Wednesday, 18th September 2024

ಸನಾತನ ಸರ್ವನಾಶಕ್ಕೆ ಇವನ್ಯಾವ ಸೀಮೆ ತೊಪ್ಪೆ?

ಸುಪ್ತ ಸಾಗರ

rkbhadti@gmail.com

ವಿಘಟಿತ-ಸಂಘರ್ಷಮಯ, ಯುದ್ಧ-ತ್ವೇಷೋನ್ಮಾದದ ಸಮಾಜದ ಸನ್ನಿವೇಶದಲ್ಲಿ, ಉಗ್ರವಾದವೇ ತಾಂಡವವಾಡುತ್ತಿರುವ ಜಾಗತಿಕ ಸಂಕಷ್ಟದಲ್ಲಿ ಇಂಥ ‘ಮಾನವೀಯ ಧರ್ಮ’ದ ಪುನರ್ ಸ್ಥಾಪನೆಯ ಅಗತ್ಯವಿಲ್ಲವೇ? ಅದಕ್ಕೆ ತಾನೆ ಇಂದು ದೆಹಲಿಯಲ್ಲಿ ಸಭೆ ಸೇರಿ ಚರ್ಚಿಸುತ್ತಿರುವ ಜಿ೨೦ ಸದಸ್ಯ ರಾಷ್ಟ್ರಗಳ ಮಹಾನ್ ನಾಯಕರು, ವಿಶ್ವ ಸಂಸ್ಥೆಯಂಥ ಸಂಘಟನೆಗಳು ಹೆಣಗುತ್ತಿರುವುದು.

ಅಷ್ಟಕ್ಕೂ ಇದೊಂದು ವಿಷಯವೇ ಅಲ್ಲ. ಅದೊಂದು ಸಾಂಕ್ರಾಮಿಕವಂತೆ, ಅದನ್ನು ಸಂಪೂರ್ಣ ನಿರ್ಮೂಲನೆಮಾಡಬೇಕೆಂದು ಅಲ್ಯಾರೋ ನಿನ್ನೆಮೊನ್ನೆ ಕಣ್ಣು ಬಿಟ್ಟವನೊಬ್ಬ ವೀರಾವೇಶದಿಂದ ಬೊಬ್ಬೆ ಹೊಡೆಯುವುದಂತೆ. ಅದಕ್ಕೆ ಪ್ರತಿ ಸವಾಲೆಸೆಯುವ ಇಲ್ಲೊಂದಿಷ್ಟು ಮಂದಿ, ತಾವೇ  ಧರ್ಮ ಪರಿಪಾಲಕರು, ಧರ್ಮರಕ್ಷಕರೆಂಬ ರೀತಿಯಲ್ಲಿ ಪೌರುಷದ ಹೇಳಿಕೆಗಳನ್ನು ನೀಡುವುದಂತೆ; ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಮಾಡುವುದಂತೆ. ಇನ್ನೊಂದಿಷ್ಟು ದಿನ ಪತ್ರಿಕೆಗಳು, ಟಿವಿಗಳೂ ಸೇರಿದಂತೆ ಎಲ್ಲೆಡೆ ಅದರದ್ದೇ ಸುದ್ದಿ. ಅದೇ ವಿವಾದ!

ಅಷ್ಟಕ್ಕೂ ‘ಸನಾತನ’ ಅಂದರೆ ಏನೆಂದುಕೊಂಡುಬಿಟ್ಟಿದ್ದಾರೆ. ಇವರು ಬೊಬ್ಬೆ ಹೊಡೆದಾಕ್ಷಣ ಅದು ಸರ್ವನಾಶವಾಗಲು ಅದೇನು ಹುಲುಕೋಡು ಅಮ್ಮಮ್ಮನ ಸಂಭಾವನೆ ಗಂಟೆ? ಅಥವಾ ಸೋ ಕಾಲ್ಡ್ ರಾಜಕೀಯ ನಾಯಕರು ಅಧಿಕಾರಕ್ಕೇರಲು, ಸೋಶಿಯಲ್ ಮೀಡಿಯಾ ‘ಸ್ಟಾರ್’ಗಳು ಕೆಲಸಕ್ಕೆ ಬಾರದ ಪೋಸ್ಟ್‌ಗಳನ್ನು ಹಾಕಿಕೊಂಡು ಸಾವಿರಾರು ಲೈಕು-ಕಾಮೆಂಟುಗಳನ್ನು ಪಡೆಯಲು, ಸರ್ಕಲ್‌ಗಳಲ್ಲಿ ನಾಲ್ಕು ಜನರನ್ನು ಸೇರಿಸಿಕೊಂಡು ಭಾಷಣ ಬಿಗಿದು ಹೀರೋಗಳಾಗಲು, ಪತ್ರಕರ್ತರು ಫೇಮಸ್ ಆಗಲು, ಟಿವಿಗಳಲ್ಲಿ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಬಳಸುತ್ತಿರುವ ಸುಲಭದ ‘ಧರ್ಮ’ದ ಅಫೀಮೇನು? ನನಗೆ ಗೊತ್ತು ಹೀಗೆ ನಾನು ಬರೆದಾಕ್ಷಣ ಒಂದಷ್ಟು ಮಂದಿ ನಖಶಿಖಾಂತ ಉರಿದು ಬೀಳುತ್ತಾರೆ.

ಅಷ್ಟಕ್ಕೂ ಇಂಥವನ್ನೆಲ್ಲ ನಾನು ಯಾವತ್ತೂ ಬರೆದವನೇ ಅಲ್ಲ. ನನ್ನ ಪಾಡಿಗೆ ನಾನು ‘ನೀರು-ನೆರಳು’, ಕೃಷಿ-ಗ್ರಾಮಿಣ ಬದುಕು, ಮಳೆ-ಭೂಮಿ ಅಂತಲೆ
ಬರೆದುಕೊಂಡು ಇಷ್ಟು ವರ್ಷವೂ ಬದುಕಿದವನು. ರಾಜಕೀಯ, ಧರ್ಮ, ಜಾತಿ-ಧರ್ಮ-ಸಿದ್ಧಾಂತದಂಥವುಗಳನ್ನು ಬರೆದು ಏನೋ ಆಗಿಬಿಡುತ್ತೇನೆ ಎಂಬ ಭ್ರಮೆಯಾಗಲೀ, ಅಗತ್ಯವಾಗಲೀ ನನಗಿಲ್ಲ. ಇಷ್ಟು ದಿನವೂ ನಾನು ಜಲಪತ್ರಕರ್ತನೆಂದಷ್ಟೇ ಗುರುತಿಸಿಕೊಂಡವನು. ಹಾಗೆಂದು ಇವ್ಯಾವುವೂ ಗೊತ್ತಿಲ್ಲ ಎಂದಾಗಲೀ, ಬರೆಯಲು ಬರುವುದಿಲ್ಲ ಎಂದಾಗಲೀ ಅಲ್ಲ. ಬರೆದರೆ ಎಷ್ಟೆಷ್ಟೋ ಬರೆದೇನು. ಅಥವಾ ಇಂದಿಗೆ ನನಗೆ ಅಭಿವೃದ್ಧಿ  ಪತ್ರಿಕೋದ್ಯಮದಲ್ಲಿ ಬರೆಯಲೇನೂ ಉಳಿದಿಲ್ಲ ಎಂದೂ ಅಲ್ಲ.

ಅದು ಈ ಜನ್ಮದಲ್ಲಿ ಬರೆದು ತೀರದ ಪ್ರಮಾಣದ ಸರಕಿನ ಪರ್ವತ. ಆದರೆ, ಇವತ್ತು ಸುಮ್ಮನಿರಲಾಗಲಿಲ್ಲ ಎಂಬುದಕ್ಕೆ ಕಾರಣವಿಷ್ಟೆ. ಇವತ್ತಿನ ಸನ್ನಿವೇಶದಲ್ಲಿ ಬಳಕೆಯಾಗುತ್ತಿರುವ ಅರ್ಥದ ‘ಸನಾತನ’ ಎಂಬುದು ನಾನು ಅರಿತಂತೆ ಅಸಲಿಗೆ ‘ಧರ್ಮ’ ವೇ ಅಲ್ಲ ಎಂಬುದನ್ನು ಹಂಚಿಕೊಳ್ಳಬೇಕಿತ್ತು.
ಹೌದು, ಅಜ್ಜನೋ, ಅಪ್ಪನೋ ಹಾಸಿಟ್ಟ ನಾಯಕತ್ವದ ಗಾಸಿಯ ಮೇಲೆ ಕಾಲು ಚಾಚಿಕೊಂಡು ಅಽಕಾರಕ್ಕೇರಿರುವ, ‘ಆರ್ಯ-ದ್ರಾವಿಡ’ದ ಮೂಲಭೂತ ಅರ್ಥವನ್ನೂ ತಿಳಿಯದೇ, ಆದರೆ ಅದನ್ನೇ ಅಸವಾಗಿಕೊಂಡು ರಾಜಕೀಯ ಮಾಡುತ್ತಿರುವ, ಮೂಲತಃ ಸನಾತನಿಯಾಗಿರುವುದು ಹಾಗಿರಲಿ, ಹಿಂದುವಾಗಿಯೂ ಉಳಿಯದ, ಪುಡಿ ರಾಜಕಾರಣಿಯೊಬ್ಬ ಭವ್ಯ ಬಾರತೀಯ ‘ಸನಾತನ ಪರಂಪರೆ’ಯನ್ನು ಜಾತಿ ಆಧಾರಿತ ಇಂದಿನ ತಥಾಕಥಿತ
‘ಧರ್ಮ’ವೆಂದುಕೊಂಡು, ಅದನ್ನು ನಿರ್ಮೂಲನೆ ಮಾಡಿಬಿಡಬೇಕು ಎಂದು ಹೇಳಿಕೆ ಕೊಡುತ್ತಾನಲ್ಲ, ಇಂಥ ಮೂರ್ಖತನಕ್ಕೆ ಏನನ್ನಬೇಕು? ಅದಕ್ಕೊಂದಿಷ್ಟು ಮಂದಿ, ಚುನಾವಣಾ ರಾಜಕೀಯದಲ್ಲಷ್ಟೇ ಗೆದ್ದು ಅಧಿಕಾರಕ್ಕೇರಿರುವ ಅಥವಾ ಸೋತು ಮೂಲೆ ಸೇರಿರುವ ‘ನಾಯಕ’ರೆನಿಸಿ ಕೊಂಡವರ ಗುಲ್ಲು.

ಇಂಥವರು ಪರ-ವಿರೋಧ ಹೇಳಿಕೆ ನೀಡಿ ತಾವೇನೋ ಮಹಾಜ್ಞಾನಿಗಳೆಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರಲ್ಲ, ಇಂಥ ಶತಮೂರ್ಖತನಕ್ಕೆ ಯಾವುದರಲ್ಲಿ
ಹೊಡೆಯಬೇಕು? ಅಲ್ಲ ಸ್ವಾಮೀ, ‘ಸನಾತನೀಯತೆ’ಯ ಬಗೆಗೆ ಮಾತನಾಡಲು ನೀವೇನು ಆದಿಶಂಕರರ ಪರಂಪರೆಯ ಕುಡಿಗಳೇ? ಆಚಾರ್ಯ ಮಧ್ವರ ಮೊನೆಗಳೇ? ರಾಮಾನುಜರ ರಕ್ತ ಹಂಚಿಕೊಂಡವರೇ? ಹೋಗಲಿ ಬಿಡಿ, ನಿಮ್ಮಲ್ಲಿ ಯಾರಾದರೊಬ್ಬರು ವೇದಗಳನ್ನು, ಅದರ ವ್ಯಾಖ್ಯಾನಗಳುಬೇಡ, ಕನಿಷ್ಠ ಹಾಗಂದರೇನು ಎಂಬುದರ ಪದಶಃ ಅರ್ಥ ಹುಡುಕುವ ಪ್ರಯತ್ನವನ್ನಾದರೂ ಮಾಡಿದ್ದೀರಾ? ಹಲೋ, ಸನಾತನವಾಗಲೀ, ವೈದಿಕವಾಗಲೀ ನೀವಂದುಕೊಂಡಂತೆ ಯಾವತ್ತೂ ‘ಧರ್ಮ’ ಎನಿಸಿಕೊಂಡಿಲ್ಲ.

ಅದೊಂದು ಬದುಕಿನ ಶಿಸ್ತು, ಜೀವನ ವಿಧಾನ, ಬಾಳಿನ ನಿಯಮ. ಬದುಕಿನಲ್ಲಿ ಯಾವುದೇ ಶಿಸ್ತು, ಬದ್ಧತೆ, ಕರ್ತವ್ಯಗಳ ಕಟ್ಟುಪಾಡು ಬೇಡವೆಂದು ಕೊಳ್ಳುವುದೇ ‘ಸ-ಮಜಾ(ಮಜಾಸಹಿತವಾದ)ವಾದ’ವೇ ಸಿದ್ಧಾಂತವೆಂದುಕೊಂಡಿರುವವರಿಗೆ ಸಜವಾಗಿ ಸನಾತನವೆಂಬುದು ನಿರ್ಮೂಲನೆ ಯಾಗಬೇಕೆಂದು ಅನ್ನಿಸಿಯೇ ಅನ್ನಿಸುತ್ತದೆ. ಏಕೆಂದರೆ ಅದರ ಕಠಿಣತಮ ನಿಯಮಗಳು ಬೇಕಾಬಿಟ್ಟಿ ಬದುಕನ್ನು, ಸುಖಲೋಲುಪತೆಯನ್ನು, ನಿರ್ಬಂಧಿಸುತ್ತವೆ. ಜಾತಿ-ಧರ್ಮದ ಕಟ್ಟಳೆ ಮೀರಿ ಎಲ್ಲ ಮನುಜರಿಗೆ ಅನ್ವಯಿಸುವಂಥ ಸನಾತನೀಯತೆಯೇ ಮನುಕುಲಕ್ಕೆ ಸ್ಮೃತಿಕಾರರು ಬೋಧಿಸಿದ ನೈಜ ಸಮಾಜವಾದ. ಕಾಲಕಾಲಕ್ಕೆ ತಕ್ಕಂತೆ ಜನರು ತಮಗೆ ಬೇಕಾದಂತೆ ಈ ನಿಯಮಗಳನ್ನು ಬದಲಾಯಿಸುತ್ತಲೇ ಹೋದ ಪರಿಣಾಮ ಇಂದು ಭಾರತದ
ಈ ಮೂಲಭೂತ ಸನಾತನೀಯತೆಯಲ್ಲೂ ಒಂದಷ್ಟು ಉದಾರೀಕರಣ ರೂಢಿಗೆ ಬಂದಿದೆ.

ಕೆಲವರು ಮೂಲಸ್ರೋತವನ್ನು ತೊರೆದು ಇದನ್ನು ಮೌಢ್ಯ ಆಚರಣೆಯನ್ನಾಗಿಯೂ ಪಾಲಿಸುತ್ತಿದ್ದಾರೆ ಎಂಬುದು ಬೇರೆ ಪ್ರಶ್ನೆ. ಹಾಗಂತ ಸನಾತನೀ ಯತೆಯೇ ಅದಲ್ಲ. ತಪಸ್ಸು, ದಾನ, ಅರ್ಜವ, ಅಹಿಂಸಾ, ಸತ್ಯವೆಂಬ ಐದು ಪ್ರಮುಖ ಅಂಶಗಳ ಮೇಲೆ ‘ಸನಾತನ’ ವ್ಯಾಖ್ಯಾನಕ್ಕೊಳಪಡುತ್ತದೆ.
ಹೇಳಿ ಸ್ವಾಮಿ, ಸ್ವಾತಂತ್ರ್ಯಾನಂತರದ ಭಾರತದಲ್ಲಿ, ಈಗ್ಗೆ ೫೦-೬೦ ವರ್ಷಗಳ ಹಿಂದೆಷ್ಟೇ ನೀವು ಕಂಡುಕೊಂಡಿರುವ, ನೀವು ಮಾತನಾಡುತ್ತಿರುವ ಸಮಾಜವಾದವೂ ಇದೇ ಅಲ್ಲವೇ? ನಿಮಗೆ ತಪಸ್ ಅಥವಾ ತಪಸ್ಸು ಎಂದಾಕ್ಷಣ ಕಲ್ಪನೆಗೆ ಬರುವುದು ಕ್ಯಾಲೆಂಡರ್‌ಗಳಲ್ಲಿನ ಕಣ್ಣು-ಮೂಗು ಮುಚ್ಚಿಕೊಂಡು, ಅರೆಬೆತ್ತಲೆ ಕುಳಿತ, ಜನಿವಾರ ಧಾರಿ ಡೊಳ್ಳು ಹೊಟ್ಟೆಯ ಬ್ರಾಹ್ಮಣ ಮಾತ್ರವೇ.

ಇದೊಂದು ರೀತಿ ಸಿನೆಮಾಗಳಲ್ಲಿ ಪೋಲೀಸ್ ಕಾನ್ಸ್‌ಸ್ಟೆಬಲ್‌ಗಳನ್ನು ಜೋಕರ್ ಆಗಿ ಚಿತ್ರಿಸಿದಂತೆಯೇ ಸರಿ. ಹಾಗಂತ ಪೇದೆಗಳೆಲ್ಲರೂ ಸಿನೆಮಾದ ‘ಪ್ಯಾದೆ’ಗಳೇ ಆಗಿದ್ದರೆ ಆರಕ್ಷಣಾ ವ್ಯವಸ್ಥೆಯ ಕತೆಯೇನು? ಹೀಗೆಯೇ ಸೋಕಾಲ್ಡ್ ಜಾತ್ಯತೀತರ ಕಣ್ಣಲ್ಲಿ ಕಂಡಿರುವ ಬ್ರಾಹ್ಮಣರು, ಅಷ್ಟೆ. ಜಾತಿಯಲ್ಲಿ ಬ್ರಾಹ್ಮಣರು ಎಂಬುದು ಈಗ ನಾವು ಸೃಷ್ಟಿಸಿಕೊಂಡಿರುವ ವ್ಯವಸ್ಥೆ. ಆದರೆ, ಬ್ರಾಹ್ಮಣನೇ ಬೇರೆ, ಬ್ರಾಹ್ಮಣ್ಯವೇ ಬೇರೆ. ಇದಾವುದರ ಅರಿವಿಲ್ಲದ ಚೇತನ್ ಅಹಿಂಸನಂಥ ಅಂಡೆಪಿರ್ಕಿಗಳು ಮಾತ್ರವೇ, ಜಾತಿದ್ವೇಷದ ಕಾರಣಕ್ಕೆ ಬ್ರಾಹ್ಮಣರನ್ನು ನಿಂದಿಸುವ ಭರದಲ್ಲಿ ಬ್ರಾಹ್ಮಣ್ಯವನ್ನು ಟೀಕಿಸುತ್ತಿದ್ದಾರೆ.

‘ದಿಗ್ಬಲಂ ಕ್ಷತ್ರಿಯ ಬಲಂ ಬ್ರಹ್ಮ ತೇಜೋ ಬಲಂ ಬಲಂ’ ಎಂದು ಸ್ವತಃ ಜಗತ್ತಿಗೆ ಸಾರಿದ ಶೂದ್ರ(ಕೌಶಿಕ)ನೊಬ್ಬನಿಗೆ ‘ಮಹಾಬ್ರಾಹ್ಮಣ’ ಪಟ್ಟ ಕಟ್ಟಿ, ವಿಶ್ವಾಮಿತ್ರನೆಂಬ ಹೆಸರು ಇಟ್ಟು, ಇಂದಿಗೂ ಸಪ್ತರ್ಷಿಗಳಲ್ಲಿ ಆದ್ಯಸ್ಥಾನ ನೀಡಿ, ಪೂಜಿಸುತ್ತಿರುವುದಕ್ಕೆ ಕಾರಣವೇ ಈ ಸನಾತನೀಯತೆಯ ಆರ್ಷ್ಯ ಪರಂಪರೆ ಎಂಬುದು ನಿಮಗೆ ಗೊತ್ತಿರಲಿ. ಇನ್ನೂ ವಿಶೇಷ ಗೊತ್ತೇ, ವೇದಗಳನ್ನು ಭೂಮಿಗೆ ತಂದು ವಿಂಗಡಿಸಿ, ಬಿತ್ತರಿಸಿದ, ಮಹಾಸನಾತನ ಜ್ಞಾನಿ ಎನಿಸಿಕೊಂಡಿರುವ ಭಗವಾನ್ ವೇದವ್ಯಾಸರು ಜಾತಿಯಲ್ಲಿ ಬ್ರಾಹ್ಮಣರೇ ಅಲ್ಲ. ಆದರೆ ಬ್ರಾಹ್ಮಣ್ಯದ ಮೂಲಕ ಪರಮಹಂಸಪೀಠಕ್ಕೇರಿದ ಹುಟ್ಟಾ (ಪರಾಶರ ಹಾಗೂ ಬೆಸ್ತಕನ್ಯೆ ಮತ್ಸ್ಯಗಂಧಿಯ ಮಗ) ಶೂದ್ರರು.

ಹೋಗಲಿ ಬಿಡಿ, ಮತ್ತೆ ಸನಾತನ ನಿಯಮಗಳಿಗೆ ಮರಳುವುದಾದರೆ, ತಪಸ್ಸೆಂದರೆ ಯಾವುದೇ ವಿಷಯದ ಮೇಲಿನ ಸುದೀರ್ಘ ಸಂಶೋಧನೆ. ಅದು ಸಮ್ಯಕ್ ಜ್ಞಾನಾರ್ಜನೆಯ ಭಾಗ. ವಿಜ್ಞಾನದ ಮೂಲ. ನಂತರದ್ದು ದಾನ. ಅಂದರೆ, ಬಹುತೇಕರು ಅಂದುಕೊಂಡಂತೆ ದೇವಸ್ಥಾನಗಳಲ್ಲಿ ಪೂಜಾರಿಗೆ ಕೊಡುವ ಬಿಡಿಗಾಸೋ, ಅಕ್ಕಿ- ಕಾಯಿಯೋ ಅಂತಲ್ಲ. ನಿಮ್ಮ ಕೆಲಸಕ್ಕೆ ನೀವು ನಿಮ್ಮನ್ನು ಸಮರ್ಪಿಸಿಕೊಳ್ಳುವುದು. ಇಂಗ್ಲಿಷ್‌ನಲ್ಲಿ ಇದನ್ನು ಡೆಡಿಕೇಶನ್ ಎನ್ನಲಾಗುತ್ತದೆ. ದೀನ-ದಲಿತರಿಗೆ(ಮತ್ತೆ ಇಲ್ಲಿ ದಲಿತ ಎಂಬುದು ಜಾತಿಯಲ್ಲ) ಗರಿಷ್ಠ ಕೈಯದ ನೆರವು ನೀಡಲೇಬೇಕೆಂಬ ಮಾನಸಿಕ ಬದ್ಧತೆಯೂ ದಾನ ಎನಿಸಿಕೊಳ್ಳುತ್ತದೆ. ಇನ್ನು ಅಹಿಂಸಾ; ಕೇವಲ ದೈಹಿಕತೆಗೆ ಸಂಬಂಧಿಸಿದ್ದಲ್ಲವೇ ಅಲ್ಲ. ಇನ್ನೊಂದು ಜೀವಿಗೆ ನೋವುಂಟು ಮಾಡುವ ಮಾತು, ಕೃತಿ, ಯೋಜನೆಗಳು ಸಹ ಸನಾತನೀ ಯತೆಯಲ್ಲಿ ಹಿಂಸೆ ಎನಿಸಿಕೊಳ್ಳುತ್ತದೆ. ಇವೆಲ್ಲವನ್ನೂ ತೊರೆದು ಬದುಕುವ ಜೀವನ ವಿಧಾನ ಅಹಿಂಸೆ. ಅರ್ಜವ
ಎನ್ನುವುದು ನೇರ-ನಡೆ ನುಡಿಗೆ ಸಂಬಂಧಿಸಿದ್ದು.

ಸತ್ಯ ವ್ಯಾಖ್ಯಾನ; ಗೊತ್ತೇ ಇದೆ, ಯಾವಾಗಲೂ ಸುಳ್ಳನ್ನು ಹೇಳದಿರುವುದು. ಈಗ ಹೇಳಿ ಗಾಂಽಜಿ, ಬುದ್ಧ, ಬಸವ, ಜಿನ, ಪೈಗಂಬರ್, ಜೀಸಸ್ ಎಲ್ಲರೂ ಹೇಳಿದ್ದು, ಪ್ರತಿಪಾದಿಸಿದ್ದು, ಪಾಲಿಸಿದ್ದು ಇದೇ ಜೀವ ದಯೆಯನ್ನೇ ಅಲ್ಲವೇ? ಇವರೆಲ್ಲರೂ ಹುಟ್ಟುವ ಎಷ್ಟೋ ಮುಂಚೆ ‘ಸನಾತನ’ವೆಂಬುದು ಹುಟ್ಟಿ ಇಂಥ ಮಾನವೀಯ ‘ಧರ್ಮ’ ಅಂದರೆ ಮನುಷ್ಯನ ಕರ್ತವ್ಯಗಳನ್ನುಕಟ್ಟುಪಾಡಿನ ರೂಪದಲ್ಲಿ ಪ್ರತಿಪಾದಿಸಿದೆ. ಹೌದು, ನೀವೆಲ್ಲ ಹೇಳಿದಂತೆ ಸನಾತನಕ್ಕೆ ಹುಟ್ಟಿಲ್ಲ. ಹುಟ್ಟಿಲ್ಲ ಎಂದ ಮೇಲೆ ಅದನ್ನು ಹುಟ್ಟುಹಾಕಿದವನೂ ಇಲ್ಲ.ಏಕೆಂದರೆ, ಅದು ಕ್ರೈಸ್ತ, ಬೌದ್ಧ, ಪೈಗಂಬರ್‌ರಂತೆ ಮನುಷ್ಯರು ಹುಟ್ಟುಹಾಕಿದ ಲೌಕಿಕ ಸಾಮಾನ್ಯ ಜಾತೀಯ ‘ಪಂಥ’ ಅಲ್ಲ. ಅದು ಮೂಲಭೂತ ಅಲೌಕಿಕ ‘ಧರ್ಮ’.

ಮನುಷ್ಯರಾಗಿ ಹುಟ್ಟಿದವರೆಲ್ಲರೂ ಈ ‘ಧರ್ಮ’ವನ್ನು ಅಂದರೆ ಶಿಸ್ತನ್ನು ಪಾಲಿಸಲೇಬೇಕು. ಅದಿಲ್ಲದಿದ್ದರೆ ನಾವು ಮೃಗಗಳು. ಏಕೆಂದರೆ ಮನುಷ್ಯ ಎಂಬುದರ ಡೆಫಿನಿಷನ್ ಸನಾತನದ ಪ್ರಕಾರ ‘ಮನ ಏವ ಮನುಷ್ಯಾಣಂ’. ಮನಸಿದ್ದವರೆಲ್ಲರೂ ಮನುಷ್ಯರೇ. ಅಂದರೆ, ಚಿಂತನೆ, ವಿವೇಚನೆ ಇರುವ ಜೀವಿ ಎಂದರ್ಥ. ಅದಿಲ್ಲದವರೆಲ್ಲ ಮೃಗಗಳು, ಪಶುಗಳು. ನೀವು ಮನುಷ್ಯರಲ್ಲ, ಮೃಗಗಳು ಎಂಬುದಾದರೆ ಖಂಡಿತಾ ನೀವು ಸನಾತನ ಧರ್ಮ ಪಾಲಿಸಬೇಕಾದುದಿಲ್ಲ.

ಒಂದೊಮ್ಮೆ ನೀವು ಮನುಷ್ಯರೆನಿಸಿಕೊಳ್ಳಬೇಕೆನಿಸಿದರೆ, ನೀವು ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಬೌದ್ಧ, ಜೈನ, ಹಿಂದೂ ಹೀಗೆ ಯಾವುದೇ ಮತ-ಪಂಥ ಅಥವಾ ಬ್ರಾಹ್ಮಣ, ವೈಶ್ಯ, ಶೂದ್ರ, ದಲಿತ ಹೀಗೆ ಯಾವುದೇ ಜಾತಿಯಲ್ಲಿ ಹುಟ್ಟಿದ್ದರೂ ನೀವು ಸನಾತನಿಯಾಗಿರಲೇಬೇಕು! ಸನಾತನದ ನಿಯಮಗಳು ಜಾತಿ-ಧರ್ಮವನ್ನು ಮೀರಿ ಎಲ್ಲರಿಗೂ ಅನ್ವಯಿಸುವಂಥದ್ದು. ಸನಾತನ ಎಂಬುದು ‘ದಯೆ’ಯ ಮಹತ್ವವನ್ನು ಹೇಳುತ್ತದೆ. ಯಾವುದೇ ಕೆಟ್ಟ
ಕಾರ್ಯಗಳನ್ನು ಮಾಡಬೇಡಿ ಎಂಬುವುದು ಸನಾತನ ನಿಯಮದ ಉದ್ದೇಶ. ವೇದಕಾಲದ ಬಳಿಕ ಮೊದಲ ಬಾರಿಗೆ ಭಗವದ್ಗೀತೆಯಲ್ಲಿ ‘ಸನಾತನ’ ಎಂಬ ಪದವನ್ನು ಬಳಸಲಾಗಿದ್ದುದು. ಸನಾತನ ಎಂದರೆ ಆತ್ಮ ಎಂದರ್ಥ.

ಹೀಗಾಗಿ ಸನಾತನ ಎನ್ನುವುದು ಸತ್ಯದ ನಡೆ ಹಾಗೂ ಅಹಿಂಸೆಗೆ ಒತ್ತು ಕೊಡುವ ಒಂದು ಜೀವನ ಕ್ರಮ. ನೀವು ಸಾರುತ್ತಿರುವಂತೆ ಭಗವದ್ಗೀತೆ ಎಂಬುದು ಒಂದು ಸೋಕಾಲ್ಡ್ ‘ಧರ್ಮ’ದ ಗ್ರಂಥ ಅಲ್ಲ. ಅದೊಂದು ಜೀವನ ವಿಜ್ಞಾನ. ಅದು ಎಲ್ಲ ಧರ್ಮಗಳನ್ನು ಮೀರಿ ಬದುಕಿನ ಮೌಲ್ಯವನ್ನು ತಿಳಿಸುವಂಥ ಆಕರ ಗ್ರಂಥ. ಅರಿವಿನ ಸಾರ. ಅಷ್ಟಕ್ಕೂ ಭಗವದ್ಗೀತೆಯಲ್ಲಿ ಹೇಳಿರುವುದೇನು? ‘ತಪ್ಪು ಕಲ್ಪನೆಗಳೇ ಜೀವನದ ಮೂಲ ಸಮಸ್ಯೆ, ಸರಿಯಾದ ತಿಳಿವಳಿಕೆ, ಅರಿವೇ ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ’ ಎನ್ನುತ್ತದೆ ಗೀತೆ. ಮನುಕುಲದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನಿಶ್ಚಿತ ಗುರಿ, ನಿಸ್ವಾರ್ಥ ದಾರಿ
ತೋರುವ ಜ್ಞಾನವನ್ನು ಅದು ಹೇಗೆ ಯಾವುದೋ ಒಂದು ಜಾತಿ-ಮತ-ಪಂಥಕ್ಕೆ ಸೀಮಿತಗೊಳಿಸುತ್ತೀರಿ? ಅಹಂಕಾರ ಸಲ್ಲದು, ಪ್ರತಿಫಲಾಪೇಕ್ಷೆಯಿಲ್ಲದೇ ಕರ್ತವ್ಯ ಮಾಡು, ಜೀವನದಲ್ಲಿ ಕರ್ಮ, ಅಂದರೆ ಸಾಧನೆ ಗುರಿಯಾಗಲಿ, ನಿನ್ನ ಮಿತಿಗಳನ್ನು ತಿಳಿದಿಕೋ, ಪ್ರಯತ್ನ ನಿರಂತರವಾಗಿರಲಿ, ನಾನಿದ್ದೇನೆ ಭಯ ಬಿಟ್ಟು ಮುನ್ನುಗ್ಗು… ಇವೆಲ್ಲ ಹಿಂದೂಗಳಿಗೆ ಮಾತ್ರವೇ ಬೇಕಿರುವ ಕಿವಿಮಾತುಗಳೇನು? ಇಡೀ ಮನುಜ ಕುಲಕ್ಕೆ ಅನ್ವಯಿಸುವಂಥದ್ದಲ್ಲವೇ? ಹೀಗೆ
ಬದುಕಬೇಕು ಎಂಬ ನಿಯಮಗಳನ್ನೇ ‘ಸನಾತನ ಪರಂಪರೆ’ ಹೇಳಿಕೊಂಡು ಬಂದದ್ದು.

ವಿಘಟಿತ-ಸಂಘರ್ಷಮಯ, ಯುದ್ಧ-ತ್ವೇಷೋನ್ಮಾದದ ನಮ್ಮ ಸುತ್ತಲಿನ ಸಮಾಜದ ಸನ್ನಿವೇಶದಲ್ಲಿ, ಉಗ್ರವಾದವೇ ತಾಂಡವವಾಡುತ್ತಿರುವ ಜಾಗತಿಕ ಸಂಕಷ್ಟದಲ್ಲಿ ಇಂಥ ‘ಮಾನವೀಯ ಧರ್ಮ’ದ ಪುನರ್ ಸ್ಥಾಪನೆಯ ಅಗತ್ಯವಿಲ್ಲವೇ? ಅದಕ್ಕೇ ತಾನೆ ಇವತ್ತು ದೆಹಲಿಯಲ್ಲಿ ಸಭೆ ಸೇರಿ ಚರ್ಚಿಸುತ್ತಿರುವ ಜಿ೨೦ ಸದಸ್ಯ ರಾಷ್ಟ್ರಗಳ ಮಹಾನ್ ನಾಯಕರು, ವಿಶ್ವ ಸಂಸ್ಥೆಯಂಥ ಬೃಹತ್ ಸಂಘಟನೆಗಳು ಹೆಣಗುತ್ತಿರುವುದು. ಅದನ್ನೇ ತಾನೆ ಸನಾತನ ಧರ್ಮ
ಸಾರಿರುವುದು? ಅದು ನಿರ್ಮೂಲನೆಯಾಗಬೇಕೆಂದು ಬಯಸುತ್ತಿದ್ದಾರೆಂದರೆ, ಹಾಗೆ ಹೇಳುವ ಪ್ರತಿ ವ್ಯಕ್ತಿಯೂ ತಾನು ಮಾನವೀಯತೆ ಮರೆತು ಮೃಗೀಯ ಮನಃಸ್ಥಿತಿಯ ‘ಭಯೋತ್ಪಾದಕ’ನಾಗಲು ಹೊರಟಿರುವುದಾಗಿ ಘೋಷಿಸಿದ್ದಾನೆ ಎಂದೇ ಅರ್ಥ.

ಎಲ್ಲೋ ಓದಿದ ನೆನಪು, ಧರ್ಮವು ಒಳಗಿನ ಹೆಜ್ಜೆ ಎಂದು. ಅಂದರೆ ವಿಜ್ಞಾನ ಸ್ವಾಮಿ! ಭೂಮಿಯ ಮೇಲಿನ ‘ಮಾನವೀಯ ಧರ್ಮ’ದ ಮೂಲಭೂತ ಅಂಶಗಳನ್ನು ಮರುಪರಿಶೀಲಿಸಲು ನಮಗೆ ಸಾಕಷ್ಟು ಬುದ್ಧಿಶಕ್ತಿ ಇದೆ. ಅದಕ್ಕಾಗಿಯೇ ಏಲಿಯನ್‌ಗಳಾಗದೇ ನಾವು ಈ ಭೂ ಗ್ರಹದಲ್ಲಿದ್ದೇವೆ. ‘ವಿಶ್ವ’ದ ಮೇಲೇ ಹತೋಟಿ ಸಾಧಿಸಬಲ್ಲ ‘ವಿಜ್ಞಾನ’ವನ್ನು ದಕ್ಕಿಸಿಕೊಂಡಿದ್ದೇವೆ. ಇಂಥ ವಿಜ್ಞಾನ ಮನುಷ್ಯ ತನ್ನೊಳಗೆ ನೋಡಿಕೊಳ್ಳುವ ಅತ್ಯಂತ ಆಪ್ತ
ಸಂಗತಿ. ಇದು ನೀವು ಮೆರವಣಿಗೆ ಮಾಡಿ, ಜನರನ್ನು ಸೇರಿಸಿ, ಕೂಗಾಡಿ, ಕಿರುಚಾಡಿ, ದೊಂಬಿ ಎಬ್ಬಿಸಿ, ವಿವಾದ ಮಾಡಿ, ಬೀದಿ ಬೀದಿಗಳಲ್ಲಿ ಬೊಬ್ಬಿರಿದು ತೋರುವ -ಷನ್ ಶೋ ಅಲ್ಲ; ಮನರಂಜನಾ ಕಾರ್ಯಕ್ರಮವಲ್ಲ,ರಾಜಕೀಯ ಸಮಾವೇಶವೂ ಅಲ್ಲ. ಇದು ನಮ್ಮ ಸೃಷ್ಟಿಯ ವಿಜ್ಞಾನದ ಕಡೆಗೆ ನಾವು ಮಾಡಿಕೊಳ್ಳುವ ಅವಲೋಕನ.

ಅದರ ಸಾರ್ಥಕತೆಯ ಕಡೆಗಿನ ಒಂದು ಒಳನೋಟ. ನಾವು ಕೇವಲ ಭೌತಿಕ ಶರೀರವನ್ನು, ಬಾಹ್ಯ ಶಿಕ್ಷಣವನ್ನು ಮಾತ್ರವೇ ನೋಡಿಕೊಂಡು ಮಾತನಾಡುತ್ತಿದ್ದೇವೆ. ನಮ್ಮೊಳಗನ್ನು ನೋಡಿಕೊಳ್ಳುತ್ತಲೇ ಇಲ್ಲ. ಶಿಕ್ಷಣ ಅರಿವಲ್ಲ; ಜ್ಞಾನವಲ್ಲ. ಒಳಗನ್ನು ನೋಡಿಕೊಳ್ಳು ವುದು ಜ್ಞಾನ. ಅದು
ಸ್ವಾಭಾವಿಕವಾಗಿ ಆಂತರಿಕ ಹೆಜ್ಜೆ. ಅದನ್ನು ನಾವು ಮಾತ್ರ ಮುಂದಿಡಬಹುದು. ಅದರಿಂದ ದಕ್ಕಬಹುದಾದ ಸನಾತನ ಜ್ಞಾನ ನಮ್ಮದು ಮಾತ್ರವೇ.

ನಮಗೀಗ ಬೇಕಾಗಿರುವುದು ವಿಶ್ವಧರ್ಮ. ಸಾರ್ವತ್ರಿಕ ಧರ್ಮವನ್ನು ಹೇಳುವಾಗ, ವೈಯಕ್ತಿಕ ಧರ್ಮ ಗೌಣ. ಜಗತ್ತಿನಲ್ಲಿ ಏಳು ಬಿಲಿಯನ್ ಜನರಿದ್ದರೆ ಅವರೆಲ್ಲರಿಗೂ ಒಂದೊಂದು ಧರ್ಮದಂತೆ ಏಳು ಬಿಲಿಯನ್ ಧರ್ಮಗಳಿರ ಬಹುದು ಈ ಭೂಮಿಯ ಮೇಲೆ. ಆದರೆ ಅವೆಲ್ಲವನ್ನೂ ಮೀರಿದ ಮಾನವೀಯ ಧರ್ಮವೆಂಬುದಕ್ಕೆ ವಿಜ್ಞಾನ ಎಂದು ಹೆಸರು. ಅದು ಸಮ್ಯಕ್. ಅದೇ ಸನಾತನ. ಉದಯನಿಧಿ ಸ್ಟಾಲಿನ್ ಅಲ್ಲ ಅವನಂಥ ಕೋಟ್ಯಂತರ
ಕೀಟಾಣುಗಳು ಈ ಭೂಮಿಯ ಮೇಲೆ ಆಗಿ ಹೋಗಿವೆ; ಇನ್ನೂ ಹುಟ್ಟಿ ಸಾಯುತ್ತವೆ. ಆವ್ಯಾವುವುಗಳಿಂದಲೂ ಸನಾತನದ ಸರ್ವನಾಶವಿರಲಿ, ತೃಣ ಕೊಂಕಿಸಲೂ ಆಗಿಲ್ಲ; ಆಗುವುದೂ ಇಲ್ಲ. ಇನ್ನು ಇವಾನ್ಯಾವ ಸೀಮೆ ತೊಪ್ಪೆ? ಏಕೆಂದರೆ, ಈ ಭೂಮಿಯ ಮೇಲೆ ಜೀವಿಗಳೆಂಬುದು ಇರುವವರೆಗೂ ‘ಸನಾತನ’ ಜೀವಂತವಿರುತ್ತದೆ. ಸನಾತನ ಎಂಬುದು ನಿತ್ಯ ನೂತನ, ಚಿರಂತನ, ಸತ್ಯಾನ್ವೇಷಣೆಯ ಹಾದಿಯ ಶುದ್ಧ ವಿಜ್ಞಾನ.

Leave a Reply

Your email address will not be published. Required fields are marked *