Friday, 13th December 2024

ವಿಜ್ಞಾನವೂ ವಿವಾದಗಳಿಗೆ ಹೊರತಲ್ಲ !

ಹಿಂದಿರುಗಿ ನೋಡಿದಾಗ

ನಮ್ಮ ಸಮಾಜದತ್ತ ಒಂದು ಪಕ್ಷಿನೋಟವನ್ನು ಬೀರಿದಾಗ, ಸಮಾಜದ ಪ್ರತಿಯೊಂದು ಆಯಾಮದಲ್ಲೂ ಒಂದಲ್ಲಾ ಒಂದು ವಾದ-ವಿವಾದಗಳು ಇರುವುದನ್ನು ನಾವು ನೋಡಬಹುದು. ಇದಕ್ಕೆ ವಿಜ್ಞಾನವೂ ಹೊರತಲ್ಲ. ವಿಜ್ಞಾನ ಜಗತ್ತಿನ ಬಹುದೊಡ್ಡ ವಿವಾದವು ಗುರುತ್ವಾಕರ್ಷಣ ನಿಯಮಕ್ಕೆ ಸಂಬಂಧಪಟ್ಟಿದೆ. ರಾಬರ್ಟ್ ಹೂಕ್ ‘ಗುರುತ್ವಾಕರ್ಷಣೆಯ ಪರಿಕಲ್ಪನೆಯನ್ನು ನಾನು ರೂಪಿಸಿದ್ದು, ನನ್ನಿಂದ ಐಸಾಕ್ ನ್ಯೂಟನ್ ಕದ್ದು ಅದನ್ನು ತನ್ನ ಹೆಸರಿಗೆ ಮಾಡಿಕೊಂಡ’ ಎಂದಿದ್ದು ವಿವಾದದ ತಿರುಳು. (ನಮ್ಮ ಇಸ್ರೋ ಮಾಜಿ ಅಧ್ಯಕ್ಷರಾದ ಮಾಧವನ್ ನಾಯರ್ ಅವರು ಗುರುತ್ವಾಕರ್ಷಣೆಯ ನಿಯಮಗಳನ್ನು ನ್ಯೂಟನ್‌ಗಿಂತ ಮೊದಲೇ ಆರ್ಯಭಟ ಕಂಡುಹಿಡಿದಿದ್ದ ಎಂದದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದವಾಗಲಿಲ್ಲ).

ರಾಬರ್ಟ್ ಹೂಕ್ ಗುರುತ್ವಾಕರ್ಷಣೆಯ ಪರಿಕಲ್ಪನೆಗಳನ್ನು ಸೈದ್ಧಾಂತಿಕವಾಗಿ ಮೊದಲು ಮಂಡಿಸಿದ್ದು ನಿಜವಾದರೂ, ಅದರ ವೈಜ್ಞಾನಿಕ ನಿರೂಪಣೆಗೆ ಅಗತ್ಯವಾದ ಗಣಿತೀಯ ವಿವರಣೆಯನ್ನು ನ್ಯೂಟನ್ ಕೊಟ್ಟ ಎನ್ನುವುದು ನಿರ್ವಿವಾದ. ಹಾಗಾಗಿ ಗುರುತ್ವಾಕರ್ಷಣೆಯ ನಿಯಮಗಳನ್ನು ಕಂಡುಹಿಡಿದ ಕೀರ್ತಿ ಐಸಾಕ್ ನ್ಯೂಟನ್ನಿಗೆ ದೊರೆತಿದೆ. ವಿಜ್ಞಾನ ಜಗತ್ತಿನಲ್ಲಿ ಹೂಕ್ -ನ್ಯೂಟನ್ ವಿವಾದದ ನಂತರದ ಸ್ಥಾನವನ್ನು ಪಡೆದಿರುವ ವಿವಾದವೆಂದರೆ ಬೆಲ್-ಮೆಜಾಂಡಿ ವಿವಾದ. ಈ ವಿವಾದದ ಬಗ್ಗೆ ಒಂದು ಪಕ್ಷಿನೋಟವನ್ನು ಹರಿಸೋಣ.

ನಮ್ಮ ಮಿದುಳು ಮತ್ತು ನರಮಂಡಲದ ರಚನೆಯನ್ನು ಗಮನಿಸೋಣ. ನಮ್ಮ ನರಮಂಡಲವನ್ನು ಪ್ರಧಾನವಾಗಿ ಎರಡು ಭಾಗಗಳಲ್ಲಿ ವಿಂಗಡಿಸ ಬಹುದು. ಕೇಂದ್ರನರಮಂಡಲ ವ್ಯವಸ್ಥೆ ಹಾಗೂ ಪರಿಧಿಯ ನರಮಂಡಲ ವ್ಯವಸ್ಥೆ. ಕೇಂದ್ರನರಮಂಡಲ ವ್ಯವಸ್ಥೆಯಲ್ಲಿ ಮಿದುಳು ಹಾಗೂ ಮಿದುಳಿ ನಿಂದ ಹೊರಡುವ ಮಿದುಳುಬಳ್ಳಿಯಿದೆ. ಪರಿಧಿಯ ನರಮಂಡಲ ವ್ಯವಸ್ಥೆಯಲ್ಲಿ ೩೧ ಜೊತೆ ಬಳ್ಳಿನರಗಳಿವೆ. ಈ ನರಗಳು ನಮ್ಮ ಇಡೀ ದೇಹವನ್ನು ಮಿದುಳು ಹಾಗೂ ಮಿದುಳು ಬಳ್ಳಿಯೊಡನೆ ಸಂಪರ್ಕ ಕಲ್ಪಿಸುತ್ತವೆ. ಈ ಬಳ್ಳಿನರಗಳಲ್ಲಿ ಪ್ರಧಾನವಾಗಿ ಎರಡು ನಮೂನೆಯ ನರ ತಂತುಗಳಿವೆ. ಮೊದಲನೆಯದು ಸಂವೇದನಾ ನರತಂತುಗಳು (ಸೆನ್ಸರಿ ನರ್ವ್ಸ್).

ಹೆಸರೇ ಸೂಚಿಸುವ ಹಾಗೆ, ಇವು ದೇಹದ ಎಲ್ಲ ಭಾಗಗಳು ಅನುಭವಿಸುವ ನಾನಾ ಸ್ವರೂಪದ ಸಂವೇದನೆಗಳನ್ನು ಹೊತ್ತು ಮಿದುಳು ಬಳ್ಳಿಯ ಮೂಲಕ ಮಿದುಳನ್ನು ತಲುಪುತ್ತವೆ. ನಮ್ಮ ಮಿದುಳು ಆಯಾ ಸಂವೇದನೆಗಳ ಮಹತ್ವವನ್ನು ಅರ್ಥೈಸಿಕೊಳ್ಳುತ್ತದೆ. ಅದಕ್ಕೆ ಯಾವ ರೀತಿಯ ಪ್ರತಿಕ್ರಿಯೆಯನ್ನು ನೀಡಬೇಕೆಂದು ನಿರ್ಧರಿಸುತ್ತದೆ. ಆ ಪ್ರತಿಕ್ರಿಯೆಯನ್ನು ಕಾಯನರಗಳ (ಮೋಟಾರ್ ನರ್ವ್ಸ್) ಮೂಲಕ ರವಾನಿಸುತ್ತದೆ. ಕಾಯನರಗಳು ಹೊತ್ತುತರುವ ಸಂದೇಶಕ್ಕೆ ಅನುಗುಣವಾಗಿ ನಮ್ಮ ದೇಹವು ಪ್ರತಿಕ್ರಿಯೆಯನ್ನು ಸೂಚಿಸುತ್ತದೆ.

ಬಳ್ಳಿನರಗಳ ಕಾರ್ಯವೈಖರಿಯ ಬಗ್ಗೆ ಒಂದು ಚಿತ್ರದ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಚಿತ್ರದಲ್ಲಿ ಸಂವೇದನಾ ನರಗಳು ಚರ್ಮ ದಿಂದ ಹೊರಟಿವೆ. ಬಳ್ಳಿನರವನ್ನು ಪ್ರವೇಶಿಸಿವೆ. ಬಳ್ಳಿನರದಲ್ಲಿ ಎರಡು ಬೇರುಗಳಿವೆ. ಮೊದಲನೆಯದು ಬೆನ್ನಬೇರು ಅಥವ ಮೇಲಿನ ಬೇರು (ಡಾರ್ಸಲ್ ರೂಟ್). ಸಂವೇದನಾ ನರತಂತುಗಳು ಬೆನ್ನುಬೇರಿನಿಂದ ಮಿದುಳುಬಳ್ಳಿಯನ್ನು ಪ್ರವೇಶಿಸಿ ಮಿದುಳಿನ ಕಡೆಗೆ ಹೊರಟಿವೆ. ಹಾಗೆಯೇ ಮಿದುಳಿನಿಂದ ಹೊರಬರುವ ಕಾಯನರವು ಮಿದುಳುಬಳ್ಳಿಯಲ್ಲಿ ಹಾದು ಎದೆಬೇರು ಅಥವಾ ಕೆಳಬೇರಿನ ಮೂಲಕ (ವೆಂಟ್ರಲ್ ರೂಟ್) ಪರಿಧಿಯ ನರವನ್ನು ಪ್ರವೇಶಿಸಿ, ಅಲ್ಲಿಂದ ಸಂಬಂಧಪಟ್ಟ ಅಂಗದ ಸ್ನಾಯುವನ್ನು ತಲುಪುತ್ತದೆ.

ತೆನಾಲಿರಾಮನ ಬೆಕ್ಕಿನ ಮರಿಂii ಕಥೆಯು ನಮಗೆಲ್ಲ ಗೊತ್ತಿರುವಂಥದ್ದೇ. ತೆನಾಲಿರಾಮನು ಸುಡುಸುಡುಹಾಲಿನ ಪಾತ್ರೆಯನ್ನು ಬೆಕ್ಕಿನ ಮುಂದೆ ಇಟ್ಟ. ಹಸಿದ ಬೆಕ್ಕು ತಕ್ಷಣವೇ ಹಾಲನ್ನು ಕುಡಿಯಲು ಬಾಯಿಹಾಕಿತು. ಮರುಕ್ಷಣವೇ ಬಾಯಿ ಸುಟ್ಟುಹೋಯಿತು. ಕೂಡಲೇ ಬೆಕ್ಕು ಅಲ್ಲಿಂದ ಪರಾರಿ! ಅಂದಿನಿಂದ ಅದು ಹಾಲನ್ನು ಕಂಡರೆ ಸಾಕು ಭಯದಿಂದ ಓಡಿಹೋಗುತ್ತಿತ್ತು. ಬೆಕ್ಕಿನ ನಾಲಿಗೆಯಲ್ಲಿದ್ದ ಉಷ್ಣಸಂವೇದನಾ ನರತಂತುಗಳು ‘ಹಾಲು ತುಂಬಾ ಬಿಸಿಯಾಗಿದೆ’ ಎನ್ನುವ ಸಂದೇಶವನ್ನು ಹೊತ್ತು ಬೆನ್ನುಬೇರಿನ ಮೂಲಕ ಮಿದುಳು ಬಳ್ಳಿಯನ್ನು ಪ್ರವೇಶಿಸಿ ಮಿದುಳಿನ ಕಡೆಗೆ ಸಾಗಿದವು. ಬಿಸಿಯಾಗಿರುವ ಹಾಲು ಅಪಾಯಕಾರಿ.

ಅದು ನಾಲಿಗೆ-ಬಾಯಿಯನ್ನು ಸುಟ್ಟುಹಾಕುತ್ತದೆ. ಹಾಗೆ ಸುಟ್ಟರೆ ಊಟವನ್ನು ಮಾಡುವುದೇ ಕಷ್ಟವಾಗುತ್ತದೆ. ಹಾಗಾಗಿ ಸುಡುವ ಹಾಲಿನಿಂದ ದೂರ ಸರಿಯಬೇಕು ಎನ್ನುವ ತೀರ್ಮಾನವನ್ನು ಮಿದುಳು ಅಥವಾ ಮಿದುಳುಬಳ್ಳಿಯು (ಸಂದರ್ಭಾನುಸಾರವಾಗಿ) ತೆಗೆದುಕೊಂಡಿತು. ಹಾಗೆ ತೆಗೆದುಕೊಂಡಾಗ, ‘ಬಿಸಿ ಹಾಲಿನಿಂದ ದೂರಸರಿ’ ಎನ್ನುವ ಸಂದೇಶವನ್ನು ಕಾಯನರತಂತುಗಳು ಎದೆಬೇರಿನ ಮೂಲಕ ಹಾದು ಬೆಕ್ಕಿನ ನಾಲಿಗೆ ಹಾಗೂ ಮುಖದ ಸ್ನಾಯು ಗಳಿಗೆ ತಲುಪಿಸಿದವು. ಆಗ ಬೆಕ್ಕು ತಕ್ಷಣವೇ ತನ್ನ ಮುಖವನ್ನು ಹಿಂದಕ್ಕೆ ಎಳೆದುಕೊಂಡು ಅಲ್ಲಿಂದ ಓಡಿತು. ‘ಹಾಲು ಸುಡುತ್ತದೆ’ ಎಂಬ ಮಾಹಿತಿಯು ಬೆಕ್ಕಿನ ಮಿದುಳಿನಲ್ಲಿ ಸದಾ ಕಾಲಕ್ಕೂ ಉಳಿಯಿತು.

ಹಾಲು ಕುಡಿಯದ ಬೆಕ್ಕನ್ನು ನನಗೆ ಕೊಟ್ಟಿದ್ದೀರಿ ಎಂದು ತೆನಾಲಿ ರಾಮನು ದೂರಿದಾಗ, ಕೃಷ್ಣದೇವರಾಯನು ನಂಬಲಿಲ್ಲ. ಆಗ ಕೃಷ್ಣದೇವರಾಯನು
ತಣ್ಣಗಿರುವ ಹಾಲಿನ ಪಾತ್ರೆಯನ್ನು ತರಿಸಿ ಬೆಕ್ಕಿನಮರಿಯ ಮುಂದಿಟ್ಟ. ಹಾಲನ್ನು ಕಂಡಕೂಡಲೇ ಬೆಕ್ಕು ಓಡಿಹೋಯಿತು! ಬೆಕ್ಕಿನಮರಿಯ ಕಣ್ಣುಗಳ ಮೂಲಕ ಹಾಲಿನ ಚಿತ್ರವನ್ನು ಹೊತ್ತ ಬೆಳಕಿನ ಸಂವೇದನಾ ನರಗಳು ಬೆನ್ನು ಬೇರಿನ ಮೂಲಕ ಮಿದುಳುಬಳ್ಳಿಯನ್ನು ಪ್ರವೇಶಿಸಿ, ಮಿದುಳನ್ನು ತಲುಪಿ ದ್ದವು. ನಾಲಿಗೆ ಸುಟ್ಟುಕೊಂಡ ಕೆಟ್ಟ ಅನುಭವವು ಮಿದುಳಿನಲ್ಲಿ ದಾಖಲಾಗಿತ್ತಲ್ಲವೇ! ಕೂಡಲೇ ಮಿದುಳು ಅಲ್ಲಿಂದ ಓಡಿಹೋಗುವಂತೆ ಕಾಲುಗಳ ಕಾಯನರಗಳಿಗೆ ಆಜ್ಞೆಯನ್ನು ನೀಡಿತು.

ಆ ನರಸಂದೇಶವು ಎದೆಬೇರಿನ ಮೂಲಕ ಕಾಲಿನ ಕಾಯನರಗಳನ್ನು ತಲುಪಿತು. ಕೂಡಲೇ ಬೆಕ್ಕು ಸುರಕ್ಷಿತ ಸ್ಥಳವನ್ನು ಸೇರಿಕೊಂಡಿತು. ಬೆನ್ನುಬೇರಿನ ಮೂಲಕ ಸಂವೇದನಾ ನರಗಳು ಮಿದುಳು ಬಳ್ಳಿಯನ್ನು ಪ್ರವೇಶಿಸುತ್ತವೆ ಹಾಗೂ ಎದೆಬೇರಿನ ಮೂಲಕ ಕಾಯನರಗಳು ಮಿದುಳುಬಳ್ಳಿಯಿಂದ ಹೊರಟು ಅಂಗಾಂಗಗಳನ್ನು ತಲುಪುತ್ತವೆ ಎನ್ನುವ ಮಾಹಿತಿಯನ್ನು ವಿಜ್ಞಾನ ಜಗತ್ತಿಗೆ ಸರ್ ಚಾರ್ಲ್ಸ್ ಬೆಲ್ ಎಂಬ ಬ್ರಿಟಿಷ್ ಅಂಗರಚನಾ ವಿಜ್ಞಾನಿ ಹಾಗೂ ಫ್ರಾನ್ಸ್ ದೇಶದ ಅಂಗಕ್ರಿಯಾ ವಿಜ್ಞಾನಿ ಫಾಸ್ವ ಮೆಜಾಂಡಿ (ಫ್ರಾಂಕೋಯಿಸ್ ಮೆಜೆಂಡಿ) ಎಂಬುವವರು ತಿಳಿಸಿದರು. ಇವರಿಬ್ಬರೂ ಸ್ವತಂತ್ರ  ಶೋಧನೆ ಯಿಂದ ಮೇಲಿನ ವಾಸ್ತವವನ್ನು ಅರಿತುಕೊಂಡಿದ್ದರು.

ಇಬ್ಬರ ಸಂಶೋಧನೆಗಳ ನಡುವೆ ಸುಮಾರು ೧೧ ವರ್ಷಗಳ ಅಂತರವಿತ್ತು. ಆದರೂ ಇಬ್ಬರ ನಡುವೆ ವಾದ-ವಿವಾದಗಳು ತೀವ್ರವಾದವು. ಕೊನೆಗೆ ಜರ್ಮನ್ ಅಂಗಕ್ರಿಯಾ ವಿಜ್ಞಾನಿ ಜೊಹಾನಸ್ ಪೀಟರ್ ಮುಲ್ಲರ್ ಇವರಿಬ್ಬರ ಸಂಶೋಧನೆ ಯು ಸರಿಯಾಗಿದೆ ಎನ್ನುವ ಅಂಶವನ್ನು ತನ್ನ ಸ್ವತಂತ್ರ ಅಧ್ಯಯನಗಳಿಂದ ರೂಪಿಸಿದ. ಆದರೂ ಈ ಸಂಶೋಧನೆಗಳನ್ನು ನಡೆಸಿದ ಕೀರ್ತಿಯನ್ನು ಯಾರಿಗೆ ನೀಡಬೇಕು ಎನ್ನುವ ಪ್ರಶ್ನೆಯು ಮಾತ್ರ ಹಾಗೆಯೇ ಉಳಿಯಿತು!

ಚಾರ್ಲ್ಸ್ ಬೆಲ್ ರೆವರೆಂಡ್, ವಿಲಿಯಮ್ ಬೆಲ್ ಅವರ ನಾಲ್ಕನೆಯ ಮಗನಾಗಿ ಎಡಿನ್‌ಬರೋ ನಗರದಲ್ಲಿ ಹುಟ್ಟಿದ. ಎಡಿನ್‌ಬರೋ ವಿಶ್ವವಿದ್ಯಾಲಯ ದಲ್ಲಿ ಪದವಿಯನ್ನು ಪಡೆದ. ಎಡಿನ್‌ಬರೋ ರಾಯಲ್ ಆಸ್ಪತ್ರೆಯಲ್ಲಿ ಅಂಗರಚನಾ ವಿಜ್ಞಾನವನ್ನು ಬೋಧಿಸುತ್ತಾ ಅಲ್ಲಿಯೇ ಶಸ್ತ್ರವೈದ್ಯನಾಗಿ ಕೆಲಸವನ್ನು ಮಾಡಿದ. ಅಂಗರಚನೆಯನ್ನು ಅಧ್ಯಯನ ಮಾಡುತ್ತಲೇ, ಮಾನವ ಅಂಗಾಂಗಗಳ ರಚನಾ ವೈಖರಿಗೆ ಮನಸೋತು ಅವುಗಳ ಸುಂದರ ಚಿತ್ರಗಳನ್ನು ಬಿಡಿಸಲಾರಂಭಿಸಿದ. ಹಾಗೆಯೇ ಅವುಗಳ ಸುಂದರ ಮೇಣದ ಮಾದರಿಗಳನ್ನು ನಿರ್ಮಿಸಿದ. ೧೮೧೮ರಲ್ಲಿ ‘ಆನ್ ಐಡಿಯಾ ಆಫ್ ಎ ನ್ಯೂ ಅನಾಟಮಿ ಆಫ್ ದಿ ಬ್ರೇನ್’ ಎಂಬ ಪುಸ್ತಕವನ್ನು ಬರೆದ. ಇದರಲ್ಲಿ ಅಂದಿನ ಕಾಲಕ್ಕೆ ಹೊಚ್ಚ ಹೊಸ ಪರಿಕಲ್ಪನೆಯೊಂದನ್ನು ಮುಂದಿಟ್ಟ. ದೇಹದ ವಿವಿಧ ಭಾಗಗಳಿಂದ ವಿವಿಧ ನರಪಥಗಳು ಹೊರಡುತ್ತವೆ. ಅವು ಮಿದುಳನ್ನು ತಲುಪುತ್ತವೆ.

ಮಿದುಳು ಈ ವಿವಿಧ ನರಪಥಗಳ ನೆರವಿನಿಂದ ದೇಹದ ವಿವಿಧ ಭಾಗಗಳ ಕೆಲಸ ಕಾರ್ಯಗಳನ್ನು ನಿಯಂತ್ರಿಸುತ್ತದೆ ಎಂದ. ತನ್ನ ಪರಿಕಲ್ಪನೆಗೆ ಪೂರಕವಾಗಿ ಒಂದು ಪ್ರಯೋಗವನ್ನು ಮಾಡಿದ. ಒಂದು ಮೊಲದ ಮಿದುಳುಬಳ್ಳಿಯನ್ನು ಛೇದಿಸಿದ. ಆ ಮಿದುಳುಬಳ್ಳಿಯ ಎದೆಬೇರು ಅಥವಾ ಕೆಳಬೇರನ್ನು ಸ್ಪರ್ಶಿಸಿದ. ಆವನು ಯಾವ ಕಾಯನರವನ್ನು ಸ್ಪರ್ಶಿಸುತ್ತಿದ್ದನೋ, ಆಗ ಮೊಲದ ಆ ಭಾಗ ಚಲನೆಯನ್ನು ತೋರುತ್ತಿತ್ತು. ಹಾಗೆಯೇ ಬೆನ್ನು
ಬೇರನ್ನು ಸ್ಪರ್ಶಿಸಿದಾಗ ಯಾವುದೇ ಚಲನೆಯು ಕಾಣುತ್ತಿರಲಿಲ್ಲ. ಹಾಗಾಗಿ ಬೆನ್ನುಬೇರಿನ ಬಗ್ಗೆ ಹೆಚ್ಚು ತಲೆಯನ್ನು ಕೆಡಿಸಿಕೊಳ್ಳಲಿಲ್ಲ. ೩೧ ಜೊತೆ ನರಗಳ ಎದೆಬೇರನ್ನು ಸ್ಪರ್ಶಿಸುವುದರ ಮೂಲಕ ಮೊಲದ ವಿವಿಧ ಭಾಗಗಳ ಚಲನವಲನವನ್ನು ದಾಖಲಿಸಿದ. ಚಾರ್ಲ್ಸ್ ಬೆಲ್ ನಡೆಸಿದ ಈ ಪ್ರಯೋಗವು
ನರವೈದ್ಯಕೀಯದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿದೆ.

-ಸ್ವಾ ಮೆಜಾಂಡಿ ಫ್ರಾನ್ಸ್ ದೇಶದ ಪ್ರಖ್ಯಾತ ಅಂಗಕ್ರಿಯಾ ವಿಜ್ಞಾನಿಯಾಗಿದ್ದ. ಇವನು ಮೂರು ವರ್ಷದ, ಸುಪುಷ್ಟ ಹಾಗೂ ಆರೋಗ್ಯಕರ ನಾಯಿಯನ್ನು ಆಯ್ಕೆ ಮಾಡಿಕೊಂಡ. ಅದಕ್ಕೆ ಪ್ರತಿದಿನ, ಮೂರೂ ಹೊತ್ತು, ಬರೀ ಸಕ್ಕರೆಯನ್ನೇ ತಿನ್ನಿಸುತ್ತಾ ಬಂದ. ೩೨ನೆಯ ದಿನಕ್ಕೆ ಸರಿಯಾಗಿ ಆ ನಾಯಿಯು ಸತ್ತುಹೋಯಿತು. ಹೀಗೆ ಸಕ್ಕರೆಯು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದನ್ನು ಪ್ರಯೋಗ ಪುರಾವೆ ಸಹಿತ ನಿರೂಪಿಸಿದ. ಇವನು ಎಷ್ಟೇ ಒಳ್ಳೆಯ
ವಿಜ್ಞಾನಿಯಾಗಿದ್ದರೂ ಸಮಕಾಲೀನ ಸಮಾಜದ ದೃಷ್ಟಿಯಲ್ಲಿ ಮಹಾಕ್ರೂರಿಯಲ್ಲ ಪರಮಕ್ರೂರಿಯಾಗಿದ್ದ. ಚಾರ್ಲ್ಸ್ ಬೆಲ್ ತನ್ನ ಪ್ರಯೋಗವನ್ನು ನಡೆಸಿ ೧೧ ವರ್ಷಗಳಾದ ಮೇಲೆ, ಸಾರ್ವಜನಿಕರು ಹಾಗೂ ವೈದ್ಯವಿದ್ಯಾರ್ಥಿಗಳ ಎದುರಿಗೇ ಪ್ರಯೋಗಗಳನ್ನು ನಡೆಸಿದ. ಹಲವು ನಾಯಿಗಳ ಕಿವಿ
ಮತ್ತು ಕಾಲಿಗೆ ಮೊಳೆಗಳನ್ನು ಹೊಡೆದ.

ಅವು ಜೀವಂತವಿರುವಾಗಲೇ ಅವುಗಳ ಬೆನ್ನುಬೇರನ್ನು ಹಾಗೂ ಎದೆಬೇರನ್ನು ಛೇದಿಸಿದ. ಬೆನ್ನುಬೇರನ್ನು ಕೃತಕವಾಗಿ ಪ್ರಚೋದಿಸಿದಾಗ ನಾಯಿಯು ನೋವಿ ನಿಂದ ಕೂಗುವುದನ್ನು ತೋರಿದ. ಹಾಗೆಯೇ ಎದೆ ಬೇರನ್ನು ಪ್ರಚೋದಿಸಿದಾಗ ನಾಯಿಯ ಕೈಕಾಲುಗಳು ಚಲಿಸುವುದನ್ನು ತೋರಿದ. ಹೀಗೆ ಬೆನ್ನುಬೇರಿನ ಮೂಲಕ ಸಂವೇದನೆಗಳು ಹಾಗೂ ಎದೆ ಬೇರಿನ ಮೂಲಕ ಕಾಯ ಚಲನವಲನಗಳು ನಡೆಯುವುದನ್ನು ನಿರೂಪಿಸಿದ. ಜೀವಂತವಾಗಿರುವ ನಾಯಿಯನ್ನು ಅರೆಬರೆ ಛೇದಿಸಿ, ಇಡೀ ರಾತ್ರಿ ಅದನ್ನು ನರಳಲು ಬಿಟ್ಟು, ಮರುದಿನ ಬಂದು ತನ್ನ ಪ್ರಯೋಗವನ್ನು ಮುಂದುವರಿಸುವ ಮೆಜಾಂಡಿಯ ಕ್ರೂರ ಮನೋಭಾವವನ್ನು ನೋಡಿ ಸ್ವಯಂ ಫ್ರೆಂಚರೇ ಕೆರಳಿದರು. ಕೊನೆಗೆ ಜೀವಂತ ಪ್ರಾಣಿಗಳನ್ನು ಛೇದಿಸುವುದನ್ನು ನಿಷೇಽಸುವ ಕಾನೂನನ್ನು ತಂದರು.

ಜರ್ಮನ್ ವೈದ್ಯ ಮತ್ತು ಅಂಗಕ್ರಿಯಾ ವಿಜ್ಞಾನಿ ಜೊಹಾನೆಸ್ ಪೀಟರ್ ಮುಲ್ಲರ್ ಕಪ್ಪೆಗಳ ಮೇಲೆ ಸರಳ ಪ್ರಯೋಗವನ್ನು ನಡೆಸಿದ. ಚಾರ್ಲ್ಸ್ ಮತ್ತು
ಮೆಜಾಂಡಿಯರ ಸಂಶೋಧನೆಗಳು ಸರಿಯಾಗಿವೆ ಎಂದ. ಬೆಲ್ಸ್ ಮತ್ತು ಮೆಜಾಂಡಿ ಯರ ನಡುವೆ ತೀವ್ರ ತಿಕ್ಕಾಟವಾಯಿತು. ಇದೇವೇಳೆಗೆ ಬ್ರಿಟನ್ ಮತ್ತು ಫ್ರಾನ್ಸ್ ನಡುವಿನ ರಾಜಕೀಯ ತಿಕ್ಕಾಟವು ಶಿಖರಕ್ಕೇರಿತ್ತು. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳಿಬ್ಬರ ವಿವಾದವು ತೀವ್ರವಾಯಿತು.

ಇದು ಚಾರ್ಲ್ಸ್ ಬೆಲ್‌ನ ಸಹಜ ಮರಣದವರೆಗೆ ಮುಂದುವರಿಯಿತು. ಕೊನೆಗೆ ವಿಜ್ಞಾನಿಗಳು ಈ ಸಂಶೋಧನಾ ಕೀರ್ತಿಯನ್ನು ಇಬ್ಬರಿಗೂ ಹಂಚ ಬೇಕೆಂದು ನಿರ್ಧರಿಸಿ ದರು. ಚಾರ್ಲ್ಸ್ ೧೧ ವರ್ಷಗಳ ಮೊದಲೇ ಸಂಶೋಧನೆಯನ್ನು ನಡೆಸಿದ್ದ ಕಾರಣ ಅವನ ಹೆಸರನ್ನೇ ಮೊದಲಿಗೆ ತೆಗೆದುಕೊಂಡು ‘ಚಾರ್ಲ್ಸ್-ಮೆಜಾಂಡಿ ನಿಯಮ’ ಎಂಬ ಹೆಸರನ್ನು ನೀಡಿದರು. ಯಾವಾಗಲೂ ಬೆನ್ನುಬೇರಿನ ಮೂಲಕ ಸಂವೇದನಾ ನರಗಳು ಹಾಗೂ ಎದೆಬೇರಿನ
ಮೂಲಕ ಕಾಯನರಗಳು ಸಾಗುತ್ತವೆ ಎನ್ನುವುದೇ ಚಾರ್ಲ್ಸ್- ಮೆಜಾಂಡಿ ನಿಯಮ. ಈ ನಿಯಮವು ನೂರಕ್ಕೆ ನೂರರಷ್ಟು ಸತ್ಯವಲ್ಲ ಎಂದು ನಿರೂಪಿತ ವಾಗಿದ್ದರೂ, ವೈದ್ಯ ವಿಜ್ಞಾನವು ಆ ನಿಯಮವನ್ನು ಇವರಿಬ್ಬರ ಹೆಸರಿನಲ್ಲಿ ಉಳಿಸಿಕೊಂಡಿದೆ.