Saturday, 14th December 2024

ಬಣ್ಣದ ಕನ್ನಡಕ, ತೆಗೆದರೆ ಏನೂ ಕಾಣಿಸುವುದಿಲ್ಲ

ಶಿಶಿರ ಕಾಲ

shishirh@gmail.com

ಶಿಕಾಗೋ ನಗರದ ಸರಿ ಮಧ್ಯದಲ್ಲಿ ಒಂದು ನದಿಯಿದೆ. ಅದರ ಎರಡೂ ಪಕ್ಕದಲ್ಲಿ ವಾಕಿಂಗ್ ಮಾಡಲು ೩೦ ಮೈಲಿ ಉದ್ದದ ವ್ಯವಸ್ಥೆಯಿದೆ. ಅತ್ತಕಡೆ ಹೋದಾಗ ಅಂದಿಷ್ಟು ನಡೆದು, ವಿಹರಿಸಿ, ಅಲ್ಲಿ ಹಾಕಿಟ್ಟ ಬೆಂಚಿನಲ್ಲಿ ಕೊಂಚ ವಿರಮಿಸಿ ಬರುವುದು ಅಭ್ಯಾಸ. ಮೊನ್ನೆಯೂ ಹಾಗೆ ಸ್ವಲ್ಪ ನಡೆದು ಸುಸ್ತೆನಿಸಿ ಒಬ್ಬನೇ ಕೂತಿದ್ದೆ.

ಅಲ್ಲಿ ಕೂತು, ಮೊಬೈಲ್ ಅನ್ನು ಪಕ್ಕಕ್ಕಿಟ್ಟು ಓಡಾಡುವ ಜನರನ್ನು, ಅವರ ನಾನಾ ವೆರೈಟಿ ವೇಷಗ ಳನ್ನು, ಪ್ರವಾಸಿಗರನ್ನು ನೋಡುವುದೇ ಒಂದು ರಂಜನೆ. ಹೀಗೆ ಕೂತಿzಗ ಎಲ್ಲಿಂದಲೋ ಒಬ್ಬ ವಯಸ್ಸಾದ ವ್ಯಕ್ತಿ ನನ್ನ ಪಕ್ಕದಲ್ಲಿ ಬಂದು ಕುಳಿತುಕೊಂಡ. ಸಹಜವಾಗಿ ‘ಹಾಯ, ಹೌ ಆರ್ ಯು’ ಇವೆಲ್ಲ ಆಯಿತು. ಭಾರತೀಯರೆಂದರೆ, ಅದರಲ್ಲಿಯೂ ಮಾತಾಡುವವರೆಂದರೆ ಅಮೆರಿಕನ್ನ ರಿಗೆ ಏನೋ ಒಂದು ಹುರುಪು. ನಾನು ಅವರಿಗೆ ಫಾರಿನ್ನರ್. ಸುಮಾರು ಹೊತ್ತು ಏನೇನೋ ಮಾತಾಡಿದೆವು.

ನನಗೆ ಸಾಕಷ್ಟು ಸಮಯವಿತ್ತು. ಮೇಲಿಂದ ಸ್ನೇಹಿತನೊಬ್ಬನಿಗೆ ಕಾಯಬೇಕಿತ್ತು. ಆತ ಅಲ್ಲಿಯೇ ಪಕ್ಕದಲ್ಲಿ ಇದ್ದ ಆಳೆತ್ತರದ ಹೂಕುಂಡವನ್ನು ತೋರಿಸಿ ‘ಅದು ಯಾವ ಬಣ್ಣ’ ಎಂದು ಕೇಳಿದ. ಆ ಹೂಕುಂಡಕ್ಕೆ ಕೆಂಪು ಬಣ್ಣ ಬಳಿಯಲಾಗಿತ್ತು. ಇದೆಂತಹ ಪ್ರಶ್ನೆ? ‘ಕೆಂಪು’ ಎಂದೆ. ‘ಹೌದು ಅದು ಕೆಂಪು, ಆದರೆ ಆ ಕೆಂಪು ನನಗೆ ಕಾಣಿಸಿದಂತೆಯೇ ನಿಮಗೂ ಕಾಣಿಸುತ್ತದೆಯೇ?’ ಎಂದು ಪ್ರಶ್ನೆಯಿಟ್ಟ. ಆತನಲ್ಲಿ ಆಗ ನನಗೆ ಕುತೂಹಲ ಹುಟ್ಟಿತು. ‘ಕೆಂಪು ಕೆಂಪೆ, ಕೆಂಪಾಗಿಯೇ ಅದು ನನಗೆ ನಿನಗೆ ಕಾಣುವುದಲ್ಲವೇ?‘ ಎಂದೆ.

‘ಹೌದು ಅದು ಕೆಂಪು, ಎಲ್ಲರಿಗೂ ಕೆಂಪಾಗಿಯೇ ಕಾಣಿಸುತ್ತದೆ. ಆದರೆ ಚಿಕ್ಕಂದಿನಿಂದಲೂ ಒಂದು ಬಣ್ಣವನ್ನು ತೋರಿಸಿ ಅದುವೇ ಕೆಂಪು ಎಂದು ಎಲ್ಲರಿಗೂ ಹೇಳಿರುವುದರಿಂದ ಅದು ಕೆಂಪು ಎಂದು ನಾವೆಲ್ಲ ಗುರುತಿಸುತ್ತೇವೆ. ಅದರರ್ಥ ಕೆಂಪು ಅಥವಾ ಯಾವುದೇ ಬಣ್ಣವಿರಬಹುದು, ಅದು ಹಾಗೆಯೇ ಎಲ್ಲರಿಗೂ ಕಾಣಿಸುತ್ತದೆ, ಹಾಗೆಯೇ ಬಣ್ಣವನ್ನು ನಮ್ಮ ಮೆದುಳು ಗ್ರಹಿಸುತ್ತದೆ ಎನ್ನುವುದಕ್ಕೆ ಸಾಕ್ಷಿಯೇನು?’ ಎಂದು ಕೇಳಿದ. ಹೀಗೆ ನನ್ನ
ತಲೆಯಂದು ಹುಳು, ಜಿeಸೆಯನ್ನು ಬಿಟ್ಟು ಹೋಗಿಬಿಟ್ಟ.

ಆತ ಕೇಳಿದ್ದು ಬಹಳ ಪ್ರಬುದ್ಧ ಪ್ರಶ್ನೆ. ಬಹಳಷ್ಟು ಹಾಗೆಯೇ. ಒಂದೇ ವಸ್ತು ಅಥವಾ ಘಟನೆಯನ್ನು ಬೇರೆಬೇರೆಯವರು ನೋಡಿದಾಗ ಅದು ನಮ್ಮಲ್ಲಿ ಮೂಡಿಸುವ ಚಿತ್ರಣವೇ ಬೇರೆ ಬೇರೆಯಾಗಿರುತ್ತದೆ ಅಲ್ಲವೇ? ಈಗ ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯನವರ ಒಂದು ವಿಡಿಯೋ ಬಹಳ ವೈರಲ್ ಆಗಿತ್ತು. ತೀರಾ ಚಿಕ್ಕ ವಿಡಿಯೋ, ನೀವು ನೋಡಿಯೇ ಇರುತ್ತೀರಿ. ಸಿದ್ಧರಾಮಯ್ಯ ಸಭೆಯಿಂದ ಆಚೆ ಹೋಗುವಾಗ ಕಾರ್ಯಕ್ರಮ ನಿರ್ವಾಹಕಿಯನ್ನು ಒಂದು ಕ್ಷಣ ನಿಂತು ನೋಡುವ ಒಂದು ಚಿಕ್ಕ ಸೀನ್. ಇದನ್ನೇ ತೆಗೆದುಕೊಳ್ಳೋಣ. ಅದನ್ನು ಕಾಂಗ್ರೆಸೇತರ ಪಕ್ಷದವರು ನೋಡಿದ ರೀತಿಯೇ ಬೇರೆ, ಕಾಂಗ್ರೆಸ್ ಪಕ್ಷದವರು ನೋಡುವ ರೀತಿಯೇ ಬೇರೆ. ಸಿದ್ಧರಾಮಯ್ಯನವರಿಗೆ ವಯಸ್ಸಾಯ್ತು, ಹೀಗೆಲ್ಲ ನೋಡುವುದು ಎಷ್ಟು ಸರಿಯೆನ್ನುವ ರೀತಿಯಲ್ಲಿ
ಒಂದಿಷ್ಟು ಮಂದಿ. ಇನ್ನೊಂದಿಷ್ಟು, ಅವರನ್ನು ಬೆಂಬೆಂಲಿಸುವವರಿಗೆ ಇದು ಅವರ ತಮಾಷೆಯ ಗುಣವಾಗಿ ಕಾಣಿಸಿತು.

ಈಗೀಗಂತೂ ಇಂತಹ ಅದೆಷ್ಟೋ ಸಾವಿರ ವಿಡಿಯೋಗಳು ಪ್ರತೀ ದಿನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗುತ್ತವೆ. ಕೆಲ ತಿಂಗಳ ಹಿಂದೆ ಚೀನಾ ಸೈನಿಕರು ಭಾರತದ ಗಡಿಯಲ್ಲಿ ಬಂದು ಅವರನ್ನು ಭಾರತದ ಸೈನಿಕರು ಬರಿಗೈಲಿ ದೂಡಿದ ವಿಡಿಯೋ. ಇದು ಬಹಳ ಸುದ್ದಿಯಾಯಿತು.
ಭಾರತದ ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಸೈನಿಕರು ಬರಿಗೈ ಅಲ್ಲಿ ಚೀನಾ ಯೋಧರನ್ನು ದೂಡಿ ಕಳಿಸಿ ಬುದ್ಧಿ ಕಲಿಸಿದರು ಎಂದು ಎಲ್ಲರು ಕೊಂಡಾಡಿದರು. ಆ ಸಮಯ ದಲ್ಲಿ ಇದೇ ವಿಡಿಯೋಗೆ ಚೀನಾದ ಜನಸಾಮಾನ್ಯರು, ಸೋಷಿಯಲ್ ಮೀಡಿಯಾ ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವ
ಕುತೂಹಲ ಹುಟ್ಟಿತು.

ಚೀನಿಯರ ಪ್ರತಿಕ್ರಿಯೆ ಸಹಜವಾಗಿ ತದ್ವಿರುದ್ಧ. ಚೀನಾ ಸೈನಿಕರ ಧೈರ್ಯವನ್ನು ಅಲ್ಲಿನವರು ಸೋಷಿಯಲ್ ಮೀಡಿಯಾದಲ್ಲಿ ಕೊಂಡಾಡುತ್ತಿದ್ದರು. ಚೀನಿಯರು ‘ನಮ್ಮ ಸೈನಿಕರು ಭಾರತದ ನೆಲದೊಳಕ್ಕೆ ಬರಿಗೈಯಲ್ಲಿ ಹೋಗಿ, ಶಕ್ತಿ ತೋರಿಸಿ ಹೆದರಿಸಿ ಬಂದರು’ ಎನ್ನುವ ಕಮೆಂಟುಗಳು, ವಿಶ್ಲೇಷಣೆ ಗಳು. ಇನ್ನು ಭಾರತ-ಪಾಕಿಸ್ತಾನಕ್ಕೆ ಸಂಬಂಧಿಸಿದ ವಿಡಿಯೋಗಳು ಕೂಡ ಹೀಗೆಯೇ. ಅದೇ ವಿಡಿಯೋ, ಅದೇ ವಿಷಯ, ಆದರೆ ಜನರು ಅದನ್ನು ಗ್ರಹಿಸುವ ರೀತಿ ಮಾತ್ರ ಸಂಪೂರ್ಣ ತದ್ವಿರುದ್ಧ.

ಇಂದಿನ ಟಿವಿ, ಪತ್ರಿಕೆ ಮೊದಲಾದ ಮಾಧ್ಯಮಗಳು ಎದುರಿಸುವ ಒಂದು ದೊಡ್ಡ ಸವಾಲು ಇದು. ಒಂದೇ ವಿಚಾರ, ವಿಡಿಯೋ, ಸುದ್ದಿ ಪ್ರಕಟಿಸಿದಾಗ ಎರಡು ವಿರುದ್ಧ ವಿಚಾರದವರು ಅದೇ ಸುದ್ದಿಯನ್ನು ತದ್ವಿರುದ್ಧ ಅರ್ಥದಲ್ಲಿ ಗ್ರಹಿಸುತ್ತಿರುತ್ತಾರೆ. ಸಾಮಾನ್ಯವಾಗಿ ರಾಜಕಾರಣಕ್ಕೆ ಸಂಬಂಧಿಸಿದ ಸುದ್ದಿ ಗಳಲ್ಲಿ ಈ ರೀತಿ ಆಗುವುದು ಜಾಸ್ತಿ. ಎರಡು ಸುದ್ದಿ ವಾಹಿನಿಗಳು ಒಂದೇ ಸುದ್ದಿಯನ್ನು ಹೇಳುವಾಗ ವಿಚಾರ ಒಂದೇ ಇದ್ದರೂ ಸಹಜವಾಗಿ ಅಲ್ಲಿನ ಶಬ್ದದ ಬಳಕೆ ಬೇರೆ ಬೇರೆಯಾಗಿರುತ್ತದೆ. ಏಕೆಂದರೆ ಅದನ್ನು ರೂಪಿಸುವ ವ್ಯಕ್ತಿಗಳು ಬೇರೆಬೇರೆ.

ಈ ಶಬ್ದ ಬಳಕೆ, ನಿರೂಪಣೆಯಿಂದ ಗ್ರಹಿಸುವ ರೀತಿ ಬೇರೆಯಾಗುವುದು ಒಂದು ಕಡೆ. ಇನ್ನೊಂದು ಕಡೆ ಒಂದೇ ವಾಹಿನಿಯ, ಒಂದೇ ಸುದ್ದಿಯನ್ನು ನೋಡಿದಾಗ ಒಬ್ಬೊಬ್ಬರಲ್ಲಿ ಮೂಡುವ ಭಾವ ಕೂಡ ಬೇರೆಬೇರೆ. ಇಂದು ಪ್ರತಿಯೊಂದು ಮೀಡಿಯಾ ಒಂದು ರಾಜಕೀಯ ಪಕ್ಷದ ಪರವಾಗಿ ಎಂದು ನಾವೆಲ್ಲ ನಂಬಿಕೊಂಡು ಬಿಟ್ಟಿದ್ದೇವೆ. ಆ ನಮ್ಮ ನಂಬಿಕೆಯ ಪ್ರಕಾರ ಅವರು ಬಳಸುವ ಶಬ್ದದಲ್ಲಿ ನಮ್ಮ ನಂಬಿಕೆಗೆ ಒಪ್ಪಿಗೆಯಾಗುವ ಶಬ್ದಗಳು ನಮ್ಮನ್ನು ಹೆಚ್ಚು ತಾಕುತ್ತದೆ. ಆ ಶಬ್ದ, ವಾಕ್ಯಗಳನ್ನು ಹಿಡಿದುಕೊಂಡು ಇದು ಇಂಥದ್ದೇ ಪಕ್ಷದ ಕೃಪಾಪೋಷಿತ ಮಾಧ್ಯಮ ಎಂದು ನಮ್ಮೊಳಗೇ ಒಮ್ಮೆ ನಿರ್ಧರಿಸಿಕೊಂಡರೆ ಆಯಿತು.

ನಂತರದಲ್ಲಿ ನಮ್ಮ ಮನಸ್ಸು ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ಸಂಗ್ರಹಿಸಲು, ನಮ್ಮ ನಂಬಿಕೆಯೇ ಸರಿಯೆಂದು ಸಾಧಿಸಲು ಶುರುಮಾಡಿಬಿಡುತ್ತದೆ. ನೀವು ಕನ್ನಡ ಮೀಡಿಯಾವನ್ನೇ ತೆಗೆದುಕೊಳ್ಳಿ. ನಿಮ್ಮಲ್ಲಿ ಇಂತಿಂಥ ಚಾನೆಲ್ಲುಗಳು, ಪತ್ರಿಕೆಗಳು ಈ ಪಕ್ಷದ ಜತೆಗಿವೆ ಎಂದು ಪಟ್ಟಿಯನ್ನೇ ನಾವು ಪ್ರತಿಯೊಬ್ಬರೂ ಕೊಡಬವು. ಕೆಲವೊಮ್ಮೆ ಈ ಚಾನೆಲ್ ಅಥವಾ ಪತ್ರಿಕೆ ಇಂತಹ ಪಕ್ಷದ ಪರವಾಗಿ ಎಂದು ಒಬ್ಬರು, ಇಲ್ಲ ಅವರು ಇನ್ನೊಂದು ಪಕ್ಷದವರು ಎಂದು ಮತ್ತೊಬ್ಬರು. ಒಂದು ಮಾಧ್ಯಮ ಹೀಗೆ ಎಂದು ನಾವಂದುಕೊಂಡ ನಂತರ ಅದಕ್ಕೆ ವಿರುದ್ಧವಾದ ರೀತಿಯಲ್ಲಿ ಇನ್ನೊಂದು
ಸುದ್ದಿ ಪ್ರಕಟಿಸಿದರೆ ಇದು ಅವರು ಬ್ಯಾಲೆನ್ಸ್ ಮಾಡಲು, ಸಮ ತೂಕ ತೋರಿಸಲು ಮಾಡುತ್ತಿರುವ ನಾಟಕ ಎಂದು. ಈ ರೀತಿ ಒಂದೇ ಸುದ್ದಿ, ವಿಷಯ ವನ್ನು ಪ್ರಕಟಿಸಿದಲ್ಲಿ ಅದು ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಗ್ರಹಿಸಲ್ಪಡುವುದಕ್ಕೆ ಒಂದು ಹೆಸರಿದೆ.

Hostile Media Effect. ಈ ಕಾರಣಕ್ಕೆ ಇಂದು ಒಂದೇ ಒಂದು ಸತ್ಯ ಹೇಳುವ, ಒಂದು ಕಡೆ ವಾಲದ ಮೀಡಿಯಾವೇ ಇಲ್ಲವೆಂದು ಜನರು ಒಮ್ಮತಕ್ಕೆ ಬರುವುದು. ಒಂದು ಮಾಧ್ಯಮ ಹೆಚ್ಚು ಹೆಚ್ಚು ತಾನು ನಿಷ್ಪಕ್ಷಪಾತ ಎಂದು ತೋರಿಸಿಕೊಳ್ಳಲು ಪ್ರಯತ್ನಿಸಿದಷ್ಟು ಜನರು ಆ ಮಾಧ್ಯಮ ವನ್ನು ಪಕ್ಷಪಾತಿ ಎಂದು ಹೇಳುವುದು ಜಾಸ್ತಿಯಾಗಿರುತ್ತದೆ. ಕೆಲವು ತೀರಾ ವಾಲಿದ ಮೀಡಿಯಾಗಳು ಇಲ್ಲವೆಂದೇನಿಲ್ಲ. ಆದರೆ ಎಲ್ಲವು ಹಾಗೆಯೇ ಎಂದುಕೊಳ್ಳಲು ಕಾರಣ ನಮ್ಮ ಮನಸ್ಸು ಮತ್ತು ಗ್ರಹಿಕೆ. ಏಕೆಂದರೆ ನಾವು ಒಂದು ಕಡೆ ವಾಲಿರುತ್ತೇವೆ. ನಮ್ಮ ಮನಸ್ಸು ನಮ್ಮ ನಂಬಿಕೆಯನ್ನು ಪೋಷಿಸುತ್ತದೆ, ನಾವೇ ಸರಿಯೆಂದು ನಂಬಿಕೊಳ್ಳಲು ಇನ್ನಷ್ಟು ಸಾಕ್ಷ್ಯಗಳನ್ನು ಕ್ರೂಢೀಕರಿಸುತ್ತ ಹೋಗುತ್ತದೆ.

ಲೀ ರೋಸ್ ಎಂಬ ಅಮೆರಿಕನ್ ಮನಶಾಸಜ್ಞನ ಒಂದು ಮಾತು ನೆನಪಾಗುತ್ತದೆ. ನನಗೆ ಜಗತ್ತು ಬಿಳುಪಾಗಿ ಕಾಣುತ್ತದೆ, ಇನ್ನೊಬ್ಬನಿಗೆ ಕಪ್ಪಾಗಿ. ಮೂರನೆಯವನೊಬ್ಬ ಬಂದು ನಮ್ಮಿಬ್ಬರಿಗೆ ಈ ಜಗತ್ತು ಕಪ್ಪೂ ಅಲ್ಲ ಬಿಳಿಯೂ ಅಲ್ಲ, ಇದು ಕೆಲವು ಕಡೆ ಕಪ್ಪು, ಕೆಲವು ಕಡೆ ಬಿಳುಪು, ಒಟ್ಟಾರೆ ಇದು ಬೂದು ಬಣ್ಣದ್ದು ಎಂದು ಹೇಳಿದರೆ ನಾವಿಬ್ಬರೂ ಆತ ಸುಳ್ಳು ಹೇಳುತ್ತಾನೆ, ಅಪ್ರಾಮಾಣಿಕ ಎಂದೇ ಅಂದುಕೊಳ್ಳುತ್ತೇವೆ, ಆತನನ್ನು ತಿರಸ್ಕರಿಸು ತ್ತೇವೆ.

ಇಂದು ಮಾಧ್ಯಮವನ್ನು ತಿರಸ್ಕರಿಸುವ, ಎಲ್ಲರೂ ಒಂದೇ ದೋಣಿಯ ಕಳ್ಳರೆನ್ನುವ ದೊಡ್ಡ ವರ್ಗ ಆ ಕಾರಣಕ್ಕಿದೆ. ಇದೇ ಕಾರಣಕ್ಕೆ ನಾನು ಈಗೀಗ ಸುದ್ಧಿ ವಾಹಿನಿಯನ್ನು ನೋಡುವುದೇ ಬಿಟ್ಟುಬಿಟ್ಟಿದ್ದೇನೆ ಎಂದು ಹೇಳುವವರಿದ್ದಾರೆ. ಇದು Hostile Media Effect ನ ಮುಂದುವರಿದ ಭಾಗ. ಲೀ
ರೋಸ್ ಮನುಷ್ಯನ ಸಾಮಾಜಿಕ ಮನಸ್ಥಿತಿಯನ್ನು ವಿವರಿಸುತ್ತ Fundamental Attribution Error ಬಗ್ಗೆ ಹೇಳುತ್ತಾರೆ. ಇದು ಹೆಚ್ಚು ಕಡಿಮೆ ಶಿಕಾಗೋದಲ್ಲಿ ಸಂಧಿಸಿದ ವ್ಯಕ್ತಿಯ ಪ್ರಶ್ನೆಯ ಇನ್ನೊಂದು ರೂಪ. ನಾನು ಜಗತ್ತನ್ನು ಹೇಗೆ ಕಾಣುತ್ತೇನೆಯೋ, ಜಗತ್ತು ಹಾಗೆಯೇ ಇದೆ ಎನ್ನುವ ಪರಮ ನಂಬಿಕೆ.

ಈ ನಂಬಿಕೆಯ ಪರಿಣಾಮ ನಮ್ಮಲ್ಲಿ ಆಗೀಗ ಒಂದಿಷ್ಟು ವ್ಯಾಕುಲತೆಯನ್ನು ಹುಟ್ಟುಹಾಕುತ್ತದೆ. ಈ ವಿಷಯ, ವ್ಯಕ್ತಿ, ಸ್ಥಿತಿ ಇರುವುದು ಹೀಗೆ, ಆದರೆ ಇನ್ನೊಬ್ಬರು ಅದನ್ನು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸುವುದು ಏಕೆ? ಆತನಿಗೆ ಮಂಡೆ ಸಮ ಇಲ್ಲ, ಇಲ್ಲವೇ ಅವನಿಗಿನೋ ಒಂದು ದುರುದ್ದೇಶವಿದೆ
ಎಂದು. ನೀವು ರಾಜಕೀಯ ವಿಚಾರವನ್ನು ಚರ್ಚಿಸುವಾಗ ಇದು ಅನುಭವಕ್ಕೆ ಬಂದಿರುತ್ತದೆ. ಇಷ್ಟು ಗಾಜಿನಷ್ಟು ಸ್ಪಷ್ಟವಾಗಿದೆ, ಆದರೆ ಇದೇಕೆ ಆತನ ಗ್ರಹಿಕೆಗೆ ಬರುತ್ತಿಲ್ಲ, ಏಕೆ ಆ ವ್ಯಕ್ತಿ ಸಂಪೂರ್ಣ ತಪ್ಪನ್ನೇ ತಿಳಿದುಕೊಂಡಿದ್ದಾನೆ ಎಂದು.

ನನ್ನ ಫೇಸ್ಬುಕ್ ವಾಲ್ ನಲ್ಲಿ ಶೇ. ೯೦ ರಷ್ಟು ಇಂಥವೇ ತುಂಬಿರುತ್ತವೆ. ತನ್ನ ನಂಬಿಕೆಯನ್ನು, ಗ್ರಹಿಕೆಯನ್ನು ಒಬ್ಬ ಬರೆದುರಿತ್ತಾನೆ, ಇನ್ನೊಬ್ಬ ಅದಕ್ಕೆ ವಿರುದ್ಧವಾಗಿ ಕಮೆಂಟಿಸಿರುತ್ತಾನೆ. ಇಡೀ ಸೋಷಿಯಲ್ ಮೀಡಿಯಾ ನಿಂತಿರುವುದೇ ಇಂತಹ ವಿಚಾರ ದ್ವಂದ್ವದ ಆಸಕ್ತಿಯ ಮೇಲೆ. ಕ್ರಮೇಣ ಈ ದ್ವಂದ್ವಗಳು ಎರಡು ಮೂರು ಗುಂಪಾಗುತ್ತವೆ. ವ್ಯಕ್ತಿ ತನ್ನ ಗುಂಪಿನವನ ಕಮೆಂಟನ್ನು ಇಷ್ಟಪಡುತ್ತಾನೆ, ಒಪ್ಪದವನನ್ನು ತಿರಸ್ಕರಿಸುತ್ತಾನೆ. ಈ
ನಮ್ಮೊಳಗಿನ ನಾನೇ ಸರಿಯೆನ್ನುವ ಭಾವನೆ ಅದೆಷ್ಟು ಪ್ರಬಲವೆಂದರೆ, ನಮ್ಮ ಅಭಿಪ್ರಾಯವನ್ನು ಒಪ್ಪದವನನ್ನು ಇಗ್ನೋರ್ ಮಾಡುವುದರ ಬದಲಾಗಿ ದ್ವೇಷಿಸಲು ಶುರುಮಾಡುತ್ತೇವೆ.

ಅವರಲ್ಲಿ ಏನೋ ಒಂದು ಸರಿಯಿಲ್ಲ, ಪಕ್ಷಪಾತಿ, ಅವರಿಗೆ ವಿಷಯವೇ ಗೊತ್ತಿಲ್ಲ, ದಡ್ಡ, ತಪ್ಪು ತಿಳುವಳಿಕೆಯವರು ಎಂಬಿತ್ಯಾದಿ ನಂಬಿಕೆ ನಮಗೊಂದಿಷ್ಟು ಸಮಾಧಾನ ಕೊಡುತ್ತದೆ. ಇದಕ್ಕೆ ತೀರಾ ಇತ್ತೀಚೆಗೆ ಸೋಷಿಯಲ್ ಮೀಡಿಯಾ ತುಂಬಿ ಕೊಂಡ ಪ್ರತಾಪ್ ಸಿಂಹ, ಬೆಂಗಳೂರು ಮೈಸೂರ್ ರಸ್ತೆಯ ವಾದ ವಿವಾದಕ್ಕಿಂತ ಉದಾಹರಣೆ ಇನ್ನೊಂದು ಸಿಗಲಿಕ್ಕಿಲ್ಲ. ಇದು ಕೇವಲ ಸಾಮಾಜಿಕವಷ್ಟೇ ಅಲ್ಲ. ಕುಟುಂಬದೊಳಗೂ
Fundamental Attribution Error ಉಟ್ಟ ನಿರಂತರ. ಹರೆಯದ ಮಗ, ಮಗಳು ತಂದೆ ತಾಯಿಗೆ ಅರ್ಥವಾಗುವುದಿಲ್ಲ. ಮಕ್ಕಳು ಗ್ರಹಿಸುವ ಜಗತ್ತೇ ಬೇರೆ. ಅಂದಿಷ್ಟು ಅಷ್ಲೀಲ ಮಾತುಗಳು, ಲವ್ವು, ಸ್ಟೇಟಸ್ ಇವೆಲ್ಲ ಇರಬೇಕು. ಆದರೆ ಪಾಲಕರಿಗೆ ಅದು ಅನುಭವಿಸಿ ಆಗಿದೆ, ಅದೆಲ್ಲದಕ್ಕಿಂತ ಜೀವನದ ತಯಾರಿ ಆದ್ಯತೆ ಯಾಗಬೇಕು.

ಇನ್ನು ಮಕ್ಕಳು ಬೆಳೆದು, ವಯಸ್ಕರಾಗಿ, ಅವರ ಕಾಲ ಮೇಲೆ ನಿಂತು, ಸಂಸಾರ ಕಟ್ಟಿಕೊಂಡ ಮೇಲೆ ಕೂಡ ಅದೆಲ್ಲಿಯೋ ಹಿಂದಿನಂತೆ ತಪ್ಪೆಸಗು ತ್ತಿದ್ದಾರೆ ಎನ್ನುವ ಆತಂಕ. ಅತ್ತ ಮಕ್ಕಳಿಗೆ ತಂದೆ ತಾಯಿ ಅನುಭವಿಸಿದ ಜಗತ್ತೇ ಬೇರೆ, ಈಗ ಅವರಿರುವ ಜಗತ್ತಿನ ಅನುಭವವೇ ಬೇರೆ ಎನ್ನುವ ಗಟ್ಟಿ ನಿಲುವು. ಕುಟುಂಬದಲ್ಲಿ ಅವರವರು ಕಂಡದ್ದೇ ಸರಿಯೆನ್ನುವ ಭಾವವೇ ಬಿರುಕನ್ನು ಹುಟ್ಟು ಹಾಕುವುದು. ಕೆಲವೊಮ್ಮೆ ಇಂತಹ ವೈಯಕ್ತಿಕ ನಂಬಿಕೆ ಗಳೇ ಅಂತಾರಾಷ್ಟ್ರೀಯ ಬಿಕ್ಕಟ್ಟಿಗೆ, ಅದಕ್ಕೂ ಮುಂದಿವರಿದು ಯುದ್ಧ ಸಾವು ನೋವಿಗೆ ಕಾರಣವಾಗಿದ್ದೂ ಇದೆ. ನಿಮಗೆ ಅಮೆರಿಕ ಇರಾಕಿನ ಮೇಲೆ ಯುದ್ಧ ಸಾರಿದ್ದು, ಸದ್ದಾಂ ಹುಸೇನ್ ಅನ್ನು ಗಲ್ಲಿಗೇರಿದಿದ್ದು ಎಲ್ಲವೂ ತಿಳಿದದ್ದೇ. ನನ್ನ ಅಮೆರಿಕದ ಸ್ನೇಹಿತನೊಬ್ಬ ಈ ಯುದ್ಧದಲ್ಲಿ ಭಾಗಿಯಾಗಿದ್ದ. ಅಷ್ಟೇ ಅಲ್ಲ, ಸದ್ದಾಂ ಹುಸೇನ್‌ನಅರಮನೆ ವಶವಾದ ನಂತರ, ಅಲ್ಲಿ ಸ್ಕ್ರಬ್ ಮಾಡಲು ಈತ ಹೋಗಿದ್ದ. ಆತನ ಹೆಮ್ಮೆಯ ವಿಚಾರವೆಂದರೆ ಸದ್ದಾಂ ಹುಸೇನ್‌ನ ಈಜುಕೊಳದಲ್ಲಿ ಮೂತ್ರ ಮಾಡಿ ಬಂದದ್ದು. ಅಲ್ಲಿನ ಕೆಲವು ಫೋಟೊಗಳನ್ನು ನನಗೆ ತೋರಿಸಿದ್ದ.

ಅಸಲಿಗೆ ಈ ಯುದ್ಧ ಶುರುವಾಗಿದ್ದು ಸದ್ದಾಂ ಜಗತ್ತನ್ನೇ ಸರ್ವನಾಶ ಮಾಡುವಂತಹ ಮಾಸ್ ಡಿಸ್ಟ್ರಕ್ಷನ್ ಆಯುಧಗಳನ್ನು ಹೊಂದಿದ್ದ ಎಂಬ
ಕಾರಣ ದಿಂದ. ಯುದ್ಧ ಸುಮಾರು ಒಂಬತ್ತು ವರ್ಷ ನಡೆಯಿತು, ಆರೆಂಟು ದೇಶಗಳು ಭಾಗಿಯಾದವು, ಸುಮಾರು ಎರಡು ಲಕ್ಷದಷ್ಟು ಮಂದಿ ಸತ್ತರು, ಸದ್ದಾಂ ಗಲ್ಲಿಗೇರಿಸಲ್ಪಟ್ಟ, ಇನ್ನೆಷ್ಟೋ ಲಕ್ಷ ಮಂದಿ ಗಾಯಗೊಂಡರು. ಎಲ್ಲ ಆಯಿತು. ಆದರೆ ಯುದ್ಧ ಶುರು ಮಾಡಿದ ಕಾರಣವಾದ ಸರ್ವನಾಶ
ಮಾಡಬಹುದಾದ ಯಾವೊಂದೂ ಆಯುಧವೂ ಇರಾಕಿನಲ್ಲಿ ಅಮೆರಿಕನ್ನರಿಗೆ ಸಿಗಲೇ ಇಲ್ಲ.

ಸದ್ದಾಂ ಒಳ್ಳೆಯವನೋ ಕೆಟ್ಟವನೋ ಬೇರೆ ವಿಚಾರ. ಆದರೆ ಈ ಯುದ್ಧಕ್ಕೆ ಕಾರಣವೇನು? ಇದೆಲ್ಲದಕ್ಕೆ ಕಾರಣ ಅಂದಿನ ಅಧ್ಯಕ್ಷ ಜಾರ್ಜ್ ಬುಷ್‌ನಲ್ಲಿ ಇದ್ದ ಕೆಲವೊಂದು ಪೂರ್ವಾಗ್ರಹ. ಆತನಿಗೆ ಮೊದಲಿನಿಂದಲೂ ಇರಾಕ್ ಎಂದರೆ ಅದು ಶತ್ರು ರಾಷ್ಟ್ರ. ಅದಕ್ಕೆ ಕಾರಣ ಆತನ ತಂದೆ, ಹಿಂದಿನ ಅಧ್ಯಕ್ಷ ಹಿರಿಯ ಬುಷ್‌ನ ಜತೆ ಇರಾಕ್, ಸದ್ದಾಂ ನಡೆದುಕೊಂಡ ರೀತಿ. ಹಿರಿಯ ಬುಷ್‌ಗೆ ಸದ್ದಾಂ ಕ್ಯಾರೇ ಅಂದಿರಲಿಲ್ಲ. ಹೀಗೆ ಒಂದಿಡೀ ಯುದ್ಧ, ಸಾವು
ನೋವು ಇವೆಲ್ಲ ಕೇವಲ ಒಬ್ಬ ವ್ಯಕ್ತಿಯ ವೈಯಕ್ತಿಕ ನಿಲುವು ಮತ್ತು ಅನಿಸಿಕೆ ಕಾರಣವಾಯಿತು ಎಂದೇ ಇಂದು ಇರಾಕ್ ಯುದ್ಧವನ್ನು ವಿಶ್ಲೇಷಿಸು ವುದು.

ಅಮೆರಿಕನ್ ಕೊಮೆಡಿಯನ್ ಜಾರ್ಜ್ ಕಾರ್ಲಿನ್ ಒಂದು ಕಡೆ ಮಾರ್ಮಿಕವಾಗಿ ಹೀಗೆ ಹೇಳುತ್ತಾನೆ. We all say believe this. Anyone driving a vehicle slower than you is an idiot. Anyone driving faster than you is a Maniac. ಹಾಸ್ಯಕ್ಕೆಂದೇ ಹೇಳಿರ ಬಹುದು, ಆದರೆ ಅದೆಷ್ಟು ಸತ್ಯ ಅಲ್ಲವೇ? ನಮಗಿಂತ ನಿಧಾನವಾಗಿ ಗಾಡಿ ಓಡಿಸುವವನು ಮೂರ್ಖ. ನಮಗಿಂತ ಜೋರಾಗಿ ಓಡಿಸುವವನು ಹುಚ್ಚ, ತಲೆ ಸರಿಯಿಲ್ಲದವನು.

ನಮ್ಮ ಮೆದುಳು ನಿರಂತರವಾಗಿ ಮುನ್ಸೂಚನೆಯನ್ನು ಗ್ರಹಿಸುವ ಒಂದು ಯಂತ್ರ. ಈ ಗ್ರಹಿಕೆ ನಮ್ಮ ಹಿಂದಿನ ಅನುಭವದಿಂದ ರೂಪಿತವಾಗಿರುತ್ತದೆ. ಪ್ರತಿಯೊಬ್ಬರ ಅನುಭವವೂ ಅನನ್ಯ. ಹಾಗಾಗಿಯೇ ನಮ್ಮ ಗ್ರಹಿಕೆ ಕೂಡ. ಇದು ನಮಗೆ ಹೇಗೆ ಬದಲಿಸಿಕೊಳ್ಳಲು ಸಾಧ್ಯವಿಲ್ಲವೋ ಹಾಗೆಯೇ
ಅನ್ಯರಿಗೂ ಕೂಡ. ಪ್ರತಿಯೊಬ್ಬರ ನಂಬಿಕೆಗಳೂ ರೂಪಗೊಳ್ಳುವುದು ಅವರವರ ಗ್ರಹಿಕೆ ಮತ್ತು ಅನುಭವಕ್ಕೆ ಅನುಗುಣವಾಗಿ. ಹುಚ್ಚನ ಪ್ರಕಾರ ಜಗತ್ತಿಗೇ ಹುಚ್ಚು. ಜಗತ್ತಿಗೆ ಅವನೊಬ್ಬನೇ ಹುಚ್ಚ. ಈಗ ಹುಚ್ಚು ಯಾರಿಗೆ ಎಂದು ನಿರ್ಧರಿಸುವುದು ಕೇವಲ ಸಂಖ್ಯೆಯ ಆಧಾರದ ಮೇಲೆ. ಇನ್ನು ತೀರಾ ಖಿನ್ನತೆ ಇಂದು ಒಂದು ರೋಗವೆಂದು ಕರೆಯಲ್ಪಡುತ್ತದೆ. ಆದರೆ ಖಿನ್ನತೆಯೆನ್ನುವುದು ರೋಗ ಲಕ್ಷಣವೇ ಅಥವಾ ಆತನ ನಂಬಿಕೆಗೆ ಕಾರಣ ಆತ ಅನುಭವಿಸಿದ ಜೀವನ, ಜಗತ್ತೇ? ಇತ್ತೀಚೆ ಮನಶಾಸಜ್ಞರು ಖಿನ್ನತೆಯನ್ನು ಆ ಕಾರಣಕ್ಕೆ ರೋಗಲಕ್ಷಣವಲ್ಲ, ಅದು ಪರಿಣಾಮ ಎಂದು ಕರೆಯುವುದು.

ಇದೆಲ್ಲದಕ್ಕೂ ಪರಿಹಾರವಿರಬೇಕೆಂದೇನೂ ಇಲ್ಲ. ಅವರವರದ್ದು ಬೇರೆ ಬೇರೆಯದೇ ಆದ ಬಣ್ಣದ ಕನ್ನಡಕ. ನಮಗೆ ಕಂಡಂತೆಯೇ ಉಳಿದವರಿಗೆ ಕಾಣಬೇಕೆಂದೇನೂ ಇಲ್ಲ. ಹುಟ್ಟಿದಾಗ ಇದ್ದ ರಂಗಿಲ್ಲದ ಕನ್ನಡಕ ಜೀವನಾನುಭವದಿಂದ ಬಣ್ಣ ಪಡೆದುಕೊಳ್ಳುತ್ತಾ ಹೋಗುತ್ತದೆ. ಇದು ಪ್ರತಿ ಯೊಬ್ಬರ
ಮಟ್ಟಿಗೂ ಸತ್ಯ. ಕನ್ನಡಕ ತೆಗೆದರೆ ಏನೂ ಕಾಣಿಸು ವುದೇ ಇಲ್ಲ. ಹಾಗಾಗಿ ಕನ್ನಡಕ ಬೇಕು. ಸ್ವಚ್ಛ ಮಾಡಿಕೊಂಡು ನೋಡಿದರೆ ನಮಗೆ ನಮ್ಮ ಕನ್ನಡಕದ ಬಣ್ಣವೇ ಎಡೆ ಕಾಣಿಸುವುದು.

ಎಲ್ಲರಿಗೂ ತಮ್ಮ ಕನ್ನಡಕ ಯಾವುದೇ ಬಣ್ಣದ್ದಲ್ಲವೆನ್ನುವ, ನಾವು ಕಂಡದ್ದೇ ನಿಜವೆನ್ನುವ ನಂಬಿಕೆ. ಆ ನಮ್ಮ ನಂಬಿಕೆಯನ್ನು ಬಿಡುವಂತೆ ಕೂಡ ಇಲ್ಲ. ಆದರೆ, ಪ್ರತಿಯೊಬ್ಬರ ಕನ್ನಡಕದ ಬಣ್ಣವೂ ಅವರವರ ಅನುಭವದಿಂದ ರೂಪಿತವಾಗಿದ್ದು ಎನ್ನುವ ಅರಿವಿದ್ದರೆ ಕೆಲವೊಂದಿಷ್ಟು ಉದ್ವೇಗಗಳು ನಮ್ಮ
ಹತೋಟಿಗೆ ಸಿಗುತ್ತವೆ. ನಮ್ಮದೇ ಕನ್ನಡಕ, ನಾವೇ ಬಳಿದುಕೊಂಡ ಬಣ್ಣ, ನಮ್ಮದೇ ದೃಷ್ಟಿ. ಈಗ ಕರ್ನಾಟಕ ಚುನಾವಣೆಯಿದೆ. ಅದಾದ ಮೇಲೆ ಲೋಕಸಭೆ ಯದು. ಈ ಸಮಯದಲ್ಲಿ ಇದೆಲ್ಲ ನಿಮ್ಮಲ್ಲಿ ಹಂಚಿಕೊಳ್ಳಬೇಕೆನ್ನಿಸಿತು. ಅಷ್ಟೇ.