Saturday, 23rd November 2024

ಸ್ವಾತಂತ್ರ‍್ಯ ಲಕ್ಷ್ಮೀ ಜೈ ಎಂದಿದ್ದ ಸಾವರ್ಕರ್‌

ವೀಕೆಂಡ್ ವಿತ್‌ ಮೋಹನ್‌

ಬ್ರಿಟಿಷರು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೆದರಿ, ಮತ್ತೊಮ್ಮೆ ಅಂತಹ ಹೋರಾಟ ಮರುಕಳಿಸದಿರಲು ಬ್ರಿಟಿಷ್ ಅಽಕಾರಿಯೊಬ್ಬನ ನೇತೃತ್ವದಲ್ಲಿ 1885ರಲ್ಲಿ ‘ಕಾಂಗ್ರೆಸ್’ ಸ್ಥಾಪಿಸಿದರೆ, ಇತ್ತ 1899ರ ನವೆಂಬರ್ ಕೊನೆಯ ವಾರದಲ್ಲಿ 16 ವರ್ಷದ ತರುಣ ‘ವೀರ ಸಾವರ್ಕರ್’ ಬ್ರಿಟಿಷರ ವಿರುದ್ಧ ರಣಕಹಳೆಯನ್ನು ಊದಲು ಮೊಟ್ಟಮೊದಲ ಬಾರಿಗೆ ಒಂದು ಗುಪ್ತ ಸಂಸ್ಥೆಯನ್ನು ಸ್ಥಾಪಿಸಿದರು, ಈ ಸಂಸ್ಥೆಗೆ ‘ರಾಷ್ಟ್ರಭಕ್ತ ಸಮೂಹ’ ವೆಂದು ಹೆಸರಿಟ್ಟರು.

ಗುಪ್ತಸಂಸ್ಥೆಯ ವಿಚಾರಗಳನ್ನು ಜಾಣತನದಿಂದ ಪ್ರಸಾರ ಮಾಡಬೇಕಾಗಿದ್ದು ದರಿಂದ ಧಾರ್ಮಿಕ ಭಾಷೆಯನ್ನೊಳಗೊಂಡ ‘ರಾಮಹರಿ’ಯೆಂಬ ಸಾಂಕೇತಿಕ ನಾಮವನ್ನು ರೂಢಿಗೆ ತಂದಿದ್ದರು. ಯುವಕರನ್ನು ಆಕರ್ಷಿಸಲು ಬಹಿರಂಗ ಸಾರ್ವಜನಿಕ ಸಂಸ್ಥೆಯ ಅಗತ್ಯವಿದ್ದ ಕಾರಣ, 01-01-1900ರಂದು ‘ಮಿತ್ರಮೇಳ’ವೆಂಬ ಯುವಕರ ಸಂಸ್ಥೆಯನ್ನು ಸ್ಥಾಪಿಸಿದರು ಸಾವರ್ಕರ್. ಈ ಸಂಸ್ಥೆಯ ಮೂಲಕ ರಾಷ್ಟ್ರೀಯ ವಿಚಾರಧಾರೆಗಳನ್ನು ವೇದಿಕೆ ಸಿಕ್ಕಲ್ಲೆ ಸಾರುವುದು, ಯುವಕರನ್ನುಒಂದೆಡೆ ಸೇರಿಸಿ ರಾಷ್ಟ್ರೀಯತೆಯ ಬಗ್ಗೆ ಜಾಗೃತಿ ಮೂಡಿಸುವುದು, ರಾಷ್ಟ್ರೀಯತೆಯ ಲೇಖನಗಳನ್ನು ಬರೆಯುವುದು, ಚರ್ಚೆಗೆ ಒಂದು ವಿಷಯವನ್ನು ತೆಗೆದುಕೊಂಡು ಅದರ ಬಗ್ಗೆ ಭಾಷಣ ಮಾಡುವುದು, ನಿಷ್ಠಾವಂತರು ಹಾಗೂ ವಿಶ್ವಾಸಕ್ಕೆ ಪಾತ್ರರಾದವರನ್ನು ಆರಿಸಿ ಚೆನ್ನಾಗಿ ಪರಿಶೀಲಿಸಿ ನಂತರ ಗುಪ್ತಸಂಸ್ಥೆಗೆ ಸೇರಿಸುವುದು ಸಾವರ್ಕರರ  ಉದ್ದೇಶ ವಾಗಿತ್ತು.

ಪ್ರತಿ ವಾರಾಂತ್ಯದಲ್ಲಿ ಮಿತ್ರಮಂಡಳಿಯ ಸಭೆಗಳು ನಡೆದವು. ಸ್ವಭಾಷೆ, ಇತಿಹಾಸ, ಗೋರಕ್ಷಣೆ, ವೇದಾಂತ ಹೀಗೆ ಹಲವು ವಿಚಾರಗಳ ಬಗ್ಗೆ ಚರ್ಚೆಗಳು ಶುರುವಾದವು. ಈ ಚರ್ಚೆಗಳು ಬಂದಾಗಲೆಲ್ಲ, ರಾಜಕೀಯ ಸ್ವಾತಂತ್ರ್ಯವಿಲ್ಲದೇ ರಾಷ್ಟ್ರೀಯ ಜೀವನದ ಅಂಗಗಳಿಂದ ಇದ್ಯಾವುದಕ್ಕೂ ಅಸ್ತಿತ್ವವಿಲ್ಲ, ಹಾಗಾಗಿ ಆಚರಣೆ ಎಲ್ಲಿಂದ ಬಂತೆಂಬುದು ಸಾವರ್ಕರರ ವಾದ ವಾಗಿತ್ತು. ನೋಡನೋಡುತ್ತಲೇ ‘ಮಿತ್ರಮಂಡಳಿ’ ದೊಡ್ಡದಾಗಿ ಬೆಳೆ ಯತೊಡಗಿತು, ಯುವಕರಲ್ಲಿ ರಾಷ್ಟ್ರೀಯತೆಯ ಬೀಜವನ್ನು ಆಳವಾಗಿ ಬಿತ್ತುವಲ್ಲಿ ಸಾವರ್ಕರ್ ಯಶಸ್ವಿಯಾಗಿದ್ದರು.

ಸಾವರ್ಕರರ ದೃಷ್ಟಿಯಲ್ಲಿ ಸ್ವಾತಂತ್ರ್ಯಲಕ್ಷ್ಮಿಯ ಇತಿಹಾಸ ಪಾರಾಯಣ ಮಾಡುವುದು ಅತ್ಯಗತ್ಯವಾಗಿತ್ತು; ಎಲ್ಲಿಯವರೆಗೂ ಬಹಿರಂಗವಾಗಿ ಸ್ವಾತಂತ್ರ್ಯಗಳಿಕೆಯ ಪ್ರಚಾರ ಸಾಧ್ಯವಿಲ್ಲವೋ ಅಲ್ಲಿಯವರೆಗೂ ಅದರ ರಹಸ್ಯ ಪ್ರಚಾರ ಅತ್ಯಗತ್ಯವೆಂಬು ದನ್ನು ಸಾವರ್ಕರ್ ಯಾವಾಗಲೂ ಹೇಳುತ್ತಿದ್ದರು. ಸಾವರ್ಕರ್ ಸ್ಥಾಪಿಸಿದ ಮಿತ್ರಮಂಡಳಿ ಸಾರ್ವಜನಿಕ ರಂಗಕ್ಕೆ ಪ್ರವೇಶಿಸಲು ವೇದಿಕೆಯಾದದ್ದು ‘ಶಿವಾಜಿ ಜಯಂತಿ’. ತಮ್ಮ ಬಾಲ್ಯದಿಂದಲೇ ಲೋಕಮಾನ್ಯ ಬಾಲಗಂಗಾಧರ ತಿಲಕರ ಪರಮ ಅನುಯಾ ಯಿಯಾಗಿದ್ದ ಸಾವರ್ಕರ್, ಸಾರ್ವಜನಿಕವಾಗಿ ಸ್ವಾತಂತ್ರ್ಯ ಕಹಳೆಯ ಜಾಗೃತಿಯನ್ನು ಮೂಡಿಸಲು ತಿಲಕರ ಮಾರ್ಗವನ್ನೇ ಹಿಡಿದರು.

ತಿಲಕರು ಬ್ರಿಟಿಷರ ವಿರುದ್ಧ ಹೋರಾಡಲು ಹಿಂದೂಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ 1893ರಲ್ಲಿ ಗಣೇಶೋತ್ಸವವನ್ನು
ಪ್ರಾರಂಭಿಸಿದ ರೀತಿಯಲ್ಲಿ ಸಾವರ್ಕರರು ಸಾರ್ವಜನಿಕವಾಗಿ ಹಿಂದೂ ಹಬ್ಬಗಳ ಆಚರಣೆಯ ಮೂಲಕ ಬ್ರಿಟಿಷರ ವಿರುದ್ಧ
ತರುಣ ಪಡೆಯನ್ನು ಕಟ್ಟಲು ಸಿದ್ದರಾದರು. ಮೊದಮೊದಲು ಊರಿನ ಹಿರಿಯರು ಬ್ರಿಟಿಷರಿಗೆ ಹೆದರಿ ‘ಶಿವಾಜಿ ಜಯಂತಿ’
ಯನ್ನು ವಿರೋಧಿಸಿದರು, ನಂತರ ಇಡೀ ಊರಿನ ಜನರೇ ಮೆರವಣಿಗೆಯಲ್ಲಿನ ಯುವಕರ ಉತ್ಸಾಹ, ಆವೇಶವನ್ನು ನೋಡಿ ಆನಂದಪಟ್ಟರು.

ಉತ್ಸವದ ಕೊನೆಯಲ್ಲಿ ಸಾವರ್ಕರರ ಮುಖ್ಯಭಾಷಣ; ಅದರಲ್ಲಿ ಸಾವರ್ಕರರು ‘ಶಿವಾಜಿ ಉತ್ಸವ’ವನ್ನು ಬ್ರಿಟಿಷರ ಸಂಕೋಲೆಗಳನ್ನು ಕಳಚಿ ಭಾರತವನ್ನು ಸ್ವಾತಂತ್ರ್ಯಗೊಳಿಸುವ ಸೂರ್ತಿ ಪಡೆಯುವ ಸಲುವಾಗಿ ಆಚರಿಸುತ್ತಿದ್ದೇವೆಂದು, ಗುಲಾಮಿತನದಲ್ಲಿ ಸಮಾಧಾನ ಪಡೆಯುವುದಿದ್ದರೆ ಈ ಉತ್ಸವ ಬೇಕಾಗಿರಲಿಲ್ಲವೆಂದು ಹೇಳಿದ್ದರು. ಪ್ರಸ್ತುತ ರಾಜ್ಯದಲ್ಲಿ ಗಣೇಶೋತ್ಸವದ ವಿಚಾರವಾಗಿ ಕೇಳಿಬರುತ್ತಿರುವ ಕಾಂಗ್ರೆಸ್ ಪಕ್ಷದ ಆಕ್ಷೇಪಣೆಗಳನ್ನು ನೋಡಿದರೆ, ಬ್ರಿಟಿಷರ ಗುಲಾಮಗಿರಿ ಯನ್ನು ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಜಾರಿಗೆ ತರುವಂತೆ ತೋರುತ್ತಿದೆ.

‘ಮಿತ್ರಮಂಡಳಿ’ಯ ಉತ್ಸವದ ನಂತರ ಇಡೀ ಊರಿನಲ್ಲಿ ಉತ್ಸವದ್ದೇ ಮಾತು, ಅದರ ಬಗ್ಗೆಯೇ ಚರ್ಚೆ; ಅದಾದ ನಂತರ ನಾಲ್ಕುತಿಂಗಳಿಗೆ ‘ಗಣೇಶ ಹಬ್ಬದ ಸಡಗರ’. ಮಿತ್ರಮೇಳದಿಂದ ಊರಿನಲ್ಲಿ ‘ಗಣಪತಿ ಮೂರ್ತಿ’ಯ ಪ್ರತಿಷ್ಠಾಪನೆಯಾಯಿತು. ಸಾವರ್ಕರರ ಮಿತ್ರಮಂಡಳಿಯ ಗಣೇ ಶೋತ್ಸವ ಕಾರ್ಯಕ್ರಮದಲ್ಲಿ ಬೆಳಗುತ್ತಿದ್ದಂತಹ ಹೊಸ ತೇಜಸ್ಸು, ರಾಷ್ಟ್ರೀಯವಾದದ
ಕಿಚ್ಚು, ಚೈತನ್ಯ, ಸ್ವಾತಂತ್ರ್ಯದ ಕಿಚ್ಚು, ಹಿಂದೂಗಳ ಒಗ್ಗೂಡುವಿಕೆ ಇಡೀ ಊರಿನ ನಾಗರಿಕರನ್ನು ಆಕರ್ಷಿಸಿತ್ತು. ಈ
ಗಣೇಶೋತ್ಸವದಲ್ಲಿ ಸ್ವದೇಶ ಭಕ್ತಿಯ ಪ್ಯಾರಾಗಟ್ಟಲೆ ಲಾವಣಿಗಳು ರಚನೆಯಾದವು, ಲಾವಣಿಗಳನ್ನು ಕೇಳಿದ ಸಮಸ್ತ ಜನಸ್ತೋಮ ಸ್ವದೇಶಿ ಕಿಚ್ಚಿನೆಡೆಗೆ ಆಕರ್ಷಿತರಾಗಿದ್ದರು.

ಆ ಹಾಡುಗಳಲ್ಲಿ, ಭಾಷಣಗಳಲ್ಲಿ ಸ್ವಾತಂತ್ರ್ಯದ ಸಂದೇಶ ಬಿಟ್ಟರೆ ಬೇರೇನೂ ಇರಲಿಲ್ಲ. ಗಣೇಶನ ಮೆರವಣಿಗೆಯ ಉದ್ದಕ್ಕೂ ‘ಸ್ವಾತಂತ್ರ್ಯಲಕ್ಷ್ಮಿ ಕೀ ಜೈ’ ಘೋಷಣೆಗಳು ಗಗನಭೇದಿಯಾದವು. ನಾಸಿಕ್ ನಗರದ ರಸ್ತೆರಸ್ತೆಗಳಲ್ಲಿ ಈ ಜೈಕಾರ ಒಂದಕ್ಕೆ ಹತ್ತಾಗಿ, ಸಾವಿರವಾಗಿ ಪ್ರತಿಧ್ವನಿಸತೊಡಗಿತು. ಅಂದು ವೀರ ಸಾವರ್ಕರ್ ಹಚ್ಚಿದ ‘ಸ್ವಾತಂತ್ರ್ಯಲಕ್ಷ್ಮಿ ಕೀ ಜೈ’ ಘೋಷಣೆಗಳು ಇಡೀ ದೇಶಕ್ಕೆ ಹಬ್ಬಿದ್ದವು.

ಪ್ರತಿಯೊಂದು ಉತ್ಸವದಲ್ಲಿಯೂ ಸ್ವಾತಂತ್ರ್ಯಕ್ಕೆ ಸಶಸ್ತ್ರಕ್ರಾಂತಿಯೇ ಏಕೈಕಮಾರ್ಗವೆಂದು ಸಾವರ್ಕರ್ ಬಹಿರಂಗವಾಗಿ ಮಿತ್ರಮಂಡಳಿಯ ಮೂಲಕ ಹೇಳುತ್ತಿದ್ದರು. ಸ್ವಾತಂತ್ರ್ಯ ಕೇವಲ ಅಹಿಂಸೆಯಿಂದ ಮಾತ್ರ ಬಂದಿತೆನ್ನುವವರಿಗೆ ಸಾವರ್ಕರರ ಕ್ರಾಂತಿಕಾರಿ ಚಳವಳಿಯ ಅರಿವಿರುವುದಿಲ್ಲ. ಗಣೇಶೋತ್ಸವದ ಮೂಲಕ ಸಾವಿರಾರು ಯುವಕರನ್ನು ಸಂಘಟಿಸುವಲ್ಲಿ ಸಾವರ್ಕರ್ ಯಶಸ್ವಿಯಾಗಿದ್ದರು.

ತಿಲಕರ ಹಾದಿಯಲ್ಲಿಯೇ ಸಾವರ್ಕರ್ ರಾಜ್ಯಾದ್ಯಂತ ಹಿಂದೂಧರ್ಮದ ಉತ್ಸವಗಳ ಮೂಲಕ ತರುಣರನ್ನು ಒಗ್ಗೂಡಿಸುವ ಕೆಲಸದಲ್ಲಿ ಯಶಸ್ವಿಯಾದರು. ಸಾವರ್ಕರರಿಗೂ ಗಣೇಶೋತ್ಸವಕ್ಕೂ ಏನು ಸಂಬಂಧವೆಂದು ಕಾಂಗ್ರೆಸ್ಸಿಗರು ಹಾಗೂ ಕಮ್ಯುನಿಸ್ಟರು ಬಾಯಿಗೆ ಬಂದಂತೆ ಮಾತನಾಡುತ್ತಾರೆ; ಆದರೆ ಅಂದು ಸಾವರ್ಕರ್ ಗಣೇಶೋತ್ಸವದ ಮೂಲಕ ಯುವಕರನ್ನು
ಬ್ರಿಟಿಷರ ವಿರುದ್ಧ ಹೋರಾಡಲು ಸಜ್ಜುಗೊಳಿಸಿದ್ದರ ಫಲವಾಗಿಯೇ ಇಂದು ಇವರಿಗೆ ವಾಕ್‌ಸ್ವಾತಂತ್ರ್ಯ ದೊರಕಿದ್ದು. ಹಿಂದೂ ಧರ್ಮದಲ್ಲಿನ ಒಗ್ಗಟ್ಟಿನ ಕೊರತೆ ಸಾವರ್ಕರರಿಗೆ ಚೆನ್ನಾಗಿ ತಿಳಿದಿತ್ತು, ಮಹಾತ್ಮ ಗಾಂಧಿಯವರೂ ಹಿಂದೂ ಧರ್ಮದಲ್ಲಿನ ಒಗ್ಗಟ್ಟಿನ ಕೊರತೆಯ ಕುರಿತು ಹೇಳಿದ್ದರು.

ಮುಸಲ್ಮಾನರಲ್ಲಿನ ಒಗ್ಗಟ್ಟು ಹಿಂದೂಗಳಲ್ಲಿರಲಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಲು, ಹಿಂದೂ ಧರ್ಮದ ಒಗ್ಗಟ್ಟನ್ನು ಬಲಪಡಿಸ ಲು ತಿಲಕರ ಹಾದಿಯಲ್ಲಿ ಸಾವರ್ಕರ್ ಗಣೇಶೋತ್ಸವವನ್ನು ತಮ್ಮ ಊರಿನಲ್ಲಿ ಪ್ರಾರಂಭಿಸಿದ್ದರು. ಅಂದು ಶುರುವಾದಂತಹ ಉತ್ಸವ ದೇಶದಾದ್ಯಂತ ಮತ್ತಷ್ಟು ವೇಗವನ್ನು ಪಡೆಯಿತು. ಅಂದು ಸಾವರ್ಕರ್ ಹಾಗೂ ಮಹಾತ್ಮ ಗಾಂಧಿ ಹೇಳಿದ ಹಿಂದೂ ಧರ್ಮದ ಒಗ್ಗಟ್ಟಿನ ಸಮಸ್ಯೆ ಪ್ರಸಕ್ತ ಕಾಲಮಾನದಲ್ಲಿಯೂ ಇದೆ.

ಗಣೇಶೋತ್ಸವದ ವಿಚಾರದಲ್ಲಿ ಇಂದೂ ನಕಾರಾತ್ಮಕವಾಗಿ ಧ್ವನಿ ಎತ್ತುತ್ತಿರುವವರಲ್ಲಿ ಹಿಂದುಗಳ ಪಾಲೇ ಅಧಿಕವಾಗಿದೆ.
ಸಾವರ್ಕರರ ಸಾರ್ವಜನಿಕ ಉತ್ಸವ ಕೇವಲ ಗಣೇಶೋತ್ಸವಕ್ಕೆ ಸೀಮಿತವಾಗಿರಲಿಲ್ಲ, ಅವರು ಶಾಲಾದಿನಗಳನ್ನು
ಮುಗಿಸಿ ಕಾಲೇಜಿಗೆ ಸೇರಿದ ನಂತರವೂ ಮುಂದುವರಿಯಿತು. ಪೂನಾದ ‘ಫರ್ಗುಸನ್’ ಕಾಲೇಜು ಸೇರಿದ ಸಾವ
ರ್ಕರ್, ತಾವು ಉಳಿದುಕೊಂಡಿದ್ದ ವಸತಿ ನಿಲಯದ ಭೋಜನ ಶಾಲೆಯಲ್ಲಿದ್ದ ‘ಶಿವಾಜಿ’ ಮಹಾರಾಜರ ಭಾವಚಿತ್ರಕ್ಕೆ ಪ್ರತಿ ಶುಕ್ರವಾರ ಸಾಮೂಹಿಕ ಪೂಜೆ ಸಲ್ಲಿಸುವ ವ್ಯವಸ್ಥೆಯನ್ನು ಜಾರಿಗೆ ತಂದರು. ತಾವು ಹೋದಲೆ ಸಾವರ್ಕರರ ದೃಢನಿಶ್ಚಯ ವೊಂದೇ- ಅದುವೇ ‘ಸ್ವಾತಂತ್ರ್ಯಲಕ್ಷ್ಮಿ ಜೈ’.

ಹಬ್ಬಗಳ ಆಚರಣೆ, ಹಿಂದೂಗಳನ್ನು ಬ್ರಿಟಿಷರೆದುರು ಸಂಘಟಿಸುವ ಕಾರ್ಯದಲ್ಲಿ ಸಾವರ್ಕರ್ ನಿಸ್ಸೀಮರಾಗಿದ್ದರು. ಇಟಲಿಯಲ್ಲಿ ಕ್ರಾಂತಿಮಾಡಿದ್ದ ‘ಯಂಗ್ ಇಂಡಿಯಾ’ ಸಂಸ್ಥೆಯ ಮಾದರಿಯಲ್ಲಿ, ಮಿತ್ರಮಂಡಳಿ ಭಾರತದಲ್ಲಿಯೂ ಬ್ರಿಟಿಷರ ವಿರುದ್ಧ ಕ್ರಾಂತಿ ಮಾಡಬೇಕೆಂಬ ಉದ್ದೇಶದಿಂದ 1905ರಲ್ಲಿ ‘ಅಭಿನವ ಭಾರತ’ವಾಯಿತು. 1905ರಲ್ಲಿ ‘ವಂಗಭಂಗ’ ಚಳವಳಿ ಆರಂಭ ವಾಯಿತು, ಎಡೆ ತಿಲಕರ ‘ಬಹಿಷ್ಕಾರ-ಸ್ವದೇಶಿ-ರಾಷ್ಟ್ರೀಯ ಶಿಕ್ಷಣ-ಸ್ವರಾಜ್ಯ’ದ ಘೋಷಣೆಗಳು ಕೇಳಿಬರುತ್ತಿದ್ದವು. ಇದೇ ಸಮಯದಲ್ಲಿ ಪುಣೆಯಲ್ಲಿ ನಡೆದ ಸಭೆಯೊಂದರಲ್ಲಿ ಸಾವರ್ಕರರು ‘ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಸಂಪೂರ್ಣ ಸ್ವರೂಪ ಬರಬೇಕೆಂದರೆ ಅವುಗಳ ದಹನ ಆಚರಿಸುವುದು ಅತ್ಯಗತ್ಯ’ವೆಂದರು.

ಅಂದಿನಿಂದ ಒಂದು ವಾರಕ್ಕೆ ಸರಿಯಾಗಿ ಹೋಳಿಹಬ್ಬವಿತ್ತು, ಅಂದೇ ವಿದೇಶಿ ವಸ್ತ್ರದ ದಹನದ ಹೋಳಿಯನ್ನುಆಚರಿಸಲು ಸಾವರ್ಕರ್ ನಿರ್ಧರಿಸಿದ್ದರು. ವಿದೇಶಿ ವಸ್ತುಗಳನ್ನು ಸುಡುವ ಮೂಲಕ ಬ್ರಿಟಿಷರ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸುವುದು ಸಾವರ್ಕರರ ಉದ್ದೇಶವಾಗಿತ್ತು. ಹೀಗಾಗಿ ತಿಲಕರ ಬಳಿ ವಿಷಯ ಮುಟ್ಟಿಸಿ ಹೋಳಿ ಆಚರಿಸುವುದರ ಬಗ್ಗೆ ಚರ್ಚಿಸಿದರು. ಯುವಕರ ಉತ್ಸಾಹಕ್ಕೆ ತಿಲಕರು ಎಂದೂ ಇಲ್ಲ ಎಂದವರಲ್ಲ. ಅರ್ಧ ಗಾಡಿಯಾದರೂ ಸರಿ ಅಥವಾ ಒಂದು ಗಾಡಿಯಾದರೂ ಸರಿ, ವಿದೇಶಿ ಬಟ್ಟೆಗಳ ಸಂಗ್ರಹ ಮಾಡಿ ಹೋಳಿಯಂದು ದಹನ ಮಾಡುವಂತೆ ತಿಲಕರು ಸಾವರ್ಕರರಿಗೆ ತಿಳಿಸಿದರು.

ಸಾವರ್ಕರರ ತಂಡ ಒಂದು ಸಂಪೂರ್ಣ ಗಾಡಿ ತುಂಬುವಷ್ಟು ವಿದೇಶಿ ಬಟ್ಟೆಯನ್ನು ಒಂದೆಡೆ ಸೇರಿಸಿತು, ಅದರ ಮೇಲೆ ಚೆನ್ನಾಗಿ ಗುಲಾಲನ್ನು ಸುರಿಯಲಾಯಿತು. ಹಣತೆ ಹಚ್ಚಿ ವಿದೇಶಿ ಬಟ್ಟೆಗಳಿಂದ ತುಂಬಿದ್ದ ಗಾಡಿ ಮೆರವಣಿಗೆ ಹೊರಟಿತು. ಮೆರವಣಿಗೆಯ ಹಿಂದೆ ಮುಂದೆ ಸಾವಿರಾರು ತರುಣರು ಗುಂಪುಗುಂಪಾಗಿ ಹೆಜ್ಜೆಹಾಕಿದರು. ಮೆರವಣಿಗೆಯನ್ನು ಮೈದಾನದ ಬಳಿ ನಿಲ್ಲಿಸಿ, ಸಂಗ್ರಹಿಸಿದ್ದ ವಿದೇಶಿ ಬಟ್ಟೆಗಳನ್ನುಒಂದೆಡೆ ಗುಡ್ಡೆ ಹಾಕಿ ಬೆಂಕಿ ಇಡಲಾಯಿತು, ಬೆಂಕಿಯ ಜ್ವಾಲೆಯ ಪಕ್ಕದಲ್ಲಿಯೇ ‘ತಿಲಕ’ರ ಭಾಷಣ ಶುರುವಾಯಿತು.

ತಿಲಕರು ಅತ್ತ ಗರ್ಜಿಸುತ್ತಿದ್ದರೆ ಇತ್ತ ನೆರೆದಿದ್ದಂತಹ ಜನಸ್ತೋಮ ನಿಶ್ಶಬ್ದವಾಗಿ ಆಲಿಸುತ್ತಿತ್ತು. ಇಡೀ ದೇಶದಲ್ಲಿಯೇ ಮೊದಲ ವಿದೇಶಿ ವಸ್ತುಗಳ ದಹನ ಅದಾಗಿತ್ತು. ಇಂತಹ ಮಹಾನ್ ಕಾರ್ಯಕ್ಕೆ ಕೈಹಾಕಿ ಯಶಸ್ವಿಯಾದ ವೀರ ಸಾವರ್ಕರರ  ಭಾವಚಿತ್ರ ವನ್ನು ಮುಸ್ಲಿಂ ಪ್ರದೇಶದಲ್ಲಿ ಯಾಕೆ ಹಾಕಬೇಕಿತ್ತೆಂದು, ಲಕ್ಷಾಂತರ ರೂಪಾಯಿ ಬೆಲೆಬಾಳುವ ವಿದೇಶಿ ‘ಕೈಗಡಿಯಾರ’ ಕಟ್ಟಿಕೊಂಡಿದ್ದ ಸಿದ್ದರಾಮಯ್ಯ ಪ್ರಶ್ನಿಸುತ್ತಾರೆ. ಸಾವರ್ಕರರ ಹೋಳಿಯ ಕಿಚ್ಚು ಪಕ್ಕದ ನಾಸಿಕ್ ನಗರಕ್ಕೂ ಹಬ್ಬಿತ್ತು, ಅಲ್ಲಿಯೂ ವಿಜಯದಶಮಿಯಂದು ಸಭೆ, ಮೆರವಣಿಗೆ, ಭಾಷಣ, ವಿದೇಶಿ ವಸ್ತುಗಳ ದಹನ ನಡೆಯಿತು.

ಹೋಳಿಹಬ್ಬದಂದು ಪೂನಾದಲ್ಲಿ ನಡೆದ ವಿದೇಶಿ ವಸ್ತುಗಳ ದಹನ ಬ್ರಿಟಿಷ್ ಸರ್ಕಾರವನ್ನು ರೊಚ್ಚಿಗೆಬ್ಬಿಸಿತ್ತು, ಬ್ರಿಟಿಷರ ಬಾಲಬುಡುಕ ಪತ್ರಿಕೆಗಳು ಸಾವರ್ಕರರ ವಿರುದ್ಧ ಬರೆದವು. ಸಾವರ್ಕರರ ಈ ಚಳವಳಿಯಿಂದ ‘-ರ್ಗುಸನ್’ ಕಾಲೇಜು
ಆಡಳಿತ ಮಂಡಳಿ ಸಿಟ್ಟಿಗೆದ್ದಿತ್ತು, ಸಾವರ್ಕರರಿಗೆ ಹತ್ತು ರೂಪಾಯಿ ದಂಡ ಹಾಗೂ ಕಾಲೇಜು ತರಗತಿಗಳಿಂದ ಉಚ್ಚಾಟನೆ ಮಾಡಲಾಯಿತು. ವಿದೇಶಿ ವಸ್ತುಗಳನ್ನು ದಹನ ಮಾಡಿದ ವೀರ ಸಾವರ್ಕರರಿಗೆ ಹೇಡಿಯೆಂಬ ಪಟ್ಟ ನೀಡಿದ ನೆಹರು, ತಾವು ಮಾತ್ರ ವಿದೇಶಿ ‘ಸಿಗಾರ್’ ಬಳಸುವುದನ್ನು ಮರೆಯುತ್ತಿರಲಿಲ್ಲ.

ಸಾರ್ವಜನಿಕ ಗಣೇಶೋತ್ಸವ ಆಚರಣೆ, ನಮ್ಮ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧ ನಡೆಸಿದ ಸಾಮಾಜಿಕ ಹೋರಾಟದ ಬಹುದೊಡ್ಡ ಅಸ್ತ್ರವಾಗಿತ್ತು. ಸಾರ್ವಜನಿಕ ಗಣೇಶೋತ್ಸವ ಆಚರಣೆ ಧಾರ್ಮಿಕ ಆಚರಣೆ ಯಾಗಿರಲಿಲ್ಲ, ಅದು ಹಿಂದುಗಳನ್ನು ಬ್ರಿಟಿಷರ ವಿರುದ್ಧ ಒಗ್ಗೂಡಿಸುವ ಸಾಮಾಜಿಕ ಆಚರಣೆ ಯಾಗಿತ್ತು. ಈ ಆಚರಣೆಯ ಮುಂದಾಳತ್ವ ವಹಿಸಿದ್ದು ತಿಲಕರು. ಅವರನ್ನು ಅನುಸರಿಸುತ್ತಿದ್ದ ಸಾವರ್ಕರ್ ತಮ್ಮ ನೇತೃತ್ವದಲ್ಲಿಯೂ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಿದ್ದರು.

ಸಂಘಟನಾ ಚತುರರಾಗಿದ್ದ ಸಾವರ್ಕರ್ ಉತ್ಸವಗಳ ಮೂಲಕ ಸ್ವಾತಂತ್ರ್ಯಸಮರಕ್ಕೆ ಯುವಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಅಂದಿನಿಂದ ತಿಲಕರು ಹಾಗೂ ಸಾವರ್ಕರರು ಆಚರಿಸಿಕೊಂಡು ಬಂದಂತಹ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಿಸುವುದರ ಜತೆಗೆ, ಗಣೇಶನ ಜತೆಗೆ ಅವರನ್ನೂ ನೆನೆಯಬೇಕಿರುವುದು ನಮ್ಮೆಲ್ಲರ ಕರ್ತವ್ಯ.