Saturday, 23rd November 2024

ಶೆಟ್ಟರ್‌ ಮರಳು ನೀತಿ

ತುಂಟರಗಾಳಿ

ಸಿನಿಗನ್ನಡ

ಶರಣ್ ಚಿಕ್ಕಣ್ಣ ಅಭಿನಯದ ಅಧ್ಯಕ್ಷ ಸಿನಿಮಾ ಹಿಟ್ ಆಗಿತ್ತು. ಆ ಅಧ್ಯಕ್ಷ ಅಮೆರಿಕಾ ಪ್ರವಾಸ ಮಾಡಿ ಮುಗಿಸಿದ ಒಂದಷ್ಟು ವರ್ಷಗಳ ನಂತರ
ವನವಾಸ ಮುಗಿಸಿ ಈ ಉಪಾಧ್ಯಕ್ಷ ಮತ್ತೆ ಬಂದಿದ್ದಾನೆ. ಆಫ್ ಕೋರ್ಸ್ ಉಪಾಧ್ಯಕ್ಷ ಅಧ್ಯಕ್ಷನ ನೆರಳ ಇರುವವನು. ಅವ್ನು ಪ್ರೆಸಿಡೆಂಟ್ ಆದ್ರೆ
ಇವ್ನು ವೈಸ್ ಪ್ರೆಸಿಡೆಂಟ. ಆದ್ರೆ ವೈಸ್ ಪ್ರೆಸಿಡೆಂಟ್ ಅಂದ್ ತಕ್ಷಣ ಅದ್ಯಕ್ಷನಿಗಿಂತ ವೈಸ್ ಆಗಿರೋನು, ಬುದ್ಧಿವಂತ ಅಂತ ತಪ್ಪು ತಿಳ್ಕೊಳ್ಳೋ ಹಾಗಿಲ್ಲ. ಇವ್ನು ಬರೀ ಉಪ ಅಧ್ಯಕ್ಷ ಅಷ್ಟೇ.

ಇವನನ್ನ ಇಂಗ್ಲಿಷಲ್ಲಿ ಯುಪಿ ಅದ್ಯಕ್ಷ ಅಂತ ಓದ್ಕೋಬೇಡಿ ಯಾಕಂದ್ರೆ ಇವನು ಪಕ್ಕಾ ಕರ್ನಾಟಕದ ಗೆಜ್ಜೆಪುರದ ಚಿ. ತು ಸಂಘದ ಉಪಾದ್ಯಕ್ಷ. ಅಲ್ಲದೆ ಯು.ಪಿ ನ ಇಂಗ್ಲಿಷಲ್ಲಿ ಅಪ್ ಅಂತಾ ಓದ್ಕೊಂಡು, ಅಧ್ಯಕ್ಷನಿಗಿಂತ ಒಂದ್ ಲೆವೆಲ್ ಮೇಲಿರ್ತಾನೆ ಅಂತ ನಿರೀಕ್ಷೆ ಮಾಡಿದ್ರೆ ತಪ್ಪಾಗುತ್ತೆ. ಯಾಕಂದ್ರೆ ಈ ಸಿನಿಮಾ ತೀರಾ ಅಧ್ಯಕ್ಷನ ಲೆವೆಲ್ಲಿಗೆ ಇಲ್ಲ. ಆದ್ರೆ ಒಂದ್ ಲೆವೆಲ್‌ಗೆ ಡೌನ್ ಇದೆ ಅಂದ ಮಾತ್ರಕ್ಕೆ ತೀರಾ ಡೌನ್, ಡೌನ್ ಉಪಾಧ್ಯಕ್ಷ ಅಂತ ಕೂಗೋವಷ್ಟು ಕೆಟ್ಟದಾಗೂ ಇಲ್ಲ. ಹಿಂಗಂದ್ಕೊಂಡೇ ನನ್ನ ಹೀರೋ ಮಾಡ್ಬಿಟ್ರು ಅನ್ನೋ ಚಿಕ್ಕಣ್ಣ ಎಲ್ಲೂ ತಾನು ದೊಡ್ ಹೀರೋ ಅಂತ ತೋರಿಸಿಕೊಳ್ಳೋಕೆ
ಹೋಗದೇ ಇರೋದು ಈ ಸಿನಿಮಾದ ಹೆಗ್ಗಳಿಕೆ.

ಅಧ್ಯಕ್ಷ ಶರಣ್ ಇಲ್ಲಿಗೆ ಅಪಿಯರೆ ಮಾಡಿದ್ರೂ ಅದು ಅಷ್ಟು ಎ-ಕ್ಟಿವ್ ಆಗಿಲ್ಲ, ಈ ಸಿನಿಮಾದಲ್ಲಿ ಉಪಾಧ್ಯಕ್ಷನದ್ದೇ ರಾಜ್ಯಭಾರ ಆದ್ದರಿಂದ ಶರಣ್ ರೂಲ್ಸ ಅಂತ ಹೇಳೋಕಾಗೋದಿಲ್ಲ. ಚಿಕ್ಕಣ್ಣ ಅವರ ಜೊತೆ ಶರಣ್ ಅಷ್ಟೇ ಅಲ್ಲ, ಅಣ್ಣಾವ್ರು, ವಿಷ್ಣುವರ್ಧನ್, ಕಾಲದ ಹೀರೋಗಳು ಸೇರಿದಂತೆ ಈ ಜೆನರೇಶನ್‌ನ ಯಶ್‌ವರೆಗೂ ಅನೇಕ ಸ್ಟಾರ್‌ಗಳು ಇರೋದ್ರಿಂದ ಇದನ್ನೂ ಒಂಥರಾ ಮಲ್ಟಿಸ್ಟಾರರ್ ಸಿನಿಮಾ ಅನ್ನಬಹುದು. ಅದರ ಅರ್ಥ ಚಿಕ್ಕಣ್ಣ ಅವರು ಎಲ್ಲೂ ತಾನು ಒಬ್ಬ ಸ್ಟಾರ್ ಅಂತ ಹೇಳಿಕೊಳ್ಳೋ ಪ್ರಯತ್ನ ಮಾಡಿಲ್ಲ ಅನ್ನೋದು. ಒಟ್ಟಾರೆ ಹೇಳೋದಾದ್ರೆ, ರಾಷ್ಟ್ರಪತಿಗಳ ಅವಧಿಯ ನಂತರ
ಉಪರಾಷ್ಟ್ರಪತಿ ಆಗಿದ್ದಾರೇ ರಾಷ್ಟ್ರಪತಿ ಆಗೋ ಹಳೆಯ ಸಂಪ್ರದಾಯದಂತೆ ನಿರ್ಮಾಪಕ ಉಮಾಪತಿ ಅವರು ಉಪಾಧ್ಯಕ್ಷನನ್ನು ಅಧ್ಯಕ್ಷನ ಲೆವೆಲ್ಲಿಗೆ ತರೋಕೆ ಯತ್ನಿಸಿದ್ದಾರೆ.

ಆದರೆ, ಅಧ್ಯಕ್ಷನನ್ನು ಮರೆತು ಈ ಸಿನಿಮಾ ನೋಡೋದಾದ್ರೆ ಮಾತ್ರ, ಅವರು ಅದರಲ್ಲಿ ಯಶಸ್ವಿ ಆಗಿದ್ದಾರೆ ಅನ್ನಬಹುದು.

ಲೂಸ್ ಟಾಕ್: ಜಗದೀಶ್ ಶೆಟ್ಟರ್‌
ಏನ್ ಸಾರ್ ಇದು. ಹಿಂಗ್ ಫಕ್ಷ ಚೇಂಜ್ ಮಾಡ್ತೀರಾ ನೀವು?
-ಏನ್ ತಪ್ಪು, ಬಿಜೆಪಿ ಪ್ರಕಾರ ಮತಾಂತರ ಆದ್ರೆ ತಪ್ಪು, ನಿಮ್ ಪ್ರಕಾರ ಪಕ್ಷಾಂತರ ಆದ್ರೆ ತಪ್ಪು..ಸಾಕಾಗೋಗಿದೆ ನಂಗೆ

ಅಯ್ಯೋ, ಜನ ಹೇಳೋ ಡೈಲಾಗ್ ನೀವ್ ಹೇಳ್ತಾ ಇದ್ದೀರಲ್ಲ , ಸರಿ, ನಿಮ್ಮ ಪಕ್ಷಾಂತರ ಕಾರ್ಯಕ್ರಮದ ವಿವರ ಹೇಳ್ತೀರಾ?
-ಏನಿಲ್ಲ, ಮೊದಲು ಬಿಜೆಪಿಯವರಿಗೆ ಹೋಗ್ಲಾ ಅಂದೆ, ಸರಿ ಅಂದ್ರು, ಕಾಂಗ್ರೆಸ್ ನವರಿಗೆ ಬರ್ಲಾ ಅಂದೆ. ಅವ್ರೂ ಸರಿ ಅಂದ್ರು. ಈಗ ಕಮಲದ ಪಕ್ಷಕ್ಕೆ ಮತ್ತೆ ಬರ್ಲಾ ಅಂದೆ. ಬರ್ಲಾ, ಕಮಾನ್ ಲಾ ಅಂದ್ರು. ಬಂದೆ. ಅಷ್ಟಕ್ಕೂ ಪಕ್ಷಾಂತರ ಮಾಡಬಾರದು ಅಂತ ಯಾವ ಲಾ ನೂ ಇಲ್ಲವಲ್ಲ.

ಆಯ್ತಾಯ್ತು ಬಿಡಿ..ಸರಿ ವಾಪಸ್ ಹೋದಾಗ ಯಡಿಯೂರಪ್ಪ ಏನಂದ್ರು?
-ನಮ್ಮಕಮಲದ ಪಕ್ಷದ ಕಛೇರಿಗೆ ನಿಮ್ಮ ಪಾಲಿಗೆ ಯಾವತ್ತೂ ಶೆಟ್ಟರ್ ಹಾಕಿರಲಿಲ್ಲ, ಬನ್ನಿ, ಬನ್ನಿ ಅಂದ್ರು.

ಆದ್ರೂ ರಾಜಕಾರಣಿ ಆಗಿ ಹಿಂಗೆ ಮಾಡಿದ್ರೆ ಜನ ಏನಂದ್ಕೊತಾರೆ ಅಂತ ನೀವು ಯೋಚನೆ ಮಾಡೋದೇ ಇಲ್ವಾ?
-ನೋಡ್ರೀ ಒಂದೇ ಕಡೆ ಇದ್ರೆ ರಾಜಕಾರಣಿಗಳಿಗೆ ಮರ್ಯಾದೆ ಇರಲ್ಲ. ಅದಕ್ಕೆ ಇಲ್ಲಿಂದ ಅಲ್ಲಿಗೆ ಹೋಗಿ, ಮತ್ತೆ ಅಲ್ಲಿಂದ ಇಲ್ಲಿಗೆ ಮರಳಿದೆ. ಇದೂ ಒಂಥರ
‘ಮರಳು’ ನೀತಿ ಗೊತ್ತಾ. ಅದ್ಬಿಡಿ, ಜನ ನಿಮ್ಮ ಬಗ್ಗೆ ಏನೇನ್ ಮತಾಡ್ತಾ ಇದ್ದಾರೆ ಕೇಳಿಸ್ಕೊಂಡ್ರಾ?

-ನೋಡ್ದೆ, ನೋಡ್ದೆ, ನೀವು, ಬದಲಾವಣೆ ‘ಜಗ’ನ ನಿಯಮ, ‘ಜಗದೀಶ’ನಾಡುವ ಜಗವೇ ನಾಟಕ ರಂಗ ಅಂತೆ ಪೋ ಹಾಕಿದ್ದು
(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಖೇಮು ಒಂದ್ಸಲ ಕಾರಲ್ಲಿ ಹೋಗುವಾಗ ಕಾಡಲ್ಲಿ ಅವನ ಕಾರ್ ಕೆಟ್ಟೋಯ್ತು. ಅಲ್ಲಿ ಒಂದು ಆಶ್ರಮ ಕಾಣಿಸ್ತು. ಅಲ್ಲಿದ್ದ ಸನ್ಯಾಸಿಯೊಬ್ಬನನ್ನು, ನಾನು ಇವತ್ತು ರಾತ್ರಿ ಇ ಇರಬಹುದಾ ಅಂತ ಕೇಳ್ದ. ಸನ್ಯಾಸಿ ಬರೀ ಮಲಗಲು ಜಾಗ ಕೊಟ್ಟಿದ್ದಷ್ಟೇ ಅಲ್ಲ, ಊಟ ತಿಂಡಿ ನೀರು ಕೊಟ್ಟು, ಕಾರನ್ನು ರಿಪೇರಿ ಮಾಡಲು ಸಹಕರಿಸಿದ. ರಾತ್ರಿ ಮಲಗಿದ ಖೇಮುಗೆ ಒಂದು ಹೊತ್ತಿನಲ್ಲಿ ವಿಚಿತ್ರ ಶಬ್ದ ಕೇಳಿಸಿತು.

ಬೆಳಗ್ಗೆ ಎದ್ದು ಸನ್ಯಾಸಿಯನ್ನು ಕೇಳಿದ ‘ಅದೇನದು ರಾತ್ರಿ ಬರ್ತಾ ಇದ್ದ ಸದ್ದು?’, ಅದಕ್ಕೆ ಸನ್ಯಾಸಿಯ ಉತ್ತರ ‘ಕ್ಷಮಿಸಿ, ಅದನ್ನು ನಿಮಗೆ ಹೇಳೋಕಾಗಲ್ಲ, ಯಾಕಂದ್ರೆ ನೀವು ಸನ್ಯಾಸಿ ಅಲ್ಲ’. ಮನಸ್ಸಲ್ಲಿ ಕುತೂಹಲ ಇಟ್ಕೊಂಡೇ ಖೇಮು ಅಲ್ಲಿಂದ ವಾಪಸ್ ಬಂದ. ಸ್ವಲ್ಪ ದಿನಗಳ ನಂತರ ಖೇಮು ಮತ್ತೆ ಅದೇ ದಾರಿಯಲ್ಲಿ ಹೋದ. ಕಾರ್ ಕೆಟ್ಟೋಯ್ತು. ಎಲ್ಲವೂ ರಿಪೀಟ್ ಆಯ್ತು. ‘ಬೆಳಿಗ್ಗೆ ಎದ್ದು ಖೇಮು ಕೇಳಿದ, ಏನದು ಸದ್ದು?’.

ಸನ್ಯಾಸಿ ಉತ್ತರ ’ಕ್ಷಮಿಸಿ, ಅದನ್ನು ನಿಮಗೆ ಹೇಳೋ ಕಾಗಲ್ಲ, ಯಾಕಂದ್ರೆ ನೀವು ಸನ್ಯಾಸಿ ಅಲ್ಲ’, ಖೇಮುಗೆ ಕುತೂಹಲ ತಡೆಯೋಕಾಗಲಿಲ್ಲ. ‘ಅದನ್ನು ತಿಳ್ಕೊಳ್ಳೋಕೆ ಸನ್ಯಾಸಿನೇ ಆಗಬೇಕು ಅಂದ್ರೆ ಹೇಳಿ, ಸನ್ಯಾಸಿ ಆಗೋಕೆ ಏನು ಮಾಡಬೇಕು?’ ಅಂದ. ಅದಕ್ಕೆ ಸನ್ಯಾಸಿ ಹೇಳಿದ್ದು, ‘ಈ ಭೂಮಿಯನ್ನು ಒಂದು ಬಾರಿ ಸುತ್ತಿ ಬಾ, ಆಗ ನಿನಗೆ ಎಷ್ಟು ಮರಗಳು, ಕಲ್ಲುಗಳು ಸಿಕ್ಕವು ಅನ್ನೋದನ್ನು ಎಣಿಸಿ ಹೇಳಬೇಕು.’ ಸರಿ ಖೇಮು ಭೂಮಿ ಸುತ್ತಲು ಹೊರಟ, ಸುಮಾರು ವರ್ಷಗಳ ನಂತರ ಮತ್ತೆ ಆಶ್ರಮಕ್ಕೆ ಬಂದು ಸನ್ಯಾಸಿಯ ಬಳಿ, ’ನನ್ನ ದಾರಿಯಲ್ಲಿ ೩೩೩೩೩೩೩೩೩೩೩೩ ಮರಗಳು, ೯೯೯೯೯೯೯೯೯೯೯೯ ಕಲ್ಲುಗಳು ಸಿಕ್ಕವು’ ಎಂದ. ಸನ್ಯಾಸಿ ಅದನ್ನು ಕೇಳಿ ಈಗ ‘ನೀನು ಸನ್ಯಾಸಿ ಆದಂತೆ, ಬಾ ಆ ಶಬ್ದದ ರಹಸ್ಯ ಹೇಳುತ್ತೇನೆ’ ಎಂದು ಕರೆದುಕೊಂಡು
ಹೋದ.

ಶಬ್ದ ಬರುತ್ತಿದ್ದ ಮರದ ಬಾಗಿಲಿನ ರೂಮಿನ ಕೀ ಕೊಟ್ಟ. ಖೇಮು ಅದನ್ನು ತೆರೆದರೆ ಅದರೊಳಗೆ ಇನ್ನೊಂದು ಕಬ್ಬಿಣದ ಬಾಗಿಲ ರೂಮ, ಆದರೊಳಗೆ, ಬೆಳ್ಳಿ, ಬಂಗಾರ, ವಜ್ರದ ಬಾಗಿಲುಗಳನ್ನು ತೆರೆಯುತ್ತಾ ಹೋದಂತೆ ಕೊನೆಯ ಬಾಗಿಲು ಬಂತು. ಖೇಮು ಆ ಬಾಗಿಲು ತೆರೆದು ನೋಡಿದವನೇ ‘ಅಯ್ಯೋ, ಆ ಶಬ್ದ ಬತ್ತಾ ಇದ್ದುದು ಇದರಿಂದಾನಾ?’ ಎಂದು ಒಂದು ಕ್ಷಣ ಆಶ್ಚರ್ಯಗೊಂಡ. ಅಲ್ಲಿ ಅಂಥದ್ದೇನಿತ್ತು? ಏನೋ ಇತ್ತು ಬಿಡಿ, ಆದ್ರೆ, ‘ಕ್ಷಮಿಸಿ, ಅದನ್ನು ನಿಮಗೆ ಹೇಳೋಗಲ್ಲ, ಯಾಕಂದ್ರೆ ಇದನ್ನ ಓದ್ತಾ ಇರೋ ನೀವು ಸನ್ಯಾಸಿ ಅಲ್ಲ’.

ಲೈನ್ ಮ್ಯಾನ್
ದಕ್ಷಿಣ ಭಾರತದಲ್ಲಿರೋ ಹೌಸ್ ವೈಫ್ ಗಳನ್ನು ಏನಂತ ಕರೀಬಹುದು?
-ಸೌಟ್ ಇಂಡಿಯನ್

ಟೈಮ್ ಪಾಸ್‌ಗೆ ಯಾರಿಗಾದರೂ ಕೊಡಬಹುದಾದ ಗಿಫ್ಟ್ 

-ವಾಚ್

ಎಚ್‌ಆರ್‌ನಲ್ಲಿ ಕೆಲಸ ಮಾಡೋವ್ರು ತಮ್ಮ ಆಫೀಸಿನಲ್ಲಿ ತಮ್ಮ ಮದುವೆ ಕಾರ್ಡ್ ಕೊಡುವಾಗ ಅದರ ಮೇಲೆ ಏನಂತ ಬರೆದಿರ್ತಾರೆ?
-ನಿಮ್ಮ ಹೆಸರು ನಮ್ಮ ಅಟೆಂಡೆ ರಿಜಿಸ್ಟರ್‌ನಲ್ಲಿದೆ. ಸೋ ಮದುವೆಗೆ ದಯವಿಟ್ಟು ಅಟೆಂಡ್ ಮಾಡಿ.

ಬುದ್ಧಿಜೀವಿಗಳಿಗೆ ಇರಬೇಕಾದ ಆರ್ಹತೆ

-ಒಂದು ಟೈ ಹಾಕಿರಬೇಕು. ಇಂದ್ರೆ, ತಲೆಕೂದಲಿಗೆ ಡೈ ಹಾಕಿರಬಾರದು

ಫಾರಿನ್ನಲ್ಲಿರೋ ಅಣ್ಣ ತಂಗಿನಾ ಇಂಡಿಯಾದಲ್ಲಿರೋ ತಂಗಿ ಅಣ್ಣನಿಗೆ ಮದುವೆ ಮಾಡಿ ಕೊಟ್ಟರೆ ಅದು.

-ಫಾರಿನ್ ಎಕ್ಸ್ ಚೇಂಜ್

ಭಾವನ ಜೊತೆ ತೆಗೆಸಿಕೊಳ್ಳುವ ಚಿತ್ರ
-‘ಭಾವ’ಚಿತ್ರ

ಹೆಣ್ಣು ಕಪ್ಪೆ ಹೊಟ್ಟೆಯಲ್ಲಿರುವ ಮೊಟ್ಟೆ
-‘ಭಾವಿ’ ಕಪ್ಪೆ

ನಿರ್ದೇಶಕ ಆರ್ ಚಂದ್ರು ಅವರು ಒಟ್ಟಿಗೇ ೫ ಸಿನಿಮಾ ಘೋಷಣೆ ಮಾಡಿದ್ದಾರೆ
-ಹಂಗಾದ್ರೆ ಅವರು ಇನ್ನು ಮುಂದೆ ಐದ್ ಚಂದ್ರು

ಚಂದ್ರು ಅವರ ೫ ಸಿನಿಮಾಗಳ ಪೈಕಿ ಎರಡು ಸಿನಿಮಾಗಳ ಹೆಸರು ಡಾಗ್ ಮತ್ತು ಫಾದರ್
-ಗಾಡ್ ಫಾದರ್ ಅಂತ ಯಾರ್ ಬೇಕಾದ್ರೂ ಸಿನಿಮಾ ಮಾಡಬಹುದು. ಆದ್ರೆ ಡಾಗ್ ಫಾದರ್ ಮಾಡೋಕೆ ಚಂದ್ರು ಅವರಿಗೆ ಮಾತ್ರ ಸಾಧ್ಯ.

ಬಿಟ್ಟಿ ಫಿಲಾಸಫಿ
-ಮನುಷ್ಯ ಸತ್ತಾಗ ಅವನು ಹೆಂಗ್ ಬದುಕಿದ ಅನ್ನೋ ಪ್ರಶ್ನೆಗಿಂತ, ಅ ಉತ್ತರ ಕ್ರಿಯೆ ಬಗ್ಗೆನೇ ಎಲ್ಲರೂ ಜಾಸ್ತಿ ತಲೆ ಕೆಡಿಸ್ಕೊತಾರೆ..