Friday, 13th December 2024

Shashidhara Halady Column: ಕೂಗು ಹಾಕಿ ಹತ್ತಿರ ಕರೆಸಿಕೊಳ್ಳುವ ಜೀವಿ !

ಶಶಾಂಕಣ

ಶಶಿಕರ ಹಾಲಾಡಿ

ಇಂದಿಗೂ ನಮ್ಮ ಕಾಡುಗಳಲ್ಲಿ ಅವೆಷ್ಟೋ ಜೀವಿಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಗುರುತಿಸಿಲ್ಲವಂತೆ! ಪ್ರತಿ ವರ್ಷ ಅಂಥ ಕೆಲವು ಜೀವಿಗಳನ್ನು ಸಂಶೋಧನೆ ಮಾಡಲಾಗುತ್ತಿದೆ. ನಾನು ಕಂಡ ಸ್ಪ್ರಿಂಗ್ ದೇಹದ ಪುಟಾಣಿ ಕೀಟ ಅಂಥ ಅಪರೂಪದ ಜೀವಿ ಆಗಿರಬಹುದೇ ಎಂಬ ಬೆರಗು ನನಗೆ !

ಈ ವರ್ಷದ ಡಿಸೆಂಬರ್ ಬರಲು ಸನ್ನದ್ಧವಾಗುತ್ತಿದ್ದರೂ, ಮಳೆಗಾಲ ಮುಗಿದಿಲ್ಲವೇನೋ ಎನ್ನುವಂಥ ಭಾವ! ಭೂತಾಪಮಾನ ಏರುಪೇರಿ ನಿಂದಾಗಿ, ಋತುಮಾನದ ನಿಗದಿತ ಸಮಯಗಳು ಬದಲಾಗಿ ಬಿಟ್ಟವೇನೋ ಎಂಬಂಥ ಅನುಭವ. ಈ ವಾರದ ಮಳೆಗೆ, ಬಂಗಾಳ ಕೊಲ್ಲಿಯಲ್ಲಿ ಕಂಡುಬಂದ ಚಂಡಮಾರುತವೇ ಕಾರಣ ಎಂದು ತಜ್ಞರು ಹೇಳಿದ್ದಾರೆ, ಉಪಗ್ರಹದ ಮೂಲಕ ಚಿತ್ರಿಸಿದ ಮೋಡದ ಚಲನೆಯ ಬಿಂಬವನ್ನೂ ಹಂಚಿಕೊಂಡಿದ್ದಾರೆ. ಈ ರದ ಮೋಡ ಮತ್ತು ಮಳೆಯ ಮುನ್ಸೂಚನೆ ಯನ್ನು ಕಂಡಾಗ, ಮಳೆಗಾಲದ ನೆನಪೇ ಆಗುತ್ತದೆ.

ಸಾಮಾನ್ಯವಾಗಿ ಭಾವಜೀವಿಗಳಿಗೆ ಮಳೆಗಾಲ ಎಂದರೆ ಆಪ್ತವೇ ಸರಿ. ನಮ್ಮ ಹಳ್ಳಿಯಲ್ಲಿ ಮಳೆ ಸುರಿಯತೊಡಗಿದರೆ ಆರೆಂಟು ದಿನ ಬರುವು ದುಂಟು. ಅಂಥ ಮಳೆಗಾಲ ಹಿಡಿದಾಗ, ಮನೆ ಸುತ್ತಲಿನ ಗಿಡಮರಗಳ, ನೆಲದ, ತೋಡುಗಳ ಚಿತ್ರಣವೇ ಬೇರೆಯಾಗುತ್ತದೆ. 3 ದಶಕಗಳ ಹಿಂದಿನ ಒಂದು ದಿನ. ಆಷಾಢ ಕಳೆದು ಶ್ರಾವಣ ಬಿದ್ದಿತ್ತೆಂದು ಕಾಣುತ್ತದೆ. ನಮ್ಮ ಹಳ್ಳಿಯ ತೋಡು, ಗುಮ್ಮಿ, ಕೊಳ, ಕೆರೆ, ಹೊಂಡ, ಗದ್ದೆ, ಉಜರು, ಬಾವಿ ಎಲ್ಲಾ ಕಡೆ ನೀರು. ನಮ್ಮ ಮನೆಯ ಎದುರಿದ್ದ ಬಗ್ಗು ಬಾವಿಯಲ್ಲಂತೂ, ನೀರು ತುಂಬಿ ಕೈಗೇ ಎಟಕುವಂತಿತ್ತು. ಮನೆಯೆದುರಿನ ಪುಟ್ಟ ಅಂಗಳದ ಮೇಲೆ ಹಾಸಿದ್ದ ಕಸ, ತರಗಲೆಗಳು ಸಣ್ಣಗೆ ಕೊಳೆಯಲು ಆರಂಭಿಸಿದ್ದವು. ದಿನದ ಅರ್ಧಭಾಗ ಮಳೆ, ಇನ್ನರ್ಧ ಭಾಗ ತುಸು ಹೊಳ. ಇದು ಪ್ರತಿದಿನದ ವಿದ್ಯಮಾನ.

ಹೊಳವಾಗಿದ್ದ ಒಂದು ದಿನ ಮನೆ ಎದುರಿನ ಕೊಟ್ಟಿಗೆಯ ಹಿಂಭಾಗದಲ್ಲಿದ್ದ ಪುಟ್ಟ ತೋಟಕ್ಕೆ ಹೋಗಿದ್ದೆ. ಅದೊಂದು ಪುಟ್ಟ ಸರಳ ತೋಟ. ಅಲ್ಲಿ
ಒಂದಿಪ್ಪತ್ತು ಅಡಕೆ ಮರಗಳಿದ್ದರೂ, ಹೆಚ್ಚು ಮುತುವರ್ಜಿ ವಹಿಸಿ ಚೊಕ್ಕಟ ಮಾಡಿದ ತೋಟ ಅದಲ್ಲ. ಅಲ್ಲಲ್ಲಿ ಹಳು, ಕಾಡುಗಿಡ, ಬಳ್ಳಿಗಳು
ಬೆಳೆದಿದ್ದವು. ಬಾಳೆಗಿಡಗಳೂ ಇದ್ದವು. ನೆಲದ ಮೇಲೆ ನಾನಾ ಪ್ರಭೇದದ ಸಸ್ಯಗಳು ಬೆಳೆದು, ಹಲವು ರೀತಿಯ ಹಸಿರಿನ ಛಾಯೆ ಹೊದ್ದು, ಅಲ್ಲೊಂದು ವಿಭಿನ್ನ ಲೋಕವನ್ನೇ ಸೃಷ್ಟಿಸಿದ್ದವು. ಒಂದೆರಡು ತಿಂಗಳುಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ, ನೆಲವೆಲ್ಲಾ ಪಿಚಿಪಿಚಿ ಎನ್ನುತ್ತಿತ್ತು; ಅಲ್ಲಲ್ಲಿ ಬಿದ್ದಿದ್ದ ಅಡಕೆ ಸೋಗೆಗಳು, ಮಳೆನೀರಿನಲ್ಲಿ ಬೆರೆತು ನಿಧಾನವಾಗಿ ಕೊಳೆತು ಮಣ್ಣಾಗುತ್ತಿದ್ದವು. ಆ ಒದ್ದೆ ನೆಲದ ಮೇಲೆ, ಅಪರೂಪದ ಸೂಕ್ಷ್ಮಜೀವಿಯೊಂದು ಕಣ್ಣಿಗೆ ಬಿತ್ತು. ತೋಟದಲ್ಲಿ ನಡೆಯುತ್ತಿದ್ದಾಗ, ನನ್ನ ಹೆಜ್ಜೆ ಸದ್ದಿಗೆ ಬೆದರಿದಂತೆ, ನೆಲದಿಂದ ‘ಠಣ್’ ಎಂದು ಸುಮಾರು ೩ ಅಡಿ ಎತ್ತರ ನೆಗೆದು, ಮತ್ತೆ ನೆಲದ ಮೇಲಿದ್ದ ಅಡಕೆ ಸೋಗೆಯ ಮೇಲೆ ಹೋಗಿ ಕುಳಿತುಕೊಂಡಿತು ಆ ಹುಳ. ನಾನು ಹತ್ತಿರ ಸಾಗಿದಾಗ ಮತ್ತೊಮ್ಮೆ ೩ ಅಡಿ ಮೇಲಕ್ಕೆ ಚಿಮ್ಮಿತು. ಗಮನವಿಟ್ಟು ನೋಡಿದೆ.

ಮಸುಕು ಬಿಳಿಯ ದಾರದ ರೀತಿಯ ದೇಹಾಕೃತಿ. ಅಬ್ಬಬ್ಬಾ ಎಂದರೆ 1-2 ಇಂಚು ಉದ್ದ ಇರಬಹುದು. ಅಡಕೆ ಹಾಳೆಯ ಮೇಲೆ ತನ್ನ ದೇಹವನ್ನು
ಡೊಂಕಾಗಿ ಬಗ್ಗಿಸಿ, ತೆವಳಿಕೊಂಡು ಮುಂದಕ್ಕೆ ಚಲಿಸುತ್ತಿತ್ತು. ಕಾಡಿನಲ್ಲಿರುವ ಇಂಬಳದ ಚಲನೆಯನ್ನು ಹೋಲುವ ನಡಿಗೆ. ಆದರೆ, ಅಪಾಯದ ಸುಳಿವು ಸಿಕ್ಕ ಕೂಡಲೆ, ನಿಂತ ಜಾಗದಿಂದಲೇ, ಸ್ಪ್ರಿಂಗಿನಂತೆ ನೇರವಾಗಿ 3 ಅಡಿ ಮೇಲಕ್ಕೆ ನೆಗೆಯುತ್ತಿತ್ತು ಆ ಬಿಳಿ ಹುಳ. ದಪ್ಪ ದಾರವನ್ನು ಹೋಲುವ ಅದರ ದೇಹದಲ್ಲಿ ಎಷ್ಟು ಶಕ್ತಿ ಇರಬಹುದು? 3 ಅಡಿ ಎತ್ತರಕ್ಕೆ ನೆಗೆಯಲು ಅದರ ಸಣಕಲು ದೇಹಕ್ಕೆ ಅದೆಷ್ಟು ಶಕ್ತಿ ಬೇಕಾದೀತು! ಅದರ ಚಲನೆಯನ್ನು, ಸ್ಪ್ರಿಂಗಿನಂತೆ 3 ಅಡಿ ಮೇಲಕ್ಕೆ ನೆಗೆದ ಭಂಗಿಯನ್ನು, ಕ್ಯಾಮೆರಾದಲ್ಲಿ ಹಿಡಿಯುವ ಅವಕಾಶ ಅಂದು ಇರಲಿಲ್ಲ. ಈಗಿನ ದಿನಗಳ ಲ್ಲಾದರೆ, ಜತೆಯಲ್ಲೇ ಇರಬಹುದಾದ ಸ್ಮಾರ್ಟ್ ಫೋನ್‌ನಲ್ಲಿ ಸೆರೆಹಿಡಿಯಬಹುದಿತ್ತು.

ಒಂದೆರಡು ಹೆಜ್ಜೆ ಮುಂದೆ ನಡೆದು, ಪುನಃ ಹಿಂತಿರುಗಿ ನೋಡಿದರೆ, ಆ ಬಿಳಿ ಹುಳ ನಾಪತ್ತೆ! ನೆಲದ ಮೇಲೆ ಅಲ್ಲಲ್ಲಿ ಹರಡಿದ್ದ ಅಡಕೆ ಹಾಳೆಗಳ
ಬಣ್ಣಕ್ಕೂ, ಅದರ ದೇಹದ ಬಣ್ಣಕ್ಕೂ ಹೊಂದಾಣಿಕೆ ಯಾಗುತ್ತಿದ್ದುದರಿಂದ, ಮತ್ತೆ ಅದನ್ನು ಪತ್ತೆಮಾಡಲು ನನ್ನ ಕಣ್ಣಿಗೆ ಸಾಧ್ಯವಾಗಲೇ ಇಲ್ಲ!
ಈ ಕೀಟದ ಹೆಸರು ಪತ್ತೆಮಾಡಲು ಅಂದು ನಾನು ನಡೆಸಿದ ಸಣ್ಣಮಟ್ಟದ ಪ್ರಯತ್ನ ಯಶ ಕೊಡಲಿಲ್ಲ. ಆಗ ಈಗಿನಂತೆ ಇಂಟರ್ನೆಟ್ ಇರಲಿಲ್ಲವಲ್ಲ!
ಇದೊಂದು ಅಪರೂಪದ ಕೀಟ ಇರಬಹುದೆ? ನಮ್ಮ ಪುಟ್ಟ ತೋಟದಿಂದಾಚೆ, ಕಾಡಿನ ಸರಹದ್ದು ಆರಂಭವಾಗುತ್ತದೆ. ಅಲ್ಲಿಂದ ಬಂದ ನಿಗೂಢ ಜೀವಿ ಅದಿರಬಹುದೆ? ಒಂದಿಂಚು ಉದ್ದದ ಬಿಳಿ ಹುಳವೊಂದು 3 ಅಡಿ ಮೇಲಕ್ಕೆ ಲಂಬವಾಗಿ ನೆಗೆಯಬಲ್ಲದು ಎಂದು ಯಾರಾದರೂ ಹೇಳಿದರೆ, ತಕ್ಷಣ ನಂಬುವುದು ಕಷ್ಟ. ಆದರೆ ಇದನ್ನು ಸ್ವತಃ ನೋಡಿದ್ದು ಮಾತ್ರ ನಿಜ. ಇಂದಿಗೂ ನಮ್ಮ ದೇಶದ ಕಾಡುಗಳಲ್ಲಿ ಅವೆಷ್ಟೋ ಜೀವಿಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ಗುರುತಿಸಿಲ್ಲವಂತೆ!

ಪ್ರತಿ ವರ್ಷ ಅಂಥ ಕೆಲವು ಕೀಟಗಳನ್ನು, ಜೀವಿಗಳನ್ನು ಸಂಶೋಧನೆ ಮಾಡಲಾಗುತ್ತಿದೆ. ನಾನು ಕಂಡ ಸ್ಪ್ರಿಂಗ್ ದೇಹದ ಪುಟಾಣಿ ಕೀಟವು, ಅಂಥ ಅಪರೂಪದ ಜೀವಿ ಆಗಿರಬಹುದೇ ಎಂಬ ಬೆರಗು ನನಗೆ! ಮಳೆಗಾಲದ ಆರಂಭದ ಸಮಯದ ರಾತ್ರಿ ಯಲ್ಲಿ ನಮ್ಮ ಹಳ್ಳಿಯಲ್ಲಿ ಎಲ್ಲೆಲ್ಲೂ ಕಾಣಿಸುವ ವಿಚಿತ್ರ ಜೀವಿ ಎಂದರೆ ಮಿಣುಕುಹುಳಗಳು. ತಮ್ಮ ಬಾಲದಲ್ಲಿ ಬೆಳಕು ಬೀರುತ್ತಾ ಹಾರಾಡುವ ಮಿಣುಕು ಹುಳಗಳನ್ನು ಕಂಡವರು ಯಾರೇ ಆದರೂ ಅರೆಕ್ಷಣ ಬೆರಗಾಗುತ್ತಾರೆ, ಅವುಗಳ ಪ್ರಭೆಯನ್ನು ಕಂಡು ವಿಸ್ಮಯಗೊಳ್ಳುತ್ತಾರೆ. ಸ್ವಲ್ಪವೂ ಬಿಸಿಯನ್ನು ಹುಟ್ಟಿಸದೆ, ಬೆಳಕನ್ನು ಮಾತ್ರ ಬೀರುವ ಆ ಶಕ್ತಿಯು ಆ ಪುಟಾಣಿ ಕೀಟಗಳಲ್ಲಿ ವಿಕಾಸಗೊಂಡಿದ್ದಾದರೂ ಹೇಗೆ!

ನೂರಾರು ಮಿಣುಕು ಹುಳಗಳು, ಗದ್ದೆಯಂಚಿನ ಮರವೊಂದರ ಮೇಲೆ ಕುಳಿತು, ಸೀರಿಯಲ್ ಸೆಟ್‌ನ ದೀಪದಂತೆ ಬೆಳಗಿ, ನಡೆಸುವ ಮಿಣುಕು ಹುಳಗಳ ಪರಿಷೆ’ಯಂತೂ ಪ್ರಕೃತಿ ಲೋಕದ ವಿಸ್ಮಯ! ನೆಲದ ಮೇಲೆ ಚಲಿಸುವ, ಬೆಳಕು ಬೀರುವ ಹುಳಗಳೂ ಇವೆ. ಹಾರುವ ಮಿಣುಕು ಹುಳಗಳ ಲಾರ್ವಾಗಳು ಮತ್ತು ಹೆಣ್ಣು ಹುಳಗಳು ನೆಲದ ಮೇಲೆ ಚಲಿಸುತ್ತವೆ. ಸಹಸ್ರಪದಿಯನ್ನು ಹೋಲುವ ಲಾರ್ವಾದ ಆಯಸ್ಸು ಸುಮಾರು 2 ವರ್ಷವಾದರೆ, ಲಾರ್ವಾ ಹಂತ ಮುಗಿದು, ರೆಕ್ಕೆ ಮೂಡಿಸಿಕೊಂಡು ಹಾರಾಡುವ ಮಿಣುಕು ಹುಳದ ಆಯಸ್ಸು ಕೆಲವೇ ವಾರಗಳು!

ನಮ್ಮ ರಾಜ್ಯದ ಮಿಣುಕುಹುಳಗಳ ಜೀವನಕ್ರಮವನ್ನು ಇನ್ನೂ ಪೂರ್ತಿಯಾಗಿ ಅಧ್ಯಯನಕ್ಕೆ ಒಳಪಡಿಸಿಲ್ಲ ಎಂದು ಹೇಳಲಾಗಿದೆ. ಅವುಗಳ
ವಿವಿಧ ಪ್ರಭೇದಗಳ ಜೀವನ ಕ್ರಮದಲ್ಲಿ ವ್ಯತ್ಯಾಸವೂ ಇರಬಹುದು. ಒಂದು ಪ್ರಭೇದದ ಮಿಣುಕುಹುಳದ ಹೆಣ್ಣು ಕೀಟವು, ವಿಶಿಷ್ಟವಾಗಿ ಬೆಳಕು ಬೀರಿ ಸಂತಾನೋತ್ಪತ್ತಿ ಕ್ರಿಯೆಗಾಗಿ ಗಂಡು ಕೀಟವನ್ನು ಆಹ್ವಾನಿಸಿ, ನಂತರ ಅದನ್ನೇ ತಿನ್ನುತ್ತದಂತೆ!

ಮಳೆಗಾಲದ ರಾತ್ರಿಯಲ್ಲಿ ಬೆರಗಿನ ಲೋಕವನ್ನೇ ಸೃಷ್ಟಿಸುವ ಮಿಣುಕುಹುಳಗಳು ಸಾಕಷ್ಟು ಸಂಖ್ಯೆಯಲ್ಲಿ ನಮ್ಮ ಹಳ್ಳಿಯಲ್ಲಿದ್ದವು, ಇವೆ; ಆದರೆ,
ಈಚಿನ ದಶಕಗಳಲ್ಲಿ ಬತ್ತದ ಬೆಳೆಯ ಪರಿಶ್ರಮದಲ್ಲಿ, ಹೆಚ್ಚು ಬೆಳೆ ತೆಗೆಯಲೆಂದು ಸಿಂಪಡಿಸುತ್ತಿರುವ ಕೀಟನಾಶಕಗಳಿಂದಾಗಿ, ಅಡಕೆ ತೋಟಕ್ಕೆ ಸಿಂಪಡಿಸುತ್ತಿರುವ ರಾಸಾಯನಿಕಗಳಿಂದಾಗಿ, ಮಿಣುಕುಹುಳಗಳಂಥ ಅದೆಷ್ಟೋ ಅಪರೂಪದ ಜೀವಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ನಮ್ಮ ರಾಜ್ಯದ ಎಲ್ಲಾ ಕಡೆ ಮಿಣುಕುಹುಳಗಳಿವೆ. ಬೆಂಗಳೂರಿನಂಥ ಮಹಾನಗರದ ಹೊರವಲಯದಲ್ಲೂ, ಸುಮಾರು 12 ಜಾಗದಲ್ಲಿ ಮಿಣುಕುಹುಳಗಳ ಸಂಖ್ಯೆ ಸಾಕಷ್ಟು ಇದೆ ಎಂದು ಗುರುತಿಸಲಾಗಿದೆ. ಆದರೆ, ನಗರಗಳಲ್ಲಿನ ಪ್ರಖರ ಬೆಳಕಿನಿಂದಾಗಿ, ಸಂಜೆ ಮತ್ತು ರಾತ್ರಿ ಹೊತ್ತು ಬೆಳಕು ಬೀರುತ್ತಾ ಹಾರಾಡುವ ಮಿಣುಕುಹುಳಗಳು ಬೇಗನೆ ಕಣ್ಣಿಗೆ ಬೀಳುವುದಿಲ್ಲ.

ನಮ್ಮ ಹಳ್ಳಿಯವರು ಮಿಣುಕುಹುಳವನ್ನು ಕಂಡು, ಅದು ಸತ್ತವರ ಪ್ರೇತಾತ್ಮ ಇರಬಹುದು ಎಂಬ ಜನಪದ ಕಥೆ ಕಟ್ಟಿದ್ದಾರೆ. ಹಳ್ಳಿಗಳಲ್ಲಿ ಪ್ರಚಲಿತ ವಿರುವ ಅಂಥ ಕೆಲವು ಕಥೆಗಳು ಹುಟ್ಟಿದ್ದಾದರೂ ಹೇಗೆ ಎಂದು ಇಂದಿಗೂ ನನ್ನಲ್ಲೊಂದು ಕೌತುಕವಿದೆ. ಅಂಥ ಒಂದು ನಿಗೂಢ ಕಥೆ ಎಂದರೆ ಮಿಡಿ ನಾಗರದ್ದು. ಕೇವಲ 4 ಅಥವಾ 5 ಇಂಚು ಉದ್ದವಿರಬಹುದಾದ ಮಿಡಿನಾಗರ ಎಂಬ ಹಾವು (ಅಥವಾ ಕೀಟ?) ನೆಲದಿಂದ ನೆಗೆದು, ಮಹಿಳೆಯರ ಮುಡಿಯಲ್ಲಿರುವ ಹೂವಿನಲ್ಲಿ ಅಡಗಿ ಕುಳಿತುಕೊಳ್ಳಬಲ್ಲದು ಎಂಬ ನಂಬಿಕೆ ಇದೆ!

ತಲೆಗೆ ಮುಡಿದ ಹೂವಿನಲ್ಲಿ ಕುಳಿತು (ಮುಖ್ಯವಾಗಿ ಕೇದಗೆ ಹೂವು), ಮಹಿಳೆಯ ತಲೆಗೆ ಅದು ಕಚ್ಚಿದರೆ, ಆಕೆ ಕೆಲವೇ ನಿಮಿಷಗಳಲ್ಲಿ ಮರಣಹೊಂ
ದುವರು ಎಂಬ ಭಯಮಿಶ್ರಿತ ನಂಬಿಕೆ. ಹಿಂದಿನ ಕಾಲದಲ್ಲಿ, ಮದುವೆಗೆ ಕುಳಿತ ಮದುಮಗಳೊಬ್ಬಳು ತಲೆಗೆ ಮುಡಿದ ಹೂವಿನಲ್ಲಿ ಅಡಗಿದ್ದ ಮಿಡಿನಾಗರ ಕಚ್ಚಿ ಆ ಕ್ಷಣದಲ್ಲೇ ಸತ್ತುಹೋಗಿದ್ದಳಂತೆ! ಈ ವಿದ್ಯಮಾನವನ್ನು ಒಂದು ಅದ್ಭುತರಮ್ಯ ಕಥೆಯಂತೆ ನಮ್ಮೂರಿನವರು ನೆನಪಿಸಿ ಕೊಳ್ಳುವುದುಂಟು; ಇದೊಂದು ಜನಪದ ಕಥೆಯೇ ಇರಬಹುದು. ಆದರೆ, ಒಂದು ಇಂಚು ಉದ್ದದ, ತೆಳ್ಳನೆಯ ಬಿಳಿ ಹುಳವೊಂದು 3 ಅಡಿ ನೆಗೆದದ್ದನ್ನು ನಮ್ಮ ಮನೆಯ ಸರಹದ್ದಿನಲ್ಲಿ ನಾನೇ ಕಂಡಿದ್ದೆ; ಹಾಗಿರುವಾಗ 4 ಇಂಚು ಉದ್ದದ ಜೀವಿಯೊಂದು ೫ ಅಡಿ ನೆಗೆದು, ತಲೆಗೆ ಮುಡಿದ ಹೂವಿನಲ್ಲಿ ಅಡಗಿ ಕೂರಬಹುದು ಎಂಬ ಸಾಧ್ಯತೆಯನ್ನು ಹೇಗೆ ತಳ್ಳಿಹಾಕುವುದು ಅಥವಾ ಅಂಥದೊಂದು ಜೀವಿ ಹಿಂದೆ ನಮ್ಮ ಹಳ್ಳಿಗಳಲ್ಲಿ ಇದ್ದು, ಕ್ರಮೇಣ ನಶಿಸಿಹೋಗಿ, ಇಂದು ಕಣ್ಮರೆಯಾಗಿರಬಹುದೆ? ಇನ್ನು ಆ ಜೀವಿ ಕಚ್ಚಿದ ತಕ್ಷಣ, ಒಂದೆರಡು ನಿಮಿಷಗಳಲ್ಲಿ ಸಾಯುವ ವಿಚಾರ ನಂಬಲು ಕಷ್ಟ ಎನಿಸಿದರೂ, ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿರುವ ಇಂಥದ್ದೇ ಒಂದು ನಂಬಿಕೆ ಇಲ್ಲಿ ನೆನಪಾಗುತ್ತದೆ.

ಅಲ್ಲಿನ ಬೆಟ್ಟಗುಡ್ಡಗಳಲ್ಲಿ ಇದ್ದಿರಬಹುದಾದ, ಒಂದೆರಡು ಇಂಚಿನ ಗಾತ್ರದ ಕಪ್ಪು ಬಣ್ಣದ ಜೇಡವೊಂದು ಕಚ್ಚಿದರೆ, ಕುರಿಗಳಾಗಲೀ, ಮನುಷ್ಯ ನಾಗಲೀ ಕೆಲವೇ ನಿಮಿಷಗಳಲ್ಲಿ ಸಾಯುತ್ತಾರಂತೆ. ಕಪ್ಪು ಬಣ್ಣದ ಭಯಹುಟ್ಟಿಸುವ ದೊಡ್ಡಗಾತ್ರದ ಆ ಜೇಡವನ್ನು ಅಲ್ಲಿನ ಕುರಿಗಾಹಿಗಳು
ಅಬ್ಬೆ (ಅಬ್ಬ) ಎಂದು ಹೆಸರಿಸಿದ್ದಾರೆ. ‘ಅಬ್ಬೆ ಕಚ್ಚಿದರೆ ಹೆಬ್ಬಾಗಿಲಿಗೆ ಬರುವಷ್ಟೂ ಸಮಯವಿಲ್ಲ’ ಎಂಬ ಗಾದೆಯೂ ಅಲ್ಲುಂಟು. ಈ ಗಾದೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಕನ್ನಡ ನಿಘಂಟಿನಲ್ಲೂ ಅದೇ ಅರ್ಥದಲ್ಲಿ ದಾಖಲಿಸಲಾಗಿದೆ. ಆದರೆ ‘ಅಬ್ಬೆ’ ಎಂಬ ಜೇಡವನ್ನು ನಾನಂತೂ ಕಂಡಿಲ್ಲ, ಕನ್ನಡದ ವಿಜ್ಞಾನ ಪುಸ್ತಕಗಳೂ ದಾಖಲಿಸಿಲ್ಲ. ನಮ್ಮ ದೇಶದ ಕೀಟ ತಜ್ಞರನ್ನು ಕೇಳಿದರೆ, ಆ ರೀತಿ ಕೆಲವೇ ಕ್ಷಣದಲ್ಲಿ ಜೀವ ತೆಗೆಯುವ ಜೇಡಗಳು ಅಥವಾ ಕೀಟಗಳು ನಮ್ಮ ದೇಶದಲ್ಲಿ ಇಲ್ಲ ಎಂದೇ ಹೇಳುತ್ತಾರೆ. ವಿದೇಶಗಳಲ್ಲಿ ಮನುಷ್ಯನನ್ನು ಸಾಯಿಸಬಲ್ಲ ಜೇಡಗಳಿವೆ; ಟರಂಟುಲಾ ಎಂಬ ಜೇಡದ ವಿಷವು ಅಪಾಯಕಾರಿ ಎಂದು ಗುರುತಿಸಲಾಗಿದೆ.

ಇದೂ ಅಂಥದ್ದೊಂದಿರಬಹುದೆ? ಅಬ್ಬೆ (ಅಬ್ಬ) ಎಂಬ ಅಪಾಯಕಾರಿ ಜೇಡ ಇದೆ ಎಂಬ ಒಂದು ನಂಬಿಕೆ ನಮ್ಮ ಬಯಲುಸೀಮೆಯ ಅರಸೀಕೆರೆ,
ಹೊಸದುರ್ಗ, ಚಿತ್ರದುರ್ಗ ಮೊದಲಾದ ಪ್ರದೇಶಗಳಲ್ಲಿ ಇರುವುದಂತೂ ನಿಜ. ಇದಕ್ಕಿಂತಲೂ ವಿಸ್ಮಯಕಾರಿಯಾದ ಕಥೆಯೊಂದು ನಮ್ಮ ಕರಾವಳಿಯ ಕಾಡಂಚಿನ ಹಳ್ಳಿಗಳಲ್ಲಿದೆ. ನಮ್ಮ ಹಳ್ಳಿಯ ಜನರು, ಪ್ರತಿನಿತ್ಯ ಹಕ್ಕಲು, ಕಾಡಿಗೆ ಸೊಪ್ಪು, ಸೌದೆ ತರಲು ಹೋದಾಗ, ಅತ್ತಿತ್ತ ಚದುರಿದ ಜತೆಗಾರರನ್ನು ‘ಕೂ’ ಎಂದು ಕೂಗಿ ಕರೆಯುವುದುಂಟು. ‘ಕೂ’ ಎಂಬ ಮಾರುತ್ತರ ಬಂದರೆ, ತಾವು ಅಲ್ಲೇ ಇದ್ದೇವೆ ಎಂಬ
ಸೂಚನೆ. ಆದರೆ ದಟ್ಟ ಕಾಡು ಮತ್ತು ಬರೆಗಳ ಹತ್ತಿರ ಈ ರೀತಿ ‘ಕೂ’ ಹಾಕಬಾರದು ಎಂಬ ನಂಬಿಕೆ ಇದೆ.

ಏಕೆಂದರೆ, ಮನುಷ್ಯನ ಕೂಗಿಗೆ ‘ಕೂ’ ಎಂದು ಮಾರುತ್ತರ ನೀಡಿ, ಹತ್ತಿರಕ್ಕೆ ಕರೆಯಿಸಿಕೊಳ್ಳುವ ಹೆಬ್ಬಾವೊಂದು, ಹತ್ತಿರ ಬಂದವರನ್ನು ನುಂಗಿ,
ಸ್ವಾಹಾ ಮಾಡುತ್ತದಂತೆ. ಅಲ್ಲೆಲ್ಲಾ ಕೆಲವೇ ದಶಕಗಳ ಹಿಂದೆ ಇದ್ದ ದಟ್ಟ ಕಾಡು ಕಣ್ಮರೆಯಾಗಿರುವ ಇಂದಿನ ದಿನಗಳಲ್ಲಿ, ಈ ಕಥೆಯು ಮಾಂತ್ರಿಕ ಲೋಕದ ಕಟ್ಟುಕಥೆಯಂತೆ ಕಾಣಬಹುದು. ಆದರೆ ‘ಕೂ’ ಎಂದು ಸದ್ದು ಮಾಡುವ, ಇಂದು ಕಣ್ಮರೆಯಾಗಿರುವ ಹೆಬ್ಬಾವಿನ ಪ್ರಭೇದವೊಂದರ ನೆನಪುಗಳೇ ಈ ಜನಪದ ಕಥೆಗೆ ಸ್ಪೂರ್ತಿ ನೀಡಿರಬಾರದೇಕೆ ಎಂಬ ಕುತೂಹಲವಿದೆ!

ಇದನ್ನೂ ಓದಿ: Shashidhara Halady Column: ಹಕ್ಕಿ ಫೋಟೋ ತೆಗೆಯದೇ ವಾಪಸಾದೆ !