ರಾಮರಥ
ಯಗಟಿ ರಘು ನಾಡಿಗ್
naadigru@gmail.com
‘ಅಗ್ನಿಪರೀಕ್ಷೆಯ ಸತ್ವಪರೀಕ್ಷೆಗೆ ಗುರಿಯಾದಳು ಸೀತೆ, ಅಗ್ನಿಯೆ ದಹಿಸದೆ ಘೋಷಿಸಿದ ಸೀತೆ ಪುನೀತೆ’ ಎಂದು ಹೇಳುತ್ತದೆ ಗೀತೆಯೊಂದರ ಸಾಲು. ಆದರೆ ಸೀತೆಯು ಅಗ್ನಿಪರೀಕ್ಷೆಗೆ ಒಳಗಾಗುವುದಕ್ಕೆ ಕಾರಣವಾದ ಸಂದರ್ಭವಾದರೂ ಯಾವುದು? ಅದರ ಹಿಂದಿನ ಧರ್ಮಸೂಕ್ಷ್ಮವೇನು? ಈ ಸತ್ವಪರೀಕ್ಷೆಗೆ ಸೀತೆಯನ್ನು ಮುಂದುಮಾಡುವ ಮೂಲಕ ಶ್ರೀರಾಮ ಜಗತ್ತಿಗೆ ಕಾಣಪಡಿಸಿದ ಸತ್ಯವಾದರೂ ಯಾವುದು?
‘ಸರ್ವಗುಣ ಸಂಪನ್ನ, ಆದರ್ಶ ವ್ಯಕ್ತಿ, ಮರ್ಯಾದಾ ಪುರುಷೋತ್ತಮ ಎಂದೆಲ್ಲ ಕರೆಸಿಕೊಂಡಿದ್ದ ಶ್ರೀರಾಮನು, ರಾವಣ ಸಂಹಾರದ ನಂತರ ಅಶೋಕ ವನದಲ್ಲಿನ ಬಂಧನದಿಂದ ಸೀತೆಯ ಬಿಡುಗಡೆಯಾದಾಗ ಹೃದಯಪೂರ್ವಕವಾಗಿ ಸ್ವೀಕರಿಸದೆ, ಆಕೆಯ ಶೀಲವನ್ನು ಶಂಕಿಸಿದ್ದು ಸರಿಯೇ?’- ಇದು ನಾಸ್ತಿಕರನ್ನಿರಲಿ, ಶ್ರದ್ಧಾವಂತ ಭಕ್ತರನ್ನೂ ಒಮ್ಮೊಮ್ಮೆ ಕಾಡುವ ಪ್ರಶ್ನೆ.
ಅದು ಸಹಜವೇ! ಅನ್ಯಾಯದ-ಅಧರ್ಮದ ಕೃತ್ಯಗಳಿಂದ ದೂರವಿದ್ದ, ಧರ್ಮದ ಮೂರ್ತರೂಪವೇ ಆಗಿದ್ದ ಶ್ರೀರಾಮನ ಕುರಿತಾಗಿ ರಾಮಾಯಣದ ಒಂದಷ್ಟು ಕಡೆ
ಹೊಮ್ಮುವ ಪುಟ್ಟ ಸಂಶಯಗಳಲ್ಲಿ ಇದೂ ಒಂದು. ‘ಸ್ತ್ರೀ ಶೋಷಣೆ’, ‘ಮಹಿಳಾ ಸ್ವಾತಂತ್ರ್ಯದ ದಮನ’ ಇತ್ಯಾದಿ ಹಣೆಪಟ್ಟಿಗಳನ್ನು ಲಗತ್ತಿಸಿ ಕೆಲವು ತಥಾಕಥಿತ ವಿಚಾರವಾದಿಗಳು ರಾಮನ ಹೀಗಳಿಕೆಗೆ ಮುಂದಾಗಿಬಿಟ್ಟರಂತೂ, ‘ಛೇ! ನಮ್ ರಾಮ ಹೀಗೆ ಮಾಡಬಾರದಾಗಿತ್ತು’ ಎಂಬ ಉದ್ಗಾರವು ‘ಭಗವಂತನನ್ನು ಸ್ನೇಹಿತನಂತೆ ಪರಿಗಣಿಸಿದ’ ಕೆಲವರಿಂದ ಅಪ್ರಯತ್ನವಾಗಿ ಹೊಮ್ಮುವುದಿದೆ. ಇದಕ್ಕೆಲ್ಲ ಕಾರಣ, ಈ ಘಟನೆಯ ಹಿನ್ನೆಲೆಯಲ್ಲಿರುವ ‘ಧರ್ಮ ಸೂಕ್ಷ್ಮ’ವನ್ನು ಸ್ವೀಕರಿಸಿ ಜೀರ್ಣಿಸಿಕೊಳ್ಳಲಾಗದ ಚಿತ್ತಸ್ಥಿತಿ.
ಸಾಲದೆಂಬಂತೆ, ಕೆಲವರು ರಾಮಾಯಣದ ಒಂದಷ್ಟು ಪಾತ್ರಗಳು, ಸಂದರ್ಭಗಳಿಗೆ ತಮ್ಮದೇ ಆದ ತರ್ಕ, ಊಹೆಯನ್ನೆಲ್ಲ ಬೆರೆಸಿ ‘ವಿಚಾರವಾದದ ಮೂಸೆ’ಯಲ್ಲಿಟ್ಟು ‘ತಿರುಚಿದ ಪಾಠಾಂತರ’ವನ್ನು ಸೃಷ್ಟಿಸಿದ್ದೂ ಜನರಲ್ಲಿ ಗೊಂದಲ ಹುಟ್ಟಿಸಿರಲಿಕ್ಕೂ ಸಾಕು. ಅಗಣಿತ ಗುಣಧಾಮ ರಾಮನಲ್ಲಿ ಅಪರಿಮಿತ ವಿಶ್ವಾಸವಿಟ್ಟವರಲ್ಲಿನ ನಂಬಿಕೆಯ ಗೋಡೆ ಕೆಡವಲು ‘ರಾಮ-ನಿಂದಕರಿಗೂ, ‘ಸಂಸ್ಕೃತಿ -ಭಂಜಕ’ರಿಗೂ ಇಷ್ಟೇ ಸಾಕಲ್ಲವೇ?! ‘ಪಂಚ ಮಹಾ ಪತಿವ್ರತೆಯರಲ್ಲಿ ಒಬ್ಬಳೆನಿಸಿದ್ದ ಸೀತೆಯ ಶೀಲವನ್ನೇ ಶಂಕಿಸಿದ ನಿಮ್ಮ ರಾಮ ಅದ್ಯಾವ ಸೀಮೆಯ ದೇವರು? ಅವಳು ಅಗ್ನಿಕುಂಡಕ್ಕೆ ಧುಮುಕುವಂಥ ಸನ್ನಿವೇಶವನ್ನು ರಾಮ ಸೃಷ್ಟಿಸಿದ್ದು ಸೀ ಶೋಷಣೆಯ ಪರಮಾವಧಿಯಲ್ಲವೇ?’ ಎಂಬೆಲ್ಲಾ ಟೀಕಾಪ್ರಹಾರವನ್ನು ಇಂಥ ವೇಳೆ ರಾಮಭಕ್ತರು ಕೇಳಿಸಿಕೊಂಡಿರಲಿಕ್ಕೂ ಸಾಕು.
ಸ್ವಯಂ ಪರಿಪೂರ್ಣ ಕಾವ್ಯವೆನಿಸಿರುವ ವಾಲ್ಮೀಕಿ ರಾಮಾ ಯಣದಲ್ಲೇ ಈ ಗೊಂದಲಕ್ಕೆ ಉತ್ತರ ಸಿಗುತ್ತದೆ.
ಸೀತೆಯ ಅಗ್ನಿಪ್ರವೇಶದ ಘಟನೆಗೂ ಮುನ್ನ, ಅದರ ಹಿನ್ನೆಲೆಯನ್ನೊಮ್ಮೆ ಅವಲೋಕಿಸೋಣ: ರಾವಣನನ್ನು ರಾಮ ಸಂಹರಿಸಿದ ನಂತರ ಯುದ್ಧ ಸಂಪನ್ನವಾಗುತ್ತದೆ. ನಂತರ, ಪರಮಸಾತ್ವಿಕನೂ ರಾವಣನ ಮತ್ತೋರ್ವ ಸೋದರನೂಆದ ವಿಭೀಷಣನಿಗೆ ಪಟ್ಟಾಭಿಷೇಕ ಮಾಡುವ ರಾಮ ಅವನಿಗೆ ವಿಧಿವತ್ತಾಗಿ ರಾಜ್ಯಾಡಳಿತದ ಅಧಿಕಾರವನ್ನು ವಹಿಸಿಕೊಡುತ್ತಾನೆ. ನಂತರ ಹನುಮಂತನನ್ನು ಕರೆದು, ‘ಅಶೋಕವನದಲ್ಲಿರುವ ಸೀತೆಯ ಬಳಿಗೆ ತೆರಳಿ, ರಾಮನು ಕುಶಲವಾಗಿರುವನೆಂದೂ ರಾವಣನ ವಧೆಯಾಯಿತೆಂದೂ ತಿಳಿಸಿ, ಅವಳ ಸಂದೇಶವನ್ನು ಪಡೆದು ಬಾ’ ಎಂದು ಸೂಚಿಸುತ್ತಾನೆ. ಅದರಂತೆಯೇ ಹನುಮಂತ ಸೀತೆಗೆ ಮಾಹಿತಿ ನೀಡಿ ಅವಳ ಸಂದೇಶ ಕೋರಿದಾಗ, ‘ನಾನು ಈಗಿಂದೀಗಲೇ ರಾಮನನ್ನು ನೋಡಬಯಸುತ್ತೇನೆ’ ಎಂದಷ್ಟೇ ಉದ್ಗರಿಸು
ತ್ತಾಳೆ ಸೀತೆ.
ಈ ಮಾಹಿತಿ ಮುಟ್ಟುತ್ತಿದ್ದಂತೆ ರಾಮನ ಕಣ್ಣು ಗಳು ನೀರಿನ ಕೊಳಗಳಾಗುತ್ತವೆ. ಆದರೂ, ಅರೆಕ್ಷಣದಲ್ಲೇ ಆ ಸ್ಥಿತಿಯಿಂದ ಹೊರಬಂದು, ‘ಸೀತೆಯನ್ನು ತಕ್ಷಣವೇ
ಕರೆತನ್ನಿ’ ಎಂದು ಆದೇಶಿಸುತ್ತಾನೆ. ಅಂತೆಯೇ, ಸೀತೆ ಸಂತಸದಿಂದಲೇ ಓಡೋಡಿ ಬಂದು ರಾಮನ ಪಕ್ಕದಲ್ಲಿ ನಿಲ್ಲುತ್ತಾಳೆ; ಪ್ರೀತಿ-ವಾತ್ಸಲ್ಯದ ಮಾತು
ಗಳನ್ನು ಅವನಿಂದ ನಿರೀಕ್ಷಿಸುತ್ತಾಳೆ. ಆದರೆ ರಾಮನಿಂದ ಹೊಮ್ಮಿದ್ದು ತದ್ವಿರುದ್ಧ ವರ್ತನೆ, ಕಠೋರ ನುಡಿ. “ಸೀತೆ, ಯುದ್ಧಭೂಮಿಯಲ್ಲಿ ವೈರಿಯನ್ನು ಪೌರುಷದಿಂದ ಮಣಿಸಿ ನಿನ್ನನ್ನು ಮರುವಶ ಮಾಡಿಕೊಂಡಿದ್ದೇನೆ. ಆದರೆ ಈ ಗೆಲುವು ನಿನಗಾಗಿ ಅಲ್ಲ; ‘ಅಪಹೃತ ಪತ್ನಿಯನ್ನು ಬಿಡಿಸಿಕೊಂಡು ಬರಲಾಗದವನು, ಪತ್ನಿಯ ಅಪಹರಣಕಾರನನ್ನು ಎದುರಿಸಲಾಗದವನು’ ಎಂಬ ಕಳಂಕ ನನ್ನನ್ನು ಮೆತ್ತಿಕೊಳ್ಳಬಾರದುಎಂಬ ಕಾರಣ ನಡೆದ ಯುದ್ಧವಿದು, ದಕ್ಕಿದ ಜಯವಿದು.
ಆದರೆ ಸೀತೆ, ನಿನ್ನ ಚಾರಿತ್ರ್ಯದಲ್ಲಿಯೇ ನನಗೆ ಶಂಕೆಯುಂಟಾಗುತ್ತಿದೆ. ಸೌಂದರ್ಯದ ಗಣಿಯೇ ಆದ ನಿನ್ನನ್ನು ಕಂಡ ವ್ಯಾಮೋಹಿ ರಾವಣ ತನ್ನ ಕಾಮವನ್ನು ನಿಗ್ರಹಿಸಿಕೊಂಡಿರಲು ಸಾಧ್ಯವೇ ಇಲ್ಲ; ಉತ್ತಮ ಕುಲದಲ್ಲಿ ಹುಟ್ಟಿದ ಯಾರು ತಾನೇ, ಪರಪುರುಷನ ನೆಲೆಯಲ್ಲಿ ಹೀಗೆ ದೀರ್ಘಕಾಲವಿದ್ದ ಪತ್ನಿಯನ್ನು ಸ್ವೀಕರಿಸಿಯಾರು? ಆಡಿಕೊಳ್ಳುವ ಬಾಯಿಗಳು ರಘುಕುಲದ ಪೌರುಷವನ್ನು ಕೀಳಂದಾಜು ಮಾಡಬಾರದೆಂಬ ಒಂದೇ ಕಾರಣಕ್ಕೆ ಈ ಯುದ್ಧ ಮಾಡಿದೆನೇ ವಿನಾ, ನಿನಗಾಗಿ ಅಲ್ಲ. ನಿನ್ನಲ್ಲಿ ನನಗಾವ ಪ್ರೇಮವೂ ಇಲ್ಲ, ನಿನಗಿಷ್ಟ ಬಂದಲ್ಲಿ ಹೋಗಬಹುದು’ ಎಂಬ ಕಟುನುಡಿಗಳು ರಾಮನಿಂದ ಹೊಮ್ಮಿದಾಗ ಧರಣಿಜಾತೆ ಸೀತೆ ಅಕ್ಷರಶಃ ಧರೆಗೆ ಕುಸಿಯುತ್ತಾಳೆ.
ಕಾರಣ, ರಾಮ ಯಾವತ್ತೂ ಅಂಥ ಕೀಳು ಮಾತಾಡಿದವನಲ್ಲ, ಇತರರು ಎದುರಿಗೆ ಇದ್ದಾಗಲಂತೂ ಹೀಗೆ ಸೊಲ್ಲೆತ್ತಿದವನಲ್ಲ. ಸೀತೆ ಕಣ್ಣೀರುಗರೆಯುತ್ತಾ, ‘ಪ್ರಭೂ, ಯಾರೋ ನೀತಿಗೆಟ್ಟ ಹೆಣ್ಣನ್ನು ಕಂಡು ಅದೇ ತಕ್ಕಡಿಯಲ್ಲಿ ನನ್ನನ್ನೂ ತೂಗುತ್ತಿರುವಿರಾ? ನಿಮ್ಮ ಗ್ರಹಿಕೆ ತಪ್ಪು. ರಾವಣ ಅಪಹರಿಸಿದಾಗ ನಾನು ಅಬಲೆಯಾಗಿದ್ದೆ, ಅಸಮರ್ಥೆಯಾಗಿದ್ದೆ. ಆತ ಹೊತ್ತೊಯ್ಯುವಾಗ ನನಗೆ ಪರಪುರುಷನ ದೇಹಸ್ಪರ್ಶವಾಗಿದ್ದು ನಿಜವಾದರೂ, ನನ್ನ ಮನಸ್ಸು ನನ್ನ ಅಧೀನದಲ್ಲೇ ಇತ್ತು ಮತ್ತು ಅದರ ತುಂಬಾ ನೀವೇ ತುಂಬಿದ್ದಿರಿ.
ಇಷ್ಟಾಗಿಯೂ ನನ್ನನ್ನು ನಿಂದಿಸುತ್ತಿರುವಿರಲ್ಲಾ? ಅಗ್ನಿಸಾಕ್ಷಿ ಯಾಗಿ ಕೈಹಿಡಿದಾಕೆಯಲ್ಲೇ ನಂಬಿಕೆ ಕಳೆದುಕೊಂಡಿದ್ದೀರಿ ಎಂದಾದರೆ, ಅಗ್ನಿಪ್ರವೇಶವೇ ನನಗಿರುವ ಏಕೈಕ ದಾರಿ’ ಎನ್ನುತ್ತಾಳೆ. ಅದಕ್ಕೆ ರಾಮನ ಸಮ್ಮತಿ ದೊರೆತು ಅಗ್ನಿಕುಂಡ ಸಜ್ಜಾಗುತ್ತದೆ. ಅದಕ್ಕೆ ಪ್ರದಕ್ಷಿಣೆ ಹಾಕುವ ಸೀತೆ, ‘ನನ್ನ ಹೃದಯವು ಪ್ರಭು ಶ್ರೀರಾಮರನ್ನು ಬಿಟ್ಟು ಅರೆಕ್ಷಣವೂ ಕದಲದಿರುವುದೇ ನಿಜವಾದರೆ, ಅಗ್ನಿದೇವ ನನ್ನನ್ನು ರಕ್ಷಿಸಲಿ’ ಎಂದು ಪ್ರತಿಜ್ಞೆಗೈದು ಬೆಂಕಿಗೆ ಧುಮುಕುತ್ತಾಳೆ. ರಾಮ
ಅಪ್ರಯತ್ನವಾಗಿ ಕಣ್ಣೀರಾಗುತ್ತಾನೆ…ನಂತರ ನಡೆದಿದ್ದೇ ಅಗ್ನಿಪರೀಕ್ಷೆ… ಅದು ಬೆಂಕಿಯ ಕುಲುಮೆಯಿಂದ ಪುಟಕ್ಕಿಟ್ಟ ಚಿನ್ನವಾಗಿ ಸೀತೆ ಹೊರ ಬರಬೇಕಾಗಿದ್ದ ಸತ್ವಪರೀಕ್ಷೆ. ರಾಮ-ಲಕ್ಷ್ಮಣರೂ ಸೇರಿದಂತೆ ಸುತ್ತಲೂ ನೆರೆದಿದ್ದವರ ಕಣ್ಣುಗಳು ಅಗ್ನಿಕುಂಡದ ಮೇಲೇ ನೆಟ್ಟಿದ್ದವು. ಅದು ಕೆಲ ಕ್ಷಣಗಳಷ್ಟೇ. ಮನುಷ್ಯರೂಪ ತಳೆದು ಸೀತೆಯನ್ನು ಮಡಿಲಲ್ಲಿಟ್ಟುಕೊಂಡು ಕುಂಡದಿಂದ ಮೇಲೆದ್ದು ಬಂದ ‘ಹವ್ಯವಾಹನ’ ಅಗ್ನಿದೇವ, ‘ಶ್ರೀರಾಮಾ, ಕಾಯಾ-ವಾಚಾ-ಮನಸಾ ನಿನ್ನನ್ನು ಮೀರಿ ನಡೆದವಳಲ್ಲ ಸೀತೆ.
ರಾವಣ ತನ್ನನ್ನು ಬಲವಂತವಾಗಿ ಹೊತ್ತೊಯ್ದಾಗಲೂ ನಿನ್ನನ್ನಷ್ಟೇ ನೆನೆಯುತ್ತಿದ್ದ ಸದಾಚಾರನಿರತೆ ಸೀತೆ. ಅತ್ಯಂತ ಪರಿಶುದ್ಧಳಾದ ಈಕೆಯನ್ನು ಮರು ಮಾತಾಡದೇ ಸ್ವೀಕರಿಸು’ ಎಂದು ಹೇಳಿ ಸೀತೆಯನ್ನು ರಾಮನಿಗೆ ಒಪ್ಪಿಸುತ್ತಾನೆ. ಆಗ ರಾಮನು ಅಗ್ನಿಗೆ ನಮಸ್ಕರಿಸಿ, “ಸೀತೆಯ ಚಾರಿತ್ರ್ಯ, ಪಾತಿವ್ರತ್ಯದ ವಿಷಯದಲ್ಲಿ ಯಾರೂ ಅನುಮಾನಿಸಲಾಗದು. ಆದರೆ ರಾವಣನ ನೆಲೆಯಲ್ಲಿ ಸುದೀರ್ಘ ಕಾಲವಿದ್ದ ಅವಳನ್ನು ನಿಕಷಕ್ಕೆ ಒಡ್ಡದೆಯೇ ಸ್ವೀಕರಿಸಿದ್ದಿದ್ದರೆ, ‘ಅವಿವೇಕಿ ರಾಮನು ಕಾಮಾತುರನಾಗಿ, ಸೀತೆಯನ್ನು ಪರೀಕ್ಷಿಸದೆಯೇ ಪರಿಗ್ರಹಿಸಿಬಿಟ್ಟ’ ಎಂದು ಆಡಿಕೊಳ್ಳುವ ಮೂಲಕ ಜನರೇ ಅವಳ ಶೀಲವನ್ನು ಶಂಕಿಸಿಬಿಡುತ್ತಿದ್ದರು.
ನನ್ನನ್ನೇ ನಂಬಿರುವ, ನನ್ನಲ್ಲೇ ಮನವಿಟ್ಟಿರುವ, ನನ್ನಿಚ್ಛೆ ಯಂತೆಯೇ ನಡೆಯುವ ಸೀತೆ ಪರಮಪಾವನೆಯೆಂಬುದು ನನಗೆ ಗೊತ್ತಿದ್ದರೂ, ಆ ಸತ್ಯವು ಜಗತ್ತಿನೆ ದುರು ಪ್ರಕಟವಾಗಲೆಂಬ ಕಾರಣಕ್ಕೇ ಅಗ್ನಿಪರೀಕ್ಷೆಗೆ ನಾನು ಅಡ್ಡಿಪಡಿಸಲಿಲ್ಲ.
ಸ್ವತಃ ಬೆಂಕಿಯಾಗಿರುವ ಸೀತೆಯನ್ನು ಮುಟ್ಟಲೂ ರಾವಣನಿಗೆ ಸಾಧ್ಯವಿರಲಿಲ್ಲ; ಅಂಥ ಸೀತೆಯನ್ನು ಪರಿತ್ಯಜಿಸುವುದು ದೂರದ ಮಾತು’ ಎನ್ನುತ್ತಾನೆ.
ತನಗಲ್ಲದಿದ್ದರೂ ನಿಂದಕರ ನಿಮಿತ್ತವಾಗಿ ಸೀತೆಯ ಚಾರಿತ್ರ್ಯವನ್ನು ಅನುಮಾನಿಸಿದ್ದ ರಾಮನೇ ಅದಕ್ಕೆ ಕಾರಣ ನೀಡಿ, ‘ಪ್ರಾಣವಲ್ಲಭೆ ಪರಮಪಾವನಿ’ ಎಂದು ಸಮರ್ಥಿಸಿಕೊಂಡಿದ್ದಾನೆ. ಆದರೆ, ಅಶೋಕ ವನದಿಂದ ಬಿಡುಗಡೆ ಗೊಂಡು ಓಡೋಡಿ ಬಂದು ತನ್ನ ಪಕ್ಕದಲ್ಲಿ ನಿಂತ ಸೀತೆಯನ್ನುದ್ದೇಶಿಸಿ ಆತ ಹಾಗೆ ಕಟುನುಡಿಗಳನ್ನು ಆಡದಿದ್ದಿದ್ದರೆ ಆಕೆಯ ಅಗ್ನಿಪ್ರವೇಶವೂ ಆಗುತ್ತಿರಲಿಲ್ಲ, ಪರಿಶುದ್ಧತೆ – ಪಾತಿವ್ರತ್ಯಗಳೂ ಸಾಬೀತಾಗುತ್ತಿರಲಿಲ್ಲ. ಜತೆಗೆ, ಆಡಿಕೊಳ್ಳುವ ಬಾಯಿಗಳು ಸೀತೆಯ ಶೀಲವನ್ನು ಶಂಕಿಸುವುದೂ ನಿಲ್ಲುತ್ತಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ, ತ್ರೇತಾಯುಗದಂಥ ಪುರಾತನ ಕಾಲಘಟ್ಟದಲ್ಲಿ ‘ಅಗ್ನಿಪ್ರವೇಶ’ ಎಂಬುದು ಗಟ್ಟಿಕಾಳು ಮತ್ತು ಜೊಳ್ಳುಕಾಳನ್ನು ಕಂಡುಹಿಡಿಯುವುದಕ್ಕಿರುವ ಉತ್ಕೃಷ್ಟ ಮಾರ್ಗೋಪಾಯವಾಗಿತ್ತು.
ಅಗ್ನಿಪರೀಕ್ಷೆಗೆ ಒಳಗಾಗಿದ್ದರಿಂದಲೇ ಸೀತೆ ‘ಪುಟಕ್ಕಿಟ್ಟ ಚಿನ್ನ’ ಎಂಬುದು ಲೋಕದ ಮುಂದೆ ಸಾಬೀತಾಯಿತು. ಈ ಅಗ್ನಿಪರೀಕ್ಷೆಯಿಂದ ಸತ್ಯದರ್ಶನವಾ ಗಬೇಕಿದ್ದುದು ಲೋಕದ ಕಣ್ಣಿಗೇ ವಿನಾ, ರಾಮನ ಅಂತರಂಗದ ಕಣ್ಣುಗಳಿಗಲ್ಲ. ಹೀಗಾಗಿ, ಸೀತೆಯನ್ನು ಅಗ್ನಿಪರೀಕ್ಷೆಗೆ ದೂಡುವಂಥ ಪರಿಸ್ಥಿತಿಯನ್ನು
ಸೃಷ್ಟಿಸುವ ಮೂಲಕ ರಾಮ ತಪ್ಪನ್ನೇನೂ ಮಾಡಲಿಲ್ಲ. ಆದ್ದರಿಂದ, ಯಾರೇ ಆಗಲಿ, ರಾಮನ ವ್ಯಕ್ತಿತ್ವದಲ್ಲಿ ಇಲ್ಲದ ದೋಷಗಳನ್ನು ಹುಡುಕುವ, ಅವನೆಡೆಗೆ ಬೆರಳು
ಮಾಡಿ ಇನ್ನಿಲ್ಲದ ಆರೋಪ ಹೊರಿಸುವ ಕಸರತ್ತಿಗೆ ಮುಂದಾಗುವುದಕ್ಕೂ ಮುನ್ನ, ಒಂದಿಡೀ ಮೂಲ ರಾಮಾಯಣವು ಕಟ್ಟಿಕೊಟ್ಟಿರುವ ರಾಮನ ಗುಣ-ಸ್ವಭಾವಗಳು, ಧರ್ಮ ಭೀರು ನಡೆ, ಕರ್ತವ್ಯದಿಂದ ವಿಮುಖನಾಗದಿರುವಿಕೆ, ಕೊಟ್ಟ ವಚನಕ್ಕೆ ತಪ್ಪದಿರುವಿಕೆ ಇವೇ ಮೊದಲಾದ ವೈಶಿಷ್ಟ್ಯಗಳನ್ನೊಮ್ಮೆ ಕೂಲಂಕಷವಾಗಿ ಗಮನಿಸಬೇಕು.
ಅದನ್ನು ಬಿಟ್ಟು, ಯಾವುದೋ ಒಂದು ಘಟನೆಯೆಡೆಗೆ ಮೇಲುಮೇಲಿನ ನೋಟ ಬೀರಿ, ತಮ್ಮ ಬೊಗಸೆಗೆ ದಕ್ಕಿದ ನೀರನ್ನಷ್ಟೇ ಸಮುದ್ರ ಎಂದು ಭಾವಿಸಿ, ‘ರಾಮ’ ಮತ್ತು ‘ರಾಮಾಯಣ’ ಎಂಬೆರಡು ಅದ್ಭುತ ಪರಿಕಲ್ಪನೆಗಳೆಡೆಗೆ ಕೂರಂಬುಗಳನ್ನು ತೂರಬಾರದು. ಹಾಗೆ ಮಾಡಿದಲ್ಲಿ ಅದು ಆಕಾಶದೆಡೆಗೆ ಮುಖ ಮಾಡಿ ಉಗುಳು ಕಾರಿದಂತೆ ಆಗುತ್ತದಷ್ಟೇ! ಅಗ್ನಿಪರೀಕ್ಷೆಗೆ ತಾನು ಸಮ್ಮತಿಸಿದ್ದೇಕೆ ಎಂಬುದನ್ನು ಅಗ್ನಿದೇವನ ಜತೆಗಿನ ತನ್ನ ಮಾತಿನಲ್ಲೇ ರಾಮ ಸ್ಪಷ್ಟೀಕರಿಸಿದ್ದಾನೆ. ಧರ್ಮಪರಾಯ ಣನೂ, ಸೀಪರ ವಾದಿಯೂ ಆಗಿದ್ದ ಶ್ರೀರಾಮನು ಸ್ತ್ರೀ ಶೋಷಣೆಗೆ ಮುಂದಾಗುತ್ತಾನೆ ಎಂಬುದನ್ನು ಕಲ್ಪಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ.
ಲೌಕಿಕ ದೃಷ್ಟಿಗೆ ಹಾಗೆ ಕಂಡಿ ದ್ದರೂ ಅದರ ಹಿನ್ನೆಲೆಯಲ್ಲಿ ರಾಮನ ಮಹತ್ತರ ಸದಾಶ ಯವೇ ಇರುತ್ತದೆ ಎಂಬುದನ್ನು ಮರೆಯ ಲಾಗದು. ಸೀತೆ ಯನ್ನು ಯಾರೂ
ನಿಂದಿಸುವಂತಾಗಬಾರದು ಎಂಬ ರಾಮನ ಕಾಳಜಿಯೇ ಅಗ್ನಿಪರೀಕ್ಷೆಯಂಥ ಸವಾಲಿಗೆ ಅವಳನ್ನು ಮುಂದು ಮಾಡು ತ್ತದೆ ಎಂಬುದನ್ನು ಮರೆಯದಿರೋಣ.
(ಲೇಖಕರು ಪತ್ರಕರ್ತರು)