Tuesday, 5th November 2024

ಅಕ್ಷರ ಕ್ರಾಂತಿಯ ಸಾಧಕಿ ಸಾವಿತ್ರಿಬಾಯಿ ಫುಲೆ

ಸ್ಮರಣೆ

ಸುರೇಶ ಗುದಗನವರ

ಶಿಕ್ಷಣವೆಂದರೆ ತಿಳಿಯದ, ಅಕ್ಷರಗಳೆಂದರೆ ಗೊತ್ತಿಲ್ಲದ ಕಾಲದಲ್ಲಿ ಶಾಲೆಗಳನ್ನು ತೆರೆದು ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿದ ಮೊದಲ ಮಹಿಳೆ ಸಾವಿತ್ರಿ ಬಾಯಿ ಫುಲೆ.

ಜನೆವರಿ 3, 2021ರಂದು ಭಾರತದ ಮೊದಲ ಮಹಿಳಾ ಶಿಕ್ಷಕಿಯ 190ನೆಯ ಜನ್ಮದಿನ. ತಮ್ಮ ಮನೆಯಲ್ಲಿಯೇ ಶಾಲೆಯನ್ನು ಆರಂಭಿಸುವ ಮೂಲಕ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು, ಮಹಿಳೆಯರಿಗೆ ವಿದ್ಯಾದಾನ ಮಾಡುವ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿದವರು.

ಸಾತ್ರಿಬಾಯಿ ಫುಲೆ 1831, ಜನೆವರಿ 3ರಂದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನೈಗಾಂವ್ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ನವಸೆ ಪಾಟೀಲ, ತಾಯಿ ಲಕ್ಷ್ಮೀಬಾಯಿ. ಅಂದಿನ ಕಾಲದ ಪದ್ಧತಿಯಂತೆ ಜ್ಯೋತಿಬಾ ಫುಲೆ ಅವರೊಂದಿಗೆ ಸಾವಿತ್ರಿಬಾಯಿ ಅವರ ಬಾಲ್ಯ ವಿವಾಹವು ನಡೆಯಿತು. ಸಾವಿತ್ರಿಬಾಯಿಯವರಿಗೆ ಎಂಟು ವರ್ಷವಾದರೆ, ಜ್ಯೋತಿಬಾರವರಿಗೆ ಹದಿಮೂರು ವರ್ಷ.
ಮನೆಯೇ ಮೊದಲ ಪಾಠಶಾಲೆ ಎಂಬಂತೆ ಸಾತ್ರಿಬಾಯಿಯವರಿಗೆ ಪತಿ ಜ್ಯೋತಿಬಾರವರೇ ಮೊದಲ ಗುರುವಾದರು.

ನಂತರ ಸ್ಟಾನಿಷ್ ಮಿಷನರಿ ಶಾಲೆಯಲ್ಲಿ ಏಳನೆಯ ತರಗತಿವರೆಗೆ ಕಲಿತು ಹೆಚ್ಚಿನ ಶಿಕ್ಷಣವನ್ನು ಯಶವಂತ್ ಪರಾಂಜಪೆ ಮತ್ತು ಕೇಶವ್ ಭಾವಲ್ಕರ ಅವರಲ್ಲಿ ಪಡೆದರು. 1947ರಲ್ಲಿ ಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದಾಗ ಸಾವಿತ್ರಿಬಾಯಿಯವರಿಗೆ ಹದಿನೇಳು ವರ್ಷ. ಅವರು ತಾತ್ಯಾ ಸಾಹೇಬ ಬಿಡೆ ಅವರ ಮನೆಯಲ್ಲಿ ಮಕ್ಕಳಿಗೆ ಶಿಕ್ಷಣ ಕಲಿಸಲು ಪ್ರಾರಂಭಿಸಿದರು. 1848ರಿಂದ 1852ರ ಅವಧಿಯಲ್ಲಿ ಫುಲೆ ದಂಪತಿಗಳು ಹದಿನೆಂಟು ಶಾಲೆಗಳನ್ನು ಪ್ರಾರಂಭಿಸಿದರು.

ಈ ಪಾಠಶಾಲೆಗಳ ಆಡಳಿತದ ಜವಾಬ್ದಾರಿಯನ್ನು ಸಾವಿತ್ರಿ ಬಾಯಿ ನಿರ್ವಹಿಸಿದರು. ಮಹಿಳೆಯರು ಸಹ ಪುರುಷರಂತೆ
ಶಿಕ್ಷಣ ಪಡೆಯಬೇಕು ಎಂಬುದು ಫುಲೆ ದಂಪತಿಗಳ ಹಂಬಲವಾಗಿತ್ತು. ಸಾವಿತ್ರಿಬಾಯಿ ಪಾಠ ಮಾಡಲು ಶಾಲೆಗೆ ಹೊರಟಾಗ ಊರಿನ ಜನರು ಲೇವಡಿ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವದು, ಸಗಣಿ ಎರಚುವುದು, ಕಲ್ಲು ತೂರುವುದು ಸಾಮಾನ್ಯ ವಾಗಿತ್ತು. ಆದರೆ ಸಾವಿತ್ರಿಬಾಯಿ ಇವೆಲ್ಲವನ್ನು ಬಂಡೆಯಂತೆ ಗಟ್ಟಿಯಾಗಿ ನಿಂತು ಎದುರಿಸಿದರು.

ಅವರಿಗೆ ಕಿಡಿಗೇಡಿಗಳು ಸಗಣಿ ಎರಚಿದಾಗ ಧೃತಿಗೆಡಲಿಲ್ಲ. ತಮ್ಮ ಕೈ ಚೀಲದಲ್ಲಿ ಇನ್ನೊಂದು ಸೀರೆ ಇಟ್ಟುಕೊಂಡು ಮಕ್ಕಳು ಶಾಲೆಗೆ ಬರುವ ಮೊದಲೇ ಸೀರೆ ಬದಲಾಯಿಸಿ ಪಾಠ ಮಾಡಲು ಸಿದ್ಧರಾಗುತ್ತಿದ್ದರು. ಅವರು ತಮ್ಮ ಎಲ್ಲಾ ಹೋರಾಟದಲ್ಲೂ ಪತಿಯ ಸಂಪೂರ್ಣ ಬೆಂಬಲವಿತ್ತು. ಇಬ್ಬರೂ ಪರಸ್ಪರರ ಭಾವನೆಗಳನ್ನು ಗೌರವಿಸುತ್ತಲೇ ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಾ ಮುನ್ನಡೆದರು.

1852ರಲ್ಲಿ ಪುಣೆಯಲ್ಲಿ ಮಹಿಳಾ ಮಂಡಳವನ್ನು ಸ್ಥಾಪಿಸಿ ಸಮಾಜದ ಎಲ್ಲಾ ವರ್ಗದ ಮಹಿಳೆಯರನ್ನು ಜಾಗೃತಗೊಳಿಸು ವಲ್ಲಿ ಪ್ರಮುಖ ಪಾತ್ರವಹಿಸಿದರು. ಅವರು ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿ, ಕೇಶ ಮುಂಡನೆ ಮುಂತಾದವುಗಳ ವಿರುದ್ಧ ಹೋರಾಟ ಮಾಡಿದರು. 1860ರ ದಶಕದಲ್ಲಿ ವಿಧವೆಯರಿಗೆ, ವಿವಾಹಬಾರವಾಗಿ ಗರ್ಭೀಣಿಯಾಗಿರುವ ಮಹಿಳೆಯರಿಗೆ ಪುನರ್ವಸತಿ ಕೇಂದ್ರಗಳನ್ನು, ಶಿಶು ಕೇಂದ್ರಗಳನ್ನು ಸ್ಥಾಪಿಸಿದರು. ಈ ಬಗೆಯ ಸಾಮಾಜಿಕ
ಸಂಘಟನೆಗಳ ಮೂಲಕ ನೂರಾರು ಮಹಿಳೆಯರ ಮತ್ತು ಮಕ್ಕಳ ಬದುಕಿಗೊಂದು ನೆಲೆ ನೀಡಿದರು.

ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳುವಳಿ ಸಂಘಟನೆಗಳನ್ನು ಸಂಘಟಿಸಿದರು ಜಾತಿ, ವರ್ಗ ಬೇಧ ಮಾಡದೆ ಎಲ್ಲರಿಗೂ
ಶಿಕ್ಷಣವನ್ನು ಕಲಿಸಿದ ಸಾವಿತ್ರಿಬಾಯಿ ತಮಗೊದಗಿದ ಕಷ್ಟ ಕಾರ್ಪಣ್ಯಗಳನ್ನು ಲೆಕ್ಕಿಸದೇ ಮಹಿಳಾ ಸಂಕುಲಕ್ಕೆ ಜಾಗೃತಿಯ
ರಹದಾರಿ ತೋರಿಸಿದರು. ಫುಲೆ ದಂಪತಿಗಳಿಗೆ ಮಕ್ಕಳಾಗಲಿಲ್ಲ. ಅವರು ಎದೆಗುಂದದೇ ವಿಧವೆಯ ಮಗ ಯಶವಂತನನ್ನು ದತ್ತು
ಸ್ವೀಕರಿಸಿದರು. ಅಲ್ಲದೇ ವಿಧವೆಯರಿಗೆ ಹುಟ್ಟಿದ ಮಕ್ಕಳಿಗೆ ಭಿನ್ನವಾದ ಶಿಶು ಕೇಂದ್ರಗಳನ್ನು ಪ್ರಾರಂಭಿಸಿ ಅವರಿಗೂ ಬದುಕು ಕಟ್ಟಿಕೊಟ್ಟರು.

ಸತ್ಯಶೋಧಕ ಸಮಾಜದ ಆಧ್ಯಕ್ಷೆಯಾದ ಸಾವಿತ್ರಿಬಾಯಿಯವರು ಅರ್ಚಕರಿಲ್ಲದೇ ವಿವಾಹಗಳನ್ನು ನಡೆಸಿ ಕ್ರಾಂತಿಗೆ ಮುನ್ನುಡಿ ಬರೆದರು. ಅವರು ಸಮಾಜದ ತಳವರ್ಗದ ಹೆಣ್ಣುಮಕ್ಕಳಿಗಾಗಿ ಶಾಲೆ, ಕೂಲಿ ಕಾರ್ಮಿಕರಿಗಾಗಿ ರಾತ್ರಿ ಪಾಳಿ ಶಾಲೆ, ದಲಿತರಿಗಾಗಿ
ಕುಡಿಯುವ ನೀರಿನ ಟ್ಯಾಂಕ್ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುವಲ್ಲಿ ನಿರತರಾದರು. ಪತಿ
ಜ್ಯೋತಿಬಾ ರವರ ತತ್ತ್ವ, ಪ್ರಗತಿಪರ ದೃಷ್ಟಿಕೋನವನ್ನು ತಮ್ಮದಾಗಿಸಿಕೊಂಡು ಜೀವನಪೂರ್ತಿ ಅವರಿಗೆ ಬೆಂಗಾವಲಾಗಿ ನಿಂತರು.

ಸಾವಿತ್ರಿಬಾಯಿ ಫುಲೆಯವರು ಸಾಹಿತ್ಯ ಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ. ಅವರು 1854ರಲ್ಲಿ ‘ಕಾವ್ಯ ಫುಲೆ’ ಕವನ ಸಂಕಲನವನ್ನು ಪ್ರಕಟಿಸಿದರು. ಈ ಕವನ ಸಂಕಲನವು 19ನೆಯ ಶತಮಾನದ ಸಮಾಜವನ್ನು ದಾಖಲಿಸುವಲ್ಲಿ ಮೈಲುಗಲ್ಲಾ ಗಿದೆ. ಸಾತ್ರಿಬಾಯಿಯವರು ಈ ಕೃತಿಯನ್ನು ಅಭಂಗ ಶೈಲಿಯಲ್ಲಿ ರಚಿಸಿದ್ದಾರೆ. ನಂತರ 1891ರಲ್ಲಿ ‘ಭಾವನ ಸುಬೋಧ ರತ್ನಾಕರ’ ಕೃತಿಯನ್ನು ಪ್ರಕಟಿಸಿದರು.

ಈ ಕೃತಿಯು ಪತಿ ಜ್ಯೋತಿಬಾ ಅವರನ್ನು ಒಳಗೊಂಡು ಬರೆದ ಆತ್ಮಕತೆಯಾಗಿದೆ. 1892ರಲ್ಲಿ ಜ್ಯೋತಿಬಾರವರ ಭಾಷಣಗಳ ಸಂಪಾದಿತ ಕೃತಿಯನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಅವರ ನಾಲ್ಕನೆಯ ಕೃತಿಯು ‘ಕರ್ಜೆ’ ಎಂಬುದಾಗಿದೆ. ಅವರು ತಮ್ಮ ಸಂಕಲನದ ಕವನವೊಂದರಲ್ಲಿ ಇಂಗ್ಲೀಷನ್ನು ಮಾತೆಯೆಂದು ಸ್ವೀಕರಿಸಿದ ದಲಿತ ಸ್ತ್ರೀಯರ ಕುರಿತು ಕಠಿಣ ನಿಯಮಗಳ ಸಂಕೋಲೆ ಬಗ್ಗೆ ಸಾವಿತ್ರಿಬಾಯಿ ಫುಲೆಯವರ ದಿಟ್ಟತನ ಎದ್ದು ಕಾಣುತ್ತದೆ.

ಇಂಗ್ಲೀಷ್ ಶಿಕ್ಷಣ ಅಂದು ದಲಿತರಿಗೆ ಹಾಗೂ ಸೀಯರಿಗೆ ಬಿಡುಗಡೆಯ ಮಾರ್ಗವಾಗಿತ್ತೆಂಬುದನ್ನು ಈ ಕತೆ ಮಾರ್ಮಿಕವಾಗಿ
ವರ್ಣಿಸುತ್ತದೆ. ಅವರು ಮತ್ತೊಂದು ಕವನದಲ್ಲಿ ‘ವಿದ್ಯೆ ಮತ್ತು ಬುದ್ಧಿ ನಮ್ಮ ಸಂಪತ್ತು, ಅದಿಲ್ಲದಿದ್ದರೆ ಏನೂ ಇಲ್ಲ. ವಿದ್ಯೆ ಇಲ್ಲದೆ ನಾವು ಪಶುಗಳಂತಾಗಿದ್ದೇವೆ. ತಡಮಾಡದೆ ಆಲಸಿಯಾಗದೆ ಹೊರಡು ವಿದ್ಯೆಗಾಗಿ, ಕಲಿತು ಜಾತಿ ಸಂಕೋಲೆಗಳನ್ನು ಮುರಿದು ಹಾಕು, ಇದೊಂದು ಸುವರ್ಣಾವಕಾಶ’ ಎಂದು ಕಲಿಯಲು ಕರೆ ನೀಡುತ್ತಾರೆ.

ಅಂದಿನ ಕಾಲದಲ್ಲಿ ಧಾರ್ಮಿಕ ಕಟ್ಟುಪಾಡುಗಳ ಮಧ್ಯೆ ಮಹಿಳೆಯೊಬ್ಬಳು ಶಿಕ್ಷಕಿಯಾಗುವುದು ಸುಲಭದ ಮಾತಾಗಿರಲಿಲ್ಲ. ಅದರಲ್ಲೂ ಪುರುಷಪ್ರಧಾನ ಸಮಾಜದಲ್ಲಿ ಸಂಪ್ರದಾಯವಾದಿಗಳ ವಿರೋಧ ಕಟ್ಟಿಕೊಂಡು ಶಿಕ್ಷಣದ ಮೆಟ್ಟಿಲನ್ನು ಹತ್ತಿದ್ದು ದೊಡ್ಡ ಸಾಹಸ. ಆದರೂ ಛಲಬಿಡದೆ ಹೆಣ್ಣುಮಕ್ಕಳ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದವರು ಸಾವಿತ್ರಿಬಾಯಿ ಫುಲೆಯವರು. ಅವರು ಎದುರಿಸಿದ ಸವಾಲುಗಳು, ಅವರು ಮಾಡಿದ ಕಾರ್ಯ ಎಲ್ಲವನ್ನು ನೆನಪಿಸಿಕೊಂಡರೆ ಅವರಿಗೆ ತಲೆಬಾಗಿ ನಮಸ್ಕರಿಸ ಬೇಕು ಎಂಬ ಭಾವನೆ ಮೂಡುವುದು ಸಹಜ.

ಪತ್ರಕರ್ತ ಮೃದು ವರ್ಮಾ ಇಂದು ಫ್ಯಾಷನ್ ಆಗಿರುವ ಮಹಿಳಾ ವಿಮೋಚನೆ, ನೂರ ಐವತ್ತು ವರ್ಷಗಳ ಹಿಂದೆಯೇ ಭಾರತದ ಐಕಾನ್ ಆಗಿದ್ದ ಸಾತ್ರಿಬಾಯಿಯವರಿಗೆ ಮಹಿಳಾ ಶೋಷಣೆಯ ನಿಜವಾದ ಅರ್ಥದ ಅರಿವಾಗಿತ್ತು ಎಂದು ಉಲ್ಲೇಖಿಸುತ್ತಾರೆ.
ಈ ಮಾತುಗಳನ್ನು ಗಮನಿಸಿದರೆ ಭಾರತೀಯ ಶಿಕ್ಷಣ ವ್ಯವಸ್ಥೆ ಮತ್ತು ಭಾರತೀಯ ಮಹಿಳಾ ಹೋರಾಟದ ಮೊದಲ ಹೆಜ್ಜೆ
ಗುರುತುಗಳು ಸಾವಿತ್ರಿಬಾಯಿ ಫುಲೆ ಆಗಿದ್ದಾರೆ. ಆಗ ಬ್ರಿಟಿಷ್ ಸರಕಾರದವರು ಅವರ ಕೆಲಸ ಕಾರ್ಯಗಳನ್ನು ಕೂಲಂಕಷವಾಗಿ ಅವಲೋಕಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಅಲ್ಲದೇ ಅವರ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಬ್ರಿಟಿಷ್ ಸರಕಾರ ಸಾವಿತ್ರಿಬಾಯಿಯವರಿಗೆ ‘ಇಂಡಿಯಾಸ್ ಫಸ್ಟ್ ಲೇಡಿ ಟೀಚರ್’ ಎಂಬ ಬಿರುದು ಕೊಟ್ಟು ಗೌರವಿಸಿದೆ. ಡಾ.ಸರಜೂ ಕಾಟ್ಕರ್ ಅವರ ಕಾದಂಬರಿ ಆಧಾರಿತ ‘ಸಾವಿತ್ರಿಬಾಯಿ ಫುಲೆ’ ಚಲನಚಿತ್ರವು ವಿಶಾಲ್‌ರಾಜ್ ಅವರ ನಿರ್ದೇಶನದಲ್ಲಿ 2018ರಲ್ಲಿ ಬಿಡುಗಡೆಗೊಂಡಿದೆ. ನಟಿ ತಾರಾ ಅವರು ಸಾವಿತ್ರಿಬಾಯಿ ಪಾತ್ರದಲ್ಲಿ ಮಿಂಚಿದರೆ, ಸುಚೇಂದ್ರ ಪ್ರಸಾದ್ ಜ್ಯೋತಿಬಾ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಬಸವರಾಜ ಭೂತಾಳಿ ನಿರ್ಮಾಪಕ ರಾದರೆ ಸಂಗೀತಾ ಕಟ್ಟಿಯವರು ಸಂಗೀತ ನೀಡಿರುವುದು ವಿಶೇಷವಾಗಿದೆ.

ಮಹಾರಾಷ್ಟ್ರದ ಕ್ಷಾಮಪೀಡಿತ ಪ್ರದೇಶಗಳಲ್ಲಿ ಎರಡು ವರ್ಷಗಳವರೆಗೆ ಕಾರ್ಯನಿರ್ವಹಿಸಿದರು. ಸಾವಿತ್ರಿಬಾಯಿಯವರು ಪ್ಲೇಗ್ ಪೀಡಿತ ರೋಗಿಗಳ ಸೇವೆ ಮಾಡುತ್ತಲೇ ಅವರು ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ 1897ರ ಮಾರ್ಚ್ 10ರಂದು ನಿಧನ ರಾದರು. ಮಹಿಳೆಯರು ಮತ್ತು ಶಿಕ್ಷಣದ ಬಗೆಗೆ ತೋರಿದ ಅಪಾರ ಕಾಳಜಿ, ಸಾವಿತ್ರಿಬಾಯಿಯವರು ಮಾಡಿದ ಕಾರ್ಯ ಇಂದಿಗೂ ನಮಗೆ ಪ್ರೇರಣೆಯಾಗಿದೆ. ಸಾವಿತ್ರಿಬಾಯಿ ಫುಲೆಯವರು ನಮಗೆಲ್ಲರಿಗೂ ಆದರ್ಶ ಮಹಿಳೆಯಾಗಿದ್ದಾರೆ.

ಮಹಿಳಾ ಶಿಕ್ಷಣ, ಮಹಿಳಾ ಹಕ್ಕುಗಳು ಹೀಗೆ ಮಹಿಳಾ ಶೋಷಿತರ ಪರ ಹಲವಾರು ಸುಧಾರಣೆಯ ಕನಸುಗಳನ್ನು ಹೊತ್ತ ಸಾವಿತ್ರಿ ಬಾಯಿ ಫುಲೆಯವರು ದೈಹಿಕವಾಗಿ ಇಲ್ಲದಿದ್ದರೂ ಮಹಿಳಾ ಮತ್ತು ಶೋಷಿತ ಸಮುದಾಯದ ಧ್ವನಿಯಾಗಿ ಅವರು ಇಂದಿಗೂ ಜೀವಂತವಾಗಿದ್ದಾರೆ. ಪ್ರತಿ ವರ್ಷ ಮಾರ್ಚ್ 10ನ್ನು ‘ಮಹಿಳಾ ಸಬಲೀಕರಣ ದಿನ’ ಮತ್ತು ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ ಸ್ಮೃತಿ ದಿನ’ ಎಂದು ದೇಶದೆಲ್ಲೆಡೆ ಆಚರಿಸಲಾಗುತ್ತಿದೆ.

ಇತ್ತೀಚಿಗೆ ಮಹಾರಾಷ್ಟ್ರ ಸರಕಾರವು ಮಹಿಳಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಿಳೆಯರಿಗೆ ‘ಮಾತೆ ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿಯನ್ನು ನೀಡುವುದರ ಮೂಲಕ ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆಯವರನ್ನು ಗೌರವಿಸಲಾಗುತ್ತಿದೆ. ಸಾವಿತ್ರಿಬಾಯಿಯವರ ಸಾಧನೆ ಮತ್ತು ಸೇವೆ ಅನುಪಮವಾದದ್ದು.