Tuesday, 10th September 2024

ಬಾಹ್ಯಾಕಾಶ ಯೋಜನೆ ಹರಿಕಾರ ಸಾರಾಭಾಯಿ

ಮೇರುಶಿಖರ

ಎಲ್.ಪಿ.ಕುಲಕರ್ಣಿ

ಗದ್ದಲದ ನಡುವೆಯೂ ಸಂಗೀತವನ್ನು ಲಕ್ಷ್ಯವಿಟ್ಟು ಆಲಿಸಬಲ್ಲವನು ವಿಶೇಷ ಸಾಧನೆ ಮಾಡಬಲ್ಲ’- ಹೀಗೆಂದವರು ವಿಕ್ರಮ್ ಸಾರಾಭಾಯಿ. ೨೦೨೩ರ ಜುಲೈ ೧೪ರಂದು, ಚಂದ್ರಯಾನ-೩ ಯೋಜನೆಯ ಭಾಗವಾಗಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿದ ಉಪಗ್ರಹ ವಾಹಕದಲ್ಲಿ ‘ವಿಕ್ರಮ್ ಲ್ಯಾಂಡರ್’ ಮತ್ತು ‘ಪ್ರಗ್ಯಾನ್ ರೋವರ್’ ನೌಕೆಗಳಿದ್ದವು. ಆಗಸ್ಟ್ ೨೩ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ನೌಕೆಯು ಸುರಕ್ಷಿತವಾಗಿ ಇಳಿದಾಗ ಭಾರತೀಯರೆಲ್ಲರೂ ಹೆಮ್ಮೆಪಟ್ಟು ಸಂಭ್ರಮಿಸಿದ್ದು ನಿಜ.

ಈ ಲ್ಯಾಂಡರ್ ನೌಕೆಗೆ ವಿಕ್ರಮ್ ಸಾರಾಭಾಯಿ ಅವರ ಹೆಸರಿಟ್ಟು ಗೌರವಿಸಿದ್ದೂ ನಿಮಗೆ ಗೊತ್ತಿರುವ ಸಂಗತಿಯೇ. ‘ಭಾರತೀಯ ಬಾಹ್ಯಾಕಾಶ ಯೋಜನೆ ಗಳ ಜನಕ’ ಎಂದು ಪ್ರಸಿದ್ಧರಾದ ವಿಕ್ರಮ್ ಸಾರಾಭಾಯಿ ಅವರು ಜನಿಸಿದ್ದು ೧೯೧೯ರ ಆಗಸ್ಟ್ ೧೨ರಂದು. ಭಾರತದ ಪ್ರಪ್ರಥಮ ಉಪಗ್ರಹ ‘ಆರ್ಯ ಭಟ’ದ ಉಡಾವಣೆಯ ಹಿಂದೆ ಇದ್ದ ಪ್ರಮುಖ ಶಕ್ತಿಯೂ ಅವರೇ. ಈ ಉಪಗ್ರಹ ಕಕ್ಷೆಗೆ ಸೇರಿದ್ದು ೧೯೭೫ರಲ್ಲಿ, ಆದರೆ ಸಾರಾಭಾಯಿ ಅವರು ೧೯೭೧ರಲ್ಲೇ ದೇಹತ್ಯಾಗ ಮಾಡಿದ್ದರು. ಅಷ್ಟು ಹೊತ್ತಿಗಾಗಲೇ ಅವರು ಮಾಡಿದ್ದ ಕೆಲಸಗಳು, ಬೆಳೆಸಿದ್ದ ಸಂಸ್ಥೆಗಳು, ಕಂಡಿದ್ದ ಕನಸುಗಳು ಅನೇಕ.
ಅಂಬಾಲಾಲ್ ಸಾರಾಭಾಯಿ ಮತ್ತು ಸರಳಾದೇವಿ ಅವರ ಎಂಟನೇ ಪುತ್ರ ವಿಕ್ರಮ್ ಸಾರಾಭಾಯಿ.

ಇವರು ಜನಿಸಿದ ಸಮಯದಲ್ಲಿ ಸಾರಾಭಾಯಿ ಕುಟುಂಬವು ಗುಜರಾತಿನ ಪ್ರತಿಷ್ಠಿತ ವರ್ತಕ ಸಮುದಾಯದಲ್ಲಿ ಒಂದೆನಿಸಿಕೊಂಡಿತ್ತು. ತಂದೆ ಅಂಬಾ ಲಾಲರು ಗುಜರಾತಿನ ಅನೇಕ ಗಿರಣಿಗಳ ಸ್ವಾಮ್ಯವನ್ನು ಹೊಂದಿದ್ದರೆ, ತಾಯಿ ಸರಳಾದೇವಿ ಮಾಂಟೆಸ್ಸರಿ ಶಾಲೆಯನ್ನು ಸ್ಥಾಪಿಸಿದ್ದರು. ಸ್ವಾತಂತ್ರ್ಯ ಚಳವಳಿಯ ಕಟ್ಟಾ ಬೆಂಬಲಿಗರಾಗಿದ್ದ ಇವರ ಮನೆಗೆ ಮಹಾತ್ಮ ಗಾಂಽಜಿ, ಸರ್ದಾರ್ ವಲ್ಲಭಭಾಯಿ ಪಟೇಲರಂಥ ಮಹನೀಯರು ಭೇಟಿ ನೀಡುತ್ತಿದ್ದು ದುಂಟು.

೧೯೪೭ರಲ್ಲಿ ಕೇಂಬ್ರಿಜ್‌ನಲ್ಲಿ ಕಾಲೇಜು ಶಿಕ್ಷಣ ಪಡೆದು ಭಾರತಕ್ಕೆ ಮರಳಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಕೇಂದ್ರದಲ್ಲಿ ಸಿ.ವಿ.ರಾಮನ್ ಅವರ ಬಳಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿದ ವಿಕ್ರಮ್, ಕಾಸ್ಮಿಕ್ ಕಿರಣಗಳ ಬಗೆಗೆ ಅಧ್ಯಯನ ಕೈಗೊಂಡರು. ಅಲ್ಲಿಯೇ ಸಂಶೋ ಧನಾನಿರತರಾಗಿದ್ದ ಹೋಮಿ ಜಹಾಂಗೀರ್ ಭಾಭಾ ಜತೆಗೆ ವಿಕ್ರಮ್‌ರಿಗೆ ಗೆಳೆತನವಾಗಿ ಅದು ಮುಂದೆ ಆತ್ಮೀಯತೆಯವರೆಗೆ ಬಂದು ನಿಂತುಬಿಟ್ಟಿತು.
ಈ ಮಧ್ಯೆ, ವಿಕ್ರಮ್ ಸಾರಾಭಾಯಿ ಅವರಿಗೆ ಕೂಚಿಪುಡಿ ಮತ್ತು ಭರತನಾಟ್ಯ ಪ್ರವೀಣೆ ಮೃಣಾಲಿನಿಯವರ ಪರಿಚಯವಾಗಿ, ಆ ಸ್ನೇಹವು ಪ್ರೇಮಕ್ಕೆ ತಿರುಗಿ ಮದುವೆಯಾದರು.

ನಂತರದಲ್ಲಿ ಮೃಣಾಲಿನಿ ಅವರು ಇತ್ತ ನಾಟ್ಯಕ್ಷೇತ್ರದಲ್ಲಿ ಹೆಸರುಮಾಡತೊಡಗಿದರೆ, ವಿಕ್ರಮ್ ಅವರು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಖ್ಯಾತ ರಾಗತೊಡಗಿದರು. ‘ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ’ ಎಂಬ ಮೊಟ್ಟಮೊದಲ ಸಂಶೋಧನಾ ಸಂಸ್ಥೆ ಸೇರಿದಂತೆ ಅನೇಕ ವಿಜ್ಞಾನ ಸಂಸ್ಥೆಗಳನ್ನು ಸ್ಥಾಪಿಸಿ ಭಾರತದಾದ್ಯಂತ ವಿಜ್ಞಾನದ ಬೀಜವನ್ನು ಬಿತ್ತಿ ಮೊಳಕೆಯೊಡೆಯುವಂತೆ ಮಾಡಿದರು. ಹೋಮಿ ಭಾಭಾ ಅವರ ಉತ್ತರಾಧಿಕಾರಿಯಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಎರಡನೆಯ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ ಪರಿ ಬೆರಗುಮೂಡಿಸುವಂಥದ್ದು.

ಹೋಮಿ ಭಾಭಾರ ಒತ್ತಾಸೆಯೊಂದಿಗೆ ಕೇರಳದ ‘ಥುಂಬಾ’ ಮತ್ತು ಆಂಧ್ರಪ್ರದೇಶದ ‘ಶ್ರೀಹರಿಕೋಟಾ’ ಪ್ರದೇಶಗಳಲ್ಲಿ ಮೊದಲ ಬಾರಿಗೆ ರಾಕೆಟ್ಟುಗಳ ಉಡಾವಣಾ ಕೇಂದ್ರವನ್ನು ನಿರ್ಮಿಸಿದುದು ದೇಶದ ಮಟ್ಟಿಗೆ ಒಂದು ಮೈಲುಗಲ್ಲು. ಇದು ಇಸ್ರೋದ ಈಗಿನ ಸಾಧನೆಗಳಿಗೆ ವಿಕ್ರಮ್ ಹಾಕಿದ ಭದ್ರಬುನಾದಿ ಎಂದರೆ ತಪ್ಪಾಗಲಾರದು. ವಿಜ್ಞಾನ ಕ್ಷೇತ್ರದಲ್ಲಿನ ಕಾರ್ಯದ ಜತೆಜತೆಗೆ ತಮ್ಮ ಕೌಟುಂಬಿಕ ಉದ್ಯಮವಾದ ಉಡುಪಿನ ತಂತ್ರಜ್ಞಾನವನ್ನೂ ವಿಕ್ರಮ್ ಸಾರಾಭಾಯಿ ಬೆಳೆಸುತ್ತಿದ್ದರು; ಅಹಮದಾಬಾದ್‌ನಲ್ಲಿ ಅವರು ಸ್ಥಾಪಿಸಿದ ‘ಟೆಕ್ಸ್‌ಟೈಲ್ ಇಂಡಸ್ಟ್ರಿಯಲ್ ರಿಸರ್ಚ್ ಅಸೋಸಿಯೇಷನ್’ ಜವಳಿ
ಉದ್ಯಮಗಳ ಅಪಾರ ಬೆಳವಣಿಗೆಗೆ ನಾಂದಿಹಾಡಿತು.

ಸಾಂಸ್ಥಿಕ ನಿರ್ವಹಣೆಯ ವಿಷಯದಲ್ಲಿ ಹೆಚ್ಚಿನ ಶಿಕ್ಷಣ ನೀಡಲು ಅನುವಾಗುವಂತೆ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್’ ಸಂಸ್ಥೆ ಯನ್ನು ತೆರೆದದ್ದು ವಿಕ್ರಮ್ ಅವರ ಮತ್ತೊಂದು ಬಹುದೊಡ್ಡ ಕೊಡುಗೆ. ಈ ಸಂಸ್ಥೆ ಈಗ ಜಗದ್ವಿಖ್ಯಾತವಾಗಿದೆ. ಮಕ್ಕಳಿಗೆ ವಿಜ್ಞಾನ ಶಿಕ್ಷಣ ನೀಡುವಲ್ಲಿ ತೀವ್ರಾಸಕ್ತಿ ಹೊಂದಿದ್ದ ಅವರು ಅದಕ್ಕಾಗಿ ಅಹಮದಾಬಾದ್‌ನಲ್ಲಿ ಆರಂಭಿಸಿದ ‘ಕಮ್ಯೂನಿಟಿ ಸೈನ್ಸ್ ಸೆಂಟರ್’ ಕೂಡ ಇಲ್ಲಿ ಉಲ್ಲೇಖನೀಯ.

ಪರಿಸರದ ಕುರಿತಾದ ಅಪಾರ ಕಾಳಜಿಯಿಂದಾಗಿ ‘ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಪ್ಲಾನಿಂಗ್ ಆಂಡ್ ಟೆಕ್ನಾಲಜಿ’ ಎಂದು ಕೇಂದ್ರವನ್ನೂ, ಅಂಧರ ಬದುಕಿನಲ್ಲಿ ಏಳಿಗೆಗಾಗಿ ‘ಬ್ಲೈಂಡ್ ಮೆನ್ ಅಸೋಸಿಯೇಷನ್’ ಅನ್ನೂ ಹುಟ್ಟುಹಾಕಿದ್ದು ವಿಕ್ರಮ್ ಅವರ ಹೆಗ್ಗಳಿಕೆ. ಕಲಾಪ್ರಕಾರಗಳಲ್ಲೂ ಅವರಿಗೆ ಶ್ರೇಷ್ಠ ಅಭಿರುಚಿಯಿತ್ತು ಮತ್ತು ಅವರು ಕಲೆ-ಸಂಸ್ಕೃತಿಯ ಪೋಷಕರಾಗಿದ್ದರು. ಪತ್ನಿ ಮೃಣಾಲಿನಿ ಅವರೊಂದಿಗೆ ‘ದರ್ಪಣ ಅಕಾಡೆಮಿ ಆಫ್ ಪರ್ ಫಾರ್ಮಿಂಗ್ ಆರ್ಟ್ಸ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದು ಇದಕ್ಕೆ ದ್ಯೋತಕ.

ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಭಾರತದಂಥ ರಾಷ್ಟ್ರದಲ್ಲಿ ವೈಜ್ಞಾನಿಕ ಸಂಶೋಧನೆಗೆ ಒತ್ತುಕೊಡುವ ನಿಟ್ಟಿನಲ್ಲಿ ಅವರ ವೈಜ್ಞಾನಿಕ ಮನೋ ಭಾವ, ಕಾರ್ಯದಕ್ಷತೆ ಮತ್ತು ದೂರಾಲೋಚನೆಗಳು ನೀಡಿದ ಕೊಡುಗೆ ಅಪಾರ. ಇದರಿಂದಾಗಿ ದೇಶದ ಯುವಕರಲ್ಲಿ ಉತ್ಸಾಹ ಚಿಮ್ಮುವಂತಾಗಿ ವೈಜ್ಞಾನಿಕ ಕ್ಷೇತ್ರದಲ್ಲಿ ದೇಶಕ್ಕೆ ಖ್ಯಾತಿ ಬರುವಂತಾಯಿತು. ಅಣುಶಕ್ತಿಯ ಶಾಂತಿಯುತ ಬಳಕೆ ಕುರಿತು ಚರ್ಚಿಸಲು ಹಮ್ಮಿಕೊಳ್ಳಲಾಗಿದ್ದ ವಿಶ್ವಸಂಸ್ಥೆಯ
ನಾಲ್ಕನೇ ಸಮ್ಮೇಳನದ ಉಪಾಧ್ಯಕ್ಷರಾಗುವ ಮೂಲಕ ವಿಕ್ರಮ್ ಅವರು ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದ ಕೀರ್ತಿಯನ್ನು ತಂದುಕೊಟ್ಟರು.

ವಿಕ್ರಮ್ ಸಾರಾಭಾಯಿ ಅವರ ೧೦೦ನೇ ಹುಟ್ಟುಹಬ್ಬವಾದ ೨೦೧೯ರ ಆಗಸ್ಟ್ ೧೨ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಅವರ ಗೌರವಾರ್ಥವಾಗಿ ‘ವಿಕ್ರಮ್ ಸಾರಾಭಾಯಿ ಪತ್ರಿಕೋದ್ಯಮ ಪ್ರಶಸ್ತಿ’ಯನ್ನು ಘೋಷಿಸಿತು. ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ, ಅನ್ವಯಿಕೆಗಳು ಮತ್ತು ಸಂಶೋಧನೆಗಳಿಗೆ ಕೊಡುಗೆ ನೀಡಿದ ಪತ್ರಕರ್ತರಿಗೆ ಈ ಪುರಸ್ಕಾರವನ್ನು ನೀಡಲಾಗುತ್ತದೆ. ಸ್ಪಷ್ಟತೆಯಿಂದ ಕೂಡಿದ ಸರಳ ಮಾತುಗಳು, ಅಪಾರ ಶ್ರದ್ಧೆ, ಕಾಳಜಿ, ಆತ್ಮವಿಶ್ವಾಸ, ದೇಶಭಕ್ತಿ ಇವೆಲ್ಲವೂ ಅವರ ವ್ಯಕ್ತಿತ್ವದ ಅವಿ ಭಾಜ್ಯ ಅಂಗಗಳಾಗಿದ್ದವು. ತಮ್ಮಿಡೀ ಬದುಕನ್ನು ಮಾತ್ರವಲ್ಲದೆ, ಜೀವಮಾನದ ಗಳಿಕೆಯಾದ ಹಣ, ಆಸ್ತಿ ಎಲ್ಲವನ್ನೂ ದೇಶದ ವಿಜ್ಞಾನ ಕ್ಷೇತ್ರದ ಬೆಳವಣಿಗೆಗಾಗಿ ಮುಡಿಪಾಗಿಟ್ಟ ಅನನ್ಯ ವ್ಯಕ್ತಿ ವಿಕ್ರಮ್ ಸಾರಾಭಾಯಿ. ಭಾರತ ಸರಕಾರದ ಶಾಂತಿ ಸ್ವರೂಪ್ ಭಟ್ನಾಗರ್ ಸ್ಮಾರಕ ಪಾರಿತೋಷಕ (೧೯೬೨), ಪದ್ಮಭೂಷಣ (೧೯೬೬) ಮತ್ತು ಮರಣೋತ್ತರವಾಗಿ ನೀಡಲಾದ ಪದ್ಮವಿಭೂಷಣ (೧೯೭೨) ಮೊದಲಾದ ಗೌರವಗಳು ಅವರನ್ನು ಹುಡುಕಿಕೊಂಡು ಬಂದವು. ಇಂಥ ಮಹಾನ್ ಸಾಧಕನ ಬದುಕು ನಮಗೆ ದಾರಿದೀಪ ವಾಗಬೇಕು. ೧೯೭೧ರ ಡಿಸೆಂಬರ್ ೩೧ರಂದು ವಿಕ್ರಮ್ ಸಾರಾಭಾಯಿ ನಿಧನರಾದರು.

ವಿಕ್ರಮ್ ಸಾರಾಭಾಯಿ ಅವರು ಈಗೇನಾದರೂ ಬದುಕಿದ್ದಿದ್ದರೆ, ತಾವೇ ಕಟ್ಟಿ ಬೆಳೆಸಿದ ಇಸ್ರೋ ಸಂಸ್ಥೆಯ ಚಂದ್ರಯಾನ ೧ ಮತ್ತು ೨ ಯತ್ನಗಳು, ಯಶಸ್ವಿಯಾಗಿ ದಾಖಲೆ ನಿರ್ಮಿಸಿದ ‘ಚಂದ್ರಯಾನ-೩’, ‘ಎಕ್ಸ್‌ಪೋಸ್ಯಾಟ್’ ಮೂಲಕದ ಬ್ರಹ್ಮಾಂಡದ ಕಾಸ್ಮಿಕ್ ವಿಕಿರಣಗಳ ಅಧ್ಯಯನ, ಸೂರ್ಯನ ಅಧ್ಯಯನಕ್ಕೆ ಕಳಿಸಿದ ‘ಆದಿತ್ಯ ಎಲ್-೧’ ಯೋಜನೆ, ಮಂಗಳ ಗ್ರಹದ ಕುರಿತಾದ ಅಧ್ಯಯನ ಮಿಷನ್, ಶುಕ್ರಗ್ರಹದ ಅನ್ವೇಷಣಾ ಯೋಜನೆ, ಸೌರವ್ಯೂಹ ದಾಚೆಗಿನ ಆಕಾಶಕಾಯಗಳ ಅಧ್ಯಯನಕ್ಕ ೨೦೨೮ರಲ್ಲಿ ಹಮ್ಮಿಕೊಳ್ಳಲಾಗಿರುವ ‘ಎಕ್ಸೋವರ್ಲ್ಡ್’ ಯೋಜನೆ ಮುಂತಾದ ಉಪಕ್ರಮಗಳ ಬಗ್ಗೆ ಹೆಮ್ಮೆಪಡುತ್ತಿದ್ದರು.

(ಲೇಖಕರು ಶಿಕ್ಷಕರು)

Leave a Reply

Your email address will not be published. Required fields are marked *