Friday, 13th December 2024

ಷೇರು ಮಾರುಕಟ್ಟೆ: ಕರೋನಾಕ್ಕೆ ಶರಣಾಗಿ ಚೇತರಿಸಿಕೊಂಡ ಉಯ್ಯಾಲೆ

ಪ್ರಚಲಿತ

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ 

೨೦೨೦ನೇ ವರ್ಷವು ಇತಿಹಾಸದ ಪುಟಗಳಲ್ಲಿ ಇಡೀ ವಿಶ್ವಕ್ಕೆ ಅಸಂಖ್ಯಾತ ಕಷ್ಟ, ನಷ್ಟಗಳನ್ನು ಸೃಷ್ಟಿಸಿ ವಿಷಮ ಪರಿಸ್ಥಿತಿಯನ್ನು ತಂದೊಡ್ಡಿದ ವರ್ಷವಾಗಿ ಮುದ್ರಣವಾಗಲಿದೆ. ಕಣ್ಣಿಗೆ ಕಾಣದ ಕೋವಿಡ್-19 ಎಂಬ ವೈರಾಣು ವಿಶ್ವದ ಹೆಚ್ಚಿನೆಲ್ಲಾ ದೇಶ ಗಳನ್ನು ಲಾಕ್‌ಡೌನ್‌ಗೆ ಶರಣಾಗುವಂತೆ ಮಾಡಿತು.

ಷೇರು ಮಾರುಕಟ್ಟೆಯ ಮೇಲೂ ಆಘಾತ ಪರಿಣಾಮಗಳುಂಟಾದವು. ಷೇರು ಮಾರುಕಟ್ಟೆಯೂ ಕೂಡ ಇದರಿಂದಾದ ಅನಾಹುತ ದಿಂದ ಸೋತು ಶರಣಾಗಿತ್ತು. ಪ್ರಕ್ಷುಬ್ದ ವಾತಾವರಣದ ಉಯ್ಯಾಲೆಯಂತಾಗಿತ್ತು. ತಾಂತ್ರಿಕ ಅಭಿವೃದ್ಧಿ ಹಾಗೂ ದೇಶದ ಆರ್ಥಿಕ ವ್ಯವಸ್ಥೆ ಜಾಗತೀಕರಣಗೊಂಡ ನಂತರ ಷೇರು ಮಾರುಕಟ್ಟೆ ವಿಕಸಿತಗೊಂಡಿದೆ ಮತ್ತು ಪಾರದರ್ಶಕವಾಗಿದೆ. ಸಾಮಾನ್ಯವಾಗಿ ಷೇರು ಮಾರುಕಟ್ಟೆ ದೇಶದ ಅರ್ಥವ್ಯವಸ್ಥೆಯ ಪರಿಚಯ ಮಾಡಿಕೊಡುತ್ತದೆ.

ಷೇರು ಮಾರುಕಟ್ಟೆಯ ಬಲಿಷ್ಠತೆ ಉತ್ತಮ ಆರ್ಥಿಕ ಸ್ಥಿತಿಯನ್ನು ಹಾಗೂ ಮಾರುಕಟ್ಟೆಯ ಬಲಹೀನತೆ ದೇಶದ ಆರ್ಥಿಕ
ದುರ್ಬಲತೆಯ ದ್ಯೋತಕವಾಗಿದೆ. ಈಗಿನ ಭಾರತದ ಷೇರು ಮಾರುಕಟ್ಟೆ ಜೂಜು ಮಾರುಕಟ್ಟೆಯಲ್ಲ. ಇಲ್ಲಿ ಎಲ್ಲವೂ ವೈಜ್ಞಾನಿಕ ರೀತಿಯಲ್ಲಿ ನಡೆಯುತ್ತದೆ. ಸರಕಾರದ ಏಜೆನ್ಸಿಯಾದ ಸೆಕ್ಯುರಿಟಿ ಮತ್ತು ಎಕ್ಸ್‌ಚೇಂಚ್ ಬೋರ್ಡ್ (ಸೆಬಿ) ನಿರೀಕ್ಷಣೆಯಲ್ಲಿ ಎಲ್ಲಾ
ವ್ಯವಹಾರಗಳೂ ನಡೆಯುತ್ತವೆ. ಇದೇ ಸಂದರ್ಭದಲ್ಲಿ ಷೇರು ಮಾರುಕಟ್ಟೆ ಉಯ್ಯಾಲೆ ಇದ್ದಂತೆ ಮತ್ತು ಇದೊಂದು ಹಾವು ಏಣಿ ಆಟವೆಂದು ತಿಳಿದುಕೊಂಡು ಹೂಡಿಕೆದಾರರು ವಿವೇಚನಾರಹಿತರಾಗಬಾರದು.

ಚರಿತ್ರೆಯೇ ಇದನ್ನು ಸಾಬೀತು ಪಡಿಸಿದೆ. ಆದರೆ ಈ ವರ್ಷದ ಮಾರ್ಚ್ ಮತ್ತು ಡಿಸೆಂಬರ್ 2020ರ ಷೇರು ಮಾರುಕಟ್ಟೆಯ ವಾತಾವರಣವನ್ನು ಗಮನಿಸಿದಾಗ ಪ್ರಕ್ಷುಬ್ಧತೆಯ ವಾತಾವರಣದಿಂದ ಕೂಡಿದ್ದು ಒಮ್ಮಿಂದೊಮ್ಮೆಗೆ ತೀವ್ರತರದ ಕುಸಿತದಿಂದ ಕಂಗಲಾಗಿ ಚೇತರಿಕೆ ಕಂಡ ಮಾರುಕಟ್ಟೆಯಾಗಿ ಪರಿಣಮಿಸಿತು. ಇದು ವಿಶ್ವದಾದ್ಯಂತ ಹರಡಿತ ಸಾಂಕ್ರಾಮಿಕದಿಂದಾದ ಆಘಾತ.
ಮಾರ್ಚ್ ತಿಂಗಳಲ್ಲಿ ಷೇರು ಮಾರುಕಟ್ಟೆ ಅಕ್ಷರಶಃ ನಲುಗಿತ್ತು.

ಹೂಡಿಕೆದಾರರು ಭಯಭೀತರಾಗಿ ಕಂಗಾಲಾಗಿದ್ದರು. ಷೇರು ಮಾರುಕಟ್ಟೆ ಹಲವಾರು ಕಾರಣಗಳಿಂದ ಅಲ್ಲೋಲಕಲ್ಲೋಲವಾಗಿ ಪ್ರಕ್ಷುಬ್ದ ವಾತಾವರಣವನ್ನು ಸೃಷ್ಠಿಸುವುದು, ತೆವಳುವುದು ಸ್ವಾಭಾವಿಕ. ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ರಿಸ್ಕ್ ಅಂದರೆ ಹೆಚ್ಚಿನ ಲಾಭ. ಇದು ಮಾರುಕಟ್ಟೆಯ ಫಾರ್ಮುಲವೇ ಆಗಿದೆ. ಆದರೆ ಕರೋನಾ ಅರ್ಭಟದಿಂದಾದ ಪರಿಸ್ಥಿತಿ ಭಿನ್ನವಾಗಿತ್ತು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ದೀರ್ಘಕಾಲದವರೆಗೆ ಮಾರಾಟಗಾರರ ಒತ್ತಡದಿಂದ ಷೇರು ಬೆಲೆಗಳಲ್ಲಿ ಕುಸಿತ ಕಂಡು ಬರುತ್ತದೆ. ಇದನ್ನು ಬೇರ್ (ಕರಡಿ) ಮಾರುಕಟ್ಟೆ ಎನ್ನುತ್ತಾರೆ.

ಸರಕಾರದ ಔದ್ಯೋಗಿಕ ಮತ್ತು ಆರ್ಥಿಕ ನೀತಿಯಲ್ಲಿನ ಪರಿರ್ತನೆ, ಸರಕಾರದಿಂದ ಬೆಲೆಗಳ ನಿಯಂತ್ರಣ, ಅತಿವೃಷ್ಠಿ, ಅನಾವೃಷ್ಠಿ ಮತ್ತು ಆಪತ್ಕಾಲ ಪರಿಸ್ಥಿತಿ, ಮುಕ್ತ ಆಯಾತ, ಸರಕಾರದ ಬದಲಾವಣೆ, ಬಜೆಟ್ ಘೋಷಣೆಗಳು ಆದಾಯ ತೆರಿಗೆಯಿಂದಾಗುವ ಆಕಸ್ಮಿಕ ದಾಳಿಗಳು ದಲಾಳಿಗಳ ಷಡ್ಯಂತರ ಮತ್ತು ಇತರ ವ್ಯತಿರಿಕ್ತ ಸನ್ನಿವೇಶಗಳು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗುತ್ತವೆ.
ಆದರೆ ಈ ಬಾರಿ ವಿಶ್ವ ಆರೋಗ್ಯ ಸಂಘಟನೆ ಕರೋನಾವನ್ನು ಸಾಂಕ್ರಾಮಿಕವೆಂದು ಘೋಷಿಸಿದ ಕೂಡಲೇ ಷೇರು ಮಾರುಕಟ್ಟೆ ಯಲ್ಲಿ ಒಮ್ಮಿಂದೊಮ್ಮೆ ಪ್ರಕ್ಷುಬ್ದ ವಾತಾವರಣ ಸೃಷ್ಠಿಯಾಗಿ ಷೇರುಪೇಟೆಅಲ್ಲೋಲಕಲ್ಲೋಲವಾಗಿ ಆಘಾತಕ್ಕೆ ಕಾರಣ ವಾಯಿತು.

ಹಿಂದೆಂದೂ ಕಾಣದ ದೃಷ್ಠಾಂತಗಳು ಎದುರಾದುದರಿಂದ ಮಾರುಕಟ್ಟೆ ಮುಗ್ಗರಿಸುತ್ತಲೇ ಹೋಯಿತು. 2008ರಲ್ಲಿ ಆರ್ಥಿಕ ಹಿಂಜರಿಕೆ ಉಂಟಾಗಿ ಜಗತ್ತಿನಾದ್ಯಂತ ಎಲ್ಲಾ ಆರ್ಥಿಕತೆಗಳು ನಷ್ಟ ಅನುಭವಿಸಿದ್ದವು. ಆಗ ಷೇರು ಮಾರುಕಟ್ಟೆಗಳು ಯಾವ ಪ್ರಮಾಣದಲ್ಲಿ ಕುಸಿದ್ದಿದ್ದವೋ ಅದೇ ಪ್ರಮಾಣದಲ್ಲಿ ಕುಸಿದು ಬಿತ್ತು. ಲಾಕ್‌ಡೌನ್ ಸಮಯದ ಆಘಾತಗಳು ತದನಂತರ
ತುಸು ಚೇತರಿಕೆ ಕಂಡು ಇದೀಗ ಯಥಾಸ್ಥಿತಿಗೆ ಮರಳುತ್ತಿರುವುದು ದೇಶದ ಒಟ್ಟಾರೆ ಆರ್ಥಿಕ ಚೇತರಿಕೆ ಮತ್ತು ವಿದೇಶಿ ಹೂಡಿಕೆಗಳ ಪರಿಣಾಮದಿಂದ ಷೇರು ಮಾರುಕಟ್ಟೆ ಆರ್ಥಿಕ ಚೇತರಿಕೆ ಮತ್ತು ವಿದೇಶಿ ಹೂಡಿಕೆಗಳಿಂದಾಗಿ ಷೇರು ಮಾರುಕಟ್ಟೆ ಬುಲ್ಲಿಷ್ ಆಗಿ ಮುಂದುವರಿಯುತ್ತಿದೆ.

ಕರೋನಾ ಅಪ್ಪಳಿಸಿದ ಸಂದರ್ಭದಲ್ಲಿ ಇಡೀ ಜಗತ್ತೇ ಸಂಕಟ ಪರಿಸ್ಥಿತಿಯಲ್ಲಿದ್ದು ಆಪತ್ಕಾಲವನ್ನು ಎದುರಿಸಬೇಕಾಯಿತು. ಷೇರುದಾರರು ಕಳವಳಗೊಂಡು ದಯದಾಕ್ಷಿಣ್ಯವಿಲ್ಲದೇ ಷೇರುಗಳನ್ನು ಮಾರಾಟ ಮಾಡಿರುವುದರಿಂದ ಷೇರುಮಾರುಕಟ್ಟೆ ಅಕ್ಷರಶಃ ತೀವ್ರ ನಿಗಾ ಘಟಕಕ್ಕೆ ಪ್ರವೇಶಿಸಿದಂತೆ ಕಂಡು ಬಂದಿತ್ತು. ಆ ಸಂದರ್ಭದಲ್ಲಿ ಅಪಾರ ಇಳಿಕೆ ಕಂಡು ಬಂದುದರಿಂದ
ವಹಿವಾಟು ಸ್ಥಗಿತಗೊಳಿಸಬೇಕಾದ ಪರಿಸ್ಥಿತಿ ಎದುರಾಯಿತು. ವ್ಯವಹಾರದ ಮಧ್ಯೆ ವಹಿವಾಟು ನಿಲ್ಲಿಸುವುದಕ್ಕೆ ಸರ್ಕಿಟ್ ಬ್ರೇಕರ್ ಎನ್ನುತ್ತಾರೆ.

ಒಂದೇ ಸಮನೆ ಸೂಚ್ಯಂಕದಲ್ಲಿ ಶೇ. 7, ಶೇ. 13, ಶೇ. 20 ದಿಢೀರ್ ಏರಿಳಿತ ಆದಾಗ ಸರ್ಕಿಟ್ ಬ್ರೇಕರ್ ಜಾರಿಗೊಳಿಸಬಹುದು. ಮಾರ್ಚ್ ತಿಂಗಳಲ್ಲಿ ದಿಡೀರ್ ಏರಿಳಿತ ಆದಾಗ ಷೇರು ಮಾರುಕಟ್ಟೆ ಸರ್ಕಿಟ್ ಬ್ರೇಕರ್ ಹಾಕಲಾಯಿತು. ಷೇರು ಸೆನ್ಸೆಕ್ಸ್ ಸೂಚ್ಯಂಕ ಕೆಲವೇ ದಿನಗಳ ಅಂತರದಲ್ಲಿ 15000 ಪಾಯಿಂಟ್‌ಗಳಷ್ಟು ಏರುಪೇರಾಗಿ ಕುಸಿಯಲ್ಪಟ್ಟಿತ್ತು. ಮಾರ್ಚ್ ದಿನಾಂಕ 12 ರಂದು ಷೇರು ಪೇಟೆ ಮಹಾಪತನ ಕಂಡಿತು ವಿಶ್ವವನ್ನೇ ನಡುಗಿಸುತ್ತಿರುವ ಕರೋನಾ ಮಹಾಮಾರಿಯಿಂದಾಗಿ ಕರಡಿ ಹುಚ್ಚೆದ್ದು
ಕುಣಿದಿತ್ತು. ದಲಾಲ್ ಸ್ಟ್ರೀಟ್ ಕಂಗಾಲಾಗಿತ್ತು. ಒಂದೇ ದಿನ 11.27 ಲಕ್ಷ ಕೋಟಿ ರು. ಸಂಪತ್ತು ಕರಗಿ ಹೋಗಿತ್ತು.

ಸೆನ್ಸೆಕ್ಸ್ ಮಾರ್ಚ್ 9 ರಂದು 1942 ಪಾಯಿಂಟ್, ದಿನಾಂಕ 12 ರಂದು 2919, ದಿನಾಂಕ 16 ರಂದು 2713 ಅಂಕಗಳ ಮಹಾಪತನ ಷೇರು ಮಾರುಕಟ್ಟೆಯಲ್ಲಿ ರಕ್ತದ ಓಕುಳಿ ಹರಿದ ದಿನಗಳಾಗಿದ್ದವು. ಕೇವಲ ಭಾರತದಲ್ಲಿ ಮಾತ್ರವಲ್ಲ ಜಗತ್ತಿ ನಾದ್ಯಂತ ಎಲ್ಲಾ ಪ್ರಮುಖ ಷೇರು ಮಾರುಕಟ್ಟೆಗಳು ಕುಸಿದು ಬಿದ್ದವು. ಬಾಂಬೆ ಷೇರು ಸೂಚ್ಯಂಕ ಮಾರ್ಚ್ 12ರಂದು ಇತಿಹಾಸದಲ್ಲೇ ಅತಿ ದೊಡ್ಡ ಕುಸಿತ ಕಾಣಬೇಕಾಯಿತು.

ಅದರೊಂದಿಗೆ ಹೂಡಿಕೆದಾರರ ಲಕ್ಷಾಂತರ ಕೋಟಿ ಹಣ ಷೇರು ಪೇಟೆಯಲ್ಲಿ ಕೊಚ್ಚಿಹೋಯಿತು. 2019ದಿಂದ ಆರ್ಥಿಕ ಹಿಂಜರಿಕೆ ಅನುಭವಿಸುತ್ತಿರುವ ದೇಶವು ತಾಳಿಕೊಳ್ಳಲಾಗದ ಸಾಧ್ಯತೆಯನ್ನು ಎದುರಿಸಬೇಕಾಯಿತು. ವಿದೇಶಿ ಹೂಡಿಕೆ ಹಿಂತೆಗೆತ, ಜಾಗತಿಕ ಹಾಗೂ ದೇಶೀಯ ನಕಾರಾತ್ಮಕ ಬೆಳವಣಿಗೆಗಳ ಪರಿಣಾಮ, ಕರೋನಾ ಅಬ್ಬರ, ಯೆಸ್ ಬ್ಯಾಂಕ್ ದುಃಸ್ಥಿತಿ, ಷೇರು ಹೂಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದವು. ಇದರೊಂದಿಗೆ ಕಚ್ಚಾ ತೈಲ ದರದ ತೀವ್ರ ಇಳಿಕೆ, ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ, ಷೇರುದಾರರನ್ನು ಕಂಗಾಲು ಮಾಡಿತು.

ವಿಶ್ವ ಆರೋಗ್ಯ ಸಂಸ್ಥೆ ಕರೋನಾವನ್ನು ಸಾಂಕ್ರಾಮಿಕವೆಂದು ಘೋಷಿಸಿದ ತಕ್ಷಣವೇ ಆಘಾತ ಮನೆಮಾಡಿತು. ಭಾರತದಂತೆ ಭಾರೀ ವಹಿವಾಟು ನಡೆಸುವ ಚೀನಾ, ಅಮೆರಿಕ, ಜಪಾನ್, ಹಾಂಕಾಂಗ್, ಜರ್ಮನಿ ನಿರಂತರವಾಗಿ ಕುಸಿತ ಅನುಭವಿಸಿದವು. ಜತೆಗೆ ಕಚ್ಚಾ ತೈಲ ಮಾರುಕಟ್ಟೆಯಲ್ಲಾದ ಅಲ್ಲೋಲಕಲ್ಲೋಲವೂ ಇದಕ್ಕೆ ಕಾರಣ. ಚೀನಾ ಆರ್ಥಿಕ ಬಿಕ್ಕಟ್ಟು ಅಮೆರಿಕದಲ್ಲಿ ನೆಲಕಚ್ಚಿದ ರಿಯಲ್‌ಎಸ್ಟೇಟ್, ಜಾಗತಿಕ ಆರ್ಥಿಕ ಹಿಂಜರಿಕೆಯ ಪ್ರಮುಖ ಕಾರಣಗಳಾಗಿದ್ದವು. ಮಾರ್ಚ್ ತಿಂಗಳ ಆ ಸಮಯದಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಆಗಿರುವ ನಷ್ಟ ರೂ 15 ಲಕ್ಷ ಕೋಟಿ. ಆ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿನ ಹಿಂಜರಿಕೆ ತಡೆಯಲು ಯಾವುದೇ ಕಡ್ಡಾಯ ಕ್ರಮ ಕೈಗೊಳ್ಳಲು ಸಿದ್ಧವೆಂದು ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (ಸೆವಾ) ನೀಡಿದುದಲ್ಲದೇ ಷೇರುಪೇಟೆಯಲ್ಲಿದ್ದ ವಹಿವಾಟಿನ ಮೇಲೆ ಸರಕಾರವು ತೀವ್ರ ನಿಗಾ ಇರಿಸಿದೆ ಎಂದು ವಿತ್ತ
ಸಚಿವೆಯರು ವಾಗ್ದಾನ ನೀಡಿದುದರಿಂದ ಷೇರು ಪೇಟೆಯ ಚೇತರಿಕೆಗೆ ಕಾರಣವಾಯಿತು.

ಆದರೆ ಹೂಡಿಕೆದಾರರ ಆತಂಕ ಕಡಿಮೆಯಾಗಿದ್ದಿರಲಿಲ್ಲ. ವರ್ಷದ ಮೊದಲ ತ್ರೈಮಾಸಿಕವು ಆತಂಕಗಳಿಂದಲೇ ಮುಂದುವರಿ ಯಿತು. 25000 ಆಸುಪಾಸು ತಲುಪಿದ ಸೆನ್ಸೆಕ್ಸ್ ಜುಲೈ ಅಂತ್ಯಕ್ಕೆ 38000, ಅಗಸ್ಟ್ ಅಂತ್ಯಕ್ಕೆ 39000, ಸಪ್ಟೆಂಬರ್ ಅಂತ್ಯಕ್ಕೆ 37000, ಅಕ್ಟೋಬರ್ ಅಂತ್ಯಕ್ಕೆ 39000 ಗಡಿ ದಾಟಿತು. ಅಗಸ್ಟ್‌ನಲ್ಲಿ 11000 ಗಡಿದಾಟಿದ ನಿಫ್ಟಿ ಸೂಚ್ಯಂಕ ಕೂಡಾ ಅದೇ ಅನುಪಾತದಲ್ಲಿ ಏರಿಕೆ ಕಂಡಿತು. ಬ್ಯಾಂಕ್‌ಗಳಿಗೆ ಅಪಾಯದ ಸಂಕೇತವನ್ನು ಸೂಚಿಸುತ್ತಿದ್ದ ನಿಫ್ಟಿ ಸೂಚ್ಯಂಕವು ಚೇತರಿಕೆ
ಕಂಡಿತು.

ಇದೀಗ ಷೇರು ಮಾರುಕಟ್ಟೆ ಅಪಾಯದ ಅಂಚಿನಿಂದ ಪಾರಾಗಿ ಕೋವಿಡ್ ಪೂರ್ವ ದಿನಗಳ ಸ್ಥಿತಿಯನ್ನು ತಲುಪಿ ಮುನ್ನಡೆ ಸಾಧಿಸುತ್ತಿರುವುದು ಹೂಡಿಕೆದಾರರ ವಿಶ್ವಾಸ ಹೆಚ್ಚಿದೆ. ಕೋವಿಡ್-19ರ ಪರಿಣಾಮವಾಗಿ ಎರಡನೆಯ ತ್ರೈಮಾಸಿಕದಲ್ಲಿ ಎಲ್ಲ ಕಂಪನಿಗಳು ನಷ್ಟವನ್ನು ಅನುಭವಿಸುತ್ತವೆ ಎಂದು ಹೂಡಿಕೆ ತಜ್ಞರು ಲೆಕ್ಕ ಹಾಕಿದ್ದರು. ಆದರೆ ತಜ್ಞರ ಅಭಿಪ್ರಾಯಕ್ಕೆ ವಿರುದ್ಧ ವಾಗಿ ಎಲ್ಲಾ ಕಂಪನಿಗಳ ನಿವ್ವಳ ಲಾಭದಲ್ಲಿ ಉತ್ತಮ ಏರಿಕೆ ಕಂಡು ಬಂದಿತು. ಉತ್ಪಾದನಾ ವೆಚ್ಚದಲ್ಲಿನ ಕಡಿತ, ಸಾಲದ ಮೇಲಿನ ಬಡ್ಡಿಯಲ್ಲಿನ ಇಳಿತ ಮತ್ತು ತೆರಿಗೆಯ ಸೌಲಭ್ಯಗಳ ಪರಿಣಾಮವಾಗಿ ಎರಡನೇ ತ್ರೈಮಾಸಿಕದಲ್ಲಿ ಎಲ್ಲಾ ಕಂಪನಿಗಳು ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭಾಂಶ ಮತ್ತು ಉತ್ತಮ ಏರಿಕೆ ತೋರಿಸಿದವು.

ಈ ಸಮಯದಲ್ಲಿ ನಿಫ್ಟಿ 50 ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳಲ್ಲಿ ಶೇ. 8 ಕ್ಕೂ ಹೆಚ್ಚಿನ ಏರಿಕೆ ಕಂಡು ಬಂದಿತ್ತು. ಕಚ್ಚಾ ತೈಲ
ಬೆಲೆಯ ಪರಿಷ್ಕರಣಾ ನೀತಿ ಮತ್ತು ಸುಧಾರಣೆ, ಆಟೋಗ್ಯಾಸ್ ಬಳಕೆಯ ಬಗೆಗಿನ ಸರಕಾರದ ಘೋಷಣೆ ಮತ್ತು ಕೋವಿಡ್ ವ್ಯಾಕ್ಸಿನ್ ಬಗ್ಗೆ ಮಾಹಿತಿ ಸಿಕ್ಕಿರುವುದು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿತು. ಲಸಿಕೆ ತಯಾರಿಕಾ ಪ್ರಖ್ಯಾತ ಫಾರ್ಮಾ
ಕಂಪನಿಗಳಾದ ಭಾರತ್ ಬಯೋಟೆಕ್, ಸೀರಮ್ ಇನ್ ಸ್ಟಿಟ್ಯೂಟ್, ಆಸ್ಟ್ರಾಜೆನಿಕಾ ಸಂಸ್ಥೆಗಳು ತಯಾರಿಕಾ ಹಂತ ಮತ್ತು ಪ್ರಗತಿ ಅನುಮತಿ ಮತ್ತು ಲಸಿಕಾ ವಿತರಣೆ ಬಗ್ಗೆ ತೆಗೆದುಕೊಂಡ ನಿರ್ಧಾರಗಳು ಷೇರು ಮಾರುಕಟ್ಟೆಯ ಕಳವಳವನ್ನು ನಿಯಂತ್ರಿಸಿತು.

ಇದಲ್ಲದೆ 2020-21ನೇ ಏಪ್ರಿಲ್-ಸಪ್ಟೆಂಬರ್ ತಿಂಗಳಲ್ಲಿ ಭಾರತಕ್ಕೆ ಸುಮಾರು 2.10 ಲಕ್ಷ ಕೋಟಿ ವಿದೇಶಿ ಬಂಡವಾಳ ಹರಿದು
ಬಂದಿದೆ. ಆರ್‌ಬಿಐನ ಸಕಾರಾತ್ಮಕ ವರದಿ ಅಮೆರಿಕ ಮಾರುಕಟ್ಟೆಯ ಏರಿಕೆ, ಹಣದುಬ್ಬರವಿದ್ದರೂ ಆರ್‌ಬಿಐ ಬಡ್ಡಿದರವನ್ನು ಏರಿಸದಿರುವುದು, ಆಟೋ ಮಾರಾಟದಲ್ಲಿ ಕಂಡು ಬಂದ ಚೇತರಿಕೆ, ಪ್ಯಾಸೆಂಜರ್ ವೆಹಿಕಲ್ ವ್ಯಾಪಾರ ತೀವ್ರ ಏರಿಕೆಯಾದುದು, ಉಕ್ಕು ಉದ್ಯಮದ ಚೇತರಿಕೆ 2020-21ನೇ ಎರಡನೇ ತ್ರೈಮಾಸಿಕದಲ್ಲಿ ಹೆಚ್ಚಿನೆಲ್ಲಾ ಕಂಪನಿಗಳು ಉತ್ತಮ ಫಲಿತಾಂಶವನ್ನು ಘೋಷಿಸಿರುವುದು ಷೇರು ಮಾರುಕಟ್ಟೆಗೆ ಅನುಗ್ರಹವಾಗಿದೆ.

ಕಳೆದ 40 ಟ್ರೇಡಿಂಗ್ ದಿನಗಳಲ್ಲಿ ವಿದೇಶಿ ಹೂಡಿಕೆದಾದರು ಸರಿಸುಮಾರು 1.18 ಲಕ್ಷ ಕೋಟಿ ರು. ಗಳನ್ನು ಷೇರು  ಮಾರುಕಟ್ಟೆ ಯಲ್ಲಿ ಹೂಡಿಕೆ ಮಾಡಿದ್ದಾರೆ. ಅಪಾರ ಹೂಡಿಕೆಯಿಂದ ನಿಫ್ಟಿ 50 ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ಕಳೆದ ತಿಂಗಳಿನಲ್ಲಿ ಶೇ. 6 ಕ್ಕೂ ಹೆಚ್ಚಿನ ಏರಿಕೆ ಕಾಣಲು ಸಾಧ್ಯವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗೂ ಡಾಲರ್‌ಗೂ ಅಪಾರ ನಂಟಿದೆ. ಡಾಲರ್ ಮೌಲ್ಯ ಕುಸಿಯುತ್ತಿರುವಂತೆ ಚಿನ್ನದ ಬೆಲೆಯು ಮೇಲೇರುತ್ತಲೇ ಹೋಗುತ್ತದೆ.

ಕಳೆದ ಒಂದು ವರ್ಷದಿಂದ ಡಾಲರ್ ಇಂಡೆಕ್ಸ್ ಕುಸಿಯುತ್ತಿದ್ದರೆ ಚಿನ್ನದ ಬೆಲೆ ಗಗನಕ್ಕೇರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಮೇಲೇರುವ ಸಾಧ್ಯತೆಗಳಿವೆ ಎಂಬುದು ತಜ್ಞರ ಅಭಿಪ್ರಾಯ. ಈ ವರ್ಷ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ. 24 ರಷ್ಟು ಮೇಲೇರಿ ದಾಖಲೆ ನಿರ್ಮಿಸಿದೆ. ಭಾರತೀಯ ಷೇರು ಮಾರುಕಟ್ಟೆಯಲ್ಲಿ
22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ 49000 ರುಪಾಯಿ ಆಸುಪಾಸು ತಲುಪಿತು.

ಇದೀಗ ಅಮೆರಿಕ ಸ್ಟಿಮುಲಸ್, ಪ್ಯಾಕೇಜ್ ಘೋಷಣೆ, ವ್ಯಾಕ್ಸೀನ್ ಲಭ್ಯತೆ ಮತ್ತು ಬ್ರೆಕ್ಸಿಟ್ ಡೀಲ್ ಮಾತುಕತೆಯಿಂದ ಮಾರುಕಟ್ಟೆ ಯಲ್ಲಿ ತುಸು ಏರಿಕೆ ಕಂಡು ಬರಲಿದೆ ಎಂದು ಅಂದಾಜಿಸಬಹುದು. ಇದೀಗ ಸೆನ್ಸೆಕ್ಸ್ ಆಸುಪಾಸು 48000 ಅಂಕಗಳ ಗಡಿ ಯಲ್ಲಿದೆ ಮತ್ತು ನಿಫ್ಟಿ 14000ದ ಗಡಿ ತಲುಪುತ್ತಿರುವುದು ಆರ್ಥಿಕತೆಯಲ್ಲಿ ಕಂಡು ಬಂದ ಉತ್ತಮ ಬೆಳವಣಿಗೆ. ಕರೋನಾ ರೂಪಾಂತರ ಅಥವಾ ಅದರ ಬಾಧೆಯಿಲ್ಲದಿದ್ದಲ್ಲಿ ಎಲ್ಲವೂ ಸರಿಹೋಗಬಹುದು.

ಆರ್ಥಿಕ ವ್ಯವಹಾರದಲ್ಲಿ ಮಾರುಕಟ್ಟೆ ಕುಸಿತದ ಸಂದರ್ಭದಲ್ಲಿ ಬೆಲೆಗಳಲ್ಲಿ ಇಳಿಕೆ, ಬೇಡಿಕೆಯ ಅಭಾವ, ನಿರುದ್ಯೋಗ ಹೆಚ್ಚಳ ಇತ್ಯಾದಿಗಳಿಂದ ನಿರ್ಧರಿಸಲಾಗುತ್ತದೆ. ಇದನ್ನು ರಿಸೆಷನ್ ಅಥವಾ ಮಂದಿಯ ಸಮಯ ಎಂದು ಕರೆಯಲಾಗುತ್ತದೆ. ಇಂತಹ ಅತಂತ್ರ ಸನ್ನಿವೇಶದಲ್ಲಿ ರಿಟೇಲ್ ಹೂಡಿಕೆದಾರರು ಹತಾಶರಾಗದೆ ಜಾಣ್ಮೆಯ ನಡೆಯನ್ನು ಅನುಸರಿಸಬೇಕು. ಈ ಬಾರಿಯ ಷೇರು ಮಾರುಕಟ್ಟೆಯ ಅಸಮತೋಲನಕ್ಕೆ ಕೊರೊನಾ ಹೆದರಿಕೆಯೇ ಪ್ರಮುಖ ಕಾರಣ.

ಇಳಿತ ಕಂಡಾಗ ಯಥಾಸ್ಥಿತಿಗೆ ಬರುವವರೆಗೆ ತಾಳ್ಮೆ ವಹಿಸುವುದೇ ಹೂಡಿಕೆಯ ಜಾಣ್ಮೆ. ಹೂಡಿಕೆ ಮಾಡುವವರು ಸದ್ರಿ ಕಂಪನಿ ಯ ಲಾಭ, ಹಾನಿ ಖಾತೆ, ಆಯವ್ಯಯ ಪತ್ರ, ಷೇರ್ ಕೆಪಿಟಲ್, ರಿಸರ್ವ್ ಮತ್ತು ಸರ್‌ಪ್ಲಸ್, ಸಾಲ, ತಾತ್ಕಾಲಿಕ ಋಣ, ಸ್ಥಿರ ಸಂಪತ್ತು, ಹೂಡಿಕೆ, ತಾತ್ಕಾಲಿಕ ಸಂಪತ್ತು, ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್ ವಿವಿಧ ಸಂಪತ್ತು, ಕ್ಯಾಶ್‌ಪ್ಲೊ ಸ್ಟೇಟ್ ‌ಮೆಂಟ್, ತುಲನಾತ್ಮಕ ಸ್ಟೇಟ್‌ಮೆಂಟ್ ಷೇರುಗಳ ತಾಂತ್ರಿಕ ವಿಶ್ಲೇಷಣೆ ಬಗ್ಗೆ ಕೂಲಂಕುಶ ಪರಿಶೀಲನೆ ಅಗತ್ಯ.

ಷೇರು ಮಾರುಕಟ್ಟೆ ನಮ್ಮ ಕಷ್ಟಗಳನ್ನು ನಿವಾರಿಸಿ ಧನ ಸಂಪತ್ತನ್ನು ಗಳಿಸಿಕೊಡಬಹುದು ಹಾಗೂ ನಮ್ಮ ಗಳಿಕೆಯನ್ನು ನುಂಗಿ ನಮ್ಮನ್ನು ಮುಳುಗಿಸಲೂಬಹುದು. ಷೇರು ಮಾರುಕಟ್ಟೆಯ ಹೂಡಿಕೆ ಮತ್ತು ಲಾಭಕ್ಕೆ ಕೆಲವು ನಿಯಮ ಮತ್ತು ಮಂತ್ರಗಳಿವೆ. ಸ-ಲತೆಗಾಗಿ ಧೈರ್ಯ, ಪರಿಶ್ರಮ ಮತ್ತು ಆಸಕ್ತಿಯ ಅವಶ್ಯಕತೆಯಿದೆ.