Friday, 13th December 2024

Shankar Ayyar Column: ಹಣದ ಹಂಚಿಕೆಯನ್ನು ತಿಳಿದುಕೊಳ್ಳುವುದು ನಮ್ಮ ಹಕ್ಕು

ವಿಶ್ಲೇಷಣೆ

ಶಂಕರ್‌ ಅಯ್ಯರ್‌

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮತ್ರಿಕೂಟಕ್ಕೆ ಸಿಕ್ಕಿರುವ ತಿರುವು, ಅಲ್ಲಿನ ರಾಜಕೀಯ ಇತಿಹಾಸದಲ್ಲಿ ವಿರಳವಾಗಿರುವಂಥದ್ದು ಎನ್ನಲಡ್ಡಿಯಿಲ್ಲ. 1983ರ ವಿಶ್ವಕಪ್ ಕ್ರಿಕೆಟ್‌ನ ಪಂದ್ಯವೊಂದರಲ್ಲಿ ಭಾರತಕ್ಕೆ ದಕ್ಕಿದ ಐತಿಹಾಸಿಕ ಗೆಲುವಿನೊಂದಿಗೆ ಮಾತ್ರವೇ ಇದನ್ನು ಹೋಲಿಸಬಹುದು. ನಿಮಗೆ ನೆನಪಿರಬಹುದು, ಆ ವರ್ಷದ ಜೂನ್‌ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದ ಒಂದು ಹಂತದಲ್ಲಿ ಭಾರತ ತಂಡವು 17 ರನ್ನುಗಳಿಗೆ 5 ವಿಕೆಟ್ಟುಗಳನ್ನು ಕಳಕೊಂಡು ಪತರಗುಟ್ಟುತ್ತಿತ್ತು; ಆಗ ಅಖಾಡಕ್ಕಿಳಿದ ಕಪಿಲ್‌ದೇವ್ ಅಜೇಯ 175 ರನ್ನುಗಳನ್ನು ಚಚ್ಚಿ ಕೆಡವಿದರು, 266 ರನ್ನುಗಳನ್ನು ಗಳಿಸಿ ಭಾರತ ವಿಜಯಶಾಲಿಯಾಯಿತು. ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿಯು ಸ್ವತಂತ್ರವಾಗಿ ದಕ್ಕಿಸಿಕೊಂಡಿರುವ 132 ಸ್ಥಾನಗಳು, ಅದರ ಎದುರಾಳಿಗೆ ಸಿಕ್ಕಿರುವ ಸ್ಥಾನಗಳ ದುಪ್ಪಟ್ಟು ಪ್ರಮಾಣಕ್ಕಿಂತಲೂ ಹೆಚ್ಚಿದ್ದರೆ, ಏಕನಾಥ ಶಿಂದೆಯವರ ಶಿವಸೇನೆಯು ಪಡೆದಿರುವ 57 ಸ್ಥಾನಗಳು, ‘ಮಹಾವಿಕಾಸ್ ಅಘಾಡಿ’ ಮೈತ್ರಿಕೂಟದ ಮೂರು ಅಂಗಭಾಗಳೆನಿಸಿಕೊಂಡಿರುವ ಪಕ್ಷಗಳು ದಕ್ಕಿಸಿಕೊಂಡಿರುವ ಸ್ಥಾನಗಳಿಗಿಂತಲೂ ಹೆಚ್ಚೆನಿಸಿಕೊಂಡಿವೆ.

ಈ ಭರ್ಜರಿ ಬೇಟೆಯ ಮೌಲ್ಯನಿರ್ಣಯ ಮಾಡಲು ಕೊಂಚವೇ ಫ್ಲ್ಯಾಷ್‌ಬ್ಯಾಕ್‌ಗೆ ತೆರಳಬೇಕಾಗುತ್ತದೆ. 2024ರ ಜೂನ್‌ನಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ, ಮಹಾಯುತಿ’ ಮೈತ್ರಿಕೂಟವನ್ನು ‘ಮಹಾವಿಕಾಸ್ ಅಘಾಡಿ’ ಒಕ್ಕೂಟವು ಗಣನೀಯವಾಗಿ ಮೀರಿಸಿತ್ತು. ಹೀಗಾಗಿ, ಮತದಾರ ರನ್ನು ಮತ್ತೊಮ್ಮೆ ಸೆಳೆಯಲೆಂದು ತನ್ನ ಮಾಂತ್ರಿಕ ಶಕ್ತಿಯನ್ನು ಮತ್ತೆ ಕಂಡುಕೊಳ್ಳಬೇಕಾದ, ತನ್ನ ಕಾರ್ಯತಂತ್ರಗಳು ಮತ್ತು ಸಾಧನ-ಸಲಕರಣೆಗಳನ್ನು ಮತ್ತೊಮ್ಮೆ ಸಜ್ಜುಗೊಳಿಸಬೇಕಾದ, ಒಕ್ಕೂಟದ ಬ್ರ್ಯಾಂಡ್ ಅನ್ನು ಮತ್ತೊಮ್ಮೆ ಸ್ಥಾಪಿಸಬೇಕಾದ ದೊಡ್ಡ ಸವಾಲು ಮಹಾಯುತಿ ಮೈತ್ರಿಕೂಟಕ್ಕೆ ಎದುರಾಯಿತು.

ಭೌಗೋಳಿಕವಾಗಿ ಆರು ಪ್ರಮುಖ ವಲಯಗಳಲ್ಲಿ ಮೈಚಾಚಿಕೊಂಡಿರುವ ಮಹಾರಾಷ್ಟ್ರದ ಮತದಾರ ಸಮೂಹವು ಬಹುತೇಕ ಒಂದು ಸಾಮಾನ್ಯ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಅಂದರೆ, ಇಲ್ಲಿನ ಸಮಾಜದ ಬಹುತೇಕ ಪ್ರತಿಯೊಂದು ವರ್ಗವೂ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿ ಒಂದಲ್ಲಾ ಒಂದು ಕುಂದುಕೊರತೆಯಿಂದ ಬಳಲುತ್ತಿರುವಂಥದ್ದೇ, ಆ ಕುರಿತಾಗಿ ಕೆರಳಿರುವಂಥದ್ದೇ; ಮೀಸಲಾತಿಗಳಿಗೆ ಸಂಬಂಧಿ ಸಿದ ಪ್ರತಿಭಟನೆಗಳಿಂದ ಮೊದಲ್ಗೊಂಡು ದಿನಬಳಕೆಯ ವಸ್ತುಗಳ ಬೆಲೆಯೇರಿಕೆಯವರೆಗೆ, ನಿರುದ್ಯೋಗ ಸಮಸ್ಯೆಯಿಂದ ಮೊದಲ್ಗೊಂಡು ಕೃಷಿವಲಯದ ಸಂಕಟದವರೆಗೆ ಇಲ್ಲಿ ಕಾಣಬರುವ ಸಮಸ್ಯೆಗಳು/ಕುಂದುಕೊರತೆಗಳು ವಿಧ್ಯಮಯವಾಗಿವೆ ಎನ್ನಲಡ್ಡಿಯಿಲ್ಲ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಚುನಾವಣೆಗೆ ಸುಮಾರು 90 ದಿನಗಳಷ್ಟು ಮುಂಚೆ ಅದೃಷ್ಟದ ಪುನರುಜ್ಜೀವನಕ್ಕೆ ಅಡಿಪಾಯ ಹಾಕಲಾಯಿತು. ರಾಜ್ಯದ ಸುಮಾರು 22 ಮಿಲಿಯನ್ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು 1500 ರುಪಾಯಿ ನಗದು ವರ್ಗಯಿಸುವ,
ಶಿಂದೆ ನೇತೃತ್ವದ ಮಹಾಯುತಿ ಆಡಳಿತವು ಚಾಲನೆ ನೀಡಿದ್ದ ‘ಲಡಕಿ ಬಹೀಣ್’ (ಚಿಛ್ಝಿಟqಛಿb oಜಿoಠಿಛ್ಟಿ) ಯೋಜನೆಯನ್ನು ಆಗಸ್ಟ್ 17ರಂದು ಪರಿಷ್ಕರಿಸಿ ಈ ಮೊತ್ತವನ್ನು 2100 ರುಪಾಯಿಗೆ ಹೆಚ್ಚಿಸಲಾಯಿತು ಹಾಗೂ ಒಂದೊಮ್ಮೆ ಮರುಆಯ್ಕೆಯಾದರೆ ಈ ಮೊತ್ತವನ್ನು 3000 ರುಪಾಯಿಗೆ ದುಪ್ಪಟ್ಟು ಮಾಡುವ ಭರವಸೆ ನೀಡಲಾಯಿತು. ಹೀಗಾಗಿ ಮಹಿಳಾ ಮತದಾರರು ಓಗೊಡುವ ಪ್ರಮಾಣವು ನವೆಂಬರ್ 20ರಂದು ಶೇ.59ರಿಂದ ಶೇ.62ಕ್ಕೆ ಏರಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ. ಆದ್ದರಿಂದ, ‘ಲಡಕಿ ಬಹೀಣ್’ ಯೋಜನೆಯನ್ನು ಒಂದು ಗಮನಾರ್ಹ ಸಂಗತಿ ಎಂದೇ ಪರಿಗಣಿಸಬೇಕು.

ಇದರ ಪರಿಣಾಮಕಾರಿತ್ವ ಏನು, ಎಷ್ಟು? ಎಂಬುದು ಗೊತ್ತಿರುವ ಸಂಗತಿಯೇ. ಕರ್ನಾಟಕ, ಮಧ್ಯಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಈ ಪರಿಕಲ್ಪ ನೆಯು ನೀಡಿರುವ ಫಲಿತಾಂಶ ಎಂಥದ್ದು ಎಂಬುದು ಗೊತ್ತಿದ್ದ ಸಂಗತಿಯೇ ಆಗಿದ್ದರಿಂದ, ಮಹಾರಾಷ್ಟ್ರದಲ್ಲಿ ಇದು ಫಲಪ್ರದವಾಗುವುದಿಲ್ಲ ಎನ್ನುವುದಕ್ಕೆ ಯಾವುದೇ ಕಾರಣವಿರಲಿಲ್ಲ.

‘ಮೈಯಾ ಸಮ್ಮಾನ್ ಯೋಜನಾ’ ಎಂಬ ಯೋಜನೆಯನ್ನು ಜಾರಿಗೆ ತಂದ ಜಾರ್ಖಂಡ್ ರಾಜ್ಯ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಉಪಾಯ ಫಲ ನೀಡಿದೆ, ಆಯಾ ರಾಜ್ಯದಆಡಳಿತಾರೂಢ ಪಕ್ಷಗಳನ್ನು ರಕ್ಷಿಸಿದೆ ಎನ್ನಬೇಕು. ಇಂಥ ಯೋಜನೆಗಳ ಪರಿಣಾಮಕಾರಿ ಜಾರಿಯಿಂದಾಗಿ,
ಸಾಮಾಜಿಕ ಶ್ರೇಣಿ ವ್ಯವಸ್ಥೆಯ ಕೆಳಭಾಗದಲ್ಲಿರುವವರು ಯೋಜನೆಯು ನೀಡುವ ಸೌಲಭ್ಯವನ್ನು ಬಳಸಿಕೊಂಡು, ಅದನ್ನು ಕಲ್ಪಿಸಿದವರಿಗೆ ಮತ ಚಲಾಯಿಸಲು ಮುಂದಾಗುವಷ್ಟರ ಮಟ್ಟಿಗೆ ಸನ್ನಿವೇಶದಲ್ಲಿ ಮಾರ್ಪಾಡಾಗಿದೆ. ಶಿಂದೆ ಆಡಳಿತಾವಧಿಯಲ್ಲಿ ಚಾಲನೆಗೊಂಡಿದ್ದು ‘ಲಡಕಿ
ಬಹೀಣ್’ ಯೋಜನೆಯಷ್ಟೇ ಅಲ್ಲ; ಚುನಾವಣಾ ಪೂರ್ವದಲ್ಲಿ ಅದು ಘೋಷಿಸಿದ ಯೋಜನೆಗಳಲ್ಲಿ ಕೃಷಿಕರಿಗಾಗಿ ಶೂನ್ಯ-ಬಿಲ್‌ನ ವಿದ್ಯುಚ್ಛಕ್ತಿ, ಉಚಿತ ಬಸ್ ಪ್ರಯಾಣ, ಪ್ರತಿ ಹಸುವಿಗೆ 50 ರುಪಾಯಿಯಂತೆ ದೇಸಿ ಹಸುಗಳಿಗೆ ನಗದುಭತ್ಯೆ, ಮದರಸಾ ಶಿಕ್ಷಕರ ವೇತನದಲ್ಲಿ ಹೆಚ್ಚಳ, ವಿದ್ಯಾರ್ಥಿಗಳಿಗೆ 10000 ರು., ಕೃಷಿಕರಿಗೆ 15000 ರು. ಮುಂತಾದ ಸೌಲಭ್ಯಗಳೂ ಸೇರಿದ್ದವು. ಈ ಸಂದರ್ಭದಲ್ಲಿ ಒಂದು ಪ್ರಶ್ನೆ ಹುಟ್ಟಿಕೊಳ್ಳು ವುದು ಸಹಜ.

ಅದೆಂದರೆ- ‘ಲಡಕಿ ಬಹೀಣ್’ ಯೋಜನೆ ಸೇರಿದಂತೆ ಜನಪ್ರಿಯ ಯೋಜನೆಗಳ ಮಹಾಪೂರ ಹಾಗೂ ಬಿಜೆಪಿ ನೇತೃತ್ವದ ಮೈತ್ರಿಕೂಟದ ಚುನಾವಣಾ ನಿರ್ವಹಣೆಯ ಸಾಮರ್ಥ್ಯಗಳು, ಮತದಾರರ ತಲ್ಲಣ, ಕೋಪ ಮತ್ತು ಅಸಮಾಧಾನಗಳನ್ನು ಪರಿಣಾಮಕಾರಿಯಾಗಿ ಎದುರಿಸ ಬಲ್ಲವೇ? ಅವಕ್ಕೆ ಮದ್ದು ಅರೆಯಬಲ್ಲವೇ? ಎಂಬುದು.

ಇಂಥ ಜನಪ್ರಿಯ ಯೋಜನೆಗಳ ಫಲವಾಗಿ ಮತದಾರರಿಂದ ದಕ್ಕುವ ಪ್ರತಿಸ್ಪಂದನೆ ಒತ್ತಟ್ಟಿಗಿರಲಿ, ಇಂಥ ಯೋಜನೆಗಳು ಆರ್ಥಿಕ ಸ್ಥಿತಿಗತಿಗಳ ಮೇಲೆ ಗಣನೀಯ ಪರಿಣಾಮ ಬೀರುವುದನ್ನು ತಳ್ಳಿಹಾಕಲಾಗದು. ಲಭ್ಯ ಮಾಹಿತಿಯಂತೆ, ಮಹಾರಾಷ್ಟ್ರವು ಈಗಾಗಲೇ 7.11 ಲಕ್ಷ ಕೋಟಿ ರುಪಾಯಿಗೂ ಹೆಚ್ಚಿನ ಆರ್ಥಿಕ ಹೊರೆಯನ್ನು ಹೊತ್ತಿದೆಯಂತೆ; ಇದರಿಂದಾಗಿ ಬಡ್ಡಿ ಪಾವತಿಗಳ ರೂಪದಲ್ಲೇ ಸರಕಾರಕ್ಕೆ ದಿನವೊಂದಕ್ಕೆ 133 ಕೋಟಿ ರುಪಾಯಿ (ಅಂದರೆ ವರ್ಷಕ್ಕೆ 48578 ಕೋಟಿ ರು.) ವೆಚ್ಚವಾಗುತ್ತಿದೆಯಂತೆ. ಇಂಥ ಗ್ಯಾರಂಟಿ ಯೋಜನೆಗಳ ಪಥನಿರ್ಮಾಪಕ ಎನಿಸಿಕೊಂಡಿರುವ ಕರ್ನಾಟಕ ರಾಜ್ಯದಲ್ಲೂ ಇದೇ ಕಥೆ; ವಿಧಾನಸಭಾ ಚುನಾವಣೆಯ ವೇಳೆ ನೀಡಲಾಗಿದ್ದ ಪಂಚ ಗ್ಯಾರಂಟಿಗಳ ಭರವಸೆಯ ಈಡೇರಿಕೆಗೆ ಸಂಬಂಧಿಸಿ ಕರ್ನಾಟಕವು 65000 ಕೋಟಿ ರು.ಹಣವನ್ನು ವಿನಿಯೋಗಿಸಬೇಕಾಗಿ ಬಂದಿದ್ದು, ಇದರಿಂದಾಗಿ 5.35ಲಕ್ಷ ರು.ನಷ್ಟು ಆರ್ಥಿಕ ಹೊರೆಗೆ ಮತ್ತು 36000 ಕೋಟಿ ರು.ಗೂ ಹೆಚ್ಚಿನ ಬಡ್ಡಿ ಪಾವತಿಗಳಿಗೆ ಕರ್ನಾಟಕ ಒಡ್ಡಿಕೊಳ್ಳುವಂತಾಗಿದೆ.

ಕರ್ನಾಟಕ, ಜಾರ್ಖಂಡ್, ಮಧ್ಯಪ್ರದೇಶ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದ ನಗದು ವರ್ಗಾವಣೆ ಯೋಜನೆಗಳು ಪ್ರಸ್ತುತ ಚಾಲ್ತಿಯಲ್ಲಿವೆ. ಒಂದು ಅಂದಾಜಿನ ಪ್ರಕಾರ, ಸದರಿ ಯೋಜನೆಗಳು ಆಯಾ ರಾಜ್ಯಗಳ ಆದಾಯಗಳ ಶೇ. 3ರಿಂದ ಶೇ.11ರಷ್ಟು ಪಾಲನ್ನು ಖರ್ಚುಮಾಡಿಸುತ್ತವೆಯಂತೆ. ಆಧಾರ್ ಗುರುತಿನ ಚೀಟಿಯನ್ನು ಆಧರಿಸಿದ ನೇರ
ನಗದು ವರ್ಗಾವಣೆಗಳು (ಡಿಬಿಟಿ) ಹಾಗೂ ಜಿಎಸ್‌ಟಿ ಸಂಗ್ರಹಣೆಗಳಿಂದ ದಕ್ಕುವ ಆದಾಯದ ಮುನ್ನಂದಾಜಿನ ಸಂಯೋಜನೆಯು, ಇಂಥ ಯೋಜನೆಗಳಿಗೆ ಬದಲಾಯಿಸಿಕೊಳ್ಳಲು ರಾಜ್ಯಗಳಿಗೆ ಅನುವು ಮಾಡಿಕೊಟ್ಟಿವೆ ಎನ್ನಬೇಕು.

ಆದರೆ, ಮತದಾರರನ್ನು ಅಥವಾ ಚುನಾವಣಾ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ಹೀಗೆ ಘೋಷಿಸಲಾಗುವ ‘ಜನಪ್ರಿಯ ಯೋಜನೆಗಳು’ ಆಳುಗ ವ್ಯವಸ್ಥೆಗೆ ಅಪಾಯಗಳನ್ನು ತಂದೊಡ್ಡುವುದಿಲ್ಲವೇ? ಎಂಬ ಪ್ರಶ್ನೆ ಉದ್ಭವಿಸಿದರೆ ಅದೇನೂ ಅಚ್ಚರಿಯಲ್ಲ. ಏಕೆಂದರೆ, ಇಂಥ ಜನಪ್ರಿಯ ಯೋಜನೆಗಳ ಕಾರಣದಿಂದಾಗಿ ಉದ್ಭವಿಸುವ ನೈಜ ಸಮಸ್ಯೆಗಳನ್ನು ಎದುರಿಸಲು ಹಾಗೂ ಯೋಜನೆ ಜಾರಿಯಾಗದಿದ್ದರೆ ಹುಟ್ಟಿಕೊಳ್ಳುವ
ಆಡಳಿತ-ವಿರೋಽ ಭಾವನೆಗಳ ಜತೆ ಸೆಣಸಲು ಪಕ್ಷಗಳು ವಿಫಲಗೊಳ್ಳುವಂಥ ನೈತಿಕ ಅಪಾಯವೂ ಇದ್ದೇ ಇರುತ್ತದೆ.

ಮಾತ್ರವಲ್ಲ, ಇಂಥ ಯೋಜನೆಗಳಿಗೆ ಮಾಡುವ ವೆಚ್ಚಗಳು ಅದೆಷ್ಟರ ಮಟ್ಟಿಗೆ ಸಮರ್ಥನೀಯ? ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ನೀಡಿರುವ ಅಂಕಿ-ಅಂಶಗಳ ಪ್ರಕಾರ, ಇಂಥ ಯೋಜನೆಗಳನ್ನು ಘೋಷಿಸಿದ ರಾಜ್ಯಗಳು ಎದುರಿಸುತ್ತಿರುವ ಆರ್ಥಿಕ ಹೊರೆಯು ಕಳೆದ ವರ್ಷ 74.96 ಲಕ್ಷ ಕೋಟಿ ರುಪಾಯಿಗಳಷ್ಟಿದ್ದುದು ಈಗ 83.32 ಲಕ್ಷ ಕೋಟಿಗಳಿಗೆ ಏರಿದೆ. ಇಂಥ ರಾಜ್ಯ ಸರಕಾರ ಗಳ ‘ರಾಜಸ್ವ ವೆಚ್ಚಗಳು’ ಹೀಗೆ ಹೆಚ್ಚುತ್ತಲೇ ಇರುವ ಕಾರಣದಿಂದಾಗಿ, ಆರೋಗ್ಯ ಮತ್ತು ಶಿಕ್ಷಣದಂಥ ನಿರ್ಣಾಯಕ ವಲಯಗಳಿಗೆ ನೀಡಬೇಕಾದ ಅನುದಾನದ ಹಂಚಿಕೆಯಲ್ಲೂ ಕುಸಿತ ಕಂಡುಬರುತ್ತಿದೆ.

‘ಪಿಎಂ ಕಿಸಾನ್’, ‘ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ’ ಅಥವಾ ‘ಲಡಕಿ ಬಹೀಣ್’ ಹೀಗೆ ಯಾವುದೇ ಜನಪ್ರಿಯ ಯೋಜನೆಯಿರಲಿ, ಆದಾಯದ ವಿಷಯದಲ್ಲಿ ಮತ್ತು ಸಮಾಜದ ಶ್ರೇಣೀಕರಣ ವ್ಯವಸ್ಥೆಯ ಪಿರಮಿಡ್‌ನ ಸ್ತರದಲ್ಲಿ ಕೆಳಗಡೆಯೇ ಇರುವ ಸಮಾಜದ ‘ಸಂಕಷ್ಟದ
ವರ್ಗಗಳ’ ಪಾಲಿಗೆ ಅವು ಅತೀವ ಅಗತ್ಯವಿರುವ ಪರಿಹಾರೋಪಾಯವಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಕೃಷಿ ವಲಯದಲ್ಲಿ ತಾಂಡವವಾಡುತ್ತಿರುವ ಸಂಕಟ-ಸಂಕಷ್ಟಗಳು, ಯುವಜನರ ನಿರುದ್ಯೋಗ ಸಮಸ್ಯೆ ಹಾಗೂ ಏರುತ್ತಲೇ ಇರುವ ಜೀವನೋಪಾಯದ ವೆಚ್ಚ ಇವೆಲ್ಲವೂ ಸೇರಿಕೊಂಡಿರುವುದರಿಂದ ಜನಪ್ರಿಯ ಯೋಜನೆಗಳ ರೂಪದಲ್ಲಿ ಇಂಥದೊಂದು ಬೆಂಬಲ ಅಥವಾ ಒತ್ತಾಸೆಯ ಅಗತ್ಯ ತೀವ್ರವಾಗಿರುವುದಂತೂ ಖರೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ದೈನಂದಿನ ಬದುಕಿನಲ್ಲಿ ನಿರಂತರ ಹೋರಾಡಬೇಕಾಗಿ ಬಂದಿರುವ, ಅಸ್ತಿತ್ವದ ಸವಾಲನ್ನು ಎದುರಿಸುತ್ತಿರುವ ಜನರಿಂದಾಗಿ ಮತ್ತು ಜನಾಕ್ರೋಶವನ್ನು ಎದುರಿಸಬೇಕಾಗಿ ಬರುವ ರಾಜಕೀಯ ಪಕ್ಷಗಳಿಂದಾಗಿಯೇ ಇಂಥ ಜನಪ್ರಿಯ ಯೋಜನೆಗಳ ಜಾರಿಗೆ ಪ್ರಚೋದನೆ ಸಿಗುತ್ತಿದೆ, ಅವುಗಳು ಸಂಖ್ಯೆ ಏರುತ್ತಿದೆ.

ಕಾರಣಗಳೇನೇ ಇರಲಿ, ‘ಪ್ರಜಾಕಲ್ಯಾಣ’ ಎಂಬ ಹಣೆಪಟ್ಟಿಯಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡುತ್ತಿರುವ ವೆಚ್ಚಗಳನ್ನು ಪರಿಶೀಲನೆಗೆ ಒಳಪಡಿಸಬೇಕಾದ ಸಂದರ್ಭವಂತೂ ಒದಗಿದೆ. ಹೀಗಾಗಿ, 16ನೇ ಹಣಕಾಸು ಆಯೋಗವು ತನ್ನ ಶಿಫಾರಸುಗಳನ್ನು ಸಲ್ಲಿಸುವುದಕ್ಕೂ ಮೊದಲು, ಇಂಥ ಜನಪ್ರಿಯ ಯೋಜನೆಗಳ ಉದ್ದೇಶ ಮತ್ತು ವ್ಯಾಪ್ತಿಯನ್ನು ಕೂಲಂಕಷವಾಗಿ ಅವಲೋಕಿಸಲೇಬೇಕಾಗಿದೆ. ನಂತರ ದಕ್ಕುವ ಮಾಹಿತಿ/ ಅಂಕಿ-ಅಂಶವನ್ನು ವಾರ್ಷಿಕ ಬಜೆಟ್‌ನಲ್ಲಿ ಒದಗಿಸುವುದು ಅಥವಾ ನೀತಿ ಆಯೋಗವು ಅದನ್ನು ವರದಿ ಮಾಡುವುದು ಅನಿವಾರ್ಯ ವಾಗಿದೆ. ‘ಉಚಿತ’ ಯೋಜನೆಗಳ ಕುರಿತಾಗಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯವು ಇಂಥದೊಂದು ಮಾಹಿತಿಗೆ ನಿರೀಕ್ಷಿಸಬಹುದು. ಅಷ್ಟಕ್ಕೂ, ಯಾರು ಯಾವುದರ ಮೇಲೆ ಎಷ್ಟು ಹಣವನ್ನು ಖರ್ಚುಮಾಡು ತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಭಾರತದ ತೆರಿಗೆದಾರರಿಗೆ ಇರುವುದಂತೂ ದಿಟ.

(ಲೇಖಕರು ರಾಜಕೀಯ ಮತ್ತು ಆರ್ಥಿಕ ವಿಶ್ಲೇಷಕರು)

ಇದನ್ನೂ ಓದಿ: Kannadacolumn