Wednesday, 11th December 2024

ಮೋದಿಯವರ ರಾಜಕೀಯ ಬ್ರಹ್ಮಾಸ್ತ್ರ: ಸೆಂಗೋಲ್ ರಾಜದಂಡ

ರಾಜ ರಹಸ್ಯ

ಪ್ರೊ.ಆರ್‌.ಜಿ.ಹೆಗಡೆ

ಹೊಸ ಸಂಸತ್ ಭವನದ ಉದ್ಘಾಟನೆ, ಕರ್ನಾಟಕದ ಉಚಿತ ‘ಗ್ಯಾರಂಟಿ’ ಯೋಜನೆಗಳು, ಮೋದಿಯವರ ಅಮೆರಿಕ ಜೈತ್ರಯಾತ್ರೆ ಹೀಗೆ ಇತ್ತೀಚೆಗೆ ಹಲವು ರಾಜಕೀಯ ಬೆಳವಣಿಗೆಗಳು/ಕೋಲಾಹಲಗಳಿಗೆ ದೇಶ ಸಾಕ್ಷಿಯಾಗಿದ್ದಿದೆ. ಇವುಗಳ ನಡುವೆ ಪುಟ್ಟ ಮಧ್ಯಂತರದಂತೆ ಬಂದುಹೋದ ‘ಸೆಂಗೋಲ್ ರಾಜದಂಡ’ದ ಹಿಂದಿರುವ ರಾಜಕೀಯ ಸೂಕ್ಷ್ಮ ಬಹುತೇಕರಿಗೆ ಅರ್ಥ ವಾದಂತಿಲ್ಲ.

‘ಹೊಸ ಸಂಸತ್ ಭವನವನ್ನು ಯಾರು ಉದ್ಘಾಟಿಸಬೇಕಿತ್ತು?’ ಎಂಬ ಚರ್ಚಾವಿಷಯ ದಲ್ಲೇ ಮಗ್ನವಾಗಿದ್ದ ವಿಪಕ್ಷಗಳಂತೂ ಇಂಥ ಸೂಕ್ಷ್ಮಸಂಗತಿಯನ್ನು ಗಮನಿಸುವ ಮನಸ್ಥಿತಿಯಲ್ಲಿ ಇರಲೇ ಇಲ್ಲ. ಅಷ್ಟೇಕೆ, ಇತಿಹಾಸದ ಧೂಳಿನಡಿಯಿಂದ ಸೆಂಗೋಲ್
ರಾಜದಂಡವನ್ನು ಹೊರತೆಗೆದ ಪ್ರಧಾನಿ ಮೋದಿ, ತಮಿಳುನಾಡಿನ ಶಿವಭಕ್ತ ಸಂತರ (ಅಧಿನಮ್) ಸಮ್ಮುಖದಲ್ಲಿ ಅದಕ್ಕೆ ಶಾಸೋಕ್ತ ಪೂಜೆ ಸಲ್ಲಿಸಿ ಸಂಸತ್ತಿನಲ್ಲಿ ಪ್ರತಿಷ್ಠಾಪಿ ಸಿದ ಭವ್ಯದೃಶ್ಯವನ್ನು ಟಿವಿ ಪರದೆಯಲ್ಲಿ ವೀಕ್ಷಿಸಿದ ಮೇಲೂ, ‘ಇಂಥ ವಿಚಾರ ಮೋದಿಯವರಲ್ಲಿ ಈಗೇಕೆ ಸುಳಿಯಿತು?’ ಎನ್ನುವ ಪ್ರಶ್ನೆ ಯಾರಲ್ಲೂ ಹುಟ್ಟಲೇ ಇಲ್ಲ ಎನಿಸುತ್ತದೆ.

ತಡವಾಗಿಯಾದರೂ ಸರಿಯೇ ಗಮನಿಸಬೇಕಾದ ವಿಷಯ ಇದು. ಏಕೆಂದರೆ, ಮೋದಿ ಯವರ ಬತ್ತಳಿಕೆಯಿಂದ ಹೊರಬಂದಿರುವ ರಾಜಕೀಯ ಬ್ರಹ್ಮಾಸವೇ ಈ ‘ಸೆಂಗೋಲ್ ರಾಜದಂಡ’. ಸೆಂಗೋಲ್ ರಾಜಕೀಯದ ಆಳ-ಅಗಲ-ಮಹತ್ವ ಅರ್ಥವಾಗಬೇಕೆಂದರೆ, ಬಿಜೆಪಿಯ ಮೂಲತತ್ತ್ವ, ಸಿದ್ಧಾಂತ ಮತ್ತು ರಾಜಕೀಯ ಲೆಕ್ಕಾಚಾರವನ್ನು ಮೊದಲು ಗ್ರಹಿಸಬೇಕು. ಹಾಗೆಯೇ ಇಂದು ಬಿಜೆಪಿಯ ಮನದಾಳದಲ್ಲಿರುವ ಆತಂಕ ಮತ್ತು ತಳಮಳಗಳನ್ನೂ ಗಮನಿಸಬೇಕು. ಬಿಜೆಪಿಯು ದೇಶದಲ್ಲಿ ಮೊದಲು ಬೆಳೆದಿದ್ದು ಉತ್ತರ ಭಾರತದಲ್ಲಿ.

ರಾಮಮಂದಿರ ಚಳವಳಿ, ಅಂದರೆ ಹಿಂದುತ್ವ ಚಳವಳಿ ನೀಡಿದ ಪೋಷಕಾಂಶವನ್ನು ಹೀರಿ ಬೆಳೆದ ಪಕ್ಷವದು. ‘ಹಿಂದುತ್ವ’
ಎಂಬುದು ಬಿಜೆಪಿಯ ಕೇಂದ್ರತಿರುಳು. ಬಿಜೆಪಿಯನ್ನು ಬೆಳೆಸಿದವರು ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಆಡ್ವಾಣಿ. ಹಿಂದುತ್ವ ರಾಜಕೀಯವನ್ನು ದೇಶದ ರಾಜಕೀಯದ ಕೇಂದ್ರಬಿಂದುವಾಗಿಸಿ, ಸಮಕಾಲೀನ ಭಾರತವನ್ನು ಆಳವಾಗಿ ಪ್ರಭಾವಿಸಿದ ರಾಜಕೀಯ ಘಟನೆಯೇ ಆಡ್ವಾಣಿಯವರ ‘ರಥಯಾತ್ರೆ’. ಇದರ ಯಶಸ್ಸಿನಿಂದಾಗಿಯೇ ಬಿಜೆಪಿ ದೇಶದಲ್ಲಿ ಅತಿದೊಡ್ಡ ರಾಜ
ಕೀಯ ಪಕ್ಷವಾಗಿ ಹೊರಹೊಮ್ಮಿದ್ದು, ೧೯೯೯ರಲ್ಲಿ ಇತರ ಹಲವು ಪಕ್ಷಗಳೊಂದಿಗೆ ಕೇಂದ್ರದಲ್ಲಿ ಸರಕಾರ ರಚಿಸಿದ್ದು.

Read E-Paper click here

ತನ್ಮೂಲಕ ವಾಜಪೇಯಿ ಅವರು ದೇಶ ಕಂಡ ಶ್ರೇಷ್ಠ ಪ್ರಧಾನಿಗಳಲ್ಲೊಬ್ಬರು ಎನಿಸಿಕೊಂಡರು. ಆದರೆ ಗಮನಿಸಬೇಕು, ವಾಜ ಪೇಯಿಯವರಿಗೆ ರಾಷ್ಟ್ರೀಯವಾಗಿ ಪ್ರಚಂಡ ಜನಪ್ರಿಯತೆಯಿದ್ದರೂ, ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲೇ ಇಲ್ಲ ಮತ್ತು ಅದಕ್ಕೆ
ದೇಶದ ರಾಜಕೀಯದ ಮೇಲೆ ಹಿಡಿತ ಸಿಗಲೇ ಇಲ್ಲ. ಉತ್ತರ ಭಾರತದ ಬಹುಭಾಗವನ್ನು ಬಿಜೆಪಿ ಗೆಲ್ಲುತ್ತಲೇ ಹೋಯಿತು, ನಿಜ. ಆದರೆ ಕೇವಲ ‘ಉತ್ತರ-ಕೇಂದ್ರಿತ’ ಹಿಂದುತ್ವಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಾಧ್ಯವಾಗಲೇ ಇಲ್ಲ. ಇದಕ್ಕೆ ಕಾರಣಗಳಿವೆ.

ರಾಮಮಂದಿರ ಚಳವಳಿಗೆ ಹೆಚ್ಚಿನ ಯಶಸ್ಸು ಸಿಗುತ್ತಾ ಹೋದಂತೆ, ಅಂದರೆ ಕೋರ್ಟ್ ಕೂಡ ಸಮ್ಮತಿಸಿಬಿಟ್ಟಂತೆ ‘ಮಂದಿರ’ವು ಹಿಂದೂಗಳಿಗೆ ಮುಗಿದ ವಿಷಯವಾಗಿ ಹೋಯಿತು. ಉತ್ತರದಲ್ಲೂ ಹಿಂದುತ್ವಕ್ಕೆ ಅಂಥ ಉತ್ಸಾಹ ಉಳಿಯಲಿಲ್ಲ. ಹೇಳಿಕೊಳ್ಳಲು ಪಕ್ಷಕ್ಕೆ ಅಂಥ ವಿಷಯ ಏನೂ ಉಳಿಯಲಿಲ್ಲ. ಬಹುಮುಖ್ಯ ಕಾರಣವೆಂದರೆ, ಬಿಜೆಪಿಯನ್ನು, ಅದರ ಹಿಂದುತ್ವವನ್ನು ದಕ್ಷಿಣ ಮತ್ತು ಪೂರ್ವ ಭಾರತಗಳು ಬೆಂಬಲಿಸಲೇ ಇಲ್ಲ.

ವಾಜಪೇಯಿಯವರು ಬಂದುಹೋದ ನಂತರವೂ ಬಿಜೆಪಿಯು ಚುನಾವಣೆಯಲ್ಲಿ ಸೋತು ೧೦ ವರ್ಷಗಳ ಕಾಲ ಅಽಕಾರದಿಂದ ಹೊರಗೇ ಉಳಿಯಬೇಕಾಗಿ ಬಂದುದರ ಕಾರಣ ಇದೇ. ‘ಉತ್ತರ-ಕೇಂದ್ರಿತ’ ಹಿಂದುತ್ವವನ್ನು ದಕ್ಷಿಣ ಮತ್ತು ಪೂರ್ವ ಭಾರತಗಳು ಏಕೆ ಬೆಂಬಲಿಸಲಿಲ್ಲ ಹಾಗೂ ಬೆಂಬಲಿಸುವುದಿಲ್ಲ ಎಂಬುದನ್ನೂ ಗಮನಿಸಬೇಕು. ಕಾರಣ ಸ್ಪಷ್ಟ: ಉತ್ತರ, ದಕ್ಷಿಣ ಮತ್ತು ಪೂರ್ವ ಭಾರತಗಳ ನಡುವೆ ಮಾನಸಿಕತೆಯಲ್ಲಿ ಅಪಾರ ವ್ಯತ್ಯಾಸಗಳಿವೆ. ಉತ್ತರ ಮತ್ತು ದಕ್ಷಿಣದ ಹಿಂದುತ್ವಗಳು ಸಾಂಸ್ಕೃತಿಕವಾಗಿ (ಧಾರ್ಮಿಕವಾಗಿ) ಸಂಪೂರ್ಣ ಒಂದೇ ಎನ್ನುವ ಭಾವನೆಯನ್ನು ತಾಳಿಯೇ ಇಲ್ಲ.

ಶ್ರೀರಾಮ ಉತ್ತರ ಭಾರತದ ಹಿಂದುತ್ವದ ಕೇಂದ್ರಬಿಂದು. ಆದರೆ ದಕ್ಷಿಣ ಭಾರತದ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಶೈವ
ಪರಂಪರೆ ಬಲವಾಗಿದೆ. ಹಾಗೆಯೇ ವೇಂಕಟೇಶ್ವರ, ಮಹಾಗಣಪತಿ ಹಾಗೂ ದುರ್ಗಾದೇವಿಯನ್ನೂ ಇಲ್ಲಿ ಆರಾಧಿಸಲಾಗುತ್ತದೆ. ಬಂಗಾಳದಲ್ಲೂ ದುರ್ಗೆಯನ್ನು ಪೂಜಿಸಲಾಗುತ್ತದೆ. ತಾತ್ಪರ್ಯವಿಷ್ಟೇ: ದಕ್ಷಿಣಕ್ಕೆ ಉತ್ತರದಂತೆ ಕೇಂದ್ರೀಯವಾದ, ಏಕ ಸ್ವರೂಪದ ಹಿಂದುತ್ವ ಇಲ್ಲ. ಹಾಗೆಯೇ ಉತ್ತರ ಭಾರತದಂತೆ ದಕ್ಷಿಣಕ್ಕೆ ಕೆಲವು ಮುಸ್ಲಿಂ ರಾಜರು ನಡೆಸಿದ ಕ್ರೌರ್ಯದ ನೆನಪೂ ಇಲ್ಲ. ಈ ಕಾರಣದಿಂದಾಗಿ ಉತ್ತರದ ಹಿಂದುತ್ವ ಚಳವಳಿಯನ್ನು ಆ ರೀತಿಯಲ್ಲಿ ದಕ್ಷಿಣ ಮತ್ತು ಪೂರ್ವ ಭಾರತಗಳು ಬೆಂಬಲಿ ಸಿಯೇ ಇಲ್ಲ.

ಐತಿಹಾಸಿಕವಾಗಿಯೂ ದೇಶದ ಈ ಭಾಗಗಳು ಉತ್ತರದೊಂದಿಗೆ ಮಾನಸಿಕವಾಗಿ ಮಿಳಿತವಾಗಿಯೇ ಇಲ್ಲ. ಉತ್ತರದ ಚಕ್ರವರ್ತಿ ಗಳಿಗೆ ವಿಂಧ್ಯ ಪರ್ವತದ ಕೆಳಗಿಳಿಯಲು ಮತ್ತು ಅಖಂಡ ಭಾರತದ ಏಕಚಕ್ರಾಧಿಪತಿಯಾಗಲು ಸಾಧ್ಯವಾಗದಿರುವುದರ ಕಾರಣ ವಿದು. ಅಕ್ಬರ್-ಔರಂಗಜೇಬ್‌ರಂಥ ಮಹಾಸಾಮ್ರಾಟರಿಗೂ ಇದು ಸಾಧ್ಯವಾಗಲಿಲ್ಲ. ಏಕೆಂದರೆ ಒಂದು ಪ್ರದೇಶ ಸಾಂಸ್ಕೃತಿಕ ವಾಗಿ ಒಂದೇ ಆಗಿದ್ದರೆ ಅದನ್ನು ಗೆಲ್ಲುವುದು, ಆಳುವುದು ಸುಲಭ. ಆ ಜನರಿಗೆ ಒಂದು ರಾಷ್ಟ್ರೀಯತೆಯ ಭಾವನೆಯನ್ನು ನಾಯಕ ನೀಡಿಬಿಡಬಹುದು. ಅಥವಾ ಅವಕ್ಕೆ ತಮ್ಮೊಳಗೇ ಒಂದು ರಾಷ್ಟ್ರೀಯತೆಯ ಭಾವನೆ ಇರುತ್ತದೆ. ಆದರೆ ವಿಭಿನ್ನ ರಾಷ್ಟ್ರೀಯತೆ, ಉಪರಾಷ್ಟ್ರೀಯತೆಗಳನ್ನು ಒಳಗಿಟ್ಟುಕೊಂಡು ತಮ್ಮನ್ನು ತಾವು ಪ್ರತ್ಯೇಕವಾಗಿಯೇ ಕಂಡುಕೊಳ್ಳುವ ಪ್ರದೇಶ ಗಳನ್ನು ಗೆಲ್ಲುವುದು ಕಷ್ಟ.

ಗೆದ್ದರೂ ಇಟ್ಟು ಕೊಳ್ಳುವುದು ಕಷ್ಟ. ಬಿಜೆಪಿಯ ‘ಉತ್ತರ ಭಾರತ’ ಮಾದರಿಯ ಹಿಂದುತ್ವ ದಕ್ಷಿಣವನ್ನು ಪ್ರವೇಶಿಸಲು ಸಾಧ್ಯ ವಾಗದ ಕಾರಣ ಇದು. ಹಾಗಿರುವುದರಿಂದಲೇ ಬಿಜೆಪಿಗೆ ದಕ್ಷಿಣದಲ್ಲಿ ಗೆಲ್ಲಲು, ತಳವೂರಲು ಸಾಧ್ಯವಾಗಲಿಲ್ಲ. ಏಕೆಂದರೆ ಇಷ್ಟೆಲ್ಲ ವಿಭಿನ್ನ ಸಂಸ್ಕೃತಿಗಳ ನಡುವೆ ಹಿಂದುತ್ವದ ವಿಷಯದಲ್ಲಿ ಅನುಸಂಧಾನ ಸಾಧ್ಯವಾಗಲಿಲ್ಲ. ದಕ್ಷಿಣ ಭಾರತಕ್ಕೆ ಹಿಂದುತ್ವವನ್ನು ಹೇಗೆ ಒಯ್ಯಬೇಕು ಅಥವಾ ಬಿಜೆಪಿಯನ್ನು ಹೇಗೆ ವಿಸ್ತರಿಸಬೇಕು ಎನ್ನುವುದು ಪ್ರಶ್ನೆಯಾಗಿಯೇ ಉಳಿದುಹೋಯಿತು.

ಮೋದಿಯವರಿಗೆ ಇವೆಲ್ಲ ಅರ್ಥವಾಗಿದೆ. ಅಂದರೆ, ‘ಪಕ್ಷದ ಆಧಾರಶಿಲೆ ಉತ್ತರ ಭಾರತ ಕೇಂದ್ರಿತ ಹಿಂದುತ್ವ. ಬಿಜೆಪಿ ಗೆಲುವಿಗೆ ಹಿಂದುತ್ವ ಬೇಕು; ಆದರೆ ಉತ್ತರ-ಕೇಂದ್ರಿತ ಹಿಂದುತ್ವವಷ್ಟೇ ಸಾಕಾಗುವುದಿಲ್ಲ, ಬಲವಾದ ಬೇರೆ ವಿಷಯಗಳೂ ಬೇಕು’ ಎಂಬ ವಾಸ್ತವವನ್ನು ೨೦೧೪ರಲ್ಲಿ ಮೋದಿ ಗ್ರಹಿಸಿಬಿಟ್ಟರು. ‘ಕೇವಲ ಹಿಂದುತ್ವಕ್ಕೆ ಪಾರ್ಲಿಮೆಂಟರಿ ಚುನಾವಣೆಗಳನ್ನು ಗೆಲ್ಲುವ ಶಕ್ತಿಯಿಲ್ಲ; ಹೆಚ್ಚೆಂದರೆ ಅದಕ್ಕೆ ಬಿಜೆಪಿಯನ್ನು ಪಾರ್ಲಿಮೆಂಟ್‌ನಲ್ಲಿ ಅತಿದೊಡ್ಡ ಪಕ್ಷವಾಗಿಸುವ ಸಾಮರ್ಥ್ಯವಿದೆ, ಅಷ್ಟೇ.

ಹಿಂದುತ್ವ ದೇಶದ ಜನತೆಗೆ ಮುಖ್ಯವಿಷಯ, ದೊಡ್ಡಶಕ್ತಿ ಎಂಬುದು ನಿಜ. ಆದರೆ ಅದೊಂದೇ ಸಾಕಾಗುವುದಿಲ್ಲ’ ಎಂಬುದನ್ನು ಗ್ರಹಿಸಿದ ಮೋದಿಯವರು ೨೦೧೪ರಲ್ಲಿ ಉತ್ತರ-ಕೇಂದ್ರಿತ ಹಿಂದುತ್ವದ ಎಂಜಿನ್‌ಗೆ ಬೇರೆ ಎರಡು ಹೊಸ ಶಕ್ತಿಯುತ ಅಂಶಗಳನ್ನು ಸೇರ್ಪಡೆಗೊಳಿಸಿ ಅದರ ಶಕ್ತಿಯನ್ನು ಉದ್ದೀಪನಗೊಳಿಸಿದರು. ಆ ಥೀಮ್‌ಗಳೆಂದರೆ, ‘ದಕ್ಷ ಆಡಳಿತ’ ಮತ್ತು ‘ಅಭಿವೃದ್ಧಿಯ
ರಾಜಕೀಯ’. ಇವೆರಡು ವಿಷಯಗಳು ಅಂದು ದೇಶದ ಮುಂದಿದ್ದ ಎರಡು ದೊಡ್ಡ ನಿರಾಸೆಗಳಾಗಿದ್ದವು!

ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿನ ‘ಪಾಲಿಸಿ ಪೆರಾಲಿಸಿಸ್’, ನಿರ್ಧಾರ ತೆಗೆದುಕೊಳ್ಳುವಲ್ಲಿನ ನಿಶ್ಶಕ್ತಿ, ಮುಂದೆ ಬಂದ ದೊಡ್ಡ ಹಗರಣ ಗಳು ಮತ್ತು ಜಾಗತಿಕವಾಗಿ ನಿಸ್ತೇಜಗೊಂಡಂತಿದ್ದ ದೇಶದ ಶಕ್ತಿ ಇವುಗಳಿಂದ ಬೇಸತ್ತಿದ್ದ ದೇಶದ ಜನರಿಗೆ, ಮೋದಿಯವರು ೨೦೧೪ರಲ್ಲಿ ಹಿಂದುತ್ವದ ಜತೆಗೆ ಕಾಕ್ ಟೇಲ್ ಮಾಡಿ ಬಳಸಿದ ಈ ಎರಡು ಅಂಶಗಳು ಹುಚ್ಚು ಹಿಡಿಸಿ ದವು. ಹಾಗೆಯೇ, ಮನಮೋಹನ್ ಸಿಂಗ್ ಅವರ ಮೆತ್ತನೆಯ ವ್ಯಕ್ತಿತ್ವಕ್ಕೆ ಪ್ರತಿವಾದಿಯಾಗಿ ಕಂಡ ಮೋದಿಯವರ ವ್ಯಕ್ತಿತ್ವವೂ ದೊಡ್ಡ ಆಕರ್ಷಣೆಯಾಗಿಬಿಟ್ಟಿತು.

ಹೀಗೆ ೨೦೧೪ರ ಚುನಾವಣೆಗಳಲ್ಲಿ ಹಿಂದುತ್ವಕ್ಕಿಂತಲೂ ಮುಂದೆ ಬಿಜೆಪಿಯನ್ನು ತೆಗೆದುಕೊಂಡುಹೋದ ಪರಿಣಾಮವಾಗಿಯೇ ಮೋದಿಯವರು ಭಾರಿ ಪ್ರಮಾಣದಲ್ಲಿ ಮತಗಳನ್ನು ಆಕರ್ಷಿಸಿ ಬಾಚಿ ಬಾಚಿ ರಾಶಿಹಾಕಿದ್ದು. ರಾಜಕೀಯದ ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳುವಲ್ಲಿನ ಮೋದಿಯವರ ಶ್ರೇಷ್ಠ ಸಾಮರ್ಥ್ಯ ಮತ್ತು ಚಾಣಾಕ್ಷತೆ ಅರಿವಾಗಿದ್ದು ೨೦೧೯ರ ಲೋಕಸಭಾ
ಚುನಾವಣೆಯಲ್ಲಿ. ಚಲನಶೀಲ ಭಾರತದ ಮನಸ್ಸಿಗೆ ಹಿಂದುತ್ವ ಮತ್ತು ಒಳ್ಳೆಯ ಆಡಳಿತದ ಅಜೆಂಡಾ ಕೂಡ ಸಾಲುವುದಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ಮೋದಿ ಗ್ರಹಿಸಿದರು. ಮೋದಿಯವರ ಒಳ್ಳೆಯ ಆಡಳಿತವನ್ನು ದೇಶ ಮೆಚ್ಚಿಕೊಂಡಿತ್ತು.

ಆದರೆ, ‘ಇದೂ ಸಾಲುವುದಿಲ್ಲ. ಇದಕ್ಕಿಂತಲೂ ವಿಶಾಲವೂ ಆಳವೂ ದಟ್ಟವೂ ಆದ ವಸ್ತು ಬೇಕು. ಹಿಂದೂ ರಾಷ್ಟ್ರೀಯತೆಯ
ಅಂಶ ಬೆರೆತ, ಆದರೆ ಇಡೀ ದೇಶವನ್ನು ಒಳಗೊಳ್ಳುವ ವಸ್ತು ಬೇಕು’ ಎಂದು ಮೋದಿ ಪರಿಭಾವಿಸಿದರು. ಈ ಹಿನ್ನೆಲೆಯಲ್ಲೇ ಅವರಿಗೆ ಹೊಳೆದಿದ್ದು ‘ಬಲವಾದ ರಾಷ್ಟ್ರೀಯತೆ’ (ಅಗ್ರೆಸಿವ್ ನ್ಯಾಷನಲಿಸಂ). ಅಂಥ ಭಾವನೆಯ ಉದ್ದೀಪನಕ್ಕೆ ಆಗ ಒದಗಿದ ‘ಬಾಲಾಕೋಟ್ ಘಟನೆ’ಯ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಮೋದಿ, ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಿ ಬಲವಾದ ರಾಷ್ಟ್ರೀಯತೆಯ ಭಾವನೆಯನ್ನು ಜಾಗೃತಗೊಳಿಸಿಬಿಟ್ಟರು.

ರಣೋತ್ಸಾಹದಲ್ಲೋ, ಉನ್ಮಾದದಲ್ಲೋ ಮೋದಿಯವರನ್ನು ಬೆಂಬಲಿಸಿದ ದೇಶದ ಜನತೆ ಎನ್‌ಡಿಎಗೆ ಮೂರರಲ್ಲಿ ಎರಡರಷ್ಟು ಬಹುಮತ ನೀಡಿದ್ದಷ್ಟೇ ಅಲ್ಲ, ಬಿಜೆಪಿಗೇ ಸ್ವತಂತ್ರವಾಗಿ ಬಹುಮತ ನೀಡಿಬಿಟ್ಟಿತು. ಈಗ ಮತ್ತೊಂದು ಲೋಕಸಭಾ ಚುನಾವಣೆಗೆ ಮೋದಿ ಅಣಿಯಾಗುತ್ತಿದ್ದಾರೆ. ಈಗ ಮತ್ತೆ ಸವಾಲುಗಳು ಹೆಚ್ಚಿವೆ. ಉತ್ತರ ಭಾರತವು ಹೆಚ್ಚೂಕಡಿಮೆ ಹಿಂದುತ್ವದ ಹಿಂದೆ ಇದೆ. ಅಲ್ಲದೆ, ಇರುವ ಹಿಂದುತ್ವಕ್ಕೆ, ರಾಷ್ಟ್ರೀಯತೆಯ ಭಾವನೆಗೆ ಇನ್ನಷ್ಟು ಬಲಕೊಡಲು ‘ಏಕರೂಪದ ನಾಗರಿಕ ಸಂಹಿತೆ’ಯ ಮಾತುಗಳು ಬಂದಿವೆ. ಈ ಸಂಹಿತೆಯು ಹಿಂದೂ ಮತಗಳನ್ನು ಬಿಜೆಪಿಯೆಡೆಗೆ ಧ್ರುವೀಕರಿಸುತ್ತದೆ. ಆದರೆ ಇದು ಕೂಡ ಸಾಲ ಲಿಕ್ಕಿಲ್ಲ ಎಂಬುದು ಮೋದಿಯವರಿಗೆ ಗೊತ್ತಿದೆ. ಹೀಗಾಗಿ, ಇದಕ್ಕೆ ಪೂರಕವಾಗಿ ರಾಜಕೀಯವಾಗಿ ಸಾಂಸ್ಕೃತಿಕ ಅಖಂಡತೆ ಸಾಧಿಸಲು ಇರುವ ಬ್ರಹ್ಮಾಸವೆಂದರೆ, ಇಲ್ಲಿಯವರೆಗೆ ಉತ್ತರ ಭಾರತದ ಹಿಂದುತ್ವದೊಳಗೆ ಬೆರೆತಿರದ ದಕ್ಷಿಣ ಮತ್ತು ಪೂರ್ವ ಭಾರತಗಳನ್ನು, ಅಂದರೆ ಮುಖ್ಯವಾಗಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪಶ್ಚಿಮ ಬಂಗಾಳಗಳನ್ನು ಹಿಂದೂ ಭಾರತೀಯತೆಯ ಜತೆ ಕೂಡಿಸಬೇಕು.

ಪ್ರತ್ಯೇಕವಾಗಿಯೇ ನಿಂತಿರುವ ಪ್ರಾದೇಶಿಕ, ಹಿಂದೂ ಉಪ (?)ಸಂಸ್ಕೃತಿಗಳನ್ನು ಉತ್ತರದ ಮುಖ್ಯವಾಹಿನಿಯೊಂದಿಗೆ ಬೆರೆಸಬೇಕು. ಉತ್ತರ ಭಾರತದ ಶ್ರೀರಾಮನನ್ನು ದಕ್ಷಿಣದ ಶಿವ ಮತ್ತು ವೇಂಕಟೇಶ್ವರನೊಂದಿಗೆ, ಬಂಗಾಳದ ದುರ್ಗೆಯೊಂದಿಗೆ ಸಮೀಕರಿಸ ಬೇಕು. ಗಂಗೆಯನ್ನು ಕಾವೇರಿ-ಗೋ ದಾವರಿ-ಬ್ರಹ್ಮಪುತ್ರದೊಂದಿಗೆ ಬೆಸೆಯಬೇಕು. ಮುಖ್ಯವಾಗಿ, ಹಿಂದುತ್ವದ ರಾಷ್ಟ್ರೀಯತೆ ಯನ್ನು ದಕ್ಷಿಣ ಮತ್ತು ಪೂರ್ವಭಾರತಗಳು ಒಪ್ಪಿಕೊಳ್ಳುವಂತೆ, ಪ್ರೀತಿಸುವಂತೆ ಮಾಡಬೇಕು. ಹಿಂದುತ್ವಕ್ಕೆ ಬದ್ಧವಾಗುವಂತೆ ಮಾಡಬೇಕು. ಉತ್ತರ ಭಾರತದೊಂದಿಗೆ ದಕ್ಷಿಣ ಮತ್ತು ಪೂರ್ವಭಾರತಗಳ ಹಿಂದುತ್ವದ ಎಂಜಿನಿಯರಿಂಗ್ ಮಿಳಿತವಾಗಿ, ಪ್ರಧಾನ ಮತ್ತು ಉಪಸಂಸ್ಕೃತಿ ಗಳು ಬೆರೆತಾಗ ಮಾತ್ರವೇ ಇದು ನೆರವೇರೀತು ಎಂಬುದನ್ನು ಬಹುಶಃ ಮೋದಿಯವರು ಗ್ರಹಿಸಿರಬೇಕು.

ಹೀಗಾಗಿಯೇ, ಅಖಿಲ ಭಾರತದ ಹಿಂದೂ ಸಾಂಸ್ಕೃತಿಕ ಸಮನ್ವಯವನ್ನು ಸಾಧಿಸುವ ಉದ್ದೇಶದಿಂದಲೇ ಮೋದಿಯವರು ತಮ್ಮ ಮಹತ್ವಾಕಾಂಕ್ಷೆಯ ‘ಸೆಂಗೋಲ್ ರಾಜಕೀಯ’ಕ್ಕಿಳಿದಿರುವುದು. ಸೆಂಗೋಲ್ ಎಂಬುದು ಮೂಲತಃ ತಮಿಳು ಸಂಸ್ಕೃತಿಯ ಭಾಗ, ಶೈವ ಸಂಸ್ಕೃತಿ ಮತ್ತು ಧಾರ್ಮಿಕತೆಯ ಭಾಗ. ತಮಿಳು ಹಿಂದುತ್ವದ ಮತ್ತು ತಮಿಳು ಪ್ರತಿಷ್ಠೆಯ ಸಂಕೇತವದು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಸಂಗತಿಯನ್ನು ಮೋದಿ ಚೆನ್ನಾಗಿಯೇ ಗ್ರಹಿಸಿದ್ದಾರೆ. ನಿಮಗೆ ನೆನಪಿರಬಹುದು, ಮೋದಿಯವರು ಹಾಗೇ
ಸುಮ್ಮನೆ ಅದನ್ನು ತೆಗೆದುಕೊಂಡು ಹೋಗಿ ಪ್ರತಿಷ್ಠಾಪಿಸಲಿಲ್ಲ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ತಮಿಳುನಾಡಿನ ಪ್ರಮುಖ ಶಿವಶರಣರನ್ನು ಆಹ್ವಾನಿಸಿ, ಗೌರವ ಸಲ್ಲಿಸಿ ಕರೆದುಕೊಂಡು ಹೋಗಿ, ಸಂಸತ್ತಿನ ಹೃದಯ ಭಾಗದಲ್ಲಿ ಸೆಂಗೋಲ್ ಅನ್ನು ಪ್ರತಿಷ್ಠಾಪಿಸಿದರು.

ಒಟ್ಟಾರೆ ಹೇಳುವುದಾದರೆ, ತಮಿಳು ಹಿಂದೂ ಸಂಸ್ಕೃತಿಯನ್ನು ಕೇಂದ್ರೀಯ ಹಿಂದುತ್ವದ ಹೃದಯವನ್ನಾಗಿ ಸಿಬಿಟ್ಟರು. ಗಂಗೆ ಮತ್ತು ಕಾವೇರಿಯನ್ನು ಮಾನಸಿಕವಾಗಿ ಕೂಡಿಸಿಬಿಟ್ಟರು. ವಿಷಯವನ್ನು ಇಷ್ಟಕ್ಕೇ ಬಿಟ್ಟುಬಿಡದ ಮೋದಿ, ಸೆಂಗೋಲ್ ಅನ್ನು ಭಾರತದ ಅಮೃತಕಾಲದ ಅಧಿಕೃತ ರಾಷ್ಟ್ರೀಯ ಸಂಕೇತವನ್ನಾಗಿಸುವ ಮಾತನ್ನೂ ಆಡಿದ್ದಾರೆ.

ಇಲ್ಲಿ ಒಂದಂತೂ ಸ್ಪಷ್ಟ: ತಮಿಳುನಾಡಿನ ಹಿಂದುತ್ವ ಮತ್ತು ಸಂಸ್ಕೃತಿ ತಮ್ಮನ್ನು ಒಪ್ಪಿಕೊಳ್ಳುವಂತೆ ಮೋದಿ ಪ್ರಯತ್ನಿಸಿದ್ದಾರೆ. ಈ ಹೆಜ್ಜೆಯು ಅವರನ್ನು ಖಂಡಿತವಾಗಿಯೂ ಮಾನಸಿಕ ವಾಗಿ ತಮಿಳುನಾಡಿನ ಹತ್ತಿರಕ್ಕೆ ತಂದಿದೆ. ಇಂಥ ಪ್ರಯತ್ನಗಳನ್ನು ಅವರು ಪ್ರಾಯಶಃ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ. ಅಂದರೆ, ದೇಶದ ಉತ್ತರ ಭಾಗದ ಹಿಂದುತ್ವವನ್ನು ದೇಶದ ಉಪ ಹಿಂದೂ ಸಂಸ್ಕೃತಿಗಳೊಂದಿಗೆ ಬೆರೆಸಲು ಒಂದಷ್ಟು ಸಾಂಸ್ಕೃತಿಕ ಕ್ರಮಗಳನ್ನು ಅವರು ಕೈಗೊಳ್ಳುವ ಸಾಧ್ಯತೆಯಿದೆ.

ಹಾಗೆಂದ ಮಾತ್ರಕ್ಕೆ, ಮೋದಿಯವರು ಇವೆಲ್ಲವನ್ನೂ ಕೇವಲ ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ ಎಂದರೆ ತಪ್ಪಾಗುತ್ತದೆ. ದೇಶವನ್ನು ಸಾಂಸ್ಕೃತಿಕವಾಗಿ ಇನ್ನಷ್ಟು ಹತ್ತಿರಕ್ಕೆ ತರುವುದು ಅವರ ಗುರಿ. ಉತ್ತರ-ದಕ್ಷಿಣ- ಪೂರ್ವಗಳ ಸಾಂಸ್ಕೃತಿಕ ಗೋಡೆ ಗಳನ್ನು ತೆಗೆದುಹಾಕಿ ದೇಶದ ಸಾಂಸ್ಕೃತಿಕ ಐಕಮತ್ಯವನ್ನು ಸಾಧಿಸುವುದು ಅವರ ಹೆಬ್ಬಯಕೆ. ತಪ್ಪೇನಿಲ್ಲ, ಗಾಂಧೀಜಿ ಕೂಡ ದೇಶದ ಜನರ ಹೃದಯ ಪ್ರವೇಶಿಸಿದ್ದು ಧರ್ಮದ ಮೂಲಕವೇ.

‘ಸೆಂಗೋಲ್’ ಪ್ರತಿಷ್ಠಾಪನೆಯು ದೇಶದ ಸಾಂಸ್ಕೃತಿಕ-ರಾಜಕೀಯದ ಇತಿಹಾಸದಲ್ಲಿ ಬಹಳ ದೊಡ್ಡಹೆಜ್ಜೆ, ಹೊಸಹೆಜ್ಜೆ. ಇದು ಯಶಸ್ವಿಯಾಗಿದ್ದೇ ಆದಲ್ಲಿ, ಉಪಸಂಸ್ಕೃತಿಗಳು ಹಿಂದುತ್ವದ ಭಾಗವಾಗಿ ಬಿಟ್ಟಲ್ಲಿ, ಮೋದಿಯವರು ದೇಶದ ಮೊದಲ ಏಕ ಚಕ್ರಾಧಿಪತಿ ಆಗಿಬಿಡಬಹುದು. ಮುಂದಿನ ಚುನಾವಣೆಯು ಇಂಥ ಉಪಕ್ರಮದ ಯಶಸ್ಸಿನ ‘ರೆಫರೆಂಡಮ್’ ಆಗಲಿದೆ.