ಸಂಗತ
ಡಾ.ವಿಜಯ್ ದರಡಾ
ಶೇಖ್ ಹಸೀನಾರನ್ನು ಅಮೆರಿಕ ವಿರೋಧಿಸುತ್ತದೆ, ಅದೇ ಕಾರಣಕ್ಕೆ ಅವರನ್ನು ರಷ್ಯಾ ಬೆಂಬಲಿಸುತ್ತದೆ. ಹಾಗಂತ ರಷ್ಯಾದವರು ಬಾಂಗ್ಲಾ ಬಗೆಗಿನ ತಮ್ಮ ಹೇಳಿಕೆಗಳಲ್ಲಿ ಅಮೆರಿಕದ ಹೆಸರನ್ನು ನೇರವಾಗಿ ಹೇಳಿಲ್ಲ. ಬದಲಿಗೆ, ಪರೋಕ್ಷವಾಗಿ ಅಮೆರಿಕದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಚುನಾವಣೆಗಳು ಯಾವುದೇ ದೇಶದ ಆಂತರಿಕ ವಿಚಾರ. ಆದರೆ ಜಗತ್ತಿನ ಬೇರೆ ಬೇರೆ ದೇಶಗಳು ಇನ್ನಾವುದೇ ದೇಶದ ಚುನಾವಣೆಯ ಫಲಿತಾಂಶಗಳನ್ನು ಹತ್ತಿರದಿಂದ ಗಮನಿಸುತ್ತಿರುತ್ತವೆ. ಏಕೆಂದರೆ ಚುನಾವಣೆಯ ಫಲಿತಾಂಶಗಳು ಆ ದೇಶದ ಜತೆಗಿನ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರುತ್ತವೆ. ಆದರೆ ಯಾವುದೋ ಒಂದು ದೇಶದ ಚುನಾವಣೆಯು ಜಗತ್ತಿನ ಇನ್ನಾವುದೋ ಎರಡು ಸೂಪರ್ ಪವರ್ ರಾಷ್ಟ್ರಗಳ ನಡುವೆ ಘರ್ಷಣೆಗೆ ಕಾರಣ ವಾಗುತ್ತದೆ ಅಂದರೆ ಅಲ್ಲೇನೋ ವಿಶೇಷ ವಾದದ್ದು ಅಥವಾ ಅಸಾಮಾನ್ಯವಾದದ್ದು ನಡೆಯುತ್ತಿದೆ ಎಂದರ್ಥ.
ವಿಷಯ ಏನೆಂದರೆ ಇದೇ ಬರುವ ಜನವರಿ ೭ರಂದು ಬಾಂಗ್ಲಾದೇಶದಲ್ಲಿ ರಾಷ್ಟ್ರೀಯ ಚುನಾವಣೆ ನಡೆಯುತ್ತಿದೆ. ಇತ್ತೀಚಿನ ದಶಕಗಳಲ್ಲಿ ಬಾಂಗ್ಲಾದೇಶ ದಲ್ಲಿ ಚುನಾವಣೆ ಅಂದರೆ ಅದು ಬೇಗಮ್‌ಗಳ ನಡುವಿನ ರಾಜಕೀಯ ಸಮರ. ಬಾಂಗ್ಲಾದೇಶದಲ್ಲಿ ಇಬ್ಬರು ಬೇಗಮ್‌ಗಳಿದ್ದಾರೆ. ಒಬ್ಬರು ಹಾಲಿ ಪ್ರಧಾನಿ ಶೇಖ್ ಹಸೀನಾ, ಇನ್ನೊಬ್ಬರು ಪ್ರಮುಖ ಪ್ರತಿಪಕ್ಷವಾದ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮುಖ್ಯಸ್ಥೆ ಖಲೀದಾ ಜಿಯಾ. ಅವರಿಬ್ಬರೂ
ಪರಮ ಶತ್ರುಗಳು. ಯಾವಾಗಲೂ ಕಿತ್ತಾಡುತ್ತಿರುತ್ತಾರೆ. ಸಹಜವಾಗಿಯೇ ಈಗ ಬಂದಿರುವ ಚುನಾವಣೆಯಲ್ಲೂ ಅವರಿಬ್ಬರ ನಡುವಿನ ಸಮರ ಜೋರಾ ಗಿದೆ. ಅದರ ನಡುವೆ ಅಮೆರಿಕ ಬಹಿರಂಗವಾಗಿ ಶೇಖ್ ಹಸೀನಾ ವಿರುದ್ಧ ಮಾತನಾಡಿದೆ.
ಅದಕ್ಕೆ ಎಂದಿನಂತೆ ರಷ್ಯಾ ವಿರೋಧ ವ್ಯಕ್ತಪಡಿಸಿದೆ. ನಿಜವಾದ ಪ್ರಶ್ನೆ ಏನೆಂದರೆ, ಇದೆಲ್ಲ ಏಕೆ ನಡೆಯುತ್ತಿದೆ? ಬಾಂಗ್ಲಾದೇಶದ ರಾಜಕಾರಣದಲ್ಲಿ ಶೇಖ್ ಹಸೀನಾ ೨೦೦೯ರಿಂದ ನಿರಂತರವಾಗಿ ಅಧಿಕಾರದಲ್ಲಿದ್ದಾರೆ. ಅವರು ಎರಡು ಬಾರಿ ಸತತವಾಗಿ ಚುನಾವಣೆಗಳನ್ನು ಗೆದ್ದಿದ್ದಾರೆ. ಆದರೆ ಚುನಾವಣೆಯಲ್ಲಿ ಅಕ್ರಮಗಳನ್ನು ನಡೆಸಿ ಅವರು ಗೆದ್ದಿದ್ದಾರೆ ಎಂದು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ ಆರೋಪಿಸುತ್ತದೆ. ಈ ಬಾರಿ ಕೂಡ ಶೇಖ್ ಹಸೀನಾ ಅಧಿಕಾರ ದಲ್ಲಿದ್ದಾಗಲೇ ಚುನಾವಣೆ ನಡೆದರೆ ಖಂಡಿತ ಅವರೇ ಮತ್ತೆ ಗೆಲ್ಲುತ್ತಾರೆ. ಏಕೆಂದರೆ ಗೆಲ್ಲುವಂತೆ ಅವರು ನೋಡಿಕೊಳ್ಳುತ್ತಾರೆ ಎಂಬುದು ಬಹಿರಂಗ ರಹಸ್ಯ. ಆದರೆ, ಶೇಖ್ ಹಸೀನಾ ಕಟ್ಟುನಿಟ್ಟಿನ ಆಡಳಿತಕ್ಕೆ ಹೆಸರಾದ ಮಹಿಳೆ. ಅವರು ಬಾಂಗ್ಲಾದೇಶದಲ್ಲಿ ತೀವ್ರವಾದಿಗಳ ಹೆಡೆಮುರಿ ಕಟ್ಟಿದ್ದಾರೆ.
ಭಯೋತ್ಪಾದನೆಯನ್ನು ಬಹುತೇಕ ನಿರ್ಮೂಲನೆ ಮಾಡಿದ್ದಾರೆ. ಭಯೋತ್ಪಾದಕರ ನಾಯಕರನ್ನು ಗಲ್ಲಿಗೇರಿಸುವುದಕ್ಕೆ ಅವರು ಹಿಂದೆ ಮುಂದೆ ನೋಡುವುದಿಲ್ಲ. ಅಷ್ಟಾಗಿಯೂ, ಸದಾಕಾಲ ಭಯೋತ್ಪಾದನೆಯ ವಿರುದ್ಧ ಮಾತನಾಡುವ ಅಮೆರಿಕಕ್ಕೆ ಶೇಖ್ ಹಸೀನಾರನ್ನು ಕಂಡರೆ ಆಗುವುದಿಲ್ಲ.
ಯಾವುದೇ ದೇಶದಲ್ಲಿ ಚುನಾವಣೆಗಳು ಪ್ರಜಾಸತ್ತಾತ್ಮಕವಾಗಿ ಹಾಗೂ ಪಾರದರ್ಶಕವಾಗಿ ನಡೆಯಬೇಕು ಎಂಬುದು ಅಮೆರಿಕದ ನಿಲುವು. ಆದರೆ ಈ ವಿಷಯದಲ್ಲಿ ಶೇಖ್ ಹಸೀನಾರ ಇತಿಹಾಸ ಕಳಂಕಿತವಾಗಿದೆ. ಇಲ್ಲೇ ಬಂದಿರುವುದು ಸಮಸ್ಯೆ.
ಶೇಖ್ ಹಸೀನಾ ನಡೆಗೆ ಅಮೆರಿಕದ ವಿರೋಧ ಇತ್ತೀಚೆಗೆ ಬೆಳಕಿಗೆ ಬಂದಿದ್ದು ಅಮೆರಿಕದ ರಾಯಭಾರಿ ಪೀಟರ್ ಹ್ಯಾಸ್ ಅವರು ಬಿಎನ್‌ಪಿ ನಾಯಕರನ್ನು ಭೇಟಿಯಾಗಿ ಜಮಾತ್ -ಎ-ಇಸ್ಲಾಮಿ ಜತೆಗಿನ ಭಿನ್ನಮತಗಳನ್ನು ಬಗೆಹರಿಸಿಕೊಳ್ಳು ವಂತೆ ಮನವಿ ಮಾಡಿದಾಗ. ಖಲೀದಾ ಜಿಯಾ ಗೃಹ ಬಂಧನದಲ್ಲಿ ಇರುವುದರಿಂದ ಆಕೆಯನ್ನು ಭೇಟಿ ಮಾಡಲು ಅಮೆರಿಕಕ್ಕೆ ಸಾಧ್ಯವಾಗಿಲ್ಲ. ಅವರ ಮಗ ತಾರೀಖ್ ಲಂಡನ್ನಿನಲ್ಲಿದ್ದಾರೆ. ಶೇಖ್ ಹಸೀನಾ ಮೇಲಿನ ದಾಳಿ ಪ್ರಕರಣದಲ್ಲಿ ಅವರಿಗೆ ಬಾಂಗ್ಲಾದೇಶದಲ್ಲಿ ಶಿಕ್ಷೆ ವಿಽಸಲಾಗಿದೆ. ಹೀಗಾಗಿ ಅವರು ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಆದ್ದರಿಂದ ಬಿಎನ್‌ಪಿಯ ಇತರ ಹಿರಿಯ ನಾಯಕರನ್ನು ಅಮೆರಿಕದ ರಾಯಭಾರಿ ಭೇಟಿಯಾಗಿದ್ದರು.
ಈಗ ಸಹಜವಾಗಿಯೇ ನಮ್ಮ ಮನಸ್ಸಿನಲ್ಲೇಳುವ ಪ್ರಶ್ನೆಯೆಂದರೆ, ಭಯೋತ್ಪಾದನೆಯ ಆರೋಪಗಳನ್ನು ಎದುರಿಸುತ್ತಿರುವ ಜಮಾತ್-ಎ-ಇಸ್ಲಾಮಿ ಸಂಘಟನೆಯ ಬಗ್ಗೆ ಅಮೆರಿಕಕ್ಕೆ ಏಕೆ ಇದ್ದಕ್ಕಿದ್ದಂತೆ ಕನಿಕರ ಹುಟ್ಟಿಕೊಂಡಿದೆ? ಇದೇ ಪ್ರಶ್ನೆಯನ್ನು ಕೇಳಿ ಅಮೆರಿಕವನ್ನು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕಿಸಲಾಗುತ್ತಿದೆ. ಆದರೆ ಎಷ್ಟೆಂದರೂ ಅದು ದೊಡ್ಡಣ್ಣನಲ್ಲವೇ? ತನ್ನದೇ ಹಾದಿಯಲ್ಲಿ ನಡೆಯುತ್ತಿದೆ. ಬಾಂಗ್ಲಾದೇಶದ ಚುನಾವಣೆಯಲ್ಲಿ ಅಮೆರಿಕದ ಮೂಗು ತೂರಿಸುವಿಕೆ ಐದಾರು ತಿಂಗಳ ಹಿಂದೆಯೇ ಆರಂಭವಾಗಿತ್ತು. ಆಗಲೇ ಅದು ಈ ಬಾರಿ ಬಾಂಗ್ಲಾದೇಶದಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಯುವುದಕ್ಕೆ ಯಾರು ಅಡ್ಡಿಪಡಿಸುತ್ತಾರೋ ಅವರಿಗೆ ಹಾಗೂ ಅವರ ಕುಟುಂಬದವರಿಗೆ ಅಮೆರಿಕದ ವೀಸಾ ನೀಡುವುದಿಲ್ಲ ಎಂದು ಪ್ರಕಟಿಸಿತ್ತು.
ತನ್ಮೂಲಕ ತನಗೆ ಬಾಂಗ್ಲಾದೇಶದ ಚುನಾವಣೆಯ ಮೇಲೆ ವಿಶೇಷವಾದ ಆಸಕ್ತಿಯಿದೆ ಎಂಬುದನ್ನು ತೋರಿಸಿಕೊಟ್ಟಿತ್ತು. ನನ್ನ ಪ್ರಕಾರ ಅಮೆರಿಕದ ಈ
ನಡೆಗೆ ಎರಡು ಕಾರಣಗಳಿವೆ. ಒಂದು ಕಾರಣ ಚೀನಾ. ಬಾಂಗ್ಲಾದೇಶದ ಜತೆಗೆ ಚೀನಾ ದೇಶಕ್ಕೆ ಅದ್ಭುತವಾದ ಸಂಬಂಧವಿದೆ. ಬಾಂಗ್ಲಾದೇಶಕ್ಕೆ ಚೀನಾ ಅತಿದೊಡ್ಡ ವ್ಯಾಪಾರಿ ಪಾಲುದಾರ ದೇಶ. ಅವುಗಳ ನಡುವೆ ಸಾವಿರಾರು ಕೋಟಿ ರುಪಾಯಿ ವ್ಯವಹಾರ ನಡೆಯುತ್ತದೆ. ಎರಡನೇ ಕಾರಣ ಶೇಖ್ ಹಸೀನಾ ಅಮೆರಿಕದ ಮಾತು ಕೇಳದೆ ಇರುವುದು. ನಿಮ್ಮ ದೇಶದಲ್ಲಿ ನಮಗೆ ಬೇಕಾದ ಭಯೋತ್ಪಾದಕನಿದ್ದಾನೆ ಎಂದು ಭಾರತ ಹೇಳಿದರೆ ಸಾಕು ಶೇಖ್ ಹಸೀನಾ ತಕ್ಷಣ ಅವನನ್ನು ಭಾರತದ ಕೈಗೆ ಒಪ್ಪಿಸಿಬಿಡುತ್ತಾರೆ.
ಆದರೆ ಅಮೆರಿಕ ಏನಾದರೂ ಹೇಳಿದರೆ ಅದನ್ನು ಕಿವಿಗೂ ಹಾಕಿಕೊಳ್ಳುವುದಿಲ್ಲ. ಅಮೆರಿಕ ತನ್ನನ್ನು ಕೈಗೊಂಬೆ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ಶೇಖ್ ಹಸೀನಾ ಭಾವಿಸಿದ್ದಾರೆ. ಹೀಗಾಗಿಯೇ ಶೇಖ್ ಹಸೀನಾರನ್ನು ಅಮೆರಿಕ ವಿರೋಧಿಸುತ್ತದೆ. ಮತ್ತು ಅದೇ ಕಾರಣಕ್ಕೆ ಶೇಖ್ ಹಸೀನಾರನ್ನು ರಷ್ಯಾ
ಬೆಂಬಲಿಸುತ್ತದೆ. ಹಾಗಂತ ರಷ್ಯಾದವರು ಬಾಂಗ್ಲಾದೇಶದ ಬಗ್ಗೆ ನೀಡಿದ ತಮ್ಮ ಅಧಿಕೃತ ಹೇಳಿಕೆಗಳಲ್ಲಿ ಅಮೆರಿಕದ ಹೆಸರನ್ನು ನೇರವಾಗಿ ಹೇಳಿಲ್ಲ. ಬದಲಿಗೆ, ಇನ್ನೊಂದು ದೇಶದ ಆಂತರಿಕ ವಿಚಾರದಲ್ಲಿ ಯಾರೂ ಮೂಗು ತೂರಿಸಬಾರದು ಎಂಬ ತತ್ವವನ್ನು ಇಲ್ಲಿ ಗಾಳಿಗೆ ತೂರಲಾಗಿದೆ ಎಂದು ಪರೋಕ್ಷವಾಗಿ ಅಮೆರಿಕದ ಬಗ್ಗೆ ರಷ್ಯಾ ಅಸಮಾಧಾನ ವ್ಯಕ್ತಪಡಿಸಿದೆ.
ಆದರೆ ಜಗತ್ತಿನಲ್ಲಿ ಈಗ ನಡೆಯುತ್ತಿರುವುದೇ ಬಲಿಷ್ಠ ರಾಷ್ಟ್ರಗಳ ಮೇಲಾಟ. ನಮ್ಮದು ಅಭಿವೃದ್ಧಿ ಹೊಂದಿದ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವ ದೇಶಗಳು ಇನ್ನಿತರ ಸ್ವತಂತ್ರ ಸಾರ್ವಭೌಮ ದೇಶಗಳ ಆಂತರಿಕ ವಿಚಾರದಲ್ಲಿ ರಾಜಾರೋಷವಾಗಿ ಮೂಗು ತೂರಿಸುವುದಷ್ಟೇ ಅಲ್ಲ, ಅವುಗಳ ಮೇಲೆ ಅಕ್ರಮವಾಗಿ ನಿರ್ಬಂಧಗಳನ್ನು ಹೇರುವುದು ಹಾಗೂ ಬ್ಲಾಕ್‌ಮೇಲ್ ಮಾಡಲು ಪ್ರಯತ್ನಿಸುವಂಥ ಕೆಲಸಗಳನ್ನು ಕೂಡ ಮಾಡುತ್ತಿವೆ. ಬಾಂಗ್ಲಾದೇಶದ ವಿಷಯದಲ್ಲಿ ರಷ್ಯಾ ತನ್ನ ಹೇಳಿಕೆ ಬಿಡುಗಡೆ ಮಾಡಿದ ಕೂಡಲೇ ಅಮೆರಿಕಕ್ಕೆ ಸಿಟ್ಟು ಬಂದಿದೆ. ತಕ್ಷಣ ಟ್ವೀಟ್ ಮಾಡಿದ ಢಾಕಾದಲ್ಲಿರುವ ಅಮೆರಿಕದ ದೂತಾವಾಸ ಕಚೇರಿಯು, ‘ಬೇರೆ ದೇಶದ ಆಂತರಿಕ ವಿಚಾರದಲ್ಲಿ ಮೂಗು ತೂರಿಸದೇ ಇರುವ ತತ್ವವು ಉಕ್ರೇನ್ ಗೂ ಅನ್ವಯಿಸುತ್ತದೆಯೇ?’ ಎಂದು ಕುಟುಕಿದೆ.
ಅದಕ್ಕೆ ಪ್ರತಿಯಾಗಿ ರಷ್ಯಾದ ದೂತಾವಾಸವು ಅಮೆರಿಕ ಮತ್ತು ಅದರ ಬೆಂಬಲಿಗ ರಾಷ್ಟ್ರಗಳನ್ನು ಅಣಕಿಸುವ ಕಾರ್ಟೂನ್ ಟ್ವೀಟ್ ಮಾಡಿ ತರಾಟೆ ತೆಗೆದುಕೊಂಡಿದೆ. ಇಲ್ಲೊಂದು ವಿಷಯವನ್ನು ನೆನಪಿಸಿಕೊಳ್ಳುವುದು ಒಳ್ಳೆಯದು. ೨೦೧೪ರ ಚುನಾವಣೆಯಲ್ಲೂ ಶೇಖ್ ಹಸೀನಾ ಬಗ್ಗೆ ಅಮೆರಿಕ ಬಹಳ ಕಠೋರ ವಾಗಿ ವರ್ತಿಸಿತ್ತು. ಆದರೆ ಭಾರತ, ರಷ್ಯಾ ಮತ್ತು ಚೀನಾ ದೇಶಗಳು ಆಕೆಯನ್ನು ಬೆಂಬಲಿಸಿದ್ದವು. ಇಷ್ಟಾಗಿಯೂ ಶೇಖ್ ಹಸೀನಾ ಅಧಿಕಾರಕ್ಕೆ ಬಂದ ನಂತರ ಅಮೆರಿಕದ ಜತೆಗೆ ಸಂಬಂಧ ಸುಧಾರಿಸಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದರು. ಆ ಪ್ರಯತ್ನಗಳು ತಕ್ಕಮಟ್ಟಿಗೆ ಫಲ ಕೂಡ ನೀಡಿದ್ದವು. ಆದರೆ ಅದರ ಮರುವರ್ಷವೇ ವಿಶ್ವಸಂಸ್ಥೆಯಲ್ಲಿ ಉಕ್ರೇನ್ ವಿಷಯದಲ್ಲಿ ಮತದಾನ ಮಾಡುವ ಸಂದರ್ಭ ಬಂದಾಗ ಬಾಂಗ್ಲಾದೇಶವು ತನ್ನ
ಮತವನ್ನೇ ಚಲಾಯಿಸಲಿಲ್ಲ.
ಅದು ಅಮೆರಿಕವನ್ನು ಸಿಟ್ಟಿಗೇಳಿಸಿತು. ನಂತರ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಬಾಂಗ್ಲಾದೇಶವು ರಷ್ಯಾದ ವಿರುದ್ಧ ಮತ ಚಲಾಯಿಸಿದ್ದರೂ
ಅಮೆರಿಕಕ್ಕೆ ಸಮಾಧಾನವಾಗಿಲ್ಲ. ಏಕೆಂದರೆ ಬಾಂಗ್ಲಾದೇಶವು ಸ್ವತಂತ್ರವಾಗಿ ವರ್ತಿಸುವುದಕ್ಕಿಂತ ಹೆಚ್ಚಾಗಿ ತನ್ನ ಇಚ್ಛೆಗೆ ತಕ್ಕಂತೆ ವರ್ತಿಸಬೇಕು ಎಂದು ಅಮೆರಿಕ ಬಯಸುತ್ತದೆ. ಒಂದು ರೀತಿಯಲ್ಲಿ ಅಮೆರಿಕವು ಬಾಂಗ್ಲಾದೇಶಕ್ಕೆ ಧಮಕಿಯನ್ನೇ ಹಾಕುತ್ತಿದೆ. ಈ ವರ್ಷದ ಜೂನ್‌ನಲ್ಲಿ ಅಮೆರಿಕದ ರಾಯ ಭಾರಿಯು ಬಾಂಗ್ಲಾದೇಶದ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ಮುಖ್ಯ ಚುನಾವಣಾ ಆಯುಕ್ತ ಕಾಜಿ ಹಬೀಬುಲ್ ಅವಾಲ್ ಅವರ ಬಳಿ ಮುಂಬರುವ ರಾಷ್ಟ್ರೀಯ ಚುನಾವಣೆ ಪಾರದರ್ಶಕವಾಗಿರಬೇಕು ಎಂದು ಆಗ್ರಹಿಸಿದ್ದರು. ಯುರೋಪಿಯನ್ ಒಕ್ಕೂಟ ಹಾಗೂ ಜಪಾನ್ ಕೂಡ ಅನೇಕ ಸಲ ಇಂಥ ಹೇಳಿಕೆಗಳನ್ನು ನೀಡಿವೆ.
ನನ್ನ ಪ್ರಕಾರ ಬಾಂಗ್ಲಾದೇಶದ ವಿಷಯದಲ್ಲಿ ಅಮೆರಿಕ ಯಾವ ರೀತಿಯಲ್ಲೂ ತಾನೇ ದೊಡ್ಡ ಲಾರ್ಡ್ ಎಂಬಂತೆ ವರ್ತಿಸಬಾರದು, ಹಾಗೆಯೇ ರಷ್ಯಾ ಕೂಡ ಅಮೆರಿಕದ ವಿರುದ್ಧ ಖಡ್ಗ ಝಳಪಿಸಲು ಹೋಗಬಾರದು. ಏಕೆಂದರೆ ಅಫ್ಘಾನಿಸ್ತಾನದಲ್ಲಿ ಅಮೆರಿಕ ಮತ್ತು ರಷ್ಯಾ ದೇಶಗಳು ಹೇಗೆ ನಡೆದು ಕೊಂಡಿವೆ ಎಂಬುದನ್ನು ಇಡೀ ಜಗತ್ತು ನೋಡಿದೆ. ಅವುಗಳ ಆಷಾಢ ಭೂತಿತನ ಅಫ್ಘಾನಿಸ್ತಾನದಲ್ಲಿ ಬಹಿರಂಗವಾಗಿ ಅನಾವರಣಗೊಂಡಿದೆ. ಎರಡೂ ಸೇರಿ ಆ ಬಡ ದೇಶವನ್ನು ನಡುನೀರಿನಲ್ಲಿ ಕೈಬಿಟ್ಟಿವೆ. ಪರಿಣಾಮ ಅಫ್ಘಾನಿಸ್ತಾನದ ಜನಸಾಮಾನ್ಯರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಈಗ ಬಾಂಗ್ಲಾದೇಶವನ್ನು ಕೂಡ ಅಂಥದ್ದೇ ಸಂಕಷ್ಟಕ್ಕೆ ತಳ್ಳಲು ಅವು ಮುಂದಾಗಿವೆಯೇ? ಆ ಎರಡು ಬಲಾಢ್ಯ ದೇಶಗಳ ಆಟ ಸಾಲದು ಎಂಬಂತೆ ಚೀನಾ ಕೂಡ ಬಾಂಗ್ಲಾದೇಶದ ವ್ಯವಹಾರಗಳಲ್ಲಿ ಕಡ್ಡಿ ಆಡಿಸಲು ಯತ್ನಿಸುತ್ತಿದೆ. ಆದರೆ ಈ ವಿಷಯದಲ್ಲಿ ಭಾರತ ಬಹಳ ಚಾಣಾಕ್ಷತೆಯಿಂದ ನಡೆದು ಕೊಳ್ಳುತ್ತಿರುವುದರಿಂದ ಬಾಂಗ್ಲಾದ ಆಂತರಿಕ ವ್ಯವಹಾರದಲ್ಲಿ ಚೀನಾಕ್ಕೆ ಇನ್ನೂ ಪ್ರವೇಶ ದೊರಕಿಲ್ಲ. ಅದೇನಾದರೂ ಇರಲಿ, ಮುಂದಿನ ಜನವರಿಯಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆ ಆ ದೇಶದ ಆಂತರಿಕ ವಿಚಾರ ಎಂಬುದರಲ್ಲಿ ಯಾವ ಅನುಮಾನವೂ ಬೇಡ. ಎಲ್ಲರೂ ಅದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಬಾಂಗ್ಲಾದೇಶದ ಸರಕಾರವನ್ನು ನಂಬುತ್ತೀರೋ ಇಲ್ಲವೋ ಎಂಬುದು ನಿಮಗೆ ಬಿಟ್ಟ ವಿಚಾರ.
ಆದರೆ ಪ್ರಜಾಪ್ರಭುತ್ವದಲ್ಲಿ ಮತದಾರರನ್ನಂತೂ ನಂಬಲೇಬೇಕು. ತಮಗೆ ಯಾವುದಾದರೂ ರಾಜಕೀಯ ಪಕ್ಷ ವಂಚನೆ ಮಾಡುತ್ತಿದೆ ಎಂದು ಬಾಂಗ್ಲಾ ದೇಶದ ಮತದಾರರಿಗೆ ಅನ್ನಿಸಿದರೆ ಅದಕ್ಕೆ ತಕ್ಕ ಪಾಠ ಕಲಿಸಲು ಅವರೇ ಸಮರ್ಥರಿದ್ದಾರೆ. ಹೀಗಾಗಿ ನಿರ್ಧಾರವನ್ನು ಬಾಂಗ್ಲಾದೇಶದ ಮತದಾರರಿಗೆ ಬಿಡೋಣ. ಇಷ್ಟಕ್ಕೂ ಶೇಖ್ ಹಸೀನಾರನ್ನು ಟೀಕಿಸುವವರೆಲ್ಲ ಒಂದು ಸಂಗತಿಯನ್ನು ಮಾತ್ರ ಯಾವುದೇ ಕಾರಣಕ್ಕೂ ಮರೆಯಬಾರದು. ಬೆನ್ನಿಗೆ ಜೋತುಬಿದ್ದ ಬೇತಾಳದಂತೆ ಬಾಂಗ್ಲಾದೇಶವನ್ನು ಕಾಡುತ್ತಿದ್ದ ಭಯೋತ್ಪಾದನೆಯನ್ನು ಧೈರ್ಯವಾಗಿ ಹತ್ತಿಕ್ಕಿ ಆ ಬಡ ರಾಷ್ಟ್ರವನ್ನು ಶೇಖ್ ಹಸೀನಾ ಆರ್ಥಿಕವಾಗಿ ಸಮೃದ್ಧಗೊಳಿಸಿದ್ದಾರೆ. ಜಾಗತಿಕ ಭೂಪಟದಲ್ಲಿಂದು ಬಾಂಗ್ಲಾದೇಶ ಹೊಸ ಶಕ್ತಿಯಾಗಿ ರೂಪುಗೊಳ್ಳುತ್ತಿದೆ ಎಂಬುದನ್ನು ಕಡೆಗಣಿಸ ಲಾದೀತೇ?
(ಲೇಖಕರು ಹಿರಿಯ ಪತ್ರಕರ್ತರು ಹಾಗೂ ರಾಜ್ಯಸಭೆಯ ಮಾಜಿ ಸದಸ್ಯರು)