ಶಶಾಂಕಣ
ಶಶಿಧರ ಹಾಲಾಡಿ
shashidhara.halady@gmail.com
ಸಿಂಗಪುರದಲ್ಲಿ 1915ರಲ್ಲಿ ಬ್ರಿಟಿಷರ ವಿರುದ್ದ ಬಂದೂಕು ಕೈಗೆತ್ತಿಕೊಂಡು, ಬ್ರಿಟಿಷ್ ಅಧಿಕಾರಿಗಳನ್ನು ಸಾಯಿಸಿ, ನಂತರ ಗಲ್ಲು ಶಿಕ್ಷೆಗೆ ಗುರಿಯಾದ ಆ 47
ಸೈನಿಕರ ಹೋರಾಟವನ್ನು ಸ್ಮರಿಸುವ ಯಾವುದೇ ಸ್ಮಾರಕವು ಸಿಂಗಪುರದಲ್ಲಿ ಇಂದು ಇಲ್ಲ. ನಮ್ಮ ದೇಶದಲ್ಲೂ ಇಲ್ಲ!
ಇದೊಂದು ಸಿಪಾಯಿ ದಂಗೆ, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೇರವಾಗಿ ಸಂಬಂಧ ಪಟ್ಟಿದೆ ಎಂದು ಹೇಳಲಾಗದು. 1915ರಲ್ಲಿ ಸಿಂಗಪುರದಲ್ಲಿ ನಡೆದ ಈ ಸಿಪಾಯಿ ದಂಗೆಯನ್ನು ವಿಶ್ಲೇಷಿಸಿದ ಬ್ರಿಟಿಷ್ ಇತಿಹಾಸಕಾರರು ಮತ್ತು ಬ್ರಿಟಿಷ್ ರಾಜ್‌ನ ಅಧಿಕಾರಿಗಳು, ಇದಕ್ಕೂ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಸಂಬಂಧವೇ ಇಲ್ಲ ಎಂದು ಸಾಧಿಸುತ್ತಾ ಬಂದಿದ್ದಾರೆ.
ಬ್ರಿಟಿಷ್ ಇಂಡಿಯಾದ ನಿಯಂತ್ರಣದಲ್ಲಿದ್ದ ಸಿಂಗಪುರದಲ್ಲಿ ನಡೆದ ಈ ದಂಗೆಯು ಒಂದು ಪ್ರತ್ಯೇಕ ಘಟನೆ ಎಂದೇ ಬ್ರಿಟಿಷ್ ರಾಜ್‌ನ ಅಧಿಕೃತ ವಕ್ತಾರರು ವಾದಿಸುತ್ತಾ ಬಂದಿದ್ದಾರೆ. ಆದರೆ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ, ಅವರ ದುರಾಡಳಿತ ವಿರುದ್ಧ ಭಾರತೀಯ ಸೈನಿಕರು ನಡೆಸಿದ ಸಶಸ್ತ್ರ ದಾಳಿ ಇದು ಎಂದೇ ದಾಖ ಲಾಗಿರುವ ಈ ಹೋರಾಟವು, ಆ ಕಾಲಘಟ್ಟದ ಪ್ರಮುಖ ವಿದ್ಯಮಾನ ಎಂಬುದರಲ್ಲಿ ಯಾವುದೇ ಅನುಮಾನ ವಿಲ್ಲ. ಸಿಂಗಪುರದಲ್ಲಿ ಭಾರತೀಯ ಸೇನೆಯ 5ನೇ ಲೈಟ್ ಇನ್ ಫ್ಯಾಂಟ್ರಿ ದಳದ ಸೈನಿಕರು 15 ಫೆಬ್ರವರಿ 1915ರಂದು, ಬ್ರಿಟಿಷ್ ಸೇನಾಧಿಕಾರಿಗಳ ವಿರುದ್ಧ ದಂಗೆ ಎದ್ದು, ಬಂದೂಕುಗಳನ್ನು ಕೈಗೆ ತೆಗೆದು ಕೊಂಡು, ಮನಬಂದಂತೆ ಗುಂಡು ಹಾರಿಸಿದರು.
ನಮ್ಮ ದೇಶದ ಇತಿಹಾಸದಲ್ಲಿ 1915ರ ಒಂದು ಪ್ರಮುಖ ಕಾಲಘಟ್ಟ. 1914ರಲ್ಲಿ ಮೊದಲನೆಯ ಮಹಾಯುದ್ಧ ಆರಂಭಗೊಂಡ ನಂತರ, ಬ್ರಿಟಿಷ್ ಸೇನೆಯ ಬಹುದೊಡ್ಡ ಭಾಗವು ದೂರದ ಯುರೋಪಿನಲ್ಲಿ ಯುದ್ಧ ಮಾಡಲು ತೆರಳಿತ್ತು. ಸಿಂಗಪುರದಲ್ಲಿ ಆಗ ಭಾರತೀಯ ಸೈನಿಕರೇ ಅಧಿಕ ಸಂಖ್ಯೆಯಲ್ಲಿದ್ದರು. ಸರಿ
ಸುಮಾರು ಇದೇ ಸಮಯದಲ್ಲಿ, ಗದರ್ ಪಾರ್ಟಿ ಮತ್ತು ಅನುಶೀಲನ ಸಮಿತಿಯ ಸದಸ್ಯರು ಭಾರತದಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ದಂಗೆಗೆ ಗಂಭೀರ ಸಿದ್ಧತೆ ನಡೆಸಿದ್ದರು. ಬ್ರಿಟಿಷರ ವಶದಲ್ಲಿದ್ದ ಹೆಚ್ಚಿನ ಸೈನಿಕರು ಯುರೋಪಿನಲ್ಲಿ ಯುದ್ಧಕ್ಕೆ ಹೋಗಿದ್ದ ಈ ಸಮಯವು ಸ್ವಾತಂತ್ರ್ಯ ಪಡೆಯಲು ಸುವರ್ಣ ಕಾಲ ಎಂದು ನಮ್ಮ ದೇಶದ ಕ್ರಾಂತಿಕಾರಿಗಳು ತಿಳಿದಿದ್ದರು.
ಅದು ನಂತರ, ನಮ್ಮ ದೇಶದ ಕೆಲವರ ಒಳಸಂಚಿನಿಂದ ವಿಫಲವಾದದ್ದು ಬೇರೆ ಮಾತು. 1910-15ರ ಅವಧಿಯಲ್ಲಿ ಭಾರತದಲ್ಲಿದ್ದ ಹಲವು ಬ್ರಿಟಿಷ್ ಅಧಿಕಾರಿ ಗಳನ್ನು ಕ್ರಾಂತಿಕಾರಿಗಳು ಗುಂಡಿಟ್ಟು ಕೊಂದಿದ್ದರು. ಭಾರತದಲ್ಲಿ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವು ಜಾರಿಯಲ್ಲಿದ್ದಾಗಲೇ, ಸಿಂಗಪುರದಲ್ಲಿ ಬ್ರಿಟಿಷರ ಮೇಲೆ ಭಾರತೀಯ ಸೈನಿಕರು ದಂಗೆ ಎದ್ದು, ಗುಂಡು ಹಾರಿಸಿದ್ದು ಬಹು ಪ್ರಮುಖ ಘಟನೆಯೇ ಸರಿ.
1857ರಲ್ಲಿ ನಮ್ಮ ದೇಶದಲ್ಲಿ ನಡೆದ ಸಿಪಾಯಿ ದಂಗೆ ಮತ್ತು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಲ್ಲರಿಗೂ ಗೊತ್ತಿದ್ದದ್ದೇ. ಆ ಹೋರಾಟ ಆರಂಭವಾಗಲು ಮೂಲ ಕಾರಣವೆಂದರೆ, 42ನೆ ಬೆಂಗಾಲ್ ನೇಟಿವ್ (ಲೈಟ್) ಇನ್ಯಾಂಟ್ರಿ ಎಂಬ ಸೇನಾ ದಳ. ಅವರು ಆರಂಭಿ ಸಿದ ಗುಂಡಿನ ಕಾಳಗ ಮತ್ತು ದಂಗೆಯು, ನಂತರ ಸ್ವಾತಂತ್ರ್ಯ ಹೋರಾಟವಾಗಿ ಮುಂದುವರಿಯಿತು. 1857ರ ಹೋರಾಟವು ತಣ್ಣಗಾದ ನಂತರ, ಆ ರೆಜಿಮೆಂಟ್ ಕೆಲವು ಬದಲಾವಣೆಗೆ ಒಳಪಟ್ಟು, ಹೆಸರನ್ನೂ ಬದಲಿಸಿಕೊಂಡು, 5ನೆಯ ಲೈಟ್ ಇನ್ಯ ಫ್ಯಾಂಟ್ರಿ ಎಂದು ಗುರುತಿಸಿಕೊಂಡಿತು. ಈ ಸೇನಾ ದಳದ 850ಕ್ಕೂ ಹೆಚ್ಚು ಸೈನಿಕರು, 1915ರಲ್ಲಿ ಸಿಂಗಪುರ ದಲ್ಲಿದ್ದರು.
ಈ ದಳದ ಬಹುಪಾಲು ಸೈನಿಕರು ಮುಸ್ಲಿಮರು. ಈ ರೀತಿ ಜಾತಿವಾರು, ಪ್ರಾದೇಶಿಕವಾರು ಸೇನಾ ದಳಗಳನ್ನು ರೂಪಿಸುವಲ್ಲಿ ಬ್ರಿಟಿಷರು ನಿಸ್ಸೀಮರು ತಾನೆ! ಮುಖ್ಯವಾಗಿ ಇಂದಿನ ಹರಿಯಾಣ, ಪಂಜಾಬ್ ಮತ್ತು ದೆಹಲಿ ಪ್ರದೇಶದ ಮುಸ್ಲಿಂ ರಜಪೂತರು ಆ ರೆಜಿಮೆಂಟಿನಲ್ಲಿ ಬಹು ಸಂಖ್ಯಾತರು. ಇವರ ಜತೆಗೆ ಹಿಂದುಸ್ತಾನಿ ಪಠಾಣ್‌ರು, ಜಾಟರು ಮತ್ತು ಇತರ ಜನಾಂಗದವರೂ ಆ ರೆಜಿಮೆಂಟಿನಲ್ಲಿದ್ದರು. 5ನೆಯ ಲೈಟ್ ಇನ್ ಫ್ಯಾಂಟ್ರಿ ರೆಜಿಮೆಂಟಿನ ಮುಸ್ಲಿಂ ಸೈನಿಕರಲ್ಲಿ ಎರಡು ಬಣಗಳಿದ್ದವು. ಈ ರೆಜಿಮೆಂಟಿನ ಅಧಿಕಾರಿಯಾಗಿದ್ದ ಕರ್ನಲ್ ಮಾರ್ಟಿನ್ ಎಂಬಾತನು, 27.1.1915ರಂದು ಒಂದು ಆದೇಶ ಹೊರಡಿಸಿದ. ಆ ರೆಜಿಮೆಂಟಿನ ಸೈನಿಕರನ್ನು ಹಾಂಗ್‌ಕಾಂಗ್‌ಗೆ ವರ್ಗಾಯಿಸಲಾಗಿದೆ ಮತ್ತು ಅಲ್ಲಿದ್ದ ಭಾರತೀಯ ಸೇನಾ ತುಕಡಿಯನ್ನು ಬೇರೆಡೆಗೆ ಕಳಿಸಲಾಗುವುದು ಎಂಬ ಆ
ಆದೇಶವನ್ನು, ೫ನೆ ಲೈಟ್ ಇನ್ ಫ್ಯಾಂಟ್ರಿ ರೆಜಿಮೆಂಟಿನ ಸೈನಿಕರು ಇಷ್ಟಪಡಲಿಲ್ಲ.
ಏಕೆಂದರೆ, ಅಲ್ಲೊಂದು ಗಾಳಿಸುದ್ದಿ ಹರಡಿತ್ತು. ತಮ್ಮನ್ನು ಹಾಂಗ್‌ಕಾಂಗ್‌ಗೆ ಕಳಿಸಲಾಗುವುದಿಲ್ಲ ಬದಲಿಗೆ, ದೂರದ ಯುರೋಪ್‌ಗೆ ಕಳಿಸಲಾಗುವುದು ಮತ್ತು ಟರ್ಕಿ ಮೊದಲಾದ ಕಡೆ ಒಟ್ಟೋಮನ್ ಸಾಮ್ರಾಜ್ಯದ ವಿರುದ್ಧ ಹೋರಾಡಲು ನಿಯೋಜಿಸಲಾಗುವುದು ಎಂಬುದೇ ಆ ಗಾಳಿಸುದ್ದಿ. ಮುಸ್ಲಿಂ ಸೈನಿಕರೇ ಬಹು ಸಂಖ್ಯಾತರಾಗಿದ್ದ ಈ ರೆಜಿಮೆಂಟಿನವರು, ಟರ್ಕಿ ಮೊದಲಾದ ಕಡೆ ಮುಸ್ಲಿಮ್ ಸೈನ್ಯದ ವಿರುದ್ಧ ಹೋರಾಡಲು ಇಷ್ಟಪಡಲಿಲ್ಲ. ಭಾರತೀಯ ಸೇನಾಧಿಕಾರಿ ಗಳಾಗಿದ್ದ ಸುಬೇದಾರ್ ದುಂಡೇ ಖಾನ್, ಜಮೇದಾರ್ ಚಿಸ್ಟಿ ಖಾನ್ ಮತ್ತು ಜಮೇದಾರ್ ಅಲಿ ಖಾನ್ ಎಂಬುವವರು, ಒಳಸಂಚನ್ನು ರೂಪಿಸಿ, ಬ್ರಿಟಿಷರ ವಿರುದ್ಧ
ಹೋರಾಡಲು ನಿರ್ಧರಿಸಿದರು. 15 ಫೆಬ್ರವರಿ 1915ರಂದು, ಈ ರೆಜಿಮೆಂಟಿನ ಸೈನಿಕರಿಗೆ ವಿದಾಯ ಹೇಳಿದ ಬ್ರಿಟಿಷ್ ಅಧಿಕಾರಿಯು, ಶುಭ ಹಾರೈಸಿದನೇ ಹೊರತು, ಹಾಂಗ್‌ಕಾಂಗ್‌ಗೆ ಹೋಗಲಿದ್ದೀರಿ ಎಂದು ಹೇಳಲಿಲ್ಲ!
ಅದಾಗಲೇ ತಮ್ಮನ್ನು ಯುರೋಪ್‌ಗೆ ಕಳಿಸಲಾಗುವುದು ಎಂಬ ಗಾಳಿಸುದ್ದಿಯಿಂದ ಗೊಂದಲಗೊಂಡಿದ್ದ ಸೈನಿಕರಿಗೆ, ಬ್ರಿಟಿಷ್ ಅಧಿಕಾರಿಯ ಈ ನಡೆಯು
ಅನುಮಾನ ಹುಟ್ಟಿಸಿತು. ಅದೇ ದಿನ ಮಧ್ಯಾಹ್ನ 3.20ಕ್ಕೆ, ರಜಪೂತ್ ಮುಸ್ಲಿಮರೇ ಇದ್ದ ನಾಲ್ಕು ಕಂಪೆನಿಗಳು ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಮಿಕ್ಕ ನಾಲ್ಕು ಕಂಪೆನಿಗಳಲ್ಲಿ ಹಿಂದುಸ್ತಾನಿ ಪಠಾಣರು ಬಹುಸಂಖ್ಯಾತರು; ಅವರು ಬ್ರಿಟಿಷರ ವಿರುದ್ಧ ದಂಗೆ ಏಳಲಿಲ್ಲ, ಆದರೆ ಏನು ಮಾಡುವುದೆಂದು ತಿಳಿಯದೆ ತೀವ್ರ
ಗೊಂದಲಕ್ಕೆ ಒಳಗಾದರು.
ಮೊದಲ ಗುಂಡುಗಳಿಗೆ ಇಬ್ಬರು ಬ್ರಿಟಿಷ್ ಅಧಿಕಾರಿಗಳು ಬಲಿಯಾದರು. ದಂಗೆದ್ದ ಸೈನಿಕರು ತಮ್ಮಲ್ಲಿ ಮೂರು ಗುಂಪುಗಳನ್ನಾಗಿ ಮಾಡಿಕೊಂಡು, ತಂಗ್ಲಿನ್ ಬ್ಯಾರಕ್‌ಗೆ ನಡೆದರು. ಅಲ್ಲಿ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ಶೇಖರಿಸಲಾಗಿತ್ತು. ಜತೆಗೆ, ಬ್ರಿಟಿಷರು ಸೆರೆ ಹಿಡಿದಿದ್ದ ಎಸ್‌ಎಂಎಸ್ ಎಮ್‌ಡನ್ ನೌಕೆಯಲ್ಲಿದ್ದ 309 ಜರ್ಮನರನ್ನು ಅಲ್ಲಿ ಕೂಡಿಹಾಕಲಾಗಿತ್ತು. ದಂಗೆದ್ದ ಸೈನಿಕರ ಗುಂಡುಗಳಿಗೆ ಹತ್ತು ಬ್ರಿಟಿಷ್ ಸೈನಿಕರು ಬಲಿಯಾದರು. ಸೈನಿಕರ ಮುಖ್ಯ
ಉದ್ದೇಶವೆಂದರೆ, ಅಲ್ಲಿ ಬಂಧನಕ್ಕೆ ಒಳಗಾಗಿದ್ದ ಜರ್ಮನರನ್ನು ಬಿಡಿಸಿ, ಅವರನ್ನು ಬ್ರಿಟಿಷರ ವಿರುದ್ಧದ ಈ ಹೋರಾಟಕ್ಕೆ ಸೇರಿಸಿಕೊಳ್ಳುವುದು. ಆದರೆ ಅದೇಕೋ ಹೆಚ್ಚಿನ ಜರ್ಮನರು ಇವರು ನೀಡಿದ ಬಂದೂಕುಗಳನ್ನು ಸ್ವೀಕರಿಸದೇ, ತಟಸ್ಥ ಧೋರಣೆ ಅನುಸರಿಸಿದರು.
35 ಜರ್ಮನರು ತಪ್ಪಿಸಿಕೊಂಡರು. ಬಂದೂಕುಗಳನ್ನು ಕೈಗೆತ್ತಿಕೊಂಡು ಬೀದಿಯಲ್ಲಿ ಸಂಚರಿಸತೊಡಗಿದ ಸೈನಿಕರು, 18 ಯುರೋಪಿಯನ್ ಮತ್ತು ಸ್ಥಳೀಯ ನಾಗರಿಕರನ್ನು ಸಾಯಿಸಿದರು. ಬ್ರಿಟಿಷ್ ಸೇನೆಯ ಇತರ ತುಕಡಿಗಳು ಒಂದೋ ಯುರೋಪಿನಲ್ಲಿ ಯುದ್ಧದಲ್ಲಿ ಪಾಲ್ಗೊಳ್ಳಲು ಹೋಗಿದ್ದವು ಅಥವಾ ಚೀನಾದ ಹೊಸ
ವರ್ಷದಲ್ಲಿ ಭಾಗವಹಿಸಲು ಹೋಗಿದ್ದರು. ಆದ್ದರಿಂದ ಎರಡು ದಿನ ದಂಗೆದ್ದ ಸೈನಿಕರನ್ನು ಎದುರಿಸುವವರೇ ಇರಲಿಲ್ಲ.
ಸಹಾಯಕ್ಕಾಗಿ ಮೊದಲ ಮಹಾಯುದ್ಧದ ಮಿತ್ರಪಡೆಯ ಇತರ ದೇಶಗಳಿಗೆ ಬ್ರಿಟಿಷರು ತುರ್ತು ಸಂದೇಶ ಕಳಿಸಿದರು. 17 ಫೆಬ್ರವರಿಯಂದು ಫ್ರೆಂಚ್ ನೌಕಾದಳ ಸಿಂಗಪುರಕ್ಕೆ ಬಂತು. ಅದರ ಬೆನ್ನಹಿಂದೆಯೇ ರಷ್ಯಾ ಮತ್ತು ಜಪಾನಿನ ಯುದ್ಧನೌಕೆಗಳು ಬಂದವು. 75 ಜಪಾನಿ ಸೈನಿಕರು, 22 ರಷ್ಯನ್ ಸೈನಿಕರು, 190 ಫ್ರೆಂಚ್ ಸೈನಿಕರು ಬಂದು, ದಂಗೆಕೋರರನ್ನು ಹುಡುಕಲು ಆರಂಭಿಸಿದರು. ಇವರ ಜತೆ 36ನೇ ಸಿಖ್ ದಳದ 60 ಭಾರತೀಯ ಸೈನಿಕರೂ ಸೇರಿಕೊಂಡರು.
ಸುತ್ತಮುತ್ತಲಿನ ಕಾಡುಗಳಲ್ಲಿ ಅಡಗಲು ಪ್ರಯತ್ನಿಸಿದ್ದ ಭಾರತೀಯ ಸೈನಿಕರು ಹೆಚ್ಚು ಹೋರಾಟ ನಡೆಸಲು ಆಗಲಿಲ್ಲ. ಅವರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ನಾಯಕತ್ವದ ಕೊರತೆ ಇತ್ತು. ತಮ್ಮನ್ನು ಹಿಡಿಯಲು ಬಂದ ಸೈನಿಕರಿಗೆ ಭಾರತೀಯ ಸೈನಿಕರು ಕೈ ಎತ್ತಿ ಶರಣಾದರು.
17 ಫ್ರೆಬ್ರವರಿ 1915ರ ಸಮಯಕ್ಕೆ ಸಿಂಗಪುರದ ಸೈನಿಕರ ದಂಗೆ ತಣ್ಣಗಾಯಿತು. 432 ಭಾರತೀಯ ಸೈನಿಕರನ್ನು ಬಂಽಸಲಾಯಿತು. ಇವರಲ್ಲಿ ಬಹು
ಪಾಲು ಜನರು ಮುಸ್ಲಿಮರು. ಅದಾಗಲೇ ಸಿಂಗಪುರವನ್ನು ಪುನಃ ತಮ್ಮ ಕೈವಶಮಾಡಿಕೊಂಡಿದ್ದ ಬ್ರಿಟಿಷ್ ಅಧಿಕಾರ ಶಾಹಿ ಚುರುಕಾಯಿತು. ತ್ವರಿತವಾಗಿ, ಅಂದರೆ 23 ಫೆಬ್ರವರಿ ಯಂದು ವಿಚಾರಣೆ ಆರಂಭವಾಯಿತು. ಬ್ರಿಟಿಷರು ಇಂತಹ ವಿಚಾರಣೆಯನ್ನು ತ್ವರಿತವಾಗಿ ಮತ್ತು ನಿಷ್ಕರುಣೆಯಿಂದ ನಡೆಸುತ್ತಾರೆ. ವಿಚಾರಣೆ ನಡೆಸುವವರು ಬಿಳಿಯರು, ತಪ್ಪಿತಸ್ಥರು ಭಾರತೀಯ ಮೂಲದವರಾಗಿದ್ದರಂತೂ, ವಿಧಿಸುವ ಶಿಕ್ಷೆಯೂ ಕಠಿಣ.
ದಂಗೆಯಲ್ಲಿ ಪಾಲ್ಗೊಂಡ 47 ಭಾರತೀಯ ಸೈನಿಕರನ್ನು ಬಹಿರಂಗವಾಗಿ ಗುಂಡಿಟ್ಟು ಕೊಲ್ಲಲಾಯಿತು. ಭಾರತೀಯ ಸೈನಿಕರ ಈ ವಧೆಯನ್ನು ನೋಡಲು 15000 ಜನ ಸಿಂಗಪುರದ ನಾಗರಿಕರು ಸೇರಿದ್ದರು! 64 ಸೈನಿಕರಿಗೆ ಕಾಲಾಪಾನಿ ಶಿಕ್ಷೆ ವಿಧಿಸಲಾಯಿತು. 73 ಜನರಿಗೆ 7 ರಿಂದ 20 ವರ್ಷಗಳ ಅವಽ ಕಠಿಣ ಕಾರಾಗ್ರಹ ಶಿಕ್ಷೆ ವಿಧಿಸಲಾಯಿತು. ಸಿಂಗಪುರದಲ್ಲಿ ಭಾರತೀಯ ಸೈನಿಕರು ಬ್ರಿಟಿಷ್ ವಸಾಹತುಶಾಹಿಯ ವಿರುದ್ಧ ನಡೆಸಿದ ದಂಗೆಯು ಈ ರೀತಿ ಅಂತ್ಯಗೊಂಡಿತು. ಆ ನಂತರ, 5ನೇ ಲೈಟ್ ಇನ್ ಫ್ಯಾಂಟ್ರಿ ದಳದಲ್ಲಿ 588 ಭಾರತೀಯ ಸೈನಿಕರು ಉಳಿದುಕೊಂಡರು. ಇವರನ್ನು 3 ಜುಲೈ 1915 ರಂದು ಅಲ್ಲಿಂದ ಹಡಗಿನಲ್ಲಿ ತುಂಬಿ ಕಳಿಸಲಾಯಿತು. ಎಲ್ಲಿಗೆ? ದೂರದ ಆಫ್ರಿಕಾಕ್ಕೆ!
ದಂಗೆಯ ಮುಂಚೆ ಹರಡಿದ್ದ ಗಾಳಿಸುದ್ದಿಯು ಅಷ್ಟರ ಮಟ್ಟಿಗೆ ನಿಜವಾಗಿತ್ತು! ಬ್ರಿಟಿಷ್ ಅಧಿಕಾರಿಗಳನ್ನು ಭಾರತೀಯ ಸೈನಿಕರು ಸಾಯಿಸಿದ ಈ ಸುದ್ದಿಯನ್ನು ಬ್ರಿಟಿಷರು ಒಂದೆರಡು ವಾರಗಳ ಕಾಲ ಮುಚ್ಚಿಟ್ಟಿದ್ದರು ಅಥವಾ ಸೆನ್ಸಾರ್ ಮಾಡಿದ್ದರು. ಅಂದಿನ ದಿನಗಳಲ್ಲಿ ಹಾಗೇ ತಾನೆ – ಸರಕಾರವು ಇಷ್ಟಪಟ್ಟ ಸುದ್ದಿಗಳು
ಮಾತ್ರ ಪತ್ರಿಕೆಗಳಲ್ಲಿ ಬರುತ್ತಿದ್ದವು. ಕೊನೆಗೂ, ದಂಗೆಯನ್ನು ಅಡಗಿಸಿ ಎರಡು ವಾರಗಳ ನಂತರ, 2 ಮಾರ್ಚ್ 1915ರಂದು ಈ ಸುದ್ದಿಯು ಭಾರತದ ಪತ್ರಿಕೆ ಗಳಲ್ಲಿ ಪ್ರಕಟಗೊಂಡಿತು. ಅಲ್ಲಿಯ ತನಕ ಇಲ್ಲಿನವರಿಗೆ ಇಂತಹ ದೊಂದು ಪ್ರಮುಖ ಹೋರಾಟದ ವಿವರ ತಿಳಿದಿರಲಿಲ್ಲ.
ಈ ನಡುವೆ, 1913ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದ ಗದ್ದರ್ ಪಾರ್ಟಿಯು, ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟವನ್ನು ಚಾಲ್ತಿಯಲ್ಲಿಟ್ಟಿತ್ತು. ಸಿಂಗಪುರದ ದಂಗೆಯು ತಮ್ಮ ಹೋರಾಟದ ಸ್ಫೂರ್ತಿಯಿಂದ ಭುಗಿಲೆದ್ದದ್ದು ಎಂದು ಗದ್ದರ್ ಹೋರಾಟಗಾರರು ಆರಂಭದಲ್ಲಿ ಹೇಳಿಕೊಂಡದ್ದುಂಟು. ಅವರು ನಿರಂತರವಾಗಿ ಹೊರಡಿಸುತ್ತಿದ್ದ ಕರಪತ್ರಗಳು, ಹೋರಾಟಕ್ಕೆ ಕರೆ ನೀಡುವ ಪತ್ರಗಳು ಸಿಂಗಪುರವನ್ನು ತಲುಪಿದ್ದರೂ, ಗದ್ದರ್ ಚಳವಳಿಗೂ ಈ ದಂಗೆಗೂ ಸಂಬಂಧ ಇಲ್ಲ ಎಂದೇ ಇತಿಹಾಸದಲ್ಲಿ
ದಾಖಲಾಗಿದೆ. ಆದರೆ, 1915ರ ಸಮಯದಲ್ಲಿ ಭಾರತದಲ್ಲಿ ಬ್ರಿಟಿಷರ ವಿರುದ್ಧ ಸೇನಾ ದಂಗೆಯನ್ನು ಯೋಜಿಸಲು ಗದ್ದರ್ ಪಕ್ಷದ ಸದಸ್ಯರು ಯೋಜಿಸಿದ್ದರು ಎಂಬುದು ನಿಜ.
ಸಿಂಗಪುರದಲ್ಲಿ ದಂಗೆದ್ದ ಸೈನಿಕರು ದೂರದ ಯರೋಪಿನಲ್ಲಿ ಮತ್ತು ಒಟ್ಟೋಮನ್‌ನ ಮುಸ್ಲಿಂ ಸೈನ್ಯದ ವಿರುದ್ಧ ಹೋರಾಡಲು ಇಷ್ಟ ಪಡದೇ ಇದ್ದುದೇ ಈ ಸಶಸ ದಂಗೆಗೆ ಪ್ರಮುಖ ಕಾರಣ ಎಂದು ಹೆಚ್ಚಿನ ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ. ಈ ದಂಗೆಯ ನಂತರ ಬ್ರಿಟಿಷ್ ರಾಜ್‌ನಲ್ಲಿ ಭಾರತೀಯ ಸೈನಿಕರ ನಿಷ್ಠೆಯ ಕುರಿತು ಸಣ್ಣ ಮಟ್ಟದ ಚರ್ಚೆಯೂ ನಡೆದಿತ್ತು. ಸಿಂಗಪುರ ದಂತಹ ವಸಾಹತುಗಳನ್ನು ತಮ್ಮಲ್ಲೇ ರಕ್ಷಿಸಿಕೊಳ್ಳಲು ಭಾರತೀಯ ಸೈನಿಕರನ್ನು ನಂಬಬಹುದೇ
ಎಂದು ಬ್ರಿಟಿಷರಿಗೆ ಅನುಮಾನವೂ ಬಂದಿತ್ತು. ಈ ದಂಗೆಯಾಗಿ 27 ವರ್ಷಗಳ ನಂತರ, 1942ರಲ್ಲಿ ಜಪಾನಿನ ಸೈನ್ಯವು ಸಿಂಗಪುರವನ್ನು ಆಕ್ರಮಿಸಿತು
ಆಗ ಅಲ್ಲಿದ್ದ ಬ್ರಿಟಿಷ್ ಸೈನ್ಯದ 80000 ಸೈನಿಕರು ಶರಣಾದರು. ಅವರಲ್ಲಿ 40000 ಜನ ಭಾರತೀಯರು.
ಈ ನಲವತ್ತು ಸಾವಿರ ಜನರ ಪೈಕಿ, ಸುಮಾರು 30000 ಜನರು ಸುಭಾಷ್ ಚಂದ್ರ ಬೋಸ್‌ರ ಸೈನ್ಯವಾದ ಇಂಡಿಯನ್ ನ್ಯಾಷನಲ್ ಆರ್ಮಿಗೆ ಸೇರ್ಪಡೆ ಗೊಂಡು, ಬ್ರಿಟಿಷರ ವಿರುದ್ಧ ಹೋರಾಡಿದರು! ಸಿಂಗಪುರದಲ್ಲಿ 1915ರಲ್ಲಿ ಬ್ರಿಟಿಷರ ವಿರುದ್ದ ಬಂದೂಕು ಕೈಗೆತ್ತಿಕೊಂಡು, ಬ್ರಿಟಿಷ್ ಅಧಿಕಾರಿಗಳನ್ನು ಸಾಯಿಸಿ, ನಂತರ ಗಲ್ಲು ಶಿಕ್ಷೆಗೆ ಗುರಿಯಾದ ಆ 47 ಸೈನಿಕರ ಹೋರಾಟವನ್ನು ಸ್ಮರಿಸುವ ಯಾವುದೇ ಸ್ಮಾರಕವು ಸಿಂಗಪುರದಲ್ಲಿ ಇಂದು ಇಲ್ಲ. ನಮ್ಮ ದೇಶದಲ್ಲೂ ಇಲ್ಲ! ಹಾಗಿದ್ದಲ್ಲಿ ೫ನೇ ಲೈಟ್ ಇನ್ ಫ್ಯಾಂಟ್ರಿ ರೆಜಿಮೆಂಟಿನ ಸೈನಿಕರ ಆ ಹೋರಾಟವು ಸಂಪೂರ್ಣವಾಗಿ ವ್ಯರ್ಥವಾಯಿತು ಎಂದೆನ್ನಬಹುದೆ?