಶದ ಸಾಧನೆಯನ್ನು ಮಣ್ಣಾಗಿಸಿದ್ದಲ್ಲದೇ ದೇಶವನ್ನು ೫-೬ ದಶಕ ಹಿಂದಕ್ಕೆ ಕೊಂಡೊಯ್ದು ಬಿಟ್ಟಿತ್ತು. ಗ್ರೀಸ್ ತನ್ನ ಅಸ್ತಿತ್ವಕ್ಕೆ ಒದ್ದಾಡಿಬಿಟ್ಟಿತು. ಕೇಳರಿಯದ ಅವ್ಯವಸ್ಥೆಯಲ್ಲಿ ಜನ ತಮ್ಮ ತಾಳ್ಮೆ ಕೊಂಡರು. ಕಂಪನಿಗಳು ದಿವಾಳಿಯಾಗಿ ಅದರ ಪರಿಣಾಮವಾಗಿ ನಿರುದ್ಯೋಗ ಇನ್ನೊಂದು ಸಮಸ್ಯೆಯಾಯಿತು.

ಉತ್ತಮ ನುರಿತ ಕೆಲಸ ಗಾರರು ಅವಕಾಶವನ್ನರಸಿ ದೇಶಬಿಟ್ಟರು. ಅಲ್ಲಿನ ಉಳಿದು ಕೊಂಡ ಮಂದಿ ಅಲ್ಲಲ್ಲಿ ದಂಗೆ ಎದ್ದು ಇನ್ನಷ್ಟು ಹಾನಿಗೆ ಕಾರಣ ವಾದರು. ಸಾಮಾನ್ಯರಲ್ಲಿ ಹಣವಿಲ್ಲದಿರುವುದರಿಂದ ಯಾವುದೇ ವ್ಯಾಪಾರ ವ್ಯವಹಾರ ಸಸೂತ್ರ ನಡೆಯಲಿಲ್ಲ, ಇದರಿಂದ ಯಾವುದೇ ಕಂಪನಿ ಮತ್ತೆ ಮೆಲೆದ್ದುಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಈಗ ಬಜೆಟ್‌ನಲ್ಲಿ ದೇಶ ಉಸಿರಾಡಲು ಎಷ್ಟು ಖರ್ಚು ಮಾಡಬೇಕೋ ಅಷ್ಟಕ್ಕೇ ಅವಕಾಶವಿದೆ.

ಅಂತೆಯೇ ಈ ಹಿನ್ನೆಲೆಯಲ್ಲಿ ದೇಶದಲ್ಲಿ ಸಂಗ್ರಹವಾಗುವ ತೆರಿಗೆಯೂ ಕಡಿಮೆಯಾಗಿದೆ. ಅಲ್ಲಿನ ಸರಕಾರ ಅದ್ಯಾವ ಪರಿಯ ದೈನೇಸಿ ಸ್ಥಿತಿಗೆ ತಲುಪಿತು ಎಂದರೆ ಸರಕಾರೀ ನೌಕರರಿಗೆ ಸಂಬಳ ಕೊಡಲು ಹೆಣಗಾಡಬೇಕಾಯಿತು. ಅಲ್ಲಿನ ಸರಕಾರೀ ಸ್ವಾಮ್ಯದ ವಿದ್ಯುತ್ ಮಂಡಳಿಯ ನೌಕರರಿಗೆ ಸಂಬಳ ಪಾವತಿಸಲಾಗದೇ ಹೋದಾಗ ಅವರೆಲ್ಲ ಮುಷ್ಕರ ನಡೆಸಿ ಸುಮಾರು ಎರಡು ದಿನ ಇಡೀ ದೇಶಕ್ಕೆ ದೇಶವನ್ನೇ ಕತ್ತಲೆಯಲ್ಲಿಟ್ಟಿತ್ತು.

ಒಂದು ದೇಶ ಆರ್ಥಿಕ ದಿವಾಳಿಯಾದಾಗ ವರ್ಡ್ ಬ್ಯಾಂಕ್ ಮತ್ತು ಇಂಟರ್ನ್ಯಾಷನಲ್ ಮೊನೆಟೋರಿ ಫಂಡ್ (IMF) ಗಳು ಬಂದು ಐಸಿಯು ನಲ್ಲಿರುವ ದೇಶಕ್ಕೆ ಒಂದಿಷ್ಟು ಒತ್ತಡ ವನ್ನು ಹೇರುತ್ತವೆ. ಥೇಟ್ ಚಲನಚಿತ್ರಗಳಲ್ಲಿ ಬರುವ ಜಮೀ ನ್ದಾರರಂತೆ. ಕ್ರಮೇಣ ಸರಕಾರ ಜನಸಾಮಾನ್ಯರಿಂದ ಹೆಚ್ಚಿನ ತೆರಿಗೆ ವಸೂಲಿ ಮಾಡಬೇಕಾಗುತ್ತದೆ, ಖರ್ಚು ಕಡಿಮೆ ಮಾಡಿ ಕೆಲವು ವ್ಯವಹಾರಗಳನ್ನು ಖಾಸಗಿ ಕಂಪನಿಗಳಿಗೆ (ಅವು ಹೆಚ್ಚಾಗಿ ವಿದೇಶೀ ಖಾಸಗಿ ಕಂಪನಿಗಳಿಗೆ, ಏಕೆಂದರೆ ಅಲ್ಲಿನ ಸ್ಥಳೀಯ ಖಾಸಗಿ ಕಂಪನಿಗಳಿಗೆ ಆ ತಾಕತ್ತು ಇರುವುದೇ ಇಲ್ಲ) ಮಾರಬೇಕಾಗುತ್ತದೆ ಮತ್ತು ಹಾಗೆ ಮಾರಿ ಸಿಕ್ಕ ಹಣವನ್ನು ಆಡಳಿತಕ್ಕೆ ಮತ್ತು ಸಾಲ ಮರುಪಾವತಿಗೆ ಬಳಸಬೇಕಾಗುತ್ತದೆ.

ಸಾಲಗಾರ ಪಡೆದ ಹಣವನ್ನು ತೀರಿಸಲು ಮನೆಯಲ್ಲಿರುವ ಚಿನ್ನ ಮಾರಿದಂತೆ ದೇಶ ತನ್ನ ಆಸ್ತಿಯನ್ನು ಮಾರುವ ಪರಿಸ್ಥಿತಿ.
ಇದರಿಂದ ಸರಕಾರ ಇನ್ನಷ್ಟು ಬಡವಾಗುತ್ತ ಹೋಗುತ್ತದೆ. ಪಕ್ಕಾ ಸಾಲಗಾರನಿಗಾಗುವ ಎಲ್ಲ ಅವಸ್ಥೆಗಳು ಒಂದು ದೇಶಕ್ಕಾ
ಗುತ್ತದೆ. ಇದು ಇಂದು ಕೇವಲ ಗ್ರೀಸ್ ಒಂದೇ ದೇಶದ ಪರಿಸ್ಥಿತಿಯಲ್ಲ. ಪೂರ್ಚುಗಲ, ಐರ್ಲೆಂಡ್, ಸ್ಪೇನ್ ಮತ್ತು ಇಟಲಿ ಕೂಡ ಇದೆ ಹಾದಿಯಲ್ಲಿ ಸಾಗುತ್ತಿವೆ.

ಈ ಉದಾಹರಣೆಯಿಂದ ತಿಳಿದುಕೊಳ್ಳಬೇಕಾದ ಒಂದು ಮುಖ್ಯವಾದ ವಿಚಾರವೆಂದರೆ ಒಂದು ಸರಕಾರೀ ವ್ಯವಸ್ಥೆ ಬೇಕಾ ಬಿಟ್ಟಿ ಖರ್ಚುಮಾಡುವುದು ಮತ್ತು ಅಲ್ಲಿನ ರಾಜಕೀಯ ಪಕ್ಷಗಳು ಆಡಳಿತಕ್ಕೆ ಬಂದಾಕ್ಷಣ ಹಣವನ್ನು ಪುಕ್ಕಟೆ ಹಂಚುವುದು ಇವು ಆ ದೇಶ ದಿವಾಳಿಯತ್ತ ಇಡುವ ಹೆಜ್ಜೆ ಗಳೆಂದೇ ಪರಿಭಾವಿಸಬೇಕು. ಸರಕಾರ ಹೆಚ್ಚು ಕಮ್ಮಿ ಯಾವುದೇ ಹಣವನ್ನು ತೊಡಗಿಸು ವಾಗ ಅಥವಾ ಖರ್ಚು ಮಾಡುವಾಗ ಒಂದು ವ್ಯಾಲ್ಯೂ ಪ್ರೊಪೊಸಿಷನ್ (ಖರ್ಚಿನ ಮೌಲ್ಯಮಾಪನ) ಇರಲೇ ಬೇಕು. ಈ ಹಣದಿಂದ ತನ್ನ ನಾಗರೀಕರಿಗೆ ಮತ್ತು ದೇಶಕ್ಕೆ ಆಗುವ ಲಾಭಗಳೇನು ಮತ್ತು ದೀರ್ಘಾವಧಿಯಲ್ಲಿ ಇದು ಬೀರುವ ಅಡ್ಡ ಮತ್ತು ನೇರ ಪರಿಣಾಮಗಳೇನು ಎನ್ನುವುದನ್ನು ಅಂದಾಜಿಸಬೇಕು.

ಒಂದು ದೃಷ್ಟಿಯಲ್ಲಿ ಸರಕಾರ ಒಂದು ಬೃಹತ್ ಕಂಪನಿಯಂತೆಯೇ. ಇಲ್ಲಿ ನಾವೆ ಹೆಚ್ಚು ಹೆಚ್ಚು ದುಡಿದರೆ ಮಾತ್ರ ದೇಶ ವೊಂದನ್ನು ಬೆಳೆಸಿ ನಿಲ್ಲಿಸಲು ಸಾಧ್ಯ. ಬಡವನಿರಲಿ, ಶ್ರೀಮಂತನಿರಲಿ ದೇಶದ ಸಂಪತ್ತನ್ನು ಹೆಚ್ಚಿಸುವಲ್ಲಿ ಸಮಗ್ರವಾಗಿ ಕೆಲಸ ಮಾಡಬೇಕಾಗುತ್ತದೆ. ಸರಕಾರದ ಯಾವುದೇ ಕಾರ್ಯಕ್ರಮ ಅಲ್ಲಿನ ಜನರನ್ನು ಮೇಲೆತ್ತುವ ನೆಪ ಕೊಟ್ಟು ಆಲಸಿಗಳನ್ನಾಗಿ ಸುತ್ತದೆ ಎಂದಾದರೆ ಆ ಕಾರ್ಯಕ್ರಮ ದೇಶಕ್ಕೆ ಅಹಿತವೇ. ಖಾಸಗಿ ಕಂಪನಿಗಳಿಗೆ ಅದರ ಶೇರ್ ಹೋಲ್ಡರ್‌ಗಳು ಮಾಲೀಕರಾದರೆ ಸರಕಾರ ಎಂಬುದು ಉದ್ಯೋಗಿಯೇ ಮಾಲೀಕನಾಗಿರುವ ಬೃಹತ್ ವ್ಯವಸ್ಥೆ. ಈ ಕಂಪನಿಯಲ್ಲಿ – ವ್ಯವಸ್ಥೆ ಯಲ್ಲಿ ದೇಶದ ನಾಗರಿಕರೆಲ್ಲ ಉದ್ಯೋಗಿಗಳು ಮತ್ತು ವಾರಸುದಾರರು. ಸರಕಾರದ ಮತ್ತು ಖಾಸಗೀ ಕಂಪನಿಯ ವ್ಯಾಲ್ಯೂ ಪ್ರೊಪೊಸಿಷನ್‌ಗಳು ವಿಭಿನ್ನವಾಗಿರುತ್ತವೆ. ಉದಾಹರಣೆಗೆ ಖಾಸಗಿ ಸಂಸ್ಥೆಯೊಂದು ಹಣಕ್ಕಾಗಿ ಶಾಲೆಯೊಂದನ್ನು ಕಟ್ಟಬಹುದು ಆದರೆ, ಸರಕಾರ ಕಟ್ಟಿ ಬೆಳೆಸುವ ಶಾಲೆಗಳು ಉತ್ತಮ ಮಾನವ ಸಂಪನ್ಮೂಲದ ಬೆಳವಣಿಗೆಗೆ. ಹಾಗೆ ಶಾಲೆಯಲ್ಲಿ ಸರಕಾರ ತೊಡಗಿಸಿದ ಹಣ ಮುಂದೊಂದು ದಿನ ಉತ್ತಮ ಮಾನವ ಸಂಪನ್ಮೂಲವಾಗಿ ದೇಶದ ಆಸ್ತಿಯಾಗು ತ್ತದೆ.

ಅಂತೆಯೇ ರೈತ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಬಲವನ್ನು ಹೆಚ್ಚಿಸುವ ಯೋಗ್ಯ ಯೋಜನೆಗಳು ಜಾರಿಗೆ ಬರಬೇಕೆ ವಿನಃ ಉಚಿತ ಹಣ ಹಂಚುವುದರಿಂದ ಪ್ರಯೋಜನವಿಲ್ಲ. ಈ ನಾಕರೀಕತೆಯ ಓಟದಲ್ಲಿ ಎಲ್ಲರನ್ನು ಒಟ್ಟಿಗೆ ಕೈ ಜೋಡಿಸಿದರೆ ಮಾತ್ರ ದೇಶ ಗಟ್ಟಿಯಾಗಲು ಸಾಧ್ಯ. ಯಾವುದೇ ಸರಕಾರದ ಕಾರ್ಯಕ್ರಮವೊಂದು ಈ ಮೂಲ ಆಶಯ ಗಳನ್ನು ಮರೆತು ತನ್ನ ಪ್ರಜೆಗಳಿಗೆ ಉಚಿತವಾಗಿ ಸೌಲಭ್ಯಗಳನ್ನು, ಹಣವನ್ನು ಕೊಡುವ ಮತ್ತು ಜಡತ್ವಕ್ಕೆ ದೂಡುವ ಕೆಲಸ ಮಾಡಿದರೆ ಮುಂದೆ ಅದೊಂದು ವ್ಯವಸ್ಥೆಯ ಕ್ಯಾನ್ಸರ್‌ನಂತೆ ಕೆಲಸ ಮಾಡುತ್ತದೆ, ಗ್ರೀಸ್ ದೇಶದಲ್ಲಿ ಆದಂತೆ.

ಸರಕಾರದ ಸೌಲಭ್ಯವೊಂದು ಆರ್ಥಿಕವಾಗಿ ದುಡಿದು ಮೇಲೇಳಲು ಸಹಾಯ ಮಾಡಬೇಕೇ ವಿನಃ ಬಡವರಿಗೆ ಹಣವನ್ನು
ಹಂಚುವುದರಿಂದಲ್ಲ. ಉಚಿತವಾಗಿ ಸಿಕ್ಕ ಹಣದ ಬೆಲೆ ನಮಗೆಲ್ಲ ಗೊತ್ತು. ಬಡವ ಹೀಗೆ ಸಿಕ್ಕ ಹಣವನ್ನು ಖರ್ಚುಮಾಡಿ ಬಡವ
ನಾಗಿಯೇ ಇರುವ ಸಾಧ್ಯತೆಯೇ ಹೆಚ್ಚು. ಇದು ಮನುಷ್ಯ ಸಹಜ ಗುಣ ಕೂಡ. ನಾವು ಉಚಿತವಾಗಿ ದುಡಿಯದೆ ಬಂದ
ಹಣವನ್ನು ಬಂದ ವೇಗದಲ್ಲಿಯೇ ಕಳೆದುಕೊಳ್ಳುವುದೇ ಹೆಚ್ಚು.

ಒಂದು ವರದಿಯ ಪ್ರಕಾರ ದೊಡ್ಡ ಮೊತ್ತದ ಲಾಟರಿ ಹೊಡೆದ ಶೇ.೭೭ ಜನ ಸುಮಾರು ಐದು ವರ್ಷದಲ್ಲಿ ದಿವಾಳಿಯಾಗುತ್ತಾ
ರಂತೆ. ಹೀಗೆ ಸರಕಾರ ಕೊಡುವ ಹಣ ಕೂಡ ಲಾಟರಿ ಹಣದಂತಾಗುವ ಸಾಧ್ಯತೆಯೇ ಹೆಚ್ಚು ಮತ್ತು ಮಾನವ ಸಂಪನ್ಮೂಲ ವನ್ನು ಕ್ರಮೇಣ ನಿಷ್ಪ್ರಯೋಜಕಗೊಳಿಸುತ್ತದೆ. ಅದರ ಬದಲಿಗೆ ಇಂದಿನ ದಿನದಲ್ಲಿ ಕೈಗಾರಿಕೆಗಳನ್ನು, ಮೂಲ ಸೌಕರ್ಯ ಬೆಳೆಸಿದರೆ ಅದು ಒಂದು ಶಾಶ್ವತ ಪರಿಹಾರಕ್ಕೆ ದಾರಿಮಾಡಿಕೊಡಬಲ್ಲದು. ಪುಕ್ಸಟ್ಟೆ ಹಣ ಹಂಚಿ ಸಮಾಜದಲ್ಲಿ
ಸಮತೋಲನವನ್ನು ತರುತ್ತೇವೆ ಎಂಬುದು ಭ್ರಮೆ, ಮೋಸ.

ದೇಶದ ಬೆಳವಣಿಗೆಗೆ ಉತ್ತಮ ಮೂಲ ಸೌಕರ್ಯದ ಅವಶ್ಯಕತೆಯಿರುತ್ತದೆ ಮತ್ತು ಅದನ್ನೂ ಒದಗಿಸಲು ಸರಕಾರಕ್ಕೆ ಹಣ
ಬೇಕಾಗುತ್ತದೆ. ಈ ಉಚಿತ ಹಣವನ್ನು ಹಂಚುವ ಕೆಲಸದಿಂದ ಬಡವ ಬಡವನಾಗಿರುವುದಲ್ಲದೇ ಸರಕಾರದ ಹಣ ಕೂಡ
ಖರ್ಚಾಗಿ ದೇಶದ ಬೆಳವಣಿಗೆಗೆ ಹೊಡೆತ ಬೀಳುತ್ತದೆ. ಈಗ ವಿಷಯ ಇರೋದು ರಾಜ್ಯ(ಗಳು) ಇಂತಹ ಕೆಲಸಕ್ಕೆ ಇಳಿದರೆ ಎಂದು. ಈಗಂತೂ ಜಿಎಸ್‌ಟಿ ಬಂದಾಗಿನಿಂದ, ಅದು ಸಾಕಷ್ಟು ವ್ಯವಸ್ಥಿತವಾಗಿರುವುದರಿಂದ ತೆರಿಗೆ ತಪ್ಪಿಸಿಕೊಳ್ಳುವುದು ಕಷ್ಟ. ಇದರಿಂದ ಮತ್ತು ಡಿಜಿಟೈಸೇಶನ್ ನಿಂದ ಈಗ ತೆರಿಗೆ ಸಾಕಷ್ಟು ಪ್ರಮಾಣದಲ್ಲಿ ಸರಕಾರವನ್ನು ಸೇರುತ್ತಿದೆ.

ತೆರಿಗೆ ಸೋರಿಕೆಯ ಪ್ರಮಾಣ ತಗ್ಗಿದೆ. ಜಿಎಸ್‌ಟಿ ತೆರಿಗೆ ಕೇಂದ್ರಕ್ಕೆ ಹೋಗಿ ನಂತರದಲ್ಲಿ ಅದು ರಾಜ್ಯದ ಪಾಲಿಗೆ ಹಂಚಿಕೆ ಯಾಗುತ್ತದೆ. ಕೇಂದ್ರಕ್ಕೆ ಅದರದೇ ಆದ ಖರ್ಚುಗಳಿವೆ. ಆ ಖರ್ಚುಗಳು ಕೂಡ ದೇಶದ ಭಾಗವಾದ ರಾಜ್ಯಕ್ಕೆ ಪರೋಕ್ಷವಾಗಿ ಹಂಚಿಕೆಯಾಗುತ್ತದೆ. ಕೇಂದ್ರವೇನು ರಾಜ್ಯಕ್ಕೆ ಹೊರತಾದ ವ್ಯವಸ್ಥೆಯಲ್ಲ. ದೇಶ ಕಟ್ಟುವ ಕೆಲಸ ಕೇಂದ್ರದ್ದಷ್ಟೇ ಅಲ್ಲ, ಬದಲಿಗೆ ರಾಜ್ಯಗಳೆಲ್ಲದರದ್ದೂ ಆಗಿರುತ್ತದೆ. ಗಣರಾಜ್ಯ ವೆನ್ನುವುದು ಉತ್ಸವ ಮಾಡಲಿಕ್ಕಿರುವ ವಿಷಯವಷ್ಟೇ ಅಲ್ಲ ವಲ್ಲ. ಒಟ್ಟಾರೆ ರಾಜ್ಯವೊಂದು ಅದರದೇ ಆದ ಇತಿಮಿತಿ ಯಲ್ಲಿ ಖರ್ಚುಮಾಡಬೇಕು. ಸರಕಾರದ ಖರ್ಚು ಜನರ ಮೇಲೆ ಮಾಡುವ ಹೂಡಿಕೆಯಾಗಿರಬೇಕು. ಆ ಖರ್ಚನ್ನು ಮೀರಿದಾಗ, ಇದ್ದ ಹಣವನ್ನು ಹೀಗೆ ಬಳಸಿದಾಗ ಅಲ್ಲಿ ಅಭಿವೃದ್ಧಿಗೆ ಕೊರತೆಯಾಗುವುದು ಖಂಡಿತ. ಇಂಥದ್ದೆಲ್ಲ ಮಾಡಿ ಕೇಂದ್ರ ಹೆಚ್ಚಿನ ಹಣ ಕೊಡಲಿಲ್ಲವೆಂದು ರಾಜಕೀಯ ಮಾಡುತ್ತ ಅಳುವುದು ಮಾರ್ಗವಲ್ಲ.

ಈಗ ಇದೆಲ್ಲದಕ್ಕೆ ಹಣ ಹೊಂದಿಸಲು ಒಂದೋ ಕೇಂದ್ರ ಇನ್ನಷ್ಟು ಹಣ ಭರಿಸಿಕೊಡಬೇಕು, ಇಲ್ಲವೇ ಅಭಿವೃದ್ಧಿ ಅವಶ್ಯ
ಕಾಮಗಾರಿಗಳಿಗೆ ಬಳಸುವ ಹಣ ತಗ್ಗಿಸಿ ನಿಭಾಯಿಸಬೇಕು. ರಾಜ್ಯ ಸರಕಾರಕ್ಕೆ ಹಣ ಪ್ರಿಂಟ್ ಮಾಡುವುದಕ್ಕಂತೂ ಸಾಧ್ಯ
ವಿಲ್ಲ? ಇರುವ ಹಣವನ್ನೇ ಹೊಂದಿಸಲೇಬೇಕು, ಇನ್ನೆಲ್ಲಿ ಯದೋ ಕೊರತೆಯನ್ನು ಮರೆಮಾಚಬೇಕು. ಇದು ಬಿಟ್ಟು ಇನ್ನೆಲ್ಲವೂ ವಿತಂಡವಾದ. ಮೂಲ ಸೌಕರ್ಯ, ಶಿಕ್ಷಣ, ಆರೋಗ್ಯ ವ್ಯವಸ್ಥೆ, ರಸ್ತೆ ಇವೆಲ್ಲದಕ್ಕಿಂತ ಕಿಸೆಗಿಳಿಯುವ ಪುಡಿಗಾಸು ಚೊಲೋ ಎಂದರೆ ಸರಿ.

ಈ ಪುಕ್ಸಟ್ಟೆ ಭಾಗ್ಯಗಳಿಂದ ನಾಗರಿಕರನ್ನು ಅನುತ್ಪಾದಕರ ನ್ನಾಗಿಸುವ, ಆ ಮೂಲಕ ಚುನಾವಣೆಯನ್ನು ಗೆಲ್ಲಬಹುದೆ
ನ್ನುವ ವಿಚಾರ ಮಾದರಿಯಾಗಿ ಇನ್ನಷ್ಟು ರಾಜ್ಯಕ್ಕೆ ಹರಡಿದರೆ, ಅದನ್ನು ಉಳಿದ ರಾಜಕೀಯ ಪಕ್ಷಗಳೂ ಪಾಲಿಸಲು ಮುಂದಾ ದರೆ ಏನಾಗಬಹುದು? ಹೆಚ್ಚೆಂದರೆ ನಾವು ಗ್ರೀಸ್ ಆಗಬಹುದು. ಅಷ್ಟೆ, ಮತ್ತೇನಾಗಲಿಕ್ಕಿಲ್ಲ ಬಿಡಿ. ಈಗ ಮಾತಿಗೆ
ತಪ್ಪುವಂತಿಲ್ಲ.