ಹಿಂದಿರುಗಿ ನೋಡಿದಾಗ,
ಡಾ.ನಾ.ಸೋಮೇಶ್ವರ
ಅಮೆರಿಕನ್ ಮೂಲದ ಈಜಿಪ್ಷಿಯನ್ ಸಂಸ್ಕೃತಿತಜ್ಞರು ಸಂಗ್ರಹಿಸಿದ ಅಪರೂಪದ ವೈದ್ಯ ವಿಜ್ಞಾನ ದಾಖಲೆಗಳು ಇಂದಿಗೂ ರಕ್ಷಿತವಾಗಿದೆ. ಇಂದಿನ ಆಧುನಿಕ ವೈದ್ಯಕೀಯ ವಿಧಾನಗಳನ್ನು ಹೋಲುವ ಕ್ರಮಬದ್ಧ ವಿವರಣೆಯು ಅಂದಿನ ಈಜಿಪ್ಷಿಯನ್ ವೈದ್ಯಕೀಯವು ತಲುಪಿದ್ದ ಉತ್ತುಂಗಕ್ಕೆ ಪ್ರತೀಕ.
ಒಬ್ಬ ಮನುಷ್ಯ ತನ್ನ ಜೀವಮಾನದಲ್ಲಿ ಕಲಿತ ವಿಚಾರಗಳನ್ನು ಮುಂದಿನ ತಲೆಮಾರು ಗಳಿಗೆ ವರ್ಗಾಯಿಸುವುದು ಅವನ ಹುಟ್ಟು ಗುಣ. ಆರಂಭದಲ್ಲಿ ಈ ವರ್ಗಾವಣೆ ಮೌಖಿಕ ವಾಗಿತ್ತು. ಉದಾ: ವೇದಗಳು. ಮನುಷ್ಯ ಬರಹವನ್ನು ಕಂಡುಹಿಡಿದ ಮೇಲೆ,
ತನ್ನ ತಿಳಿವನ್ನು ಬರಹಗಳಲ್ಲಿ ದಾಖಲಿಸಿದ.
ಜಗತ್ತಿನ ನಾಲ್ಕು ಕಾಲಮಾನಗಳ ನಾಲ್ಕು ಭಿನ್ನ ಸ್ಥಳಗಳಲ್ಲಿ ಬರಹವು ಸ್ವತಂತ್ರವಾಗಿ ಹುಟ್ಟಿಕೊಂಡಿತು ಎನ್ನಬಹುದು. ಕ್ರಿ.ಪೂ. 3400ರ ಹೊತ್ತಿಗೆ ಮೆಸಪೊಟೋಮಿಯ ಸಂಸ್ಕೃತಿಯಲ್ಲಿ, ಕ್ರಿ.ಪೂ.3200ರ ಹೊತ್ತಿಗೆ ಈಜಿಪ್ಷಿಯನ್ ಸಂಸ್ಕೃತಿಯಲ್ಲಿ, ಕ್ರಿ.ಪೂ. 1300ರ ಚೀನೀ ಸಂಸ್ಕೃತಿಯಲ್ಲಿ ಹಾಗೂ ಕ್ರಿ.ಪೂ.900ರ ಹೊತ್ತಿಗೆ ಮಧ್ಯ ಅಮೆರಿಕದಲ್ಲಿ ಬರಹವು ಜನ್ಮತಳೆದವು. ಅತ್ತಿಮಬ್ಬೆಯು ಶಾಂತಿನಾಥ ಪುರಾಣದ ಸಾವಿರ ಪ್ರತಿಗಳನ್ನು ಮಾಡಿಸಿ ಹಂಚಿದಳಂತೆ.
ರನ್ನನು ಬರೆದ ಮೂಲಪ್ರತಿ ನಮಗೆ ದೊರೆತಿಲ್ಲ. ಆದರೆ ಅದರ ನಕಲುಗಳು ಮಾತ್ರ ದೊರೆತಿವೆ. ಈ ನಾಲ್ಕೂ ಸಂಸ್ಕೃತಿಯಲ್ಲಿ ರೂಪುಗೊಂಡ ಅಮೂಲ್ಯ ಬರಹಗಳ ಮೂಲ ಪ್ರತಿಗಳು ನಮಗೆ ದೊರಕಿರುವುದು ಕಡಿಮೆ. ಆದರೆ ಮೂಲಪ್ರತಿಗಳು ನಕಲುಗಳು ನಮಗೆ ದೊರೆತಿವೆ. ಅಂತಹ ನಕಲುಪ್ರತಿಗಳಲ್ಲಿ ಈಜಿಪ್ಷಿಯನ್ ಸಂಸ್ಕೃತಿಗೆ ಸೇರಿದ ಕಹೂನ್ ಸ್ತ್ರೀರೋಗಗಳ ಪ್ಯಾಪಿರಸ್ (ಕ್ರಿ.ಪೂ.1800), ಎಡ್ವಿನ್ ಸ್ಮಿತ್ ಪ್ಯಾಪಿರಸ್ (ಕ್ರಿ.ಪೂ. 1600), ಹೆರ್ಸ್ಟ್ ಪ್ಯಾಪಿರಸ್ (ಕ್ರಿ.ಪೂ.1600) ಈಬರ್ಸ್ ಪ್ಯಾಪಿರಸ್ (ಕ್ರಿ.ಪೂ. 1500), ಬ್ರೂಗ್ಷ್ ಪ್ಯಾಪಿರಸ್ (ಕ್ರಿ.ಪೂ.1300) ಮತ್ತು ಲಂಡನ್ ಮೆಡಿಕಲ್ ಪ್ಯಾಪಿರಸ್ (ಕ್ರಿ.ಪೂ.1300) ಮುಖ್ಯವಾದವು.
ಇವುಗಳಲ್ಲಿ ಎಡ್ವಿನ್ ಸ್ಮಿತ್ ಹಾಗೂ ಈಬರ್ಸ್ ಪ್ಯಾಪಿರಸ್ ಅಮೂಲ್ಯ ವೈದ್ಯ ಮಾಹಿತಿಯನ್ನು ಒಳಗೊಂಡಿವೆ. ಎಡ್ವಿನ್ ಸ್ಮಿತ್ (1822-1906) ಅಮೆರಿಕನ್ ಮೂಲದ ಈಜಿಪ್ಷಿಯನ್ ಸಂಸ್ಕೃತಿಯ ತಜ್ಞ. 1862ರಲ್ಲಿ ಈಜಿಪ್ಟಿನ ಲುಕ್ಸೋರ್ ಪ್ರದೇಶದಲ್ಲಿ ಮುಸ್ತ- ಆಘ ಎನ್ನುವ ವ್ಯಕ್ತಿಯಿಂದ ಪ್ಯಾಪಿರಸ್ ಸುರುಳಿಯನ್ನು ಕೊಂಡುಕೊಂಡ. ಜೇಮ್ಸ್ ಹೆನ್ರಿ ಬ್ರೆಸ್ಟೆಡ್ ಈ ದಾಖಲೆಯನ್ನು1920 ರಲ್ಲಿ ಇಂಗ್ಲಿಷಿಗೆ ಅನುವಾದಿಸಿದ. ಈಗ ಈ ಸುರುಳಿಯು ನ್ಯೂಯಾರ್ಕ್ ಅಕಾಡೆಮಿ ಆ- ಮೆಡಿಸಿನ್ ಸಂಸ್ಥೆಯಲ್ಲಿ ರಕ್ಷಿತವಾಗಿದೆ.
ಎಡ್ವಿನ್ ಸ್ಮಿತ್ ಪ್ಯಾಪಿರಸ್ ಸುರುಳಿಯು 4.68 ಮೀಟರ್ (15.3) ಉದ್ದವಿತ್ತು. ಪ್ರತಿಯ ಮುಂಭಾಗದಲ್ಲಿ 17 ಕಾಲಂಗಳಲ್ಲಿ 377 ಸಾಲುಗಳು ಹಾಗೂ ಹಿಂಭಾಗದಲ್ಲಿ 5 ಕಾಲಂಗಳಲ್ಲಿ 97 ಸಾಲುಗಳಿದ್ದವು. ಈ ಪ್ರತಿಯಲ್ಲಿರುವ ಮೂಲ ಬರಹವು ಕ್ರಿ.ಪೂ.3000-ಕ್ರಿ.ಪೂ.2500ಕಾಲಕ್ಕೆ ಸೇರಿತ್ತು. ಬಹುಶಃ ಮೂಲಪ್ರತಿಯನ್ನು ಈಜಿಪ್ಷಿಯನ್ ಸಂಸ್ಕೃತಿಯ ಪ್ರಖ್ಯಾತ ವೈದ್ಯ ಇಮ್‌ಹೋಟೆಪ್ ಬರೆದಿರಬೇಕು. ಈ ಪ್ರತಿಯ ಕಾಲಮಾನ ಕ್ರಿ.ಪೂ.1600. ಇದರಲ್ಲಿ ಹೈರಾಟಿಕ್ ಎನ್ನುವ ಈಜಿಪ್ಷಿಯನ್ ಚಿತ್ರಲಿಪಿಯ ಭಾಷೆಯಿದೆ. ಬಲದಿಂದ ಎಡಕ್ಕೆ ಬರೆದಿದ್ದಾರೆ.
ಬರೆಯಲು ಕಪ್ಪು ಮತ್ತು ಕೆಂಪು ಶಾಯಿಯನ್ನು ಬಳಸಿರುವರು. ನಕಲುಪ್ರತಿಯ ಮುಂಭಾಗದಲ್ಲಿ ಮನುಷ್ಯರಿಗೆ ಸಂಭವಿಸುವ 48 ಶಸ್ತ್ರವೈದ್ಯಕೀಯ ಪ್ರಕರಣಗಳ ವಿವರಣೆಯಿದೆ. ಹಿಂಭಾಗದಲ್ಲಿ ಎಂಟು ಮಂತ್ರಗಳು ಹಾಗೂ ಐದು ಔಷಧಗಳ ವಿವರಣೆಯಿದೆ. ಇದು ಬಹುಶಃ ಸೈನ್ಯದಲ್ಲಿ ಕೆಲಸ ಮಾಡುವ ವೈದ್ಯರ ಕೈಪಿಡಿಯ ಹಾಗೆ ಕಾಣುತ್ತದೆ. ತಲೆಯಿಂದ ಕಾಲಿನವರೆಗೆ, ಮನುಷ್ಯನ ವಿವಿಧ ಭಾಗಗಳಿಗೆ ಸಂಭವಿಸಬಹುದಾದ ಗಾಯಗಳ ವಿವರಣೆಯು ಕ್ರಮಬದ್ಧವಾಗಿದೆ.
ಪ್ರತಿ ಯೊಂದು ಗಾಯಕ್ಕೆ ಒಂದು ಶೀರ್ಷಿಕೆಯಿದೆ. ಉದಾ: ತಲೆಯಲ್ಲಿ ಬಾಯಿಬಿಟ್ಟುಕೊಂಡಿರುವ ಗಾಯವು, ಮೂಳೆಯವರೆಗೆ ವ್ಯಾಪಿಸಿ, ಕಪಾಲವನ್ನು ಸೀಳಿರುವಾಗ, ನೀಡಬೇಕಾದ ಚಿಕಿತ್ಸಾ ವಿವರ. ಇಂತಹ ಗಾಯಗಳ ನಿಗದಿತ ಅಧ್ಯಯನ ಕ್ರಮದ ವಿವರ ವಿದೆ. ಮೊದಲು ಗಾಯದ ವೀಕ್ಷಣೆ, ವಾಸನೆಯ ಆಘ್ರಾಣ, ಸ್ಪರ್ಶಸಂವೇದನಾ ಪರೀಕ್ಷೆ, ನಾಡಿಯ ಪರೀಕ್ಷೆ, ರೋಗನಿದಾನ ಮತ್ತು ರೋಗ ಮುನ್ನರಿವು. ರೋಗ ಮುನ್ನರಿವು ಎಂದರೆ, ರೋಗಿಯು ಬದುಕುತ್ತಾನೆಯೋ ಇಲ್ಲವೋ ಎನ್ನುವುದನ್ನು ಮೊದಲೇ ಹೇಳುವಿಕೆ. ವೈದ್ಯರು ಮೂರು ರೀತಿಯ ಮುನ್ನರಿವನ್ನು ನೀಡುತ್ತಿದ್ದರು.
ಮೊದಲನೆಯದು ನಾನು ಚಿಕಿತ್ಸೆಯನ್ನು ನೀಡಿ ಗುಣಪಡಿಸಬಲ್ಲ ಗಾಯಗಳು. ಎರಡನೆಯದು ನಾನು ಚಿಕಿತ್ಸೆಯನ್ನು ನೀಡಲು ಪ್ರಯತ್ನಿಸಿ ಗುಣಪಡಿಸಬಹುದಾದ ಗಾಯಗಳು ಹಾಗೂ ಚಿಕಿತ್ಸೆಯನ್ನು ನೀಡುವ ಪ್ರಯತ್ನವನ್ನು ಮಾಡಬಾರದ ಗಾಯಗಳು. ಕೊನೆಯಲ್ಲಿ ನಿಗದಿತ ಗಾಯಕ್ಕೆ ಚಿಕಿತ್ಸೆ ನೀಡಲು ಲಭ್ಯ ವಿವಿಧ ಆಯ್ಕೆಗಳ ಮಾಹಿತಿ. ಮುನ್ನರಿವಿಗೆ ಅಗತ್ಯ ವಿಶ್ಲೇಷಣೆಯ ಮಾಹಿತಿ. ಹೀಗೆ, ಇಂದಿನ ಆಧುನಿಕ ವೈದ್ಯಕೀಯ ವಿಧಾನಗಳನ್ನು ಹೋಲುವ ಕ್ರಮಬದ್ಧ ವಿವರಣೆಯು ಅಂದಿನ ಈಜಿಪ್ಷಿಯನ್ ವೈದ್ಯಕೀಯವು ತಲುಪಿದ್ದ ಉತ್ತುಂಗಕ್ಕೆ ಪ್ರತೀಕವಾಗಿದೆ.
ಗಾಯಗಳಿಗೆ ಸೂಕ್ತ ಚಿಕಿತ್ಸಾ ವಿವರಣೆಯಿದೆ. ತುಟಿ, ಗಂಟಲು ಮತ್ತು ಭುಜದ ಗಾಯಗಳಿಗೆ ಹೊಲಿಗೆಯನ್ನು ಹಾಕುವುದು, ಪಟ್ಟಿಕಟ್ಟುವುದು, ದಬ್ಬೆ ಕಟ್ಟುವುದು, ಪೌಲ್ಟೀಸ್ ಹಾಕುವುದು, ಹಸಿ ಮಾಂಸವನ್ನು ಕಟ್ಟಿ ರಕ್ತಸ್ರಾವವನ್ನು ನಿಯಂತ್ರಿಸುವುದು, ಜೇನುತುಪ್ಪವನ್ನು ಲೇಪಿಸಿ ಸೋಂಕನ್ನು ತಡೆಗಟ್ಟುವುದು, ತಲೆಗೆ, ಕುತ್ತಿಗೆಗೆ ಮತ್ತು ಕಾಲುಗಳಿಗೆ ಪೆಟ್ಟಾಗಿದ್ದಾಗ, ಆಯಾ ಅಂಗವು ಅಲುಗದಂತೆ ಚಲನೆಯನ್ನು ನಿರ್ಬಂಧಿಸುವುದು ಇತ್ಯಾದಿ. ಇದರಲ್ಲಿ ಅಂಗರಚನೆ, ಅಂಗಕ್ರಿಯೆ ಮತ್ತು ರೋಗಸ್ಥಿತಿಯ ಬಗ್ಗೆ ಅತ್ಯಂತ ಸಹಜ ವಿವರಗಳಿವೆ.
ಮಿದುಳನ್ನು ಆವರಿಸಿರುವ ಮಿದುಳುಪೊರೆಗಳ (ಮೆನಿಂಜೆಸ್)ವಿವರ, ಮಿದುಳಿನ ಮೇಲ್ಮೈ ರಚನೆಯ ವಿವರ, ಮಿದುಳುಮೇರು ದ್ರವ (ಸೆರೆಬ್ರೋಸ್ಪೈನ್ಲ್ ಫ್ಲೂಯಿಡ್) ಕಪಾಲಾಂತರ್ಗತ ರಕ್ತನಾಳಗಳ ಮಿಡಿತ-ಇತ್ಯಾದಿಗಳ ವಿವರಣೆಯಿದೆ. ಮಿದುಳಿಗೆ ಪೆಟ್ಟು ಬಿದ್ದರೆ, ಪೆಟ್ಟು ಬಿದ್ದ ಸ್ಥಳವನ್ನು ಆಧರಿಸಿ, ದುಷ್ಪರಿಣಾಮವು ಶರೀರದ ನಿಗದಿತ ಅಂಗಗಳ ಮೇಲಾಗುತ್ತದೆ (ಪಾರ್ಶ್ವವಾಯು) ಎನ್ನುವುದರ ವಿವರಣೆಯಿದೆ. ಒಟ್ಟಿನಲ್ಲಿ ಈ ವಿವರಣೆಯು ಆಧುನಿಕ ವೈದ್ಯಕೀಯ ಪಠ್ಯಪುಸ್ತಕವನ್ನು ಹೋಲುತ್ತದೆ ಎಂದರೆ, ಅದು ಅತಿಶಯೋಕ್ತಿಯಾಗಲಾರದು.
ಇಂದು ಈ ವಿವರಣೆಯ ಮಹತ್ವವನ್ನು ನಾವು ತಿಳಿಯುವುದು ಕಷ್ಟ. ಏಕೆಂದರೆ ಇಂದಿಗೆ ಸುಮಾರು 5 ಸಾವಿರ ವರ್ಷಗಳ ಹಿಂದೆ ಮನುಷ್ಯನ ಶರೀರ ಮತ್ತು ಗಾಯಗಳ ಬಗ್ಗೆ ಇಷ್ಟು ತಿಳಿದಿದ್ದರು ಎಂದರೆ, ಅವರು ಬುದ್ಧಿವಂತಿಕೆಯಲ್ಲಿ ನಮಗಿಂತ ಏನೂ ಕಡಿಮೆಯಿರಲಿಲ್ಲ ಎನ್ನುವುದು ಋಜುವಾತಾಗುತ್ತದೆ. ಈ ಬರ್ಸ್ ಪ್ಯಾಪಿರಸ್ ಎಂದು ಹೆಸರಾದ ಸುರುಳಿಯ ಮೂಲ ತಿಳಿಯದು. ಇದು ಮಮ್ಮಿಯೊಂದರ ಎರಡು ಕಾಲುಗಳ ನಡುವೆ ಇತ್ತು ಎನ್ನುವ ಹೇಳಿಕೆಯಿದೆ.
ಇದನ್ನು ಮೊದಲು ಕೊಂಡುಕೊಂಡವನು ಎಡ್ವಿನ್ ಸ್ಮಿತ್. ನಂತರ ಇದನ್ನು ಜಾರ್ಜ್ ಮಾರಿಸ್ ಈಬರ್ಸ್ (1837-1898) ಎಂಬ ಈಜಿಪ್ಟ್ ಸಂಸ್ಕೃತಿ ತಜ್ಞನು 1872ರಲ್ಲಿ ಕೊಂಡುಕೊಂಡ. ಅಂದಿನಿಂದ ಇದು ಈಬರ್ಸ್ ಪ್ಯಾಪಿರಸ್ ಎಂದು ಹೆಸರಾಗಿದೆ. ಇದನ್ನು ಪಾಲ್ ಗಲಿಯೋಂಗಿ ಎನ್ನುವವನು ಮೊದಲು ಇಂಗ್ಲಿಷಿಗೆ ಅನುವಾದಿಸಿದ. ಈಗ ಈ ಪ್ಯಾಪಿರಸ್ ಪ್ರತಿಯು ಈಜಿಪ್ಟಿನ ಲೀಪ್ಜಿಗ್ ವಿಶ್ವವಿದ್ಯಾಲಯದಲ್ಲಿದೆ.
ಇದು 110 ಪುಟಗಳ ಸುದೀರ್ಘ ಪ್ಯಾಪಿರಸ್ ಸುರುಳಿ. 20 ಮೀಟರ್ ಉದ್ದವಿದೆ. ಒಟ್ಟು 877 ಅಧ್ಯಾಯಗಳಿವೆ. ಕಪ್ಪು ಮತ್ತು ಕೆಂಪು ಶಾಯಿಯಲ್ಲಿ ಬರೆದಿರುವರು. ಇದರ ಕಾಲ ಕ್ರಿ.ಪೂ.1550. ಇದನ್ನೂ ಹೈರಾಟಿಕ್ ಚಿತ್ರಲಿಪಿಯಲ್ಲಿ ಬರೆದಿದ್ದಾರೆ. ಈಜಿಪ್ಷಿಯನ್ ವೈದ್ಯಕೀಯ ಪ್ಯಾಪಿರಸ್ಸುಗಳಲ್ಲಿ ಅತ್ಯಂತ ಸುಸ್ಥಿಯಲ್ಲಿರುವ ಹಾಗೂ ಪೂರ್ಣವಾಗಿರುವ ದಾಖಲೆಯಿದು. ಇದರಲ್ಲಿ 700 ಮಂತ್ರ-ತಂತ್ರಗಳ ವಿವರಗಳು ಹಾಗೂ ಜಾನಪದ ಚಿಕಿತ್ಸೆಗಳ ವಿವರಗಳಿವೆ.
ರೋಗಗಳನ್ನು ಉಂಟು ಮಾಡುವ ಭೂತ ಪ್ರೇತಾದಿಗಳನ್ನು ದೂರ ಓಡಿಸಬಲ್ಲ ಮಂತ್ರಗಳಿವೆ. ಹೃದಯ ಸಂದಿಯಲ್ಲಿ ಹೃದಯವು ರಕ್ತಪರಿಚಲನೆಯ ಪ್ರಮುಖ ಕೇಂದ್ರ. ಹೃದಯದಿಂದ ಹೊರಡುವ ರಕ್ತನಾಳಗಳು ಎಲ್ಲ ಅಂಗಗಳನ್ನು ತಲುಪುತ್ತವೆ ಎನ್ನುತ್ತದೆ. ಈಜಿಪ್ಷಿಯನ್ ವೈದ್ಯರಿಗೆ ಮೂತ್ರಪಿಂಡಗಳ ಕೆಲಸ ಕಾರ್ಯದ ಬಗ್ಗೆ ಯಾವುದೇ ಪರಿಕಲ್ಪನೆಯು ಇರಲಿಲ್ಲ. ಹಾಗಾಗಿ ರಕ್ತನಾಳಗಳು ರಕ್ತ, ಜೊಲ್ಲು, ಮೂತ್ರ, ವೀರ್ಯ ಮುಂತಾದ ಎಲ್ಲ ದ್ರವಗಳನ್ನು ಸಾಗಿಸುತ್ತವೆ ಎಂದು ನಂಬಿದ್ದರು. ಖಿನ್ನತೆ (ಡಿಪ್ರೆಶನ್) ಮತ್ತು ಬುದ್ಧಿಮಾಂದ್ಯತೆಯ (ಡಿಮೆನ್ಷಿಯ) ಬಗ್ಗೆ ಅವರಿಗೆ ತಿಳಿದಿತ್ತು. ಆದರೆ ಇವು ಮಾನಸಿಕ ಕಾಯಿಲೆಗಳು ಎನ್ನುವುದು ತಿಳಿದಿರಲಿಲ್ಲ. ಇವೂ ಸಹ ದೇಹಕ್ಕೆ ಬರುವ ಕಾಯಿಲೆಗಳೇ ಎಂದು ತಿಳಿದಿದ್ದರು.
ಸ್ತ್ರೀವೈದ್ಯಕೀಯದ ಮಾಹಿತಿಯು ಸಾಕಷ್ಟಿದೆ. ಸಂತಾನ ನಿಯಂತ್ರಣದ ಬಗ್ಗೆ, ಗರ್ಭಧಾರಣೆಯನ್ನು ಪತ್ತೆ ಹಚ್ಚುವುದರ ಬಗ್ಗೆ ವಿವರಣೆಯಿದೆ. ಕರುಳಿನ ರೋಗಗಳು, ಪರಾವಲಂಬಿ ಹುಳುಗಳು, ಕಣ್ಣು, ಚರ್ಮ ಮತ್ತು ದಂತ ಕಾಯಿಲೆಗಳ ಬಗ್ಗೆ ಮಾಹಿತಿ ಯಿದೆ. ಕೀವುಬಾವನ್ನು ಛೇದಿಸಿ ಕೀವನ್ನು ಹೊರಹರಿಸುವುದು, ಗಂತಿಯನ್ನು ಛೇದಿಸುವುದು, ಮುರಿದ ಮೂಳೆಗಳನ್ನು ಜೋಡಿಸು ವುದು, ಸುಟ್ಟಗಾಯಗಳಿಗೆ ಚಿಕಿತ್ಸೆಯನ್ನು ನೀಡುವುದು ಇತ್ಯಾದಿ ವಿವರಗಳೂ ಇವೆ. ಅಂದು ಒಬ್ಬ ವ್ಯಕ್ತಿಯು ಆರೋಗ್ಯವಾಗಿರ ಬೇಕಾದರೆ, ಅವನ ಜೈವಿಕ ದ್ರವಗಳು ತಡೆಯಿಲ್ಲದೆ ಶರೀರದಲ್ಲಿ ಪ್ರವಹಿಸಬೇಕು ಎನ್ನುವ ನಂಬಿಕೆಯಿತ್ತು. ಇದೇ ನಂಬಿಕೆಯೇ ಗ್ರೀಕರ ಕಾಲದಲ್ಲಿ ನಾಲ್ಕು ರಸಗಳು ಸಿದ್ಧಾಂತದ ರೂಪವನ್ನು ತಳೆಯಿತು ಎನ್ನಬಹುದು.
ಈಬರ್ಸ್ ಪ್ಯಾಪಿರಸ್ಸಿನಲ್ಲಿರುವ ಕೆಲವು ಚಿಕಿತ್ಸಾ ಕ್ರಮಗಳನ್ನು ಗಮನಿಸಬಹುದು. ಗರ್ಭಧಾರಣೆಯನ್ನು ತಡೆಗಟ್ಟಲು ಖರ್ಜೂರ,
ಅಕೇಶಿಯ ಮತ್ತು ಜೇನಿನ ಮಿಶ್ರಣವನ್ನು ತಯಾರಿಸಿ, ಹತ್ತಿಯನ್ನು ಈ ಮಿಶ್ರಣದಲ್ಲಿ ಅದ್ದಿ, ಯೋನಿಯೊಳಗೆ ಇಡುತ್ತಿದ್ದರು.
ಮಧುಮೇಹವನ್ನು ನಿಯಂತ್ರಿಸಲು ಎಲ್ಡೆರ್ಬೆರ್ರಿ ಹಣ್ಣು, ಅಸಿತ್ ಸಸ್ಯದ ನಾರು (?), ಹಾಲು, ಸೌತೆಹೂವುಗಳು, ಬಿಯರ್ ಮತ್ತು ಹಸಿರು ಖರ್ಜೂರವನ್ನು ಸೇವಿಸುತ್ತಿದ್ದರು.
ನಾರುಹುಳವನ್ನು (ಡ್ರಕಂಕ್ಯುಲೋಸಿಸ್) ಒಂದು ಕಡ್ಡಿಗೆ ಸುತ್ತಿ, ನಿಧಾನವಾಗಿ ಸುರುಳಿ ಸುತ್ತುತ್ತಾ, ಇಡೀ ಹುಳುವನ್ನು ಹೊರ ತೆಗೆಯುತ್ತಿದ್ದರು. ಈ ವಿಧಾನವು 3500 ವರ್ಷಗಳವರೆಗೆ ಉಳಿದು ಬಂದಿತು. (ನಮ್ಮ ದೇಶದಲ್ಲೂ ಮೊನ್ನೆಯವರೆಗೆ ನಾರುಹುಳು ವನ್ನು ಹೀಗೆ ತೆಗೆಯುತ್ತಿದ್ದೆವು. ಈಗ ನಮ್ಮ ದೇಶವು ನಾರುಹುಳ ಮುಕ್ತವಾಗಿದೆ) ಕಾವಿಮಣ್ಣನ್ನು (ಓಚರ್) ಕರುಳು ಮತ್ತು ಕಣ್ಣಿನ ಸಮಸ್ಯೆಗಳಿಗೆ ಉಪಯೋಗಿಸುತ್ತಿದ್ದರು (ನಮ್ಮ ಭಾರತದಲ್ಲೂ ಕಣ್ಣುಕುಟಿಕೆಯನ್ನು ನಿವಾರಿಸಲು ಕೆಮ್ಮಣ್ಣಿನ ಲೇಪವನ್ನು ಹಾಕು ತ್ತಿದ್ದರು) ಇರುವೆ, ನೊಣ, ಚೇಳು, ಇಲಿ ಮುಂತಾದ ಕೀಟ ನಿವಾರಕಗಳನ್ನು (ಇನ್ಸೆಕ್ಟ್ ರೆಪೆಲೆಂಟ್) ತಯಾರಿಸಲು ಹಲವು ಗಿಡ ಮೂಲಿಕೆಗಳನ್ನು ಬಳಸುತ್ತಿದ್ದರು.
ಅಸ್ತಮವನ್ನು ನಿಯಂತ್ರಿಸಲು ಕಾದ ಇಟ್ಟಿಗೆಯ ಮೇಲೆ ಹಲವು ಮೂಲಿಕೆಗಳನ್ನು ಸುಟ್ಟು ಹೊಗೆಯನ್ನು ಒಳಗೆಳೆದುಕೊಳ್ಳಲು ಸೂಚಿಸುತ್ತಿದ್ದರು. ಈಜಿಪ್ಟ್ ಸಂಸ್ಕೃತಿಯ ಬಗ್ಗೆ ನಾವು ತಿಳಿದಿರುವುದಕ್ಕಿಂತ ತಿಳಿಯಬೇಕಾದದ್ದು ಇನ್ನೂ ಇದೆ. ಇಂದಿಗೂ ಸಹ ಈಜಿಪ್ಟಿನ ವಿವಿಧ ಪ್ರದೇಶಗಳಲ್ಲಿ ಉತ್ಖನನವನ್ನು ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಎಂತಹ ವೈದ್ಯಕೀಯ
ಪ್ಯಾಪಿರಸ್ಸುಗಳು ದೊರೆಯಲಿವೆ ಎನ್ನುವುದನ್ನು ಕಾಲ ಮಾತ್ರ ಹೇಳಬಲ್ಲುದು.