Wednesday, 11th December 2024

ಬದಲಾದರೆ ಮಾತ್ರ ಬದುಕೀತು ಬಾಲಿವುಡ್‌

ಪ್ರಸ್ತುತ

ಗಣೇಶ್ ಭಟ್, ವಾರಣಾಸಿ

ಅಮೆರಿಕದ ‘ಹಾಲಿವುಡ್’ನಿಂದ ಪ್ರೇರೇಪಣೆಗೊಂಡು ಹಿಂದೀ ಚಲನಚಿತ್ರೋದ್ಯಮದ ಪ್ರಮುಖ ತಾಣವಾಗಿದ್ದ ಬಾಂಬೆ (ಇಂದಿನ ಮುಂಬೈ) ಸಿನೆಮಾಸ್ ಅನ್ನು 1960-70ನೇ ದಶಕದಲ್ಲಿ ‘ಬಾಲಿವುಡ್’ ಎಂದು ಕರೆಯಲಾಯಿತು. ‘ಬಾಲಿವುಡ್’ ಶಬ್ದವನ್ನು
ಸೃಷ್ಟಿಸಿದವರ ಬಗ್ಗೆ ಒಂದಿಷ್ಟು ಗೊಂದಲಗಳಿವೆ.

ಅರುವತ್ತನೇ ದಶಕದ ಸಿನಿ ಪತ್ರಕರ್ತೆ ಬೆವಿಂದಾ ಕೊಲಾಸೋ ‘ಸ್ಕ್ರೀನ್’ ಹೆಸರಿನ ಸಿನಿಮ್ಯಾಗಜಿನ್ ನಲ್ಲಿ ಬರೆಯುತ್ತಿದ್ದ ಅಂಕಣ ದಲ್ಲಿ ‘ಆನ್ ದ ಬಾಲಿವುಡ್ ಬೀಟ್’ ಹೆಸರಿನ ಲೇಖನವನ್ನು ಪ್ರಕಟಿಸಿ ಬಾಲಿವುಡ್ ಎನ್ನುವ ಹೆಸರನ್ನು ತಾನು ಮೊದಲ ಬಾರಿಗೆ ಪರಿಚಯಿಸಿದ್ದೇ ಎಂದು ಹೇಳಿಕೊಂಡಿದ್ದಾರೆ. ಗೀತಕಾರ ಹಾಗೂ ಸಿನೆಮಾ ನಿರ್ಮಾಪಕ ಅಮಿತ್ ಖನ್ನಾನೇ ಬಾಲಿವುಡ್ ಪದದ ಜನಕ ಎನ್ನುವ ಮಾತುಗಳೂ ಇವೆ. ಆದರೆ ಹಿಂದೀ ಚಿತ್ರರಂಗವನ್ನು ವ್ಯಂಗ್ಯ ಮಾಡಲು ಆ ಪದವನ್ನು ಸೃಷ್ಟಿ ಮಾಡಲಾ ಯಿತು ಎಂಬ ಟೀಕೆಯೂ ಬಾಲಿವುಡ್ ಶಬ್ದದ ವ್ಯುತ್ಪತ್ತಿಯ ಮೇಲಿದೆ.

ಏನೇ ಇರಲಿ, ಭಾರತೀಯ ಚಿತ್ರರಂಗಕ್ಕೆ ಬಾಲಿವುಡ್ ಬಹಳ ಉತ್ತಮ ಸಿನೆಮಾಗಳನ್ನು ಒದಗಿಸಿದೆ. ಆದರೆ ಬಾಲಿವುಡ್‌ಗೆ ಅಂಟಿರುವ ಭೂಗತ ಜಗತ್ತಿನ ಸಂಬಂಧ, ಸ್ವಜನ ಪಕ್ಷಪಾತ, ಸೋಗಲಾಡಿತನ, ಪಾಕಿಸ್ತಾನ ಪ್ರೀತಿ, ಡ್ರಗ್ಸ್, ಸ್ವೇಚ್ಛಾಚಾರ, ಮಿತಿ ಮೀರಿದ ಅಶ್ಲೀಲತೆ, ಭಾರತೀಯತೆಯೆಡೆಗಿನ ಅನಾದರ, ಹಿಂದೂ ವಿರೋಧಿ ಧೋರಣೆ. ತೆರೆಯಲ್ಲಿ ಪಾತಕಿಗಳ ವೈಭವೀಕರಣ, ದಕ್ಷಿಣದ ಭಾರತದ ಜನರ ಬಗ್ಗೆ ಅನಾದರ ಮೊದಲಾದ ವಿಚಾರಗಳು ಜನರಲ್ಲಿ ಬಾಲಿವುಡ್‌ನ ಮೇಲಿನ ನಂಬಿಕೆ ಕಳೆದು ಕೊಳ್ಳುವಂತೆ ಮಾಡಿದೆ.

ಸ್ವಜನ ಪಕ್ಷಪಾತವಂತೂ ಬಾಲಿವುಡ್‌ನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ವಂಶವಾದದ ಕೆಟ್ಟ ಪರಂಪರೆ ಕೆಲವು ದಶಕಗಳ ಹಿಂದೆಯೇ ಆರಂಭವಾಗಿದ್ದರೂ ಇಂದಿಗೂ ಅದು ಮುಂದುವರಿದಿದೆ. ಪ್ರಸಿದ್ಧ ನಟರಾಗಿದ್ದ ಪೃಥ್ವೀರಾಜ್ ಕಪೂರ್ ಮೂಲಕ ಆತನ ಮಕ್ಕಳಾದ ರಾಜ್ ಕಪೂರ್, ಶಮ್ಮಿ ಕಪೂರ್, ಶಶಿ ಕಪೂರ್ ಹಿಂದೀ ಚಿತ್ರರಂಗಕ್ಕೆ ಪ್ರವೇಶವನ್ನು ಪಡೆದರು. ರಾಜ್ ಕಪೂರ್ ಮಗ ರಿಷಿ ಕಪೂರ್ ಚಿತ್ರರಂಗಕ್ಕೆ ಬಂದು ನಂತರ ರಿಷಿ ಕಪೂರ್ ಮಗನಾದ ರಣಬೀರ್ ಕಪೂರ್ ಕೂಡ ಬಾಲಿವುಡ್‌ಗೆ ಸುಲಭವಾಗಿ ಪ್ರವೇಶವನ್ನು ಪಡೆದ. ರಾಜ್ ಕಪೂರ್‌ನ ಇನ್ನೊಬ್ಬ ಪುತ್ರ ರಣಧೀರ್ ಕಪೂರ್‌ಗೂ ಹಿಂದೀ ಚಿತ್ರರಂಗಕ್ಕೆ ಸುಲಭವಾಗಿ ಪ್ರವೇಶ ದೊರೆಯಿತು.

ರಣಧೀರ್ ನ ಪುತ್ರಿಯರಾದ ಕರಿಷ್ಮಾ ಹಾಗೂ ಕರೀನಾರಿಗೂ ಬಾಲಿವುಡ್ ರತ್ನಗಂಬಳಿ ಹಾಸಿ ಸ್ವಾಗತ ಕೋರಿತು. ಪೃಥ್ವೀ ರಾಜ್ ಕಪೂರ್‌ನ ವಂಶದ ನಾಲ್ಕನೇ ತಲೆಮಾರು ಕೂಡ ಬಾಲಿವುಡ್ಡಿನಲ್ಲಿ ಇಂದಿಗೂ ಸಕ್ರಿಯವಾಗಿದ್ದಾರೆ. ಬಾಲಿವುಡ್‌ನ ಗೀತಕಾರ ,
ಸ್ಕ್ರೀನ್ ರೈಟರ್ ಜಾವೇದ್ ಅಖ್ತರ್‌ನ ಮಕ್ಕಳಾದ ಫರ್ಹಾನ್ ಅಖ್ತರ್ ಹಾಗೂ ಝೋಯಾ ಅಖ್ತರ್ ಹಿಂದೀ ಸಿನೆಮಾ ಲೋಕಕ್ಕೆ ಬಂದಿದ್ದಾರೆ.

ಹಿಂದೀ ಚಿತ್ರರಂಗದ, ನಿರ್ಮಾಪಕ, ಕಥೆ ಹಾಗೂ ಸಂಭಾಷಣೆ ಬರೆಯುತ್ತಿದ್ದ ಸಲೀಂ ಖಾನ್ ತನ್ನ ಮಕ್ಕಳಾದ ಸಲ್ಮಾನ್ ಖಾನ್, ಸೊಹೈಲ್ ಖಾನ್ ಹಾಗೂ ಅರ್ಬಾಜ್ ಖಾನ್‌ರನ್ನು ಚಿತ್ರರಂಗಕ್ಕೆ ಕರೆತಂದಿದ್ದಾರೆ. ಪೃಥ್ವೀರಾಜ್ ಕಪೂರ್ ಮೂಲಕವೇ ಹಿಂದೀ
ಚಿತ್ರರಂಗಕ್ಕೆ ಪ್ರವೇಶಿಸಿದ್ದ ಸುರೀಂದರ್ ಕಪೂರ್ ಮೂಲಕ ಅವರ ಮಕ್ಕಳಾದ ಬೋನೀ ಕಪೂರ್, ಅನಿಲ್ ಕಪೂರ್ ಹಾಗೂ ಸಂಜಯ್ ಕಪೂರ್ ಚಿತ್ರರಂಗಕ್ಕೆ ಬಂದರು. ಬೋನಿ ಕಪೂರ್ ಮಕ್ಕಳಾದ ಅರ್ಜುನ್ ಕಪೂರ್, ಜಾಹ್ನವಿ ಹಾಗೂ ಖುಶಿ ಇಂದು ಹಿಂದೀ ಚಿತ್ರ ರಂಗದಲ್ಲಿದ್ದಾರೆ.

ಅನಿಲ್ ಕಪೂರ್ ಮಗಳಾದ ಸೋನಂ ಕಪೂರ್, ಮಗನಾದ ಹರ್ಷವರ್ಧನ್ ಅಪ್ಪನ ಹೆಸರಿನಿಂದ ಚಿತ್ರರಂಗಕ್ಕೆ ಪ್ರವೇಶ ಮಾಡಿ ದ್ದಾರೆ. ನಟ ಧರ್ಮೇಂದ್ರನ ಮಕ್ಕಳಾದ ಸನ್ನಿ ಡಿಯೋಲ, ಬಾಬ್ಬಿ ಡಿಯೋಲ್ ಹಾಗೂ ಇಶಾ ಡಿಯೋಲ್ ಬಾಲಿವುಡ್‌ನಲ್ಲಿ ಪ್ರಯತ್ನಿಸಿದವರೇ. ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಮಗ ಅಭಿಷೇಕ್ ಬಚ್ಚನ್ ಕೂಡ ಅಪ್ಪನ ಹೆಸರಿನಿಂದ ಬಾಲಿವುಡ್‌ಗೆ ಬಂದು ತನ್ನ ಅದೃಷ್ಟ ಪರೀಕ್ಷಿಸಿದ್ದಾಯಿತು.

ಸೋನಾಕ್ಷಿ ಸಿನ್ಹಾಳೂ ಚಿತ್ರರಂಗಕ್ಕೆ ಎಂಟ್ರಿಯಾದದ್ದು ಅಪ್ಪ ನಟ ಶತ್ರುಘ್ನ ಸಿನ್ಹಾನ ಮಗಳೆಂಬ ನೆಲೆಯಿಂದಲೇ. ಅಲಿಯಾ ಭಟ್‌ಗೆ ಅವಕಾಶ ಸಿಕ್ಕಿದ್ದು ಅಪ್ಪ ಮಹೇಶ್ ಭಟ್‌ನಿಂದಾಗಿ. ಅಮೀರ್ ಖಾನ್‌ಗೆ ಅಪ್ಪ ಹಾಗೂ ಸಿನೆಮಾ ನಿರ್ಮಾಪಕ ತಾಹಿರ್ ಹುಸೈನ್ ಖಾನ್ ಬೆಂಬಲವಿಲ್ಲದಿದ್ದರೆ ಹೀರೋ ಆಗಲು ಸಾಧ್ಯವಿರುತ್ತಿರಲಿಲ್ಲ. ಹೃತಿಕ್ ರೋಷನ್ ಅನ್ನು ಚಿತ್ರ ರಂಗಕ್ಕೆ ಕೈಹಿಡಿದು ಕರೆತಂದದ್ದು ಆತನ ಅಪ್ಪ ಹಾಗೂ ನಿರ್ಮಾಪಕ ರಾಕೇಶ್ ರೋಷನ್.

ಸ್ವಪ್ರತಿಭೆಯಿಂದ ಮೇಲೆ ಬಂದ ಕಲಾವಿದರನ್ನು ಬಾಲಿವುಡ್‌ನ ಸ್ಥಾಪಿತ ಹಿತಾಸಕ್ತಿಗಳು ಬೆಳೆಯಲು ಬಿಡುವುದಿಲ್ಲ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ನೋಡಿದಾಗ ಇದು ಅರ್ಥವಾಗುತ್ತದೆ. ಈ ಪ್ರಕರಣವನ್ನು ಬೆಂಬತ್ತಿದ ರಿಪಬ್ಲಿಕ್ ಟೀವಿಯ ಅರ್ನಾಬ್ ಗೋಸ್ವಾಮಿಯನ್ನೇ ಜೈಲಿಗೆ ಕಳುಹಿಸಿತ್ತು ಮಹಾರಾಷ್ಟ್ರ ಸರಕಾರ. ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ದಿಂದಾಗಿ ಈ ಪ್ರಕರಣವನ್ನು ಸಿಬಿಐನ ತನಿಖೆಗೆ ವಹಿಸಿಕೊಡಲಾಗಿದ್ದರೂ ಬಾಲಿವುಡ್‌ನ ಕೆಲವು ಶಕ್ತಿಗಳು ಸತ್ಯವನ್ನು ಮುಚ್ಚಿ ಹಾಕುವ ಎಲ್ಲ ಪ್ರಯತ್ನಗಳನ್ನು ನಡೆಸುತ್ತಿವೆ.

ಸ್ವಂತ ಪರಿಶ್ರಮ ಹಾಗೂ ಪ್ರತಿಭೆಯಿಂದ ಹಿಂದೀ ಸಿನೆಮಾದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಕಂಗನಾ ರಾಣಾವತ್ ಕೂಡ ಬಾಲಿವುಡ್‌ನ ಗಣ್ಯರಿಂದ ಭಾರೀ ಕಿರುಕುಳ ಅನುಭವಿಸಿದ್ದಾಳೆ. ಬಾಲಿವುಡ್ ಮತ್ತು ಭೂಗತಜಗತ್ತಿನ ನಡುವಿನ ಸಂಬಂಧ ಸದಾ ಚರ್ಚೆಯಲ್ಲಿರುವ ವಿಚಾರ. ಮುಂಬೈ ಸರಣಿ ಬಾಂಬ್ ಸೋಟದ ಪಾತಕಿಗಳಾದ ದಾವೂದ್ ಇಬ್ರಾಹಿಂ ಮತ್ತು ಚೋಟ ಶಕೀಲ್ ಹಿಂದೀ ಸಿನೆಮಾಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದರು. ನಟಿ ಮೋನಿಕಾ ಬೇಡಿ ಪಾತಕಿ ಅಬೂ ಸಲೇಂ ಅನ್ನು ಮದುವೆ ಯಾದಳು.

ಚೋಟಾ ಶಕೀಲ್ ಜತೆಗೆ ಸಂಪರ್ಕ ಇಟ್ಟುಕೊಂಡಿದ್ದ ಸಂಜಯ್ ದತ್ ಅಕ್ರಮವಾಗಿ ‘ಎ ಕೆ 47’ ರೈಫಲ್ ಹೊಂದಿದ್ದ ಕಾರಣ ಟಾಡಾ ಕಾಯ್ದೆಯಡಿಯಲ್ಲಿ ಜೈಲು ಸೇರಬೇಕಾಯಿತು. ಭೂಗತ ಡಾನ್‌ಗಳನ್ನು ವೈಭವೀಕರಿಸುವ ಎಷ್ಟೋ ಸಿನೆಮಾಗಳು ಬಾಲಿವುಡ್ಡಿನಲ್ಲಿ ಬಂದು ಹೋಗಿವೆ. ‘ವನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ’ ಸಿನಿಮಾವು ಪಾತಕಿ ಹಾಜೀ ಮಸ್ತಾನ್‌ನ ಕುರಿತಾಗಿ
ಮಾಡಿದ ಸಿನೆಮಾವಾಗಿದೆ. ‘ಕಂಪನಿ’, ‘ಡಿ ಡೇ’ ಮೊದಲಾದ ಸಿನೆಮಾಗಳು ದಾವೂದ್ ಇಬ್ರಾಹಿಂ ಜೀವನ ಹೋಲುತ್ತವೆ. ರಣಬೀರ್ ಕಪೂರ್ ಅಭಿನಯದಲ್ಲಿ ಸಂಜಯ್ ದತ್‌ನ ಪಾತಕ ಜಗತ್ತಿನ ಸಂಪರ್ಕ ಹಾಗೂ ಆತನ ವಿವಾಹೇತರ ಸಂಬಂಧಗಳನ್ನು ಸಮರ್ಥಿಸುವ ಮತ್ತು ವೈಭವೀಕರಿಸುವ ‘ಸಂಜೂ’ ಹೆಸರಿನ ಸಿನೆಮಾ ಸೂಪರ್ ಹಿಟ್ ಕೂಡ ಆಗಿದೆ!

ಸಲ್ಮಾನ್ ಖಾನ್ ಮೇಲೆ ರಾಜಸ್ಥಾನದ ಸಂರಕ್ಷಿತ ಕೃಷ್ಣ ಮೃಗವನ್ನು ಬೇಟೆಯಾಡಿದ ಕೇಸು ಹಾಗೂ ರಸ್ತೆ ಬದಿಯಲ್ಲಿ ಮಲಗಿದ್ದ ನಿರ್ಗತಿಕರ ಮೇಲೆ ವಾಹನವನ್ನು ಹರಿಸಿ ಅವರ ಸಾವಿಗೆ ಕಾರಣವಾದ ಕೇಸುಗಳು ಇವೆ. ಆದರೂ ಸಲ್ಮಾನ್ ಗೆ ಬಾಲಿವುಡ್ಡಿನ ಹೃದಯವಂತ ಎನ್ನುವ ಬಿರುದು ಬೇರೆ! ಶಾರುಖ್ ಖಾನ್ ಮಗ ಆರ್ಯನ್ ಖಾನ್ ಡ್ರಗ್ ಕೇಸಿನಲ್ಲಿ ಸಿಕ್ಕಿಬಿದ್ದು ಜೈಲು ಸೇರಿದಾಗ ಹೃತಿಕ ರೋಷನ್, ಶತ್ರುಘ್ನ ಸಿನ್ಹಾ, ಪೂಜಾ ಬೇಡಿ, ರವೀನಾ ಟಂಡನ್, ಸ್ವರಾ ಭಾಸ್ಕರ್, ಜೂಹೀ ಚಾವ್ಲಾ ಮೊದಲಾದವರು
ನೈತಿಕ ಬೆಂಬಲ(?) ಸೂಚಿಸಿದ್ದರು.

ಶಿಲ್ಪಾ ಶೆಟ್ಟಿಯ ಗಂಡ ರಾಜ್ ಕುಂದ್ರಾ ಅಶ್ಲೀಲ ವೀಡಿಯೋ ಚಿತ್ರೀಕರಣ ಜಾಲದ ಆರೋಪದಲ್ಲಿ ಜೈಲಿಗೆ ಹೋಗಿದ್ದರೂ ಹಿಂದಿನಂತೆ ಸೆಲೆಬ್ರಿಟಿಯಾಗಿಯೇ ಉಳಿದಿದ್ದಾನೆ. ಅಮೀರ್ ಖಾನ್‌ನ ಇತ್ತೀಚೆಗಿನ ಸಿನೆಮಾಗಳಲ್ಲಿ ಹಿಂದೂ ದೇವರುಗಳನ್ನು ಅವಹೇಳನ ಮಾಡುವುದೇ ಹೆಚ್ಚು. ‘ಪಿಕೆ’ ಸಿನೆಮಾದಲ್ಲಿ ಶಿವನ ಪಾತ್ರಧಾರಿಯನ್ನು ಪಿಕೆ ಬೆನ್ನಟ್ಟುವ ಭಾಗ ವಿವಾದಕ್ಕೆ ಕಾರಣವಾಗಿತ್ತು. ಅಮೀರ್‌ನ ಇತ್ತೀಚೆಗಿನ ಸಿನೆಮಾ ‘ಲಾಲ್ ಸಿಂಗ್ ಚಡ್ಡಾ’ದಲ್ಲಿ ಭಾರತೀಯ ಸೈನ್ಯವನ್ನು ಕೆಟ್ಟದಾಗಿ ಚಿತ್ರಿಸ ಲಾಗಿದೆ. ಹಿಂದೂ ಪೂಜೆಯನ್ನು ಅವಹೇಳನ ಮಾಡಲಾಗಿದೆ. ಅಮೀರ್ ತಾನು ನಡೆಸಿಕೊಡು ತ್ತಿದ್ದ ಟಿವಿ ಶೋ ‘ಸತ್ಯಮೇವ ಜಯತೇ’ ಕಾರ್ಯಕ್ರಮದಲ್ಲಿ ಶಿವಲಿಂಗಕ್ಕೆ ಹಾಲನ್ನೆರೆದು ಹಾಳುಮಾಡುವುದರ ಬದಲು ಹಾಲನ್ನು ಬಡ ಮಕ್ಕಳಿಗೆ ಕುಡಿಸ ಬಹುದು ಎಂದಿದ್ದ.

ಇದೇ ಕಾರ್ಯಕ್ರಮದಲ್ಲಿ ಹಿಂದೂ ಆಚರಣೆಗಳಾದ ರಕ್ಷಾ ಬಂಧನ ಹಾಗೂ ಕರ್ವಾ ಚೌತ್‌ಗಳ ಅವಹೇಳನವನ್ನು ಸಮರ್ಥಿಸಿ ಕೊಂಡಿದ್ದ. ಕೆಲವು ವರ್ಷಗಳ ಹಿಂದೆ ಅಮೀರ್ ಖಾನ್ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಿದುದರಿಂದ ಮಡದಿ ಕಿರಣ ರಾವ್ (ಈಗ ಮಾಜೀ ಪತ್ನಿ) ದೇಶವನ್ನು ಬಿಟ್ಟು ತೆರಳಲು ಹೇಳಿದ್ದಳು ಎಂದಿದ್ದ. ಗುಜರಾತ್‌ಗೆ ನೀರುಣಿಸುವ ಸರ್ದಾರ್ ಸರೋವರ್ ಯೋಜನೆಯ ವಿರುದ್ಧದ ಹೋರಾಟಕ್ಕೆ ಮೇಧಾ ಪಾಟ್ಕರ್ ಜತೆಗೆ ಅಮೀರ್ ಖಾನ್ ಸಹ ಸೇರಿದ್ದ.

ಸಾಮಾಜಿಕ ಮಾಧ್ಯಮದ ಯುಗದಲ್ಲಿ ಜನಸಾಮಾನ್ಯರು ಇಂದು ಹಿಂದೆಂದಿಗಿಂತಲೂ ಚೆನ್ನಾಗಿ ಬಾಲಿವುಡ್ ಅನ್ನು ಅರ್ಥ ಮಾಡಿಕೊಂಡಿದ್ದಾರೆ. ಬಾಲಿವುಡ್ಡಿನ ಪಾಕಿಸ್ತಾನ ಪ್ರೀತಿ, ಹಿಂದೂ ವಿರೋಧಿ ಧೋರಣೆಗಳ ವಿರುದ್ಧವಾಗಿ ಜನರು ತಿರುಗಿಬಿದ್ದಿ ದ್ದಾರೆ. ಇದರ ಪರಿಣಾಮವಾಗಿ ಬಾಯ್ಕಾಟ್ ಬಾಲಿವುಡ್ ವಿಚಾರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗಿವೆ. ಇದರ ಪರಿಣಾಮವಾಗಿಯೇ ಅಮೀರ್ ಖಾನ್‌ನ ಅತೀ ನಿರೀಕ್ಷೆಯ ಸಿನಿಮಾ ‘ಲಾಲ್ ಸಿಂಗ್ ಚಡ್ಡಾ’ ಹಾಗೂ ಅಕ್ಷಯ್ ಕುಮಾರ್‌ನ ‘ರಕ್ಷಾಬಂಧನ್’ ಬಾಕ್ಸಾಫೀಸ್‌ನಲ್ಲಿ ವಿಫಲವಾಗಿವೆ.

2022ರಲ್ಲಿ 100 ಕೋಟಿಗಳಿಗಿಂತ ಹೆಚ್ಚು ಆದಾಯ ಗಳಿಸಿದ ಏಕೈಕ ಬಾಲಿವುಡ್ ಸಿನೆಮಾ ‘ಗಂಗೂಬಾಯಿ ಕಾಥಿಯಾವಾಡಿ’ ಮಾತ್ರ. ಇತ್ತೀಚೆಗೆ ಬಿಡುಗಡೆಯಾದ ರಣಬೀರ್ ಕಪೂರ್‌ನ ಬಹುನಿರೀಕ್ಷೆಯ ಸಿನೆಮಾ ಶಂಶೇರಾ ಮಕಾಡೆ ಮಲಗಿದೆ. ಸದಾ
ಹಿಂದೂ ವಿರೋಧಿ ಹೇಳಿಕೆಗಳಿಂದ ಪ್ರಸಿದ್ಧವಾಗಿರುವ ನಟಿ ತಾಪಸೀ ಪನ್ನು ಸಿನೆಮಾಗಳಾದ ‘ಶಾಭಾಸ್ ಮಿಥಾಲಿ’ ಹಾಗೂ ‘ದೋಬಾರಾ’ ಸಿನೆಮಾಗಳು ಇನ್ನಿಲ್ಲದಂತೆ ನೆಲಕಚ್ಚಿವೆ.

ಇದೀಗ ದಕ್ಷಿಣದ ಸಿನೆಮಾ ಕಾಲ ಆರಂಭವಾಗಿದೆ. ದಕ್ಷಿಣ ಭಾರತದಲ್ಲಿ ನಿರ್ಮಾಣವಾದ ‘ಬಾಹುಬಲಿ ೧’ ಹಾಗೂ ‘ಬಾಹುಬಲಿ ೨ ’ ಸಿನೆಮಾಗಳು ದೇಶಾದ್ಯಂತ ಭಾರೀ ಮನ್ನಣೆ ಪಡೆದದ್ದು ಮಾತ್ರವಲ್ಲದೆ ೨೦೨೨ರಲ್ಲಿ ಬಿಡುಗಡೆಯಾದ ತೆಲುಗಿನ ಆರ್‌ಆರ್‌ಆರ್, ಪುಷ್ಪಾ, ಕನ್ನಡದ ‘ಕೆಜಿಎ- 2’ ಮೊದಲಾದ ಸಿನೆಮಾಗಳು ಭಾಷೆ, ರಾಜ್ಯಗಳ ಗಡಿಗಳನ್ನು ಮೀರಿ ದೇಶಾದ್ಯಂತ ಸಾವಿರಾರು ಕೋಟಿ ರುಪಾಯಿಗಳ ಗಳಿಕೆ ಮಾಡಿವೆ.

ಇತ್ತೀಚೆಗೆ ಬಿಡುಗಡೆಯಾದ ‘ವಿಕ್ರಾಂತ್ ರೋಣ’ ಕೂಡ ೨೦೦ ಕೋಟಿ ರುಪಾಯಿಗಳ ಬಾಕ್ಸಾಫೀಸ್ ಗಳಿಕೆಯನ್ನು ಕಂಡಿದೆ.
‘ಚಾರ್ಲಿ 777’ 150 ಕೋಟಿ ರುಪಾಯಿಗಳಿಗಿಂತಲೂ ಹೆಚ್ಚು ಅದಾಯ ತಂದಿದೆ. ಕಾಶ್ಮೀರಿ ಪಂಡಿತರ ನರಮೇಧ ಆಧರಿಸಿದ ‘ದಿ
ಕಾಶ್ಮೀರ್ ಫೈಲ್ಸ್’ ಮಾರುಕಟ್ಟೆಯಲ್ಲಿ ಭಾರೀ ಯಶಸ್ಸು ಗಳಿಸಿದೆ. ಬಾಲಿವುಡ್ಡಿನ ಇಕೋ ಸಿಸ್ಟಂ ಈ ಸಿನೆಮಾಗೆ ಯಾವ ರೀತಿಯ ನೆರವನ್ನೂ ನೀಡಿಲ್ಲ.

ಕಪಿಲ್ ಶರ್ಮಾ ತನ್ನ ‘ದಿ ಕಪಿಲ್ ಶರ್ಮಾ ಶೋ’ ವಿಗೆ ‘ದಿ ಕಾಶ್ಮೀರ್ ಫೈಲ್ಸ್’ ತಂಡಕ್ಕೆ ಆಮಂತ್ರಣ ನೀಡಲು ನಿರಾಕರಿಸಿದ. ಮುಸ್ಲಿಮರ ವಿರುದ್ಧ ದ್ವೇಷದ ಅಜೆಂಡಾ ಎಂದು ಬಾಲಿವುಡ್ ವಿಮರ್ಶಕರು ಅಪಪ್ರಚಾರ ಮಾಡಿದರು. ಆದರೆ ಜನರು ಭಾರೀ ಬೆಂಬಲ ಸೂಚಿಸಿದ ಕಾರಣ ಈ ಸಿನೆಮಾವು 350 ಕೋಟಿ ರುಪಾಯಿಗಳನ್ನು ಗಳಿಸಿತು. ಇಸ್ರೋ ವಿeನಿ ನಂಬಿ ನಾರಾಯಣನ್
ಜೀವನದ ಕುರಿತ ಚಲನಚಿತ್ರ ‘ರಾಕೆಟ್ರಿ: ದ ನಂಬಿ ಇಫೆಕ್ಟ್’ ಬಂದಾಗಲೂ ಬಾಲಿವುಡ್ ವಿಮರ್ಶಕರು ‘ನಂಬಿ ನಾರಾಯಣನ್ ಒಬ್ಬ ಹಿಂದೂವಾದಿ’ ಎಂದು ಕರೆದು ವೀಕ್ಷಕರ ದಾರಿತಪ್ಪುವಂತೆ ಮಾಡಲು ಪ್ರಯತ್ನಿಸಿದರು.

ಆದರೆ ಜನಸಾಮಾನ್ಯರು ಈ ಸಿನೆಮಾವನ್ನು ಕೈಬಿಡಲಿಲ್ಲ. ಈ ಎಲ್ಲ ಬೆಳವಣಿಗೆಗೆಳು ಬಾಲಿವುಡ್ಡಿನ ಮಂದಿ ತಮ್ಮ ಭ್ರಾಮಕ ಮನಃಸ್ಥಿತಿಯಿಂದ ಹೊರ ಬಂದು ವಾಸ್ತವತೆಯೆಡೆಗೆ ಹೊರಳಿದರೆ ಮಾತ್ರ ಬಾಲಿವುಡ್ ಸಿನೆಮಾ ರಂಗ ಉಳಿಯಲು ಸಾಧ್ಯ
ಎಂಬುದನ್ನು ಸೂಚಿಸುತ್ತವೆ.