Saturday, 14th December 2024

Shankaranarayana Bhat Column: ಈಗ ಮತ್ತದೇ ಕೂಗು?

ಪ್ರತಿಸ್ಪಂದನೆ

ಶಂಕರನಾರಾಯಣ ಭಟ್

‘ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ’, ‘ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನ’, ‘ಅಭಿವೃದ್ಧಿಗೆ ಕಲ್ಯಾಣ ಮಸ್ತು’ ಇವು ಸೆ.೧೮ರ ಪ್ರಮುಖ ದಿನಪತ್ರಿಕೆಗಳಲ್ಲಿ ಕಂಡುಬಂದ ಮುಖಪುಟ ಸುದ್ದಿಶೀರ್ಷಿಕೆಗಳು. ‘ವಿಶೇಷ ಸ್ಥಾನ’ ಅಥವಾ ‘ವಿಶೇಷ ಸ್ಥಾನಮಾನ’ ಎಂಬ ಪದಗುಚ್ಛವೇ ದಿಗಿಲು ಮೂಡಿಸುವಂಥದ್ದು.

ಅಂಥದ್ದರಲ್ಲಿ ಈಗ ಮತ್ತದೇ ಕೂಗೇ?! ಒಂದು ರಾಜ್ಯವಾಗಿ ಕರ್ನಾಟಕದ ಕಲ್ಯಾಣವಾಗಬೇಕೇ ಅಥವಾ ಕೇವಲ ಕೆಲವಷ್ಟೇ ಜಿಲ್ಲೆಗಳನ್ನು ಸೇರಿಸಿ ಅವುಗಳಿಗೆ ‘ಕಲ್ಯಾಣ’ ಪದವಿ ನೀಡುವುದೇ? ಹಾಗೆ ನೋಡಿದರೆ, ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಇಂದು ಮೂಲ ಭೂತ ಸೌಕರ್ಯಗಳ ಕೊರತೆ ಇದೆ- ಕುಡಿಯುವ ನೀರಿನಿಂದ ಹಿಡಿದು ರಸ್ತೆ, ಆಸ್ಪತ್ರೆ, ಅಂಗನವಾಡಿ ಇತ್ಯಾದಿ. ಹೀಗಿರು ವಾಗ ಕಲ್ಯಾಣ ಕರ್ನಾಟಕದ ೭ ಜಿಲ್ಲೆಗಳಿಗಷ್ಟೇ ವಿಶೇಷ ಅನುದಾನ, ಪ್ಯಾಕೇಜ್ ಘೋಷಣೆ ಯಾವ ಸೀಮೆಯ ನ್ಯಾಯ? ಒಂದಂತೂ ಸತ್ಯ- ಎಲ್ಲ ಜಿಲ್ಲೆಗಳಲ್ಲಿ ಸಮಸ್ಯೆ ಒಂದೇ ತೆರನಾಗಿಲ್ಲ ಅಥವಾ ಗಂಭೀರವಲ್ಲ.

ಆಯಾ ಪ್ರದೇಶದ ಹಾಲಿ ಪರಿಸ್ಥಿತಿ ಗಳಿಗೆ ಅನುಗುಣವಾಗಿ ವಿಶೇಷ ಧ್ಯಾನ ಕೊಡುವಂತಾದ ರೇನೇ ಇಡೀ ರಾಜ್ಯದ ಅಭಿವೃದ್ಧಿ ಸಾಧ್ಯ. ಇಲ್ಲವೆಂದರೆ ಅನ ವಶ್ಯಕ ಗೊಂದಲಗಳಿಗೆ ಎಡೆಮಾಡಿಕೊಟ್ಟಂತೆ ಆಗುವುದಿಲ್ಲವೇ? ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನಡೆದ 56 ವಿಷಯಗಳ ಚರ್ಚೆಯಲ್ಲಿ 46 ವಿಷಯಗಳು ಕಲ್ಯಾಣ ಕರ್ನಾಟಕದ ಬಗ್ಗೆಯೇ ಮೀಸಲು! ರಾಜ್ಯದ ಹಲವು ಜಿಲ್ಲೆಗಳು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿವೆ. ಅವುಗಳ ಪೈಕಿ 7 ಜಿಲ್ಲೆಗಳನ್ನಷ್ಟೇ ಆಯ್ದುಕೊಂಡು ಕಲ್ಯಾಣ ಮಾಡಲು ಹೊರಟರೆ ಅದೆಂಥ ಕಲ್ಯಾಣ? ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಮನಾದ ಅಭಿವೃದ್ಧಿಯಾದರೇನೇ ಅದಕ್ಕೊಂದು ಅರ್ಥ ಬಂದೀತು.

ಇಲ್ಲವಾದಲ್ಲಿ, ಈಗ ಕಲ್ಯಾಣ ಕರ್ನಾಟಕ, ನಾಳೆ ಹೈದರಾಬಾದ್ ಕರ್ನಾಟಕ, ನಂತರ ದಕ್ಷಿಣ ಕರ್ನಾಟಕ ಹೀಗೆ ಎಲ್ಲವೂ ತಮಗೆ ವಿಶೇಷ ಸ್ಥಾನ, ಪ್ರತ್ಯೇಕ ಸಚಿವಾಲಯದ ಬೇಡಿಕೆ ಇಡುತ್ತಾ ಹೋದರೆ, ಸರಕಾರವೇ ರಾಜ್ಯವನ್ನು ವಿಭಜಿಸುವ ಕೆಲಸಕ್ಕೆ ಮುಂದಾದಂತೆ ಆಗುವುದಿಲ್ಲವೇ? ಕೇವಲ ಒಂದು ಕಡೆಗೆ ಒತ್ತುಕೊಡುವುದೆಂದರೆ, ಶರೀರದ
ಒಂದು ಭಾಗವನ್ನಷ್ಟೇ ಮಜಬೂತ್ ಮಾಡಿ, ಮಿಕ್ಕವನ್ನು ಹಾಳುಗೆಡವಿದಂತೆ. ಸರ್ವಾಂಗೀಣ ಬೆಳವಣಿಗೆ ಆದಾಗಲೇ
ಅದನ್ನು ನಿಜಾರ್ಥದ ಅಭಿವೃದ್ಧಿ ಅನ್ನಬಹುದಲ್ಲವೇ? ಹೀಗಾಗಿ ಇಲ್ಲಿ ‘ವಿಶೇಷ ಸ್ಥಾನ’ ಎಂಬ ಪರಿಕಲ್ಪನೆಯೇ
ಅಪಾಯಕಾರಿಯಂತೆ ಕಾಣುತ್ತದೆ!

(ಲೇಖಕರು ಹವ್ಯಾಸಿ ಬರಹಗಾರರು)

ಇದನ್ನೂ ಓದಿ: CM Siddaramaiah: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಾಂಗ್ರೆಸ್‌ ಸರಕಾರ ಬದ್ಧ: ಸಿಎಂ ಸಿದ್ದರಾಮಯ್ಯ