Tuesday, 17th September 2024

Shashidhara Halady Column: ಕಾಂತಾವರದ ಸಾಹಿತ್ಯಪ್ರೇಮಿಗೆ ಎಂಬತ್ತು !

ಶಶಾಂಕಣ

ಶಶಿಧರ ಹಾಲಾಡಿ

ಹಳ್ಳಿಯಲ್ಲಿದ್ದುಕೊಂಡು ಸಾಹಿತ್ಯ ಸೇವೆ ಮಾಡಲು ಸಾಧ್ಯವೇ? ವಾಚನಾಲಯ ಮತ್ತು ಇತರ ಸೌಲಭ್ಯಗಳು, ಪ್ರಭುತ್ವದ ಪ್ರೋತ್ಸಾಹ, ಜನಬೆಂಬಲ ಇರುವ ನಗರ ಮತ್ತು ಪಟ್ಟಣಗಳಲ್ಲಿ (ಉದಾ: ಮೈಸೂರು) ಜನರನ್ನು ಒಗ್ಗೂಡಿಸಿ, ಅವರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವುದು ಸುಲಭ; ರಸ್ತೆಯೇ ಸರಿಯಾಗಿ ಇಲ್ಲದ, ವಿದ್ಯುತ್ ಸಂಪರ್ಕದ ಕೊರತೆ ಇರುವಂಥ, ಕಾಡಿನ ನಡುವೆ ಇರುವ ಜನವಸತಿಯಲ್ಲಿ ಬೇರು ಬಿಟ್ಟು, ಸ್ಥಳೀಯರನ್ನು ಒಳಗೊಂಡು, ಅವರಲ್ಲಿ ಸಾಹಿತ್ಯ ಪ್ರೇಮವನ್ನು ಬೆಳೆಸುವುದರ ಜತೆಯಲ್ಲೇ, ತಾವೂ ಸಾಹಿತ್ಯದಲ್ಲಿ ಪರಿಶ್ರಮ ಹಾಕುವುದು ನಿಜಕ್ಕೂ ಕಷ್ಟ ಅಲ್ಲವೇ? ಎಂಬತ್ತು ವರ್ಷ ಪೂರೈಸಿದ, ಈಗಲೂ ಕಾದಂಬರಿ ರಚನೆಯಲ್ಲಿ ತೊಡಗಿಕೊಂಡಿರುವ ಈ ಸಾಹಿತ್ಯ ಪ್ರೇಮಿ, ಸಾಹಿತ್ಯ ಪರಿಚಾರಕ, ಕಾದಂಬರಿಕಾರ ಮತ್ತು ಕವಿಯ ಬದುಕನ್ನು ಅವಲೋಕಿಸಿದರೆ ಬೆರಗು ಮೂಡುತ್ತದೆ; ಕುಗ್ರಾಮದಲ್ಲಿದ್ದರೂ ಸಾಹಿತ್ಯಸೇವೆ ಮಾಡಲು ಸಾಧ್ಯ ಎಂಬುದನ್ನು
ಇವರು ತೋರಿಸಿಕೊಟ್ಟಿದ್ದಾರೆ.

ದಿನಾಂಕ ನವೆಂಬರ್ ೧, ೧೯೬೫. ಮುಖ್ಯ ರಸ್ತೆಯಿಂದ ೪ ಕಿ.ಮೀ. ಒಳಗಿರುವ, ದೊಡ್ಡ ವಾಹನಗಳು ತಲುಪಲಾಗದ, ಕಾಂತಾವರ ಎಂಬ ಕುಗ್ರಾಮಕ್ಕೆ ಯುವ ಆಯುರ್ವೇದ ವೈದ್ಯರೊಬ್ಬರು ಬಂದರು. ಸುತ್ತಲೂ ಕಾಡು, ನಡುವೆ ಕಾಲುಹಾದಿ, ಅಲ್ಲಲ್ಲಿ ಗದ್ದೆ ಬಯಲುಗಳು. ಅಲ್ಲಿದ್ದ ಪುಟ್ಟ ಆಯುರ್ವೇದ ಆಸ್ಪತ್ರೆಗೆ ಅರೆಕಾಲಿಕ ವೈದ್ಯಾಧಿಕಾರಿ ಯಾಗಿ ನಿಯುಕ್ತಗೊಂಡ ಆ ವೈದ್ಯರು ಅಲ್ಲಿಗೆ ಬಂದಾಗ, ಸೂಕ್ತ ವಸತಿಗಾಗಿ ಹುಡುಕಬೇಕಾಯಿತು. ಬಾಡಿಗೆ ರೂಮು ಮಾಡಿಕೊಂಡು, ಅಲ್ಲೇ ಇದ್ದ ಪುಟಾಣಿ ಹಳ್ಳಿ-ಹೋಟೆಲ್‌ನಿಂದ ಊಟ ತರಿಸಿಕೊಂಡು ಜೀವನ ನಡೆಸಲು ಆರಂಭಿಸಿದ ಈ ಕಾಸರಗೋಡಿನ ತರುಣ, ಮುಂದೆ ಕಾಂತಾವರದಲ್ಲಿ ಒಂದು ಸಾಂಸ್ಕೃತಿಕ ಕ್ರಾಂತಿಯನ್ನೇ ಮಾಡಿದರು. ಅವರೇ ಡಾ. ನಾ.ಮೊಗಸಾಲೆ.

ಈಗ ೮೦ ವರ್ಷ ದಾಟಿರುವ ಡಾ.ಮೊಗಸಾಲೆಯವರು, ಕಾಂತಾವರ ಎಂಬ ಪುಟ್ಟ ಹಳ್ಳಿಯಲ್ಲಿ ವಾಸಿಸಿ, ತಾವೂ ಸಾಹಿತ್ಯ ರಚನೆ ಮಾಡಿದರು ಮತ್ತು ಕಾಂತಾವರದಲ್ಲಿ ಅಪರೂಪದ ಸಾಹಿತ್ಯ ಸೇವೆ ನಡೆಸಿದರು. ಕಳೆದ ೬ ದಶಕಗಳಲ್ಲಿ ಆ ಪುಟ್ಟ ಹಳ್ಳಿಯಲ್ಲಿ ನಡೆದ ನಾನಾ ವಿಧದ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಡಿನ ಗಣ್ಯರು ಭಾಗವಹಿಸಿದ್ದಾರೆ! ‘ಕಾಂತಾರ’ದ ನಡುವೆ ಇರುವ ಕಾಂತಾವರದಂಥ ಕುಗ್ರಾಮದಲ್ಲಿ ಇಷ್ಟು ದೊಡ್ಡ ಮಟ್ಟದ ಸಾಹಿತ್ಯ ಸೇವೆ ನಡೆಯುವುದನ್ನು ಕಂಡು ಬೆರಗಾಗಿದ್ದಾರೆ. ಅದರ ಹಿಂದಿನ ಶಕ್ತಿ ಡಾ.ಮೊಗಸಾಲೆ
ಅವರು.

ಇಂದಿಗೂ ಸಣ್ಣ ಹಳ್ಳಿಯಾಗಿರುವ, ದಿನಕ್ಕೆ ಬೆರಳೆಣಿಕೆಯಷ್ಟು ಮಾತ್ರ ಬಸ್‌ಗಳು ಬರುತ್ತಿರುವ, ಕಾಫಿ-ತಿಂಡಿ ನೀಡುವ ಹೋಟೆಲ್ ಸೌಲಭ್ಯವೂ ಸರಿಯಾಗಿ ಇಲ್ಲದಿರುವ ಕಾಂತಾವರದಲ್ಲಿನ ಕನ್ನಡ ಸಂಘದ ಚಟುವಟಿಕೆಗಳ ಕುರಿತು ಹೇಳುವಾಗ, ಡಾ. ನಾ.ಮೊಗಸಾಲೆಯವರ ಸಾಧನೆ, ಛಲ, ಸಂಘಟನಾ ಶಕ್ತಿ, ನಿಷ್ಠೆ, ನಿಯತ್ತು, ಸಾಹಿತ್ಯಪ್ರೇಮಗಳ
ಕುರಿತು ಹೇಳಲೇಬೇಕು. ಗದ್ದೆ, ಮರ, ಗಿಡ, ಗುಡ್ಡ, ಕಾಡುಪ್ರದೇಶದ ನಡುವೆ ಇರುವ ಈ ಪುಟ್ಟ ಹಳ್ಳಿಯು ಇಂದು ಕರ್ನಾಟಕದ ಸಾಹಿತ್ಯಕ ಭೂಪಟ ದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದೆಯೆಂದರೆ, ಅದಕ್ಕೆ ಅಲ್ಲಿರುವ ಕನ್ನಡ ಸಂಘವೇ ಕಾರಣ ಮತ್ತು ಅದನ್ನು ಕಟ್ಟಿ, ಬೆಳೆಸಿದ ಡಾ.ಮೊಗಸಾಲೆಯವರೇ ಕಾರಣ.

೧೯೬೫ರ ರಾಜ್ಯೋತ್ಸವ ದಿನದಂದು, ಉದ್ಯೋಗ ನಿಮಿತ್ತ ಕಾಂತಾವರಕ್ಕೆ ಕಾಲಿಟ್ಟ ಡಾ.ಮೊಗಸಾಲೆಯವರು, ೧೯೬೬ರಲ್ಲಿ ಅಲ್ಲೊಂದು ‘ರೈತ ಯುವಕ ವೃಂದ’ ಕಟ್ಟಿದರು. ಅದರ ಮುಖ್ಯ ಉದ್ದೇಶ ಸಾಹಿತ್ಯಕ-ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದೇ ಆಗಿತ್ತು. ಆದರೆ ಕೆಲವು ವರ್ಷಗಳಲ್ಲಿ ಆ ಯುವಕವೃಂದವು ಕಾರಣಾಂತರ ಗಳಿಂದಾಗಿ ಸಪ್ಪಗಾಯಿತು. ಡಾ.ಮೊಗಸಾಲೆಯುವರು ತಮ್ಮ ಪಾಡಿಗೆ ತಾವು ಕಾದಂಬರಿ, ಸಣ್ಣ ಕಥೆ, ಕವನಗಳನ್ನು ಬರೆಯುತ್ತಾ, ಹಳ್ಳಿಯ ಜನರಿಗೆ ಚಿಕಿತ್ಸೆ ನೀಡುತ್ತಾ ಇದ್ದರು. ಆದರೆ ಮನದಲ್ಲಿ ತುಡಿತ; ಸುತ್ತಮುತ್ತಲಿನ ಜನರಿಗೆ ಸಾಹಿತ್ಯದ ರುಚಿ ಹಿಡಿಸಬೇಕು, ಸಾಹಿತ್ಯ ಸೇವೆ ಮಾಡಬೇಕು ಎಂಬ ಅಭಿಲಾಷೆ. ಕಾಂತಾವರ ವ್ಯಾಪ್ತಿಯ ಬೇಲಾಡಿ ಮತ್ತು ಇತರ ನಾಲ್ಕು ಶಾಲೆಗಳ ಅಧ್ಯಾಪಕರ ಸ್ನೇಹ ಬೆಳೆಸಿ, ವಿಶ್ವಾಸಕ್ಕೆ ತೆಗೆದುಕೊಂಡು ಒಂದು ಸಾಹಿತ್ಯಕ ಸಂಘ ಕಟ್ಟಬಹುದು ಎಂದು ಡಾ.ಮೊಗಸಾಲೆಯವರು ನಿರ್ಧರಿಸಿದರು.

ಆಗ ಜನಿಸಿದ್ದೇ ‘ಕಾಂತಾವರ ಕನ್ನಡ ಸಂಘ’. ಇದು ಉದ್ಘಾಟನೆಗೊಂಡದ್ದು ೨೬.೫.೧೯೭೬ರಂದು.
ಉದ್ಘಾಟನೆಗೆ ಆಗಮಿಸಿದವರು ಹಿರಿಯ ಕವಿ ಎಸ್ .ವಿ.ಪರಮೇಶ್ವರ ಭಟ್. ಕನ್ನಡ ಸಂಘವನ್ನು ಆರಂಭಿಸಿದಾಗ, ಜನರನ್ನು ಒಳಗೊಳ್ಳುವ ಅಧಿಕೃತ ಮಾರ್ಗವು ಡಾ.ಮೊಗಸಾಲೆಯವರಿಗೆ ದೊರಕಿತು.

ಸುತ್ತಲಿನ ಸಾಹಿತ್ಯಾಸಕ್ತರನ್ನು, ಗಣ್ಯರನ್ನು, ಯುವಕರನ್ನು ಹುರಿದುಂಬಿಸಿ, ಸಾಹಿತ್ಯ ಮತ್ತು ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು ನಡೆಸತೊಡಗಿದರು. ಕಾಂತಾವರದಲ್ಲಿ ವರ್ಷಕ್ಕೆ ಒಂದೆರಡು ದೊಡ್ಡ ಮಟ್ಟದ ಕಾರ್ಯ ಕ್ರಮಗಳು ನಡೆಯತೊಡಗಿದಾಗ, ಕರ್ನಾಟಕದವರು ಕಾಂತಾವರದತ್ತ ಮುಖ ಮಾಡಿದರು. ಅಲ್ಲಿ ನಡೆಯುವ ಕಾರ್ಯಕ್ರಮಗಳಿಗೆ, ಕನ್ನಡದ ಎಲ್ಲಾ ಪ್ರಮುಖ ಸಾಹಿತಿಗಳನ್ನು, ಕಲಾವಿದರನ್ನು ಆಹ್ವಾನಿಸಿ, ಆ ಹಳ್ಳಿಯಲ್ಲಿ ನಡೆದ ಸಮಾರಂಭಗಳಲ್ಲಿ ಭಾಗವಹಿಸುವಂತೆ ಮಾಡಿದ ಹಿರಿಮೆ ಈ ಸಂಘಕ್ಕೆ ಇದೆ.

ಮೊದಲಿಗೆ ಕನ್ನಡ ಸಂಘಕ್ಕೆ ಸ್ವಂತ ಕಟ್ಟಡವಿರಲಿಲ್ಲ. ಸನಿಹದ ಬೇಲಾಡಿಯ ಶಾಲೆಯಲ್ಲಿ ಸಂಘದ ಚಟುವಟಿಕೆಗಳು ಆರಂಭಗೊಂಡವು. ಅಲ್ಲಿ ಅಧ್ಯಾ ಪಕರಾಗಿದ್ದ, ಮುಂದೆ ರಾಷ್ಟ್ರಪ್ರಶಸ್ತಿ ವಿಜೇತರೂ ಆದ ವಿಠಲ ಬೇಲಾಡಿಯವರೂ ಆರಂಭಿಕ ಸದಸ್ಯರಲ್ಲಿ ಒಬ್ಬರು. ಇಂದಿಗೂ ಅವರು ಕನ್ನಡ ಸಂಘಕ್ಕೆ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ. ಪ್ರತಿ ತಿಂಗಳು ಉಪನ್ಯಾಸ, ಹಿರಿಯ ಸಾಹಿತಿಗಳನ್ನು ಆಹ್ವಾನಿಸಿ ಮಾತನಾಡಿಸುವುದು, ಇತರ ಸಾಂಸ್ಕೃತಿಕ ಚಟುವಟಿಕೆಗಳು ಆರಂಭಗೊಂಡವು. ಡಾ.ಮೊಗಸಾ ಲೆಯವರು ಕನ್ನಡ ಸಂಘದ ಚಟುವಟಿಕೆಗಳನ್ನು ರೂಪಿ
ಸುವಲ್ಲಿ, ಅದಕ್ಕೆ ಅಗತ್ಯವಿರುವ ಸಂಪನ್ಮೂಲಗಳನ್ನು ಸಂಗ್ರಹಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಇದರ ನಡುವೆಯೂ ಅವರ ಸಾಹಿತ್ಯ ರಚನೆಯು ನಿರಂತರವಾಗಿ ಮುಂದುವರಿಯಿತು. ಹಲವು ಪ್ರಮುಖ ಕಾದಂಬರಿ, ಕವನಗಳನ್ನು ರಚಿಸಿದರು.

ಸಣ್ಣ ಕಥೆಗಳನ್ನು ಬರೆದರು. ಕನ್ನಡ ಸಾಹಿತ್ಯದ ಹಿರಿಮೆಯನ್ನು ವೈಯಕ್ತಿಕವಾಗಿಯೂ ಹೆಚ್ಚಿಸಿದರು.
ಜತೆಯಲ್ಲೇ, ಕಾಂತಾವರ ಕನ್ನಡ ಸಂಘದ ಸಾರಥ್ಯ ಡಾ.ಮೊಗಸಾಲೆಯವರದ್ದು. ಕನ್ನಡ ಸಂಘವು ಮುಖ್ಯವಾಗಿ ಸಾಹಿತ್ಯಕ್ಕೆ, ಜತೆಯಲ್ಲೇ ಕಲೆ ಮತ್ತು ಸಂಸ್ಕೃತಿಗೆ ತನ್ನನ್ನು ಮೀಸಲಿಟ್ಟಿಕೊಂಡಿತು.

೧೯೭೯ರಲ್ಲಿ ಕನ್ನಡ ಸಂಘ ಆರಂಭಿಸಿದ ‘ಮುದ್ದಣ ಸಾಹಿತ್ಯ ಪ್ರಶಸ್ತಿ’ಯು ಇಂದಿಗೂ ತನ್ನ ಅನನ್ಯತೆಯನ್ನು ಕಾಪಾಡಿಕೊಂಡು ಬಂದಿದೆ. ಕವನಗಳ ಹಸ್ತಪ್ರತಿಗಳನ್ನು ಆಹ್ವಾನಿಸಿ, ಉತ್ತಮ ಕವನಸಂಕಲನಗಳಿಗೆ ಪ್ರಶಸ್ತಿ ನೀಡುವ ಆ ಪ್ರಕ್ರಿಯೆ ವಿಶಿಷ್ಟ. ಈ ಕಾವ್ಯ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ, ಅದರಲ್ಲಿ ಕಾಣುವ ನಿಷ್ಪಕ್ಷಪಾತ ನಿಲುವು, ಗುಣಮಟ್ಟ ಎಲ್ಲವನ್ನೂ ಕಂಡ ಹಾ.ಮಾ.ನಾಯಕರು, ‘ಮುದ್ದಣ ಕಾವ್ಯ ಪ್ರಶಸ್ತಿಯು ಕನ್ನಡ ಕಾವ್ಯ ಜಗತ್ತಿಗೆ ಒಂದು
ರಹದಾರಿ’ ಎಂಬರ್ಥದ ಮಾತುಗಳನ್ನು ಹೇಳಿರುವುದು ಅರ್ಥಪೂರ್ಣ.

ಈ ನಡುವೆ ಕರ್ನಾಟಕದ ಮೊದಲ ಖಾಸಗಿ ಸಾಹಿತ್ಯಕ ಪ್ರಶಸ್ತಿ ಎನಿಸಿರುವ ‘ವರ್ಧಮಾನ ಪ್ರಶಸ್ತಿ’ ಮತ್ತು ‘ವರ್ಧ ಮಾನ ಉದಯೋನ್ಮುಖ ಪ್ರಶಸ್ತಿ’ಯು ೧೯೭೮ರಲ್ಲಿ ಕಾಂತಾವರಕ್ಕೆ ಹತ್ತಿರದ ಮೂಡಬಿದರೆಯಲ್ಲಿ ಆರಂಭಗೊಂಡಿತು ಮತ್ತು ಅದನ್ನು ಸ್ಥಾಪಿಸುವಲ್ಲಿ ಡಾ.ಮೊಗಸಾಲೆಯವರ ಕೊಡುಗೆ ಹಿರಿದು. ಇತ್ತ ಕನ್ನಡ ಸಂಘದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿದವು. ಸಾಹಿತ್ಯ ಕಾರ್ಯಕ್ರಮದ ಜತೆಯಲ್ಲೇ, ಜನಪದ ಕಲೆ, ನಾಟಕ, ತಾಳಮದ್ದಲೆ ಮತ್ತು ಯಕ್ಷಗಾನದಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಇನ್ನೊಂದು ವಿಶೇಷ. ಪ್ರತಿ ತಿಂಗಳೂ ಕಾರ್ಯಕ್ರಮ ಮತ್ತು ಪ್ರತಿ ವರ್ಷ ರಾಜ್ಯೋತ್ಸವದ ದಿನದಂದು ‘ಕಾಂತಾವರ ಉತ್ಸವ’ಗಳು ಆಯೋಜ ನೆಗೊಂಡು, ನಾಡಿನ ಹಿರಿಯ ಸಾಹಿತಿಗಳು, ಗಣ್ಯರು ಪಾಲ್ಗೊಂಡರು.

ಇವೆಲ್ಲಾ ಕಾರ್ಯಕ್ರಮಗಳಿಗೆ ಕಾಂತಾವರ, ಮೂಡಬಿದರೆ, ಕಾರ್ಕಳ ಮತ್ತು ಇತರ ಸ್ಥಳಗಳ ಸಹೃದಯಿಗಳು ಸಹಕಾರ ನೀಡಿರುವುದು ಸಹ ವಿಶೇಷ. ಜತೆಗೆ ಸರಕಾರದ ಕೆಲವು ಇಲಾಖೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾರ್ಕಳ ಮತ್ತು ಮೂಡಬಿದರೆಯ ಸ್ಥಳೀಯ ಘಟಕಗಳು ಕಾಲದಿಂದ ಕಾಲಕ್ಕೆ, ಸಂದರ್ಭಾನುಸಾರ ಕೊಡುಗೆಯನ್ನು ನೀಡಿವೆ.

ಇಸವಿ ೨೦೦೧. ಕನ್ನಡ ಸಂಘಕ್ಕೆ ೨೫ರ ಸಂಭ್ರಮ. ಸಂಘಕ್ಕೆ ಒಂದು ಕಟ್ಟಡ ಬೇಕು ಎಂಬ ಅಭಿಪ್ರಾಯ ಮೂಡಿ, ಆ ನಿಟ್ಟಿನಲ್ಲಿ ಡಾ.ಮೊಗಸಾಲೆಯವರು ಕಾರ್ಯಪ್ರವೃತ್ತರಾದರು. ಕಾಂತಾವರದವರೇ ಆದ, ಕರ್ನಾಟಕ ಏಕೀಕರಣದ ಹೋರಾಟದಲ್ಲಿ ಪಾಲ್ಗೊಂಡಿದ್ದ ಜಿನರಾಜ ಹೆಗ್ಡೆಯವರ ಜನ್ಮಶತಮಾನೋತ್ಸವದ ವರ್ಷದಲ್ಲಿ, ಅವರ ನೆನಪನ್ನು ಹೊತ್ತು ಕಾಂತಾವರದ ಮುಖ್ಯ ರಸ್ತೆಯಲ್ಲಿ ‘ಕನ್ನಡ ಭವನ’ ತಲೆ ಎತ್ತಿತು. ಕರ್ನಾಟಕ ಸರಕಾರವು ೧೨ ಲಕ್ಷ ರು.
ಕೊಡುಗೆ ನೀಡಿದರೆ, ಸುಮಾರು ೧೩ ಲಕ್ಷ ರು. ಕೊಡುಗೆಯನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಲಾಯಿತು. ಸಂಘದ ಪದಾಧಿಕಾರಿಗಳು, ಸದಸ್ಯರು ಕೈಜೋಡಿಸಿದರು.

ನೇತೃತ್ವ ಡಾ.ಮೊಗಸಾಲೆಯವರದು. ೨ ಚಾವಡಿ, ಸಭಾಂಗಣ, ಕಚೇರಿಗೆ ಅಗತ್ಯವಿರುವ ಕೊಠಡಿಗಳು, ಮೂರು ಅತಿಥಿ ಕೋಣೆಗಳು ಮೊದಲಾದ ಸೌಲಭ್ಯಗಳನ್ನು ಹೊಂದಿರುವ ಈ ಹಂಚಿನ ಮಾಡಿನ ಸುಂದರ ಕಟ್ಟಡವು, ಸಂಘದ
ಚಟುವಟಿಕೆಗಳಿಗೆ ಶಾಶ್ವತ ನೆಲೆಯಾಯಿತು. ಪ್ರತಿ ತಿಂಗಳ ಉಪನ್ಯಾಸಗಳು ಇಲ್ಲೇ ನಡೆಯತೊಡಗಿದವು. ೨೦೦೧ರಲ್ಲಿ ನಡೆದ ರಾಜ್ಯಮಟ್ಟದ ಸಮ್ಮೇಳನವು ಅಭೂತಪೂರ್ವ ಎನಿಸಿತು. ಸಂಘಕ್ಕೆ ಒಂದು ಸ್ವಂತ ಕಟ್ಟಡ ಇದ್ದರೆ, ಹೇಗೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ದೊರಕುತ್ತದೆ ಎಂಬುದಕ್ಕೆ, ಕಾಂತಾವರ ಕನ್ನಡ ಸಂಘದ ಕಟ್ಟಡವೇ ಒಂದು ಉದಾಹರಣೆ. ಕಾಡಿನ ನಡುವೆ ಇರುವ ಕಾಂತಾವರದಲ್ಲಿ ನೂರಾರು ಕಾರ್ಯಕ್ರಮಗಳು ಇದುವರೆಗೆ ನಡೆದಿವೆ ಎಂದರೆ, ಅದಕ್ಕೆ ಕನ್ನಡ ಸಂಘದ ಕಟ್ಟಡದ ಸೌಲಭ್ಯ ಮಾತ್ರವಲ್ಲದೆ, ಅದರ ಹಿಂದಿನ ಪ್ರೇರಕ ಶಕ್ತಿಯಾದ ಡಾ. ಮೊಗಸಾಲೆಯವರೂ ಕಾರಣ.

ಡಾ.ಮೊಗಸಾಲೆಯವರ ಪ್ರಕಟಿತ ಸಾಹಿತ್ಯದಲ್ಲಿ ೧೩ ಕವನ ಸಂಕಲನಗಳು, ೨೦ಕ್ಕೂ ಹೆಚ್ಚು ಕಾದಂಬರಿಗಳು ಸೇರಿವೆ. ಇವರಿಗೆ ಸಂದ ಪ್ರಶಸ್ತಿಗಳು, ಗೌರವಗಳು ಸಹ ಹಲವು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ, ಶಿವರಾಮ ಕಾರಂತ ಪ್ರತಿಷ್ಠಾನದ ಪ್ರಶಸ್ತಿ, ಎಂ.ವಿ.ಸೀ. ಪ್ರಶಸ್ತಿ, ನಿರಂಜನ ಪ್ರಶಸ್ತಿ, ಸಿದ್ದವನಹಳ್ಳಿ ಕೃಷ್ಣ ಶರ್ಮ ಪ್ರಶಸ್ತಿ- ಈ ರೀತಿ ಪಟ್ಟಿ ಮಾಡುತ್ತಾ ಹೋದರೆ, ಪ್ರಮುಖ ಪ್ರಶಸ್ತಿಗಳ ಸಂಖ್ಯೆ ೪೦ನ್ನು ತಲುಪಬಹುದು. ಪ್ರಶಸ್ತಿಗಳಿಗಿಂತ ಮಿಗಿಲಾಗಿ, ಡಾ.ಮೊಗಸಾಲೆಯವರ ಕಾದಂಬರಿಗಳು, ಕನ್ನಡದ ಜನರ ಮನ ಗೆದ್ದಿವೆ, ಅವರು ರಚಿಸಿದ ಕಾವ್ಯವು ಜನರನ್ನು ತಲುಪಿದೆ, ಅವರು ಕಟ್ಟಿದ ‘ಕಾಂತಾವರ ಕನ್ನಡ ಸಂಘ’ವು ಅಪರೂಪದ ಸಾಹಿತ್ಯ ಸೇವೆ ನಡೆಸಿದೆ.

ಡಾ.ಮೊಗಸಾಲೆಯವರ ಕುರಿತಾಗಿ ಬಂದಿರುವ ಗ್ರಂಥಗಳ ಸಂಖ್ಯೆಯೇ ಬೆರಗು ಹುಟ್ಟಿಸುವಂಥದ್ದು. ಇವರಿಗೆ ಮೂರು ಅಭಿನಂದನಾ ಗ್ರಂಥಗಳು ಸಮರ್ಪಣೆಗೊಂಡಿವೆ. ಡಾ.ಮೊಗಸಾಲೆಯವರ ನಾಲ್ಕು ಜೀವನ ಚರಿತ್ರೆಗಳೂ ಪ್ರಕಟ ಗೊಂಡಿವೆ. ಇವರ ಕೃತಿಗಳ ಕುರಿತು ಹತ್ತಕ್ಕೂ ಹೆಚ್ಚು ವಿಮರ್ಶಾ ಗ್ರಂಥಗಳು ಪ್ರಕಟಗೊಂಡಿವೆ. ಇವರ ಕೃತಿಗಳನ್ನು ಆಧರಿಸಿ ವಿವಿಧ ವಿಶ್ವ ೨೭.೮.೧೯೪೪ರಂದು ಕಾಸರಗೋಡಿನ ಹಳ್ಳಿಯೊಂದರಲ್ಲಿ ಜನಿಸಿದ ಡಾ.ಮೊಗಸಾಲೆಯವರು, ಕಳೆದ ಆರು ದಶಕಗಳಿಂದ ಕಾರ್ಕಳದ ಬಳಿಯ ಕಾಂತಾವರದಲ್ಲಿ ನೆಲೆ ನಿಂತಿದ್ದಾರೆ; ಎಂಬತ್ತು ವರ್ಷದ ಈ ಇಳಿ ವಯಸ್ಸಿನಲ್ಲೂ ಸತತವಾಗಿ ಬರವಣಿಗೆ ಮುಂದುವರಿಸಿದ್ದಾರೆ! ಕಳೆದ ನಾಲ್ಕಾರು ವರ್ಷಗಳಿಂದ ವರ್ಷಕ್ಕೆ ಒಂದು ಅಥವಾ ಎರಡು ಕೃತಿಗಳನ್ನು ರಚಿಸಿದ್ದಾರೆ.

೨೦೨೪ರಲ್ಲಿ ಅವರು ರಚಿಸಿದ ಕಾದಂಬರಿ, ಕಥಾ ಪ್ರಸಂಗಗಳ ಸಂಕಲನ ಪ್ರಕಟಗೊಂಡಿದೆ. ಈಚಿನ ದಿನಗಳಲ್ಲಿ ಒಂದು ಕಾದಂಬರಿಯನ್ನು ರಚಿಸಿದ್ದು, ಅದನ್ನು ಪರಿಷ್ಕರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಈ ಕಾದಂಬರಿಯು ಮುಂದಿನ ವರ್ಷದಲ್ಲಿ ಬೆಳಕು ಕಾಣುವ ನಿರೀಕ್ಷೆಯಲ್ಲಿದೆ. ಬರವಣಿಗೆ, ಸಾಹಿತ್ಯ ಚಿಂತನೆ,
ಕಾಂತಾವರ ಕನ್ನಡ ಸಂಘದ ಮೂಲಕ ಸಂಘಟನೆ ಮತ್ತು ಸಾಹಿತ್ಯ ಪರಿಚಾರಿಕೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಡಾ.ಮೊಗಸಾಲೆಯವರ ಚೇತನಕ್ಕೆ ನಮೋನಮಃ. ಅವರ ಲೇಖನಿಯಿಂದ ಇನ್ನಷ್ಟು ಕಾದಂಬರಿ ಮತ್ತು ಕವನಗಳನ್ನು ನಾಡು ನಿರೀಕ್ಷಿಸುತ್ತಿದೆ. ಉದಾತ್ತ ಮತ್ತು ಆದರ್ಶ ಎನ್ನಬಹುದಾದ ಸಾಹಿತ್ಯಾಸಕ್ತಿ ಮತ್ತು ಜೀವನಾಸಕ್ತಿ
ಎಂದರೆ ಇದೇ ಅಲ್ಲವೇ?

Leave a Reply

Your email address will not be published. Required fields are marked *