Wednesday, 11th December 2024

ನಾನು ಕೂಡ ಸನಾತನಿ ಎಂದು ಹೆಮ್ಮೆಯಿಂದ ಹೇಳೋಣ

ಧರ್ಮಸೂಕ್ಷ್ಮ

ಡಾ.ಸಿ.ಜೆ.ರಾಘವೇಂದ್ರ ವೈಲಾಯ

ಮಾನವ ಜೀವನದ ಗುರಿ ಒಂದೇ ಆದರೂ, ಅಲ್ಲಿಗೆ ಸಾಗುವ ಮಾರ್ಗಗಳು ಹಲವಾರು ಇರಬಹುದೆಂಬ ವಿಶಾಲ ದೃಷ್ಟಿ ಯಿಂದ ಜಗತ್ತಿನ ಹಲವು ಹೊಸ ವಿಚಾರಧಾರೆಗಳಿಗೆ ಕಾಲಕಾಲಕ್ಕೆ ಆಶ್ರಯನೀಡಿ, ಅಲ್ಲಿರುವ ಜೊಳ್ಳನ್ನು ಬಿಟ್ಟು ತತ್ತ್ವರಸವನ್ನಷ್ಟೇ ಹೀರಿಕೊಂಡು ಸನಾತನ ಧರ್ಮ ಬೆಳೆದಿದೆ. ಇಂದು ಜಗತ್ತಿನ ಎಲ್ಲ ಪುರಾತನ ನಾಗರಿಕತೆಗಳು ಅಳಿದರೂ, ಸಹಸ್ರಾರು ವರ್ಷಗಳಿಂದ ಅವಿಚ್ಛಿನ್ನ ವಾಗಿ ಉಳಿದುಬಂದ ಸನಾತನ ಧರ್ಮವೇ ಭಾರತವು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆ.

ಡಾರ್ವಿನ್ನನ ಪ್ರಕಾರ ಸುಮಾರು ೪೦,೦೦೦ ವರ್ಷಗಳ ಹಿಂದೆ ರೂಪುಗೊಂಡವನು ಆಧುನಿಕ ಮಾನವ. ಕೊನೆಯ ಹಿಮಯುಗದ ನಂತರದಲ್ಲಿ ಆತ ಅನಾಗರಿಕನಂತೆ ಕಾಡುಮೇಡುಗಳಲ್ಲಿ ಅಂಡಲೆಯುತ್ತ, ಸಿಕ್ಕಸಿಕ್ಕ ಗೆಡ್ಡೆ-ಗೆಣಸುಗಳನ್ನು ತಿಂದುಕೊಂಡೋ ಅಥವಾ ಬೇಟೆಯಾಡುತ್ತಲೋ ದೇಹಪೋಷಣೆ ಮಾಡಿಕೊಳ್ಳುತ್ತಿದ್ದ. ಸರಿ ಸುಮಾರು ಅದೇ ಕಾಲಕ್ಕೆ ವೇದಗಳೆಂಬ ಮಹಾನ್ ಜ್ಞಾನಭಂಡಾರ ವನ್ನೇ ಮನುಕುಲಕ್ಕೆ ಧಾರೆಯೆರೆದಿದ್ದ ಭಾರತದ ಋಷಿಗಳು, ಬಾಹ್ಯ ಜಗತ್ತಿನ ಸಂಶೋಧನೆಗಿಂತ ಆಂತರಿಕ ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು.

ಹೀಗಾಗಿ ವಿಶ್ವಾದ್ಯಂತದ ಜ್ಞಾನಪಿಪಾಸುಗಳ ಹುಡುಕಾಟದ ಅಂತಿಮ ನಿಲ್ದಾಣ ಭಾರತ ವಾಗಿತ್ತು. ‘ನಹಿ ಜ್ಞಾನೇನ ಸದೃಶಂ ಪವಿತ್ರಮಿಹವಿದ್ಯತೇ’ ಎಂದು ಪರಿಭಾವಿಸಿ ಜ್ಞಾನದ ಹುಡುಕಾಟದಲ್ಲೇ ನಿರತವಾಗಿದ್ದ ಭಾರತವು ಜಗತ್ತಿನ ಎಲ್ಲ ಶ್ರೇಷ್ಠ ನಾಗರಿಕತೆಗಳಿಗೆ ಮೂಲನೆಲೆಯಾಗಿತ್ತು ಮತ್ತು ವಿಶ್ವಗುರು ಎನಿಸಿಕೊಂಡಿತ್ತು. ವಿಶ್ವಶಾಂತಿಯನ್ನೇ ಮೂಲಮಂತ್ರವಾಗಿಸಿಕೊಂಡ ಆ ದಾರ್ಶನಿಕರು, ವಿಶ್ವಶಕ್ತಿಗಳೊಂದಿಗೆ ಸಾಪೇಕ್ಷವಾಗಿ ಬದುಕಲು ಮಾನವ ಸಂಕುಲಕ್ಕೆ ಕಲಿಸಿಕೊಟ್ಟ ಜೀವನಮೌಲ್ಯಗಳೇ ಒಗ್ಗೂಡಿ ‘ಸನಾತನ ಧರ್ಮ’ ಎಂದು ಕರೆಸಿಕೊಂಡಿದೆ.

ನಮ್ಮಲ್ಲಿ ಅಷ್ಟೊಂದು ಸಂಪತ್ತೇನೂ ಇಲ್ಲವಾಗಿದ್ದಲ್ಲಿ ಅಂದು ಭಾರತಕ್ಕೆ ಸಮುದ್ರಮಾರ್ಗ ಕಂಡು ಹಿಡಿಯಲು ಪಾಶ್ಚಾತ್ಯರೇಕೆ ಅಷ್ಟೊಂದು ಪೈಪೋಟಿ ತೋರುತ್ತಿದ್ದರು? ಚೀನಿ ದಾರ್ಶನಿಕರೇಕೆ ದಂಡುಗಟ್ಟಿ ಭಾರತಕ್ಕೆ ಬರುತ್ತಿದ್ದರು? ‘ಸನಾತನ’ ಎಂದರೆ ದೇವನಾಗರಿಯಲ್ಲಿ ಶಾಶ್ವತ, ಕೊನೆ ಮೊದಲಿಲ್ಲದ್ದು, ಅನಂತ, ಅವಿನಾಶಿ ಎಂದರ್ಥ. ಇದನ್ನೇ ಕಾಲಾನುಕ್ರಮದಲ್ಲಿ ಹಿಂದೂ ಧರ್ಮ, ವೈದಿಕ ಧರ್ಮ, ಆರ್ಷಧರ್ಮ (ಋಷಿಪ್ರಣೀತ), ಆರ್ಯಧರ್ಮ ಎಂದೆಲ್ಲ ಹಲವು ಉಪನಾಮಗಳಿಂದ ಕರೆಯಲಾಗಿದೆ. ಇದಕ್ಕೆ ಒಬ್ಬಾತ ಮೂಲ ಪುರುಷ ಎಂದಿಲ್ಲ.

ನಿಸ್ವಾರ್ಥ ಸಾಧಕರಾದ ಋಷಿಮುನಿಗಳು ತಮ್ಮ ಅನನ್ಯ ಜೀವನಾನುಭವವನ್ನು ಮತ್ತು ತಾವು ಕಂಡುಕೊಂಡ ಆತ್ಯಂತಿಕ ವೈಜ್ಞಾನಿಕ ಸತ್ಯಗಳನ್ನು ಶೃತಿ-ಸ್ಮೃತಿ-ಪುರಾಣಗಳ ಮೂಲಕ, ಗುರು-ಶಿಷ್ಯ ಪರಂಪರೆಯಿಂದ ಉಳಿಸಿ ಬೆಳೆಸಿ ಇಂದಿನ ಪೀಳಿಗೆಗೆ ನೀಡಿದ ಅಮೂಲ್ಯಭಂಡಾರವೇ ಸನಾತನ ಧರ್ಮ. ಇದು ದೇಶಕಾಲಾತೀತವಾಗಿ ಎಲ್ಲರನ್ನೂ ಉದ್ಧರಿಸಬಲ್ಲ ಅನನ್ಯ ತತ್ತ್ವ, ಏಕೈಕ ವೈಶ್ವಿಕ ಧರ್ಮ. ಮಿಕ್ಕೆಲ್ಲವೂ ಕೇವಲ ಮತಪಂಥಗಳಷ್ಟೇ. ‘ಸತ್ಯಂ ವದ, ಧರ್ಮಂ ಚರ’- ಇದು ಸನಾತನದ ರೂಢ
ಮೂಲ ಬೋಧನೆ.

ಇಂದು ಜಗತ್ತಿನ ಅನೇಕ ರಿಲಿಜನ್‌ಗಳು (ಮುಖ್ಯವಾಗಿ ಸೆಮೆಟಿಕ್ ಪಂಥಗಳು) ಸೀಮಿತ ಮತ್ತು ಸಂಕುಚಿತ ಬೋಧನೆಯನ್ನು ಇತರರ ಮೇಲೆ ಬಲಾತ್ಕಾರವಾಗಿ ಹೇರುತ್ತ ಮತಾಂತರಿಸುತ್ತಿರುವುದು ಗೊತ್ತಿರುವಂಥದ್ದೇ. ಇಂಥ ವಿಷಮ ಕಾಲಘಟ್ಟದಲ್ಲಿಯೇ ‘ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ’ ಎಂದು ಘಂಟಾಘೋಷವಾಗಿ ಹೇಳುವ ವಿಶಾಲ ಮನೋಭಾವದ ಸನಾತನ ಚಿಂತನೆಗೆ ಸಾಟಿಯುಂಟೇ? ಇಲ್ಲಿ ತರ್ಕ, ಚರ್ಚೆ, ಸಂವಾದಗಳಿಗೆ ಸ್ಥಾನವಿದೆ. ತದ್ವಿರುದ್ಧ ಚಿಂತನೆಯ ಜನರು ಸಹಸ್ರಾರು ವರ್ಷಗಳಿಂದ ಪರಸ್ಪರ ಹೊಂದಿಕೊಂಡು ಬದುಕಿದ ಇತಿಹಾಸವಿದೆ.

ಬಹುತ್ವಕ್ಕೆ ಜಗತ್ತಿನಲ್ಲಿ ಭಾರತಕ್ಕಿಂತ ಉತ್ತಮ ಉದಾಹರಣೆ ಇನ್ನೆಲ್ಲಿದೆ? ಜಗತ್ತಿನ ಮಾನವ ಹಕ್ಕುಗಳ ದಮನಿತ ಅನ್ಯಪಂಥೀಯ ರಿಗೆಲ್ಲ ಆಶ್ರಯ ನೀಡಿದ ಭರತ ಖಂಡದ ಆತ್ಮವೇ ಈ ಸನಾತನ ಧರ್ಮ. ಇಲ್ಲಿ ಆಮಿಷದ, ಬಲವಂತದ, ಓಲೈಕೆಯ, ರಾಜಕೀಯ ಮತಾಂತರಕ್ಕೆ ಆಸ್ಪದವಿಲ್ಲ. ಅದು ವ್ಯಕ್ತಿಯೊಬ್ಬ ಸ್ವ ಇಚ್ಛೆಯಿಂದ ಆಂತರಿಕವಾಗಿ ಪರಿವರ್ತನೆಗೊಂಡು ಕೈಗೊಳ್ಳಬೇಕಾದ ನಿರ್ಧಾರ. ಇದೊಂದೇ ಮಾನವ ಕೇಂದ್ರಿತ ಧರ್ಮ; ಮಿಕ್ಕೆಲ್ಲವೂ ಪ್ರವಾದಿಕೇಂದ್ರಿತ ಧರ್ಮಗಳು.

ಅಲ್ಲಿ ವೈಯಕ್ತಿಕ ಅಭಿಪ್ರಾಯಗಳಿಗೆ ಮನ್ನಣೆಯಿಲ್ಲ, ತರ್ಕ- ಸಂವಾದಗಳಿಗೆ ಸ್ಥಾನವಿಲ್ಲ. ಆಸ್ತಿಕರಿಗೆ ಅಲ್ಲಿ ದೇವವಾಣಿ/ದೇವತಾ ಚರಣೆಗಳನ್ನು ಕಣ್ಣುಮುಚ್ಚಿಕೊಂಡು ನಂಬುವುದೊಂದೇ ದಾರಿ. ಆದರೆ, ಗುರುಗಳನ್ನೂ, ಹಿರಿಯರನ್ನೂ ಅಷ್ಟೇಕೆ ದೇವರನ್ನೂ ಪ್ರಶ್ನಿಸುವ ಮತ್ತು ಬೋಧನೆಗಳನ್ನು ಪರೀಕ್ಷಿಸಿಯೇ ಒಪ್ಪಿಕೊಳ್ಳುವ ಸ್ವಾತಂತ್ರ್ಯವನ್ನು ಆಸ್ತಿಕನಿಗೆ ನೀಡುವ ಜಗತ್ತಿನ ಏಕೈಕ ಪರಂಪರೆ ನಮ್ಮದು.

‘ನ ಸೀ ಸ್ವಾತಂತ್ರ್ಯಮರ್ಹತಿ’ ಎನ್ನುವ ಒಂದೇ ವಾಕ್ಯವನ್ನು ಆಧಾರವಾಗಿಟ್ಟುಕೊಂಡು ಸನಾತನ ಧರ್ಮವನ್ನು ಹೀಗಳೆಯುವ
ಕುತ್ಸಿತರಿಗೆ ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ’ ಎಂದಿದ್ದೂ ಅದೇ ಮನುಸ್ಮೃತಿ ಎಂಬುದು ಕಾಣುವುದಿಲ್ಲ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಈ ಮನುಸ್ಮೃತಿಯು ಕಲಿಯುಗಕ್ಕೆ ಅಪ್ರಸ್ತುತ. ಇತ್ತೀಚಿನದ್ದು ಪರಾಶರ ಸ್ಮೃತಿ. ಋಷಿಗಳು ಅಂದಂದಿನ ಕಾಲಕ್ಕೆ ತಕ್ಕಂತೆ ಇದರಲ್ಲಿ ತಿದ್ದುಪಡಿ ಮಾಡಿದ್ದಾರೆ. ಅವೇನೂ ಪ್ರವಾದಿಯ ‘ಕಮಾಂಡ್ ಮೆಂಟ್’ಗಳಂತೆ ಬದಲಿಸಲಾಗದ ಕಾನೂನುಗಳೇನಲ್ಲ.

ಕಳೆದ ೭೫ ವರ್ಷಗಳಲ್ಲಿ ನಮ್ಮ ಸಂವಿಧಾನಕ್ಕೆ ಅದೆಷ್ಟೋ ಬಾರಿ ತಿದ್ದುಪಡಿಯಾಗಿಲ್ಲವೇ? ಈ ಕಾರಣಕ್ಕೆ ಮೂಲಸಂವಿಧಾನ ವನ್ನೇ ಹೀಗಳೆಯುವುದು ಎಷ್ಟು ಸರಿ? ಅದನ್ನು ಬದಲಿಸುವ ಸ್ವಾತಂತ್ರ್ಯವು ನಮಗಿತ್ತು, ನಾವು ಬದಲಿಸಿಯೂ ಇದ್ದೇವೆ ತಾನೇ? ಪ್ರಪಂಚವನ್ನು ನಡೆಸುವುದು ಋತ, ಸತ್ಯ, ಧರ್ಮಗಳೆಂಬ ವಿಶ್ವಶಕ್ತಿಗಳು. ಬ್ರಹ್ಮಾಂಡ ನಿಂತಿರುವುದೇ ಈ ಮೂಲತತ್ತ್ವಗಳ ಆಧಾರದಲ್ಲಿ. ಇದನ್ನೇ ಆಧುನಿಕ ವಿಜ್ಞಾನವು ‘ಗುರುತ್ವ’, ‘ಇನರ್ಷಿಯಾ’ ಮೊದಲಾ ಹೆಸರುಗಳಿಂದ ಕರೆಯುತ್ತದೆ. ಜೀವನದ ಉದ್ದೇಶ ಮತ್ತು ಸಾರ್ಥಕತೆಯನ್ನು ಸಾರುವುದೇ ಧರ್ಮ.

ಸೃಷ್ಟಿಯ ಸಕಲ ಚರಾಚರಗಳ ನೈಜ ಸ್ಥಿತಿಗಳ ವ್ಯಕ್ತ ರೂಪವೇ ಧರ್ಮ. ರಿಲಿಜನ್ನಿಗೂ ಧರ್ಮಕ್ಕೂ ಸಂಬಂಧವೇ ಇಲ್ಲ. ಇವೆರಡೂ ಒಂದಕ್ಕೊಂದು ಪರ್ಯಾಯ ಪದಗಳಲ್ಲ. ನದಿಗೆ ಹರಿಯುವುದೇ ಧರ್ಮ. ಬೆಂಕಿಗೆ ಸುಡುವುದು, ಮೀನಿಗೆ ಈಜುವುದು, ಕುದುರೆಗೆ ಓಡುವುದೇ ಧರ್ಮ. ಇವು ಎಂದಿಗೂ ಬದಲಾಗದ ಸೃಷ್ಟಿಯ ಮೂಲನಿಯಮಗಳು. ಇದುವೇ ಸನಾತನ ಧರ್ಮದ ತಿರುಳು.

ಮಾನವ ಜೀವನದ ಗುರಿ ಒಂದೇ ಆದರೂ, ಅಲ್ಲಿಗೆ ಸಾಗುವ ಮಾರ್ಗಗಳು ಹಲವಾರು ಇರಬಹುದೆಂಬ ವಿಶಾಲ ದೃಷ್ಟಿಯಿಂದ
ಜಗತ್ತಿನ ಹಲವು ಹೊಚ್ಚಹೊಸ ವಿಚಾರಧಾರೆಗಳಿಗೆ ಕಾಲಕಾಲಕ್ಕೆ ಆಶ್ರಯನೀಡಿ, ಅಲ್ಲಿರುವ ಜೊಳ್ಳನ್ನು ಬಿಟ್ಟು  ತತ್ತ್ವರಸ ವನ್ನಷ್ಟೇ ಹಂಸಕ್ಷೀರ ನ್ಯಾಯದಂತೆ ಹೀರಿಕೊಂಡು ಸನಾತನ ಧರ್ಮ ಬೆಳೆದಿದೆ. ಇಂದು ಜಗತ್ತಿನ ಎಲ್ಲ ಪುರಾತನ ನಾಗರಿಕತೆಗಳು
ಅಳಿದರೂ, ಸಹಸ್ರಾರು ವರ್ಷಗಳಿಂದ ಅವಿಚ್ಛಿನ್ನವಾಗಿ ಉಳಿದು ಬಂದ ಸನಾತನ ಧರ್ಮವೇ ಭಾರತವು ಜಗತ್ತಿಗೆ ನೀಡಿದ ಅಮೂಲ್ಯಕೊಡುಗೆ.

ನಮ್ಮ ಹಿರೀಕರು ‘ಇದಮಿತ್ಥಂ’ ಎಂದು ಜೀವನದ ದೃಷ್ಟಿಕೋನವನ್ನು ಸಂಕುಚಿತಗೊಳಿಸಿದವರಲ್ಲ, ‘ಆನೋ ಭದ್ರಾ ಕೃತವೋ ಯಂತು ವಿಶ್ವತಃ’ ಎಂದವರು. ಉದಾತ್ತ ಚಿಂತನೆಗಳು ಎಲ್ಲ ದಿಕ್ಕುಗಳಿಂದಲೂ ನಮಗೆ ಬರಲಿ ಎಂಬ ಚಿಂತನೆ ಭಾರತದ ನೆಲ ದಿಂದ ಮಾತ್ರವೇ ಬರಬಲ್ಲದು. ದೇವರ ಅಸ್ತಿತ್ವವನ್ನೇ ನಿರಾಕರಿಸಿದ ಚಾರ್ವಾಕನನ್ನೇ ಋಷಿಯೆಂದು ಗೌರವಿಸಿದ ಈ ಬಹುತ್ವ ವಾದಿ ಉದಾರ ಆಸ್ತಿಕ ಪರಂಪರೆಯ ಬಗ್ಗೆ ನಮಗೆ ಹೆಮ್ಮೆಯೆನಿಸಬೇಡವೇ? ಗುರುತ್ವಾಕರ್ಷಣೆಯು ಎಂದಿನಿಂದ ಆರಂಭ ಗೊಂಡಿತು ಎನ್ನುವ ಪ್ರಶ್ನೆಗೆ ಆಧುನಿಕ ವಿಜ್ಞಾನದಲ್ಲಿ ನಿಖರ ಉತ್ತರವಿದೆಯೇ? ಅದು ಸೃಷ್ಟಿಯ ಆದಿಯಿಂದಲೂ ಇದ್ದಿರಲೇ ಬೇಕು. ನ್ಯೂಟನ್ ಅದನ್ನು ಕಂಡುಹಿಡಿಯುವ ಮೊದಲು ಗುರುತ್ವವು ಇರಲಿಲ್ಲ ಎನ್ನಬಹುದೇ? ಅಳಿವಿಲ್ಲದ ಆತ್ಮದಂತೆ ಸನಾತನ ಧರ್ಮವೂ ಅಪ್ರಮೇಯ, ಅವಿನಾಶಿ.

ಈ ಸನಾತನ ವಟವೃಕ್ಷದ ರೆಂಬೆ- ಕೊಂಬೆಗಳನ್ನು ಸಹಸ್ರ ಬಾರಿ ಕತ್ತರಿಸಿದರೂ, ಮತ್ತೆ ಮತ್ತೆ ಹೊಸ ರೂಪಗಳಲ್ಲಿ ಚಿಗುರೊಡೆ ಯುವ ಅಮೃತತ್ವವು ಅದಕ್ಕಿದೆ. ‘ದುಷ್ಕೃತ್ಯವನ್ನು ಮಾಡದಿದ್ದುದಕ್ಕಾಗಿ ಪ್ರಾಣತ್ಯಾಗ ಮಾಡಬೇಕಾಗಿ ಬಂದರೂ ಸರಿ, ತನ್ನ ಜೀವನವನ್ನು ಪಣಕ್ಕಿಟ್ಟಾದರೂ ಸರಿ ತಾನು ಮಾಡಬೇಕಾದ ಒಳ್ಳೆಯ ಕೆಲಸವನ್ನು ಮಾಡಲೇಬೇಕು’ ಎನ್ನುತ್ತದೆ ಸನಾತನ ಧರ್ಮ. ಇಂಥ ಸದ್ಧರ್ಮವನ್ನು ನಾಗರಿಕ ಸಮಾಜವು ಎಲ್ಲಾದರೂ ದೂಷಿಸುವುದುಂಟೇ? ಸನಾತನವು ಒಂದು ವಿಶ್ವಧರ್ಮ.

ವಿಶ್ವಮಾನವ ಪ್ರಜ್ಞೆಯನ್ನು ಢಾಳಾಗಿ ಪ್ರತಿಧ್ವನಿಸುವ ವಿಶಾಲ ದೃಷ್ಟಿಕೋನವುಳ್ಳ ಜಾಗತಿಕ ಧರ್ಮವಿದು. ಜಗವನ್ನೆಲ್ಲಾ ಒಂದಾಗಿ ಬೆಸೆದಿರುವ ಕಾಸ್ಮಿಕ್ ಶಕ್ತಿ ಪ್ರಕೃತಿಯೊಂದಿಗೆ ಅನನ್ಯವಾಗಿ ತಾದಾತ್ಮ್ಯ ಹೊಂದಿರುವ ಏಕೈಕ ಧರ್ಮವಿದು. ಇದನ್ನೇ ಸ್ವಾಮಿ ವಿವೇಕಾನಂದು ಶಿಕಾಗೋದಲ್ಲಿ ಉದ್ಘೋಷಿಸಿದ್ದು. ‘ಬನ್ನಿ ನಾವೆಲ್ಲರೂ ಆರ್ಯ(ಸುಸಂಸ್ಕೃತ) ರಾಗೋಣ’ ಎಂದು ವಿಶ್ವಕ್ಕೇ ಕರೆನೀಡಿದವರು ನಮ್ಮ ಪೂರ್ವಜರು. ಇಡಿಯ ಜಗತ್ತೇ ಒಂದು ಹಕ್ಕಿಗೂಡಿನಂತೆ, ಇಲ್ಲಿ ನಾವು ನೀವೆಲ್ಲರೂ ಕೆಲಕಾಲ ಅತಿಥಿ ಗಳಂತೆ ಬಂದು ಹೋಗುವವರು. ಈ ಗೂಡು ನಮ್ಮದಲ್ಲ ಎಂಬ ನಿಸ್ವಾರ್ಥ ನಿಸ್ಪೃಹ ಬದುಕನ್ನು ಬಾಳಲು ಕಲಿಸಿ ಕೊಟ್ಟಿದ್ದೇ ಈ ಸನಾತನ ಧರ್ಮ. ಸ್ವರಾಜ್ಯ, ಗಣತಂತ್ರ, ಪ್ರಜಾರಾಜ್ಯ, ವಿಶ್ವಮಾನವ ತತ್ತ್ವ, ಸಾಮರಸ್ಯ ಮತ್ತು ಸಮನ್ವಯತೆ ಎಂಬ ಸಮಕಾಲೀನ ಮೌಲ್ಯಗಳನ್ನು ಸಹಸ್ರಾರು ವರ್ಷಗಳ ಹಿಂದೆ ಜಗತ್ತಿಗೆ ಬದುಕಿ ತೋರಿಸಿದ ಮಹಾನ್ ಪರಂಪರೆ ನಮ್ಮದು. ಆಧುನಿಕ ಕಾಲದವು ಎನ್ನಲಾಗುವ ಮಾನವ ಹಕ್ಕುಗಳು, ವೈಯಕ್ತಿಕ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸ್ತ್ರೀ ಸ್ವಾತಂತ್ರ್ಯದಂಥ ಪ್ರಬುದ್ಧ ಚಿಂತನೆ ಗಳನ್ನು ನಮ್ಮ ಋಷಿಗಳು ಸಹಸ್ರಾರು ವರ್ಷಗಳ ಹಿಂದೆಯೇ ವೇದಮಂತ್ರಗಳಲ್ಲಿ ಉಲ್ಲೇಖಿಸಿದ್ದರು ಎಂಬುದು ನಮಗೆ ಹೆಮ್ಮೆ ಯಲ್ಲವೇ? ಸ್ವಂತಕ್ಕೆಂದು ಸ್ವಾರ್ಥಿಗಳಾಗದೆ ‘ಸರ್ವೇ ಜನಾ ಸುಖಿನೋ ಭವಂತು’ ಎಂದು ಹಾರೈಸುವವರು ನಾವು. ತ್ಯಾಗ, ದಾನ, ತಪಸ್ಸು, ಬಲಿದಾನಗಳು ಈ ಸಂಸ್ಕೃತಿಯ ವಿಶೇಷ ಗುಣಗಳು.

ವಿದೇಶಗಳ ಮೇಲೆ ಎಂದೂ ದಂಡೆತ್ತಿ ಹೋಗದ ಜಗತ್ತಿನ ಏಕೈಕ ದೇಶ ಭಾರತ. ನಮ್ಮ ಕ್ಷಾತ್ರವು ಆತ್ಮರಕ್ಷಣೆಗಷ್ಟೇ ಸೀಮಿತ.
ದುರ್ಬಲರ, ಶರಣಾಗತರ ರಕ್ಷಣೆಯೇ ನಮಗೆ ಧರ್ಮ. ‘ಭೌತಿಕ’ ದಿಗ್ವಿಜಯಕ್ಕಿಂತ ‘ಬೌದ್ಧಿಕ’ ದಿಗ್ವಿಜಯಕ್ಕೆ ಒತ್ತುಕೊಟ್ಟ ಸಂಸ್ಕೃತಿ ನಮ್ಮದು. ಇದು ಅಧ್ಯಾತ್ಮಿಕತೆಯ ಅನುಭಾವಿ ತಳಹದಿಯ ಮೇಲೆ ವಿಕಸಿತವಾದ ಜ್ಞಾನ-ವಿಜ್ಞಾನಗಳ ವಿಶಿಷ್ಟ ಪರಂಪರೆ. ಸತ್ಯಶೋಧಕರಿಗಿದು ನಿತ್ಯ ಪ್ರಯೋಗಶಾಲೆ. ಪಂಚ ಭೌತಿಕ ಬಾಹ್ಯಜಗತ್ತನ್ನು ನಮ್ಮ ಅಂತರಂಗದೊಡನೆ ಬೆಸೆಯುವುದೇ ಅಧ್ಯಾತ್ಮ.

ಇದು ವಿಶ್ವಪ್ರಜ್ಞೆಯನ್ನು ವ್ಯಕ್ತಿಪ್ರಜ್ಞೆಯೊಂದಿಗೆ ಸಮೀಕರಿಸುತ್ತದೆ. ‘ನಮ್ಮ ಗುರಿ ನಾವು ಮಾತ್ರ ಗೆಲ್ಲುವುದಲ್ಲ, ಎಲ್ಲರನ್ನೂ ಗೆಲ್ಲಿಸುವುದು. ಇತರರನ್ನು ಸೋಲಿಸುವುದೇ ನಮ್ಮ ಗೆಲುವಲ್ಲ, ನಮ್ಮನ್ನು (ಮನಸ್ಸನ್ನು) ನಾವು ಗೆಲ್ಲುವುದೇ ನಿಜವಾದ ಗೆಲುವು’ ಎಂದು ಸನಾತನ ಧರ್ಮವು ಸಾರಿಹೇಳುತ್ತದೆ. ‘ದೇವನೊಬ್ಬ ನಾಮ ಹಲವು’ ಎಂಬುದು ನಮ್ಮ ಸಮ್ಯಕ್‌ದೃಷ್ಟಿ. ‘ಅಸತೋಮಾ ಸದ್ಗಮಯ..’, ‘ಅಹಂ ಬ್ರಹ್ಮಾಸ್ಮಿ’, ‘ಸರ್ವಂ ಖಲ್ವಿದಂ ಬ್ರಹ್ಮ’ ಎನ್ನುವ ಇನ್ನೊಂದು ಸಂಸ್ಕೃತಿಯನ್ನು ಮತ್ತೆಲ್ಲಾದರೂ ಕಾಣಲಾದೀತೇ? ಸನಾತನವು ನಿಂತ ನೀರಲ್ಲ, ಸದಾ ಹರಿಯುವ ಶುಭ್ರ ಜ್ಞಾನಗಂಗೆ.

ಅಸಂಖ್ಯ ದಾರ್ಶನಿಕರು ಇದರಲ್ಲಿ ತಮ್ಮ ಜೀವನದ ಸಾಧನೆಯ ಪುಣ್ಯ-ಲವನ್ನು ಸಮರ್ಪಿಸಿದ್ದಾರೆ. ಕಾಲಕಾಲಕ್ಕೆ ಇದು ಅನ್ವೇಷಣೆ, ಸುಧಾರಣೆ ಮತ್ತು ಬದಲಾವಣೆಗಳಿಗೆ ತನ್ನನ್ನು ಒಳಪಡಿಸಿಕೊಂಡು ನಿತ್ಯನೂತನವಾಗಿ ಮತ್ತು ದೇಶಕಾಲಾತೀತವಾಗಿ ತನ್ನ ಪ್ರಸ್ತುತತೆ ಉಳಿಸಿಕೊಂಡಿರುವುದು ವಿಶೇಷ. ವೈಜ್ಞಾನಿಕ ವಾದ ಹಲವು ಸತ್ಯಗಳಿದ್ದಂತೆಯೇ ಇದು ಕೂಡ ಪರೀಕ್ಷೆ ಗೊಳಪಡಬಲ್ಲ ಸ್ಥಾಪಿತ ಸತ್ಯಗಳ ಇಡುಗಂಟು. ಟೀಕೆ, ಭಾಷ್ಯ, ಟಿಪ್ಪಣಿಗಳು ನಮ್ಮ ಧಾರ್ಮಿಕ ಸಾಹಿತ್ಯದ ಅವಿಭಾಜ್ಯ ಅಂಗ.

‘ನಿಂದಕರಿರಬೇಕು’ ಎನ್ನುವ ದಾಸಸಾಹಿತ್ಯ ನಮಗೆ ಗೊತ್ತೇ ಇದೆಯಲ್ಲಾ! ಅಮೆರಿಕದ ‘ನಾಸಾ’ ಸೇರಿದಂತೆ, ಸಾಕಷ್ಟು  ವಿಶ್ವವಿಖ್ಯಾತ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳನೇಕರು ಭಾರತೀಯ ಮೂಲದವರೇ. ಜಿಜ್ಞಾಸೆಗೆ ಸದಾ ನೀರೆರೆದು
ಪೋಷಿಸುವ ವೈಚಾರಿಕತೆಯನ್ನು ನಾವಿಲ್ಲಿ ಕಾಣಬಹುದು. ಪ್ರಶ್ನಿಸುವುದು ನಮ್ಮ ಪರಂಪರೆಯ ಒಂದು ಅಭಿನ್ನ ಅಂಗ.
ಯಮನನ್ನೇ ಪ್ರಶ್ನಿಸಿದ ನಚಿಕೇತ ನಮ್ಮ ಪೂರ್ವಜ. ನಮ್ಮಲ್ಲಿ ವಿಶೇಷವೆಂದರೆ, ಮತ, ಪಂಥಗಳೆಷ್ಟೇ ಇದ್ದರೂ ಅವೆಲ್ಲವೂ ವೈದಿಕ
ಸಾಹಿತ್ಯವನ್ನು ಮೂಲವಾಗಿ ಇಟ್ಟುಕೊಂಡು, ಅದರ ಆಧಾರದಲ್ಲಿ ವಿಭಿನ್ನ ವ್ಯಾಖ್ಯಾನಗಳನ್ನು ಮತ್ತು ವಿಶಿಷ್ಟ ಉಪಾಸನಾ ಪದ್ಧತಿಗಳನ್ನು ರೂಪಿಸಿಕೊಂಡಿವೆಯೇ ಹೊರತು ಮೂಲಕ್ಕೆ ಎಲ್ಲೂ ವಿರೋಧವಿಲ್ಲ.

ಎಲ್ಲದರ ತಾಯಿಬೇರು ಸನಾತನವೇ. ಕಾಲ ಕಾಲಕ್ಕೆ ಹೊಸ ಚಿಂತನೆಗಳು ರೆಂಬೆ-ಕೊಂಬೆಗಳಂತೆ ಸನಾತನ ವಟವೃಕ್ಷದಲ್ಲಿ ಆವಿರ್ಭವಿಸಿವೆ. ಅತಿಯಾದ ಧನದಾಹ, ಭೌತಿಕವಾದ, ಮತಾಂಧತೆ, ಹಿಂಸೆ, ಜಾಗತೀಕರಣ, ಸ್ವಾರ್ಥ, ಸಂಕುಚಿತತೆ, ದುರಾಸೆ, ಅಜ್ಞಾನಗಳ ಮಹಾಂಧಕಾರದಲ್ಲಿ ಮುಳುಗಿರುವ ಈ ಆಧುನಿಕ ಯುಗದ ಜನರಿಗೆ, ‘ಇವನು ನನ್ನ ಬಂಧು, ಮತ್ತೊಬ್ಬನು ಹೊರಗಿನವನು’ ಎಂದು ಭೇದವೆಣಿಸುವ ನೀಚಮನಸ್ಸನ್ನು ಬಿಟ್ಟು, ಉದಾರಭಾವ ದಿಂದ ‘ಮಾನವರೆಲ್ಲರೂ ನನ್ನವರು’ ಎಂದು ಕಾಣುವ ಉಪದೇಶ ವನ್ನು ಭಾರತ ಮಾತ್ರವೇ ನೀಡಬಲ್ಲದು. ‘ಸಹನಾವವತು ಸಹನೌಭುನಕ್ತು…’ ಎಂದು ಎಲ್ಲರನ್ನೂ ಜತೆಯಲ್ಲಿ ಕರೆದು ಕೊಂಡು ಹೋಗುವ ಉಪದೇಶ ವನ್ನು ಅನ್ಯತ್ರ ಕಾಣಲಾದೀತೇ? ಪಾಶ್ಚಾತ್ಯರು ಈಗೀಗ ಹೇಳುವ ‘ಎಟಚಿZ ಜ್ಝ್ಝಿZಜಛಿ ಇಟ್ಞ್ಚಛಿmಠಿ’ ನಮ್ಮ ಆರ್ಷ ಸಂಸ್ಕೃತಿಯ ಅತ್ಯಮೂಲ್ಯ ಕೊಡುಗೆ.

‘ಅಸತೋಮಾ ಸದ್ಗಮಯ… ಓಂ ಶಾಂತಿ ಶಾಂತಿ ಶಾಂತಿಃ’ ಎಂಬುದು ಎಂಥಾ ಉದಾತ್ತ ಚಿಂತನೆ. ಇಂಥ ಸನಾತನ ಧರ್ಮಕ್ಕೆ ಕೇಡನ್ನು ಬಯಸುವ ಮನುಷ್ಯ ಯಾರೇ ಆಗಿದ್ದರೂ ಆತ ನಾಗರಿಕ ಸಮಾಜಕ್ಕೇ ಒಂದು ಕಪ್ಪುಚುಕ್ಕೆ. ಸನಾತನದಂಥ ಮೇರುವಿನ ವಿನಾಶವು, ನಶ್ವರ ಶರೀರವನ್ನು ಹೊಂದಿದ ಹುಲುಮಾನವನಿಂದ ಸಾಧ್ಯವೇ? ಅಂಥವರಿಂದ ನಾವು ಈ ಮನುಕುಲವನ್ನು ರಕ್ಷಿಸಬೇಕಾದ ಅನಿವಾರ್ಯವೀಗ ಎದುರಾಗಿದೆ. ಬನ್ನಿ ಹೆಮ್ಮೆಯಿಂದ ಮತ್ತೊಮ್ಮೆ ಜತೆಗೂಡಿ ಹೇಳೋಣ ‘ನಾನು ಕೂಡ ಸನಾತನಿ’ ಎಂದು.

(ಲೇಖಕರು ನವಜಾತ ಶಿಶು ಮತ್ತು ಮಕ್ಕಳ ತಜ್ಞರು)