Friday, 13th December 2024

ಶಾಲಾ ಬ್ಯಾಗ್ ತೂಕದ ಸಮಸ್ಯೆಗೆ ಮುಕ್ತಿ ಎಂದು ?

ಅಭಿಮತ

ಸುರೇಂದ್ರ ಪೈ

ಶೈಕ್ಷಣಿಕ ವರ್ಷ ೨೦೨೪-೨೫ ಈಗಾಗಲೇ ಪ್ರಾರಂಭವಾಗಿದ್ದು, ನಿರೀಕ್ಷೆಯಂತೆ ಸರಕಾರಿ ಶಾಲೆಯ ದಾಖಲಾತಿ ಕುಂಠಿತವಾದರೆ, ಖಾಸಗಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯು ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ಮತ್ತೆ ಮಕ್ಕಳ ಶಾಲಾ ಬ್ಯಾಗ್ ತೂಕದಲ್ಲಿ ಹೆಚ್ಚಳವಾಗುತ್ತಿರುವ ಬಗ್ಗೆ ಪಾಲಕರು ಕಳವಳವನ್ನು ವ್ಯಕ್ತಪಡಿಸಿತ್ತಿರುವ ಘಟನೆಗಳು ಎಡೆ ಕಂಡುಬರುತ್ತಿದೆ.

ಇದು ಇಂದು-ನಿನ್ನೆಯ ಸಮಸ್ಯೆಯಲ್ಲ ಕಳೆದ ಹಲವು ವರ್ಷಗಳಿಂದಲೂ ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ವಿವಿಧ ಸಮಿತಿಯ ರಚನೆಯಾಗಿ, ವಿವಿಧ ಶಿಕ್ಷಣ ಇಲಾಖೆಯ ಹತ್ತಾರು ಸುತ್ತೋಲೆಗಳು ಜಾರಿಯಾಗಿವೆ. ಆದರೂ ಸಹ ವರ್ಷದಿಂದ ವರ್ಷಕ್ಕೆ ಅದರಲ್ಲೂ ೧ ರಿಂದ ೪ ನೇ ತರಗತಿಯ ಮಕ್ಕಳ ಬ್ಯಾಗ್‌ನ ತೂಕದ ಹೊರೆ ಹೆಚ್ಚಾಗುತ್ತಲೇ ಇದೆ. ಇಷ್ಟಾದರೂ ಇದಕ್ಕೊಂದು ಲಂಗು ಲಗಾಮು ಹಾಕಲು ಸಾಧ್ಯವಾಗುತ್ತಿಲ್ಲ ಏಕೆ? ಪುಟಾಣಿಗಳ ಬೆನ್ನ ಹೊರೆಯ ತೂಕವನ್ನು ಇಳಿಸುವ ಜವಬ್ದಾರಿ ಯಾರದ್ದು? ಈ ಸಮಸ್ಯೆಗೆ ಮುಕ್ತಿ ಹೇಗೆ? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ವರ್ಷ ವರ್ಷವೂ ಮುನ್ನಲೆಗೆ ಬರುವ ವಿಷಯವಾದ ಶಾಲಾ ಬ್ಯಾಗ್ ತೂಕದ ಸಮಸ್ಯೆಯ ಗಂಭೀರತೆಯನ್ನು ಅವಲೋಕಿಸುವುದಾದರೆ ೨೦೧೬ ರಲ್ಲಿ,
ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಆಫ್ ಇಂಡಿಯಾ ತನ್ನ ಹೆಲ್ತ್ ಕೇರ್ ಕಮಿಟಿಯ ಅಡಿಯಲ್ಲಿ, ಹತ್ತು ಭಾರತೀಯ ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ, ೧೩ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಮ್ಮ ದೇಹದ ತೂಕದ ೪೫ ಪ್ರತಿಶತಕ್ಕಿಂತ ಹೆಚ್ಚು ತೂಕ ಹೊರುತ್ತಾರೆ, ಇದರಿಂದಾಗಿ ೬೮ ಪ್ರತಿಶತ ಶಾಲಾ ಮಕ್ಕಳು ಅಪಾಯಕಾರಿ ಬೆನ್ನು ಮೂಳೆಯ ನೋವಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿ ಮಾಡಿದೆ.

ಇಷ್ಟೇ ಅಲ್ಲ, ಒಂದು ಭುಜದ ಮೇಲೆ ಬ್ಯಾಕ್‌ಬ್ಯಾಕ್‌ಗಳನ್ನು ಸಾಗಿಸುವುದು ತಪ್ಪು ಅಭ್ಯಾಸವಾಗಿದೆ ಏಕೆಂದರೆ ಇದು ಸ್ನಾಯುಗಳನ್ನು ಆಯಾಸ ಗೊಳಿಸುತ್ತದೆ. ಬೆನ್ನುಮೂಳೆಯು ಎದುರು ಭಾಗಕ್ಕೆ ವಾಲುತ್ತದೆ, ಮಧ್ಯದ ಬೆನ್ನು, ಪಕ್ಕೆಲುಬುಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಮತ್ತು ಈ ಸ್ನಾಯುವಿನ ಅಸಮತೋಲನವು ಸ್ನಾಯುವಿನ ಒತ್ತಡ, ಸ್ನಾಯು ಸೆಳೆತ ಮತ್ತು ಬೆನ್ನುನೋವಿಗೆ ಕಾರಣವಾಗಬಹುದು. ಇದು ದೀರ್ಘಾವಧಿಯಲ್ಲಿ ದೆಹದಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ ಮತ್ತು ನರಮಂಡಲದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

ಇಂಟರ್ನ್ಯಾಷನಲ್ ಜರ್ನಲ್ ಆಫ್ ಮೆಡಿಕಲ್ ಸೈ ಅಂಡ್ ಇನ್ನೋವೇಟಿವ್ ರಿಸರ್ಚ್ (ಐಒIಖಐ) ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧವು ಈ ಮಾತನ್ನು ಪುಷ್ಟಿಕರಿಸುತ್ತದೆ. ಮಕ್ಕಳು ನಮ್ಮ ‘ದೇಶದ ಸಂಪತ್ತು’ ಎಂದು ೧೯೭೬ರ ಮಕ್ಕಳ ರಾಷ್ಟ್ರೀಯ ನೀತಿಯಲ್ಲಿ ಉಖಿಸಿದೆ. ೧೯೯೨ ರಲ್ಲಿ ಕೇಂದ್ರ ಸರಕಾರವು ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಹೊರೆಯನ್ನು ಕಡಿಮೆ ಮಾಡುವ ಮಾರ್ಗಗಳನ್ನು ಸೂಚಿಸಲು ಸಮಿತಿಯನ್ನು ಸ್ಥಾಪಿಸಿತು. ಅದರಂತೆ ೧೯೯೩ ರಲ್ಲಿ, ಯಶಪಾಲ್ ಸಮಿತಿಯ ವರದಿ ‘ಹೊರೆಯಿಲ್ಲದ ಕಲಿಕೆ’, ಭಾರವಾದ ಶಾಲಾ ಬ್ಯಾಗ್‌ಗಳ ಸಮಸ್ಯೆಯನ್ನು ಎತ್ತಿ ತೋರಿಸಿದೆ.

೨೦೦೫ ರಲ್ಲಿ, ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ಪಠ್ಯಕ್ರಮದ ವಹಿವಾಟು ಮತ್ತು ಮಾನಸಿಕ ಹೊರೆ ಕುರಿತು ಅಧ್ಯಯನ ಮಾಡಿ ಕೆಲವು ಶಿಫಾರಸ್ಸು ಗಳನ್ನು ವರದಿ ಮಾಡಿತ್ತು. ಭಾರತದಲ್ಲಿ ಮೊದಲ ಬಾರಿಗೆ ಚಿಕ್ಕ ವಯಸ್ಸಿನ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯದ ಹಿತದೃಷ್ಟಿಯನ್ನು ಪರಿಗಣಿಸಿ ೨೦೦೬ ರಲ್ಲಿ ಮಕ್ಕಳ ಶಾಲಾ ಚೀಲ (ತೂಕದ ಮೇಲಿನ ಮಿತಿ) ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಆದರೆ ಅದು ಅನುಷ್ಠಾನಕ್ಕೆ  ಬಾರದೆ ಕೇವಲ ಮಸೂದೆಯಾಗಿಯೇ ಉಳಿಯಿತು.

೨೦೧೬ ರ ಸೆಪ್ಟೆಂಬರ್ ೧೨ ರಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಇಆಖಉ) ತನ್ನ ಸಂಯೋಜಿತ ಶಾಲೆಗಳಿಗೆ, ಮಕ್ಕಳಿಗೆ ಹಾಗೂ ಪಾಲಕರಿಗೆ ಕೆಲವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತು. ೨೦೧೮ ರ ನವೆಂಬರ್‌ನಲ್ಲಿ ಮದ್ರಾಸ್ ಹೈ ಕೋರ್ಟ್ ಮಕ್ಕಳು ವೇಟ್ಲಿಫ್ಟರ್‌ಗಳಲ್ಲ ಅಥವಾ ಶಾಲಾ ಬ್ಯಾಗ್‌ಗಳು ತುಂಬಿದ ಕಂಟೈನರ್‌ಗಳಲ್ಲ. ಸಂತೋಷ, ಉತ್ಸಾಹದಿಂದ ಇತರ ಮಕ್ಕಳೊಂದಿಗೆ ಆಟವಾಡುವುದು, ಜಿಗಿಯುವುದು ಇತ್ಯಾದಿ ಮಕ್ಕಳ ಸಹಜ ಗುಣಗಳು ಅದಕ್ಕಾಗಿ ಕೇಂದ್ರ  ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Iಏಈ)ಕ್ಕೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ
ಪ್ರದೇಶಗಳಿಗೆ ಬೋಧನೆ ಮತ್ತು ಶಾಲಾ ಬ್ಯಾಗ್‌ಗಳ ತೂಕವನ್ನು ನಿಯಂತ್ರಿಸುವ ಮಾರ್ಗಸೂಚಿಗಳನ್ನು ರೂಪಿಸಲು ಸೂಚನೆ ನೀಡಿತು.

ಇದಕ್ಕೆ ಅನುಗುಣವಾಗಿ ೨೦ ನವೆಂಬರ್ ೨೦೧೮ರಂದು Iಏಈ ೧ ಮತ್ತು ೨ ತರಗತಿಗೆ ೧.೫ ಕೆಜಿ, ೩ ರಿಂದ ೫ ತರಗತಿಗಳಿಗೆ ೩ ಕೆಜಿ, ೬ಮತ್ತು ೭ ತರಗತಿಗಳಿಗೆ ೪ ಕೆಜಿ, ೮ ಮತ್ತು ೯ತರಗತಿಗಳಿಗೆ ೪.೫ ಕೆಜಿ, ಮತ್ತು ೧೦ ತರಗತಿಗೆ ಮಿತಿ ೫ ಕೆಜಿ ಮಿತಿಯೊಂದಿಗೆಘೆಇಉS ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಶಿಫಾರಸ್ಸು ಮಾಡಲು ಶಾಲೆಗಳಿಗೆ ಅನುಮತಿಸಬಾರದೆಂದು ಸುತ್ತೋಲೆ ಹೊರಡಿಸಿತು.

ಕರ್ನಾಟಕದಲ್ಲಿ ರಾಜ್ಯ ಸರಕಾರವು ೨೦೧೭ ರಲ್ಲಿ ಡಾ.ವಿ. ಪಿ.ನಿರಂಜನರಾಧ್ಯ ಸಮಿತಿಯನ್ನು ನೇಮಿಸಿತು. ೨೦೧೮-೧೯ ರಲ್ಲಿ ಸಲ್ಲಿಸಿದ ವರದಿ ಆಧರಿಸಿ ‘ಮಕ್ಕಳ ತೂಕದ ೧೦ ಪ್ರತಿಶತಕ್ಕಿಂತ ಹೆಚ್ಚಿರಬಾರದೆಂದು’ ಶಾಲೆಗಳಿಗೆ ನಿರ್ದೇಶಿಸಲು ಆದೇಶವನ್ನು ಹೊರಡಿಸಿತು. ೨೦೧೯ ರಲ್ಲಿ ಡಿಎಸ್‌ಇಆರ್‌ಟಿ ತಿಂಗಳ ಎರಡು ಶನಿವಾರ ನೋ ಬ್ಯಾಗ್ ಡೇ ಆಚರಿಸಲು ಸುತ್ತೋಲೆ ನೀಡಿತು. ಅದು ೨೦೨೩ ರಲ್ಲಿ ಕೇವಲ ಒಂದು ಶನಿವಾರಕ್ಕೆ ಮರು ಜಾರಿಗೊಳಿಸಲಾಯಿತು. ೨೦೨೦ ರ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಸ್ಕೂಲ್ ಬ್ಯಾಗ್ ನೀತಿಯನ್ನು ಜಾರಿಗೆ ತಂದು ಶಾಲಾ ಬ್ಯಾಗ್ ತೂಕವು ಮಗುವಿನ ವಯಸ್ಸಿನ ಶೇಕಡಾ ೧೦ರಷ್ಟು ಮಾತ್ರ ಇರಬೇಕು ಮತ್ತು ಬಾಲ ವಿಹಾರಕ್ಕೆ ಬ್ಯಾಗ್ ರಹಿತ ಶಿಕ್ಷಣ ನೀಡಬೇಕು ಹಾಗೂ ೧ ಮತ್ತು ೨ನೇ ತರಗತಿಗೆ ೧.೬ – ೨.೨ ಕೆಜಿ, ೩ ಮತ್ತು ೫ ನೇ ತರಗತಿಗೆ ೧.೭-೨.೫ ಕೆ.ಜಿ, ೬ಮತ್ತು ೭ನೇ ತರಗತಿಗೆ ೨-೩ಕೆಜಿ, ೮ ನೇ ತರಗತಿಗೆ ೨.೫-೪ಕೆಜಿ, ೯ಮತ್ತು ೧೦ನೇ ತರಗತಿಗೆ ೨.೫-೪.೫ ಕೆ.ಜಿ ತೂಕ ಇರಬೇಕೆಂದು ಕಟ್ಟು ನಿಟ್ಟಿನ ಆದೇಶ ನೀಡಿದೆ.

ಕಳೆದ ವರ್ಷ ಜೂನ್ ೨೦, ೨೦೨೩ ರಲ್ಲಿ ಅಂತಿಮವಾಗಿ ರಾಜ್ಯ ಶಿಕ್ಷಣ ಇಲಾಖೆ ೧ ಮತ್ತು ೨ನೇ ತರಗತಿಗೆ ೧.೫ – ೨ ಕೆಜಿ, ೩ ಮತ್ತು ೫ ನೇ ತರಗತಿಗೆ ೨-೩ ಕೆ.ಜಿ, ೬ಮತ್ತು ೮ ನೇ ತರಗತಿಗೆ ೩-೪ ಕೆಜಿ, ೯ಮತ್ತು ೧೦ನೇ ತರಗತಿಗೆ ೪-೫ ಕೆ.ಜಿ ತೂಕ ಇರಬೇಕೆಂದು ಸುತ್ತೋಲೆ ಹೊರಡಿಸಿದೆ. ಈ ಎ ಸಮಿತಿ ಪ್ರಮುಖ ಶಿಫಾರಸ್ಸುಗಳನ್ವಯ ಮಕ್ಕಳು ಹೊತ್ತು ತರುವ ಕುಡಿಯುವ ನೀರಿನ ಬಾಟಲ್ ತೂಕ ಇಳಿಸಲು, ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಪ್ರತಿನಿತ್ಯದ ವೇಳಾಪಟ್ಟಿ ಮಾಹಿತಿ ನೀಡಲಾಗುತ್ತಿದೆ, ತರಗತಿಯ ಲಾಕರ್ ವ್ಯವಸ್ಥೆ ಮಾಡಲಾಗಿದೆ. ಆದರೂ ಪ್ರಸ್ತುತ ೧ನೇ ತರಗತಿ ಮಗು ಸರಾಸರಿ ೩ ರಿಂದ ೪ ಕೆ.ಜಿ ತೂಕವನ್ನು ಪ್ರತಿನಿತ್ಯ ಹೊರುತ್ತಿದೆ. ಇದಕ್ಕೆ ಶಾಲೆ ಮಾತ್ರ ಹೊಣೆ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ. ಆದರೆ ಈ ಸಮಸ್ಯೆ ಮುನ್ನಲೆಯಿಂದ ಹಿನ್ನೆಲೆಗೆ ಸರಿಯಲು ಸಾಕಷ್ಟು ಇತರ ಕಾರಣಗಳು ಇವೆ.

ಮೊದಲನೆಯದಾಗಿ ೧ ರಿಂದ ೪ ನೇ ತರಗತಿಗೆ ಸರಕಾರದ ಎನ್‌ಸಿಇಆರ್‌ಟಿ ಪಠ್ಯಪುಸ್ತಕವನ್ನೇ ಕಡ್ಡಾಯವಾಗಿ ಪಾಲಿಸಬೇಕೆಂಬ ನಿಯವಿಲ್ಲದ ಕಾರಣ, ಬಹುತೇಕ ಖಾಸಗಿ ಶಾಲೆಯವರು ಇದನ್ನೇ ಅಸವನ್ನಾಗಿಸಿ ಖಾಸಗಿ ಪ್ರಕಾಶನದ ಪುಸ್ತಕ ಅಳವಡಿಸಿಕೊಂಡಿದ್ದಾರೆ. ಖಾಸಗಿ ಪ್ರಕಾಶನದವರು ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ನಿಗದಿತ ತೂಕಕ್ಕಿಂತ ಹೆಚ್ಚಿನ ತೂಕದ ಪುಸ್ತಕ ಮುದ್ರಿಸುತ್ತಿದ್ದರೂ ಸಹ ಅದರ ಬಗ್ಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ
ವಿಫಲವಾಗಿದೆ.

ಇನ್ನೂ ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ಮೇ ೩ , ೨೦೧೭ ರಲ್ಲಿ ಹೊರಡಿಸಿರುವ ಸುತ್ತೋಲೆಯಂತೆ, ರಾಜ್ಯದ ಖಾಸಗಿ ಶಾಲೆಗಳು ಪಠ್ಯ ಪುಸ್ತಕಗಳು, ನೋಟ್ ಪುಸ್ತಕಗಳು, ಸಮವಸಗಳು ಅಥವಾ ಇತರ ಲೇಖನ ಸಾಮಗ್ರಿಗಳನ್ನು ಶಾಲೆಯಲ್ಲಿ ಮಾರಾಟ ಮಾಡದಂತೆ ನಿರ್ಬಂಧಿಸಲಾಗಿದ್ದರೂ ಸಹ ಖಾಸಗಿ ಶಾಲೆಗಳು ಖಾಸಗಿ ಪ್ರಕಾಶನದ ಪುಸ್ತಕವನ್ನು ದುಪ್ಪಟ್ಟು ಹಣಕ್ಕೆ ರಾಜಾರೋಷವಾಗಿ ಮಾರಾಟ ಮಾಡುತ್ತಿವೆ. ಇದರ ಬಗ್ಗೆಯೂ ಸಹ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ.

ಅಭಿವೃದ್ಧಿ ಹೊಂದಿದ ದೇಶಗಳ ಶಿಕ್ಷಣ ವ್ಯವಸ್ಥೆಯ ಬಗ್ಗೆ ಗಂಟೆಗಟ್ಟಲೇ ಮಾತನಾಡುವ ನಾವು ಅಲ್ಲಿಯ ಶಿಕ್ಷಣ ಪದ್ಧತಿಯನ್ನು ನಾವು ಅಳವಡಿಸಿ ಕೊಳ್ಳಲು ಏಕೆ ಸಿದ್ಧವಿಲ್ಲ. ಜಪಾನ್‌ನಂತಹ ದೇಶದಲ್ಲಿ ಮಕ್ಕಳಿಗೆ ೩ ನೇ ತರಗತಿಯ ವರೆಗೂ ಕೇವಲ ಮೌಲ್ಯಗಳನ್ನು ಬೆಳೆಸುವುದು ಹಾಗೂ ಕಲಿಕೆಯಲ್ಲಿ ಪ್ರಾಯೋಗಿಕ ಚಟುವಟಿಕೆ ಅಳವಡಿಸಿ ಬೋಽಸಲಾಗುತ್ತದೆ. ಅದಕ್ಕೆ ಅಲ್ಲಿನ ಪಾಲಕರ ಸಮ್ಮತಿಯೂ ಇದೆ. ಆದರೆ ನಮ್ಮ ಶಿಕ್ಷಣ ತಜ್ಞರು, ಆರೋಗ್ಯ ತಜ್ಞರು
ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ವಿಕಾಸದ ಬಗ್ಗೆ ನೀಡಿದ ಸಲಹೆ ಪಾಲಿಸುವ ಮನಸ್ಥಿತಿ ನಮ್ಮಲಿಲ್ಲ.

ಕೊನೆಯದಾಗಿ ದುಬಾರಿ ಶಿಕ್ಷಣ ನೀಡಿದರೆ ಮಾತ್ರ ನಮ್ಮ ಮಕ್ಕಳು ಹೆಚ್ಚು ಕಲಿಯುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ಪಾಲಕರು ಬಿಡಬೇಕು. ಕಲಿಕೆ ಮಗುವಿನ ವೈಯಕ್ತಿಕ ಭಿನ್ನತೆ ಮೇಲೆ ಅವಲಂಬಿಸಿದೆ ಹೊರತು ಲಕ್ಷ-ಲಕ್ಷ ಕೊಟ್ಟು ಶಿಕ್ಷಣ ನೀಡಿದರೆ ಎಲ್ಲವನ್ನು ಮಗು ಮಸ್ತಕದಲ್ಲಿ ತುಂಬಿಸಿಕೊಳ್ಳಲು
ಸಾಧ್ಯವಿಲ್ಲ ಎಂಬ ಸತ್ಯವನ್ನು ಅರಿಯಬೇಕು. ಶಿಕ್ಷಣವನ್ನು ಖಾಸಗೀಕರಣ ಮಾಡುವ ಬದಲಾಗಿ ಸರಕಾರಿ ಶಾಲೆಗಳಲ್ಲಿ ಸ್ಪರ್ಧಾತ್ಮಕ, ಗುಣಮಟ್ಟದ ಶಿಕ್ಷಣ ದೊರಕುವಂತಾಗಬೇಕು. ಇಲಾಖೆ ಆದೇಶ ಪಾಲಿಸದ ಶಾಲೆಗಳ ಮಾನ್ಯತೆ ರದ್ದುಗೊಳಿಸಬೇಕು. ಇದನ್ನೇ ೨೦೦೬ ರ ಮಸೂದೆ ಹೇಳಿರುವುದು. ಬ್ಯಾಗ್ ಹೊರೆ ಇಳಿಸಲು ಈ ಬಾರಿ ರಾಜ್ಯ ಸರಕಾರ ಹಾಗೂ ಕೆಲವು ಖಾಸಗಿ ಪ್ರಕಾಶನದವರು ಪುಸ್ತಕಗಳನ್ನು ಭಾಗ-೧ ಮತ್ತು ಭಾಗ-೨ ಎಂದು ವಿಂಗಡಿಸಿದ್ದಾರೆ. ಇನ್ನಾದರೂ ಸಹ ಶಾಲಾ ಬ್ಯಾಗ್ ತೂಕದ ಸಮಸ್ಯೆ ಕೊನೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

(ಲೇಖಕರು: ಹವ್ಯಾಸಿ ಬರಹಗಾರರು)