Sunday, 13th October 2024

ಕಾಡುದಾರಿಯ ನಡಿಗೆ ಹೈಸ್ಕೂಲು ಕಡೆಗೆ

ಶಶಾಂಕಣ

shashidhara.halady@gmail.com

ಕಾಡಿನ ಅಂಚಿನ ಹಳ್ಳಿಯೂರಿನಲ್ಲಿ ಇದ್ದ ಆ ಹೈಸ್ಕೂಲ್‌ನಲ್ಲಿ ಎರಡು ವಿಶಾಲವಾದ ಆಟದ ಮೈದಾನಗಳಿದ್ದವು. ಮಕ್ಕಳ ಸಹಾಯದಿಂದ ನಿರ್ಮಾಣಗೊಂಡ ಅಲ್ಲಿನ ಒಂದು ಮೈದಾನ ಎಷ್ಟು ದೊಡ್ಡದಾಗಿತ್ತು ಎಂದರೆ, ಸಲೀಸಾಗಿ ಫುಟ್‌ಬಾಲ್ ಆಡುವಷ್ಟು. ಅದರಿಂದಾಗಿ ಅಲ್ಲಿನ ಗ್ರಾಮೀಣ ಮಕ್ಕಳು ಸಹ ಫುಟ್‌ಬಾಲ್ ಆಟ ಕಲಿಯುವಂತಾಯ್ತು.

ಕಾಡಿನ ಮಧ್ಯೆ ಇದ್ದ, ಮುಖ್ಯರಸ್ತೆಗೆ ಹೊಂದಿಕೊಂಡಿದ್ದ ಹೈಸ್ಕೂಲು ವಿದ್ಯಾ ಭ್ಯಾಸದ ದಿನಗಳನ್ನು ನೆನಪಿಸಿಕೊಳ್ಳುವುದೆಂದರೆ ಒಂದು ರೀತಿಯ ಮುದ, ಸಂತಸ. ಆದರೆ ಆ ಹೈಸ್ಕೂಲು ತಲುಪಲು ಪ್ರತಿದಿನ ಬೆಳಗ್ಗೆ ಐದು ಕಿ.ಮೀ. ಸಂಜೆ ಐದು ಕಿ.ಮೀ. ಕ್ರಮಿಸುವ ಅನುಭವ ಮಾತ್ರ ತುಸು ಶ್ರಮದಾಯಕ, ತುಸು ಸಂತಸಭರಿತ.

ಅದರಲ್ಲಿ ಅರ್ಧಭಾಗ ಅನಿವಾರ್ಯವಾಗಿ ನಡಿಗೆ, ಇನ್ನರ್ಧ ಭಾಗ ಒಮ್ಮೊಮ್ಮೆ ಬಸ್ ಪಯಣ, ಕೆಲವೊಮ್ಮೆ ಅದೂ ಸಹ ನಡಿಗೆಯಲ್ಲೇ! ಗದ್ದೆ ಬಯಲು, ಹಾಡಿ, ಹಕ್ಕಲುಗಳ ನಡುವೆಯಿದ್ದ ನಮ್ಮ ಮನೆಯಿಂದ, ಬಸ್ ರಸ್ತೆ ತಲುಪಲು ಅನಿವಾರ್ಯ ವಾಗಿ ಎರಡು ಕಿ.ಮೀ. ನಡೆಯಲೇ ಬೇಕಿತ್ತು. ಸೈಕಲ್ ಸಹ ಹೋಗದಂದಹ ಜಾಗದಲ್ಲಿ ನಮ್ಮ ಹಿರಿಯರು ಮನೆ ಕಟ್ಟಿದ್ದರು. ನಮ್ಮ ಮನೆಯಿಂದ ಆ ಹೈಸ್ಕೂಲಿಗೆ ಇದ್ದ ಐದು ಕಿ.ಮೀ. ಕ್ರಮಿಸಿಲು, ಬೆಳಗ್ಗೆ ಬೇಗನೆ ಎದ್ದು ದಿನಚರಿ ಆರಂಭ.

ಮಕ್ಕಳಿಗಿಂತಲೂ ಮುಂಚೆ ಮನೆಯ ಹಿರಿಯರು ಎದ್ದು, ಶಾಲೆಗೆ ಹೋಗುವವರಿಗೆ ಸಿದ್ಧತೆ ನಡೆಸಬೇಕಿತ್ತು! ಬೆಳಗ್ಗೆ ಬೇಗನೆದ್ದು, ತಿಂಡಿ ತಿಂದು, ಎಂಟು ಗಂಟೆಯ ಹೊತ್ತಿಗೆ ಹೊರಡುತ್ತಿತ್ತು ನನ್ನ ಸವಾರಿ. ನನ್ನ ತಂಗಿ ಸಹ ಅದೇ ಸಮಯದಲ್ಲಿ ಸಿದ್ಧಳಾಗ
ಬೇಕಿತ್ತು. ಬುತ್ತಿ ಪಾತ್ರೆ ಹಿಡಿದು, ನಡೆದು ಬಸ್ ಸ್ಟಾಪ್ ಬಳಿಗೆ ೮.೩೦ರ ಮುಂಚೆ ಬಂದರೆ, ಜಗದೀಶ್ವರ ಎಂಬ ಬಸ್ ಸಿಗುತ್ತಿತ್ತು; ಅದು ಬಿಟ್ಟರೆ ಆಗ ೧೦ ಗಂಟೆಯ ತನಕ ಬಸ್ ಇರಲಿಲ್ಲ. ಆದ್ದರಿಂದ ಹೈಸ್ಕೂ ಲಿಗೆ ಬಸ್‌ನಲ್ಲಿ ಹೋಗಬೇಕೆಂದರೆ, ೮.೩೦ರ ಮುಂಚೆಯೇ ಬರಬೇಕಿತ್ತು.

ಆ ಬಸ್ ೮.೪೫ರ ಮುಂಚೆ ನಮ್ಮನ್ನು ಹೈಸ್ಕೂಲಿನ ಬಳಿ ಬಿಡುತ್ತಿತ್ತು. ಅಷ್ಟು ಬೇಗನೆ ಹೋಗುವುದ ಏಕೆ ಎಂದು, ಹೆಚ್ಚಿನ ದಿನ
ನಡೆದುಕೊಂಡೇ ಹೈಸ್ಕೂಲಿಗೆ ಹೋಗುತ್ತಿದ್ದೆ. ಮೊದಲ ಎರಡು ಕಿ.ಮೀ., ಗದ್ದೆ ಬೈಲು, ಕಾಡು ಗುಡ್ಡದ ದಾರಿ, ನಂತರದ ಮೂರು ಕಿ.ಮೀ. ರಸ್ತೆ ದಾರಿ. ನಮ್ಮ ಹೈಸ್ಕೂಲು ಇದ್ದ ಹಳ್ಳಿಯ ಮೂಲ ಹೆಸರು ಗೋಳಿಕಟ್ಟೆ. ಪುರಾತನ ಕಾಲದಲ್ಲಿ ಅಲ್ಲೊಂದು
ಗೋಳಿ ಮರ ಮತ್ತು ಅದಕ್ಕೆಂದೇ ಒಂದು ಕಟ್ಟೆ ಇತ್ತು ಎನಿಸುತ್ತದೆ. ನಾಲ್ಕು ರಸ್ತೆ ಕೂಡುವ ತಾಣ ಅದು.

ಅಲ್ಲಿದ್ದ ಗೋಳಿ ಕಟ್ಟೆ ಮತ್ತು ಗೋಳಿ ಮರ ಕ್ರಮೇಣ ಖಿಲವಾಗಿರಬೇಕು. ಈ ನಡುವೆ, ಅಲ್ಲೇ ಇದ್ದ ಪುರಾತನ ಕಾಲದ ಶಂಕರನಾರಾಯಣ ದೇವಾಲಯವು ಪ್ರಸಿದ್ಧಿಗೆ ಬಂತು. ಆದ್ದರಿಂದ ಆ ಹಳ್ಳಿಯನ್ನು ದೇವರ ಹೆಸರಿನಲ್ಲಿ ಅಂದರೆ ‘ಶಂಕರನಾರಾ
ಯಣ’ ಎಂದು ಕರೆಯತೊಡಗಿದರು! ನಾನು ಹೈಸ್ಕೂಲಿಗೆ ಹೋಗುವಾಗ ಅದಾಗಲೇ ಬಹು ಹಿಂದೆಯೇ ‘ಶಂಕರನಾರಾಯಣ’ ಹೆಸರು ಅಧಿಕೃತವಾಗಿ ಬಳಕೆಯಲ್ಲಿತ್ತು. ದೇವರ ಹೆಸರು, ವ್ಯಕ್ತಿಯ ಹೆಸರು ಒಂದು ಹಳ್ಳಿಯ ಹೆಸರಾಗಿದೆ ಎಂಬ ಕ್ವಿಜ್
ಪ್ರಶ್ನೆಗೆ ಈ ಊರು ಸೂಕ್ತ ! ಹಳ್ಳಿಯ ಕೆಲವು ಜನರು ಈಗಲೂ ಗೋಳಿಕಟ್ಟೆ ಎಂದು ಹೇಳುವುದುಂಟು.

ಶಂಕರನಾರಾಯಣ ಬಸ್‌ಸ್ಟಾಪ್‌ನಿಂದ ಅರ್ಧ ಕಿ.ಮೀ. ದೂರದಲ್ಲಿತ್ತು ನಮ್ಮ ಹೈಸ್ಕೂಲು. ಬೆಳಗ್ಗೆ ಶಾಲೆಗೆ ಅನುಕೂಲವಾದ ಸಮಯಕ್ಕೆ ಬಸ್ ಇರಲಿಲ್ಲವೆಂದೋ, ಆಗ ಎಲ್ಲರೂ ಅನುಸರಿಸುತ್ತಿದ್ದ ಮಿತವ್ಯಯದ ಆಚರಣೆಯಿಂದಲೋ ಏನೊ, ನಾವು
ಹಲವರು ಮಕ್ಕಳು ರಸ್ತೆಯ ಮೇಲೆ ನಡೆಯುತ್ತಾ ಹೋಗಿ ಹೈಸ್ಕೂಲು ತಲುಪುತ್ತಿದ್ದೆವು. ಎಷ್ಟೋ ದಿನ ಸಂಜೆ ವಾಪಸ್ ಬರುವಾಗಲೂ ಐದು ಕಿ.ಮೀ. ನಡೆದೇ ಮನೆ ಸೇರಿದ್ದುಂಟು. ಆಗ ಬಸ್ ಚಾರ್ಜ್ ೩೫ ಪೈಸೆ. ಅದನ್ನು ಉಳಿಸಲು ಈ ರಸ್ತೆ ಚಾರಣ ಎನ್ನಬಹುದಾದರೂ, ಆ ದಾರಿಯ ಸೌಂದರ್ಯಕ್ಕೆ, ಸೌಕರ್ಯಕ್ಕೆ ಮನಸೋತು ನಡೆದಿದ್ದೇವೆ ಎಂದು ಈಗ ಹೇಳಿದರೂ, ಒಪ್ಪಬಹುದು.

ಏಕೆಂದರೆ, ದಾರಿಯುದ್ದಕ್ಕೂ ಹಸಿರಿನ ಸಿರಿ. ಜತೆಗೆ ನಡೆದು ವಾಪಸ್ ಬರುವಾಗಲೂ, ಮನೆ ತಲುಪುವಾಗ ಸಂಜೆಗತ್ತಲಾ ದರೂ, ಯಾರಿಗೂ ಭಯವಿರಲಿಲ್ಲ. ಅದೆಷ್ಟೋ ಬಾರಿ ಹುಡುಗರು, ಹುಡುಗಿಯರು ಒಬ್ಬೊಬ್ಬರೇ ನಡೆದು ಬರುತ್ತಿದ್ದುದೂ ಉಂಟು. ಅಲ್ಲಲ್ಲಿ ಸಿಗುವ ಮನೆಯವರ ಸಹಕಾರವು ಪರೋಕ್ಷ ಧೈರ್ಯ ನೀಡುತ್ತಿತ್ತು. ದಾರಿಯ ನಡುವೆ ಬಾಯಾರಿದರೆ, ಯಾರ ಮನೆಗೆ ಹೋದರೂ, ಕುಡಿಯಲು ಬೆಲ್ಲ ನೀರು ಕೊಡುತ್ತಿದ್ದರು; ಕಬ್ಬಿ ನಾಲೆಯ ಸಮಯದಲ್ಲಿ ಎಲ್ಲಿರಗೂ ಕುಡಿಯಲು ಕಬ್ಬಿನ ಹಾಲು, ತಿನ್ನಲು ಕಬ್ಬಿನ ಕೋಲು! ಉಂಡೂ ಹೋದ ಕೊಂಡೂ ಹೋದ ಎಂಬಂತೆ! ನಡೆದು ಮನೆ ಸೇರುವಾಗ ಕತ್ತಲಾದರೂ, ದಾರಿಯಲ್ಲಿ ಮನುಷ್ಯರಿಂದ ಭಯ, ಶೋಷಣೆ ಇರಲಿಲ್ಲ.

ಆದ್ದರಿಂದಲೇ ಆ ನಡಿಗೆಯ ಅನುಭವ ಅನುಪಮ. ಮಳೆಗಾಲದಲ್ಲಿ ನಮ್ಮ ಮನೆಯಿಂದ ಹೈಸ್ಕೂಲಿಗೆ ನಡೆದು ಹೊರಟರೆ, ಮೊದಲಿನ ಅರ್ಧ ಕಿ.ಮೀ. ದೂರ ತುಸು ರಗಳೆಯೇ ಸರಿ. ಒಂದು ಕೈಯಲ್ಲಿ ಕೊಡೆ, ಇನ್ನೊಂದು ಕೈಯಲ್ಲಿ ಬುತ್ತಿ ಪಾತ್ರೆ ಹಿಡಿದು
ಆ ಬೈಲನ್ನು ದಾಟುವುದು ಸಣ್ಣ ಸಾಹಸ. ಮಳೆ ಸುರಿಯವಾಗ, ಕೊಡೆ ಹಿಡಿದು ಗದ್ದೆಯಂಚಿನ ಮೇಲೆ ನಡಿಗೆ, ಎರಡೂ ಕಡೆ ಬತ್ತ ಬೆಳೆದ ಗದ್ದೆ, ಅದರಾಚೆ ನೀರು ಹರಿಯುವ ತೋಡು, ಆ ತೋಡನ್ನು ದಾಟಲು ಮರದ ಸಾರ, ಅದನ್ನು ದಾಟಿ, ಹಾಡಿಯ ದಾರಿ ಹಿಡಿದು ಅರ್ಧ ಗಂಟೆ ನಡೆದಾಗ ನಮ್ಮೂರಿನ ಬಸ್‌ಸ್ಟಾಪ್ ಸಿಗುತ್ತಿತ್ತು.

ಅಲ್ಲಿಂದಾಚೆ ಹೆಚ್ಚಿನ ದಿನ ರಸ್ತೆಯ ಮೇಲೆ ನಡೆಯುವ ಕೆಲಸ. ನಮ್ಮೂರಿನ ಹತ್ತಿರವೇ ವಾರಾಹಿ ನದಿಗೆ ಅಡ್ಡಲಾಗಿ ನಿರ್ಮಿಸ ಲಾಗಿದ್ದ ಹೊಸ ಸೇತುವೆಯ ಮೇಲೆ ನಡೆಯುವಾಗ, ಕೆಳಗೆ ಹರಿಯುವ ನೀರನ್ನು ನೋಡುವ ಆಸೆ. ಮಳೆಗಾಲ ದಲ್ಲಾದರೆ, ಆ ನದಿ ಯಲ್ಲಿ ಹರಿಯುವ ಕೆಂಪನೆಯ ನೀರು, ಅದರಲ್ಲಿ ಒಮ್ಮೊಮ್ಮೆ ತೇಲಿಬರುವ ಬೃಹತ್ ಗಾತ್ರದ ಮರಗಳು! ಚಳಿಗಾಲದಲ್ಲಿ ಅಲ್ಲಿ ಓಡಾಡುವ ಗೊದಮೊಟ್ಟೆಗಳ ಹಿಂಡು, ಮೀನುಗಳ ದಂಡು ಕಾಣಸಿಗುತ್ತಿತ್ತು.

ಸೇತುವೆ ದಾಟಿದ ನಂತರ, ರಸ್ತೆಯ ಇಕ್ಕೆಲದಲ್ಲೂ ಹಾಡಿ, ಕಾಡು, ಅಲ್ಲಲ್ಲಿ ಗುಡ್ಡ. ಆ ದಾರಿಯಲ್ಲಿ ಸಾಗುವಾಗ ಹಕ್ಕಿಗಳ ಕೂಗು. ಬೇಸಗೆ ಹತ್ತಿರ ಬರುತ್ತಿದ್ದಂತೆ, ದಾರಿಯ ತುಸು ಒಳಭಾಗದಲ್ಲಿ ಕುರುಚಲು ಗಿಡಗಳ ನಡುವೆ ಬೆಳೆದ ಚೇಂಪಿ ಹಣ್ಣು ತಿನ್ನುವ ಅವಕಾಶ. ಚೇಂಪಿ ಹಣ್ಣು ರುಚಿ ಮತ್ತು ಗಾತ್ರದಲ್ಲಿ ದ್ರಾಕ್ಷಿಯನ್ನು ಹೋಲುತ್ತದೆ. ನಾವು ನಡೆಯುವ ಟಾರು ರಸ್ತೆಯ ಮೇಲೆ ಅಲ್ಲಲ್ಲಿ ಕಪ್ಪೆಗಳ ಕಳೇಬರ!

ರಾತ್ರಿ ಹೊತ್ತಿನಲ್ಲೋ ಏನೊ, ವೇಗವಾಗಿ ಸಾಗುವ ಲಾರಿಗಳ ಚಕ್ರಕ್ಕೆ ಸ್ಕಿಕಿದ ಅಬ್ಬೆಪಾರಿ ಕಪ್ಪೆಗಳ ಪಾಡು ಅದು. ಅದೇ ರಸ್ತೆಯಲ್ಲಿ ನಡೆದು, ಕಲ್ಕುಟುಕನ ದೇವಾಲಯದ ಬಳಿ ದಟ್ಟ ಹಾಡಿದಾರಿಯಲ್ಲಿ ಬಲಕ್ಕೆ ಸಾಗಿ ಮುಂದುವರಿದರೆ, ಹೈಸ್ಕೂಲು ಸಿಗುತ್ತದೆ. ದಿನಾ ರಸ್ತೆಯ ಮೇಲೆ ನಡೆಯಲು ಬೋರ್ ಎನಿಸಿದರೆ, ಒಂದು ಒಳದಾರಿಯಿತ್ತು. ಕಟ್ಟೆಮಕ್ಕಿ ಉಬ್ಬು ಏರಿದ ನಂತರ, ತುಸು ದೂರದಲ್ಲಿ ಎಡ ಭಾಗದ ಹಕ್ಕಲಿನೊಳಗೆ ಸಾಗುವ ದಾರಿಯಲ್ಲಿ ನಡೆದರೆ, ಇನ್ನಷ್ಟು ನಿರ್ಜನ ಎನಿಸುವ ಕಾಡುದಾರಿ.

ಅದರಾಚೆ ಒಂದು ಗದ್ದೆಬೈಲು, ತೋಡು, ಸಂಕ; ಅಲ್ಲಿಂದಾಚೆ ಮತ್ತೊಂದು ಗುಡ್ಡ. ಅದನ್ನೇರಿ ಇಳಿದರೆ, ಶಂಕರನಾರಾಯಣ ದೇವಾಲಯದ ಹಿಂಭಾಗದಲ್ಲಿ, ಐತಾಳರ ಮನೆಯ ಹತ್ತಿರ ಸೌಡ ರಸ್ತೆ ಯನ್ನು ತಲುಪಬಹುದು; ಅಲ್ಲಿಂದ ಮತ್ತೆ ಟಾರು
ರಸ್ತೆಯಲ್ಲಿ ಒಂದಿ ಕಿ.ಮೀ. ನಡೆದರೆ ನಮ್ಮ ಹೈಸ್ಕೂಲು. ಈ ಒಳದಾರಿ ಅಷ್ಟೇನೂ ಹತ್ತಿರದ ದಾರಿ ಎನ್ನಲಾಗದು. ಆದರೆ, ಆ ದಾರಿಯುದ್ದಕ್ಕೂ ಸಿಗುವ ಹಾಡಿ, ಹಕ್ಕಲು, ಗದ್ದೆ, ಗುಡ್ಡಗಳಲ್ಲಿ ನಡೆಯುವ ಅನುಭವಕ್ಕೆಂದೇ ನಾವೆಲ್ಲಾ ಅಲ್ಲಿ ನಡೆಯುತ್ತಿದ್ದೆವು
ಎನಿಸುತ್ತದೆ. ಚಳಗಾಲ ಕಳೆದ ನಂತರ ಆ ದಾರಿಯು ದ್ದಕ್ಕೂ ಮಾವಿನ ಮಿಡಿಗಳು ತಿನ್ನಲು ಸಿಗುತ್ತಿದ್ದವು.

ಅಲ್ಲಲ್ಲಿ ಕೆಲವರು ಕಬ್ಬಿನಾಲೆ ಮಾಡುವವರು ಕಬ್ಬು ಕೊಡುತ್ತಿದ್ದರು. ನಾನೊಮ್ಮೆ ಒಬ್ಬನೇ ಆ ದಾರಿಯಲ್ಲಿ ನಡೆದಾಗ, ಒಂದು ಪುಟಾಣಿ ಹಕ್ಕಿಯ ಗೂಡನ್ನು ಕಂಡ ನೆನಪಿದೆ. ಗದ್ದೆಯಂಚಿನ ತೋಡಿನ ಪಕ್ಕದ ಮುಂಡುಕದ ಮುಳ್ಳು ಎಲೆಗಳ ನಡುವೆ ಆ ಸಣ್ಣ ಹಕ್ಕಿ ಗೂಡು ಕಟ್ಟಿತ್ತು. ಐದು ಅಡಿ ಎತ್ತರದಲ್ಲಿ ಇದ್ದ ಆ ಗೂಡು, ಟ್ಯೂಬ್ ಆಕಾರದಲ್ಲಿತ್ತು; ಪೂರ್ತಿ ಎಲೆಗಳಿಂದಲೇ ನಿರ್ಮಾಣ. ಆ ಹಕ್ಕಿಯ ಹೆಸರು ಗೊತ್ತಿರಲಿಲ್ಲ; ನಾನು ಗೂಡನ್ನು ನೋಡುತ್ತಾ ನಿಂತಾಗ, ಆ ಹಕ್ಕಿಯು ಬೆದರಿ ಹಾರಿ ಹೋಗಿದ್ದು ನೆನಪಿದೆ. ಓ, ನಾವೆಲ್ಲಾ ಹತ್ತಿರದಿಂದ ಅದನ್ನು ನೊಡಿದರೆ ಅದಕ್ಕೆ ತೊಂದರೆ ಎಂದರಿತ ನಾನು, ಬೇಗ ಬೇಗನೆ ಕಾಲು ಹಾಕಿದೆ.

ಶಂಕರನಾರಾಯಣ ಹೈಸ್ಕೂಲಿನ ಹಿಂಭಾಗದ ಒಂದು ಪ್ರದೇಶದಲ್ಲಿ ಸ್ವಲ್ಪ ಕುರುಚಲು ಕಾಡಿದೆ. ಆ ನಂತರ ದಟ್ಟವಾದ ಕಾಡು, ಗುಡ್ಡ. ಶಾಲೆಯ ಹಿಂಭಾಗದ ಕುರುಚಲು ಗಿಡಗಳ ಒಂದು ಟೊಂಗೆಯಲ್ಲಿ ಹಕ್ಕಿಯೊಂದು ಕಟ್ಟಿದ್ದ ಗೂಡು ಇಂದಿಗೂ ನೆನಪಿದೆ. ಪಾಪ, ಆ ಹಕ್ಕಿಯು ಮೂರರಿಂದ ನಾಲ್ಕು ಅಡಿಗಳ ಎತ್ತರದಲ್ಲಿ ಗೂಡುಕಟ್ಟಿ ಮೊಟ್ಟಯಿಟ್ಟಿತ್ತು. ಸಾಮಾನ್ಯವಾಗಿ ದರ್ಜಿ ಹಕ್ಕಿಗಳು ಅಷ್ಟು ಕಡಿಮೆ ಎತ್ತರದಲ್ಲಿ ಗೂಡು ಕಟ್ಟುತ್ತವೆ. ನಾವು ಮಕ್ಕಳು ಪ್ರತಿದಿನ ಆ ಗೂಡನ್ನು ನೋಡುತ್ತಿದ್ದೆವು. ಪಾಪ ಆ ಹಕ್ಕಿಗೆ ಅದರಿಂದ ಅದೆಷ್ಟು ಕಿರಿಕಿರಿ ಆಯಿತೋ ಗೊತ್ತಿಲ್ಲ.

ಹೆಚ್ಚಿನ ದಿನ ನಮ್ಮ ಬುತ್ತಿ ಪಾತ್ರೆಯಲ್ಲಿ ಹಾಕಿಕೊಡುತ್ತಿದ್ದುದು, ಅನ್ನ ಅಥವಾ ಗಂಜಿ, ಅದರ ಜತೆ ಮೊಸರು, ಅದರ ಮೇಲೊಂದು ಉಪ್ಪಿನಕಾಯಿ ಹೋಳು. ಹೈಸ್ಕೂಲು ಸೇರಿದ ಹೊಸತರಲ್ಲಿ, ಮೂರು ಕಂಪಾರ್ಟ್‌ಮೆಂಟ್ ಇರುವ ಪುಟ್ಟ ಬುತ್ತಿ
ಪಾತ್ರೆಯನ್ನು ನಮ್ಮಪ್ಪ ತೆಗೆಸಿಕೊಟ್ಟಿದ್ದರು. ಅದರಲ್ಲಿ ಪ್ರತ್ಯೇಕವಾಗಿ ಉಪ್ಪಿನಕಾಯಿ ಹಾಕಿಕೊಳ್ಳುವ ಅವಕಾಶ. ತಿಳಿ ನೀಲಿ ಬಣ್ಣದ ಆ ಲ್ಯುಮಿನಿಯಂ ಬುತ್ತಿಪಾತ್ರೆಯನ್ನು ಕಂಡು ಇತರ ಮಕ್ಕಳಿಗೆ ಅಚ್ಚರಿ.

ಹೆಚ್ಚಿನವರ ಬಳಿ ಇದ್ದುದ್ದು ಉಗ್ಗದ ಪಾತ್ರೆ ಮಾತ್ರ. ಮಳೆಗಾಲದಲ್ಲಿ ನಮ್ಮ ಹೈಸ್ಕೂಲಿನ ಪಕ್ಕದಲ್ಲೇ ಹರಿಯುತ್ತಿದ್ದ ತಿಳಿನೀರಿನ ತೊರೆಯಲ್ಲಿ ಕೈತೊಳೆಯುವ, ಬುತ್ತಿಪಾತ್ರೆ ತೊಳೆಯುವ ಪರಿಪಾಠ. ಒಮ್ಮೊಮ್ಮೆ ಬುತ್ತಿಯೂಟ ತಿನ್ನಲು, ಶಾಲೆಯ ಹಿಂಭಾಗದ ಕಾಡಿನತ್ತ ಸಾಗಿದ್ದ ಗಾಡಿ ರಸ್ತೆಯಲ್ಲಿ ಸ್ವಲ್ಪ ದೂರ ನಡೆದು ಹೋಗುತ್ತಿದ್ದೆವು. ಅಲ್ಲಿ ಪುರಾತನ ಕಾಲದ ಹಲವು ಮರಗಳಿದ್ದವು,
ಅವುಗಳ ಬೇರು ನಮ್ಮ ಕುರ್ಚಿ, ಇನ್ನೊಂದು ಬೇರು ಟೇಬಲ್. ಊಟ ಮುಗಿಸಿ, ಕೈತೊಳೆಯಲು ಅಲ್ಲೊಂದು ನೀರಿನಾಶ್ರಯ ವಿತ್ತು. ಸುಮಾರು ಹತ್ತು ಅಡಿ ವಿಶಾಲವಿದ್ದ ಆ ನೀರಿನ ಗುಮ್ಮಿಯಲ್ಲಿ ಬೇಸಗೆಯಲ್ಲೂ ನೀರಿರುತ್ತಿತ್ತು. ಅದರ ಸುತ್ತಲೂ ಗಿಡ, ಪೊದೆ, ಬಳ್ಳಿ, ಮರಗಳಿದ್ದುದರಿಂದಲೇ ಇರಬೇಕು, ಅದರ ನೀರು ಒಣಗುತ್ತಿರಲಿಲ್ಲ.

ಆದರೆ, ಆ ಗುಮ್ಮಿಗೆ ನಿರಂತರವಾಗಿ ಎಲೆಗಳು ಬೀಳುತ್ತಿದ್ದುದರಿಂದಾಗಿ, ಅದರ ನೀರನ್ನು ಬಾಯಿಗೆ ಹಾಕಿಕೊಂಡರೆ, ಎಲೆಕೊಳೆತ ರುಚಿ! ಕೈತೊಳೆಯಲು, ಬುತ್ತಿ ಪಾತ್ರೆ ತೊಳೆಯಲು ಮಾತ್ರ ಅದರ ಉಪಯೋಗ. ಆ ಸುತ್ತಲೂ ಎಲ್ಲೂ
ಮನೆಗಳಿರಲಿಲ್ಲ. ಕಾಡು ಪ್ರಾಣಿಗಳ ಉಪಯೋಗಕ್ಕೆ ಸೂಕ್ತವಾಗಿತ್ತು, ಆ ಗುಮ್ಮಿಯ ನೀರು. ಅದೇ ಗುಮ್ಮಿಯ ಪಕ್ಕ ಸಾಗಿದ್ದ ಗಾಡಿ ರಸ್ತೆಯಲ್ಲಿ ನಾನು ಮತ್ತು ಸಹಪಾಠಿ ಹೆಬ್ಬಾರ್ ಒಮ್ಮೆ ಹೋಗಿದ್ದುಂಟು. ಅವರ ಮನೆಯು ನಮ್ಮ ಮನೆಗಿಂತಲೂ ಹೆಚ್ಚು ದುರ್ಗಮ ಸ್ಥಳದಲ್ಲಿತ್ತು.

ಹೈಸ್ಕೂಲಿನ ಹಿಂಭಾಗದ ಆ ದಾರಿಯಲ್ಲಿ ಐದು ಕಿ.ಮೀ. ನಡೆದರೆ ಅವರ ಊರು. ಒಂದು ಸಂಜೆ ಕ್ಲಾಸ್ ಮುಗಿಸಿ, ನಾವಿಬ್ಬರು ಆ ದಾರಿ ಹಿಡಿದೆವು. ಎಲ್ಲಾ ಕಡೆ ಕಾಡು, ಹಾಡಿ, ಗುಡ್ಡಗಳು! ಅವುಗಳ ನಡುವೆ ದಾರಿಗಡ್ಡಲಾಗಿ ವಾರಾಹಿ ಹೊಳೆಯ ಉಪನದಿ!
ಅದು ಬೇಸಗೆಯ ದಿನಗಳಾಗಿದ್ದರಿಮದ ನೀರು ಕಡಿಮೆಯಿತ್ತು; ಆ ನೀರಿನಲ್ಲಿ ನಡೆದರೆ ತೊಡೆ ಮಟ್ಟದ ನೀರು. ಹಾಕಿದ್ದ ಚಡ್ಡಿಯ ಅಂಚು ತುಸು ಒದ್ದೆಯಾಯಿತು; ಆದರೆ ಸಂಜೆಯ ಇಳಿಬಿಸಿಲಿನಲ್ಲಿ, ಆ ವಿಶಾಲ ನದಿಯ ಹರವನ್ನು ಕಾಲ್ನಡಿಗೆಯಲ್ಲೇ ದಾಟಿದ ಅನುಭವ ಮಾತ್ರ ಅಪೂರ್ವ.

ನದಿ ದಾಟಿ, ಇನ್ನೊಂದಿಷ್ಟು ದೂರ ನಡೆದರೆ, ಅಡಕೆ ತೋಟಗಳ ನಡುವೆ ಇದ್ದ ಅವರ ಮನೆ ಸಿಗುತ್ತದೆ. ಆದರೆ ಆ ದಾರಿ ಕಠಿಣ. ಮಳೆಗಾಲದಲ್ಲಿ, ನದಿಯಲ್ಲಿ ನೀರೇರಿದಾಗ ಅಲ್ಲಿ ನಡೆದು ಸಾಗಲು ಆಗದು. ಆಗ ಆ ಊರಿನ ಮಕ್ಕಳು ಶಂಕರನಾರಾಯಣದಲ್ಲಿ ಪುಟ್ಟ ರೂಮು ಮಾಡಿಕೊಂಡೋ, ಯಾರದ್ದಾದರೂ ಮನೆಯಲ್ಲಿ ಇದ್ದುಕೊಂಡೋ ವಿದ್ಯಾಭ್ಯಾಸ ನಡೆಸುವ ಅನಿವಾರ್ಯತೆ.
ಶಂಕರನಾರಾಯಣ ಹೈಸ್ಕೂಲಿನ ವಿಶೇಷತೆ ಎಂದರೆ, ಮುಂಭಾಗದಲ್ಲೊಂದು ವಿಶಾಲವಾದ ಆಟದ ಮೈದಾನ, ಹಿಂಭಾಗದಲ್ಲಿ ಅದಕ್ಕಿಂತಲೂ ವಿಶಾಲವಾದ ಆಟದ ಮೈದಾನ. ಹಿಂಭಾಗದ ಮೈದಾನ ಅದೆಷ್ಟು ವಿಶಾಲವೆಂದರೆ, ಫುಟ್‌ಬಾಲ್ ಆಟ ಆಡುವಷ್ಟು.

ಅಲ್ಲಿದ್ದ ಹೆಬ್ಬಾರ್ ಎಂಬ ಪಿ.ಇ.ಟೀಚರ್, ಮಕ್ಕಳ ಸಹಾಯದಿಂದ ಅಷ್ಟು ದೊಡ್ಡ ಆಟದ ಮೈದಾನ ನಿರ್ಮಿಸಿದ್ದರು. ಸಮಯ
ಇದ್ದಾಗಲೆಲ್ಲಾ ಶಾಲಾ ಮಕ್ಕಳು ಗುಡ್ಡವನ್ನು ತರಿದು, ಕೈಗಾಡಿಯಲ್ಲಿ ಮಣ್ಣನ್ನು ತುಂಬಿಕೊಂಡು, ಇಳಿಜಾರಿಗೆ ತುಂಬಿಸುವ ಕೆಲಸ ಮಾಡಿದ್ದರು. ಈ ರೀತಿ ಹಲವು ವರ್ಷ ಮಾಡಿದ್ದರಿಂದ, ಅಷ್ಟು ದೊಡ್ಡ ಮೈದಾನ ಸಿದ್ಧವಾಗಿತ್ತು. ಅಲ್ಲಿನ ಮಕ್ಕಳು ಕ್ರಿಕೆಟ್,
ಫುಟ್‌ಬಾಲ್, ಕಬಡ್ಡಿ, ಬಾಲ್‌ಬ್ಯಾಡ್ಮಿಂಟನ್, ವಾಲಿಬಾಲ್, ಥ್ರೋಬಾಲ್, ಕೊಕ್ಕೋ ಆಡುತ್ತಿದ್ದರು!

ನಾನು ಫುಟ್‌ಬಾಲ್ ಕಲಿತದ್ದು, ಆಡಿದ್ದು ಅಲ್ಲೇ. ಬರಿಗಾಲಲ್ಲಿ ಓಡುತ್ತಾ, ಫುಟ್‌ಬಾಲ್ ತುಳಿದು, ಹೆಬ್ಬೆರಳನ್ನು ನೋವು ಮಾಡಿಕೊಂಡಿದ್ದರೂ, ಮೂರು ವರ್ಷಗಳ ಕಾಲ, ಮಳೆ ಇಲ್ಲದ ದಿನಗಳಲ್ಲಿ ಫುಟ್ ಬಾಲ್ ಹಿಂದೆ ಓಡಿದ್ದೆ, ಆಟದ ಪರಿಚಯ
ಮಾಡಿಕೊಂಡಿದ್ದೆ. ಒಂದು ಮಧ್ಯಾಹ್ನ ಊಟಕ್ಕೆ ಬಿಟ್ಟಾಗ, ಬಿಸಿಲಿನಲ್ಲಿ ಫುಟ್‌ಬಾಲ್ ಆಟವಾಡಿ, ತರಗತಿಗೆ ವಾಪಸ್ ಬಂದಾಗ ತಲೆಸುತ್ತು!

ಈ ಹೈಸ್ಕೂಲಿನಲ್ಲಿ ನಾನು ಓದಿದ್ದು ಐದು ವರ್ಷ! ಅಲ್ಲಿ ಹೈಸ್ಕೂಲಿನ ಜತೆ, ಪಿ.ಯು. ತರಗತಿಗಳೂ ನಡೆಯುತ್ತಿದ್ದವು. ಈಗ ಅಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಗೊಂಡಿದೆ.