Friday, 27th September 2024

Shishir Hegde Column: ಮನೆ ಮಂತ್ರಾಲಯವಾದರಷ್ಟೇ ಮನ ದೇವಾಲಯವಾದೀತು

ಶಿಶಿರಕಾಲ

ಶಿಶಿರ್‌ ಹೆಗಡೆ

ನಿಮಗೆ ಅತ್ಯಂತ ಪ್ರೀತಿಯ ಸ್ಥಳ, ತುಂಬಾ ಇಷ್ಟವಾದ ಪರ ಊರು ಯಾವುದು? ಜೋಗ, ಹಂಪಿ, ಶಿಮ್ಲಾ, ಕುಲು, ಮನಾಲಿ, ಊಟಿ? ಅಥವಾ ಸ್ವಿಜರ್ಲೆಂಡ್, ಅಮೆರಿಕ, ಸಿಂಗಾಪುರ ಅಥವಾ ಇನ್ಯಾವುದೋ ದೇಶದ ಒಂದು ನಗರ, ಊರು? ಅಲ್ಲಿ, ಆ ಊರಿನಲ್ಲಿ ಇಷ್ಟವಾದ ಸ್ಪಾಟ್ ಯಾವುದು? ಒಬ್ಬೊಬ್ಬೊರದ್ದು ಒಂದೊಂದು ಉತ್ತರ. ಆ ಇಷ್ಟವಾಗುವ ಊರಿನಲ್ಲಿ- ಇಷ್ಟವಾದ ಜಾಗದಲ್ಲಿ ಹೋಗಿ ನಿಂತಾಗ ನಾವು ಒಮ್ಮೆ ಜಗತ್ತನ್ನೇ ಮರೆಯುತ್ತೇವೆ.

ಹೋಗಿ ಬಂದ ನಂತರ ಕೂಡ ಆ ಜಾಗ ಆಗೀಗ ನೆನಪಾಗುತ್ತಿರುತ್ತದೆ. ಹೀಗೆ ಪ್ರವಾಸಕ್ಕೆ ಹೋದಾಗ ಅದೆಷ್ಟೋ
ಬಾರಿ ನಮಗೆ ಸಹಜವಾಗಿ ಅನಿಸುವುದಿದೆ- ಇ ನಮ್ಮ ಮನೆ ಇದ್ದಿದ್ದರೆ ಎಷ್ಟು ಚೆಂದವಿರುತ್ತಿತ್ತು ಎಂದು. ಇದೊಂದು
ತೀರಾ ಕ್ಷಣಿಕ ವಿಚಾರ; ಆ ಕ್ಷಣ ಒಮ್ಮೆ ಹಾಗೆ ಅನಿಸಿಬಿಡುತ್ತದೆ. ಒಂದು ವೇಳೆ ಅದೇ ಊರಿನಲ್ಲಿ ಒಂದು ವಾರಕ್ಕಿಂತ ಹೆಚ್ಚಿಗೆ ಇದ್ದಿರೆಂದಿಟ್ಟುಕೊಳ್ಳಿ, ಮೆಲ್ಲಗೆ ಬೇಸರ ಬರಲು ಶುರುವಾಗುತ್ತದೆ. ಯಾಕೋ ನಮ್ಮ ಊರೇ ಚೆಂದ ಎಂದೆನಿಸಲು ಶುರುವಾಗುತ್ತದೆ. ಅಲ್ಲಿ, ಗೆಸ್ಟ್ ಹೌಸ್‌ನಲ್ಲಿ ಎಷ್ಟೇ ಸೌಕರ್ಯ, ರುಚಿಯಾದ ಆಹಾರ ಇದ್ದರೂ ನಮ್ಮ ಮನೆ ನೆನಪಾಗುತ್ತದೆ.

ಮನುಷ್ಯನಿರಲಿ, ಪ್ರಾಣಿಗಳಿರಲಿ ಎಲ್ಲವಕ್ಕೂ ಮನೆ ಎನ್ನುವುದೊಂದಿದೆ. ಮನುಷ್ಯನ ಮನೆ ಗೋಡೆಗಳ ಮಧ್ಯೆ. ಹಕ್ಕಿಯ ಮನೆ ಅದರ ಗೂಡು. ಇಲಿಗೆ ಬಿಲ. ಹುಲಿಗೆ ಹತ್ತರಿಂದ ಎಪ್ಪತ್ತು ಚದರ ಕಿಲೋಮೀಟರ್ ಕಾಡು. ಬೀದಿನಾಯಿಗೆ ಬೀದಿಯೇ ಮನೆ. ಪ್ರತಿಯೊಂದು ಜೀವಿಯ ಮನೆಗೂ ಒಂದು ಗಡಿ. ಆ ಗಡಿಯ ಒಳಗೆ ಬೇರೆ ಜೀವಿ ಆಕ್ರಮಿಸುವಂತಿಲ್ಲ, ಒಳ ನುಸುಳುವಂತಿಲ್ಲ. ಎಲ್ಲ ಪ್ರಾಣಿಗಳೂ ಈ ತನ್ನದೆನ್ನುವ ಆಯ್ದ ಒಳಕ್ಕೆ ಇನ್ನೊಂದು ಜೀವಿ ಹೊಕ್ಕ ಕೂಡಲೇ ಪ್ರತಿರೋಧ ತೋರ್ಪಡಿಸುತ್ತವೆ ಇಲ್ಲವೇ ಯುದ್ಧಕ್ಕೇ ಇಳಿದುಬಿಡುತ್ತವೆ.

ಪ್ರತಿಯೊಂದು ಜೀವಿ ಈ ಲ್ಯಾಂಡ್ ಡಿಸ್ ಪ್ಯೂಟ್ ಕಾರಣದಿಂದ ಹೋರಾಟ ನಡೆಸುತ್ತಲೇ ಬದುಕುತ್ತಿರುತ್ತದೆ. ಮನುಷ್ಯನೂ ಇದಕ್ಕೆ ಹೊರತಲ್ಲ. ಒಡೆತನ ಮತ್ತು ತನ್ನ ಸ್ವತ್ತು ಎನ್ನುವ ಭಾವ ಇರದ ಜೀವಿಯೇ ಇಲ್ಲ. ಈ ತನ್ನ
ದು, ತನ್ನ ಸ್ವತ್ತು ಎನ್ನುವ ವಿಚಾರ ಜಗತ್ತಿನ ನವಿರಾದ ಸಮತೋಲನಕ್ಕೆ ಕಾರಣ ಕೂಡ ಹೌದು. ಜೀವಿ ಭೂಮಿಯ ಮೇಲೆ ಹುಟ್ಟಿದ ದಿನವೇ ಈ ತನ್ನದು, ತನ್ನ ಮನೆ ಎನ್ನುವ ವಿಚಾರ ಕೂಡ ಹುಟ್ಟಿರುತ್ತದೆ. ಮನುಷ್ಯ ತನ್ನದು ಎನ್ನುವ ವಿಚಾರದಿಂದ ಎಷ್ಟೇ ಪ್ರಯತ್ನಪಟ್ಟರೂ, ಅಧ್ಯಾತ್ಮ ಓದಿದರೂ ವಿಮುಖನಾಗಲು ಸಾಧ್ಯವಾಗದೇ ಇರುವುದಕ್ಕೆ ಲಕ್ಷಾಂತರ ವರ್ಷ ವಂಶವಾಹಿನಿಯಾಗಿ ಹರಿದು ಬಂದ ಈ ವಿಚಾರವೇ ಕಾರಣ.

ನಾವೆ ಬೇರೆ ಬೇರೆ, ನಮ್ಮೆಲ್ಲರ ಇಷ್ಟ ಬೇರೆ ಬೇರೆ; ಆದರೆ ಒಂದೇ ಒಂದು ಸಾಮಾನ್ಯವಾದ ವಿಚಾರ ಎಂದರೆ
ನಮ್ಮೆಲ್ಲರಿಗೂ ನಮ್ಮ ಮನೆ ಎಂದರೆ ಇಷ್ಟ. ನಮಗೆಲ್ಲರಿಗೆ ಎಲ್ಲಾ ಹೋದರೂ ಕೊನೆಗೆ ಇಷ್ಟವಾಗುವುದು ನಮ್ಮ ಮನೆ. ಅತಿ ಸುಂದರ ಪ್ರವಾಸಿತಾಣಕ್ಕೆ ಹೋಗಿ ಅದೆಷ್ಟೋ ಮೋಜು- ಮಸ್ತಿ ಮಾಡಿಕೊಂಡು ಬಂದರೂ ನಮ್ಮ ಮನೆ ಹೊಕ್ಕ ತಕ್ಷಣ ಹುಟ್ಟುವ ಒಂದು ಸಮಾಧಾನ ಇನ್ನೆಲ್ಲಿಯೂ ಹುಟ್ಟುವುದಿಲ್ಲ. ಈ ತನ್ನ ಮನೆಯೆನ್ನುವ ವಿಚಾರ ಬಹಳ ಶಕ್ತಿಯುತ.

ಅದೆಷ್ಟೆಂದರೆ ಮನೆಯಲ್ಲಿ ಅದೆಷ್ಟೇ ಗೌಜಿ, ಗಲಾಟೆ, ವಾಸನೆ, ಗಲೀಜು, ಚಳಿ, ಸೆಖೆ ಇರಲಿ, ಅದೆಲ್ಲವೂ ನಮ್ಮ ಮನೆ ಯೆಂಬ ಕಾರಣಕ್ಕೆ ನಮಗೆ ಸಹ್ಯ. ಆದರೆ ಹೀಗೆ ಸಹಿಸುತ್ತ ಸಹಿಸುತ್ತ ನಾವು ನಮಗರಿವಿಲ್ಲದಂತೆ ಮನೆಯ ಜತೆ ಕ್ರಮೇಣ ರಾಜಿ ಮಾಡಿಕೊಂಡು ಬಿಡುತ್ತೇವೆ. ನಮ್ಮ ಮನೆ ಎಂಬ ಒಂದೇ ಕಾರಣಕ್ಕೆ ಮನೆಯಲ್ಲಿ ವಸ್ತುಗಳು ಅದೆಷ್ಟೇ ಚೆಲ್ಲಾಪಿಲ್ಲಿಯಾಗಿದ್ದರೂ ಅದೆಲ್ಲ ಸಹ್ಯವೆನಿಸಲು ಶುರುವಾಗುತ್ತದೆ. ಈ ರೀತಿ ನಾವು ಸಹನೆಯನ್ನು ನಮಗೆ ಅರಿವಿಲ್ಲ ದಂತೆ ಹಿಗ್ಗಿಸಿಕೊಳ್ಳುತ್ತ ಹೋಗುತ್ತೇವೆ.

ಕ್ರಮೇಣ ಮನೆಯೆಡೆಗಿನ ಪ್ರೀತಿ ಒಂದು ಅಣುವಷ್ಟು ಕೂಡ ಕಡಿಮೆಯಾಗದಿದ್ದರೂ ಮನೆಯಲ್ಲಿ ಕಿರಿಕಿರಿ ಎನಿಸಲು ಶುರುವಾಗುತ್ತದೆ. ಒಂದು ರೀತಿಯ ಅಸಹನೆ ಅವ್ಯಕ್ತವಾಗಿ ಕಾಡಲು ಶುರುವಾಗುತ್ತದೆ. House is what we make. ಮನೆ ಕಟ್ಟಿಕೊಂಡ ದ್ದಿರಬಹುದು, ಪಡೆದುಕೊಂಡದ್ದಿರಬಹುದು, ಬಾಡಿಗೆಯದಿರಬಹುದು, ಗುಡಿಸಲಿರ ಬಹುದು, ಬಂಗಲೆಯಿರಬಹುದು, ಚಿಕ್ಕದಿರಬಹುದು, ದೊಡ್ಡದಿರಬಹುದು- ಎಲ್ಲ ಮನೆಯೂ ಕೊನೆಯಲ್ಲಿ ಮನೆಯೇ.

ಈಗ ಮನೆಯೆಂದರೆ ಏನು ಎಂಬ ಸಹಜವೆನ್ನುವ ಪ್ರಶ್ನೆಯನ್ನು ಒಮ್ಮೆ ಕೇಳಿಕೊಳ್ಳೋಣ. ಅಡಿಪಾಯ, ಗೋಡೆ, ಕಿಟಕಿ ಬಾಗಿಲುಗಳು ಇವಷ್ಟೇ ಮನೆಯೇ? ಅಲ್ಲವಲ್ಲ. ಗೋಡೆ ಮನೆಯ ಸರಹದ್ದು, ಅದೊಂದೇ ಮನೆಯಲ್ಲವಲ್ಲ. ಮಾಡು, ತಾರಸಿ ಮನೆಯ ಮುಚ್ಚಳಿಕೆ- ಅದೇ ಮನೆಯಲ್ಲ. ಹಾಗಾದರೆ ಸೋಫಾ, ಕುರ್ಚಿ, ಮೇಜು, ಟಿವಿ, ಕಂಪ್ಯೂಟರ್, ಹಾಸಿಗೆ? ಅವೆಲ್ಲ ವಸ್ತುಗಳಾದವು. ಹಾಗಾದರೆ ಅಸಲಿಗೆ ಮನೆಯೆಂದರೆ ಏನು? ಒಂದು ಆಯ, ಆ ಆಯದೊಳಗಿನ ನಮ್ಮದೆನ್ನುವ, ನಾವು ಸ್ವಾಧೀನಪಡಿಸಿಕೊಂಡ ವಸ್ತುಗಳೆಲ್ಲ ಸೇರಿ ಮನೆಯಾಗುತ್ತದೆ ಅಲ್ಲವೇ? ಮನೆಯೆಂದರೆ ಒಂದು ಸಮಗ್ರತೆ. ಮನೆಯೆಂದರೆ ಅದೊಂದು ಸ್ಪೇಸ್, ಆ ಸ್ಪೇಸ್‌ನಲ್ಲಿರುವ ಎಲ್ಲ ವಸ್ತುಗಳು, ಎಲ್ಲ ಹರಗಣಗಳೂ ಸೇರಿ ನಮ್ಮ ಮನೆಯಾಗುತ್ತದೆ.

ಕೆಲವರ ಮನೆಗೆ ಹೋದರೆ ಅದೇನೋ ಒಂದು ಸುಂದರ ಅನುಭವ. ಅಂದು ಸುಂದರ ವೈಬ್ರೆಷನ್. ಇನ್ನು ಕೆಲವರ
ಮನೆ ಹೊಕ್ಕ ತಕ್ಷಣ ಮನಸ್ಸಿಗೆ ಏನೋ ಒಂದು ರಗಳೆ. ನೀವು ಅದಕ್ಕೆ ವಾಸ್ತು ಎಂದು ಕರೆದರೂ ಸರಿಯೇ. ಅದೇಕೆ ಹೀಗೆ ಎಂದು ಯಾವತ್ತಾದರೂ ಪ್ರಶ್ನಿಸಿಕೊಂಡಿದ್ದೀರಾ? ಕೆಲವರ ಮನೆ ತೀರಾ ಅಚ್ಚು ಕಟ್ಟು. ಇನ್ನು ಕೆಲವರ ಮನೆಯೆಂದರೆ ಅದೊಂದು ರೀತಿಯ ಸಾಮಾನು ತುಂಬಿಡುವ ಗೋದಾಮು. ಬಹುಶಃ ಮನುಷ್ಯನಷ್ಟು ತನ್ನ ಗೂಡನ್ನು, ಮನೆಯನ್ನು ಪ್ರೀತಿಸುವ ಪ್ರಾಣಿ ಇನ್ನೊಂದಿಲ್ಲ. ಆದರೆ ತನ್ನ ಆವಾಸ ಸ್ಥಾನವನ್ನು ಬೇಕಾಬಿಟ್ಟಿ ಇಟ್ಟುಕೊಳ್ಳುವ, ನಿರ್ಲಕ್ಷಿಸುವ ಒಂದು ದೊಡ್ಡ ಗುಂಪೇ ನಮ್ಮ ನಡುವೆ ಇದೆ.

ಕೆಲವರ ಮನೆಯಲ್ಲಿ ವಸ್ತುಗಳೆಲ್ಲ ಚೆಪಿಲ್ಲಿಯಾಗಿ ಬಿದ್ದಿರುತ್ತವೆ. ಒಮ್ಮೆಯಂತೂ ನನ್ನ ಸ್ನೇಹಿತರೊಬ್ಬರ ಮನೆಗೆ ಮೊದಲ ಬಾರಿ ಹೋಗಿದ್ದೆ. ಎಂದರಲ್ಲಿ ವಸ್ತುಗಳು, ಮಕ್ಕಳ ಆಟಿಕೆ ಸಾಮಾನುಗಳು, ಬಟ್ಟೆ, ಮೊಬೈಲ್ ಚಾರ್ಜರ್ ಹೀಗೆ ನೂರಾರು ಸಾಮಾನು ಬಿದ್ದಿದ್ದವು.

ಮನೆಯ ಬಾಗಿಲಿಂದ ಹೊರಟು ಕುಂಟಾಬಿ ಆಟವಾಡಿದಂತೆ ದಾಟುತ್ತ, ಹಾರುತ್ತ ಕುರ್ಚಿಯ ಮೇಲೆ ಹೋಗಿ ಕೂರುವಾಗ ಸುಸ್ತಾಗಿಹೋಯಿತು. ಕುರ್ಚಿಯ ಮೇಲೆ ಕೂತ ಮೇಲೆ ಬೆನ್ನಿಗೆ ಏನೋ ಒಂದು ತಂಪಾದ ಅನುಭವ, ಸರಿದು ನೋಡಿದರೆ ಒದ್ದೆ ಅಂಡರ್‌ವೇರ್! ಮನೆಯನ್ನು ನಾವು ಹೇಗೆ ಎಷ್ಟು ಅಚ್ಚುಕಟ್ಟಾಗಿ ಇಟ್ಟುಕೊಳ್ಳುತ್ತೇವೆ ಎನ್ನುವುದು ನಾನಾ ಕಾರಣಗಳಿಂದ ಮುಖ್ಯವಾಗುತ್ತದೆ. ನಮ್ಮ ಮನೆ, ನಮ್ಮಿಷ್ಟ ಎನ್ನುವುದು ನಿಜ. ನಮಗೆ ಬೇಕಾ ದಂತೆ ಮನೆಯನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಮನೆಯನ್ನು ಇಟ್ಟುಕೊಂಡ ರೀತಿ ಮತ್ತು ಶಿಸ್ತಿಗೂ, ಮನೆಯಲ್ಲಿರುವ ಮನಸ್ಸುಗಳ ಸ್ಥಿತಿಗೂ ನೇರ ಸಂಬಂಧವಿರುವ ಕಾರಣ ಮನೆಯನ್ನು ನಾವು ಹೇಗೆ ಇಟ್ಟುಕೊಳ್ಳುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ.

‘ಮನೆಯೇ ಮಂತ್ರಾಲಯ, ಮನಸೇ ದೇವಾಲಯ’ ಎನ್ನುವಾಗ ಅಲ್ಲಿ ಕೂಡ ಸುಪ್ತವಾಗಿರುವ ವಿಚಾರವಾದ, ಮನೆಗೆ ಮತ್ತು ಮನಸ್ಸಿಗೆ ಇರುವ ಸಂಬಂಧವನ್ನು ಗ್ರಹಿಸಲೇ ಬೇಕು. ಮನೆ ಕಟ್ಟಿಕೊಳ್ಳುವುದಕ್ಕಿಂತ ಮನೆ ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ. Cluttered house leads to cluttered minds. . ಚೆಲ್ಲಾಪಿಲ್ಲಿಯಾಗಿರುವ ಮನೆ ಅಲ್ಲಿನ ಮನಸ್ಸು ಗಳನ್ನು ಚೆಲ್ಲಾಪಿಲ್ಲಿಯಾಗಿಸುತ್ತದೆ ಎನ್ನುವುದು ಇಲ್ಲಿ ತಿಳಿಯಬೇಕಾದ ಸೂಕ್ಷ್ಮ. ನಾವು ಮನೆಯನ್ನು ಎಷ್ಟು ಅಚ್ಚು ಕಟ್ಟಾಗಿ ಇಟ್ಟುಕೊಳ್ಳುತ್ತೇವೆ ಎನ್ನುವುದರ ಮೇಲೆ ನಮ್ಮ ಮನೆಯಲ್ಲಿನ ಅನುಭವ ನಿರ್ಧರಿತವಾಗುತ್ತದೆ. ಬಹು ಪಾಲು ಸಾಂಸಾರಿಕ ಸಮಸ್ಯೆಗಳಿಗೆ ನೇರ ಕಾರಣ ನಾವು ಮನೆಯನ್ನು ಇಟ್ಟುಕೊಳ್ಳುವ ರೀತಿ. ಜೀವನದ ಅತಿಮುಖ್ಯ ಅಂಗವಾದ ವಾಸಸ್ಥಾನದ ಶಿಸ್ತು ನಮ್ಮ ಮಾನಸಿಕ ಶಾಂತಿ ಮತ್ತು ಯಶಸ್ಸನ್ನು ನಿರ್ಧರಿಸುತ್ತದೆ.

ಮನಸ್ಸನ್ನು ವ್ಯವಸ್ಥಿತವಾಗಿ ಆರ್ಗನೈಜ್ ಮಾಡಿಕೊಳ್ಳಬೇಕೆಂದರೆ, ಸುಂದರವಾಗಿಟ್ಟುಕೊಳ್ಳಬೇಕೆಂದರೆ ಮೊದಲು
ನಮ್ಮ ರೂಮ್ ಅನ್ನು, ಮನೆಯನ್ನು organize ಮಾಡಿಕೊಳ್ಳಬೇಕು. ಎಲ್ಲ ಮನಶ್ಶಾಸಜ್ಞರು ಒಪ್ಪುವ ವಿಚಾರ ಇದು. ಸುಪ್ರಸಿದ್ಧ ಮನಶ್ಶಾಸಜ್ಞ ಕೆನಡಾದ ಜೋರ್ಡನ್ ಪೀಟರ್ಸನ್ ತನ್ನ ಬಳಿ ಮಾನಸಿಕ ಸಮಸ್ಯೆ ಹೊತ್ತು ಬರುವ ಪ್ರತಿಯೊಬ್ಬರಿಗೂ ಮೊದಲು ಅವರ ಮನೆಯನ್ನು ವಿವರಿಸಲು ಹೇಳುತ್ತಾರೆ. ಮಾನಸಿಕ ಸಮಸ್ಯೆ ಯಾವುದೇ ಇರಬಹುದು, ಅವರ ಮೊದಲ ಪ್ರಿಸ್ಕ್ರಿಪ್ಷನ್ ರೋಗಿ ತನ್ನ ರೂಮ್ ಅನ್ನು ಮತ್ತು ಮನೆಯನ್ನು ಶಿಸ್ತಿನಿಂದ ಸಂಯೋ ಜಿಸುವುದು. ಮನೆಯನ್ನು ಸರಿಯಾಗಿ ಜೋಡಿಸಿದ ಫೋಟೋ ತೋರಿಸಿದ ಮೇಲೆಯೇ ಮುಂದಿನ ಮಾತುಕತೆ. ಅವರೇ ಹೇಳುವ ಪ್ರಕಾರ ಮನೆಯನ್ನು ನಾವು ಸರಿಯಾಗಿ ಜೋಡಿಸುತ್ತ ಹೋದಂತೆಲ್ಲ ಮನಸ್ಸು ಕೂಡ ಸರಿಯಾಗುತ್ತ ಹೋಗುತ್ತದೆ.

ನಮ್ಮ ಮನಸ್ಸು ಮತ್ತು ಮೂಡ್‌ಗೆ ನೇರವಾಗಿ ಈ ನಮ್ಮ ಸುತ್ತಲಿನ ಎಲ್ಲ ವಸ್ತುಗಳೂ ಕಾರಣವಾಗಿರುತ್ತವೆ. ನಮ್ಮ ರೂಮ, ನಾವು ಕೆಲಸ ಮಾಡಲು ಕೂರುವ ಮೇಜು, ಮಲಗುವ ಹಾಸಿಗೆ, ಸ್ನಾನಗ್ರಹ, ಅಡುಗೆ ಮನೆ, ದೇವರ ಮನೆ ಇವೆಲ್ಲ ಶಿಸ್ತುಬದ್ಧವಾಗಿದ್ದರೆ ಅದೆಲ್ಲದರ ಜತೆ ಬಹು ಸಮಯ ವ್ಯವಹರಿಸುವ ನಮ್ಮ ಮನಸ್ಸು ಕೂಡ ಅಷ್ಟೇ ವ್ಯವಸ್ಥಿತವಾಗುತ್ತ ಹೋಗುತ್ತದೆ. ನಮ್ಮ ಸುತ್ತಲಿನ ವಸ್ತುಗಳನ್ನು ಸರಿಯಾಗಿ, ಶಿಸ್ತಿನಿಂದ ಇಟ್ಟುಕೊಳ್ಳುವುದರ ಮೂಲಕ ನಮ್ಮ ಆ ವಸ್ತುಗಳ ಜತೆಗಿನ ಅನುಭವ ಕೂಡ ಶಿಸ್ತುಗೊಳ್ಳುತ್ತ ಹೋಗುತ್ತದೆ. ಈ ಮೂಲಕ ಮಾನಸಿಕವಾಗಿ ನಾವು ನಮಗರಿವಿಲ್ಲದಂತೆಯೇ ಶಾಂತಿಯನ್ನು ಹೊಂದುತ್ತೇವೆ. ನಾವು ಏನನ್ನು ಅನುಭವಿಸುತ್ತೇವೆಯೋ ಅದೇ ನಾವಾಗುತ್ತೇವೆ. ಆ ಕಾರಣದಿಂದ ನಮ್ಮ ಅನುಭವಗಳನ್ನು ಹಸನಾಗಿಸುವ ಶಿಸ್ತನ್ನು ರೂಪಿಸಿಕೊಳ್ಳುವುದು ಮುಖ್ಯ ವಾಗುತ್ತದೆ.

ಮನೆಯನ್ನು ಶಿಸ್ತಿನಿಂದ ಇಟ್ಟುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೆ ಒಮ್ಮೆ ವ್ಯವಸ್ಥಿತವಾಗಿಸಿಕೊಂಡರೆ
ಮತ್ತು ರೂಢಿಸಿಕೊಂಡರೆ ಅದೊಂದು ಸುಸ್ತಾಗಿಸುವ ಕೆಲಸ ಎಂದೆನಿಸುವುದಿಲ್ಲ. ಹೇಗೆ ಮನೆಯನ್ನು ಶಿಸ್ತಾಗಿರಿಸಿ ಕೊಳ್ಳುವುದು ಎನ್ನುವುದೇ ಹಲವರ ಪ್ರಶ್ನೆ. ಆ ನಿಟ್ಟಿನಲ್ಲಿ ಕೆಲವು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನೀವು ಒಮ್ಮೆಲೇ ಇಡೀ ಮನೆಯನ್ನು ಶಿಸ್ತುಗೊಳಿಸುತ್ತೇನೆ ಎಂದು ಹೊರಟರೆ ಅದು ಅಷ್ಟು ಸುಲಭದಲ್ಲಿ ಸಾಧ್ಯ ವಾಗುವುದಿಲ್ಲ. ಹಾಗೆ ಹೊರಟಾಗ ಮನೆ ಇನ್ನಷ್ಟು ಚೆಪಿಲ್ಲಿಯಾಗುವ ಸಾಧ್ಯತೆಯೇ ಹೆಚ್ಚು. ಇದನ್ನು ಹಂತಹಂತ ವಾಗಿ ಮೊದಲು ಸಾಧಿಸಬೇಕಾಗುತ್ತದೆ. ಅದೊಂದು ಚಿಕ್ಕ ಪ್ರಾಜೆಕ್ಟ್. ಶಿಸ್ತುಗೊಳಿಸುವ ಮೊದಲ ಹಂತದಲ್ಲಿ ನೀವು ಅತಿಯಾಗಿ ಬಳಸುವ ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ಆ ಚಿಕ್ಕ ಜಾಗವನ್ನು ಮೊದಲು ಸರಿಪಡಿಸಿಕೊಳ್ಳಿ. ಬೇಡದ ವಸ್ತುಗಳನ್ನು ಮರುವಿಚಾರ ಮಾಡದೇ ಎಸೆದುಬಿಡಿ. ಮುಂದೊಂದು ದಿನ ಬೇಕಾಗಬಹುದು ಎನ್ನುವ ವಸ್ತು ಹೆಚ್ಚಾಗಿ ಯಾವತ್ತೂ ಬೇಕಾಗುವುದೇ ಇಲ್ಲ.

ನಿಮ್ಮ ಮೇಜಿರಲಿ ಅಥವಾ ಕೋಣೆಯಿರಲಿ, ಹೆಚ್ಚು ಜಾಗ ಖಾಲಿ ಇದ್ದಷ್ಟು ಆ ಜಾಗ ಮನಸ್ಸಿಗೆ ಹತ್ತಿರವಾಗುತ್ತದೆ
ಮತ್ತು ಇಷ್ಟವಾಗುತ್ತದೆ. ಹೀಗೆ ಸಂಯೋಜಿಸುವಾಗ ವಸ್ತುವನ್ನು ನಿಮ್ಮ ಕೈಗೆತ್ತಿಕೊಳ್ಳಿ, ಅದು ನಿಮಗೆ ಸಂತೋಷ ವನ್ನು ನೀಡುತ್ತದೆಯೇ ಅಥವಾ ಇಲ್ಲವೇ ಎನ್ನುವುದನ್ನು ಒಂದು ಕ್ಷಣ ಕಣ್ಣು ಮುಚ್ಚಿ ವಿಚಾರ ಮಾಡಿ. ಸಂತೋಷ ಕೊಡುತ್ತಿದ್ದರೆ ಮಾತ್ರ ಇಟ್ಟುಕೊಳ್ಳಿ. ಇಲ್ಲದಿದ್ದರೆ ಎರಡು ಮನಸ್ಸು ಬೇಡ, ಸೀದಾ ಎಸೆದುಬಿಡಿ. ನೀವು ಇಟ್ಟು ಕೊಳ್ಳುವ ವಸ್ತು ನಿಮ್ಮ ಜೀವನದಲ್ಲಿ ಒಂದು ವ್ಯಾಲ್ಯೂ ಹೊಂದಿರಬೇಕು. ಇದೊಂದು ವ್ಯಾವಹಾರಿಕ ಪ್ರಶ್ನೋತ್ತರ. ಹಳೆಯ ಬಾಕ್ಸ್‌ಗಳು, ಪ್ಲಾಸ್ಟಿಕ್ ಬ್ಯಾಗ್‌ಗಳು, ರದ್ದಿ ಪೇಪರ್‌ಗಳು, ಬರೆಯದ ಪೆನ್ನುಗಳು, ಬಳಸದ ಮೊಬೈಲ್ ಚಾರ್ಜರ್‌ಗಳು ಇವೆಲ್ಲ ನಿಮ್ಮ ಅಮೂಲ್ಯ ಜಾಗವಾದ ಮನೆಯಲ್ಲಿ ಇರಲು ಯೋಗ್ಯವೇ ಎಂದು ಪ್ರಶ್ನಿಸಿಕೊಳ್ಳಿ. ಮುಂದಿನ ಒಂದು ತಿಂಗಳು ಒಂದು ವಸ್ತುವನ್ನು ನೀವು ಬಳಸುವುದಿಲ್ಲ ಎಂದೆನಿಸಿದರೆ ಆ ವಸ್ತು ಬೇಡವೆಂದೇ ಅರ್ಥ. ಕೆಲವು ಸೀಸನ್ ವಸ್ತುಗಳಾದ ಛತ್ರಿ, ರೈನ್ ಕೋಟ್, ಸ್ವೆಟರ್ ಮೊದಲಾದವುಗಳನ್ನು ಶಿಸ್ತಾಗಿ ಮಡಚಿ ಅಟ್ಟಕ್ಕೇರಿಸಿ. ಅದಕ್ಕಿಂತ ಮೊದಲು ಅಟ್ಟದಲ್ಲಿರುವ ಹಳೆಯ ಒಡೆದ ಹೆಲ್ಮೆಟ್, ಟಿವಿ ಕವರ್, ವಯರ್, ಹಳೆಯ ಬ್ಯಾಟರಿ ಸೆಲ್‌ಗಳು, ಧೂಳು ಇವನ್ನೆಲ್ಲ ಮನೆಯಿಂದಾಚೆ ಅಟ್ಟಿಬಿಡಿ.

ಬೇಡದ ವಿಚಾರ ಮತ್ತು ಬೇಡದ ವಸ್ತು ಎರಡೂ ಒಂದೇ. ಹೀಗೆ ಎಸೆಯುವಾಗ ಕೆಲವೊಂದು ವಸ್ತುಗಳ ಅವಶ್ಯಕತೆ ಯಿಲ್ಲದಿದ್ದರೂ ಹಲವು ಭಾವನಾತ್ಮಕ ಕಾರಣದಿಂದ ಎಸೆಯಲು ಮನಸ್ಸು ಬರುವುದಿಲ್ಲ. ಮಕ್ಕಳು ಚಿಕ್ಕಂದಿನಲ್ಲಿ ರುವಾಗ ಬಳಸಿದ ಬಟ್ಟೆಗಳು, ಬಿಡಿಸಿದ ಚಿತ್ರಗಳು, ಪ್ರೀತಿಯಿಂದ ಕೊಟ್ಟ ಗಿಫ್ಟ್‌ ಗಳು ಇವೆಲ್ಲ ವಸ್ತುಗಳನ್ನು ಎಸೆಯುವುದು ಅಷ್ಟು ಸುಲಭವಲ್ಲ. ಇಂಥ ಸಮಯದಲ್ಲಿ ಒಂದೋ ಎರಡೋ ವಸ್ತುಗಳನ್ನು ಇಟ್ಟುಕೊಂಡು ಉಳಿದವುಗಳಿಗೆ ಕಸದ ಬುಟ್ಟಿಯ ದಾರಿ ತೋರಿಸುವುದು ಉತ್ತಮ.

ವ್ಯರ್ಥ ವಸ್ತುಗಳನ್ನು ಮನೆಯಿಂದ ಸಾಗಹಾಕಿದಂತೆಲ್ಲ ಮನಸ್ಸು ಹಗುರವಾಗುವುದನ್ನು ಗ್ರಹಿಸಿ. ಮನೆಯಲ್ಲಿ ಪ್ರತಿಯೊಂದು ವಸ್ತುವಿಗೆ ಅದರದೇ ಆದ ಒಂದು ಜಾಗವನ್ನು ನಿರ್ಧರಿಸಿ. ಆ ವಸ್ತು ಅದೇ ಜಾಗದಲ್ಲಿರಬೇಕು, ಅದೇ ಅದರ ಮನೆ. ನೀವು ಯುಟ್ಯೂಬ್‌ನಲ್ಲಿ declutter house ಎಂದು ಹುಡುಕಿದರೆ ಸಾವಿರಾರು ವಿಡಿಯೋಗಳು ಎದುರಿಗೆ ಬಂದು ನಿಲ್ಲುತ್ತವೆ. ಸುಮ್ಮನೆ ಒಂದಿಷ್ಟು ವಿಡಿಯೋಗಳನ್ನು ನೋಡಿ.

‘”Marie Kondo’ ಎಂದು ಹುಡುಕಿದರೆ ಹತ್ತಾರು ವಿಧಾನಗಳು, ಅದರಲ್ಲಿಯೂ ಬಟ್ಟೆಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎನ್ನುವ ವಿಡಿಯೋ ಸಿಗುತ್ತದೆ. ಆಕೆ ಮನೆ ಶಿಸ್ತುಗೊಳಿಸುವ ವಿಷಯದ ಮೇಲೆ ಪುಸ್ತಕ ಬರೆದ, ಟಿವಿ ಕಾರ್ಯಕ್ರಮ ಗಳನ್ನು ನಡೆಸಿಕೊಡುವ ಸುಪ್ರಸಿದ್ಧ ಜಪಾನಿ ಮಹಿಳೆ. ಆಕೆಯ ಮನೆ ಸಂಯೋಜಿಸುವ ಪದ್ಧತಿ KonMari Method ಎಂದೇ ಅಮೆರಿಕದಲ್ಲಿ ಜನಜನಿತ.

ನಿಮಗೆ ಸರಿಹೊಂದುವ ಯಾವುದಾದರೂ ಒಂದು ರೀತಿಯನ್ನು ಆಯ್ದುಕೊಂಡು ಪಾಲಿಸಿ. ಕೆಲವರು ಎಷ್ಟೇ ಪ್ರಯತ್ನಪಟ್ಟರೂ ಒಮ್ಮೆ ನೀಟ್ ಮಾಡಿಕೊಂಡ ಮನೆಯನ್ನು ಹಾಗೆಯೇ ಶಿಸ್ತಿನಿಂದ ಇಟ್ಟುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಅದಕ್ಕೆ ನೇರ ಕಾರಣ Over Possession (ಅವಶ್ಯಕತೆಗಿಂತ ಹೆಚ್ಚಿಗೆ ವಸ್ತುಗಳನ್ನು ಹೊಂದಿರು ವುದು) ಮತ್ತು Hyper Consumerism (ಕೊಳ್ಳುಬಾಕತನ). ಮನುಷ್ಯನ ಮನಸ್ಸನ್ನು ಇಲಿಯ ಮನಸ್ಸಿಗೆ ಹಲವಾರು ಕಡೆ ಹೋಲಿಸಲಾಗುತ್ತದೆ. ಇಲಿ ಹೇಗೆ ಬೇಳೆ ಕಾಳುಗಳನ್ನು ಶೇಖರಿಸುತ್ತದೆಯೋ ಹಾಗೆಯೇ ನಾವು ಬಹುತೇಕರು. ಇದನ್ನು Hoarding Disorder ಎಂದು ಕರೆಯಲಾಗುತ್ತದೆ. ಡಿಸಾರ್ಡರ್ ಎಂದಾಕ್ಷಣ ಹುಚ್ಚು ಎಂದು ಪರಿಭಾವಿಸ ಬೇಕಿಲ್ಲ. ಸಿಕ್ಕಸಿಕ್ಕ ದ್ದನ್ನೆಲ್ಲ ಶೇಖರಿಸುವ ಈ ಗುಣ ತೀರಾ ಸಾಮಾನ್ಯ. ಕೆಲವರ ಮನೆಯಲ್ಲಿ ಕನಿಷ್ಠ ಹತ್ತಿಪ್ಪತ್ತು ಸಾವಿರ ಸಾಮಾನುಗಳಿರುತ್ತವೆ.

ಹಳೆಯ ಸಾಮಾನುಗಳು, ಹಳೆಯ ಪಾತ್ರೆ, ತುಕ್ಕು ಹಿಡಿದು ಬಳಸದ ಹೋಳಿಗೆ ಮಷಿನ್, ಬಾರ್ ಕಿತ್ತುಹೋದ ಚಪ್ಪಲಿ ಗಳು, ನೂರೆಂಟು ವೈರ್‌ಗಳು, ಹಳೆಯ ಪತ್ರಗಳು ಹೀಗೆ ಪಟ್ಟಿ ದೊಡ್ಡದು.. ಅದೆಷ್ಟೋ ವಸ್ತುಗಳು ಸುತರಾಂ ಜೀವಮಾನವಿಡೀ ಬಳಸದೇ ಇರುವ ವಸ್ತುಗಳೇ. ಆದರೂ ಅದನ್ನು ನಾವು ಎಸೆದಿರುವುದಿಲ್ಲ. ಮುಂದೊಮ್ಮೆ ಬಳಸುವ ಸಾಧ್ಯತೆಯೇ ಇಲ್ಲದ ವಸ್ತುವನ್ನು ಕೂಡ ಎಸೆಯದೇ ಹಾಗೆಯೇ ಇಟ್ಟುಕೊಂಡಿರುತ್ತೇವೆ.

ಇನ್ನು Hyper Consumerism- ಕೊಳ್ಳುಬಾಕತನ. ಇದನ್ನು ಕೆಲವು ಮನಶಾಸಜ್ಞರಂತೂ ಒಂದು ರೋಗವೆಂದೇ ಕರೆಯುತ್ತಾರೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈ ರೋಗ ಸ್ವಲ್ಪ ಜಾಸ್ತಿಯೇ. ಕಾರಣ ಇಲ್ಲ ಸಾಮಾನ್ಯ ಮನುಷ್ಯನ ಖರೀದಿಸುವ ತಾಕತ್ತು ಜಾಸ್ತಿ. ಸಿಕ್ಕಿದ್ದನ್ನೆಲ್ಲ ಖರೀದಿಸಿ ಮನೆಗೆ ತರುವುದು ಈ ರೋಗದ ಲಕ್ಷಣ. ಅಂಗಡಿಯಲ್ಲಿ ಕಂಡಾಕ್ಷಣ, ಖರೀದಿಸಲು ಹಣವಿರುವ ಏಕೈಕ ಕಾರಣದಿಂದ ಹಿಂದೆ ಮುಂದೆ ನೋಡದೆ ಎತ್ತಿಕೊಂಡು ಬರುವುದು. ಈಗೀಗ ನಮ್ಮ ದೇಶ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ಹಲವು ದೇಶಗಳಲ್ಲಿ ಕೂಡ ಜನರಲ್ಲಿ ಈ ರೋಗ ಲಕ್ಷಣಗಳು
ತೀವ್ರವಾಗಿ ಹರಡುತ್ತಿವೆ. ಈಗಂತೂ ವಸ್ತುಗಳನ್ನು ಖರೀದಿಸಲು ಅಂಗಡಿಗೆ ಕೂಡ ಹೋಗಬೇಕೆಂದಿಲ್ಲ. ಸುಮ್ಮನೆ
ಆನ್‌ಲೈನ್‌ನ ಏನು ಬೇಕೋ ಅದನ್ನು ಖರೀದಿಸುವ ಸಾಧ್ಯತೆಯಿರುವುದರಿಂದ ವಸ್ತು ಬೇಕೋ ಬೇಡವೋ ಎನ್ನುವ
ವಿಚಾರ ಕೂಡ ಸರಿಯಾಗಿ ಮಾಡದೇ ಖರೀದಿಸಿಬಿಡುತ್ತೇವೆ.

ಅದರಲ್ಲಿಯೂ ನೀವು ಕೊಳ್ಳುಬಾಕತನಕ್ಕೆ ಒಳಗಾದವರಾದರೆ ಬೇಕೋ ಬೇಡವೋ ಎಂದು ವಿಚಾರ ಮಾಡಿದಾಗಲೆಲ್ಲ ಬೇಕು ಎಂದೇ ಅನಿಸುತ್ತಾ ಹೋಗುತ್ತದೆ. ಬೇಡದಿದ್ದರೂ, ನೂರೆಂಟು ಆಫರ್‌ಗಳು ಖರೀದಿಸಲು ಪ್ರೇರೇಪಿಸುತ್ತವೆ.
ಒಂದು ವಸ್ತುವನ್ನು ಖರೀದಿಸುವ ಮೊದಲು, ನೀವು ಎಸೆಯುವ ಮೊದಲು ಕೇಳಿಕೊಳ್ಳುವ ಪ್ರಶ್ನೆಯನ್ನೇ ಕೇಳಿ ಕೊಳ್ಳಬೇಕು. ಮನೆಯಲ್ಲಿ ಆ ವಸ್ತುವನ್ನು ಎಲ್ಲಿಡಬೇಕೆಂದು ಮೊದಲೇ ವಿಚಾರ ಮಾಡಿ ಆಮೇಲೆ ಖರೀದಿಸಬೇಕು. ಮನೆಗೆ ತರುವ ಪ್ರತಿಯೊಂದು ವಸ್ತುವೂ ನಿಮ್ಮಿಷ್ಟದ ಜಾಗವನ್ನು ತುಂಬುತ್ತದೆ ಎಂದೇ ಅರ್ಥ. ಒಂದು ವಸ್ತು ನಿಮ್ಮ ಜೀವನದ ಭಾಗವಾಗುವುದಕ್ಕೆ ಒಪ್ಪಿಕೊಳ್ಳುವ ಮೊದಲು ಅದರ ಅವಶ್ಯಕತೆಯನ್ನು ಹತ್ತು ಬಾರಿ ಪ್ರಶ್ನಿಸಿಕೊಳ್ಳಬೇಕು. ಮನೆಯೆನ್ನುವುದು ಜೀವನದ ಅತಿಮುಖ್ಯ ಭಾಗ.

ಅಲ್ಲಿ ಸಲ್ಲದ ವಸ್ತುಗಳಿಗೆ ಜಾಗವಿಲ್ಲ ಎನ್ನುವ ವಿಚಾರ ಅಂಗಡಿಗೆ ಹೋದಾಗ, ಆನ್‌ಲೈನ್‌ನಲ್ಲಿ ಜಾಲಾಡುವಾಗ ಸದಾ ನೆನಪಾಗುತ್ತಲಿರಬೇಕು. ಜೀವನದ ಸಾರ್ಥಕತೆ ನಾವು ಎಷ್ಟು ವಸ್ತುಗಳನ್ನು ಖರೀದಿಸಿದ್ದೇವೆ, ಗಳಿಸಿದ್ದೇವೆ ಎನ್ನುವುದರ ಮೇಲೆ ನಿರ್ಧರಿತವಾಗುವುದಿಲ್ಲ. ಮನೆ ವಾಸಸ್ಥಾನವೇ ಹೊರತು ಗೋದಾಮೂ ಅಲ್ಲ, ವಸ್ತು ಸಂಗ್ರಹಾಲಯವೂ ಅಲ್ಲ. ಸುಮ್ಮನೆ ‘ಹೋಂ ಸ್ವೀಟ್ ಹೋಮ್’, ‘ಹ್ಯಾಪಿ ಹೋಮ್’ ಎಂದು ಬೋರ್ಡ್ ಹಾಕಿ ಕೊಳ್ಳುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ನಿಮ್ಮ ಮನೆ ಹಿತವಾಗಿರಬೇಕೆಂದರೆ ಒಂದು ಗಟ್ಟಿ ಮನಸ್ಸು ಮಾಡಲೇಬೇಕು.

ಒಮ್ಮೆ ಬೇಡದ ವಸ್ತುಗಳನ್ನು ಎಸೆದ ನಂತರ ಮನೆಯನ್ನು ಚೆಂದವಾಗಿಟ್ಟುಕೊಳ್ಳುವುದು ಒಂದು ನಿರಂತರ ತಪಸ್ಸಿನಂತೆ. ಆ ತಪಸ್ಸಿನಿಂದ ಮಾತ್ರ ಮನೆ ಮಂತ್ರಾಲಯವಾಗುತ್ತದೆ, ಅಲ್ಲಿನ ಮನಸ್ಸುಗಳು ದೇವಾಲಯ ವಾಗುತ್ತವೆ. Have a good life ahead.

ಇದನ್ನೂ ಓದಿ: Shishir Hegde Column: ಇಲ್ಲ, ಬೇಡ, No ಎಂದು ಹೇಳಲು ಹಿಂಜರಿಯಬಾರದು !