Thursday, 19th September 2024

ಸಾಣೇಹಳ್ಳಿ ಶ್ರೀಗಳೇ, ಸಾಕು ಮಾಡಿ ನಮ್ಮ ಗೊಡ್ಡುಪುರಾಣ !

ನೂರೆಂಟು ವಿಶ್ವ

vbhat@me.com

ಅಪಕ್ವ ಮತ್ತು ಬಾಲಿಶ ವಿಚಾರಗಳನ್ನು ಪ್ರಸ್ತಾಪಿಸಿ, ತಾವೊಬ್ಬ ಪ್ರಗತಿಪರ ಸ್ವಾಮೀಜಿ ಎಂಬುದನ್ನು ಬಿಂಬಿಸಲು ಹೋಗಿ ಸಾಣೇಹಳ್ಳಿ ಶ್ರೀಗಳು ಆಗಾಗ ಉಪದ್ವ್ಯಾಪ ಮಾಡುತ್ತಿರುವುದು ಹೊಸತೇನಲ್ಲ. ‘ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ’ ಎಂಬ ಹೇಳಿಕೆಗೆ ಮೊದಲು ವಿರೋಧ ವ್ಯಕ್ತವಾಗಿದ್ದು ಲಿಂಗಾಯತರಿಂದಲೇ ಎಂಬ ಸತ್ಯ ಸಾಣೇಹಳ್ಳಿ ಶ್ರೀಗಳಿಗೆ ಇನ್ನಾದರೂ ಅರ್ಥವಾಗಬೇಕಿದೆ.

ಕಳೆದ ವಾರ ಓದುಗರೊಬ್ಬರು, ‘ಭಟ್ಟರ್ ಸ್ಕಾಚ್’ ಅಂಕಣ (ಓದುಗರ ಪ್ರಶ್ನೆಗಳಿಗೆ ನನ್ನ ಉತ್ತರ)ದಲ್ಲಿ ‘ಭಟ್ರೇ, ವಯಸ್ಸಾದರೂ ಬುದ್ಧಿ ಬರುವುದಿಲ್ಲವಲ್ಲ?’
ಎಂಬ ಪ್ರಶ್ನೆ ಕೇಳಿದ್ದರು. ಅದಕ್ಕೆ ನಾನು, ‘ವಯಸ್ಸಾದರೆ ಕೆಲವರಿಗೆ ಬುದ್ಧಿ ಹೋಗುತ್ತದೆ!’ ಎಂದು ಉತ್ತರಿಸಿದೆ. ಈ ಉತ್ತರವನ್ನು ಬರೆಯುವಾಗ ನನ್ನ ಮನಸ್ಸಿನಲ್ಲಿ ಯಾರೂ ಇರಲಿಲ್ಲ. ಆದರೆ ಕಾಕತಾಳೀಯ ಎಂಬಂತೆ, ಮರುದಿನದ ಪತ್ರಿಕೆಗಳಲ್ಲಿ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಹಿಂದೂ ಧರ್ಮದ ಕುರಿತಾಗಿ ಹೇಳಿದ ಮಾತುಗಳನ್ನು ಓದಿದೆ.

ಅದಾದ ನಂತರ, ‘ಭಟ್ಟರ್ ಸ್ಕಾಚ್’ನಲ್ಲಿ ಬರೆದ ಉತ್ತರ ಪಂಡಿತಾರಾಧ್ಯ ಸ್ವಾಮಿಗಳಿಗೆ ಅತ್ಯಂತ ಸಮರ್ಪಕವಾಗಿ ಒಪ್ಪುತ್ತದೆ ಎಂದು ಖಾತ್ರಿ ಆಯಿತು. ಹೌದು, ಕೆಲವರಿಗೆ ವಯಸ್ಸಾಗುತ್ತಿದ್ದಂತೆ ಬುದ್ಧಿ ಹೊರಟುಹೋಗುತ್ತದೆ! ಇತ್ತೀಚಿನ ದಿನಗಳಲ್ಲಿ ಸಾಣೇಹಳ್ಳಿ ಶ್ರೀಗಳು ಅಸಂಬದ್ಧ ಮತ್ತು ತೋಳಸಂಬಟ್ಟೆ ಹೇಳಿಕೆಗಳನ್ನು ನೀಡುತ್ತಾ ಸಾರ್ವಜನಿಕರು ಮತ್ತು ತಮ್ಮ ಭಕ್ತರ ಮುಂದೆಯೇ ಅಪಹಾಸ್ಯಕ್ಕೆ ಈಡಾಗುತ್ತಿದ್ದಾರೆ.

ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಬೇಕಾದ ಮಠಾಧಿಪತಿಗಳು, ತಮ್ಮ ಅರೆಬೆಂದ ಮತ್ತು ಅವಿವೇಕದ ಹೇಳಿಕೆಗಳಿಂದ ಸಾರ್ವಜನಿಕರ ಮುಂದೆ
ಗೇಲಿಗೊಳಗಾಗುತ್ತಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ, ಶ್ರೀಗಳು ಪ್ರಸ್ತಾಪಿಸಿರುವ ವಿಚಾರದಿಂದ ಸಾರ್ವಜನಿಕರು ಗೊಂದಲಕ್ಕೀಡಾಗಿಲ್ಲ. ಆದರೆ ಶ್ರೀಗಳ ಬುದ್ಧಿಮಟ್ಟದ ಬಗ್ಗೆ ಅವರು ಯೋಚಿಸುವಂತಾಗಿರುವುದು ಕಳವಳಕಾರಿ ಸಂಗತಿ. ಅರಳು-ಮರಳು ಕವಿದವರಂತೆ ಶ್ರೀಗಳು, ತಮ್ಮ ಶುದ್ಧ ತಿಕ್ಕಲು ಹೇಳಿಕೆಗಳಿಂದ ತಮ್ಮ ಬುದ್ಧಿಗೆ ‘ಸಾಣೆ’ ಹಿಡಿಯುವ ಕೆಲಸ ಮಾಡಿದ್ದರೆ ಒಳ್ಳೆಯದಿತ್ತು ಎಂದು ಅನಿಸುವ ರೀತಿಯಲ್ಲಿ ಮಾತಾಡುತ್ತಿರುವುದು, ಅವರ ಬಗ್ಗೆ
ಇದ್ದಬದ್ದ ಗೌರವ ಇಟ್ಟುಕೊಳ್ಳುವವರೂ ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮಾಡಿದೆ.

ಸುಮಾರು ಹತ್ತು ತಿಂಗಳ ಹಿಂದೆ, ಇದೇ ಸಾಣೇಹಳ್ಳಿ ಶ್ರೀಗಳು ಗಣಪತಿ ಕುರಿತು ಮಾತಾಡಿ ಸಾರ್ವಜನಿಕರ ಕಟುಟೀಕೆಗೆ ಗುರಿಯಾಗಿದ್ದರು. ‘ಗಣಪತಿಯನ್ನು
ಸ್ತುತಿಸುವುದು ಮೌಢ್ಯದ ಆಚರಣೆ. ಗಣಪತಿ ಕಾಲ್ಪನಿಕ ದೇವರು, ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ನೆಪ ಮಾತ್ರಕ್ಕೆ ಹುಟ್ಟಿಕೊಂಡ ದೇವರು. ಬಾಹ್ಯ ವಸ್ತುಗಳಿಂದ ಮಾಡಿದ ದೇವರುಗಳು ದೇವರಲ್ಲ. ಗಣಪತಿ ಪೂಜೆ ನಮ್ಮ ಸಂಸ್ಕೃತಿ ಅಲ್ಲ’ ಎಂದು ಹೇಳುವ ಮೂಲಕ ಕೋಟ್ಯಂತರ ಗಣೇಶ ಭಕ್ತರ ಮನಸ್ಸನ್ನು ಘಾಸಿಗೊಳಿಸಿದ್ದರು. ಇದೊಂದು ಉದ್ಧಟತ ನದ, ಬಾಲಿಶ ಮತ್ತು ಬೇಜವಾಬ್ದಾರಿ ಹೇಳಿಕೆಯಾಗಿತ್ತು, ಪುಣ್ಯವಶಾತ್ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ ಎಂಬುದು ಬೇರೆ ಮಾತು. ಅಲ್ಲದೇ ಇಂಥ ಹೇಳಿಕೆಗಳಿಂದ ಏನೂ ಆಗುವುದಿಲ್ಲ. ಆದರೆ ಸಾರ್ವಜನಿಕವಾಗಿ ಹೀಗೆ
ಹಲುಬುವುದು ಶ್ರೀಗಳಿಗೆ ವ್ಯಸನವಾಗಿಬಿಟ್ಟಿದೆ.

ಶತಶತಮಾನಗಳಿಂದ ಆಚರಣೆಯಲ್ಲಿರುವ ನಂಬಿಕೆ, ಅಭಿಪ್ರಾಯಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿ, ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವುದು, ಆ ಮೂಲಕ ಚಲಾವಣೆಗೆ ಬರಲು ಬಯಸುವುದು ಹೊಸ ತಂತ್ರವೇನಲ್ಲ. ತಮ್ಮ ಎಡಬಿಡಂಗಿ ಹೇಳಿಕೆಯಿಂದ ತುಸು
ವಿಹ್ವಲರಾದ ಸಾಣೇಹಳ್ಳಿ ಶ್ರೀಗಳು ತಾವು ಲಿಂಗಾಯತರ ಕುರಿತಾಗಿ ಹಾಗೆ ಹೇಳಿದ್ದು ಎಂದು ಆಗ ತಿಪ್ಪೆ ಸಾರಿಸುವ ತಂತ್ರಕ್ಕೆ ಶರಣಾಗಿದ್ದರು. ಅದು ಅವರ ವಿಚಾರ ಶುಷ್ಕಭರಿತವಾಗಿರುವುದನ್ನು ಸಾಬೀತುಪಡಿಸಿತ್ತು. ಗಣಪತಿಯನ್ನು ಪೂಜಿಸುವವರಲ್ಲಿ, ಆರಾಧಿಸುವವರಲ್ಲಿ ಲಿಂಗಾಯತರೂ ಹೆಚ್ಚಿನ ಸಂಖ್ಯೆಯಲ್ಲಿ ಇzರೆ ಎಂಬುದು ಗೊತ್ತಿದ್ದೂ, ಸ್ವಾಮೀಜಿ ಅಂಥ ಅಸಂಬದ್ಧ ಹೇಳಿಕೆ ನೀಡಲು ಮುಂದಾಗಿದ್ದರು.

ನಮ್ಮ ನಾಡಿನಲ್ಲಿ ಸಾವಿರಾರು ಗಣಪತಿ ದೇವಸ್ಥಾನಗಳಿವೆ. ಕೋಟ್ಯಂತರ ಭಕ್ತರಿzರೆ. ಗಣಪತಿಯ ಭಕ್ತರಿಗೆ ಜಾತಿಯಿಲ್ಲ. ಎಲ್ಲ ವರ್ಗದವರೂ ಗಣಪತಿಯನ್ನು ಆರಾಧಿಸುತ್ತಾರೆ, ನಿತ್ಯ ಪೂಜಿಸುತ್ತಾರೆ. ಶಿವನ ಮಗ ಮತ್ತು ಪಾರ್ವತಿಯ ಮಾನಸ ಪುತ್ರನಾದ ಗಣಪತಿ, ಪ್ರಥಮ ವಂದಿತ ಮತ್ತು ದೇವರುಗಳ ಪೈಕಿ ಅತ್ಯಂತ ಶಕ್ತಿವಂತ ಎಂಬ ನಂಬಿಕೆ ಎಲ್ಲ ಸಮುದಾಯಗಳ ಜನರಲ್ಲೂ ಇದೆ. ಸಾರ್ವಜನಿಕರಲ್ಲಿ ಹಾಸುಹೊಕ್ಕಾಗಿರುವ ಮೂಲಭೂತ ನಂಬಿಕೆಗಳಿಗೆ ಘಾಸಿಯಾಗುವ ಕೆಲಸವನ್ನು ಯಾರೇ ಮಾಡಿದರೂ ಅದು ಉದ್ಧಟತನ, ಉಪದ್ವ್ಯಾಪಿತನ ಎಂದು ಕರೆಯಿಸಿಕೊಳ್ಳುತ್ತದೆ. ವಚನಗಳಲ್ಲೂ ಗಣಪತಿಯ ಸ್ತುತಿಯ ಪ್ರಸ್ತಾಪವಿದೆ. ಗಣಪತಿ ಯಾರಿಗೂ ಬೇಡದ ದೇವರಲ್ಲ.

ಇಲ್ಲಿ ತನಕ ಅವನಿಗೆ ಯಾರೂ ಬಹಿಷ್ಕಾರ ಹಾಕಿಲ್ಲ. ಆದರೆ ಸಾಣೇಹಳ್ಳಿ ಶ್ರೀಗಳು ಜನಮಾನಸದಲ್ಲಿ ಬೇರೂರಿರುವ ಸ್ಥಾಪಿತ ನಂಬಿಕೆಗಳಿಗೆ ವಿರುದ್ಧವಾದ ಹೇಳಿಕೆ ನೀಡಿ, ಆಗ ಗಣಪತಿ ಭಕ್ತರ ಭಾವನೆಗಳನ್ನು ಘಾಸಿಗೊಳಿಸಿದ್ದರು. ಸ್ವಾಮೀಜಿಯವರು ಆಗ ಲಿಂಗಾಯತರಿಗೇ ಈ ಮಾತನ್ನು ಹೇಳಿದ್ದಾರೆ ಎಂದಿಟ್ಟುಕೊಳ್ಳೋಣ. ಲಿಂಗಾಯತರಲ್ಲೂ ಗಣಪತಿಯನ್ನು ಆರಾಧಿಸುವವರು, ಪೂಜಿಸುವವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಎಂದಂತಾ ಯಿತಲ್ಲವೇ? ಅದನ್ನು ಪರಿಗಣಿಸಿಯೇ ಅವರು ಉದ್ದೇಶಪೂರ್ವಕವಾಗಿ ಹಾಗೆ ಹೇಳಿದ್ದಾರೆ ಎಂದಂತಾಯಿತಲ್ಲವೇ? ಜನರ ಶ್ರದ್ಧೆ, ಭಕ್ತಿ, ನಂಬಿಕೆಗಳ ಮೇಲೆ ಪ್ರಹಾರ ಮಾಡುವ ಹೊಣೆಗಾರಿಕೆಯನ್ನು ಸ್ವಾಮೀಜಿಯವರಿಗೆ ಕೊಟ್ಟವರು ಯಾರು? ಇದು ಸಮಾಜಘಾತಕ ಕೆಲಸವಲ್ಲವೇ? ಸಹಸ್ರಾರು ವರ್ಷಗಳ
ಧಾರ್ಮಿಕ ಆಚರಣೆ, ಸಂಪ್ರದಾಯ, ಪರಂಪರೆ, ನಂಬಿಕೆಗಳಲ್ಲಿ ಹುಳಿ ಹಿಂಡುವ ಕೆಲಸವನ್ನು ಸ್ವಾಮೀಜಿಯವರು ಮಾಡಿದಂತಾಯಿತಲ್ಲವೇ? ಯಾವ ದೇವರನ್ನು ಪೂಜಿಸಬೇಕು, ಯಾವ ಸ್ತೋತ್ರ ಪಠಿಸಬೇಕು ಎಂಬುದು ಅವರವರಿಗೆ ಬಿಟ್ಟ ವಿಚಾರ.

ಸ್ವಾಮೀಜಿಯವರಿಗೇಕೆ ಈ ಉಸಾಬರಿ? ಇಷ್ಟು ವರ್ಷಗಳಿಂದ ಗಣಪತಿಯನ್ನು ಆರಾಧಿಸಿಕೊಂಡು ಬಂದವರಿಗೆ (ಲಿಂಗಾಯತರನ್ನು ಸೇರಿಸಿ), ಈಗ ಪೂಜಿಸಬೇಡಿ, ಅದು ನಮ್ಮ ಸಂಸ್ಕೃತಿ ಅಲ್ಲ ಎಂದು ಹೇಳಿದರೆ ಏನಾಗಬೇಡ? ಅದರಿಂದ ಜನಸಾಮಾನ್ಯರ ಧಾರ್ಮಿಕ ಭಾವನೆಗಳ ಮೇಲೆ ಅದೆಂಥ ಆಘಾತವಾಗಬಹುದು? ಇಂಥ ತಿರಸಟ್ಟು ಮತ್ತು ಅವಿವೇಕದ ಹೇಳಿಕೆ ನೀಡುವ ಮುನ್ನ ಈ ಎಲ್ಲ ಸೂಕ್ಷ ಸಂಗತಿಗಳನ್ನು ಸ್ವಾಮೀಜಿಯವರು ಯೋಚಿಸಬೇಕಿತ್ತು, ಅರಿಯಬೇಕಿತ್ತು.

ಗಣಪತಿ ಪೂಜೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ ಎನ್ನುವುದಾದರೆ, ಅವರ ಭಕ್ತರ ಮನೆಗೆ ಹೋಗಿ ಪಾದಪೂಜೆ ಮಾಡಿಸಿಕೊಳ್ಳುವ ಸ್ವಾಮಿಗಳದು ಯಾವ ಸಂಸ್ಕೃತಿ ಎಂದು ಅನೇಕರು ಆಗ ಕೇಳಿದ್ದರು. ದೇವರ ಹೆಸರಲ್ಲಿ ಜನರ ಮಧ್ಯೆ ಬಿರುಕು ಮೂಡಿಸುವ, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ, ಮನಸ್ಸು-ಮನಸ್ಸುಗಳನ್ನು ಒಡೆಯುವ, ನಂಬಿಕೆಗಳನ್ನು ಶಿಥಿಲಗೊಳಿಸುವ ಕೆಲಸವನ್ನು ಶ್ರೀಗಳು ಮಾಡಿದ್ದರು. ತಮ್ಮ ಹೇಳಿಕೆಯಿಂದ ಎಂಥ ತಪ್ಪು ಸಂದೇಶ ಹೋಗುತ್ತದೆ ಎಂಬ ವಿವೇಕ ಉನ್ನತ ಸ್ಥಾನದಲ್ಲಿ ಇರುವವರಿಗೆ ಇರಬೇಕಿತ್ತು. ಸಾಣೇಹಳ್ಳಿ ಶ್ರೀಗಳು ಸಮಜಾಯಿಷಿ ಕೊಟ್ಟು ಈ ವಿಷಯ ದಲ್ಲಿ ಮೂಡಿರುವ ಗೊಂದಲವನ್ನಾದರೂ ನಿವಾರಿಸಬೇಕಿತ್ತು. ಆಗ ಅವ್ಯಾವುದನ್ನೂ ಮಾಡದೇ, ಈಗ ಪುನಃ ಮನಸ್ಸುಗಳನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ.

ಗಣಪತಿ ವಿವಾದದ ನೆನಪು ಇನ್ನೇನು ನೇಪಥ್ಯಕ್ಕೆ ಸರಿಯುತ್ತಿದೆ ಎನ್ನುವಾಗ, ಸಾಣೇಹಳ್ಳಿ ಶ್ರೀಗಳು ಇನ್ನೊಂದು ಕಿತಾಪತಿ ಮಾಡಿದ್ದಾರೆ. ಕಳೆದ ವಾರ ಹೊಳಲ್ಕೆರೆಯ ಒಂಟಿಕಂಬದ ಮಠದಲ್ಲಿ ಚಿತ್ರದುರ್ಗ ಮುರುಘಾಮಠದ ಲಿಂಗೈಕ್ಯ ಮಲ್ಲಿಕಾರ್ಜುನ ಜಗದ್ಗುರುಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಶ್ರೀಗಳು ‘ಲಿಂಗಾಯತ ಧರ್ಮ, ಹಿಂದೂ ಧರ್ಮದ ಭಾಗವಲ್ಲ’ ಎಂಬ ಹೇಳಿಕೆ ನೀಡಿ, ಮತ್ತೊಮ್ಮೆ ಟೀಕೆಗೆ, ಗೇಲಿಗೆ ಗುರಿಯಾಗಿದ್ದಾರೆ. ತಮಾಷೆ ಅಂದ್ರೆ ಆ ವೇದಿಕೆಯಲ್ಲಿದ್ದ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿಯವರು, ‘ಅ ಡ್ರಾ, ಅ ಬಹುಮಾನ’
ಎನ್ನುವ ಧಾಟಿಯಲ್ಲಿ ಸಾಣೇಹಳ್ಳಿಯವರಿಗೆ ತಿರುಗೇಟು ಕೊಟ್ಟು, ಬಾಯಿಮುಚ್ಚಿಸಿದ್ದಾರೆ.

ಅಂದರೆ ಸಾಣೇಹಳ್ಳಿ ಶ್ರೀಗಳ ನಿಲುವನ್ನು ಬೇರೆಯವರಲ್ಲ, ಸ್ವತಃ ಲಿಂಗಾಯತ ಸ್ವಾಮೀಜಿಗಳೇ ಘಂಟಾಘೋಷವಾಗಿ ತಿರಸ್ಕರಿಸಿದ್ದಾರೆ. ಅಪಕ್ವ ಮತ್ತು ಬಾಲಿಶ ವಿಚಾರಗಳನ್ನು ಪ್ರಸ್ತಾಪಿಸಿ, ತಾವೊಬ್ಬ ಪ್ರಗತಿಪರ ಸ್ವಾಮೀಜಿ ಎಂಬುದನ್ನು ಬಿಂಬಿಸಲು ಹೋಗಿ ಸಾಣೇಹಳ್ಳಿ ಶ್ರೀಗಳು ಆಗಾಗ ಉಪದ್ವ್ಯಾಪ ಮಾಡುತ್ತಿರುವುದು ಹೊಸತೇನಲ್ಲ. ಇತ್ತೀಚೆಗೆ ಅವರ ಹೇಳಿಕೆಗಳನ್ನು ಲಿಂಗಾಯತರೇ ಗಂಭೀರವಾಗಿ ಸ್ವೀಕರಿಸುವುದಿಲ್ಲ. ‘ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ’ ಎಂಬ ಹೇಳಿಕೆಗೆ ಮೊದಲು ವಿರೋಧ ವ್ಯಕ್ತವಾಗಿದ್ದು ಲಿಂಗಾಯತರಿಂದಲೇ ಎಂಬ ಸತ್ಯ ಸಾಣೇಹಳ್ಳಿ ಶ್ರೀಗಳಿಗೆ ಇನ್ನಾದರೂ ಅರ್ಥವಾಗಬೇಕಿದೆ. ಶ್ರೀಗಳ ಹೇಳಿಕೆ ಅದೆಷ್ಟು ಸವಕಲು ಮತ್ತು ಅಪ್ರಸ್ತುತ ಎನ್ನುವುದು ಎಂಥವರಿಗಾದರೂ ಅರ್ಥವಾಗುತ್ತದೆ.

‘ಹಿಂದೂ ಎಂಬುದು ಒಂದರ್ಥದಲ್ಲಿ ಧರ್ಮವೇ ಅಲ್ಲ. ಅದು ಎಲ್ಲ ರೀತಿಯ ಅನಿಷ್ಟ, ಅನಾಚಾರ, ಮೂಢನಂಬಿಕೆಗಳನ್ನು ಒಳಗೊಂಡಿದೆ. ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ ಎಂಬುದನ್ನು ಅರಿಯಬೇಕು. ಹಿಂದೂ ಎಂಬುದು ಒಂದು ಧರ್ಮ ಎಂದು ಒಪ್ಪಲು ನಾನು ಸಿದ್ಧನಿಲ್ಲ. ನಾವು ಸ್ವತಂತ್ರ ಲಿಂಗಾಯತ ಧರ್ಮದವರು. ಆ ಕಾಲದಲ್ಲಿಯೇ ಬಸವಣ್ಣವರು ವೇದ, ಪುರಾಣ, ಶಾಸ್ತ್ರಗಳನ್ನು ತಿರಸ್ಕರಿಸಿದ್ದರು. ವೇದವೆಂಬುದು ಓದಿನ ಮಾತು, ಪುರಾಣ ವೆಂಬುದು ಪುಂಡರ ಗೋಷ್ಠಿ, ಶಾಸವೆಂಬುದು ಸಂತೆಯ ಸುದ್ದಿ ಎಂದು ಹೇಳುವ ಮೂಲಕ ಲಿಂಗಾಯತ ಧರ್ಮದ ಹುಟ್ಟಿಗೆ ಕಾರಣರಾದರು.

ವೈದಿಕ ಪರಂಪರೆಯ ಬೇರುಗಳು ನಮ್ಮ ತಲೆಯಲ್ಲಿ ಆಳವಾಗಿ ಬೇರೂರಿವೆ. ಈ ವೈದಿಕ ಮನಸ್ಥಿತಿಯನ್ನು ಕಿತ್ತೆಸೆಯಬೇಕು, ನಾವು ಲಿಂಗಾಯತರು ಹಿಂದೂ ಧರ್ಮದ ವ್ಯಾಪ್ತಿಯಿಂದ ಹೊರಬರಬೇಕು’ ಎಂದು ಸಾಣೇಹಳ್ಳಿ ಶ್ರೀಗಳು ಫರ್ಮಾನು ಹೊರಡಿಸಿದ್ದಾರೆ. ಹಾಗೆ ನೋಡಿದರೆ ಸಾಣೇಹಳ್ಳಿಯವರ ವಿಚಾರದಲ್ಲಿ ಯಾವ ಹೊಸ ವಿಚಾರಗಳೂ ಇಲ್ಲ. ಶ್ರೀಗಳ ಈ ಮಾತುಗಳನ್ನೇ ಬಸವಣ್ಣನವರು ಬದುಕಿದ್ದಾಗಲೂ ಕೆಲವರು ಪ್ರಸ್ತಾಪಿಸಿದ್ದರು. ಆಗಲೂ ಈ ಮಾತಿಗೆ ಪುರಸ್ಕಾರ ದೊರೆತಿರಲಿಲ್ಲ. ಅಂದಿನಿಂದ ಲಿಂಗಾಯತರನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವ ಕುತಂತ್ರಗಳು ವ್ಯವಸ್ಥಿತವಾಗಿ ನಡೆದರೂ, ಯಾವ ಪ್ರಯೋಜನವೂ ಆಗಲಿಲ್ಲ. ಕಾಲಕಾಲಕ್ಕೆ ಈ ವಿಚಾರ ಪ್ರಸ್ತಾಪವಾಗಿ ಅಲ್ಲಿಯೇ ಸತ್ತು, ಮತ್ತೆ ಯಾವಾಗಲೋ ಮರುಹುಟ್ಟು ಪಡೆದು, ಪುನಃ
ಸಾವಿಗೀಡಾಗುವುದು ನಡೆದುಕೊಂಡೇ ಬರುತ್ತಿದೆ.

ಸಾಣೇಹಳ್ಳಿ ಶ್ರೀಗಳು ಹೇಳಿದ್ದು ಯಾರಿಗೂ ಗೊತ್ತಿಲ್ಲದ gospel truth ಅಲ್ಲ. ಈ ವಾದವನ್ನು ಸಾರಾಸಗಟು ತಿರಸ್ಕರಿಸುತ್ತಾ, ಕಾಲಕಾಲಕ್ಕೆ ತಿರುಗೇಟು ಕೊಡುತ್ತಲೇ ಬಂದಿದ್ದಾರೆ. ಆದರೂ ಸಾಣೇಹಳ್ಳಿ ಸ್ವಾಮೀಜಿಯವರಂಥ ಮನಸ್ಸುಗಳು ಇಂಥ ಬಾಲಿಶ ವಾದಗಳಿಗೆ ತುಪ್ಪ ಸುರಿಯುತ್ತಲೇ ಬರುತ್ತಿವೆ.
ಸಾಣೇಹಳ್ಳಿಯವರಿಗಿಂತ ವಯಸ್ಸಿನಲ್ಲಿ ಕಿರಿಯರಾದ ವಚನಾನಂದ ಶ್ರೀಗಳು, ‘ಹಿಂದೂ ಧರ್ಮ ಮಹಾಸಾಗರವಿದ್ದಂತೆ. ಹಿಂದೂ ಧರ್ಮದ ಬಗ್ಗೆ ಜ್ಞಾನವಿಲ್ಲದವರು ಈ ಬಗ್ಗೆ ಹೆಚ್ಚು ಅಧ್ಯಯನ ಮಾಡಬೇಕು. ದೇಶದಲ್ಲಿನ ಬೌದ್ಧರು, ಜೈನರು, ಲಿಂಗಾಯತರು, ವೀರಶೈವರು ಎಲ್ಲರೂ ಹಿಂದೂಗಳೇ. ವೈದಿಕರು, ಅವೈದಿಕರು, ದ್ವೆ ತ, ಅದ್ವೆ ತ ಸೇರಿದಂತೆ ಹಿಂದೂ ಧರ್ಮ ಸರ್ವವನ್ನೂ, ಸರ್ವರನ್ನೂ ಒಳಗೊಂಡಿದೆ.

ಎಲ್ಲ ಮೂಲಪುರುಷರು, ಮಹಾಪುರುಷರು ಇದ್ದಿದ್ದು ಹಿಂದೂ ಧರ್ಮದಲ್ಲಿಯೇ. ವೀರಶೈವ, ಲಿಂಗಾಯತ ತತ್ವಗಳು ಬೇರೆ ಬೇರೆ ಇರಬಹುದು. ನಮ್ಮ ಮಠ, ಪೀಠಗಳ ತತ್ವಗಳು ಏನೇ ಇರಬಹುದು, ಆದರೆ ನಾವೆಲ್ಲ ಒಟ್ಟಾಗಿ ಹೋದಾಗ ಮಾತ್ರ ಸಮಾಜಕ್ಕೆ ಭವಿಷ್ಯವಿದೆ’ ಎಂದು ವಚನಾನಂದ ಶ್ರೀಗಳು ಅತ್ಯಂತ ಸಮಚಿತ್ತದಿಂದ, ಪ್ರಬುದ್ಧರಾಗಿ ಹೇಳಿ, ಸಾಣೇಹಳ್ಳಿಯವರ ವಾದ ಗೊಡ್ಡುತನದಿಂದ ಕೂಡಿದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ.

ಗಣಪತಿ ವಿವಾದವಾದಾಗಲೇ, ಲಿಂಗಾಯತ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಾಣೇಹಳ್ಳಿ ಶ್ರೀಗಳನ್ನು ‘ಆ ನಕ್ಸಲ್‌ವಾದಿ ಸ್ವಾಮಿಯ ಮಾತಿಗೇಕೆ ಕಿಮ್ಮತ್ತು ಕೊಡುತ್ತೀರಿ?’ ಎಂದು ಒಂದೇ ಮಾತಿನಲ್ಲಿ ಇಡೀ ವಾದಕ್ಕೆ ಷರಾ ಬರೆದುಬಿಟ್ಟಿದ್ದರು. ಆದರೂ ಅವರ ಬಗೆಗಿನ ಕಿಂಚಿತ್
ಗೌರವದಿಂದ ಆಗ ಅನೇಕರು ತಾಳ್ಮೆಯಿಂದ ಪ್ರತಿಕ್ರಿಯಿಸಿದ್ದರು. ಆದರೆ ಈಗ ಶ್ರೀಗಳು ತಮ್ಮ ಬಾಯಿಶೀಕಿನಿಂದ ನಗೆಪಾಟಲಿಗೆ ಗುರಿಯಾಗುತ್ತಿದ್ದಾರೆ. ಸಮಾಜವನ್ನು ಒಡೆಯುವ, ಮನಸ್ಸುಗಳನ್ನು ಘಾಸಿಗೊಳಿಸುವ ಕೆಲಸವನ್ನು ಆಗಾಗ ಮಾಡುತ್ತಿದ್ದಾರೆ. ತಮ್ಮ ವಾದವನ್ನು ಬೆಳಗಿಸುವ, ಅದಕ್ಕೆ ಹೊಳಪು ನೀಡುವ ಪ್ರತ್ಯುತ್ಪನ್ನಮತಿತ್ವ ಅವರಲ್ಲಿ ಬರಿದಾದಂತೆ ತೋರುತ್ತಿದೆ ಎಂಬುದನ್ನು ವಿಷಾದದಿಂದಲೇ ಹೇಳಬೇಕಿದೆ.
ಫುಲ್ ಸ್ಟಾಪ್!

Leave a Reply

Your email address will not be published. Required fields are marked *