Saturday, 14th December 2024

ನೆದರ್‌ಲ್ಯಾಂಡಿನಲ್ಲಿ ಎಸ್ಸಿ, ಎಸ್ಟಿಗೆ ಮೀಸಲಾತಿ ಇದೆಯಾ ?

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

ಪ್ರಾಯಶಃ ಅಟಲ್ ಬಿಹಾರಿ ವಾಜಪೇಯಿ ಅವರಷ್ಟು ಸಂಸದೀಯ ನಿಯೋಗಗಳಲ್ಲಿ ವಿದೇಶ ಪ್ರವಾಸ ಮಾಡಿದವರು ಯಾರೂ
ಇರಲಿಕ್ಕಿಲ್ಲ. ಅವರು ಮೊದಲ ಬಾರಿಗೆ ಸಂಸದರಾದಂದಿನಿಂದ, ನಿರಂತರವಾಗಿ ಒಂದಿಂದು ಸಮಿತಿ, ನಿಯೋಗದಲ್ಲಿ ವಿದೇಶ
ಪ್ರವಾಸ ಹೋಗಿzರೆ. ವಿದೇಶಾಂಗ ವ್ಯವಹಾರ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನ ಅವರ ಆಸಕ್ತ ವಿಷಯವೂ ಆಗಿತ್ತು.

ಅಲ್ಲದೇ ಅವರು ಯಾವುದೇ ದೇಶಕ್ಕೆ ಹೋಗುವ ಮುನ್ನ ಆ ದೇಶದ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿಕೊಂಡು ಹೋಗುತ್ತಿದ್ದರು.
ಅಷ್ಟೇ ಅಲ್ಲ, ವಿದೇಶಗಳಿಗೆ ಸಂಸದರ ನಿಯೋಗಕ್ಕೆ ಸದಸ್ಯರನ್ನು ಆಯ್ಕೆ ಮಾಡುವಾಗ, ಅವರು ಸಂಬಂಧಪಟ್ಟವರಿಗೆ ಮತ್ತು
ಪ್ರಧಾನಿಗಳಿಗೆ, ಸೂಕ್ತರಾದವರನ್ನೇ ಆರಿಸುವಂತೆ ವಿನಂತಿಸಿಕೊಳ್ಳುತ್ತಿದ್ದರು. ಕಾರಣ ಸಂಸದರ ನಿಯೋಗದಲ್ಲಿ ವಿದೇಶಗಳಿಗೆ
ಹೋದಾಗ, ಕೆಲವರು ವಿವೇಕಹೀನರಾಗಿ ಪ್ರಶ್ನೆಗಳನ್ನು ಕೇಳಿ, ದೇಶದ ಮಾನ ಹರಾಜು ಹಾಕುತ್ತಾರೆ, ಅಂಥವರನ್ನು ಕರೆದು ಕೊಂಡು ಹೋಗದಂತೆ ಅವರು ಹೇಳುತ್ತಿದ್ದರು.

ವಿದೇಶ ಪ್ರವಾಸದಲ್ಲಿದ್ದಾಗ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಸದಸ್ಯರಿಗೆ ಪಾಠ ಮಾಡುವಂತೆ ವಾಜಪೇಯಿ ಒತ್ತಾಯಿಸುತ್ತಿದ್ದರು.
ಈ ಸಂಗತಿಗಳನ್ನು ವಾಜಪೇಯಿ ಲೋಕಸಭೆಯಲ್ಲಿ ಕೂಡ ಪ್ರಸ್ತಾಪಿಸಿದ್ದರು. ಅದನ್ನು ಅವರ ಬಹುಕಾಲದ ಸ್ನೇಹಿತರಾಗಿದ್ದ
ಎನ್.ಎಂ.ಘಟಾಟೆ ತಾವು ಸಂಪಾದಿಸಿದ “Atal Bihari Vajpayee : Four Decades In Parliament’ ಎಂಬ ಪುಸ್ತಕದಲ್ಲೂ ಸಂಗ್ರಹಿಸಿದ್ದಾರೆ.

ಆದರೆ ಈ ಸಂಗತಿ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಯಾರೂ ಅಷ್ಟಾಗಿ ಗಮನಹರಿಸುವುದಿಲ್ಲ ಎಂಬುದು ಬೇರೆ ಮಾತು. ವರ್ಷ ಕ್ಕೊಂದು ಬಾರಿ ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರುಗಳು ಕೂಡ ನಿಯೋಗದಲ್ಲಿ ವಿದೇಶ ಪ್ರಯಾಣ ಹೋಗುತ್ತಾರೆ. ಆ ಸಂದರ್ಭದಲ್ಲಿ ತಾವು ಭೇಟಿ ಕೊಟ್ಟ ದೇಶಗಳ ಸಂಸತ್ತಿಗೂ ಹೋಗುತ್ತಾರೆ. ಪ್ರಧಾನಿ, ಸ್ಪೀಕರ್, ಸಚಿವರನ್ನು ಸಹ ಭೇಟಿ ಮಾಡಿ ಅವರ ಜತೆ ಸಮಾಲೋಚಿಸುತ್ತಾರೆ.

ಅಲ್ಲಿನ ವ್ಯವಸ್ಥೆಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಒಮ್ಮೆ ಕರ್ನಾಟಕದ ಶಾಸಕರ ನಿಯೋಗ ನೆದರ್‌ಲ್ಯಾಂಡಿಗೆ ಭೇಟಿ ಕೊಟ್ಟಿತ್ತು. ಆ ಸಂದರ್ಭದಲ್ಲಿ ಅಲ್ಲಿನ ಸಚಿವರ ಜತೆ ಮಾತುಕತೆಯನ್ನು ಏರ್ಪಡಿಸಲಾಗಿತ್ತು. ಅವರು ತಮ್ಮ ದೇಶದ ಆಡಳಿತ, ಸಂಸದೀಯ ನಡೆವಳಿಕೆ, ಸರಕಾರದ ಕಾರ್ಯವಿಧಾನ, ನೀತಿಗಳ ಬಗ್ಗೆ ಸುದೀರ್ಘವಾಗಿ ವಿವರಿಸಿದರು.

ಅವನ್ನೆ ಕೇಳಲು ಅಷ್ಟೇನೂ ಆಸಕ್ತಿಯಿಲ್ಲದ ಸದಸ್ಯರೊಬ್ಬರು (ಆಗ ಅವರು ಶಾಸಕರಾಗಿದ್ದರು, ಈಗ ಅವರು ಸಂಸದರಾಗಿದ್ದಾರೆ) ಚಡಪಡಿಸುತ್ತಿದ್ದರು. ‘ಇವನ್ನೆ ತಿಳಿದುಕೊಂಡು ನಾವೇನು ಮಾಡಬೇಕು? ನಾವು ಇಲ್ಲಿಗೆ ಬಂದು ಚುನಾವಣೆಗೆ ನಿಲ್ತಿವಾ? ನಮಗೂ ಇದಕ್ಕೂ ಏನು ಸಂಬಂಧ? ಯಾಕೆ ಈವಯ್ಯಾ ಈ ಪರಿ ಕೊರೆಯುತ್ತಿದ್ದಾನೆ? ನೀವೂ ಆತ ಹೇಳಿದ್ದನ್ನೆ ಕೇಳುತ್ತಾ ಸಮಯ ಹಾಳು ಮಾಡುತ್ತಿದ್ದೀರಿ’ ಎಂದು ಗೊಣಗುತ್ತಿದ್ದರು.

ನೆದರ್‌ಲ್ಯಾಂಡಿನ ಸಚಿವರು ತಮ್ಮ ಮಾತನ್ನು ಮುಗಿಸಲೂ ಕಾಯದೇ, ಈ ಶಾಸಕರು, ಒಂದು ಪ್ರಶ್ನೆ ಕೇಳಿದರು. ಅದನ್ನು ಕೇಳಿದ ನಿಯೋಗದಲ್ಲಿದ್ದ ಉಳಿದ ಸದಸ್ಯರು ಮುಖಮುಖ ನೋಡಿಕೊಂಡರು. ‘ಇದೇನಪ್ಪಾ ಇವ ಹೀಗೆ ಪ್ರಶ್ನೆ ಕೇಳಿ ನಮ್ಮ ಮಾನ ಹರಾಜು ಹಾಕ್ತಾನೆ’ ಎಂದು ಹಣೆ ಹಣೆ ಚಚ್ಚಿಕೊಂಡರು. ಅಂದ ಹಾಗೆ ಆ ಶಾಸಕರು ಕೇಳಿದ ಪ್ರಶ್ನೆ – ‘ನಿಮ್ಮಲ್ಲಿ ಎಸ್ಸಿ, ಎಸ್ಟಿ ರಿಸರ್ವೇಶನ್ ಇದೆಯಾ? ಎಷ್ಟು ಪರ್ಸೆಂಟ್ ರಿಸರ್ವೇಶನ್ ಕೊಡ್ತೀರಿ?’ ಅದಕ್ಕೆ ಆ ಸಚಿವರು ತರಗಾಬರಗಾ.

ಅವರಿಗೆ ಆ ಪ್ರಶ್ನೆಯೇ ಅರ್ಥವಾಗಲಿಲ್ಲ. ‘ಎಸ್ಸಿ, ಎಸ್ಟಿ ಅಂದ್ರೆ ಏನು?’ ಎಂದು ಕೇಳಿದರು. ಅದಕ್ಕೆ ಈ ಶಾಸಕರು, ‘ಎಸ್ಸಿ ಅಂದ್ರೆ ಶೆಡ್ಯೂಲ್ಡ ಕಾಸ್ಟ್ ಮತ್ತು ಎಸ್ಟಿ ಅಂದ್ರೆ ಶೆಡ್ಯೂಲ್ಡ ಟ್ರೈಬ್… ಈ ಜಾತಿಗಳಿಗೆ ಮೀಸಲಾತಿ ಎಷ್ಟು ನಿಗದಿಪಡಿಸಿದ್ದೀರಿ?’ ಎಂದು ಕೇಳಿದರು. ಆಗಲೂ ಆ ಸಚಿವರು ತಿರುಗಾಮುರುಗಾ! ಅವರಿಗೆ ಆ ಪ್ರಶ್ನೆಯೇ ತಿಳಿಯಲಿಲ್ಲ. ಆಗ ಆ ನಿಯೋಗದ ನೇತೃತ್ವ ವಹಿಸಿದ ಹಿರಿಯ ಸದಸ್ಯರು ಕನ್ನಡದಲ್ಲಿ, ‘ಏನ್ರೀ ಹುಚ್ಚುಚ್ಚಾಗಿ ಏನೇನೆ ಕೇಳ್ತೀರಾ? ಎಸ್ಸಿ, ಎಸ್ಟಿ ಮೀಸಲಾತಿ ಇವೆ ನಮ್ಮಲ್ಲಿ ಮಾತ್ರ ಇರೋದು, ಅವರಿಗೆ ಹಾಗೆ ಕೇಳಿದರೆ ಏನು ಗೊತ್ತಾಗುತ್ತೆ? ಸ್ವಲ್ಪ ಕಾಮನ್ ಸೆನ್ಸ್ ಇಟ್ಕೊಂಡು ಪ್ರಶ್ನೆ ಕೇಳಿ.

ಏನೇನೋ ಕೇಳಿ ನಮ್ಮ ಮಾನ ಹರಾಜು ಹಾಕಬೇಡ’ ಎಂದು ಸಣ್ಣದಾಗಿ ಹೇಳಿ, ನಂತರ ಅವರಿಗೆ ನಮ್ಮ ಸದಸ್ಯರು ಕೇಳಲು
ಬಯಸಿದ್ದು ಇದು ಎಂದು ಬೇರೆ ಪ್ರಶ್ನೆ ಕೇಳಿ, ಸಂದರ್ಭವನ್ನು ನಿಭಾಯಿಸಿ, ಬಚಾವ್(?!) ಮಾಡಿದರು. ಆದರೂ ಆ ಶಾಸಕ ಮಹಾಶಯನಿಗೆ ಸಮಾಧಾನ ಇರಲಿಲ್ಲ. ತಾನು ಕೇಳಿದ್ದರಲ್ಲಿ ತಪ್ಪೇನೂ ಇಲ್ಲ, ಎಸ್ಸಿ, ಎಸ್ಟಿ ರಿಸರ್ವೇಶನ್ ಇರಲೇಬೇಕ ಎಂದು ವಾದಿಸುತ್ತಿದ್ದರು.

ಇಲ್ಲಿ ನಾಯಿಯೇ ಉಪಾಧ್ಯಕ್ಷ !
ನೀವು ದಿಲ್ಲಿ ಮೂಲದ ಲೆಮನ್ ಟ್ರೀ ಸಮೂಹ ಹೊಟೇಲ್ ಹೆಸರನ್ನು ಕೇಳಿರಬಹುದು. ದೇಶಾದ್ಯಂತ ಈ ಸಮೂಹದ 84
ಹೊಟೇಲುಗಳಿವೆ. ನೀವು ಯಾವುದೇ ಹೊಟೇಲಿಗೆ ಹೋದರೂ ಅಲ್ಲಿನ ಪ್ರವೇಶದ್ವಾರದಲ್ಲಿರುವ ಲಾಬಿಯಲ್ಲಿ ಒಂದೆರಡು
ನಾಯಿಗಳನ್ನು ನೋಡುತ್ತೀರಿ. ಈ ಹೊಟೇಲುಗಳ ಮಾಲೀಕ ಪಟು ಕೇಶ್ವಾನಿ ಅವರಿಗೆ ನಾಯಿಗಳೆಂದರೆ ಪಂಚಪ್ರಾಣ. ಅವರ ಬಳಿ ಸ್ಪಾರ್ಕಿ ಎಂಬ ಹೆಸರಿನ ನಾಯಿಯಿತ್ತು.

ಅದು ಅವರ ಜತೆ ಪ್ರತಿದಿನ ಹೊಟೇಲಿಗೆ ಹೋಗುತ್ತಿತ್ತು. ಕೆಲವು ಸಲ ಬೋರ್ಡ್ ಮೀಟಿಂಗಿನಲ್ಲಿ ಅದು ತನಗಾಗಿ ಮೀಸಲಿಟ್ಟ ಒಂದು ಕುರ್ಚಿಯ ಮೇಲೆ ಕೇಶ್ವಾನಿ ಜತೆಗೆ ಇಡೀ ದಿನ ಕುಳಿತಿರುತ್ತಿತ್ತು. ಆ ದಿನಗಳಲ್ಲಿ ಅದು ಪ್ರೈವೇಟ್ ಕಂಪನಿಯಾಗಿತ್ತು.
ಒಂದು ದಿನ ಕೇಶ್ವಾನಿ ತಮಾಷೆಯಿಂದ ತಮ್ಮ ಸಹೋದ್ಯೋಗಿಗಳಿಗೆ, ‘ಸ್ಪಾರ್ಕಿ ದಿನ ನನ್ನಷ್ಟೇ ಕೆಲಸ ಮಾಡುತ್ತದೆ. ಯಾಕೆ
ಅದನ್ನೂ ಉಪಾಧ್ಯಕ್ಷ (Vice Chair Dog)ರನ್ನಾಗಿ ನೇಮಕ ಮಾಡಬಾರದು?’ ಎಂದು ಕೇಳಿದರು.

ಅದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು. ಸ್ಪಾರ್ಕಿಯನ್ನು ಆ ಸಂಸ್ಥೆಯ ಉಪಾಧ್ಯಕ್ಷಳನ್ನಾಗಿ ನೇಮಿಸಲಾಯಿತು. ಮನುಷ್ಯರಿಗೊಂದೇ ಅಲ್ಲ, ಪ್ರಾಣಿಗಳಿಗೂ ಸಂಸ್ಥೆ ಮಹತ್ವ ಮತ್ತು ಪ್ರಾಮುಖ್ಯ ನೀಡುತ್ತದೆ ಎಂಬುದರ ದ್ಯೋತಕವಾಗಿ ಎಲ್ಲಾ ಹೊಟೇಲುಗಳಲ್ಲೂ, ಶ್ವಾನಗಳಿಗೆ ಸ್ಥಾನವನ್ನು ಕಲ್ಪಿಸಲಾಗಿದೆ.

2017ರಲ್ಲಿ ಸ್ಪಾರ್ಕಿ ಸತ್ತ ನಂತರ, ಎಲ್ಲಾ ಹೊಟೇಲುಗಳಲ್ಲಿ ಒಂದೆರಡು ನಾಯಿಗಳನ್ನು ಸಾಕುವಂತೆ, ಕೇಶ್ವಾನಿ ಸೂಚಿಸಿದರು.
ಇಂದು ಆ ಸಮೂಹದ ಎಲ್ಲಾ ಹೊಟೇಲುಗಳಲ್ಲಿರುವ ನಾಯಿಯ ಸಂಖ್ಯೆ ಸುಮಾರು 140. ಕೆಲವು ಹೊಟೇಲುಗಳಲ್ಲಿ ಏಳೆಂಟು
ನಾಯಿಗಳಿವೆ. ಇಂದು ಹೋಟೆಲಿಗೆ ಬರುವ ಅತಿಥಿಗಳನ್ನು ಆ ನಾಯಿಗಳು ಸ್ವಾಗತಿಸುತ್ತವೆ. ಅವುಗಳಿಗೆ ನುರಿತ ಶ್ವಾನ ತಜ್ಞರಿಂದ ತರಬೇತಿ ನೀಡಲಾಗುತ್ತಿದೆ. ಇಂದು ಹೊಟೇಲಿಗೆ ಬರುವವರಿಗೆ ಆ ನಾಯಿಗಳು ಕೂಡ ಒಂದು ಆಕರ್ಷಣೆಯಾಗಿವೆ.

ಹೊಟೇಲ್ ಲಾಬಿಯಲ್ಲಿ ನಾಯಿಗಳ ಕುರಿತ ಪುಸ್ತಕಗಳು ಅತಿಥಿಗಳಿಗೆ ಸಮಯ ಕಳೆಯುವ ಸಾಹಿತ್ಯವಾಗಿವೆ. ಬೋರ್ಡ್ ಮೀಟಿಂಗುಗಳಲ್ಲಿ ನಾಯಿಗಳನ್ನೂ ಒಳಬಿಟ್ಟುಕೊಳ್ಳುವ ಸಂಸ್ಥೆ ಇದೊಂದೇ ಇರಬೇಕು. ಪತ್ರಕರ್ತ ವೈಎನ್ಕೆಯವರು ಇದನ್ನು ನೋಡಿದ್ದರೆ This hotel has gone to dogs ಎಂದು ಹೇಳುತ್ತಿದ್ದರು!

ರಾಂಗ್ ನಂಬರ್ ಆದ್ರೂ ಪರವಾಗಿಲ್ಲ!
ಹಳೆಯ ‘ರೀಡರ್ಸ್ ಡೈಜೆಸ್ಟ್’ ಮ್ಯಾಗಜಿನ್‌ನಲ್ಲಿ ಓದಿದ ಒಂದು ಪ್ರಸಂಗ. ತಾಯಿ ಮಗಳಿಗೆ ಫೋನ್ ಮಾಡಿ, ‘ಹಲೋ ಡಾರ್ಲಿಂಗ್!
ಹೇಗಿದ್ದೀಯಾ?’ ಎಂದು ಕೇಳಿದಳು. ‘ನರಕ..ನರಕ.. ನನ್ನ ಬಾಳು ನರಕವಾಗಿದೆ. ನನಗೆ ಮೈಕೈ ನೋವು, ಬೆನ್ನು ಬೇರೆ ನೋಯು ತ್ತಿದೆ. ಮಕ್ಕಳು ವಿಪರೀತ ಕಷ್ಟ ಕೊಡುತ್ತಿದ್ದಾರೆ. ಅವರನ್ನು ನಿಯಂತ್ರಿಸುವುದೇ ಕಷ್ಟವಾಗಿದೆ. ಇಡೀ ಮನೆಯೆ ಗಲೀಜಾಗಿದೆ. ಇಷ್ಟೂ ಸಾಲದೆಂಬಂತೆ, ಇಂದು ಸಾಯಂಕಾಲ ನಾಲ್ವರು ಊಟಕ್ಕೆ ಬರುತ್ತಿದ್ದಾರೆ’ ಎಂದಳು.

‘ಚಿಂತೆ ಮಾಡ್ಕೋಬೇಡ, ಡಾರ್ಲಿಂಗ್. ನಾನು ಈಗಲೇ ಹೊರಟು ಬರುತ್ತೇನೆ. ನಾನು ನಿನ್ನ ಮಕ್ಕಳಿಗೆ ಊಟ ಮಾಡಿಸುತ್ತೇನೆ. ಮನೆಯನ್ನೆಲ್ಲ ಕ್ಲೀನ್ ಮಾಡುತ್ತೇನೆ. ನಿಮ್ಮ ಮನೆಗೆ ಬರುವ ಅತಿಥಿಗಳಿಗೆ ಇಷ್ಟವಾಗುವ ಊಟ ಮಾಡಿ ಬಡಿಸುತ್ತೇನೆ.’ ‘ನನ್ನಮ್ಮ ಅಂದ್ರೆ ದೇವತೆ! ಅಂದ ಹಾಗೆ ಅಪ್ಪ ಹೇಗಿದ್ದಾರೆ?’ ‘ಅಪ್ಪನಾ? ಡಾರ್ಲಿಂಗ್, ನಿನ್ನ ಅಪ್ಪ ತೀರಿ ಹೋಗಿ ಐದು ವರ್ಷಗಳಾಯಿತಲ್ಲ, ಏನು ಹೀಗೆ ಕೇಳ್ತೀಯಾ?’ ಹತ್ತು ಸೆಕೆಂಡ್ ಮೌನ… ‘ನೀನು ಹೇಮಾ ತಾನೇ?’ ‘ಇಲ್ಲ ನಾನು ಗೌರಿ’ ‘ಹಾಗಾದ್ರೆ ನಾನು ಮಾಡಿದ್ದು ರಾಂಗ್ ನಂಬರ್’ ‘ರಾಂಗ್ ನಂಬರ್ ಆದರೂ ಪರವಾಗಿಲ್ಲ… ನೀನು ನಮ್ಮ ಮನೆಗೆ ತಕ್ಷಣ ಬರ್ತೀಯಾ ತಾನೇ?’

ಗ್ರಾಹಕರ ಪ್ರತಿಕ್ರಿಯೆಯ ಮಹತ್ವ
ನೀವು ಯಾವುದೇ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವಾಗ, ಆ ವಸ್ತುವನ್ನು ಅದಕ್ಕಿಂತ ಮೊದಲು ಖರೀದಿಸಿದ ಗ್ರಾಹಕರ ಅಭಿಪ್ರಾಯಗಳನ್ನು ತಪ್ಪದೇ ಓದಬೇಕು. ಅವರ ಪ್ರತಿಕ್ರಿಯೆಗಳನ್ನು ತಿಳಿದುಕೊಳ್ಳದೇ, ಸಾಮಾನುಗಳನ್ನು ಖರೀದಿಸಿದರೆ, ಕೆಲವು ಸಲ, ತೊಂದರೆಯಾಗಬಹುದು.

ಅಮೆಜಾನ್‌ನಲ್ಲಿ ಒಬ್ಬ ಗ್ರಾಹಕ ‘ಕಸ್ಟಮರ್ ಫೀಡ್ ಬ್ಯಾಕ್’ ಜಾಗದಲ್ಲಿ ಹೀಗೆ ಬರೆದಿದ್ದ – ‘ಕಳೆದ ವಾರ ನಾನು ಈ ಬಿಸ್ಕತ್’ಗಳನ್ನೂ ಖರೀದಿಸಿದೆ. ಒಂದೇ ದಿನದಲ್ಲಿ ನನ್ನ ಮನೆಗೆ ವಿತರಿಸಿದರು. ಅದನ್ನು ಸ್ವೀಕರಿಸಿದವನೇ, ಬಾಯಿಗೆ ಹಾಕಿಕೊಂಡೆ. ತಕ್ಷಣ ವ್ಯಾಕ್ ಎಂದು ಉಗುಳಿಬಿಟ್ಟೆ. ಅದರ ರುಚಿ ಬಹಳ ಕೆಟ್ಟದಾಗಿತ್ತು. ಬಿಸ್ಕತ್ ಒಳಗೆ ಹುಲ್ಲುಗಳು ಸಿಕ್ಕವು. ನೋಡಲು ಅದು ಕಂದು – ಕಪ್ಪು ಮಿಶ್ರಿತ ಬಣ್ಣದಲ್ಲಿದ್ದವು. ಅದನ್ನು ಸೇವಿಸಿದ ಸ್ವಲ್ಪ ಹೊತ್ತಿನ ನನಗೆ ಹೊಟ್ಟೆಯೊಳಗೆ ಗೊಳಗೊಳ ಸದ್ದು. ಈ ಬಿಸ್ಕತನ್ನು ತಯಾರಿಸುವಾಗ ಅದರ ರುಚಿ ಮತ್ತು ಸ್ವಚ್ಛತೆ ಪರೀಕ್ಷೆ ಮಾಡಿಲ್ಲ ಎಂಬುದು ಸ್ಪಷ್ಟ.

ಗರಿಗರಿ ಇಲ್ಲದ ಬಿಸ್ಕತ್ ಸೇವಿಸಲು ಚೆನ್ನಾಗಿರುವುದಿಲ್ಲ. ಈ ಸಂಗತಿಗಳ ಬಗ್ಗೆ ಬಿಸ್ಕತ್ ತಯಾರಿಕಾ ಕಂಪನಿಯವರು ಗಮನ ಹರಿಸಬೇಕು.’ ಅಸಲಿಗೆ ಆತ ಖರೀದಿಸಿದ್ದು ಬಿಸ್ಕತ್ ಆಗಿರಲಿಲ್ಲ, ಬಿಸ್ಕತ್ ಥರಾನೇ ಕಾಣುವ, ಅದೇ ಆಕೃತಿ, ಗಾತ್ರದಲ್ಲಿ ತಯಾರಿಸಿದ,
ಪೂಜೆಗೆ ಬಳಸುವ, ದನದ ಸಗಣಿಯಿಂದ ಮಾಡಿದ, (Holy Cow Dung) ಬಿಗಳಾಗಿದ್ದವು!

ಗೀತಾ ಪ್ರವಚನ ಮತ್ತು ನೆಮ್ಮದಿ
‘ನಾನು ಕಳೆದ ನಲವತ್ತು ವರ್ಷಗಳಿಂದ ಗೀತಾ ಪ್ರವಚನ ಕೇಳುತ್ತಿದ್ದೇನೆ ಮತ್ತು ಅದರಂತೆ ನನ್ನ ಜೀವನವನ್ನು ರೂಪಿಸಿ ಕೊಂಡಿದ್ದೇನೆ. ನನಗೆ ಮನೆಯಲ್ಲಿ ಯಾವುದೇ ಸಮಸ್ಯೆಯೇ ಆಗಿಲ್ಲ. ನೆಮ್ಮದಿಯ ಬದುಕನ್ನು ನಡೆಸಿಕೊಂಡು ಹೋಗುತ್ತಿದ್ದೇನೆ’ ಎಂದು ವ್ಯಕ್ತಿತ್ವ ವಿಕಸನದ ಬಗ್ಗೆ ಭಾಷಣ ಮಾಡುತ್ತಿದ್ದವನೊಬ್ಬ ಹೇಳಿದ.
‘ವಾರೇವಾ! ಭಗವದ್ಗೀತೆಯ ಮಹತ್ವ ಅಂದ್ರೆ ಇದು! ನಾವೂ ಹೀಗೆ ಮಾಡಬೇಕು, ಆಲ್ವಾ?’ ಎಂದು ಅಲ್ಲಿದ್ದವರೆಲ್ಲ ತಲೆದೂಗಿದರು.
ಆದರೂ ಅಲ್ಲಿದ್ದ ಒಬ್ಬನಿಗೆ, ಆ ಭಾಷಣಕಾರನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಎಂದೆನಿಸಿತು. ಅವನ ಬಗ್ಗೆ ಗೂಗಲ್
ಮಾಡಿದ. ಆಗ ಅವನಿಗೆ ಗೊತ್ತಾದ ಸಂಗತಿಯೇನೆಂದರೆ, ಗೀತಾ ಅವನ ಹೆಂಡತಿಯ ಹೆಸರು ಎಂದು.

ಕಲಿಯುವುದು ಹೇಗೆ ?
ನನ್ನನ್ನೇ ನಾನು educate ಮಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ, ಉದ್ಯಮಿ ಹರ್ಷ ಗೋಯೆಂಕಾ ತಮ್ಮ ಅನುಭವವನ್ನೇ
ಹೀಗೆ ಹಂಚಿಕೊಂಡಿದ್ದಾರೆ. ಯಾವುದೇ ವಿಷಯದ ಬಗ್ಗೆ ಏನೇ ಪ್ರಶ್ನೆ ಉದ್ಭವಿಸಿದರೂ, ತಕ್ಷಣ ಗೂಗಲ್ ಮಾಡಿ ಉತ್ತರ ಕಂಡು ಕೊಳ್ಳಲು ಪ್ರಯತ್ನಿಸುತ್ತೇನೆ. ನಾನು ಆಯಾ ವಿಷಯದ ಸಾಕ್ಷ್ಯಚಿತ್ರಗಳನ್ನು ನೋಡುತ್ತೇನೆ.

ನಾನು ಸೆಮಿನಾರ್, ಟೆಡ್ ಟಾಕ್, ಯೂ ಟ್ಯೂಬ್‌ಗಳನ್ನು ನೋಡುತ್ತೇನೆ. ನಾನು ವಿಪರೀತ ಪ್ರವಾಸ ಮಾಡುತ್ತೇನೆ. ನಾನು ಆಗಾಗ ನನಗೇ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತೇನೆ. ನಾನು ನನಗಿಂತ ಹೆಚ್ಚು ಬಲ್ಲವರ, ಬುದ್ಧಿವಂತರ ಸ್ನೇಹ ಮಾಡುತ್ತೇನೆ. ಯಾವತ್ತೂ ವಿಷಯ ಪರಿಣತರನ್ನು ಸಂಪರ್ಕಿಸಿ ನನ್ನ ಸಂದೇಹವನ್ನು ಬಗೆಹರಿಸಿಕೊಳ್ಳುತ್ತೇನೆ. ನಾನು ಓದುತ್ತೇನೆ, ಓದುತ್ತೇನೆ, ಓದುತ್ತೇನೆ.
ನಾನು ಕೇಳುತ್ತೇನೆ, ಕೇಳುತ್ತೇನೆ, ಕೇಳುತ್ತೇನೆ. ನಾನು ಯಾವತ್ತೂ ನನ್ನ ಕುತೂಹಲದ ಅಂಟೆನಾವನ್ನು ಎತ್ತರಕ್ಕೆ ಇಟ್ಟುಕೊಳ್ಳು ತ್ತೇನೆ.

ಲೈಂಗಿಕ ಶಿಕ್ಷಣ
ಒಮ್ಮೆ ಮೈಕ್ ಡಗ್ಲಾಸ್ ಟಿವಿ ಕಾರ್ಯಕ್ರಮದಲ್ಲಿ, ನಟಿ ಪ್ಯಾಟಿ ಡ್ಯೂಕ್ ಭಾಗವಹಿಸಿದ್ದಳು. ‘ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ (sex education)ದ ಮಹತ್ವದ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂದು ಡಗ್ಲಾಸ್ ಕೇಳಿದ. ಅದಕ್ಕೆ ಪ್ಯಾಟಿ ಡ್ಯೂಕ್ ಹೇಳಿದಳು -‘ಇದು ನಿಜಕ್ಕೂ ಅದ್ಭುತ ಯೋಚನೆ. ಆದರೆ ಯಾವುದೇ ಕಾರಣಕ್ಕೂ ಮಕ್ಕಳಿಗೆ ಹೋಮ್ ವರ್ಕ್ ಕೊಡಬಾರದಷ್ಟೇ!’