Saturday, 14th December 2024

ನಿಮ್ಮನ್ನು ನೀವೇ ನಿರ್ಣಯಿಸಿ, ಬದಲಾವಣೆ ಕಾಣಿ

ಶ್ವೇತಪತ್ರ

shwethabc@gmail.com

ಈಗ ನೀವು ಎಲ್ಲಿದ್ದೀರೋ ಅದಕ್ಕೆ ಕಾರಣ, ‘ನಾನು ಅಲ್ಲಿ ಇರಬೇಕು’ ಎಂಬುದಾಗಿ ಬದುಕಲ್ಲಿ ಹಿಂದೆ ನೀವು ಅಂದುಕೊಂಡಿದ್ದೇ ಅಥವಾ ಅಂಥ ಬಯಕೆಯೇ ಆಗಿರುತ್ತದೆ. ಇನ್ನು ನೀವು ಇನ್ನೆಲ್ಲೋ ಇರಬೇಕೆಂದು ಬಯಸುವಿರಾದರೆ ನಿಮ್ಮಲ್ಲೊಂದು ಬದಲಾವಣೆ ಖಂಡಿತ ಮೂಡುತ್ತದೆ ಹೌದಲ್ಲವೇ? ಇತಿಹಾಸ ಕಂಡ ಶ್ರೇಷ್ಠ ಬಾಕ್ಸರ್ ಮೊಹಮ್ಮದ್ ಅಲಿ.

ಆದರೆ ಜಗತ್ತು ಈತನನ್ನು ಗುರುತಿಸುವ ಮುಂಚೆ, ಈತ ಬಾಕ್ಸಿಂಗ್ ಜಗತ್ತಿನಲ್ಲಿ ಹೆಸರು ಮಾಡಲು ಪ್ರಯತ್ನಿಸುತ್ತ, ಒಂದು ಗೆಲುವಿಗಾಗಿ ಕಾಯುತ್ತಿದ್ದ ವ್ಯಕ್ತಿಯಷ್ಟೇ. ಆದರೆ ಅಲಿಗೆ ತನ್ನ ಬಾಕ್ಸಿಂಗ್ ಕೌಶಲದ ಬಗ್ಗೆ ಅಪಾರ ನಂಬಿಕೆ. ಹೀಗಾಗಿ ಗೆಲುವಿಗೆ ಮುಂಚೆಯೇ ತಾನೊಬ್ಬ ಶ್ರೇಷ್ಠ ಬಾಕ್ಸಿಂಗ್ ಪಟು ಎಂದು ಘೋಷಿಸಿಕೊಳ್ಳುತ್ತಿದ್ದ. ಎಲ್ಲರೂ ಅಲಿಯನ್ನು ಅನುಮಾನಿಸಿದರು, ಅಪಹಾಸ್ಯ ಮಾಡಿದರು.

ಆದರೆ ಆತ ಬಾಕ್ಸಿಂಗ್ ಚಾಂಪಿಯನ್ ಆಗುತ್ತಿದ್ದಂತೆ ಅವರೆಲ್ಲರೂ ನಿಬ್ಬೆರಗಾದರು. ಅಲಿ ಗೆಲುವನ್ನಷ್ಟೇ ಸಾಧಿಸಿರಲಿಲ್ಲ; ತನ್ನದೇ ನಿರ್ಣಯಗಳ ಮೂಲಕ ಗೆಲುವನನ್ನು ಊಹಿಸಿಯೂ ಇದ್ದ. ಆತ ಪ್ರತಿಬಾರಿ ಬಾಕ್ಸಿಂಗ್ ರಿಂಗ್‌ಗೆ ಧುಮುಕುವಾಗಲೂ, ‘ಎದುರಾಳಿಯನ್ನು ಹೊರಗುರುಳಿಸುತ್ತೇನೆ’ ಎಂದೇ ಊಹಿಸು ತ್ತಿದ್ದ ಮತ್ತು ಆ ಊಹೆಯು ಪ್ರತಿಬಾರಿಯೂ ಸರಿಯಾಗಿಯೇ ಇರುತ್ತಿತ್ತು. ಇದು ಸಾಧ್ಯವಾಗಿದ್ದು ಹೇಗೆ? ರಹಸ್ಯ ಶಕ್ತಿಯೊಂದು ಇದಕ್ಕೆ ಇಂಬು ಕೊಡುತ್ತಿತ್ತೇ? ಅಥವಾ ಅಲಿಗೆ ಅರ್ಥವಾದದ್ದು ನಮಗೆ ಅರಿವಾಗದೆ ಹೋಯಿತೇ? ಎಲ್ಲಕ್ಕೂ ಒಂದೇ ಉತ್ತರ: ಅಲಿಯ ಸಾಧನೆಯ ಹಿಂದಿರುವ ರಹಸ್ಯ ಶಕ್ತಿಯ ಹೆಸರೇ ನಿರ್ಣಯ, ದೃಢೀಕರಣ ಅಥವಾ ಸಮ್ಮತಿ.

ನಿಮ್ಮನ್ನು, ನಿಮ್ಮ ಆಲೋಚನೆಗಳನ್ನು, ನಿಮ್ಮೊಳಗಿನ ಶಕ್ತಿಯನ್ನು ನಂಬುವಂತೆ ಮಾಡುವ ಆ ಪದಕ್ಕೆ ಮನೋವಿಜ್ಞಾನ ಕೊಡುವ ಹೆಸರು ‘Affirmation’. ಅಂದರೆ ನಿರ್ಣಯಿಸಿಕೊಳ್ಳುವುದು. ನಿರ್ಣಯಿಸಿಕೊಳ್ಳುವುದು ಅಥವಾ ದೃಢೀಕರಿಸಿಕೊಳ್ಳುವುದನ್ನು ಅರ್ಥೈಸುವುದು ಹೇಗೆ? ಅಲಿಯ ಮಾತುಗಳನ್ನೇ ಗಮನಿಸೋಣ. ಆತ ಎಂದಿಗೂ ‘ನಾನೇ ಶ್ರೇಷ್ಠ’ ಎನ್ನಲಿಲ್ಲ, ‘ಎಲ್ಲರಿಗಿಂತ ಶ್ರೇಷ್ಠ’ ಎಂದೂ ಹೇಳಲಿಲ್ಲ. ‘ನಾನೊಬ್ಬ ಶ್ರೇಷ್ಠ’ ಇಷ್ಟನ್ನೇ ಆತ ಸರಳವಾಗಿ, ಸ್ಪಷ್ಟವಾಗಿ ಹೇಳಿದ್ದು.

ತನ್ನ ಈ ಒಂದು ಮಾತಿನ ಮೂಲಕ ಅಲಿ ೩ ಮುಖ್ಯ ಸಂಗತಿಗಳನ್ನು ನೆರವೇರಿಸಿಕೊಳ್ಳುತ್ತಾನೆ:

೧. ಆತ ತನ್ನ ಸುಪ್ತಮನಸ್ಸಿಗೆ ತಾನೇನು ಕೆಲಸ ಮಾಡಬೇಕೆಂಬುದರ ಬಗ್ಗೆ ತಿಳಿಯಪಡಿಸಿದ, ಸುಪ್ತಮನಸ್ಸನ್ನು ಅಣಿಗೊಳಿಸಿದ. ಅದನ್ನು ವಾಸ್ತವದ ಅಂಶಗಳಿಗೆ ಬೇಕಾದಂತೆ ಹೊಂದಿಸಿದ. ಅದಕ್ಕೆ ತಿಳಿಯುವಂತೆ ತನ್ನನ್ನು ತಾನೇ ವ್ಯಾಖ್ಯಾನಿಸುತ್ತಾ ಹೋದ. ಪರಿಣಾಮವಾಗಿ, ಅಲಿ ಆಡುತ್ತಿದ್ದ ‘ನಾನೊಬ್ಬ ಶ್ರೇಷ್ಠ’ ಎಂಬ ಮಾತುಗಳನ್ನು ಆತನ ಸುಪ್ತಮನಸ್ಸು ನಂಬತೊಡಗುತ್ತ, ಹೋರಾಡಲು ಬೇಕಾದ ತಯಾರಿಯನ್ನು ಮಾಡಿಕೊಳ್ಳತೊಡಗಿತು.

೨. ಅಲಿ ಎಲ್ಲರ ಮುಂದೆ ಜೋರಾಗಿ ತನ್ನನ್ನು ತಾನು ಶ್ರೇಷ್ಠನೆಂದು ದೃಢೀಕರಿಸಿಕೊಳ್ಳುತ್ತಾ ಬಂದ. ತನ್ನ ಮುಂದೆ ಇನ್ಯಾವುದೇ ಅಡೆತಡೆಗಳಿಲ್ಲ ಎಂಬ ಪರಿಕಲ್ಪನೆಯನ್ನು ಸುಪ್ತಮನಸ್ಸಿನಲ್ಲಿ ತುಂಬುತ್ತಾ ಬಂದ.

೩. ತಾನು ನುಡಿದಂತೆ ನಡೆದು, ಪ್ರಪಂಚದ ಬಾಕ್ಸಿಂಗ್ ಚಾಂಪಿಯನ್ ಎನಿಸಿ, ಬೇರೆಯವರೂ ತನ್ನನ್ನು ಒಪ್ಪುವಂತೆ ಮಾಡಿದ. ಎದುರಾಳಿಯನ್ನು ೩ನೇ ಸುತ್ತಿನಲ್ಲಿ ರಿಂಗ್‌ನಿಂದ ಹೊರಗೆಸೆಯುತ್ತೇನೆಂದು ಎದುರಾಳಿಗೂ ಕೇಳಿಸುವಂತೆ ಹೇಳುತ್ತಿದ್ದ ಮತ್ತು ಅದನ್ನು ಸಾಧ್ಯವಾಗಿಸುತ್ತಿದ್ದ. ಅಲಿಯ ಬಾಕ್ಸಿಂಗ್ ಅನ್ನು ಕೂಲಂಕಷವಾಗಿ ಗಮನಿಸಿದರೆ, ಆತನ ಅತ್ಯದ್ಭುತ ಮಾನಸಿಕ ಕೌಶಲಗಳು ಎದ್ದು ಕಾಣುತ್ತವೆ.

ಪಂದ್ಯವನ್ನು ಶುರುವಿಟ್ಟುಕೊಳ್ಳುವ ಮುಂಚೆಯೇ ಎದುರಾಳಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ನಿಲ್ಲುವುದು, ನಂತರದಲ್ಲಿ ಯಾವ ಕಾರಣಕ್ಕೂ ರಿಂಗ್‌ನ ಮೂಲೆಗಳಲ್ಲಿ ತಾನು ಕುಳಿತುಕೊಳ್ಳದಂತೆ ನೋಡಿಕೊಳ್ಳುತ್ತಿದ್ದುದು, ತಾನು ಅಜೇಯ ಎಂಬುದನ್ನು ಎದುರಾಳಿಗೂ ಕೇಳಿಸುವಂತೆ ದೃಢ ಪಡಿಸುತ್ತಿದ್ದುದು ಇವೇ ಅವನ ಯಶಸ್ಸಿಗೆ ಮುಖ್ಯ ಕಾರಣ. ಅಲಿಯ ಬಾಕ್ಸಿಂಗ್ ಬದುಕಿನ ಚಿತ್ರಣವನ್ನು ಬರೆಯುವಾಗ ನನಗನಿಸಿದ್ದು- ಯಾವುದೇ ಯುದ್ಧವಿರಲಿ, ಅದನ್ನು ಮೊದಲು ನಾವು ಮನಸ್ಸಿನಲ್ಲಿ ಗೆಲ್ಲಬೇಕು; ಆಮೇಲೆ ಯುದ್ಧಭೂಮಿಯಲ್ಲಿ ಗೆಲವು ನಮ್ಮದೇ ಆಗುತ್ತಾ ಹೋಗುತ್ತದೆ.

ದೃಢೀಕರಣ, ನಿರ್ಣಯಿಸುವಿಕೆ, ಸಮ್ಮತಿಸುವಿಕೆ ಇವು ಇಲ್ಲದೆ ಹೋಗಿದ್ದರೆ, ನಮ್ಮ ಸುಪ್ತಮನಸ್ಸು ಬೇರೆಯವರು ಏನೇ ಹೇಳಿದರೂ ಅದನ್ನು ನಂಬುವಂತೆ ತಯಾರಾಗಿ ಬಿಡುತ್ತಿತ್ತು. ಸುಪ್ತಮನಸ್ಸಿಗೆ ಯಾವುದೇ ತಯಾರಿ ಇರುವುದಿಲ್ಲ, ಹಾಗಾಗಿ ನಾವೆಲ್ಲ ತಿಳಿಯಬೇಕಾದ್ದು ಇಷ್ಟೇ- ನಾವೇನು ನಂಬುತ್ತೇವೋ, ಹೇಳುತ್ತೇವೋ ಅದನ್ನು ಮನಸ್ಸು ಹಾಗೆಯೇ ನಂಬತೊಡಗುತ್ತದೆ. ನಾವು ಋಣಾತ್ಮಕ ಹೇಳಿಕೆಗಳನ್ನು ಉಲಿದರೆ ಮನಸ್ಸು ಋಣಾತ್ಮಕ
ವಾಗಿಯೇ ಯೋಚಿಸತೊಡಗುತ್ತದೆ. ‘ನಾವು ಸೋತಿದ್ದೇವೆ, ಅಸಹಾಯಕರಾಗಿದ್ದೇವೆ, ಅಸ್ಥಿರವಾಗಿದ್ದೇವೆ’ ಎಂದು ಮನಸ್ಸಿಗೆ ಹೇಳತೊಡಗಿದರರೆ, ಅದರ ಪ್ರಕಾರವೇ ಮನಸ್ಸು ನಂಬತೊಡಗುತ್ತದೆ.

ಮೇರಿ ಡೆಕರ್ ಕುರಿತಾದ ಸಂಗತಿಯನ್ನು ಇಲ್ಲಿ ಹೇಳಬೇಕು. ನಕಾರಾತ್ಮಕ ಅಪೇಕ್ಷೆಗಳು ಹೇಗೆ ನಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗಿಬಿಡಬಹುದು ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಅದು ೧೯೮೪ರ ಒಲಿಂಪಿಕ್ಸ್. ಜಗತ್ತಿನ ಅತಿವೇಗದ ಓಟಗಾರ್ತಿಯರಲ್ಲಿ ಒಬ್ಬಳಾಗಿದ್ದ ಡೆಕರ್ ಅಮೆರಿಕದ ದೊಡ್ಡ ನಿರೀಕ್ಷೆಯಾಗಿದ್ದಳು. ಆದರೆ ಆಕೆ ಒಲಿಂಪಿಕ್ಸ್‌ನ ಮುಂಚೆ ಕಾಣಿಸಿಕೊಂಡ ಎಲ್ಲ ಮಾಧ್ಯಮಗಳ ಮುಂದೆಯೂ “I” m Jinx, “I” m
Jinx, “I”m Jinx  (ಕೆಡುಕಾಗಲೆಂದೆ ಬಯಸುವ ಮಾತುಗಳು) ಎಂದು ತನ್ನನ್ನು ತಾನೇ ಜರಿದುಕೊಳ್ಳುತ್ತಿದ್ದಳಂತೆ.

ತಾನೇನು ಮಾಡುತ್ತಿರುವೆನೆಂಬ ಅರಿವು ಆಕೆಗೆ ಇದ್ದಂತಿರಲಿಲ್ಲ. ಏಕೆಂದರೆ ಆ ವೇಳೆ ಮೇರಿಗಿದ್ದ ಒತ್ತಡ ಕಡಿಮೆಯೇನೂ ಆಗಿರಲಿಲ್ಲ. ಆದರೆ ತನ್ನ ಆಟದ
ಕುರಿತಾಗಿ ಆಕೆ ಜೋರಾಗಿ ಆಡುತ್ತಿದ್ದ ನಕಾರಾತ್ಮಕ ಹೇಳಿಕೆಗಳನ್ನು ಆಕೆಯ ಸುಪ್ತಮನಸ್ಸು ಸದ್ದಿಲ್ಲದೆ ಕೇಳಿಸಿಕೊಳ್ಳತೊಡಗಿತ್ತು. ಒಲಿಂಪಿಕ್ಸ್‌ನಲ್ಲಿ ಆಕೆಗೆ ನಿಜಕ್ಕೂ ಸೋಲಾಗಿತ್ತು. ನಮ್ಮ ಚೇತನದ ಅನುಭವಗಳಿಂದ ಹೊರಹೊಮ್ಮಿದ ಋಣಾತ್ಮ ಕತೆಯು ಸುಪ್ತಮನಸ್ಸಿನಲ್ಲೂ ಋಣಾತ್ಮಕತೆಯ ಫಲಿತಾಂಶ ವನ್ನು ಹೊರಗೆಡವುತ್ತದೆ.

ಇದು ಮನೋವಿಜ್ಞಾನದ ಹಳೆಯ ನಿಯಮವಾದ ‘ಕಾರಣ ಮತ್ತು ಪರಿಣಾಮ ತಂತ್ರ’ದ ಒಂದು ಭಾಗವಾಗಿದೆ. ಇಲ್ಲಿ ಸಮಸ್ಯೆಯೆಂದರೆ, ನಮ್ಮಲ್ಲನೇಕರು
ಪರಿಣಾಮಗಳನ್ನಷ್ಟೇ ನೋಡುತ್ತೇವೆ. ನಾವು ಸೋತಾಗ, ಕಳೆದುಕೊಂಡಾಗ, ನಮ್ಮಿಂದ ತಪ್ಪಾದಾಗ ಪರಿಣಾಮವನ್ನು ಮಾತ್ರವೇ ನೋಡತೊಡಗು ತ್ತೇವೆಯೇ ವಿನಾ, ಅದಕ್ಕೆ ಕಾರಣವಾದದ್ದನ್ನು ಪರಿಗಣಿಸುವುದೇ ಇಲ್ಲ. ಸನ್ಯಾಸತ್ವದ ತರಬೇತಿ ಪಡೆಯಲು ಹುಡುಗನೊಬ್ಬ ಮಠ ಸೇರಿದ. ಆತನಿಗೆ ಪ್ರತಿವರ್ಷದ ಕೊನೆಯಲ್ಲಿ ತನ್ನ ತಂದೆಯ ಬಳಿ ಕೇವಲ ಎರಡು ಪದಗಳ ಮಾತಾಡಲು ಅವಕಾಶವಿತ್ತು. ಮೊದಲ ವರ್ಷದ ಕೊನೆಯಲ್ಲಿ ಆತ ತಂದೆಯ ಬಳಿ ‘ಮಲಗಲು ಹಾಸಿಗೆಯಿಲ್ಲ’ ಎಂದ. ೨ನೇ ವರ್ಷದ ಕೊನೆಯಲ್ಲಿ ‘ಊಟ ಸರಿಯಿಲ್ಲ’, ೩ನೇ ವರ್ಷದ ಕೊನೆಯಲ್ಲಿ ‘ಮಠ ಬಿಡುತ್ತೇನೆ’ ಎಂದ. ಇದರಿಂದ ಅಚ್ಚರಿಗೊಳ್ಳದ ತಂದೆಯು ಮಗನಿಗೆ, ‘ನೀನು ಇಷ್ಟು ದಿನವೂ ದೂರುವುದರ ಹೊರತಾಗಿ ಮತ್ತೇನೂ ಮಾಡಲಿಲ್ಲ’ ಎಂದ!

ಸೋಲಿಗೆ ಮುಖ್ಯ ಕಾರಣ ನಾವು ಚೇತನಾನುಭವದಿಂದ ಸುಪ್ತಮನಸ್ಸಿಗೆ ನೀಡುವ ಋಣಾತ್ಮಕ ವಿವರಣೆಗಳು. ನಮ್ಮ ಅನುಭವ, ಆಲೋಚನೆ, ವರ್ತನೆಯಲ್ಲಿ ಋಣಾತ್ಮಕತೆಯನ್ನು ತುಂಬಿಕೊಂಡರೆ ಫಲಿತಾಂಶವೂ ಋಣಾತ್ಮಕವಾಗಿಯಲ್ಲದೆ ಮತ್ತೇನಾಗಿರುತ್ತದೆ? ಬದಲಿಗೆ ನಮ್ಮ ಅನುಭವ,
ಆಲೋಚನೆ, ವರ್ತನೆಯಲ್ಲಿ ಧನಾತ್ಮಕತೆಯನ್ನು ತುಂಬಿಕೊಂಡರೆ ಫಲಿತಾಂಶವೂ ಧನಾತ್ಮಕವೇ. ಉತ್ತರ ಇಷ್ಟೇ ಸರಳ. ಎಲ್ಲವೂ ಮನಸ್ಸಿನ ನಂಬಿಕೆಯ ದೃಢತೆಯ, ನಿರ್ಣಯತೆಯ, ಸ್ಪಷ್ಟತೆಯ ಮೇಲೆ ನಿಂತಿದೆ.

‘ಮನಸ್ಸು ಯಾವುದನ್ನು ಹೀರಿಕೊಂಡು ನಂಬುತ್ತದೆಯೋ ಅದನ್ನೇ ಸಾಧಿಸುತ್ತದೆ; ನಂಬಿಕೆಗೆ ಅಷ್ಟೊಂದು ಅಗಾಧ ಶಕ್ತಿಯಿದೆ’ ಎಂಬ ನೆಪೋಲಿಯನ್ ಹಿಲ್ ಅವರ ಸುಂದರ ಮಾತು ಈ ನಿಟ್ಟಿನಲ್ಲಿ ನಮಗೆ ದಾರಿದೀಪವಾಗಬೇಕು.

? ನಮ್ಮನ್ನು ನಾವು ನಿರ್ಣಯಿಸಿಕೊಳ್ಳುವ ತಂತ್ರಗಳು:
೧. ನೀವೇನೇ ಮುಖ್ಯ ಕೆಲಸಗಳನ್ನು ಮಾಡುತ್ತಿರಿ, ಅದನ್ನು ನಿಂತು ಮಾಡಿ. ನಿಲುವಿನ ಭಂಗಿಯು ನಿಮ್ಮ ಸಂಪೂರ್ಣ ಚೇತನದ ಅರಿವನ್ನು ನಿಮ್ಮಲ್ಲಿ ಮೂಡಿಸುತ್ತದೆ. ಮುಂದಿನ ಸಲದಿಂದ ಏನೇ ಕೆಲಸ ಮಾಡುವುದಿದ್ದರೂ ನಿಂತು ಮಾಡಿದರೆ ಒಂದು ವಿಶೇಷ ಶಕ್ತಿಯ ಅರಿವು ನಿಮ್ಮದಾಗುತ್ತದೆ. ಒಂದು ಪುಟ್ಟ ಉದಾಹರಣೆ ನೀಡುವುದಾದರೆ, ಫೋನ್‌ನಲ್ಲಿ ಮಾತನಾಡಬೇಕಾಗಿ ಬಂದಾಗ ಕುಳಿತಿರುವಲ್ಲಿಂದ ಏಳಿ, ಹಾಗೆಯೇ ಒಂದು ಸುತ್ತುಹಾಕಿ, ಬದಲಾವಣೆಯನ್ನು ಕಾಣಿ.

೨. ನಿಮ್ಮ ತೋರುಬೆರಳನ್ನು ಎದೆಯ ಮಧ್ಯಭಾಗಕ್ಕೆ ಹಿಡಿದು ನಿವೇದಿಸಿಕೊಳ್ಳಿ. ಮಧ್ಯದ ಬೆರಳು ತೋರುಬೆರಳಿಗೆ ಶಕ್ತಿ ತುಂಬುತ್ತಾ, ನೀವು ಮಾಡುತ್ತಿರುವ ಕೆಲಸದತ್ತ ಪೂರ್ಣಗಮನವು ಕೇಂದ್ರೀಕರಿಸಲ್ಪಡುವಂತೆ ಮಾಡುತ್ತದೆ.

೩. ಹಾಗೆಯೇ ನಿಮ್ಮ ತೋರುಬೆರಳನ್ನು ಹಿಡಿದು, ನಿಮ್ಮ ಆಸೆ-ಅನಿಸಿಕೆಗಳನ್ನು ಸ್ಪಷ್ಟವಾಗಿ ಜೋರಾಗಿ ವಿವರಿಸಿ. ಹೀಗೆ ನೀವು ಸರಳವಾಗಿ ವಿವರಿಸುವ ಮಾತುಗಳು ನಿಮ್ಮ ಬದುಕಿಗೆ ಉದ್ದೇಶ ಮತ್ತು ಅರ್ಥವನ್ನು ತುಂಬುತ್ತವೆ. ನೆನಪಿಡಿ, ‘ನಾನು ಶ್ರೇಷ್ಠವಾದದ್ದೇನನ್ನೋ ಸಾಧಿಸಲು ಬಯಸುತ್ತೇನೆ, ನಾನು ಯಶಸ್ಸನ್ನು ಸಾಧಿಸುತ್ತೇನೆ’ ಹೀಗೆ ನಿಮ್ಮಷ್ಟಕ್ಕೆ ನೀವು ಪುನರುಚ್ಚರಿಸುವುದರಿಂದ ನಿಮ್ಮಲ್ಲಿರುವ ಸವಕಲುತನವನ್ನು ಹೊಡೆದುರುಳಿಸಬಹುದು. ನಿಮ್ಮ
ದೃಢೀಕರಣಗಳು ಅಲಂಕಾರಿಕವಾಗಿಯೋ ಉದ್ದವಾಗಿಯೋ ಇರಬೇಕಿಲ್ಲ. ಸರಳವಾಗಿ ಸ್ಪಷ್ಟವಾಗಿದ್ದರೆ ಸಾಕು. ನಿಮ್ಮ ದೃಢೀಕರಣಗಳು ನಿಮ್ಮ ಬದುಕಿನ ನಿರ್ಣಯಗಳೇ ಆಗಿರಬೇಕು.

ಹಾಗಿದ್ದರೆ ಏನನ್ನು ದೃಢೀಕರಿಸುವುದು, ನಿರ್ಣಯಿಸುವುದು? ಇದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆಯೇ ಆಗಿರುತ್ತದೆ ಮತ್ತು ಬದುಕಿನಲ್ಲಿನ ನಮ್ಮ ಗುರಿ ಹಾಗೂ ಉದ್ದೇಶದ ಮೇಲೆ ಅವಲಂಬಿತವಾಗಿರುತ್ತದೆ. ಬದುಕಿಗೆ ಖುಷಿ, ಸಕಾರಾತ್ಮಕತೆ, ಅರ್ಥ ಮತ್ತು ಉದ್ದೇಶವನ್ನು ತುಂಬುವ ದೃಢೀಕರಣಗಳು, ನಿರ್ಣಯಗಳು ನಮ್ಮವಾಗಲಿ. ಪ್ರತಿ ಬೆಳಗನ್ನು ಒಂದು ಮುಗುಳ್ನಗೆಯ ನಿರ್ಣಯದೊಂದಿಗೆ ಶುರುಮಾಡಿದರೆ ಅದೇ ದೊಡ್ಡ ಬದಲಾವಣೆ ಮೂಡಿಸುತ್ತಾ ಹೋಗುತ್ತದೆ.

‘ನಾನು ನನ್ನ ಬಗ್ಗೆ ನನಗೆ ಏನೆಂದು ಹೇಳಿಕೊಳ್ಳುವುದು?’ ಅಂತ ನಿಮಗನಿಸಬಹುದು. ನೆನಪಿರಲಿ- ದಿನದಲ್ಲಿ ಮೊದಲು ನಮ್ಮನ್ನು ನಾವು ಪ್ರಭಾವಿಸಿ ಕೊಂಡರೆ, ಇಡೀ ಪ್ರಪಂಚವನ್ನೇ ಸುಲಭವಾಗಿ ಪ್ರಭಾವಿಸಿಬಿಡಬಹುದು. ಆದ್ದರಿಂದ ಈ ಕೆಳಗೆ ನೀಡಿರುವ ಸಾಲುಗಳನ್ನು ನಿಮಗೆ ನೀವೇ ಹೇಳಿಕೊಳ್ಳಿ:

? ಶ್ರೇಷ್ಠವಾದುದೇನನ್ನೋ ಸಾಧಿಸಬಲ್ಲೆ.
? ನನ್ನೊಳಗೆ ಬಹಳ ಮುಖ್ಯವಾದ ಪ್ರತಿಭೆ ಇದೆ.
? ನನ್ನೊಳಗೆ ಉನ್ನತವಾದ, ಸುಂದರವಾದ ಕನಸುಗಳಿವೆ.
? ನನ್ನ ಯಶಸ್ಸನ್ನು ನಾನು ಕಾಣಬಲ್ಲೆ, ಅನುಭವಿಸಬಲ್ಲೆ, ನಂಬಬಲ್ಲೆ.
? ನಾನೊಬ್ಬ ದೊಡ್ಡ ವಿನ್ನರ್.
? ನಾನು ಆರೋಗ್ಯವಾಗಿದ್ದೇನೆ, ಖುಷಿಯಾಗಿದ್ದೇನೆ ಹೀಗೆ ನೀವು ಹೇಳಿಕೊಳ್ಳುತ್ತಾ ಹೋದರೆ ಯಶಸ್ಸಿನೆಡೆಗೆ ಸಾಗುವುದು ದೂರ ಇರುವುದಿಲ್ಲ.

ನಮ್ಮ ಬದುಕಿನ ಶ್ರೇಷ್ಠ ‘ಚಿಯರ್ ಲೀಡರ‍್ಸ್’ ನಾವೇ. ಹಾಗೆಂದು ನಮಗೆ ನಾವೇ ಹೇಳಿಕೊಳ್ಳೋಣ, ತಪ್ಪೇನಿದೆ? ಅದೇ ದೃಢೀಕರಣವು ನಮ್ಮನ್ನು ನಾವು ನಿರ್ಣಯಿಸಿಕೊಳ್ಳುವ ಮೊದಲ ಹೆಜ್ಜೆ. ಏನಂತೀರಿ?