ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಸರಕಾರಿ ಕಚೇರಿಗಳಲ್ಲಿ ನನ್ನ ಫೋಟೋ ಬೇಡ ಎಂದ ಸೆನೆಗಲ್‌ ಅಧ್ಯಕ್ಷರು !

ಬಸಿರು ಡಿಯೋಮಯೆ ಫಾಯೆ ಸೆನೆಗಲ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡರು. ಅವರು ಕೇವಲ ೪೪ ವರ್ಷ ವಯಸ್ಸಿನವರಾಗಿದ್ದು, ಆಫ್ರಿಕಾದ ಅತ್ಯಂತ ಕಿರಿಯ ಅಧ್ಯಕ್ಷರಲ್ಲಿ ಒಬ್ಬರು. ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾಗಿ ಮತ್ತು ವ್ಯವಸ್ಥೆಯ ಬದಲಾವಣೆಯ ಪ್ರತಿಪಾದಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ಅವರ ಆ ಒಂದು ಹೇಳಿಕೆ ಅವರು ಪ್ರತಿಪಾದಿಸುವ ಮೌಲ್ಯಗಳು ಮತ್ತು ಆಡಳಿತ ವೈಖರಿಗೆ ಕನ್ನಡಿಯಾಗಿದೆ. ಅಷ್ಟಕ್ಕೂ ಬಸಿರು ಡಿಯೋಮಯೆ ಫಾಯೆ ಹೇಳಿದ್ದಾದರೂ ಏನು?

ಸರಕಾರಿ ಕಚೇರಿಗಳಲ್ಲಿ ನನ್ನ ಫೋಟೋ ಬೇಡ ಎಂದ ಸೆನೆಗಲ್‌ ಅಧ್ಯಕ್ಷರು !

ಇದೇ ಅಂತರಂಗ ಸುದ್ದಿ

vbhat@me.com

ಸೆನೆಗಲ್‌ನ ನೂತನ ಯುವ ಅಧ್ಯಕ್ಷ ಬಸಿರು ಡಿಯೋಮಯೆ ಫಾಯೆ ಅವರ ಹೇಳಿಕೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ಗಮನಿಸಿರಬಹುದು. ಪ್ರೇರಣಾದಾಯಕ ಮತ್ತು ನಾಯಕತ್ವಕ್ಕೆ ಹೊಸ ಆಯಾಮ ನೀಡುವ ಅವರ ಈ ಹೇಳಿಕೆ ಆಳವಾದ ಅರ್ಥ ಮತ್ತು ಸಂದೇಶವನ್ನು ಹೊಂದಿರುವುದು ಗಮನಾರ್ಹ.

ಏಪ್ರಿಲ್ 2, 2024ರಂದು ಬಸಿರು ಡಿಯೋಮಯೆ ಫಾಯೆ ಸೆನೆಗಲ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿ ಕೊಂಡರು. ಅವರು ಕೇವಲ 44 ವರ್ಷ ವಯಸ್ಸಿನವರಾಗಿದ್ದು, ಆಫ್ರಿಕಾದ ಅತ್ಯಂತ ಕಿರಿಯ ಅಧ್ಯಕ್ಷರಲ್ಲಿ ಒಬ್ಬರು. ಭ್ರಷ್ಟಾಚಾರ ವಿರೋಧಿ ಹೋರಾಟಗಾರರಾಗಿ ಮತ್ತು ವ್ಯವಸ್ಥೆಯ ಬದಲಾವಣೆಯ ಪ್ರತಿಪಾದಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ಅವರ ಆ ಒಂದು ಹೇಳಿಕೆ ಅವರು ಪ್ರತಿಪಾದಿಸುವ ಮೌಲ್ಯಗಳು ಮತ್ತು ಆಡಳಿತ ವೈಖರಿಗೆ ಕನ್ನಡಿಯಾಗಿದೆ. ಅಷ್ಟಕ್ಕೂ ಬಸಿರು ಡಿಯೋಮಯೆ ಫಾಯೆ ಹೇಳಿದ್ದಾದರೂ ಏನು? ‘ನಾನು ಸರಕಾರಿ ಕಚೇರಿಗಳಲ್ಲಿ ಅಥವಾ ನಿಮ್ಮ ಕಚೇರಿಗಳಲ್ಲಿ ನನ್ನ ಪೋಟೋವನ್ನು ನೋಡಲು ಬಯಸುವುದಿಲ್ಲ. ಏಕೆಂದರೆ ನಾನು ದೇವರೂ ಅಲ್ಲ ಅಥವಾ ಐಕಾನ್ ಅಲ್ಲ. ನಾನು ಈ ದೇಶದ ಸೇವಕ. ಬದಲಾಗಿ, ಕಚೇರಿಯಲ್ಲಿ ನಿಮ್ಮ ಮಕ್ಕಳ ಫೋಟೋಗಳನ್ನು ಹಾಕಿ. ಆಫೀಸುಗಳಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದಾಗಲೆಲ್ಲ ಆ ಫೋಟೋವನ್ನು ನೋಡಿ ಮತ್ತು ಯಾವುದೇ ರೀತಿಯಲ್ಲಿ ಕದಿಯುವ, ಭ್ರಷ್ಟಾಚಾರದ ಪ್ರಲೋಭನೆ ಉದ್ಭವಿಸಿದರೆ, ನಿಮ್ಮ ಕುಟುಂಬದ ಆ ಫೋಟೋವನ್ನು ಮತ್ತೊಮ್ಮೆ ಆಳವಾಗಿ ನೋಡಿ. ನಿಮ್ಮ ಕುಟುಂಬವು ಈ ದೇಶವನ್ನು ವಂಚಿಸಿದ ಕಳ್ಳನ ಕುಟುಂಬ ಎಂದು ಕರೆಸಿಕೊಳ್ಳಲು ಬಯಸುತ್ತದೆಯೇ ಎಂದು ನಿಮ್ಮನ್ನು ಕೇಳಿಕೊಳ್ಳಿ’ ಎಂದು ಅವರು ಹೇಳಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

ಸಾಮಾನ್ಯವಾಗಿ ನಾಯಕರು ತಮ್ಮ ಪ್ರತಿಮೆಗಳನ್ನು ಅಥವಾ ಫೋಟೋಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಬಯಸುತ್ತಾರೆ. ಇದು ಅಧಿಕಾರ ಮತ್ತು ವೈಭವದ ಸಂಕೇತ. ಆದರೆ ಫಾಯೆ ಅವರು ಇದನ್ನು ನಿರಾಕರಿಸುವ ಮೂಲಕ ತಮ್ಮ ವಿನಮ್ರತೆಯನ್ನು ಪ್ರದರ್ಶಿಸಿದ್ದಾರೆ. ಅವರು ತಮ್ಮನ್ನು ಜನರಿಂದ ಪ್ರತ್ಯೇಕಿಸದೇ, ಅವರಲ್ಲಿ ಒಬ್ಬರಾಗಿ, ಅವರ ಸೇವಕನಾಗಿ ಗುರುತಿಸಿಕೊಳ್ಳಲು ಬಯಸಿರುವುದು ವಿಶೇಷ.

ಇದನ್ನೂ ಓದಿ: Vishweshwar Bhat Column: ಆಪ್ತ ಕಾರ್ಯದರ್ಶಿ ಹೆಚ್ಚು ಆಪ್ತರಾದರೆ ಎಷ್ಟು ಆಪತ್ತು !

ಅನೇಕ ದೇಶಗಳಲ್ಲಿ, ವಿಶೇಷವಾಗಿ ಆಫ್ರಿಕಾದಲ್ಲಿ, ನಾಯಕರು ‘ಮಹಾಪುರುಷ’ ಅಥವಾ ‘ರಾಷ್ಟ್ರದ ಪಿತಾಮಹ’ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುವುದನ್ನು ಇಷ್ಟಪಡುತ್ತಾರೆ. ಇದು ವ್ಯಕ್ತಿ ಆರಾಧನೆಗೆ ದಾರಿ ಮಾಡಿಕೊಡುತ್ತದೆ. ಫಾಯೆ ಅವರು ಇದನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ, ಇದರಿಂದಾಗಿ ಅಧಿಕಾರ ದುರ್ಬಳಕೆಗೆ ಅವಕಾಶವಿರಬಾರದು ಎಂದು ಸೂಚಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಾಯಕರು ಜನರ ಪ್ರತಿನಿಧಿಗಳು, ಅಧಿಪತಿಗಳಲ್ಲ. ಫಾಯೆ ಅವರ ಹೇಳಿಕೆ ಪ್ರಜಾಪ್ರಭುತ್ವದ ಈ ಮೂಲಭೂತ ತತ್ವವನ್ನು ಎತ್ತಿಹಿಡಿಯುತ್ತದೆ. ಅವರು ‘ಸೇವಕ’ ಎಂದು ತಮ್ಮನ್ನು ಕರೆದುಕೊಂಡಿರು ವುದು, ಅಧಿಕಾರವು ಜನರ ಒಳಿತಿಗಾಗಿ ಇರುವ ಒಂದು ಸಾಧನ ಎಂಬುದನ್ನು ಒತ್ತಿ ಹೇಳುತ್ತದೆ.

ತಮ್ಮ ಚಿತ್ರದ ಬದಲು ಸರಕಾರಿ ನೌಕರರ ಮಕ್ಕಳ ಚಿತ್ರವನ್ನು ಕಚೇರಿಯಲ್ಲಿ ಇಡಲು ಹೇಳುವ ಮೂಲಕ, ಫಾಯೆ ಅವರು ಪ್ರತಿಯೊಬ್ಬ ಸಾರ್ವಜನಿಕ ಸೇವಕರೂ ತಮ್ಮ ವೈಯಕ್ತಿಕ ಮತ್ತು ಕೌಟುಂಬಿಕ ಜವಾಬ್ದಾರಿಗಳ ಮೂಲಕ ದೇಶದ ಬಗ್ಗೆ ಚಿಂತಿಸುವಂತೆ ಪ್ರೇರೇಪಿಸಿದ್ದಾರೆ. ತಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ತಮ್ಮ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿಸಲು ಇದು ಒಂದು ಮಾರ್ಗ.

‘ಕದಿಯುವ ಪ್ರಲೋಭನೆ ಉದ್ಭವಿಸಿದರೆ, ನಿಮ್ಮ ಕುಟುಂಬದ ಆ ಫೋಟೋವನ್ನು ಆಳವಾಗಿ ನೋಡಿ...’ ಎಂಬ ಮಾತು ಪ್ರಬಲವಾದ ನೈತಿಕ ಕರೆ. ಒಬ್ಬ ಅಧಿಕಾರಿ ಲಂಚ ತೆಗೆದುಕೊಳ್ಳಲು ಅಥವಾ ಸಾರ್ವಜನಿಕ ಸಂಪತ್ತನ್ನು ದುರುಪಯೋಗಪಡಿಸಿಕೊಳ್ಳಲು ಯೋಚಿಸಿದಾಗ, ಅವರ ಕಣ್ಣೆದುರು ತಮ್ಮ ಮಕ್ಕಳ ನಗುತ್ತಿರುವ ಫೋಟೋ ಬರಬೇಕು. ಆ ಫೋಟೋವನ್ನು ನೋಡಿದಾಗ, ‘ನಾನು ಭ್ರಷ್ಟನಾಗಿ ಗುರುತಿಸಿಕೊಂಡರೆ ನನ್ನ ಮಕ್ಕಳ ಭವಿಷ್ಯ ಏನಾಗುತ್ತದೆ? ಅವರ ಹೆಸರಿಗೆ ಕಳಂಕ ತರುತ್ತೇನೆಯೇ?’ ಎಂದು ಪ್ರಶ್ನಿಸಿಕೊಳ್ಳಲು ಇದು ಪ್ರೇರೇಪಿಸುತ್ತದೆ.

senegal president Faye R

ಇದೊಂದು ಸಾಮಾನ್ಯ ಹೇಳಿಕೆಯಲ್ಲ. ಒಬ್ಬ ವ್ಯಕ್ತಿಯು ತನ್ನ ಕಾರ್ಯಗಳ ಮೂಲಕ ತನ್ನ ಕುಟುಂಬದ ಗೌರವವನ್ನು ಎತ್ತಿಹಿಡಿಯಬೇಕೇ ಅಥವಾ ಕಳಂಕ ತರಬೇಕೇ ಎಂಬುದನ್ನು ನಿರ್ಧರಿಸುವಂತೆ ಇದು ಉತ್ತೇಜಿಸುತ್ತದೆ. ಭ್ರಷ್ಟಾಚಾರವು ಕೇವಲ ವ್ಯಕ್ತಿಗೆ ಸೀಮಿತವಾಗಿರದೇ, ಆತನ ಕುಟುಂಬದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂಬ ಅರಿವನ್ನು ಮೂಡಿಸುತ್ತದೆ. ಇದು ಸಾರ್ವಜನಿಕ ಸೇವಕರು ತಮ್ಮ ವೃತ್ತಿಜೀವನದಲ್ಲಿ ಪ್ರಾಮಾಣಿಕವಾಗಿರಲು ಒಂದು ಬಲವಾದ ಕಾರಣವನ್ನು ನೀಡುತ್ತದೆ.

ಒಟ್ಟಾರೆ, ಈ ಹೇಳಿಕೆ ಪಾರದರ್ಶಕ, ಪ್ರಾಮಾಣಿಕ ಮತ್ತು ನೈತಿಕ ಆಡಳಿತದ ಕಡೆಗಿನ ಫಾಯೆ ಅವರ ಬದ್ಧತೆಯನ್ನು ತೋರಿಸುತ್ತದೆ. ಸಾರ್ವಜನಿಕ ಸೇವೆಯಲ್ಲಿರುವವರು ಕೇವಲ ನಿಯಮಗಳನ್ನು ಪಾಲಿಸುವುದಷ್ಟೇ ಅಲ್ಲದೆ, ವೈಯಕ್ತಿಕ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಸೆನೆಗಲ್‌ನ ಅಧ್ಯಕ್ಷರ ಈ ಹೇಳಿಕೆಯು ಕೇವಲ ಒಂದು ದೇಶಕ್ಕೆ ಸೀಮಿತವಾಗದೆ, ಜಗತ್ತಿನಾದ್ಯಂತದ ನಾಯಕರು ಮತ್ತು ಸಾರ್ವಜನಿಕ ಸೇವಕರಿಗೆ ಒಂದು ಆದರ್ಶಪ್ರಾಯ ಸಂದೇಶ ವಾಗಿದೆ. ಇದು ಅಧಿಕಾರದ ವೈಭವಕ್ಕಿಂತ ಜನಸೇವೆಗೆ ಹೆಚ್ಚು ಒತ್ತು ನೀಡುವ ಅಗತ್ಯವನ್ನು ಸಾರುತ್ತದೆ.

ಅದು ನರಮಂಡಲವಿದ್ದಂತೆ!

ಕೆಲ ದಿನಗಳ ಹಿಂದೆ ನನಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪರಿಚಿತ ಪೈಲಟ್ ಒಬ್ಬರ ಜತೆ ಪ್ರಯಾಣ ಮಾಡುವ ಅವಕಾಶ ಸಿಕ್ಕಿತ್ತು. ಅಂದು ಅವರು ಡ್ಯೂಟಿಯಲ್ಲಿ ಇರಲಿಲ್ಲ. ಪತ್ನಿಯೊಂದಿಗೆ ಪ್ರವಾಸ ಹೊರಟಿದ್ದರು. ಒಂದೇ ವಿಮಾನದಲ್ಲಿ ಸಿಂಗಾಪುರಕ್ಕೆ ಪ್ರಯಾಣಿಸುತ್ತಿದ್ದೆವು. ಸಹಜವಾಗಿ ನಮ್ಮ ಮಾತುಕತೆ ಎರಡು ದಿನಗಳ ಹಿಂದೆಯಷ್ಟೇ ಸಂಭವಿಸಿದ ಏರ್ ಇಂಡಿಯಾ ಅಹಮದಾಬಾದ್ ದುರಂತದ ಬಗ್ಗೆ ಹರಿಯಿತು. ಅವರು ದುರಂತಕ್ಕೆ ತಮ್ಮದೇ ಕಾರಣಗಳನ್ನು ನೀಡಿದರು. ನಂತರ ನಮ್ಮ ಮಾತುಕತೆ ವಿಮಾನದಲ್ಲಿರುವ ತಂತಿಗಳ ( Wires) ಕಡೆ ಹೋಯಿತು.

ಅವರು ನೀಡಿದ ವಿವರಗಳು ನನ್ನಲ್ಲಿ ಬೆರಗು ಹುಟ್ಟಿಸಿದವು. ಅವರು ಹೇಳಿದ ಸಂಗತಿಗಳನ್ನು ನಾನು ಅರ್ಥ ಮಾಡಿಕೊಂಡಂತೆ ಹೇಳುತ್ತೇನೆ. ವಿಮಾನದ ವೈರ್‌ಗಳು ಸಹಜವಾಗಿ ವಿದ್ಯುತ್ ವ್ಯವಸ್ಥೆಯ ಜೀವನಾಡಿಗಳು. ಇವು ವಿಮಾನದ ಪ್ರತಿಯೊಂದು ಭಾಗಕ್ಕೂ ವಿದ್ಯುತ್ ಶಕ್ತಿಯನ್ನು ಪೂರೈಸಲು, ಮಾಹಿತಿ ವರ್ಗಾಯಿಸಲು ಮತ್ತು ನಿಯಂತ್ರಣ ಸಂಕೇತಗಳನ್ನು ಕಳುಹಿಸಲು ಅತ್ಯಗತ್ಯ.

ವಿಮಾನದ ಸುರಕ್ಷಿತ ಕಾರ್ಯಾಚರಣೆಗೆ ಈ ವೈರಿಂಗ್ ವ್ಯವಸ್ಥೆ ಅತ್ಯಂತ ನಿರ್ಣಾಯಕ. ವಿಮಾನ ದಲ್ಲಿ ಬಳಸುವ ತಂತಿಗಳು ಸಾಮಾನ್ಯ ವಿದ್ಯುತ್ ತಂತಿಗಳಿಗಿಂತ ಹೆಚ್ಚು ವಿಶೇಷವಾಗಿರುತ್ತವೆ. ಇವುಗಳನ್ನು ಅತ್ಯಂತ ಕಠಿಣ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಲಾಗುತ್ತದೆ. ಏಕೆಂದರೆ ವಿಮಾನವು ಎತ್ತರದಲ್ಲಿ ಹಾರುವಾಗ, ತಾಪಮಾನದ ವ್ಯತ್ಯಾಸ, ಕಂಪನಗಳು ಮತ್ತು ತೇವಾಂಶದಂಥ ವಿಪರೀತ ವಾತಾವರಣಗಳಿಗೆ ಒಳಪಡುತ್ತದೆ.

6 R

ವಿಮಾನದ ಪ್ರತಿಯೊಂದು ಸಣ್ಣ ಭಾಗದಿಂದ ಹಿಡಿದು ದೊಡ್ಡ ಎಂಜಿನ್‌ಗಳವರೆಗೆ ಎಲ್ಲವೂ ಈ ತಂತಿಗಳ ಮೂಲಕ ಸಂಪರ್ಕ ಹೊಂದಿರುತ್ತವೆ. ವಿಮಾನದಲ್ಲಿ ಹಗುರ ಮತ್ತು ಬಲಶಾಲಿ ತಂತಿ ಗಳನ್ನು ಬಳಸಲಾಗುತ್ತದೆ. ವಿಮಾನದ ತೂಕ ಕಡಿಮೆ ಮಾಡುವುದು ಬಹಳ ಮುಖ್ಯ. ಹೀಗಾಗಿ ತಂತಿಗಳನ್ನು ಹಗುರವಾದ ವಸ್ತುಗಳಿಂದ ತಯಾರಿಸಲಾಗುತ್ತದೆ, ಆದರೆ ಅವು ಸಾಕಷ್ಟು ಬಲಶಾಲಿ ಯಾಗಿಯೂ ಇರಬೇಕು. ವಿಮಾನವು ವಿವಿಧ ಎತ್ತರಗಳಲ್ಲಿ ಮತ್ತು ತಾಪಮಾನಗಳಲ್ಲಿ ಹಾರುತ್ತದೆ.

ಆದ್ದರಿಂದ, ತಂತಿಗಳು ಅತಿ ಹೆಚ್ಚು ಮತ್ತು ಅತಿ ಕಡಿಮೆ ತಾಪಮಾನಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ತಂತಿಗಳನ್ನು ಉತ್ತಮ ಗುಣಮಟ್ಟದ ವಿದ್ಯುತ್ ನಿರೋಧಕ ವಸ್ತು ಗಳಿಂದ ಸುತ್ತಲಾಗುತ್ತದೆ. ಇದು ಶಾರ್ಟ್ ಸರ್ಕ್ಯೂಟ್‌ಗಳನ್ನು ತಡೆಗಟ್ಟಲು ಮತ್ತು ಬೆಂಕಿಯ ಅಪಾಯವನ್ನು ಕಡಿಮೆ ಮಾಡಲು ಸಹಾಯಕ. ವಿಮಾನದ ಎಂಜಿನ್‌ಗಳು ನಿರಂತರವಾಗಿ ಕಂಪಿಸುತ್ತಿರುತ್ತವೆ.

ಇದರಿಂದ ತಂತಿಗಳು ಸವೆದುಹೋಗುವುದನ್ನು ತಡೆಯಲು ಅವುಗಳನ್ನು ವಿಶಿಷ್ಟ ವಸ್ತುಗಳಿಂದ ಮತ್ತು ವಿನ್ಯಾಸದಿಂದ ತಯಾರಿಸಲಾಗುತ್ತದೆ. ಹಾಗೆ ಕಂಪನದಿಂದ ಸಂಪರ್ಕ ಕಡಿದು ಹೋಗಬಾರದು. ತಂತಿಗಳನ್ನು ವಿಮಾನದ ಸಂಕೀರ್ಣ ಭಾಗಗಳಲ್ಲಿ ಸುಲಭವಾಗಿ ಅಳವಡಿಸಲು ಅವುಗಳು ಹೆಚ್ಚು ಮೃದುವಾಗಿರಬೇಕು. ವಿಮಾನದಲ್ಲಿ ವಿವಿಧ ಉದ್ದೇಶಗಳಿಗಾಗಿ ವಿವಿಧ ರೀತಿಯ ತಂತಿಗಳನ್ನು ಬಳಸಲಾಗುತ್ತದೆ.

ಉದಾಹರಣೆಗೆ, ವಿದ್ಯುತ್ ಸರಬರಾಜು ತಂತಿಗಳು ( Power Distribution Wires). ಇವು ವಿಮಾನದ ವಿವಿಧ ಸಿಸ್ಟಮ್‌ಗಳಿಗೆ ವಿದ್ಯುತ್ ಶಕ್ತಿಯನ್ನು ಪೂರೈಸುತ್ತವೆ. ಇವು ಹೆಚ್ಚಿನ ವೋಲ್ಟೇಜ್ ಮತ್ತು ಕರೆಂಟ್ ಅನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರಬೇಕು. ಇನ್ನೊಂದು, ಡೇಟಾ ಕೇಬಲ್‌ ಗಳು. ಇವು ವಿಮಾನದ ಸೆನ್ಸರ್‌ಗಳು, ಕಂಪ್ಯೂಟರ್‌ಗಳು ಮತ್ತು ಇತರ ಇಲೆಕ್ಟ್ರಾನಿಕ್ ಉಪಕರಣಗಳ ನಡುವೆ ಡಾಟಾವನ್ನು ವರ್ಗಾಯಿಸುತ್ತವೆ.

ಮತ್ತೊಂದು, ನಿಯಂತ್ರಣ ತಂತಿಗಳು. ಇವು ವಿಮಾನದ ಪೈಲಟ್‌ನ ನಿಯಂತ್ರಣ ಸಂಕೇತಗಳನ್ನು ರೆಕ್ಕೆಗಳು, ರಡಾರ್ ಮತ್ತು ಇತರ ನಿಯಂತ್ರಣ ಮೇಲ್ಮೈಗಳಿಗೆ ರವಾನಿಸುತ್ತವೆ. ಇವುಗಳ ವಿಶ್ವಾಸಾರ್ಹತೆ ಅತ್ಯಂತ ಮುಖ್ಯ. ಜತೆಗೆ, ಸಂವೇದಕ ತಂತಿಗಳು ( Sensor Wires). ವಿಮಾನ ದೊಳಗಿನ ಮತ್ತು ಹೊರಗಿನ ಪರಿಸ್ಥಿತಿಗಳನ್ನು ಅಳೆಯುವ ಸಂವೇದಕಗಳಿಂದ (ತಾಪಮಾನ, ಒತ್ತಡ, ವೇಗ ಇತ್ಯಾದಿ) ಮಾಹಿತಿಯನ್ನು ಕೇಂದ್ರ ವ್ಯವಸ್ಥೆಗೆ ಕಳುಹಿಸಲು ಇವುಗಳನ್ನು ಬಳಸಲಾಗುತ್ತದೆ.

ವಿಮಾನದಲ್ಲಿ ಆಪ್ಟಿಕ್ ಫೈಬರ್ ಕೇಬಲ್‌ಗಳ ( Optic Fiber Cables)ನ್ನು ಸಹ ಬಳಸಲಾಗುತ್ತದೆ. ಇತ್ತೀಚಿನ ವಿಮಾನಗಳಲ್ಲಿ, ವೇಗದ ಡಾಟಾ ವರ್ಗಾವಣೆ ಮತ್ತು ವಿದ್ಯುತ್ ಹಸ್ತಕ್ಷೇಪವನ್ನು ( (electrical interference) ಕಡಿಮೆ ಮಾಡಲು ಆಪ್ಟಿಕ್ ಫೈಬರ್ ಕೇಬಲ್‌ಗಳನ್ನು ಹೆಚ್ಚಾಗಿ ಬಳಸ ಲಾಗುತ್ತದೆ. ವಿಮಾನದ ತಂತಿ ವ್ಯವಸ್ಥೆಯು ಅತ್ಯಂತ ಸಂಕೀರ್ಣ ವಾಗಿರುತ್ತದೆ ಮತ್ತು ಅದರ ನಿರ್ವಹಣೆ ಬಹಳ ಮುಖ್ಯ. ಯಾವುದೇ ಸಣ್ಣ ಹಾನಿ ಅಥವಾ ದೋಷವು ಗಂಭೀರ ಪರಿಣಾಮ ಗಳನ್ನು ಉಂಟುಮಾಡಬಹುದು.

ಆದ್ದರಿಂದ, ವಿಮಾನದ ತಂತಿಗಳನ್ನು ನಿಯತವಾಗಿ ಪರಿಶೀಲಿಸಲಾಗುತ್ತದೆ, ದುರಸ್ತಿ ಮಾಡಲಾಗು ತ್ತದೆ ಮತ್ತು ಅಗತ್ಯವಿದ್ದಲ್ಲಿ ಬದಲಾಯಿಸಲಾಗುತ್ತದೆ. ಇತ್ತೀಚೆಗೆ ನಡೆದ ಕೆಲವು ವಿಮಾನ ಅಪಘಾತ ಗಳಲ್ಲಿ ತಂತಿ ವ್ಯವಸ್ಥೆಯಲ್ಲಿನ ದೋಷಗಳು ಒಂದು ಕಾರಣವಾಗಿವೆ ಎಂಬುದನ್ನು ಗಮನದಲ್ಲಿಟ್ಟು ಕೊಂಡು, ಅವುಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಒಂದು ವಿಮಾನದಲ್ಲಿ ಇರುವ ತಂತಿಯ ಉದ್ದವಾದರೂ ಎಷ್ಟು? ಒಂದು ವಿಮಾನದಲ್ಲಿ ಬಳಸುವ ತಂತಿಗಳ ಒಟ್ಟು ಉದ್ದವು ಆ ವಿಮಾನದ ಗಾತ್ರ, ಮಾದರಿ ಮತ್ತು ಅದರ ತಾಂತ್ರಿಕ ಸಂಕೀರ್ಣತೆ ಯನ್ನು ಅವಲಂಬಿಸಿರುತ್ತದೆ.

ಆಧುನಿಕ ದೊಡ್ಡ ಪ್ರಯಾಣಿಕ ವಿಮಾನಗಳಲ್ಲಿ ಇದು ನೂರಾರು ಕಿಲೋಮೀಟರ್‌ಗಳಷ್ಟು ಇರುತ್ತದೆ. ಸೋಜಿಗವೆಂದರೆ, ಬೋಯಿಂಗ್ 747 ವಿಮಾನದಲ್ಲಿ ಸುಮಾರು 200 ರಿಂದ 270 ಕಿ.ಮೀ. ಉದ್ದದ ವಿದ್ಯುತ್ ತಂತಿಗಳು ಇರುತ್ತವೆ. ಏರ್‌ಬಸ್ ಎ-380 ವಿಮಾನ ವಿಶ್ವದ ಅತಿದೊಡ್ಡ ಪ್ರಯಾಣಿಕ ವಿಮಾನಗಳಲ್ಲಿ ಒಂದಾಗಿದ್ದು ಇದರಲ್ಲಿ ಸುಮಾರು 530 ಕಿ.ಮೀ. (330 ಮೈಲಿ) ಗಳಷ್ಟು ಉದ್ದದ ವಿದ್ಯುತ್ ತಂತಿಗಳು ಇರುತ್ತವೆ! ಈ

ತಂತಿಗಳ ಸಂಕೀರ್ಣತೆಯಿಂದಾಗಿಯೇ ಎ-380 ವಿಮಾನದ ಉತ್ಪಾದನೆಯಲ್ಲಿ ಆರಂಭದಲ್ಲಿ ವಿಳಂಬವಾಗಿತ್ತು. ಬೋಯಿಂಗ್ 787 ಡ್ರೀಮ್‌ಲೈನರ್ ಹೆಚ್ಚು ಆಧುನಿಕ ವಿಮಾನವಾಗಿದ್ದರೂ, ಹಿಂದಿನ ಮಾದರಿಗಳಿಗಿಂತ ಕಡಿಮೆ ತಂತಿಗಳನ್ನು ಹೊಂದಿದೆ. ಸುಮಾರು 100 ಕಿ.ಮೀ. ಉದ್ದದ ತಂತಿಗಳಿವೆ.

ಏಕೆಂದರೆ ಇದು ಹೆಚ್ಚು ವಿದ್ಯುತ್ ಮತ್ತು ನೆಟ್‌ವರ್ಕ್ ಆಧಾರಿತ ವ್ಯವಸ್ಥೆಗಳನ್ನು ಬಳಸುತ್ತದೆ. ಈ ತಂತಿಗಳು ವಿಮಾನದ ಪ್ರತಿಯೊಂದು ಭಾಗವನ್ನೂ ಸಂಪರ್ಕಿಸುತ್ತವೆ- ಎಂಜಿನ್‌ಗಳು, ಕಾಕ್‌ಪಿಟ್ ನಿಯಂತ್ರಣಗಳು, ಮನರಂಜನಾ ವ್ಯವಸ್ಥೆಗಳು, ಬೆಳಕು, ಸಂವಹನ ವ್ಯವಸ್ಥೆಗಳು ಮತ್ತು ಸಾವಿರಾರು ಸಂವೇದಕಗಳು. ಇವು ವಿಮಾನವು ಸುರಕ್ಷಿತವಾಗಿ ಮತ್ತು ಸಮರ್ಥವಾಗಿ ಕಾರ್ಯನಿರ್ವಹಿಸಲು ಅವಶ್ಯಕವಾಗಿವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ವಿಮಾನದ ತಂತಿಗಳು ಅದರ ಮಿದುಳು ಮತ್ತು ನರಮಂಡಲ ವಿದ್ದಂತೆ, ಅದು ವಿಮಾನದ ಪ್ರತಿಯೊಂದು ಕ್ರಿಯೆಯನ್ನು ಸುಗಮವಾಗಿ ನಡೆಯುವಂತೆ ನೋಡಿ ಕೊಳ್ಳುತ್ತದೆ.

ಹೀಗೊಂದು ಜಾಹೀರಾತು

ಇತ್ತೀಚೆಗೆ ಸ್ನೇಹಿತರೊಬ್ಬರು ವಾಟ್ಸಾಪ್‌ನಲ್ಲಿ ಕಳಿಸಿದ ಪ್ರಸಂಗವಿದು: ವಿದೇಶಿ ಪತ್ರಿಕೆಯೊಂದರಲ್ಲಿ ಒಂದು ವಿಶಿಷ್ಟ ಜಾಹೀರಾತು ಪ್ರಕಟಗೊಂಡಿತ್ತು. ಅದರ ಶೀರ್ಷಿಕೆ ಹೀಗಿತ್ತು- ವೃದ್ಧ ದಂಪತಿ ಬೇಕಾಗಿದ್ದಾರೆ. ಅವರು ನಮ್ಮ ಜತೆಯಲ್ಲಿ ಇರಬೇಕು. ಆ ಜಾಹೀರಾತಿಗೆ ಪ್ರತಿಕ್ರಿಯೆ ಬಂತು. ವೃದ್ಧೆ ಯೊಬ್ಬರು ಕರೆ ಮಾಡಿ ಕೇಳಿದರು- ‘ನಿಮ್ಮ ಜಾಹೀರಾತನ್ನು ಓದಿದೆವು. ನಿಮ್ಮ ಜತೆಯಲ್ಲಿ ನಾವು ಇರಲು ಸಿದ್ಧ. ಆದರೆ ನಾವು ಯಾವ ಯಾವ ಕೆಲಸ ಮಾಡಬೇಕು’.

ಜಾಹೀರಾತು ನೀಡಿದವರು ಹೇಳಿದರು- ‘ನೀವು ಏನೂ ಕೆಲಸ ಮಾಡಬೇಕಿಲ್ಲ. ನಾನು ಮತ್ತು ನನ್ನ ಪತ್ನಿ ಇಬ್ಬರೂ ವೈದ್ಯರಾಗಿದ್ದೇವೆ. ನಾವು ದಿನ ಬೆಳಗ್ಗೆ ಕೆಲಸಕ್ಕೆ ಹೋಗುತ್ತೇವೆ, ರಾತ್ರಿ ಬರುತ್ತೇವೆ. ನಮ್ಮ ತಾಯಿ ಇತ್ತೀಚೆಗೆ ನಿಧನರಾದರು. ನಮಗೆ ತಂದೆ-ತಾಯಿ ಆಗಿ ಇರುವುದೇ ನಿಮ್ಮ ಕೆಲಸ. ಮನೆಯಲ್ಲಿ ಎಲ್ಲ ಕೆಲಸಕ್ಕೂ ಸೇವಕರಿದ್ದಾರೆ. ಆದರೆ ನಮ್ಮನ್ನು ಕೇಳುವವರು ಯಾರೂ ಇಲ್ಲ. ಮಕ್ಕಳೇ ಇಂದು ತಡವಾಗಿ ಏಕೆ ಬಂದಿರಿ? ಊಟ ಮಾಡಿದಿರೋ ಇಲ್ಲವೋ ಎಂದೆಲ್ಲ ನಮ್ಮನ್ನು ಕೇಳುವವರೇ ಇಲ್ಲ. ಕೆಲಸ ಮುಗಿಸಿ ಮನೆಗೆ ಬಂದಾಗ ನಮ್ಮನ್ನು ಪ್ರೀತಿ-ವಾತ್ಸಲ್ಯಗಳಿಂದ ಮಾತನಾಡಿಸುವವರು ನಮಗೆ ಬೇಕು. ಈ ಕೆಲಸ ಮಾಡಲು ಸಾಧ್ಯವಾ?’

ಈ ಮಾತುಗಳನ್ನು ಕೇಳುತ್ತಿದ್ದಂತೆ ವೃದ್ಧ ದಂಪತಿಗಳ ಕಣ್ಣುಗಳು ತೇವಗೊಂಡವು. ಅವರು ಆ ಕೆಲಸಕ್ಕೆ ಹೋದರೋ ಇಲ್ಲವೋ ಎಂಬುದು ಮುಖ್ಯವಲ್ಲ. ಜಗತ್ತಿನ ವಿಚಿತ್ರ ಹೇಗಿದೆ ಎಂದರೆ, ಯಾರ ಮನೆಯಲ್ಲಿ ವೃದ್ಧ ತಂದೆ-ತಾಯಿಯರು ಇರುವರೋ ಅವರ ಬಗ್ಗೆ ಮಕ್ಕಳಿಗೆ ಕಾಳಜಿಯೇ ಇಲ್ಲ. ಯಾರ ಮನೆಯಲ್ಲಿ ತಂದೆ-ತಾಯಿ ಇಲ್ಲವೋ ಅವರು, ‘ಅಯ್ಯೋ ಅಪ್ಪ ಇರಬೇಕಿತ್ತು, ಅಯ್ಯೋ ಅಮ್ಮ ಇರಬೇಕಿತ್ತು’ ಅಂತಾರೆ. ತಂದೆ-ತಾಯಿಯರ ಪ್ರೀತಿ ಮಾತ್ರ ಯಾವಾಗಲೂ ಉಚಿತ ಮತ್ತು ಧಾರಾಳ. ಸೃಷ್ಟಿಯಲ್ಲಿ ತಂದೆ-ತಾಯಿಗೆ ಮಿಗಿಲಾದುದು ಬೇರೇನೂ ಇಲ್ಲ.

ಅತಿ ಕಡಿಮೆ ಅವಧಿ ವಿಮಾನಯಾನ

ಕೆಲ ವರ್ಷಗಳ ಹಿಂದೆ ನಾನು ಕತಾರ್ ರಾಜಧಾನಿ ದೋಹಾದಿಂದ ಬಹ್ರೈನ್ ರಾಜಧಾನಿ ಮಾನಾಮಕ್ಕೆ ವಿಮಾನದಲ್ಲಿ ಇಪ್ಪತ್ತು ನಿಮಿಷಗಳಲ್ಲಿ ಹೋಗಿದ್ದೆ. ಎರಡು ದೇಶಗಳ ನಡುವೆ ಅತಿ ಕಡಿಮೆ ಅವಧಿಯಲ್ಲಿ ಪ್ರಯಾಣಿಸಿದ ವಿಮಾನಯಾನವದು. ಜಗತ್ತಿನ ಅತಿ ಕಡಿಮೆ ಅವಧಿಯ ವಾಣಿಜ್ಯ ವಿಮಾನಯಾನ ಸ್ಕಾಟ್ಲೆಂಡ್‌ನ ಓರ್ಕ್ನಿ ದ್ವೀಪಗಳ ನಡುವೆ ನಡೆಯುತ್ತದೆ. ಸೋಜಿಗವೆಂದರೆ, ಇದು ಕೇವಲ 1.5 ನಿಮಿಷಗಳಲ್ಲಿ ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ತಲುಪುತ್ತದೆ!

ಕೆಲವೊಮ್ಮೆ ಹಾರಾಟದ ಸಮಯ ಒಂದು ನಿಮಿಷಕ್ಕಿಂತಲೂ ಕಡಿಮೆ, ಅಂದರೆ 53 ಸೆಕೆಂಡುಗಳಲ್ಲಿ ದಾಖಲಾದ ಉದಾಹರಣೆಗಳೂ ಇವೆ! ಈ ವಿಶಿಷ್ಟ ವಿಮಾನಯಾನವು ಸ್ಕಾಟ್ಲೆಂಡ್‌ನ ಓರ್ಕ್ನಿ ದ್ವೀಪ ಸಮೂಹದಲ್ಲಿರುವ ವೆಸ್ಟ್ರೇ ಮತ್ತು ಪಾಪಾ ವೆಸ್ಟ್ರೇ ಎಂಬ ಎರಡು ಪುಟ್ಟ ದ್ವೀಪಗಳ ನಡುವೆ ನಡೆಯುತ್ತದೆ. ಈ ಹಾರಾಟವು ಕೇವಲ 2.7 ಕಿಮೀ (1.7 ಮೈಲಿ) ದೂರವನ್ನು ಕ್ರಮಿಸುತ್ತದೆ. ವಿಚಿತ್ರ ಅಂದ್ರೆ ಇದು ಎಡಿನ್‌ಬರ್ಗ್ ವಿಮಾನ ನಿಲ್ದಾಣದ ರನ್ವೇಯಷ್ಟೇ ಉದ್ದವಾಗಿದೆ. ಯಾಕೆ ಇಷ್ಟು ಚಿಕ್ಕ ಹಾರಾಟ? ಇದು ಕೇವಲ ಪ್ರಚಾರಕ್ಕಾಗಿ ಇರುವ ವಿಮಾನಯಾನವಲ್ಲ. ಬದಲಿಗೆ ಸ್ಥಳೀಯ ಸಮುದಾಯಕ್ಕೆ ಅತ್ಯಗತ್ಯವಾದ ಒಂದು ಸಾರ್ವಜನಿಕ ಸೇವೆಯಾಗಿದೆ. ಇದಕ್ಕೆ ಕೆಲವು ಕಾರಣಗಳೂ ಇವೆ. ಪಾಪಾ ವೆಸ್ಟ್ರೇ ಒಂದು ಪುಟ್ಟ ದ್ವೀಪವಾಗಿದ್ದು, ಅಲ್ಲಿ ಕೇವಲ 70-80 ನಿವಾಸಿಗಳು ವಾಸಿಸುತ್ತಿದ್ದಾರೆ.

ವೈದ್ಯಕೀಯ ಸೇವೆಗಳು, ಶಿಕ್ಷಣಕ್ಕಾಗಿ ಬಂದಿರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರ ಅಗತ್ಯ ಸಂಪರ್ಕಗಳಿಗಾಗಿ ಈ ವಿಮಾನಯಾನ ನಿರ್ಣಾಯಕವಾಗಿದೆ. ದ್ವೀಪವಾಸಿಗಳಿಗೆ ಮುಖ್ಯ ಭೂಭಾಗಕ್ಕೆ ಮತ್ತು ಇತರ ದ್ವೀಪಗಳಿಗೆ ತಲುಪಲು ಇದು ಸುಲಭ ಮತ್ತು ವೇಗದ ಮಾರ್ಗವಾಗಿದೆ. ಈ ಎರಡು ದ್ವೀಪಗಳ ನಡುವೆ ರಸ್ತೆಯ ಸಂಪರ್ಕವಿಲ್ಲ. ಮೋಟಾರ್ ಬೋಟ್ ಮೂಲಕ ಪ್ರಯಾಣಿಸಿದರೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಅದರಲ್ಲೂ ಪ್ರತಿಕೂಲ ಹವಾಮಾನವಿದ್ದಾಗ ಪ್ರಯಾಣ ಕಷ್ಟ. ಹೀಗಾಗಿ ವಿಮಾನಯಾನ ಅತ್ಯಂತ ವೇಗದ ಮತ್ತು ವಿಶ್ವಾಸಾರ್ಹ ಸಾರಿಗೆ ವಿಧಾನವಾಗಿದೆ. ಈ ಹಾರಾಟವು ಸಾಮಾನ್ಯವಾಗಿ ಕಿರ್ಕ್ವಾಲ್ ವಿಮಾನ ನಿಲ್ದಾಣಕ್ಕೆ (ಓರ್ಕ್ನಿ ದ್ವೀಪಗಳ ಮುಖ್ಯ ಕೇಂದ್ರ) ಹೋಗುವ ಅಥವಾ ಅಲ್ಲಿಂದ ಬರುವ ಪ್ರಯಾಣದ ಭಾಗವಾಗಿರುತ್ತದೆ. ಇದು ಒಂದು ಸಣ್ಣ ತ್ರಿಕೋನ ಮಾರ್ಗದಂತೆ ಕಾರ್ಯನಿರ್ವಹಿಸುತ್ತದೆ.

ಕಿರ್ಕ್ವಾಲ್‌ನಿಂದ ವೆಸ್ಟ್ರೇಗೆ, ಅಲ್ಲಿಂದ ಪಾಪಾ ವೆಸ್ಟ್ರೇಗೆ ಮತ್ತು ಪುನಃ ಕಿರ್ಕ್ವಾಲ್‌ಗೆ ಮರಳುತ್ತದೆ. ಈ ವಿಮಾನಯಾನವನ್ನು ಲೋಗಾನ್‌ಏರ್ ( Loganair) ಎಂಬ ಸ್ಕಾಟಿಷ್ ಪ್ರಾದೇಶಿಕ ವಿಮಾನಯಾನ ಸಂಸ್ಥೆ 1967ರಿಂದ ನಡೆಸುತ್ತಿದೆ. ಇದು ಗಿನ್ನೆಸ್ ವಿಶ್ವ ದಾಖಲೆಯನ್ನು ಸಹ ಪಡೆದುಕೊಂಡಿದೆ.

ಅವರು ಬ್ರಿಟನ್-ನಾರ್ಮನ್ ಬಿಎನ್2ಬಿ-26 ಐಲ್ಯಾಂಡರ್ ಎಂಬ ಸಣ್ಣ ವಿಮಾನವನ್ನು ಬಳಸುತ್ತಾರೆ. ಇದು ಕೇವಲ ಒಬ್ಬ ಪೈಲಟ್ ಮತ್ತು 8-10 ಪ್ರಯಾಣಿಕರಿಗೆ ಆಸನಗಳನ್ನು ಹೊಂದಿದೆ. ವಿಮಾನ ಚಿಕ್ಕದಾಗಿರುವುದರಿಂದ, ಮುಂದೆ ಕುಳಿತುಕೊಳ್ಳುವ ಪ್ರಯಾಣಿಕರು ಪೈಲಟ್ ವಿಮಾನವನ್ನು ಹೇಗೆ ಹಾರಿಸುತ್ತಾರೆ ಎಂಬುದನ್ನು ನೋಡಬಹುದು! ಶನಿವಾರ ಹಾರಾಟ ಇರುವುದಿಲ್ಲ.

ಈ ವಿಶಿಷ್ಟ ಹಾರಾಟವು ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸು ತ್ತಿದೆ. ಅನೇಕ ಜನರು ಈ ಚಿಕ್ಕ ವಿಮಾನಯಾನದ ಅನುಭವ ಪಡೆಯಲು ಓರ್ಕ್ನಿ ದ್ವೀಪಗಳಿಗೆ ಭೇಟಿ ನೀಡುತ್ತಾರೆ. ಇದು ವಿಶಿಷ್ಟವಾದ ಪ್ರಯಾಣದ ಅನುಭವವನ್ನು ನೀಡುತ್ತದೆ