Saturday, 14th December 2024

ಸರಸ್ವತೀಪುತ್ರನ ಸಮಕಾಲೀನರೆನ್ನುವುದೇ ನಮ್ಮೆಲ್ಲರ ಹೆಮ್ಮೆ !

ತಿಳಿರು ತೋರಣ

srivathsajoshi@yahoo.com

‘ಅವರೊಬ್ಬ ಋಷಿ! ಈ ಮಾತು ನೂರಕ್ಕೆ ನೂರು ನಿಜ. ಶತಾವಧಾನಿ ಡಾ. ಆರ್. ಗಣೇಶ ಅವರ ಮೇರುಸದೃಶ ಪಾಂಡಿತ್ಯ ವನ್ನು, ಸಾಹಿತ್ಯಜ್ಞಾನಾರ್ಜನೆಯ ತಪಸ್ಸನ್ನು, ಮತ್ತು ಅದೇ ವೇಳೆಗೆ ಸರಳಾತಿಸರಳ ವ್ಯಕ್ತಿತ್ವವನ್ನು ಬಣ್ಣಿಸುವುದಕ್ಕೆ ‘ಋಷಿ’ ಎನ್ನುವ ಒಂದು ಪದವಲ್ಲದೇ ಬೇರಾವುದೂ ನ್ಯಾಯವೊದಗಿಸದು ಎಂದು ನನ್ನ ಅಭಿಪ್ರಾಯ.

ಅವರಂತೆ ಪಾಂಡಿತ್ಯವನ್ನು ನಾವು ಗಳಿಸಲಾರೆವು. ಪಾಂಡಿತ್ಯ ಗಳಿಸುವು ದಿರಲಿ, ಅವರ ವಿಚಾರಧಾರೆಗಳನ್ನು ಇಡಿಯಾಗಿ ಅರ್ಥಮಾಡಿಕೊಂಡು ಅರಗಿಸಿಕೊಳ್ಳುವ ಧಿಃಶಕ್ತಿಯೂ ನಮಗಿಲ್ಲ. ಆದರೇನಂತೆ? ಡಾ. ಆರ್. ಗಣೇಶ ಎಂಬ ಮಹಾಪುರುಷ ರೊಬ್ಬರು ನಮ್ಮ ಜೀವಿತಾವಧಿಯಲ್ಲೇ ಈ ಭೂಮಿಯಲ್ಲಿ ಬಾಳಿದ್ದಾರೆ. ಸಾವಿರ ಸಂಖ್ಯೆಯ ಅಷ್ಟಾವಧಾನಗಳನ್ನು ನಮ್ಮ ಕಣ್ಮುಂದೆಯೇ ನಡೆಸಿದ್ದಾರೆ.

ಪುರಾಣಕಾವ್ಯಗಳನ್ನೆಲ್ಲ ಹಲಸಿನಹಣ್ಣು ಬಿಡಿಸಿ ತೊಳೆಗಳನ್ನು ತಿನ್ನಲಿಕ್ಕೆ ಕೊಟ್ಟಂತೆ ನಮಗೆ ಕೊಟ್ಟಿದ್ದಾರೆ… ಎಂದು ಪುಳಕಗೊಳ್ಳುವುದಕ್ಕೆ, ಎದೆತಟ್ಟಿ ಹೇಳಿಕೊಳ್ಳುವುದಕ್ಕೆ, ಹೆಮ್ಮೆಪಟ್ಟು ಕೊಳ್ಳುವುದಕ್ಕೆ ನಮಗೇನೂ ಉದಾ ಸೀನ ಇಲ್ಲವಲ್ಲ? ಅಷ್ಟನ್ನೂ ಮಾಡದ ನಿರಭಿಮಾನದ ಮಾಯೆ ನಮ್ಮನ್ನು ಮುಸುಕಿಲ್ಲವಲ್ಲ? ಕ್ರಿಕೆಟ್‌ನಲ್ಲಿ ಆಟಗಾರನ ಶತಕಕ್ಕೇ ಸಂಭ್ರಮಪಡುವ ನಾವು ಅವಧಾನಿಯೆಂಬ ಬ್ಯಾಟ್ಸ್‌ಮನ್ ಏಕಕಾಲಕ್ಕೆ ಎಂಟೆಂಟು ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವ, ಅಂತಹ ಒಂದುಸಾವಿರ ಪಂದ್ಯಗಳನ್ನು ಪೂರೈಸಿದ ಸಂದರ್ಭದಲ್ಲಿ ನಮ್ಮ ಕನ್ನಡಿಗನೆಂಬ ಅಭಿಮಾನದಿಂದ ಚಪ್ಪಾಳೆ ತಟ್ಟುವುದು ಬೇಡವೇ?’ ಇದು 2014ರ ಫೆಬ್ರವರಿ 16ರಂದು ಶತಾವಧಾನಿ ಡಾ. ಆರ್.ಗಣೇಶರ ಒಂದುಸಾವಿರನೆಯ ಅಷ್ಟಾವಧಾನ ನಡೆದಾಗ ಅವರಿಗೆ ಅಭಿನಂದನೆ + ಶುಭಾಶಯ ಸಲ್ಲಿಸಲು ನಾನು ಬರೆದಿದ್ದ ಟಿಪ್ಪಣಿ.

ಕಾರ್ಯಕ್ರಮ ನಡೆದದ್ದು ಬೆಂಗಳೂರಿನಲ್ಲಿ, ಆದರೆ ಅಂತರಜಾಲದ ಮೂಲಕ ನೇರಪ್ರಸಾರವೂ ಇದ್ದುದರಿಂದ ನಾನಿಲ್ಲಿ ಅಮೆರಿಕದಲ್ಲಿದ್ದೇ ಅದನ್ನು ವೀಕ್ಷಿಸಿದ್ದೆ ಮತ್ತು ಫೇಸ್ ಬುಕ್‌ನಲ್ಲಿ ಸ್ನೇಹಿತರೆಲ್ಲರಿಗೂ ಕಾರ್ಯಕ್ರಮದ ಬಗ್ಗೆ ತಿಳಿಸುತ್ತ ಈ
ರೀತಿ ಶುಭ ಹಾರೈಸಿದ್ದೆ. ಜೊತೆಯಲ್ಲೊಂದು ಭಾಮಿನಿ ಷಟ್ಪದಿ ಪದ್ಯವನ್ನೂ ಹೊಸೆದಿದ್ದೆ (ಸರಸ್ವತೀಪುತ್ರನ ಸಾಹಿತ್ಯವಿಪಿನದೆ
ದುರು ಇದು ತೃಣಕಿಂತ ಕಡೆಯೆಂದು ಗೊತ್ತಿದ್ದರೂ). ಪ್ರಾಸಕ್ಕೆ ಹೊಂದಬೇಕೆಂದು ಫೇಸ್‌ಬುಕ್ಕಿಗರನ್ನು ‘ಭಿತ್ತಿವಂತರು’ ಎಂದಿದ್ದು
ನನಗೇ ಖುಷಿಕೊಟ್ಟಿತ್ತು.

ಉತ್ತಮೋತ್ತಮ ಶ್ರೀಗಣೇಶನ
ಮುತ್ತಿನಂಥವಧಾನ ಕಲೆಗಿದು
ಹತ್ತುನೂರರ ಸಂಖ್ಯೆ ಮುಟ್ಟಿದ ಸಂಭ್ರಮದ ಗಳಿಗೆ|
ಚಿತ್ತದಲ್ಲಿಯೆ ಕಾವ್ಯ ಕಟ್ಟುವ
ಬತ್ತಳಿಕೆ ಬರಿದಾಗದೆಂದಿಗು
ಭಿತ್ತಿವಂತರ ನಲ್ಮೆನುಡಿಯಿದು ಸರಸತಿಯ ಸುತಗೆ||

ಶತಾವಧಾನಿಗಳು ಫೇಸ್‌ಬುಕ್‌ನಲ್ಲಿ ಅಷ್ಟೇನೂ ಸಕ್ರಿಯರಲ್ಲವೆಂದು ಗೊತ್ತಿತ್ತು. ಹಾಗಾಗಿ ಶುಭಾಶಯವನ್ನು ನಾನವರಿಗೆ
ಮಿಂಚಂಚೆಯಲ್ಲೂ ಕಳುಹಿಸಿದ್ದೆ. ಅವಧಾನ ಕಾರ್ಯಕ್ರಮಕ್ಕೆ ಸಿದ್ಧತೆ ತರಾತುರಿಯ ನಡುವೆಯೂ ಅವರು ತತ್‌ಕ್ಷಣ
ಉತ್ತರಿಸಿದ್ದರು- ಅಂದವಾದ, ಛಂದೋಬದ್ಧವಾದ ಒಂದು
ಕಂದಪದ್ಯದ ರೂಪದಲ್ಲಿ!
ಅಭಿನಂದನಚಂದನಮಂ
ಶುಭಸಂದರ್ಭಕ್ಕೆನುತ್ತೆ ಪೂಸಿದನಿಮಗಂ|
ನಭಮಂ ಮುಟ್ಟುವಿನಂ ಬಗೆ-
ಯುಭಯಾಂಜಲಿಯೀವೆನೊಲ್ದು ಶ್ರೀವತ್ಸಸುಧಿ||

ಈಗ ಇದನ್ನು ನೆನಪಿಸಿಕೊಳ್ಳಲಿಕ್ಕೆ ಕಾರಣವೆಂದರೆ ಇಂದು (ಡಿಸೆಂಬರ್ 4) ಶತಾವಧಾನಿ ಡಾ. ಆರ್. ಗಣೇಶರ ಜನ್ಮದಿನಾಂಕ. ಈ ಸಲ ಮಾಮೂಲಿಯದಲ್ಲ, ಷಷ್ಟಿ ಪೂರ್ತಿ! ಅವರ ಪಾಂಡಿತ್ಯವಾರಿಧಿಯನ್ನು ಈ ಅಂಕಣವೆಂಬ ಬೊಗಸೆ
ಯಲ್ಲಿ ತುಂಬಿಸಿತೋರಿಸುವುದಂತೂ ಸಾಧ್ಯವಾಗದ ಮಾತು.

ಆದರೆ ನಮ್ಮಂಥ ಪಾಮರರಿಗೂ ಈ ಜ್ಞಾನಜ್ಯೋತಿಯು ಅದೆಷ್ಟು ಬೆಳಕನ್ನು ನೀಡುತ್ತಿದೆಯೆಂದು ಕೃತಜ್ಞತಾಪೂರ್ವಕ ನೆನೆಯುವುದಕ್ಕಾಗಿ, ಹೀಗೆಯೇ ನೂರ್ಕಾಲ ಬಾಳಿ ಎಂದು ಹಾರೈಸುವುದಕ್ಕಾಗಿ, ಒಂದಿಷ್ಟು ಮೆಲುಕುಗಳು. ಆಗಲೇ ಹೇಳಿ ದಂತೆ, ಇಂತಹ ಮಹಾಪುರುಷರಿರುವ ಕಾಲದಲ್ಲಿ ನಾವಿದ್ದೇವೆ ಅನ್ನೋದೇ ನಮಗೆಲ್ಲರಿಗೆ ಹೆಮ್ಮೆ.

ಆರ್. ಗಣೇಶರ ಅಷ್ಟಾವಧಾನ ಕಾರ್ಯಕ್ರಮವನ್ನು ನಾನು ಮೊದಲ ಬಾರಿಗೆ ಪ್ರತ್ಯಕ್ಷ ನೋಡಿದ್ದು 1993ರಲ್ಲಿ, ನಮ್ಮೂರು
ಮಾಳ ಗ್ರಾಮದಲ್ಲಿ! ನಾನು ಆಗಷ್ಟೇ ಎಂಜಿನಿಯರಿಂಗ್ ಓದು ಮುಗಿಸಿ ಉದ್ಯೋಗನಿಮಿತ್ತ ಹೈದರಾಬಾದ್‌ನಲ್ಲಿದ್ದವನು ರಜೆ
ಯಲ್ಲಿ ಊರಿಗೆ ಹೋಗಿದ್ದೆ. ನಮ್ಮೂರಿನ ಪರಶುರಾಮ ದೇವಸ್ಥಾನಕ್ಕೆ ಗಣೇಶರನ್ನು ಆಹ್ವಾನಿಸಿ ಅವಧಾನ ಕಾರ್ಯಕ್ರಮವನ್ನು
ಆಗಲೇ ಏರ್ಪಡಿಸಿದ್ದರು. ಆಗಿನ್ನೂ ಅವರು ಅವಧಾನ ಕಲೆಯಲ್ಲಿ ಪ್ರಸಿದ್ಧಿಗೆ ಬರತೊಡಗಿರಷ್ಟೇ.

ನನಗೆ ನೆನಪಿರುವಂತೆ ತರಂಗ ಸಾಪ್ತಾಹಿಕದಲ್ಲಿ ಅವರ ಬಗ್ಗೆ ಪರಿಚಯ ಲೇಖನ ಬಂದಿತ್ತು. ಎಂಜಿನಿಯರಿಂಗ್ ಪದವೀಧರ ನೊಬ್ಬ ಸಂಸ್ಕೃತ-ಕನ್ನಡ ಪಾಂಡಿತ್ಯ ಗಳಿಸಿ ಕರ್ನಾಟಕದಲ್ಲಿ ಅವಧಾನ ಕಲೆಯನ್ನು ಪುನರುಜ್ಜೀವಗೊಳಿಸುತ್ತಿರುವ ಬಗ್ಗೆ ಸಂಪಾದಕ ಸಂತೋಷಕುಮಾರ್ ಗುಲ್ವಾಡಿಯವರೇ ಬರೆದಿದ್ದರೆಂದು ಕಾಣುತ್ತದೆ. ನನಗೆ ಮುಖ್ಯವಾಗಿ 1993 ಎಂದೇ ನೆನಪಿರುವುದಕ್ಕೆ ಕಾರಣ ಆ ವರ್ಷ ಮುಂದೆ ಡಿಸೆಂಬರ್‌ನಲ್ಲಿ ಶ್ರವಣಬೆಳಗೊಳದಲ್ಲಿ ಗೋಮಟೇಶ್ವರನಿಗೆ ಮಹಾಮಸ್ತಕಾ ಭಿಷೇಕ ನಡೆಯುವುದಿತ್ತು, ಮತ್ತು ಇಲ್ಲೀಗ ನಾನು ವಿವರಿಸಲಿರುವ ರೀತಿಯಲ್ಲಿ ಗಣೇಶರ ಅಷ್ಟಾವಧಾನದಲ್ಲಿ ಮಹಾಮಸ್ತಕಾ ಭಿಷೇಕದ ಪ್ರಸ್ತಾವವೂ ಬಂದಿತ್ತು.

ಏನಿಲ್ಲ, ಆ ಪ್ರಸ್ತಾವಕ್ಕೆ ಕಾರಣ ನಾನೇ! ಆ ಅಷ್ಟಾವಧಾನ ಕಾರ್ಯಕ್ರಮದ ಕೊನೆಯಲ್ಲಿ ಸಭೆಯಿಂದಲೂ ಯಾರಾದರೂ
ಪ್ರಶ್ನೆ ಕೇಳಬಹುದು ಎಂದಿದ್ದಾಗ ನಾನೊಂದು ತರ್ಲೆ ಪ್ರಶ್ನೆ ಕೇಳಿದ್ದೆ. ‘ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕದ ಬಗ್ಗೆ
ಕರ್ಟೇನ್ ರೈಸರ್ ಕಾರ್ಯಕ್ರಮವೊಂದು ನಿನ್ನೆ ದೂರದರ್ಶನ ದಲ್ಲಿ ಪ್ರಸಾರವಾಯಿತು. ಆದರೆ ದಿಗಂಬರನಾದ ವಿರಾಗಿಗೆ
ಎಲ್ಲಿಯ ಕರ್ಟೇನ್?’ ಎಂದು ಚೀಟಿಯಲ್ಲಿ ಬರೆದುಕಳುಹಿಸಿದ್ದೆ.

ಅವಧಾನದ ಪರಿಭಾಷೆಯಲ್ಲಾದರೆ ಅದೊಂದು ಅಪ್ರಸ್ತುತ ಪ್ರಸಂಗಿಯ ಪ್ರಶ್ನೆ. ಆದರೆ ಗಣೇಶರು ಕೊಟ್ಟ ಉತ್ತರ ಪ್ರಗಾಢ ವಾಗಿತ್ತು. ಅದರಲ್ಲಿ ಅಧ್ಯಾತ್ಮದ ಟಚ್ ಇತ್ತು. ‘ಗೋಮಟೇಶ್ವರನಿಗೆ ಕರ್ಟೇನ್ ಇಲ್ಲದಿರಬಹುದು. ಆದರೆ ಆತನ ಹಿರಿಮೆಯನ್ನು, ಮಹಾಮಸ್ತಕಾಭಿಷೇಕದ ಗರಿಮೆಯನ್ನು ಅರಿಯದ ನಮ್ಮೆಲ್ಲರ ಅeನವೆಂಬ ಕರ್ಟೇನ್ ಇದೆಯಲ್ಲ? ಅದನ್ನು ರೈಸ್ ಮಾಡಲಿಕ್ಕೇ ದೂರದರ್ಶನದಿಂದ ಕಾರ್ಯಕ್ರಮ ಪ್ರಸಾರವಾದದ್ದು!’ ಸಭೆ ಯಲ್ಲಿ ಚಪ್ಪಾಳೆ, ತರ್ಲೆ ಪ್ರಶ್ನೆಗೂ ತತ್ತ್ವಾರ್ಥ ತೂಕದ ಉತ್ತರ ಕೊಟ್ಟಿದ್ದಕ್ಕೆ!

ಹಾಗೆ ನೋಡಿದರೆ ಗಣೇಶರ ಅವಧಾನ ಕಾರ್ಯಕ್ರಮ ನಾನು ‘ಪ್ರತ್ಯಕ್ಷ’ ಕಂಡಿದ್ದು ಅದೊಂದೇ. ಆಮೇಲೆ ಅದೆಷ್ಟೋ ಅವಧಾನಗಳನ್ನು- ಮೇಲೆ ಹೇಳಿದ 1000ನೆಯ ಅಷ್ಟಾವಧಾನವನ್ನೂ, ಆಮೇಲೊಮ್ಮೆ ಮೂರುದಿನ ನಡೆದ ‘ತುಂಬುಗನ್ನಡ
ಶತಾವಧಾನ’ವನ್ನೂ- ವಿಡಿಯೋಗಳಲ್ಲಿ, ಯುಟ್ಯೂಬ್ ನೇರ ಪ್ರಸಾರದಲ್ಲಿ, ನೋಡಿದ್ದೇನೆ. ಆದರೆ ನಮ್ಮೂರಲ್ಲಾದ ಕಾರ್ಯಕ್ರಮದ ಚಿತ್ರಣ ಈಗಲೂ ಕಣ್ಮುಂದೆ ಬರುತ್ತದೆ. ‘ಶತಾವಧಾನಿ ಆರ್. ಗಣೇಶ್’ ಎಂದಾಗೆಲ್ಲ ಒಮ್ಮೆ ಚಿತ್ತಭಿತ್ತಿಯಲ್ಲಿ ಮೂಡುತ್ತದೆ.

First impression is the best impression ಎನ್ನುತ್ತಾರಲ್ಲ, ಅಂದು ಅವರ ಬಗ್ಗೆ ಮೂಡಿದ ಬೆರಗು, ಗೌರವ, ಅಭಿಮಾನದ ಗ್ರ್ಯಾಫ್ ಆಮೇಲೆ ಕೆಳಗಾದದ್ದೇ ಇಲ್ಲ. ಆರ್. ಗಣೇಶರನ್ನು ‘ಪ್ರತ್ಯಕ್ಷ’ ಕಂಡ ಇನ್ನೊಂದು ದೃಶ್ಯ ನನ್ನ
ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿರುವುದು ೨೦೦೭ರಲ್ಲಿ ಆದದ್ದು. ಆ ವರ್ಷ ಆಗಸ್ಟ್‌ನಲ್ಲೊಂದು ದಿನ ನನ್ನೆರಡು ಪುಸ್ತಕಗಳ-
ಇನ್ನೊಂದಿಷ್ಟು ವಿಚಿತ್ರಾನ್ನ, ಮತ್ತೊಂದಿಷ್ಟು ವಿಚಿತ್ರಾನ್ನ- ಲೋಕಾರ್ಪಣೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಬಿ.ಪಿ.ವಾಡಿಯಾ ಹಾಲ್ ನಲ್ಲಿ ನಡೆದಿತ್ತು.

ಸಭಾಂಗಣ ಕಿಕ್ಕಿರಿದಿತ್ತು ಎನ್ನಲಾರೆನಾದರೂ ಹಾಕಿಟ್ಟ ಕುರ್ಚಿಗಳೆಲ್ಲ ಭರ್ತಿಯಾಗಿದ್ದವು. ವೇದಿಕೆಯ ಮುಂದೆ ಇದ್ದ ಖಾಲಿ ಜಾಗದಲ್ಲಿ ಚಿಕ್ಕದೊಂದು ಪ್ಲಾಟ್‌ಫಾರ್ಮ್ ಥರ ದ್ದಿತ್ತು. ಸಭಾಕಾರ್ಯಕ್ರಮ ಮುಂದುವರಿದಿತ್ತು. ಸ್ವಲ್ಪ ತಡವಾಗಿ ಆಗಮಿಸಿದ ಗಣೇಶ್, ಆ ಪ್ಲಾಟ್‌ಫಾರ್ಮ್ ಮೇಲೆ ಚಕ್ಳಮಕ್ಳ ಹಾಕಿ ಕುಳಿತುಕೊಂಡರು. ವೇದಿಕೆಯಲ್ಲಿದ್ದವರ ಮಾತುಗಳನ್ನಾಲಿಸಿದರು. ಆ ದೃಶ್ಯವನ್ನು ನಾನೆಂದೂ ಮರೆಯಲಾರೆ! ಸಭಾಂಗಣದ ಸಹಾಯಕನು ಅವರಿಗಾಗಿ ಕುರ್ಚಿ ತಂದಿಟ್ಟರೂ ‘ಇಲ್ಲ ನಾನಿಲ್ಲಿ ಆರಾಮಾಗಿ ಕುಳಿತುಕೊಳ್ಳುತ್ತೇನೆ’ ಎಂದು ಆತನಿಗೆ ಕೈಸನ್ನೆ ಮಾಡಿದ್ದೂ ನೆನಪಿದೆ.

ನನ್ನಂಥ ಯಃಕಶ್ಚಿತ್ ಅಜ್ಞಾತನ (ಆಗಿನ್ನೂ ಅವರೊಡನೆ ನನಗೆ ಸ್ನೇಹಸಂಪರ್ಕ, ಈಗಿರುವಷ್ಟು ಸಲುಗೆ, ಇರಲಿಲ್ಲ) ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಅಷ್ಟು ಅಕ್ಕರಾಸ್ಥೆಯಿಂದ ಬಂದು, ನೆಲದ ಮೇಲೆಯೇ ಎಂಬಂತೆ ಕುಳಿತು, ಮನಸಾರೆ ಹರಸಿದ ಮಹಾನುಭಾವರನ್ನು ‘ಡೌನ್ ಟು ಅರ್ತ್’ ಎನ್ನದೇ ಏನನ್ನೋಣ? ಮುಂದೆ ೨೦೧೦ರ ಜನವರಿಯಲ್ಲಿ ನಾನೊಮ್ಮೆ ಬೆಂಗಳೂರಿಗೆ ಹೋಗಿದ್ದಾಗ, ರಾಜಾಜಿನಗರದಲ್ಲಿ ಗಣೇಶರ ಮನೆಗೆ ಹೋಗಿ ಅವರನ್ನು ಭೇಟಿಯಾಗುವ ಸುಸಂದರ್ಭ ಬಂದಿತು. ಇದಕ್ಕೆ ನನ್ನೊಬ್ಬ ಓದುಗಮಿತ್ರ ರಮೇಶ ಸಾಮ್ರಾಟರಿಗೆ ನಾನು ಋಣಿ.

ಅವರೇ ನನ್ನನ್ನು ಅವಧಾನಿಗಳ ಮನೆಗೆ ಕರೆದುಕೊಂಡು ಹೋದವರು. ಆ ಭೇಟಿಯ ಬಗ್ಗೆ ನಾನು ಆಗ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರೆಯುತ್ತಿದ್ದ ಪರಾಗಸ್ಪರ್ಶ ಅಂಕಣದಲ್ಲಿ ವಿಸ್ತೃತವಾಗಿ ಬರೆದಿದ್ದೇನೆ. ಕೆಲ ಮುಖ್ಯಾಂಶಗಳನ್ನು ಇಲ್ಲಿಯೂ ದಾಖಲಿಸುತ್ತೇನೆ: ‘ಗಣೇಶರೊಡನೆ ಕುಶಲೋ ಪರಿಯಲ್ಲಿ ಹೀಗೇ ಏನೋ ಭಾಷೆಗಳ ಸಾಮ್ಯ ಸೋಜಿಗಗಳ ವಿಚಾರ ಬಂತು. ಅವರೋ ಹದಿನೆಂಟು ಭಾಷೆಗಳನ್ನು ಅರೆದು ಕುಡಿದವರು. ನಾನು ಅಷ್ಟೊಂದು ಭಾಷೆಗಳನ್ನು ಬಲ್ಲವನಲ್ಲ, ಆದರೆ ಭಾಷೆಗಳ ಸೊಗಡು ಸ್ವಾರಸ್ಯಗಳು ನನಗೂ ಆಸಕ್ತಿಯ ವಿಷಯವೇ.

ನನ್ನ ಮನೆಮಾತು ಚಿತ್ಪಾವನಿ ಮರಾಠಿ ಎಂದು ಗೊತ್ತಿದ್ದ ಗಣೇಶ್, ಆ ಭಾಷೆಯಲ್ಲೂ ಸಂಸ್ಕೃತ ಮೂಲದ ಶಬ್ದಗಳಿವೆಯೆಂದು ಸೋದಾಹರಣವಾಗಿ ಬಣ್ಣಿಸಿದರು. ‘ರಾಂಧಪ’ (ಕನ್ನಡದಲ್ಲಿ ಅದರರ್ಥ ಅಡುಗೆ) ಅಂಥ ಒಂದು ಶಬ್ದ. ಅದು ಸಂಸ್ಕೃತದ ‘ರಂಧನ’ (ಅಡುಗೆ ಎಂದೇ ಅರ್ಥ) ಪದದಿಂದ ಬಂದದ್ದು. ನೃತ್ಯರೂಪಕದ ಪದ್ಯವೊಂದರಲ್ಲಿ ‘ರಂಧನ’ ಪದವನ್ನು ತಾನು ಬಳಸಿಕೊಂಡದ್ದನ್ನೂ ಗಣೇಶ್ ನೆನಪಿಸಿಕೊಂಡರು. ‘ರಾಗದ ಬಂಧನ ಸೊಗಸಾಯ್ತು ಅನು-ರಾಗದ ರಂಧನ ರುಚಿಯಾಯ್ತು… ನಾಗನರ್ತನಕೆ ಭೋಗವರ್ತನಕೆ ಭಾಗಿಯಾಗೆ ನೀ ಸೊಗಸಾಯ್ತು…’ ಪದ್ಯವನ್ನು ಸರಾಗವಾಗಿ ಹಾಡೇಬಿಟ್ಟರು! ಅದೇನು ಚಮತ್ಕಾರವೋ ಏನೋ, ಗಣೇಶರ ಮಾತುಗಳನ್ನು ಮೈಯೆಲ್ಲ ಕಿವಿಯಾಗಿ ಕೇಳುತ್ತಿದ್ದ ನಮಗೆ ‘ಅನುರಾಗದ ರಂಧನ’ ಎಂಬ ಪದಪುಂಜವು ಏಕಪ್ರಕಾರವಾಗಿ ತಟ್ಟಿತು.

ನಾಲ್ಕು ಸಾಲುಗಳ ಸುಂದರ ಪದ್ಯದಲ್ಲಿ ಅದೊಂದು ವಿಶೇಷ ಹಿತಾನುಭವ ಕೊಟ್ಟಿತು…’ ಆ ಅಂಕಣಬರಹದ ಕೊನೆಯ ಪ್ಯಾರಗ್ರಾಫ್ ನಾನು ಸದಾ ನೆನಪಲ್ಲಿಡುವ ರೀತಿಯದು. ಅಷ್ಟು ಹೃದಯಸ್ಪರ್ಶಿಯಾಗಿ ಬಹುಶಃ ಅದುವರೆಗೆ ನಾನು ಬರೆದದ್ದಿಲ್ಲ ಆಮೇಲೂ ಬರೆಯಲಿಕ್ಕಾಗಲಿಲ್ಲ. ಆ ಪ್ಯಾರಗ್ರಾಫ್ ಹೀಗಿತ್ತು: ‘ಅಂದಹಾಗೆ, ಗಣೇಶರ ಮನೆಯಲ್ಲಿ ವಿಶಿಷ್ಟವಾದೊಂದು ಅನುರಾಗ ರಂಧನ ಇದೆ. ಅದೇನು ಗೊತ್ತೇ? ಬಾಲ್ಯದಲ್ಲಿ ಅವರೂ ನಮ್ಮನಿಮ್ಮಂತೆ ಅಮ್ಮನ ಅನುರಾಗ ರಂಧನ ಸವಿದವರು. ಈಗ ಅವರದು ಬ್ರಹ್ಮಚರ್ಯದ ಜೀವನ.

ಅಮ್ಮ ಆಲ್ಜೈಮರ್ಸ್ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾರೆ. ಈಗ ಗಣೇಶರೇ ಅಡುಗೆ ಮಾಡಿ ಅಮ್ಮನಿಗೆ ತುತ್ತು ಕೊಟ್ಟು ಉಣಿಸುತ್ತಾರೆ. ಅನುರಾಗ ರಂಧನ ಅಂದೂ ಇಂದೂ ಅನೂಚಾನವಾಗಿ ನಡೆದಿದೆ. ಪಾತ್ರೆಗಳು ಅದೇ ಇವೆ, ಪಾತ್ರಗಳು ಅದಲುಬದಲಾಗಿವೆ.’ ವಿಶ್ವವಾಣಿಯಲ್ಲಿ ತಿಳಿರುತೋರಣ ಅಂಕಣಬರಹಗಳನ್ನು, ಹಾಗೆಯೇ ಫೇಸ್‌ಬುಕ್/ವಾಟ್ಸ್ಯಾಪ್‌ಗಳಲ್ಲಿ ಪ್ರಕಟಿಸುವ ಸ್ವಚ್ಛ ಭಾಷೆ ಕಲಿಕೆ ಕಂತುಗಳನ್ನು ತಾನು ನಿಯತವಾಗಿ ಓದುತ್ತೇನೆ, ಇಷ್ಟಪಡುತ್ತೇನೆ ಎಂದು ಗಣೇಶ್ ನನ್ನಲ್ಲಿ ಆಗೊಮ್ಮೆ ಈಗೊಮ್ಮೆ ತಿಳಿಸುತ್ತಾರೆ. ಮೊನ್ನೆ ಎಸ್. ವಿ. ಪರಮೇಶ್ವರ ಭಟ್ಟರ ಬಗೆಗಿನ ಅಂಕಣಬರಹವನ್ನೋದಿ ತುಂಬ ಭಾವುಕರಾಗಿ ಸ್ಪಂದಿಸಿದ್ದರು.

ಇದನ್ನಿಲ್ಲಿ ನನ್ನ ಹಿರಿಮೆಗೆಂದು ಹೇಳುತ್ತಿಲ್ಲ, ಪುರಾಣೇತಿಹಾಸಗಳ, ಶಾಸ್ತ್ರ ಮೀಮಾಂಸೆಗಳ ಮಹಾ ಗ್ರಂಥಗಳನ್ನು ಓದಿ
ಅರಗಿಸಿಕೊಂಡಿರುವ ಅವರು ಸಾಮಾನ್ಯರ ಸಾಹಿತ್ಯಕೃಷಿಯನ್ನೂ ಎಷ್ಟು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬುದನ್ನು ಹೈಲೈಟ್ ಮಾಡಲಿಕ್ಕೆಂದೇ ಹೇಳುತ್ತಿದ್ದೇನೆ. ಅವರದು ಬರೀ ‘ಕಣ್ಣು ಹಾಯಿಸುತ್ತೇನೆ’ ಥರದ ಓದಲ್ಲ. ಸೂಕ್ಷ್ಮಾವಲೋಕನ. ಭಲೇ ಭಳಿರೇ ಎಂದು ಸಕ್ಕರೆ ಕೋಟಿಂಗ್‌ನ ಪ್ರಶಂಸೆಗಷ್ಟೇ ಅಲ್ಲ, ರಚನಾತ್ಮಕ ಸಲಹೆ ಮಾರ್ಗದರ್ಶನಕ್ಕೂ.

ಒಂದು ಚಿಕ್ಕ ನಿದರ್ಶನ ಕೊಡುತ್ತೇನೆ: ಕೆಲ ವಾರಗಳ ಹಿಂದೆ ‘ಪ್ರೇಮಗಾನ ಪದ ಲಾಸ್ಯವೋ ಅಥವಾ ತಡ ಲಾಸ್ಯವೋ?’ ತಲೆಬರಹದ ಲೇಖನ ಬರೆದಿದ್ದೆನಷ್ಟೆ? ಅದರಲ್ಲೊಂದು ಕಡೆ ‘ತದರ್ಥ, ತದನುಸಾರ, ತದನಂತರ ಮುಂತಾದುವುಗಳಲ್ಲಿ ತತ್ ಎನ್ನುವುದು ಜಶ್ತ್ವ ಸಂಧಿಯಿಂದಾಗಿ ತದ್ ಆಗಿರುವುದು. ಆ ಜಾಡನ್ನು ಹಿಡಿದರೆ ತದ್ರೂಪ, ತದ್ವಿರುದ್ಧ ಇತ್ಯಾದಿಯಂತೆ ತದ್ಲಾಸ್ಯ ಆಗುತ್ತದೆಯೇ ವಿನಾ ತದಲಾಸ್ಯ ಆಗದು’ ಎಂದು ಬರೆದಿದ್ದೆ. ಲೇಖನವನ್ನೋದಿದ ಗಣೇಶ್ ನನಗೆ ಕಳಿಸಿದ್ದ ವಾಟ್ಸ್ಯಾಪ್ ಆಡಿಯೊ ಪ್ರತಿಕ್ರಿಯೆಯಲ್ಲಿ ಮೆಚ್ಚುಗೆ ಸೂಚಿಸಿದರು; ಅಂತೆಯೇ ‘ತದ್ಲಾಸ್ಯ ಸರಿಯಾದ ಸಂಧಿ ಪದ ಅಲ್ಲ. ತತ್ ಮತ್ತು ಲಾಸ್ಯ ಪದಗಳು ಸೇರಿದರೆ ಪಾಣಿನಿಯ ತೋರ್ಲಿ ಸೂತ್ರದಂತೆ ಅಥವಾ ಪರ-ಸವರ್ಣ ಸಂಧಿಯಂತೆ ತಲ್ಲಾಸ್ಯ ಎಂದಾಗುತ್ತದೆ’ ಎಂಬ ತಿದ್ದುಪಡಿಯನ್ನೂ ತಿಳಿಸಿದರು.

ಹಿಂದೊಮ್ಮೆ ಛಂದಸ್ಸಿನ ವ್ಯಾಖ್ಯಾನದ್ದೊಂದು ಲೇಖನವನ್ನು ವಿಜಯವಾಣಿ ಪತ್ರಿಕೆಯಲ್ಲಿ ಬರೆದಿದ್ದಾಗ ಎಲ್ಲವನ್ನೂ ಮತ್ತ
ಕೋಕಿಲ ಛಂದಸ್ಸಿನ ಪದ್ಯಗಳು ಎಂದು ನಾನು ತಪ್ಪಾಗಿ ಬರೆದಿದ್ದನ್ನು ಗಮನಿಸಿ ‘ಮತ್ತಕೋಕಿಲ ಛಂದಸ್ಸಿಗೂ ಮಲ್ಲಿಕಾಮಾಲೆ
ವೃತ್ತಕ್ಕೂ ವ್ಯತ್ಯಾಸವಿದೆ. ನೀವು ಉದಾಹರಿಸಿದ್ದೆಲ್ಲವೂ ಮಲ್ಲಿಕಾಮಾಲೆ ವೃತ್ತದ ಪದ್ಯಗಳು’ ಎಂದು ತಿದ್ದುಪಡಿ ತಿಳಿಸಿದ್ದರು.
ಹಾಗೆ ತಿಳಿಸುವಾಗ ‘ತಾನು ಬಲ್ಲವನು’ ಎಂಬ ಧ್ವನಿಯ ಲವಲೇಶವೂ ಇಲ್ಲ. ಇನ್ನೊಬ್ಬರ ಬರೆವಣಿಗೆಯೂ ಸತ್ಯಯುತವಾಗ
ಬೇಕು ಸತ್ತ್ವಯುತವಾಗಬೇಕು ಎಂಬ ನಿಷ್ಕಲ್ಮಷ ತುಡಿತ ಮಾತ್ರ.

ಅಂಥ ನಿಗರ್ವಿ ನಿರಹಂಕಾರಿ ವಿದ್ವಾಂಸರು ಬೇರೆ ಯಾರಿದ್ದಾರೆ? Approachability ಅಥವಾ ಸ್ನೇಹಶೀಲತ್ವದಲ್ಲೂ
ಗಣೇಶರಿಗೆ ಅವರೇ ಸಾಟಿ. ಇದೂ ನನ್ನ ಅನುಭವಕ್ಕೆ ಆಗಾಗ ಬಂದದ್ದಿದೆ. ಉದಾಹರಣೆಗಳಿಂದಲೇ ವಿವರಿಸುತ್ತೇನೆ: ಅಕ್ಷಯ್
ಮರಾಠೆ ಎಂಬ ನನ್ನೊಬ್ಬ ಕಿರಿಯ ಮಿತ್ರ, ಮೂಲತಃ ನಮ್ಮೂರಿನವನೇ, ಈಗ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದು
ಹವ್ಯಾಸಕ್ಕೆಂದು ಸಂಸ್ಕೃತದಲ್ಲಿ ಚಿಕ್ಕಚಿಕ್ಕ ಶ್ಲೋಕಗಳನ್ನು ರಚಿಸುತ್ತಾನೆ.

ಸಂಸ್ಕೃತ ಶ್ಲೋಕ ಸೌರಭ ಎಂಬ ಯುಟ್ಯೂಬ್ ಚಾನೆಲ್ ಸಹ ಮಾಡಿದ್ದಾನೆ. ಕಳೆದವರ್ಷ ನವೆಂಬರ್‌ನಲ್ಲಿ ರಾಜ್ಯೋತ್ಸವ ವಿಶೇಷ ಎಂದು ಕರ್ನಾಟಕದ ಬೇರೆಬೇರೆ ಜಿಲ್ಲೆಗಳ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಶ್ಲೋಕ ರಚಿಸಿದ್ದ, ಅದೂ ಸಂಸ್ಕೃತದ
ಕೆಲವೊಂದು ಕ್ಲಿಷ್ಟಕರ ವೃತ್ತಗಳಲ್ಲಿ! ಆತನನ್ನು ಗಣೇಶರಿಗೆ ಪರಿಚಯಿಸಿದರೆ ಒಂದಿಷ್ಟು ಮಾರ್ಗದರ್ಶನ ಆಗಬಹುದು ಎಂಬ
ಆಲೋಚನೆ ನನಗೆ ಬಂತು. ಸರಿ, ಅಕ್ಷಯನ ಕೆಲವು ರಚನೆಗಳನ್ನು ಗಣೇಶರಿಗೆ ಫಾರ್ವರ್ಡ್ ಮಾಡಿ ಆತನ ಬಗ್ಗೆ ಬರೆದೆ.

ಅವನಿಗೂ ಗಣೇಶರ ಸಂಪರ್ಕವಿವರ ಕೊಟ್ಟು ಒಮ್ಮೆ ಕೇಳಿ ನೋಡು ಎಂದು ಬರೆದೆ. ಈಗ ಅವರಿಬ್ಬರ ಸಂಪರ್ಕ ಏರ್ಪಟ್ಟಿದೆ. ಯಾವ್ಯಾವ ಪುಸ್ತಕಗಳನ್ನು ಓದಿ ಕಲಿಯಬೇಕು, ಹವ್ಯಾಸವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಗಣೇಶರು ಅಕ್ಷಯನಿಗೆ
ಮಾರ್ಗದರ್ಶನ ಮಾಡಿದ್ದಾರೆ. ಆತನ ಶ್ಲೋಕರಚನೆಯ ಹುಮ್ಮಸ್ಸು ದುಪ್ಪಟ್ಟಾಗಿದೆ! ಇದೇರೀತಿ ಕೆಲವು ವರ್ಷಗಳ ಹಿಂದೆ
ಅಮೆರಿಕನ್ನಡಿತಿಯೊಬ್ಬರಿಗೆ ‘ಅಭಿeನ ಶಾಕುಂತಲಮ್’ ನಾಟಕದ ಯಾವುದಾದರೂ ಸನ್ನಿವೇಶ ಶಕುಂತಲೆಯ ಸ್ವಗತ
ರೀತಿಯಲ್ಲಿ ನಿರೂಪಿಸಿದ್ದು ಬೇಕಿತ್ತು, ರಂಗಾಭಿನಯದ ಸ್ಪರ್ಧೆಯೊಂದರಲ್ಲಿ ಭಾಗವಹಿಸಲಿಕ್ಕೆ.

ಗಣೇಶರನ್ನು ದೂರವಾಣಿಯಲ್ಲಿ ಕೇಳಲಾಗಿ ಅವರು ಮಾರನೆ ದಿನವೇ ಸುಮಾರು ಏಳೆಂಟು ನಿಮಿಷಗಳ ಅಭಿನಯಕ್ಕಾಗುವಷ್ಟು
ಬರೆದುಕಳುಹಿಸಿದರು. ಆ ಸ್ವಗತ ಸಂಭಾಷಣೆಯನ್ನು ಬಳಸಿಕೊಂಡ ಅಮೆರಿಕನ್ನಡಿತಿ ಶಕುಂತಲೆಯಾಗಿ ರಂಗಾಭಿನಯ
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದರು!

ಹೀಗೆ, ಶತಾವಧಾನಿ ಡಾ. ಆರ್. ಗಣೇಶ ಅಂದರೆ ಘನಪಂಡಿತ ಅಷ್ಟೇ ಅಲ್ಲ, ಗುಣಗಳ ಗಣಿ. ಅವರ ಮನೆಗೆ ನಾನು ಭೇಟಿ ಯಿತ್ತ ಸಂದರ್ಭವನ್ನು ಮೇಲೆ ಉಲ್ಲೇಖಿಸಿದೆನಷ್ಟೆ? ನನ್ನೊಂದಿಗೆ ಪತ್ನಿ ಸಹನಾ ಕೂಡ ಬಂದಿದ್ದಳು. ಸಾಹಿತ್ಯಸಂಬಂಧಿ ವಿಚಾರ ವಿನಿಮಯ ಆಕೆಗೆ ರೆಲವೆಂಟ್ ಅನಿಸಿರಲಾರದಾದರೂ ಗಣೇಶರ ಅಮ್ಮನನ್ನು ಕಂಡು ಅವರ ಚಲನವಲನಗಳನ್ನು ಸಹನಾ ಗೌರವ ದಿಂದಲೇ ಗಮನಿಸಿದ್ದಳು. ನಾವು ಅವರಲ್ಲಿಂದ ಹೊರಡುವಾಗ ಅಮ್ಮನ ಪರವಾಗಿ ಗಣೇಶರೇ ಕುಂಕುಮದ ಪುಟ್ಟ ಭರಣಿಯನ್ನು ಸಹನಾಳ ಮುಂದೆ ಹಿಡಿದು ‘ಕುಂಕುಮ ಹಚ್ಕೊಳ್ಳಮ್ಮಾ’ ಎಂದಿದ್ದು ಈಗಲೂ ನೆನಪಿದೆ.

ಅದಕ್ಕಿಂತಲೂ ಹೆಚ್ಚಾಗಿ, ಗಣೇಶರ ಅಮ್ಮ ಗಣೇಶರನ್ನು ‘ಗಣಿ… ಗಣಿ…’ ಎಂದು ಕರೆಯುತ್ತಿದ್ದುದನ್ನು ಸಹನಾ ಆಗಾಗ ನೆನಪಿಸಿಕೊಳ್ಳುತ್ತಾಳೆ. ಅಮ್ಮನ ಬಾಯಿಯಿಂದಲೇ ಆ ಮಾತು ಬಂದಿದೆಯೆಂದರೆ ಅದು ಸಾರ್ವಕಾಲಿಕ ಸತ್ಯವೇ. ಅಂಥ ಜ್ಞಾನದ ಗಣಿಗೆ ಈಗ ಅರವತ್ತು ತುಂಬಿದೆ. ಅರವತ್ತಾದ ಮೇಲೆ ಮತ್ತಷ್ಟು ಅರಳಲಿ, ಗಣಿ ಅಕ್ಷಯವಾಗಲಿ ಎಂದು ನಾವೆಲ್ಲರೂ ಹಾರೈಸೋಣ.