Friday, 20th September 2024

ಕಂಡೂ ಕಾಣದ ನೋವು ಕಂಡೀರೇನು ನೀವು ?

ವೈದ್ಯಲೋಕ

ಡಾ.ಕರವೀರಪ್ರಭು ಕ್ಯಾಲಕೊಂಡ

ಕುಷ್ಠರೋಗವು ದೀರ್ಘಕಾಲ ಬಾಧಿಸುವ ಒಂದು ಸಾಂಕ್ರಾಮಿಕ ಕಾಯಿಲೆ. ಸದ್ದಿಲ್ಲದೆ ಬಂದು ಸೇರಿ, ಗೊತ್ತಿಲ್ಲದಂತೆ ಬೆಳೆದು, ಕೈಕಾಲು- ಮೂಗನ್ನು ಮೊಂಡಾಗಿಸಿ, ವಿಕಾರ ರೂಪವನ್ನು ಬಳುವಳಿಯಾಗಿ ಕೊಟ್ಟು, ಮಾನಸಿಕ ಯಾತನೆಯಲ್ಲಿ ಸಿಲುಕಿಸಿ, ಸಮಾಜದ ಬಹಿಷ್ಕಾರಕ್ಕೆ ತುತ್ತಾಗಿ ತತ್ತರಿಸುವಂತೆ ಮಾಡಬಲ್ಲ ಸಾಮರ್ಥ್ಯ ಈ ಕಾಯಿಲೆಗಿದೆ. ಮಿಕ್ಕಾವ ಸಾಂಕ್ರಾಮಿಕ ರೋಗಗಳಲ್ಲೂ ಈ ಪರಿಸ್ಥಿತಿ ಕಂಡುಬರುವುದಿಲ್ಲ.

ಕುಷ್ಠವೆಂಬುದು ಪೂರ್ವಜನ್ಮದ ಪಾಪದ ಕೊಡುಗೆ ಎಂಬ ಮೂಢನಂಬಿಕೆ ಬಹುತೇಕರಲ್ಲಿ ಬೇರುಬಿಟ್ಟಿದೆ. ಭಾರತವು ಪುರಾತನ ಕಾಲದಿಂದಲೂ ಈ ರೋಗಕ್ಕೆ ತವರಾಗಿದ್ದು, ವೇದ, ಉಪನಿಷತ್ತು, ಸುಶ್ರುತ ಸಂಹಿತೆಯಲ್ಲೂ ಇದರ ಬಗ್ಗೆ ಉಲ್ಲೇಖವಿದೆ. ಚಾರಿತ್ರಿಕವಾಗಿ ಕುಷ್ಠರೋಗವು ೪,೦೦೦ ವರ್ಷಗಳಿಂದ ಮನುಕುಲವನ್ನು ಕಾಡಿದ್ದು, ಪುರಾತನ ಚೀನಾ, ಈಜಿಪ್ಟ್ ಮತ್ತು ಭಾರತದ ನಾಗರಿಕತೆಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಪೌರಾಣಿಕ ಕಥೆಗಳಲ್ಲಿ ಕಂಡುಬರುವಂತೆ, ಕುಷ್ಠರೋಗದಿಂದ ದೇಹದ ಭಾಗಗಳು ಉದುರಿಹೋಗುವುದಿಲ್ಲ; ಬದಲಾಗಿ ಅವು ಸ್ವಾಧೀನ ಕಳೆದುಕೊಳ್ಳುತ್ತವೆ.

ಕುಷ್ಠರೋಗಕ್ಕೆ ಇಂಗ್ಲಿಷ್‌ನಲ್ಲಿ ‘ಲೆಪ್ರಸಿ’ ಎನ್ನುತ್ತಾರೆ. ಈ ಶಬ್ದವು ಪುರಾತನ ಗ್ರೀಕ್‌ನ ‘ಲೆಪ್ರಾ’ ಎಂಬ ಶಬ್ದದಿಂದ ಹುಟ್ಟಿಕೊಂಡಿರುವಂಥದ್ದು. ಹೀಗೆಂದರೆ, ಚರ್ಮವನ್ನು ಪದರು ಪದರಾಗಿಸುವ ಕಾಯಿಲೆ ಎಂದರ್ಥ. ಹ್ಯಾನ್ಸನ್ ಎಂಬ ನಾರ್ವೆಯ ವೈದ್ಯನು ೧೮೭೩ರಲ್ಲಿ, ಕುಷ್ಠರೋಗಕ್ಕೆ ಕಾರಣ ವಾಗುವ ರೋಗಾಣುವನ್ನು ಕಂಡುಹಿಡಿದ. ಹೀಗಾಗಿ ಇದಕ್ಕೆ ‘ಹ್ಯಾನ್ಸನ್ ರೋಗ’ ಎಂದೂ ಕರೆಯುವುದುಂಟು. ಪ್ರತಿ ವರ್ಷದ ಜನವರಿ ೩೦ರಂದು ‘ವಿಶ್ವ ಕುಷ್ಠರೋಗ ದಿನ’ವನ್ನು ಆಚರಿಸಲಾಗುತ್ತದೆ. ಕುಷ್ಠರೋಗದಿಂದ ತತ್ತರಿಸಿದ ಜನರಿಗೆ ಆರೈಕೆ, ಸಹಾಯ ಮಾಡಿದ ಮಹಾತ್ಮ ಗಾಂಧಿಯವರ ಗೌರವಾ ರ್ಥವಾಗಿ ಈ ದಿನವನ್ನು ಫ್ರೆಂಚ್ ಮಾನವತಾವಾದಿ ರೌಲ್ ಪೊಲೇರಿಯೊ ಆಯ್ಕೆಮಾಡಿದರು.

ರೋಗದ ವ್ಯಾಪ್ತಿ
ಕುಷ್ಠರೋಗದ ಹಾವಳಿ ಮತ್ತು ಅದರಿಂದ ಹೊಮ್ಮಿರುವ ಹಾಹಾಕಾರ, ನಾವು ಅಂಕಿ-ಸಂಖ್ಯೆಗಳಿಂದ ತಿಳಿದುಕೊಂಡಿರುವುದಕ್ಕಿಂತಲೂ ಬಹಳ ಹೆಚ್ಚಿದೆ. ಜಾಗತಿಕ ಮಟ್ಟದಲ್ಲಿನ ಒಟ್ಟು ಕುಷ್ಠರೋಗಿಗಳ ಸಂಖ್ಯೆಗೆ ಭಾರತದ ಕೊಡುಗೆ ಗಣನೀಯವಾಗಿದೆ. ಅಂದರೆ ಪ್ರಪಂಚದ ಒಟ್ಟು ಕುಷ್ಠರೋಗಿಗಳ ಪೈಕಿ
ಶೇ.೬೦ರಷ್ಟು ಮಂದಿ ಭಾರತದಲ್ಲಿ ನೆಲೆಸಿದ್ದಾರೆಂದರೆ ಈ ರೋಗದ ಭೀಕರತೆಯ ಅರಿವು ಯಾರಿಗಾದರೂ ಆದೀತು.

ಕುಷ್ಠರೋಗವು ಒಳಗೊಂಡಿರುವ ಸಮಸ್ಯೆಯನ್ನು ಕೇವಲ ಅಂಕಿ-ಅಂಶಗಳ ಆಧಾರದ ಮೇಲೆ ನಿರೂಪಿಸಲಾಗುವುದಿಲ್ಲ; ಈ ರೋಗಕ್ಕೆ ತುತ್ತಾದವರನ್ನು ಸಾಮಾಜಿಕವಾಗಿ ದೂರವಿಡುವ ಕಾರಣ ಕುಟುಂಬಗಳೂ ಒಡೆಯುತ್ತವೆ. ಹೊಲ-ಗದ್ದೆ, ಕಾರ್ಖಾನೆ ಮುಂತಾದವುಗಳಲ್ಲಿನ ದುಡಿಮೆಯಿಂದ ರೋಗಿ
ಗಳು ವಂಚಿತರಾಗುವ ಕಾರಣ ಆಗುವ ಆರ್ಥಿಕ ನಷ್ಟವನ್ನು ಸುಲಭವಾಗಿ ಅಂದಾಜು ಮಾಡಲು ಸಾಧ್ಯವಾಗುವುದಿಲ್ಲ.

ರೋಗ ಪ್ರಸಾರ
ಮೈಕೋಬ್ಯಾಕ್ಟೀರಿಯಂ ಲೆಪ್ರೆಯ್ ಎಂಬ ರೋಗಾಣು ಕುಷ್ಠ ರೋಗಕ್ಕೆ ಕಾರಣ. ಆಕಾರ-ಅಳತೆಗಳಲ್ಲಿ ಇದು ಕ್ಷಯರೋಗದ ರೋಗಾಣುವನ್ನು ಹೋಲುತ್ತದೆ. ಸಾಮಾನ್ಯವಾಗಿ ಗುಂಪು ಗುಂಪಾಗಿ ಕಾಣಬರುವ ರೋಗಾಣುಗಳು ನೋಡಲಿಕ್ಕೆ ಸಿಗರೇಟಿನ ಕಟ್ಟಿನಂತೆ ಗೋಚರಿಸುತ್ತದೆ. ರೋಗಪ್ರಸಾರಕ್ಕೆ
ದೀರ್ಘಕಾಲಿಕ ನಿಕಟ ಸಂಪರ್ಕ ಬೇಕು ಎಂದೇನಿಲ್ಲ. ವ್ಯಕ್ತಿಯ ರೋಗಪ್ರತಿರೋಧಕ ಶಕ್ತಿ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೂಗಿನ ಸ್ರವಿಕೆಗಳ ಮುಖಾಂತರ ರೋಗಾಣುಗಳು ವಿಸರ್ಜಿಸಲ್ಪಡುತ್ತವೆ. ಇವು ಹೊರಗಿನ ಪರಿಸರದಲ್ಲಿ ೪೮-೭೨ ಗಂಟೆಗಳ ಕಾಲ ಜೀವಂತವಾಗಿರಬಲ್ಲವು. ಕುಷ್ಠರೋಗಿಯು
ಉಪಯೋಗಿಸಿದ ವಸ, ಪಾತ್ರೆ-ಪಗಡಿಗಳನ್ನು ಬಳಸುವುದ ರಿಂದಲೂ ರೋಗ ಹರಡುವುದು.

ರೋಗದ ಲಕ್ಷಣಗಳು
ಕುಷ್ಠರೋಗವು ಮಂದಗತಿಯ, ಆದರೆ ತೀವ್ರ ಪರಿಣಾಮದ ಅಂಟುರೋಗ. ಹೆಂಗಸರಿಗಿಂತ ಗಂಡಸರಲ್ಲಿ ಹಾಗೂ ೫ರಿಂದ ೧೫ ವರ್ಷ ಮತ್ತು ೨೫ರಿಂದ ೩೦ ವರ್ಷದ ಗುಂಪಿನವರಲ್ಲಿ ಇದರ ಹಾವಳಿ ಹೆಚ್ಚು ಎಂಬುದು ಇತ್ತೀಚಿನ ಅಧ್ಯಯನಗಳಿಂದ ಸಾಬೀತಾಗಿದೆ. ಹೆಚ್ಚು ಮಳೆ ಬೀಳುವ ಉಷ್ಣವಲಯ  ಪ್ರದೇಶದಲ್ಲಿ ಈ ರೋಗದ ಉಪಟಳ ಜಾಸ್ತಿ. ಬಡತನ, ನ್ಯೂನಪೋಷಣೆ, ಜನ ಸಾಂದ್ರತೆ, ಅನಾರೋಗ್ಯಕರ ಪರಿಸರ, ಮೂಢನಂಬಿಕೆ ಈ ರೋಗದ ಚಟುವಟಿಕೆಗಳಿಗೆ ಚೇತನ ನೀಡುವವು. ರೋಗದ ಲಕ್ಷಣಗಳು ನಿಧಾನವಾಗಿ ಪ್ರಾರಂಭವಾಗುವುವು.

ಮೈಕೈ ನೋವು, ಆಲಸ್ಯ, ಅನಿಶ್ಚಿತ ಅನಾರೋಗ್ಯ, ಹಸಿವಾಗದಿರುವಿಕೆ ಹಣಕಿ ಹಾಕುವುವು. ರೋಗಿಯು ಸೋಂಕಿನ ಸುಳಿಯಲ್ಲಿ ಮೇಲಿಂದ ಮೇಲೆ ಗಿರಕಿ ಹೊಡೆಯುವ ಪ್ರಯುಕ್ತ ಜ್ವರದ ಬಾಧೆಯಿಂದ ಬಸವಳಿಯಬಹುದು. ಜತೆಗೆ, ಕುಷ್ಠರೋಗದ ಒಂದಷ್ಟು ಕುರುಹುಗಳು ಕಾಣಿಸಿಕೊಳ್ಳಬಹುದು.
ಅವೆಂದರೆ, ಬಿಳಿಯ ದದ್ದು, ಅರಿವಳಿಯುವುದು, ಬೆವರು ಬಾರದಿರುವುದು, ಕೂದಲು ಉದುರುವುದು, ನರಗಳು ದಪ್ಪಗಾಗುವುದು ಇತ್ಯಾದಿ. ಚರ್ಮದ ಮೇಲೆ ಕಾಣಿಸಿಕೊಳ್ಳುವ ತಿಳಿಬಿಳಿ ಇಲ್ಲವೇ ತಾಮ್ರವರ್ಣದ ಕಲೆಗಳು ಕುಷ್ಠರೋಗದ ಪ್ರಾರಂಭಿಕ ಲಕ್ಷಣಗಳಾಗಿವೆ. ಈ ಕಲೆಗಳಲ್ಲಿ ಸ್ಪರ್ಶ, ಸಂವೇದನೆಯ ಅರಿವೇ ಇಲ್ಲದಿರುವುದರಿಂದ ಶಾಖ-ಸ್ಪರ್ಶ- ನೋವುಗಳು ಗೊತ್ತಾಗುವುದಿಲ್ಲ.

ಈ ಕಾಯಿಲೆಯ ವರ್ಗೀಕರಣ ಅನೇಕ ವರ್ಷಗಳಿಂದ ವಿವಾದಾಸ್ಪದವಾಗಿಯೇ ನಡೆದುಕೊಂಡು ಬಂದಿದೆ. ಭಾರತೀಯ ಕುಷ್ಠರೋಗ ತಜ್ಞರು ೧೯೭೧ರಲ್ಲಿ ಜಮ್ಷೆಡ್ ಪುರದಲ್ಲಿ ಸಭೆ ಸೇರಿದಾಗ, ಈ ರೋಗವನ್ನು ಆರು ವರ್ಗಗಳಾಗಿ (ಗಂತಿಯಂಥದ್ದು, ಕ್ಷಯಗಂತಿಯಂಥದ್ದು, ಅರಿವಳಿದ ಮಚ್ಚೆ ಯಂಥದ್ದು, ಬಹುನರದುರಿಯೂತದ್ದು, ಮಧ್ಯಮ ಸರಣಿ ಯದ್ದು ಮತ್ತು ಅನಿರ್ದಿಷ್ಟವಾದದ್ದು) ವಿಂಗಡಿಸಿದರು ಮತ್ತು ಇವನ್ನು ಪುನಃ ೩ ಗುಂಪುಗಳಾಗಿ (ಗಂತಿಯ ಗುಂಪು, ಗಂತಿರಹಿತ ಗುಂಪು ಮತ್ತು ಮಧ್ಯಸ್ಥ ಗುಂಪು) ಮಾಡಿದರು.

ಗಂತಿಯಂಥ ಕುಷ್ಟರೋಗ ಅತ್ಯಂತ ಭೀಕರ ಸ್ವರೂಪದ್ದು. ಈ ಪ್ರಕಾರದಲ್ಲಿ ಕಿವಿಯ ಹಾಲೆ, ಕತ್ತು, ಸೊಂಟದಲ್ಲಿ ಸಣ್ಣ ಸಣ್ಣ ಗಂಟುಗಳು ಕಾಣಿಸಿಕೊಳ್ಳು ವುವು. ಇವು ವೃಷಣಕ್ಕೆ ಮುತ್ತಿಗೆ ಹಾಕಿದಾಗ ನಪುಂಸಕತ್ವ ಉಂಟಾಗುವುದು. ಈ ಗಂಟುಗಳಿಂದ ಮುಖ ವಿಕಾರಗೊಳ್ಳುವುದು, ಚರ್ಮವು ಕೆಂಪಾಗಿ ಎಣ್ಣೆ ಬಸಿಯುವಂತೆ ಕಾಣುವುದು. ಹೀಗೆ ಒಂದೊಂದು ಬಗೆಗೂ ಒಂದೊಂದು ವೈಶಿಷ್ಟ್ಯವಿದೆ.

ರೋಗನಿದಾನ ಮತ್ತು ಚಿಕಿತ್ಸೆ
ಪೂರ್ತಿ ಬೆಳವಣಿಗೆಯಾದ ರೋಗವನ್ನು ಗುರುತಿಸುವುದು ತುಂಬಾ ಸುಲಭ. ಪ್ರಾರಂಭಿಕ ಹಂತದಲ್ಲಿ ಈ ರೋಗವನ್ನು ನಿರ್ಧರಿಸುವುದು ಕಷ್ಟ ಸಾಧ್ಯ. ರೋಗಾಣುಗಳನ್ನು ಕಂಡು ಹಿಡಿಯುವುದು ನಿರ್ದಿಷ್ಟವಾಗಿ ರೋಗನಿರ್ಣಯ ಮಾಡಲು ಸಹಾಯಕವಾಗುತ್ತದೆ. ಚರ್ಮದ ಮಾದರಿಯನ್ನು (ಬಯಾಪ್ಸಿ) ತೆಗೆದುಕೊಂಡು ಸೂಕ್ಷ್ಮದರ್ಶಕದಡಿಯಲ್ಲಿ ಪರೀಕ್ಷಿಸಿ, ಬ್ಯಾಕ್ಟೀರಿಯಾವನ್ನು ಹುಡುಕುವ ಮೂಲಕ ರೋಗ ವನ್ನು ನಿರ್ಣಯಿಸಲಾಗುತ್ತದೆ. ಚರ್ಮದ ಸ್ಮೀಯರ್, ರೋಗದ ನಿರ್ಣಯಕ್ಕೆ ಬಳಸಬಹುದಾದ ಮತ್ತೊಂದು ಪರೀಕ್ಷೆಯಾಗಿದೆ.

ಎಲಿಸಾ, ರೇಡಿಯೋ ಅಸ್ಸೆ ಪರೀಕ್ಷೆಗಳಿಂದ ಕುಷ್ಠರೋಗ ನಿರ್ಣಯ ಮಾಡಬಹುದಾಗಿದೆ. ರೋಗಿಯು ರೋಗದ ಯಾವ ಹಂತದಲ್ಲಿದ್ದಾನೆ ಎಂಬುನ್ನು ತಿಳಿಯಲು ಲೆಪ್ರೊಮಿನ್ ಪರೀಕ್ಷೆ ಉಪಯುಕ್ತ. ವೈದ್ಯರು ಕುಷ್ಠರೋಗಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಸಹನೆ ಮತ್ತು ಸತತ ಪ್ರಯತ್ನದಿಂದ ಉಪಚರಿಸಬೇಕು ಹಾಗೂ ಬಹು ಔಷಧ ಚಿಕಿತ್ಸೆಯನ್ನು ನೀಡಬೇಕು. ರೋಗಿಯ ಸಾಮಾನ್ಯ ಆರೋಗ್ಯ ಮತ್ತು ಆಹಾರದತ್ತ ಗಮನ ಕೊಡಬೇಕು.

ಸೋಂಕುಕಾರಕ ರೋಗಿಗಳು ಇತರರ ಸಂಪರ್ಕಕ್ಕೆ ಬರದಂತೆ ಪ್ರತ್ಯೇಕಿಸಬೇಕು. ರೋಗಿಗಳಿಗೆ ಜೀವಸತ್ವ ಮತ್ತು ಕಬ್ಬಿಣಾಂಶಗಳು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು. ರೋಗಿಗಳಲ್ಲಿ ಸೋಂಕು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸುವವರೆಗೆ ನಿಶ್ಚಿತ ಚಿಕಿತ್ಸೆಯನ್ನು ಮುಂದುವರಿಸಬೇಕು. ನಿಷ್ಕ್ರಿಯತೆ ರುಜುವಾತಾದ ಮೇಲೂ ಚಿಕಿತ್ಸೆಯನ್ನು ಒಂದು ವರ್ಷ ಕಾಲ ಮುಂದುವರಿಸಿ ನಂತರವೇ ಹತೋಟಿಯಿಂದ ಬಿಟ್ಟು ಕೊಡಬೇಕು. ಚಿಕಿತ್ಸೆ ಯಶಸ್ವಿಯಾಗ ಬೇಕೆಂದರೆ ನಿಯತ ಕ್ರಮದಂತೆ ಔಷಧದ ಸೇವನೆ ಅತಿಮುಖ್ಯ. ಔಷಧ ಸೇವನೆಯಲ್ಲಿ ನಿರ್ಲಕ್ಷ್ಯ ತೋರುವವರನ್ನು ಬೇಗ ಪತ್ತೆ ಹಚ್ಚಿ ಪುನಃ ಅವರು ಚಿಕಿತ್ಸಾಕ್ರಮವನ್ನು ಶುರುಮಾಡುವಂತೆ ನೋಡಿಕೊಳ್ಳದಿದ್ದರೆ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ವಿಫಲವಾಗುತ್ತದೆ.

ಪ್ರತಿಬಂಧಕ ಉಪಾಯಗಳು
೮ಸೋಂಕುಕಾರಕ ರೋಗಿಯನ್ನು ಪ್ರತ್ಯೇಕಿಸಿ, ಗುಣಮುಖವಾಗುವವರೆಗೆ ಸಂಪೂರ್ಣ ಚಿಕಿತ್ಸೆ ನೀಡುವುದು. ೮ ರೋಗಿಯ ನಿಕಟವರ್ತಿಗಳನ್ನು, ಅದರಲ್ಲೂ ನಿರ್ದಿಷ್ಟವಾಗಿ ಮಕ್ಕಳನ್ನು ಸಂಭಾವ್ಯ ರೋಗದ ಚಿಹ್ನೆಗಾಗಿ ಕಾಲಕಾಲಕ್ಕೆ ಪರೀಕ್ಷಿಸುವುದರಿಂದ, ಹೊಸ ರೋಗಿಗಳನ್ನು ಕಂಡು ಹಿಡಿಯುವ ಕಾರ್ಯ ಚುರುಕುಗೊಳ್ಳುವುದು. ೮ಕುಷ್ಠರೋಗಕ್ಕೆಂದೇ ನಿಶ್ಚಿತ ಲಸಿಕೆ ಸದ್ಯ ಲಭ್ಯವಿಲ್ಲ. ಕುಷ್ಠರೋಗದಿಂದ ರಕ್ಷಿಸುವಲ್ಲಿ ಬಿಸಿಜಿ ಲಸಿಕೆ ಸಹಾಯಕ
ವಾಗುವುದು ಎಂದು ಅಧ್ಯಯನಗಳು ಸಾಬೀತುಪಡಿಸಿವೆ. ಆದ್ದರಿಂದ ಎಲ್ಲ ಮಕ್ಕಳಿಗೆ ಬಿಸಿಜಿ ಲಸಿಕೆಯನ್ನು ಕೊಡಿಸುವುದು.

೮ಆರೋಗ್ಯ ಶಿಕ್ಷಣ ನೀಡುವ ಮೂಲಕ ಕುಷ್ಠರೋಗದ ಬಗೆಗಿನ ತಪ್ಪುಕಲ್ಪನೆಗಳು, ಮೂಢನಂಬಿಕೆಗಳನ್ನು ನಿವಾರಿಸುವುದು. ‘ಕುಷ್ಠರೋಗಿಗಳನ್ನು ಪ್ರೀತಿ-ವಿಶ್ವಾಸದಿಂದ ನೋಡಿಕೊಂಡು ಅವರ ಆತ್ಮಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳುತ್ತೇನೆ. ಕುಷ್ಠರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯ ವನ್ನು ಹೋಗಲಾಡಿಸಲು ಬದ್ಧನಾಗಿರುತ್ತೇನೆ. ಕುಷ್ಠ ರೋಗಿಗಳು ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತ ವಾಗಿ ಬದು
ಕಲು ಅವಕಾಶ ಮಾಡಿಕೊಡುತ್ತೇನೆ. ಕುಷ್ಠರೋಗವು ಸಂಪೂರ್ಣ ಗುಣಪಡಿಸಬಹುದಾದ ರೋಗ ಎಂಬ ಮಾಹಿತಿಯನ್ನು ಸಮಾಜಕ್ಕೆ ನೀಡುತ್ತೇನೆ. ಮಹಾತ್ಮ ಗಾಂಧಿಯವರ ಕನಸಾದ ಕುಷ್ಠರೋಗ-ಮುಕ್ತ ಭಾರತ ಕಟ್ಟಲು ಕಾಯಾ-ವಾಚಾ- ಮನಸಾ ಶ್ರಮಿಸುತ್ತೇನೆ’ ಎಂದು ಇಂದು ಪ್ರತಿಜ್ಞೆ ಮಾಡೋಣ, ಅದರಂತೆಯೇ ನಡೆದುಕೊಳ್ಳೋಣ. ಆಗ ಕುಷ್ಠರೋಗಿಗಳ ಬಾಳಲ್ಲೂ ಬೆಳಕು ಕಂಡೀತು.

(ಲೇಖಕರು ವಿಶ್ರಾಂತ ಜಿಲ್ಲಾ ಶಸ್ತ್ರಚಿಕಿತ್ಸಕರು)