Friday, 20th September 2024

ಸಾಣೇಹಳ್ಳಿ ಶ್ರೀಗಳು ತಮ್ಮ ಎಡಬಿಡಂಗಿ ಹೇಳಿಕೆಗೆ ಸಾಣೆ ಹಿಡಿಯಲಿ !

ಇದೇ ಅಂತರಂಗ ಸುದ್ದಿ

ಶತಶತಮಾನಗಳಿಂದ ಆಚರಣೆಯಲ್ಲಿರುವ ನಂಬಿಕೆ, ಅಭಿಪ್ರಾಯಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿ, ಸಾರ್ವಜನಿಕ ರಲ್ಲಿ ಗೊಂದಲ ಮೂಡಿಸುವುದು, ಆ ಮೂಲಕ ಚಲಾವಣೆಗೆ ಬರಲು ಬಯಸುವುದು ಹೊಸ ತಂತ್ರವೇನಲ್ಲ.

ಕೆಲ ದಿನಗಳ ಹಿಂದೆ, ಚಿಕ್ಕಮಗಳೂರಿನ ಯುವಕನೊಬ್ಬ ನಮ್ಮ ಕಾರ್ಯಾಲಯಕ್ಕೆ ಬಂದಿದ್ದ. ಆತನಿಗೆ ನಿಜಗುಣಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಬೇಕಿತ್ತಂತೆ. ನಾನು ‘ಭಟ್ಟರ ಸ್ಕಾಚ್’ನಲ್ಲಿ ಆಗಾಗ ಆ ಸ್ವಾಮೀಜಿ ಹೆಸರನ್ನು ಪ್ರಸ್ತಾಪಿಸುತ್ತಿದ್ದುದರಿಂದ ಅವರು ನನಗೆ ಆತ್ಮೀಯರೆಂದು ಆತ
ಭಾವಿಸಿದ್ದ.

‘ನಾನು ಅವರನ್ನು ನನ್ನ ಜೀವನದ ಭೇಟಿ ಮಾಡಿಲ್ಲ. ಭೇಟಿ ಮಾಡುತ್ತಿದ್ದಾನೇನೋ, ಆದರೆ ಅವರ ಭೀಕರ ಭಾಷಣ ಕೇಳಿ, ಭೇಟಿಯಾಗುವ ಆಸೆಯೆ ಕಮರಿ ಹೋಗಿದೆ’ ಎಂದು ಹೇಳಿದರೂ ಆತನಿಗೆ ಸಮಾಧಾನವಾಗಿರಲಿಲ್ಲ. ‘ನಿಜಗುಣಾನಂದ ಸ್ವಾಮೀಜಿ ಅವರ ಥರ ಕ್ರಾಂತಿಕಾರಿ ಸ್ವಾಮೀಜಿಯನ್ನು ನಾನು ನೋಡೇ ಇಲ್ಲ. ಅವರಿಂದ ಬಹಳ ಪ್ರಭಾವಿತನಾಗಿದ್ದೇನೆ. ಅವರ ಶಿಷ್ಯನಾಗಿ ಈ ಜೀವನವಿಡೀ ಅವರ ಸೇವೆ ಮಾಡಿಕೊಂಡಿರಬೇಕು
ಎಂದು ನಿರ್ಧರಿಸಿದ್ದೇನೆ’ ಎಂದು ಹೇಳಿದ.

‘ಹಾಗಾದರೆ ಸ್ವಾಮೀಜಿ ನಿನ್ನ ಮೇಲೆ ಯಾವ ಪ್ರಭಾವವನ್ನೇ ಬೀರಿಲ್ಲ. ಅವರು ಮನುಷ್ಯನನ್ನು ಎಲ್ಲ ಕಂದಾಚಾರ, ಮೂಢನಂಬಿಕೆಗಳಿಂದ ಮುಕ್ತರ ನ್ನಾಗಿ ಮಾಡಲು ಪ್ರಯತ್ನಿಸುತ್ತಿರುವವರು. ಆದರೆ ನೀನು ಅವರ ಸೆಳೆತಕ್ಕೆ ಸಿಕ್ಕಿ ಅವರ ಬಂದಿಯಾಗುತ್ತಿದ್ದೀಯ. ಇದು ನೀನು ಅವರಿಗೆ ಮಾಡುವ ದ್ರೋಹ’ ಎಂದು ಹೇಳಿದೆ. ಆದರೆ ಆತ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ‘ಆ ಸ್ವಾಮೀಜಿ ಡೈಲಾಗ್ ಕೇಳಲು ಮಜಾ ಆಗಿರುತ್ತದೆ. ಅದರಲ್ಲೂ ಮಾಡಲು ಏನೂ ಕೆಲಸ ಇಲ್ಲದಾಗ, ಸಮಯ ಕಳೆಯುವುದೇ ಒಂದು ಬೇನೆ ಎಂದೆನಿಸಿದಾಗ, ಆ ಸ್ವಾಮೀಜಿ ಮಾತನ್ನು ಕೇಳಬೇಕು ಮತ್ತು ಕೇಳಿ ಮರೆತು ಬಿಡಬೇಕು. ಒಮ್ಮೊಮ್ಮೆ ನೆನಪಿನಲ್ಲಿಟ್ಟುಕೊಳ್ಳಬೇಕು ಅಂದರೂ ಮರೆತು ಹೋಗುತ್ತದೆ. ಅವರ ಮಾತು ಒಂಥರಾ ಬಸ್ಸಿನಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಾ, ಟಿಕೆಟ್ ಇಲ್ಲದೇ ಪ್ರಯಾಣ ಮಾಡಿದಂತೆ. ನಮ್ಮ ನಮ್ಮ ಸ್ಟಾಪು ಬರುತ್ತಿದ್ದಂತೆ ಇಳಿದು ಹೋಗುತ್ತೇವೆಲ್ಲ, ಅದೂ ಹಾಗೇ’ ಎಂದು ಹೇಳಿದೆ.

ಅದಕ್ಕೆ ಆ ಯುವಕ, ‘ನನ್ನಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ ಕಿಂಚಿತ್ತು ಇದ್ದರೆ ಅದಕ್ಕೆ ಆ ಸ್ವಾಮೀಜಿ ಪ್ರವಚನಗಳೇ ಕಾರಣ. ನಮ್ಮ ಹಿಂದೂ ಧರ್ಮದ ಆಚರಣೆ, ಪದ್ಧತಿ, ಸಂಪ್ರದಾಯಗಳನ್ನು ಅವರು ಪರಿಣಾಮಕಾರಿಯಾಗಿ expose ಮಾಡಿದ್ದಾರೆ. ನನಗೆ ಅವರ ಈ ಗುಣ ಇಷ್ಟವಾಗುತ್ತದೆ. ಅವರು ನಮ್ಮ ಕಾಲಘಟ್ಟದ ಕ್ರಾಂತಿಕಾರಕ ಸಂತ’ ಎಂದು ಹೇಳಿದ. ನಾನು ಪ್ರತಿಕ್ರಿಯಿಸಲಿಲ್ಲ. ಆತ ಮುಂದಿನ ಏಳೆಂಟು ನಿಮಿಷಗಳವರೆಗೆ
ನಿಜಗುಣಾನಂದ ಶ್ರೀ ಸ್ತುತಿಯಲ್ಲಿ ನಿರತನಾಗಿದ್ದ.

ನನ್ನ ದಿವ್ಯ ನಿರಾಸಕ್ತಿ ಕಂಡು, ‘ನಿಮಗೆ ಅವರ ಪ್ರವಚನ ಇಷ್ಟ ವಾಗುವುದಿಲ್ಲವಾ?’ ಎಂದು ಮೆಲ್ಲಗೆ ಕೇಳಿದ. ‘ನಿಜಗುಣಾನಂದ ಸ್ವಾಮೀಜಿಗಿಂತ ಹುಲೀಕಲ್ ನಟರಾಜ್ ಮತ್ತು ನಿಡಶೇಷಿ ಬಾಬು ಗೌಡ ಅವರೇ ನನಗೆ ಇಷ್ಟವಾಗುತ್ತಾರೆ. ಯಾಕೆಂದರೆ ಹುಲೀಕಲ್ ನಟರಾಜ್ ಮತ್ತು ಬಾಬು ಗೌಡರು ಖಾವಿ ಬಟ್ಟೆ ಧರಿಸಿಲ್ಲ ಮತ್ತು ಸ್ವಾಮೀಜಿ ಎಂದು ಹೇಳಿಕೊಂಡಿಲ್ಲ’ ಎಂದೆ. ‘ಸರ್, ಉತ್ತರ ಕರ್ನಾಟಕದ ಕಡೆ ನಿಜಗುಣಾನಂದರ ಪ್ರವಚನ  ಇದೆಯೆಂದರೆ ಸಾವಿರಾರು ಜನ ಸೇರುತ್ತಾರಂತೆ, ಗೊತ್ತಾ?’ ಎಂದು ಕೇಳಿದ. ‘ಸಾಧು ಕೋಕಿಲ, ಟೆನಿಸ್ ಕೃಷ್ಣ ಕಾರ್ಯಕ್ರಮವಿದ್ದರೆ ಅದಕ್ಕಿಂತ
ಜಾಸ್ತಿ ಜನ ಸೇರುತ್ತಾರೆ, ಗೊತ್ತಾ?’ ಎಂದೆ. ಆ ಯುವಕ ಪುಸಕ್ಕನೆ ಜಾಗ ಖಾಲಿ ಮಾಡಿದ್ದು ಗೊತ್ತೇ ಆಗಲಿಲ್ಲ.

ಮೊನ್ನೆ ಆ ಸ್ವಾಮೀಜಿಗೆ ರಾಜ್ಯೋತ್ಸವ ಪ್ರಶಸ್ತಿ ಬಂತು ಎಂದು ನಮ್ಮ ವರದಿಗಾರರು ಹೇಳಿದರು. ಸ್ವಾಮೀಜಿಯವರ ‘ಸಮಾಜ ಸೇವೆ’ಯನ್ನು ಪರಿಗಣಿಸಿ ಆ ಪ್ರಶಸ್ತಿ ನೀಡಿದ್ದಾರೆಂದು ನಂತರ ತಿಳಿದು ಬಂದಿತು. ನಿಡಶೇಷಿ ಬಾಬು ಗೌಡ ಮತ್ತು ಹುಲೇಕಲ್ ನಟರಾಜ್ ಪೈಕಿ ಒಬ್ಬರಿಗಾದರೂ ಕೊಡಬೇಕಿತ್ತು ಎಂದೆನಿಸಿತು. ಕೀರಲು ಧ್ವನಿಯಲ್ಲಿ, ಹಿಂದೂ ಧರ್ಮದ ಆಚರಣೆಗಳನ್ನು ಟೀಕಿಸುವುದು, ತಲೆಬುಡವಿಲ್ಲದ ತರ್ಕ ಮಂಡಿಸುವುದು, ಹಶಿಹಶಿ ಶಾಣ್ಯಾತನ ಮೆರೆಯುವುದನ್ನೇ ಕಂದಾಚಾರ ನಿರ್ಮೂಲನೆ ಎಂದು ಅಂದುಕೊಂಡಿರುವುದು, ಮೂಢನಂಬಿಕೆಗಳ ಬಗ್ಗೆ ಗ್ರಾಮೊಫೋನುಗಳು ಚಾಲ್ತಿಯಲ್ಲಿದ್ದಾಗ ಹೇಳುತ್ತಿದ್ದ ಸವಕಲು ಮಾತುಗಳನ್ನು ಈಗ ಆಣಿಮುತ್ತುಗಳಾಗಿ ಉದುರಿಸುತ್ತಿದ್ದಾರೆ ಎಂಬ ರೀತಿಯಲ್ಲಿ ಹೇಳಿ ಪುಳಕವಾಗುವುದನ್ನೇ ‘ಸಮಾಜಸೇವೆ’ ಎಂದು ಸರಕಾರ ಅಂದುಕೊಂಡರೆ, ನಿಜಗುಣಾನಂದ ಸ್ವಾಮೀಜಿ ಅವರಿಗೆ ಅಪಚಾರ ಮಾಡಿದಂತೆಯೇ.

ಇಷ್ಟಾಗಿಯೂ ನಿಜಗುಣಾನಂದರನ್ನು ಮೆಚ್ಚಲು ಕಾರಣಗಳಿವೆ. ತಾವು ಹೇಳುವುದು ಶುದ್ಧ ಅಪದ್ಧ, ಸವಕಲು ವಿಚಾರ ಎಂಬುದು ಗೊತ್ತಿದ್ದರೂ, ಅವರು ಅದನ್ನು ನಿರ್ಭೀತಿಯಿಂದ ಹೇಳುವ ದಾಢಸಿತನ ರೂಢಿಸಿಕೊಂಡಿzರಲ್ಲ, ಅದನ್ನು ಪ್ರಶಂಸಿಸಲೇ ಬೇಕು. ತಮ್ಮ ಮಾತುಗಳಿಂದ ಸಮಾಜದಲ್ಲಿ ನವಜಾಗೃತಿ ಉಂಟಾಗುತ್ತಿದೆ, ಕಂದಾಚಾರ ಮೂಲೋತ್ಪಾಟನೆ ಆಗಿದೆ ಎಂದು ಪರಿಭಾವಿಸಿದ್ದರಲ್ಲ, ಆ ನಂಬಿಕೆ ಬಗ್ಗೆ ಅಭಿಮಾನಪಡಲೇಬೇಕು. ಕಂದಾಚಾರ ಮತ್ತು ಮೂಢನಂಬಿಕೆ ತೀರಾ ಗಂಭೀರ ವಿಷಯಗಳಾದರೂ, ಅದಕ್ಕೆ ನವತಾರಿ ಮಾಂತ್ರಿಕನ ಸ್ಪರ್ಶ ನೀಡಿ, ಮನರಂಜನೆ ಮೂಲಕ
ಜನರಲ್ಲಿ ತಿಳಿಹಾಸ್ಯವನ್ನು ಸಿಂಪಡಿಸುವ, ಆ ಮೂಲಕ ಗಂಭೀರ ವಿಷಯವನ್ನು ದುರ್ಬಲಗೊಳಿಸುವ, ಅವರ ಕಾಳಜಿಯನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ.

ಈ ಮಧ್ಯೆ, ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಅವರು ಗಣಪತಿ ಕುರಿತು ಮಾತಾಡಿ ಸಾರ್ವಜನಿಕರ ಗೇಲಿಗೆ ಗುರಿಯಾಗಿದ್ದಾರೆ. ‘ಗಣಪತಿಯನ್ನು ಸ್ತುತಿಸುವುದು ಮೌಢ್ಯದ ಆಚರಣೆ. ಗಣಪತಿ ಕಾಲ್ಪನಿಕ ದೇವರು, ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ನೆಪ ಮಾತ್ರಕ್ಕೆ ಹುಟ್ಟಿಕೊಂಡ ದೇವರು. ಬಾಹ್ಯ ವಸ್ತುಗಳಿಂದ ಮಾಡಿದ ದೇವರುಗಳು ದೇವರಲ್ಲ. ಗಣಪತಿ ಪೂಜೆ ನಮ್ಮ ಸಂಸ್ಕೃತಿ ಅಲ್ಲ’ ಎಂದು ಹೇಳುವ ಮೂಲಕ ಕೋಟ್ಯಂತರ ಗಣೇಶ ಭಕ್ತರ ಮನಸ್ಸನ್ನು ಘಾಸಿಗೊಳಿಸಿದ್ದಾರೆ. ಇದೊಂದು ಉದ್ಧಟತನದ, ಬಾಲಿಶ ಮತ್ತು ಬೇಜವಾಬ್ದಾರಿ ಹೇಳಿಕೆಯಾಗಿದ್ದು, ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬುದು ಬೇರೆ ಮಾತು. ಅಲ್ಲದೇ ಇಂಥ ಹೇಳಿಕೆಗಳಿಂದ ಏನೂ ಆಗುವುದಿಲ್ಲ. ಆದರೆ ಸಾರ್ವಜನಿಕವಾಗಿ ಹೀಗೆ ಹಲುಬುವುದು ಕೆಲವರಿಗೆ ವ್ಯಸನವಾಗಿಬಿಟ್ಟಿದೆ.

ಶತಶತಮಾನಗಳಿಂದ ಆಚರಣೆಯಲ್ಲಿರುವ ನಂಬಿಕೆ, ಅಭಿಪ್ರಾಯಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿ, ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವುದು, ಆ ಮೂಲಕ ಚಲಾವಣೆಗೆ ಬರಲು ಬಯಸುವುದು ಹೊಸ ತಂತ್ರವೇನಲ್ಲ. ತಮ್ಮ ಎಡಬಿಡಂಗಿ ಹೇಳಿಕೆಯಿಂದ ತುಸು ವಿಹ್ವಲರಾದ ಸಾಣೇಹಳ್ಳಿಶ್ರೀಗಳು ತಾವು ಲಿಂಗಾಯತರ ಕುರಿತಾಗಿ ಹಾಗೆ ಹೇಳಿದ್ದು ಎಂದು ತಿಪ್ಪೆ ಸಾರಿಸುವ ತಂತ್ರಕ್ಕೆ ಶರಣಾಗಿರುವುದು ಅವರ ವಿಚಾರ ಶುಷ್ಕಭರಿತವಾಗಿರುವುದನ್ನು ಸಾಬೀತುಪಡಿಸಿದೆ.

ಗಣಪತಿಯನ್ನು ಪೂಜಿಸುವ, ಆರಾಧಿಸುವವರಲ್ಲಿ ಲಿಂಗಾಯತರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬುದನ್ನು ಒಪ್ಪಿದರೂ, ಸ್ವಾಮೀಜಿ ಅವರ ಹೇಳಿಕೆ ಅಸಂಬದ್ಧ ಎಂಬ ನಿರ್ಧಾರಕ್ಕೆ ಬರಬಹುದು. ನಮ್ಮ ನಾಡಿನಲ್ಲಿ ಸಾವಿರಾರು ಗಣಪತಿ ದೇವಸ್ಥಾನಗಳಿವೆ. ಗಣಪತಿಯ ಭಕ್ತರಿಗೆ ಜಾತಿಯಿಲ್ಲ. ಎಲ್ಲ ವರ್ಗದವರೂ ಗಣಪನನ್ನು ಆರಾಧಿಸುತ್ತಾರೆ, ನಿತ್ಯ ಪೂಜಿಸುತ್ತಾರೆ. ಶಿವನ ಮಗ ಮತ್ತು ಪಾರ್ವತಿಯ ಮಾನಸಪುತ್ರನಾದ ಗಣಪತಿ, ಪ್ರಥಮ
ವಂದಿತ ಮತ್ತು ದೇವರುಗಳ ಪೈಕಿ ಅತ್ಯಂತ ಶಕ್ತಿವಂತ ಎಂಬ ನಂಬಿಕೆ ಎಲ್ಲ ಸಮುದಾಯಗಳ ಜನರಲ್ಲೂ ಇದೆ. ಸಾರ್ವಜನಿಕರಲ್ಲಿ ಹಾಸು  ಹೊಕ್ಕಾಗಿರುವ ಮೂಲಭೂತ ನಂಬಿಕೆಗಳಿಗೆ ಘಾಸಿ ಯಾಗುವ ಕೆಲಸವನ್ನು ಯಾರೇ ಮಾಡಿದರೂ ಅದು ಉದ್ಧಟತನ, ಉಪದ್ವ್ಯಾಪಿತನ ಎಂದು ಕರೆಯಿಸಿಕೊಳ್ಳುತ್ತದೆ. ವಚನಗಳಲ್ಲೂ ಗಣಪತಿಯ ಸ್ತುತಿಯ ಪ್ರಸ್ತಾಪವಿದೆ.

ಗಣಪತಿ ಯಾರಿಗೂ ಬೇಡದ ದೇವರಲ್ಲ. ಇಲ್ಲಿ ತನಕ ಅವನಿಗೆ ಯಾರೂ ಬಹಿಷ್ಕಾರ ಹಾಕಿಲ್ಲ. ಆದರೆ ಸಾಣೇಹಳ್ಳಿ ಶ್ರೀಗಳು ಜನಮಾನಸದಲ್ಲಿ ಬೇರೂರಿರುವ ಸ್ಥಾಪಿತ ನಂಬಿಕೆಗಳಿಗೆ ತುಕ್ಕುಗತ್ತಿ ಮೂಲಕ ಸಾಣೆ ಹಿಡಿಯುವ ಕೆಲಸವನ್ನು ಮಾಡಿ, ಗಣಪತಿ ಭಕ್ತರ ಭಾವನೆಗಳನ್ನು ಘಾಸಿಗೊಳಿಸಿ
ರುವುದು ಅವಿವೇಕತನದ ನಡೆ ಎಂದೇ ಹೇಳಬೇಕಾಗುತ್ತದೆ. ಸ್ವಾಮೀಜಿಯವರು ಲಿಂಗಾಯತರಿಗೇ ಈ ಮಾತನ್ನು ಹೇಳಿದ್ದಾರೆ ಎಂದಿಟ್ಟುಕೊಳ್ಳೋಣ. ಲಿಂಗಾಯತರಲ್ಲೂ ಗಣಪತಿಯನ್ನು ಆರಾಽಸುವವರು, ಪೂಜಿಸುವವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಎಂದಂತಾಯಿತಲ್ಲವೇ? ಅದನ್ನು ಪರಿಗಣಿಸಿಯೇ ಅವರು ಉದ್ದೇಶಪೂರ್ವಕವಾಗಿ ಹಾಗೆ ಹೇಳಿದ್ದಾರೆ ಎಂದಂತಾಯಿತಲ್ಲವೇ? ಜನರ ಶ್ರದ್ಧೆ, ಭಕ್ತಿ, ನಂಬಿಕೆಗಳ ಮೇಲೆ ಪ್ರಹಾರ
ಮಾಡುವ ಹೊಣೆಗಾರಿಕೆಯನ್ನು ಸ್ವಾಮೀಜಿಯವರಿಗೆ ಕೊಟ್ಟವರು ಯಾರು? ಇದು ಸಮಾಜಘಾತಕ ಕೆಲಸವಲ್ಲವೇ? ಸಹಸ್ರಾರು ವರ್ಷಗಳ ಧಾರ್ಮಿಕ ಆಚರಣೆ, ಸಂಪ್ರದಾಯ, ಪರಂಪರೆ, ನಂಬಿಕೆಗಳಲ್ಲಿ ಹುಳಿ ಹಿಂಡುವ ಕೆಲಸವನ್ನು ಸ್ವಾಮೀಜಿಯವರು ಮಾಡಿದಂತಾಯಿತಲ್ಲವೇ? ಯಾವ ದೇವರನ್ನು ಪೂಜಿಸಬೇಕು, ಯಾವ ಸ್ತೋತ್ರ ಪಠಿಸಬೇಕು ಎಂಬುದು ಅವರವರಿಗೆ ಬಿಟ್ಟ ವಿಚಾರ.

ಸ್ವಾಮೀಜಿಯವರಿಗೇಕೆ ಈ ಉಸಾಬರಿ? ಇಷ್ಟು ವರ್ಷ ಗಳಿಂದ ಗಣಪತಿಯನ್ನು ಆರಾಧಿಸಿಕೊಂಡು ಬಂದವರಿಗೆ (ಲಿಂಗಾಯತರನ್ನು ಸೇರಿಸಿ), ಈಗ ಪೂಜಿಸಬೇಡಿ, ಅದು ನಮ್ಮ ಸಂಸ್ಕೃತಿ ಅಲ್ಲ ಎಂದು ಹೇಳಿದರೆ ಏನಾಗಬೇಡ? ಅದರಿಂದ ಜನಸಾಮಾನ್ಯರ ಧಾರ್ಮಿಕ ಭಾವನೆಗಳ ಮೇಲೆ ಅದೆಂಥ
ಆಘಾತವಾಗಬಹುದು? ಇಂಥ ತಿರಸಟ್ಟು ಮತ್ತು ಅವಿವೇಕದ ಹೇಳಿಕೆ ನೀಡುವ ಮುನ್ನ ಈ ಎಲ್ಲ ಸೂಕ್ಷ್ಮ ಸಂಗತಿಗಳನ್ನು ಸ್ವಾಮೀಜಿಯವರು ಯೋಚಿಸಬೇಕಿತ್ತು, ಅರಿಯಬೇಕಿತ್ತು.

ಗಣಪತಿ ಪೂಜೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ ಎನ್ನುವುದಾದರೆ, ಅವರ ಭಕ್ತರ ಮನೆಗೆ ಹೋಗಿ ಪಾದಪೂಜೆ ಮಾಡಿಸಿಕೊಳ್ಳುವ ಸ್ವಾಮಿಗಳದು ಯಾವ ಸಂಸ್ಕೃತಿ ಎಂದು ಕೇಳಲೇ ಬೇಕಾಗುತ್ತದೆ. ದೇವರ ಹೆಸರಲ್ಲಿ ಜನರ ಮಧ್ಯೆ ಬಿರುಕು ಮೂಡಿ ಸುವ, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ, ಮನಸ್ಸು-ಮನಸ್ಸುಗಳನ್ನು ಒಡೆಯುವ, ನಂಬಿಕೆಗಳನ್ನು ಶಿಥಿಲ ಗೊಳಿಸುವ ಕೆಲಸವನ್ನು ಸಮಾಜದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ
ಸ್ವಾಮೀಜಿಗಳು ಮಾಡಬಾರದು. ತಮ್ಮ ಹೇಳಿಕೆಯಿಂದ ಎಂಥ ತಪ್ಪು ಸಂದೇಶ ಹೋಗುತ್ತದೆ ಎಂಬ ವಿವೇಕ ಉನ್ನತ ಸ್ಥಾನದಲ್ಲಿ ಇರುವವರಿಗೆ ಇರಬೇಕು. ಸಾಣೇಹಳ್ಳಿ ಶ್ರೀಗಳು ಸಮಜಾಯಿಷಿ ಕೊಟ್ಟು ಈ ವಿಷಯದಲ್ಲಿ ಮೂಡಿರುವ ಗೊಂದಲ ನಿವಾರಿಸುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಆ ಕೆಲಸವನ್ನು ಪಂಡಿತಾರಾಧ್ಯ ಸ್ವಾಮೀಜಿಯವರು ಮಾಡಲಿ. ಅವರ ಬಗ್ಗೆ ನಾವೆಲ್ಲ ಉಳಿಸಿಕೊಂಡಿರುವ ಅಭಿಮಾನ, ಗೌರವವನ್ನು ಕಾಪಾಡಿಕೊಳ್ಳಲಿ.

ಎವರೆ ಏರಿದ ಬಳಿಕ..
ಮೌಂಟ್ ಎವರೆನ್ನು ಮೊದಲ ಬಾರಿಗೆ ಏರಿದ ಸರ್ ಎಡ್ಮಂಡ್ ಹಿಲ್ಲರಿ ಕುರಿತು ಒಂದು ಕಥೆಯಿದೆ. ಆತ ಎವರೆ ಪರ್ವತವನ್ನೇರಿ ಬೇಸ್ ಕ್ಯಾಂಪ್‌ಗೆ ಬಂದಾಗ, ವರದಿಗಾರರು ಆತನನ್ನು ಸುತ್ತು ವರಿದು, ‘ಜಗತ್ತಿನ ಅತಿ ಎತ್ತರದ ಪರ್ವತದ ಮೇಲೆ ನಿಂತಾಗ ನಿಮಗೆ ಕಾಣಿಸಿದ್ದೇನು?’ ಎಂದು ಕೇಳಿದರು. ಅದಕ್ಕೆ ಹಿಲ್ಲರಿ, ‘ಅದೊಂದು ಅದ್ಭುತ ದೃಶ್ಯ. ಅದನ್ನು ನನ್ನಿಂದ ವರ್ಣಿಸಲು ಸಾಧ್ಯವಿಲ್ಲ. ನಾನು ಎವರೆ ತುತ್ತ ತುದಿಯಲ್ಲಿದ್ದಾಗ,
ಮತ್ತೊಂದು ಪರ್ವತ ಶ್ರೇಣಿ ನನಗೆ ಕಾಣಿಸಿತು. ನಾನು ಅದನ್ನು ಏರಿಲ್ಲವಲ್ಲ ಎಂದೆನಿಸಿತು. ಆ ಪರ್ವತವನ್ನು ಏರುವುದು ಹೇಗೆ, ಯಾವ ಮಾರ್ಗ ಬಳಸಿ ಅದನ್ನು ಏರಬೇಕು ಎಂದು ನಾನು ನನ್ನ ಮನಸ್ಸಿನಲ್ಲಿ ಯೋಚಿಸುತ್ತಿದ್ದೆ’ ಎಂದು ಹೇಳಿದ.

ಜಗತ್ತಿನಲ್ಲಿ ಯಾರೂ ಮಾಡದ ಸಾಹಸ ಮಾಡಿ ವಾಪಸ್ ಬಂದಾಗ, ಹಿಲ್ಲರಿ ಸಮಾಧಾನಪಟ್ಟುಕೊಳ್ಳಬಹುದಿತ್ತು. ಇನ್ನು ಮುಂದೆ ಯಾರು ಬೇಕಾದರೂ ಎವರೆ ಏರಲಿ, ಮೊದಲು ಏರಿದವ ಎಂಬ ದಾಖಲೆ ಮಾತ್ರ ನನ್ನ ಹೆಸರಿನಲ್ಲಿ ಶಾಶ್ವತವಾಗಿ ಇರುತ್ತದೆ, ಹೀಗಾಗಿ ಇನ್ನು ಮುಂದೆ ಎವರೆ ತಂಟೆ ನನಗೇಕೆ ಎಂದು ಆತ ಭಾವಿಸಬಹುದಿತ್ತು. ಆದರೆ ಆತ ಹಾಗೆ ಯೋಚಿಸಲಿಲ್ಲ. ತಾನು ಏರದ, ಅದಕ್ಕಿಂತ ಕಡಿಮೆ ಎತ್ತರದ, ದುರ್ಗಮವಾದ ಮತ್ತೊಂದು ಪರ್ವತ ಶಿಖರವನ್ನೇರಲು ಆತ ಆಗಲೇ ಲೆಕ್ಕ ಹಾಕುತ್ತಿದ್ದ.

ಶಿಖರದ ತುತ್ತತುದಿಯನ್ನೇರಿದ ಬಳಿಕ, ಇಡೀ ವಿಶ್ವದ ಬಗ್ಗೆ ನಿಮಗೆ ಬೇರೆಯದೇ ಆದ ದೃಷ್ಟಿಕೋನ ಮೂಡುತ್ತದೆ. ಯಾರಾದರೂ ಅಂಥ ಸ್ಥಿತಿಯಲ್ಲಿದ್ದರೆ, ಅವರ ಕಣ್ಣಳತೆ ಸಹಜವಾಗಿ ವಿಸ್ತಾರ ವಾಗುತ್ತದೆ. ಅವರು ಪ್ರಪಂಚವನ್ನು ನೋಡುವ ರೀತಿಯೂ ಬದಲಾಗುತ್ತದೆ. ಅಂಥವರು ಹಳೆಯ ಸವಾಲುಗಳನ್ನು ಹೊಸ ರೀತಿ ಯಲ್ಲಿ ನೋಡಲಾರಂಭಿಸುತ್ತಾರೆ. ಅಸಾಧ್ಯವೆನಿಸುತ್ತಿದ್ದ ಸವಾಲು ಗಳೆಲ್ಲವನ್ನೂ ಎದುರಿಸಿ ಜಯಿಸಬ ಎಂಬ ಆತ್ಮವಿಶ್ವಾಸ ಗಟ್ಟಿಗೊಳ್ಳ ಲಾರಂಭಿಸುತ್ತದೆ.

ಎವರೆ ಏರಿ, ಇಳಿದು ಬಂದ ಬಳಿಕ ಹಿಲ್ಲರಿ ವಿರಮಿಸಲಿಲ್ಲ. ತಾನೇರದ ಹಲವು ಶಿಖರಗಳನ್ನು ಏರಿ ಬಂದ. ಪ್ರತಿ ಪರ್ವತವೂ ಹೊಸ ಸವಾಲು ಎಂದು ಪರಿಗಣಿಸಿದ. ಸಣ್ಣ ಪರ್ವತಗಳನ್ನು ಉದಾಸೀನ ಮಾಡಲಿಲ್ಲ. ತಾನು ಎವರೆ ಏರುವುದಕ್ಕಿಂತ ಮೊದಲು, ಒಂಬತ್ತು ಬಾರಿ ಬೇರೆಯವರು ಪ್ರಯತ್ನಿಸಿದ್ದರೂ ಸಫಲರಾಗದ ಸಂಗತಿ ಹಿಲ್ಲರಿಗೆ ಗೊತ್ತಿತ್ತು. ಬೇರೆಯವರು ಮಾಡಿದ ತಪ್ಪುಗಳ ಮೇಲೆ ಹೆಚ್ಚು ಗಮನ ಹರಿಸಿದ. ಎವರೆ ಇಳಿದು ಬಂದ ನಂತರ ಹಿಲ್ಲರಿ ಹೊಸ ಮನುಷ್ಯ ನಾಗಿದ್ದ. ಆತನ ಬಾಯಿಂದ ‘ನೋ’ ಎಂಬ ಮಾತುಗಳೇ ಬರುತ್ತಿರಲಿಲ್ಲ. ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದು ಅವನಿಗೆ ಮನದಟ್ಟಾಗಿತ್ತು. ಮನುಷ್ಯ ಪ್ರಯತ್ನಕ್ಕೆ ಎಲ್ಲವನ್ನೂ ಜಯಿಸುವ ತಾಕತ್ತು ಇದೆ ಎಂದು ಆತ ಹೇಳುತ್ತಿದ್ದ. ಆತ ನಿರಂತರವಾಗಿ ಹೊಸ ಸಾಧ್ಯತೆಗಳ ಶೋಧದಲ್ಲಿ ಇರುತ್ತಿದ್ದ.

ನಕಾರಾತ್ಮಕವಾಗಿ ಮಾತಾಡುವವರನ್ನು ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದ. ‘ಯಾಕೆ ಆಗೊಲ್ಲ, ಎಲ್ಲವೂ ಸಾಧ್ಯ’ ಎಂದು ಗಟ್ಟಿಯಾಗಿ ಹೇಳುತ್ತಿದ್ದ. ಆತನ ಜೀವನದ ಅದೊಂದು ಸಾಧನೆ ಆತನಲ್ಲಿ ಅಮೋಘ ಪರಿವರ್ತನೆಗೆ ಕಾರಣ ವಾಗಿತ್ತು. ಆತ ಹೊಸ ಮನುಷ್ಯನಾಗಿದ್ದ.

ಸುದ್ದಿ ಯಾವುದು ?
ನಮಗೆ ಸುದ್ದಿ ಎನಿಸಿದ್ದು ಬೇರೆಯವರಿಗೂ ಸುದ್ದಿ ಎಂದು ಅನಿಸಬೇಕಿಲ್ಲ. ‘ವಿಶ್ವವಾಣಿ’ಯಲ್ಲಿ ಮುಖಪುಟ ಸುದ್ದಿಯಾಗಿದ್ದು ಬೇರೆ ಪತ್ರಿಕೆಗಳಲ್ಲಿ ಒಳಪುಟದ ಸುದ್ದಿ ಆಗಬಹುದು. ಒಬ್ಬೊಬ್ಬರ ತೀರ್ಪು ಒಂದೊಂದು ರೀತಿ. ಆದರೆ ಕೆಲವು ಸುದ್ದಿ ಎಲ್ಲಿದ್ದರೂ ಸುದ್ದಿಯೇ. ಅದು ಎಲ್ಲ ಪತ್ರಿಕೆಗಳಲ್ಲೂ ಮುಖಪುಟ ಸುದ್ದಿಯೇ. ಪೋಪ್‌ಗೆ ಏನಾದರೂ ಆಗಲಿ, ಅದು ಜಗತ್ತಿನ ಬಹುತೇಕ ಪತ್ರಿಕೆ ಗಳಿಗೆ ಮುಖಪುಟ ಸುದ್ದಿ. ಆದರೆ ಯಾರೂ ಅದು ಸುದ್ದಿಯೇ
ಅಲ್ಲ ಎಂದು ಪರಿಗಣಿಸಲಾರರು. ಇತ್ತೀಚೆಗೆ ನೆದರ್ ಲ್ಯಾಂಡಿನ ಪ್ರಧಾನಮಂತ್ರಿ ಮಾರ್ಕ್ ರುಟ್ಟೆ ಬೆಂಗಳೂರಿಗೆ ಆಗಮಿಸಿದ್ದರು. ಅವರು ನಗರದಲ್ಲಿ ಸೈಕಲ್ ಚಲಾಯಿಸಿ ಎಲ್ಲರನ್ನೂ ಬೆರಗುಗೊಳಿಸಿದರು. ತಮ್ಮ ದೇಶದಲ್ಲಿ ಸೈಕಲ್ ಚಲಾಯಿಸುವಂತೆಯೇ ಬಿಡುಬೀಸಾಗಿ ಅವರು ಬೆಂಗಳೂರಿನ ವಾಹನದಟ್ಟಣೆಯ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡಿದರು.

ಸೈಕಲ್ ಚಾಲನೆ ಮಾತ್ರವಲ್ಲ ಅವರು ಚರ್ಚ್ ಸ್ಟ್ರೀಟ್‌ನಲ್ಲಿ ವಾಕ್ ಕೂಡ ಮಾಡಿದರು. ಅವರು ಯಾರು ಎಂದು ಯಾರಿಗೂ ಗೊತ್ತಿರಲಿಲ್ಲ, ಗೊತ್ತಾಗಲೂ ಇಲ್ಲ. ಪೋಲೀಸರ ಮೂಲಕ ಅವರ ಕುರಿತಾಗಿ ತಿಳಿದುಕೊಂಡ ಅನೇಕ ಮಂದಿ ಸೆಲಿ ತೆಗೆದುಕೊಳ್ಳಲು ಮುಗಿಬಿದ್ದರು. ಅವರು ಕೂಡ
ಅ ರಸ್ತೆ ಪಕ್ಕದ ಅಂಗಡಿಯಲ್ಲಿ ಚಾಯ್ ಆರ್ಡರ್ ಮಾಡಿ ಸೇವಿಸಿದರು. ಯು.ಪಿ.ಐ. ಮೂಲಕ ಹಣ ಪಾವತಿ ಮಾಡಿದರು. ಅಂಗಡಿಯವನೊಂದಿಗೆ ಸೆಲಿ ತೆಗೆಸಿಕೊಂಡರು. ಅಷ್ಟೇ ಅಲ್ಲ, ಬಿಬಿಎಂಪಿ ಅಧಿಕಾರಿಗಳೊಂದಿಗೆ ಸೈಕ್ಲಿಂಗ್‌ಗೆ ಮೂಲಭೂತ ಸೌಕರ್ಯ ಒದಗಿಸುವ ಕುರಿತಾಗಿ ಚರ್ಚೆ ಕೂಡ ಮಾಡಿದರು.

ರಸ್ತೆ ಪಕ್ಕದ ಕಟ್ಟಡಗಳ ಬಾಲ್ಕನಿಯಲ್ಲಿ ನಿಂತಿದ್ದ, ಕಿಟಿಕಿಗಳಿಂದ ಇಣುಕುತ್ತಿದ್ದ ಜನರತ್ತ ಕೈಬೀಸಿದ ರುಟ್ಟೆ, ರಸ್ತೆಯಲ್ಲಿದ್ದ ಎಲ್ಲರೊಂದಿಗೂ ಮಾತಾಡಿ ಸಣ್ಣ ಶಾಕ್ ಕೊಟ್ಟರು. ನಗುಮೊಗದಿಂದ ಎಲ್ಲರನ್ನೂ ಆಪ್ತವಾಗಿ ಕಂಡರು. ಕೆಲವರಿಗೆ ಅನುಮಾನ, ನಿಜಕ್ಕೂ ಇವರು ಒಂದು ದೇಶದ ಪ್ರಧಾನಿಯಾ ಎಂದು. ಮರುದಿನ ರುಟ್ಟೆ ಅವರ ಫೋಟೋ ಎಲ್ಲ ಪತ್ರಿಕೆಗಳಲ್ಲಿ ಮುಖಪುಟದಲ್ಲಿ ಪ್ರಕಟವಾಗಿತ್ತು. ಆದರೆ ನೆದರಲ್ಯಾಂಡ್ ಪತ್ರಿಕೆಗಳಲ್ಲಿ ಪ್ರಧಾನಿ ಭಾರತ ಭೇಟಿ ಬಗ್ಗೆ, ಸೈಕಲ್ ಸವಾರಿ ಬಗ್ಗೆ ಒಂದೇ ಒಂದು ಅಕ್ಷರವಾಗಲಿ, ಫೋಟೋವಾಗಲಿ ಪ್ರಕಟವಾಗಿರಲಿಲ್ಲ.