Friday, 13th December 2024

Shishir Hegde Column: ಸೃಷ್ಟಿ ವ್ಯಾಮೋಹವನ್ನು ಮೀರಿದವರು ಈ ಲುಪ್ತಲೇಖಕರು

ಶಿಶಿರಕಾಲ

ಶಿಶಿರ್‌ ಹೆಗಡೆ

ಹೊರ ಪ್ರಪಂಚಕ್ಕೆ ಪರಿಚಯವೇ ಇಲ್ಲದ ‘ಲುಪ್ತಲೇಖಕರು’ ಎಂಬ ವೃತ್ತಿಪರ ಬರಹಗಾರರನ್ನು ಬಾಡಿಗೆಗೆ ಪಡೆಯಬಹುದು. ಅವರು ನಿಮಗಾಗಿ ಬರೆದುಕೊಡುತ್ತಾರೆ. ನಂತರದಲ್ಲಿ ನಿಮ್ಮ ಹೆಸರಿನಲ್ಲಿ ಆ ಪುಸ್ತಕವನ್ನು ಪ್ರಕಟಿಸಬಹುದು. ಅವರು ಎಲ್ಲ ಭಾಷೆಯಲ್ಲೂ ಇದ್ದಾರೆ, ಕನ್ನಡದಲ್ಲಿಯೂ. ಅವರು ಪರಕಾಯ ಪ್ರವೇಶ ಮಾಡಿ ಬರೆಯಬಲ್ಲರು. ಬರವಣಿಗೆಯ ಶೈಲಿಯನ್ನೂ ಅನುಕರಿಸಬಲ್ಲರು.

ಓದುಗರ ಪ್ರತಿಕ್ರಿಯೆಗಳನ್ನು ಓದುವುದು ಅಂಕಣಕಾರನಿಗೆ ಅತ್ಯಂತ ಖುಷಿಕೊಡುವ ಕೆಲಸ. ಲೇಖನಗಳು ಓದುಗರನ್ನು ಉದ್ದೇಶಿಸಿಯೇ ರಚಿಸಿ
ದಂಥವಾಗಿರುವುದರಿಂದ, ವಿಷಯ ಹೇಗೆ ಸ್ವೀಕೃತವಾಗಿದೆ? ಹೇಳಲು ಹೊರಟದ್ದು ಬಯಸಿದಂತೆಯೇ ತಲುಪಿದೆಯೇ ಅಥವಾ ಅಪಾರ್ಥ ವಾಗಿದೆಯೇ? ಇವೆಲ್ಲವನ್ನು ತಿಳಿಯುವುದು ಅಂಕಣಕಾರನಾದವನ ಅವಶ್ಯಕತೆ. ಮಾಡಿದ ಸರಿ- ತಪ್ಪು ಎಲ್ಲವೂ ತಿಳಿಯುವುದೇ ಓದುಗರ ಇಮೇಲ್‌ಗಳಿಂದ.

ಇಲ್ಲದಿದ್ದರೆ ಪ್ರಪಂಚದ ಅದೆಲ್ಲಿಯೋ ಮೂಲೆಯಲ್ಲಿ ಕೂತು ಬರೆಯುವುದು ಒಮ್ಮುಖ ಸಂವಹನದಂತೆ, ಕ್ರಮೇಣ ಎದುರಿನ ಖಾಲಿ ಗೋಡೆಗೆ ಮಾತನಾಡಿದಂತೆ ಎಂದೆನಿಸಲು ಶುರುವಾಗಿಬಿಡಬಹುದು. ಒಬ್ಬ ಅಂಕಣಕಾರನಿಗೆ ಪತ್ರಿಕೆಯ ಓದುಗರ ಪ್ರತಿಕ್ರಿಯೆಯು ತಂದಿಡುವ ಸಾರ್ಥಕ್ಯ ಅವನಿಗಷ್ಟೇ ನಿಲುಕುವಂಥದ್ದು. ಇದೊಂದು ಕೊಂಡಿ ಬಿಟ್ಟರೆ ಓದುಗ ಮತ್ತು ಅಂಕಣಕಾರನ ನಡುವಿನ ಸಂಬಂಧ ಬಹುತೇಕ ಅವ್ಯಕ್ತ, ಏಕಮುಖ. ಬರವಣಿಗೆಯ ನಿರಂತರತೆಯಿಂದ ಓದುಗರಿಗೆ ಅಂಕಣಕಾರ ಪರಿಚಯವಾಗುತ್ತ, ಹತ್ತಿರವಾಗುತ್ತ ಹೋಗುತ್ತಾನೆ. ಇದನ್ನು ಓದುಗನಾಗಿ ಅನುಭವಿಸಿದ್ದೇನೆ. ಅಲ್ಲಿ ಲೇಖನ ಮತ್ತು ಪ್ರತಿಕ್ರಿಯೆಯ ಚಂದದ ಸಂಭಾಷಣೆ, ಅಂಕಣಕಾರ ಮತ್ತು ಓದುಗರ ಸ್ನೇಹ ಏರ್ಪಡುತ್ತದೆ. ಅದು
ಅಂಕಣಕಾರನ ಸಂಪಾದನೆ.

ಕೆಲವು ಓದುಗಮಿತ್ರರ ಪ್ರತಿಕ್ರಿಯೆ ವಿಶೇಷ. ಅವರದು ಕೇವಲ ಚೆನ್ನಾಗಿದೆ, ಸರಿಯಿಲ್ಲ ಎಂದಷ್ಟೇ ಅಭಿಪ್ರಾಯ ಮುಗಿಯುವುದಿಲ್ಲ. ಜತೆಯಂದಿಷ್ಟು ಪೂರಕ ವಿಷಯಗಳನ್ನು ಹಂಚಿಕೊಂಡಿರುತ್ತಾರೆ. ಇವು ಬರೆದ ವಿಷಯದ ಮೇಲೆ ಇನ್ನಷ್ಟು ಬೆಳಕು ಚೆಲ್ಲುತ್ತವೆ, ಹೊಸತೊಂದು ಆಯಾಮ
ನೀಡುತ್ತವೆ. ‘ಈ ವಿಷಯಗಳು ಮೊದಲು ಗೊತ್ತೇ ಇರಲಿಲ್ಲವಲ್ಲ, ಗೊತ್ತಿದ್ದರೆ ಲೇಖನವನ್ನು ಇನ್ನಷ್ಟು ಚಂದವಾಗಿಸಬಹುದಿತ್ತಲ್ಲ, ಇದೊಂದು ವಿಷಯವೇ ಬಿಟ್ಟು ಹೋಯಿತಲ್ಲ’ ಎಂದು ಪಶ್ಚಾತ್ತಾಪವಾಗುವುದು ಆಗ.

ಆದರೆ ಲೇಖನ ಬರೆದಾದ ಮೇಲೆ ಮುಗಿಯಿತು. ಅಂಕಣ ಬರಹದಲ್ಲಿ ಬಿಟ್ಟು ಹೋದದ್ದಕ್ಕೆ ಮತ್ತೆ ಅವಕಾಶವಿಲ್ಲ. ಕೆಲವೊಮ್ಮೆ ಇನ್ನೊಂದು
ಲೇಖನವೇ ಆಗುವಷ್ಟು ಪೂರಕ ಮಾಹಿತಿಗಳು ಅಭಿಪ್ರಾಯವಾಗಿ ಮುಟ್ಟುತ್ತವೆ. ಅದೇ ವಿಷಯ ಎತ್ತಿ ಹೇಳಲು ಹೊರಟರೆ ಪುನರಾವರ್ತನೆ ಯೆನಿಸುತ್ತದೆ. ಅದು ಅಂಕಣಕಾರನಿಗೆ ಹಿಮ್ಮುಖ ಕಲಿಕೆ. ಅಂಥವರ ಪ್ರತಿಕ್ರಿಯೆಗೆ ಅಂಕಣಕಾರನೇ ಕಾಯುತ್ತಾನೆ. ಅವರೂ ಪ್ರತಿ ವಾರ ನಿರಾಶೆಗೊಳಿಸುವುದಿಲ್ಲ.

ಬರೆದ ಲೇಖನದ ಸ್ವಮೌಲ್ಯಮಾಪನಕ್ಕೆ ಇದೆಲ್ಲ ಅತ್ಯಂತ ಸಹಕಾರಿ. ಕೆಲವೊಮ್ಮೆ ಬೇಕಂತಲೇ ಒಂದಿಷ್ಟು ವಿಷಯವನ್ನು ಅಂಕಣದಲ್ಲಿ ಹೇಳಿರುವುದಿಲ್ಲ. ಅವುಗಳು ಪ್ರತಿಕ್ರಿಯೆಯಾಗಿ ಬಂದಾಗ ಲೇಖನ ಓದುಗರನ್ನು ಯೋಚನೆಗೆ ಹತ್ತಿಸಿದೆ ಎಂದು ತೃಪ್ತಭಾವ ಮೂಡುತ್ತದೆ. ಲೇಖನದ ಉದ್ದೇಶ ಪೂರ್ಣಗೊಂಡ ಸಮಾಧಾನ ಅದು. ಲೇಖನ ಹೇಳುವುದಕ್ಕಿಂತ ಅದು ಹುಟ್ಟುಹಾಕಬೇಕಾದ ಜಿಜ್ಞಾಸೆ, ವಿಚಾರ
ಮಹತ್ವದ್ದು. ಅಂಥ ಲೇಖನಗಳು, ವಿಚಾರಗಳು ಮಾರನೆಯ ದಿನ ರದ್ದಿಯಾಗುವುದಿಲ್ಲ, ವೃದ್ಧಿಯಾಗುತ್ತವೆ.

ಆಸ್ಟ್ರೇಲಿಯಾದ ಓದುಗ ಮಿತ್ರರಾದ ಮಂಜು ಶೆಟ್ಟಿಯವರು ಈಗೆರಡು ವಾರದ ಹಿಂದೆ ಯುಟ್ಯೂಬ್ ವಿಡಿಯೋ ಲಿಂಕ್ ಒಂದನ್ನು ವಾಟ್ಸ್ಯಾಪ್ ಮಾಡಿದ್ದರು. ಆ ಲಿಂಕ್ ನೋಡುತ್ತಲೇ ಎರಡು ತಿಂಗಳ ಹಿಂದೆ ಬರೆದ ವಿಷಯಕ್ಕೆ ಸಂಬಂಧಿಸಿದ್ದು ಎಂಬ ಅಂದಾಜಾಯಿತು. ಮತ್ತೆ ಪುರಸೊತ್ತು ಮಾಡಿಕೊಂಡು ನೋಡಿದರಾಯ್ತು ಎಂದು ಬದಿಗಿಟ್ಟಿದ್ದೆ. ಮಂಜು ಎರಡು ದಿನ ಕಳೆದಾದ ನಂತರ ಫೋನ್ ಮಾಡಿ ‘ವಿಡಿಯೋ ನೋಡಿದಿರಾ’ ಎಂದು ಕೇಳಿದರು.

ನಾನು ಇಲ್ಲವೆಂದೆ. ನೋಡಿ ಮುಗಿಸಿ, ಹದಿನೈದು ನಿಮಿಷ ಬಿಟ್ಟು ಕರೆ ಮಾಡುತ್ತೇನೆ ಎಂದರು. ಸರಿ ಎಂದು ವಿಡಿಯೋ ನೋಡಿದೆ. ಆ ವಿಡಿಯೋ ನಾನಂದುಕೊಂಡಂತೆ ಬರೆದ ಲೇಖನದ ವಿಷಯವಷ್ಟೇ ಆಗಿರಲಿಲ್ಲ. ಇಡೀ ವಿಡಿಯೋ, ಅದರೊಳಗಿನ ವಿಚಾರ, ವಾಕ್ಯಗಳು ಎಲ್ಲವೂ ಯಥಾವತ್ತು ಲೇಖನದ್ದೇ ಆಗಿತ್ತು. ಮಂಜು ಕರೆಮಾಡಿದರು. ಅವರಿಗೆ ಇದೊಂದು ಅನ್ಯಾಯವೆಂದು ಕಾಡಿದಂತಿತ್ತು. ಲೇಖನವನ್ನೇ ವಿಡಿಯೋ ಮಾಡಿ ಕ್ರೆಡಿಟ್ ಕೊಡದಿರುವುದು ಕೃತಿಚೌರ್ಯ ಎಂಬ ಗಟ್ಟಿ ನಿಲುವು ಅವರ ಧ್ವನಿಯಲ್ಲಿತ್ತು. ಅವರು ನನ್ನಲ್ಲಿ ಕೋಪವನ್ನು ನಿರೀಕ್ಷಿಸಿದ್ದರೇನೋ. “ನಾನು ಬರೆದ ಲೇಖನ ಇನ್ನೊಬ್ಬರನ್ನು ವಿಡಿಯೋ ಮಾಡಿ ಹಂಚುವಂತೆ ಮಾಡಿದೆ.

ಅಷ್ಟು ಜನರಿಗೆ ವಿಷಯ ತಲುಪಿತಲ್ಲ. ಒಳ್ಳೆಯದೇ ಆಯಿತಲ್ಲ. ನನ್ನ ಉದ್ದೇಶವೂ ಅದೇ ಇತ್ತಲ್ಲ” ಎನ್ನುವ ಮಾತು ಅವರಿಗೆ ಸಹ್ಯವಾಗಲಿಲ್ಲ. ಹದಿನೈದು ನಿಮಿಷ ವಾದ-ಪ್ರತಿವಾದವಾಯಿತು. ನಂತರ ಕೊಸರುತ್ತಲೇ ಫೋನ್ ಕರೆ ಮುಗಿಸಿದರು. ಕೃತಿಚೌರ್ಯವನ್ನು ಗುರುತಿಸುವುದು ಸುಲಭವಲ್ಲ. ಬರೆದ ಲೇಖನ ಈ ರೀತಿ ವಿಡಿಯೋ ಆಗುವುದು, ಟಿವಿ ಚಾನಲ್ಲಿನವರು ಗಮನಿಸಿ ಕಾರ್ಯಕ್ರಮವನ್ನು ಮಾಡುವುದು ಇತ್ಯಾದಿ ಸಾಮಾನ್ಯ.

ಆಗೀಗ ಸೋಷಿಯಲ್ ಮೀಡಿಯಾದಲ್ಲಿ ಲೇಖನ ಅಥವಾ ವಿಷಯದ ತುಣುಕೊಂದು ಯಥಾವತ್ತಾಗಿ, ಹೆಸರಿಲ್ಲದೆ ಹರಿದಾಡುವುದು ಕೂಡ ಸಾಮಾನ್ಯ. ಅದನ್ನು ಕೃತಿಚೌರ್ಯ ಎನ್ನಲೂಬಹುದು ಅಥವಾ ಅದರಿಂದೇನೂ ಹಾನಿಯಿಲ್ಲ ಎಂದು ಸುಮ್ಮನಿದ್ದುಬಿಡಬಹುದು. ಅಥವಾ
ಇದು ಲೇಖನದ, ಬರಹದ ಪ್ರತಿಕ್ರಿಯೆ, ಫಲಿತಾಂಶ ಎಂದು ಖುಷಿಪಡಬಹುದು. ಅಸಲಿಗೆ ಬರೆಯುವ ಲೇಖನಗಳೂ ಹಾಗೆಯೇ. ಅವುಗಳನ್ನೂ ಲೇಖಕ ಇಲ್ಲಿಂದಲೇ- ಇಹದಿಂದಲೇ ಸಂಪಾದಿಸಿದ್ದು. ವಿಚಾರವೂ ಸಾಮಾಜಿಕ ಸಂಪಾದನೆಯೇ.

ಹಾಗೆ ನೋಡಿದರೆ, ನಾವು ಸೃಷ್ಟಿಸಿದ್ದೇವೆ ಎಂದುಕೊಳ್ಳುವ ಬಹುತೇಕ ವಿಷಯಗಳಲ್ಲಿ ನಮ್ಮದೆನ್ನುವುದು ಅಲ್ಪಪಾಲಷ್ಟೇ ಇರುತ್ತದೆ. ಅದು ಬರವಣಿಗೆಯೇ ಇರಬಹುದು ಅಥವಾ ನಮ್ಮಷ್ಟಕ್ಕೆ ನಾವೇ ಕಡಿದು ಗುಡ್ಡೆ ಹಾಕಿದ್ದೇವೆ ಎಂದುಕೊಂಡ ವಿಷಯವಿರಬಹುದು. ಒಟ್ಟಾರೆ ಹಾನಿ ಆದರೆ
ಅದು ಚೌರ್ಯ, ಆದರೆ ಹಾನಿಯ ವ್ಯಾಖ್ಯಾನ ವ್ಯಾಪ್ತಿ ಮಾತ್ರ ವೈಯಕ್ತಿಕ.

ಏನೋ ಒಂದನ್ನು ನಾವು ಸೃಷ್ಟಿಸಿದ್ದು ಎಂದಾದರೆ ಅದರ ಮೇಲೆ ಎಲ್ಲಿಲ್ಲದ ವ್ಯಾಮೋಹ ಅಂಟಿಕೊಳ್ಳುವುದು ಸಹಜ. ಅದನ್ನು ಐಕಿಯಾ ಎಫೆಕ್ಟ್ ((IKEA Effect) ಎನ್ನುತ್ತಾರೆ. ಐಕಿಯಾ ಸ್ವೀಡನ್ನಿನ ಪೀಠೋಪಕರಣ ಅಂಗಡಿ. ಬೆಂಗಳೂರಿನಲ್ಲಿಯೂ ಇವರದ್ದೊಂದು ಮಳಿಗೆ ಇದೆ. ನಿಮಗೆ ಗೊತ್ತಿರಬಹುದು, ಇಲ್ಲಿನ ವೈಶಿಷ್ಟ್ಯ ಏನೆಂದರೆ ಖರೀದಿಸುವ ಪೀಠೋಪಕರಣಗಳನ್ನು ತುಂಡುತುಂಡುಗಳಾಗಿ ರಟ್ಟಿನ ಬಾಕ್ಸಿನಲ್ಲಿ ಜೋಡಿಸಿಟ್ಟಿರು ತ್ತಾರೆ. ಅವುಗಳನ್ನು ಅಂಗಡಿಯಿಂದ ಮನೆಯವರೆಗೆ ಕಾರಿನಲ್ಲಿ ಸಾಗಿಸುವುದು ಸುಲಭ. ಬಾಕ್ಸ್‌ ಗಳನ್ನೂ ಮನೆಯೊಳಕ್ಕೆ ತಂದ ನಂತರ ಅವರು ಕೊಟ್ಟ ಸೂಚನೆಗಳನ್ನು ಪಾಲಿಸಿ ಒಂದಕ್ಕೊಂದು ಜೋಡಿಸಿಕೊಳ್ಳಬೇಕು. ಆಗ ಪೀಠೋಪಕರಣ ಸಿದ್ಧ. ಈ ರೀತಿ ನಾವೇ ಜೋಡಿಸುವುದರಿಂದ ಅಲ್ಲಿ ನಮ್ಮ ಶ್ರಮ ಆ ಪೀಠೋಪಕರಣದ ಜತೆ ಸೇರಿಕೊಳ್ಳುತ್ತದೆ. ಹಾಗಾಗಿ ಯಾವುದೊ ಅಜ್ಞಾತ ಬಡಗಿ ತಯಾರಿಸಿ ಮನೆಯಲ್ಲಿ ತಂದಿರಿಸಿದ ಟೀಪಾಯಿಗಿಂತ ಐಕಿಯಾ ಟೀಪಾಯಿ ಹೆಚ್ಚಿನ ಮೌಲ್ಯದ್ದೆನಿಸುತ್ತದೆ.

ಏಕೆಂದರೆ ಅದು ನಾವು ಶ್ರಮವಹಿಸಿ ಸೃಷ್ಟಿಸಿದ್ದು ಎಂಬ ಅವ್ಯಕ್ತ ಭಾವನೆ. ಈ ಸೃಷ್ಟಿವ್ಯಾಮೋಹವೇ ಐಕಿಯಾದ ಮಾರಾಟ ತಂತ್ರ. ಈ ಸೃಷ್ಟಿ ವ್ಯಾಮೋಹ ಕೆಲವು ಬರಹಗಾರರಲ್ಲಿ ಅತಿಯೆನಿಸುವಷ್ಟಿರುತ್ತದೆ. ಅಂಥವರು ಕೃತಿಚೌರ್ಯದ ವಿರುದ್ಧ ತೊಡೆತಟ್ಟಿ, ಕಾಲು ಕೆದರಿ ಹೊಡೆದಾಟಕ್ಕೇ ಇಳಿದುಬಿಡುತ್ತಾರೆ. ಆದರೆ ಇದೆಲ್ಲದಕ್ಕೆ ತೀರಾ ವ್ಯತಿರಿಕ್ತವಾಗಿ ನಿಲ್ಲುವವರೆಂದರೆ Ghost Writers. ಇವರು ಮರೆಯಲ್ಲಿದ್ದೇ ಬದುಕುವ ಬರಹಗಾರರು. ಎಂದಿಗೂ ತಮ್ಮ ಅಸಲಿ ಪರಿಚಯವನ್ನು ಹೊರಹಾಕದವರು. ಇವರು ‘ಲುಪ್ತಲೇಖಕರು’. ಲುಪ್ತ ಎಂದರೆ ಕಾಣದಾದ, ಮರೆಯಲ್ಲಿರುವ ಎಂಬರ್ಥ.

Ghost Writerಗೆ ಲುಪ್ತಲೇಖಕರು ಎಂಬ ಪರ್ಯಾಯ ಸೂಚಿಸಿದವರು ಶ್ರೀವತ್ಸ ಜೋಶಿಯವರು. ಲುಪ್ತಲೇಖಕರು ಎಂದಿಗೂ ತಮ್ಮ ಹೆಸರು, ಪರಿಚಯ, ಫೋಟೋ ಯಾವೊಂದನ್ನೂ ಬಹಿರಂಗಪಡಿಸುವುದಿಲ್ಲ. ಹೆಸರಿನ ಬದಲಿಗೆ ನಾಮಾಂಕಿತ ಬಳಸುವುದೇನೂ ಹೊಸತಲ್ಲ. 3-4 ನಾಮಾಂಕಿತ, ಹೆಸರಿನಡಿ ಬರೆದ ಲೇಖಕರು, ಬರಹಗಾರರು ನಮ್ಮಲ್ಲಿ ಸಾಕಷ್ಟಿzರೆ. ಕೆಲವೊಮ್ಮೆ ಇದು ಅವಶ್ಯವೆನಿಸುತ್ತದೆ. ಸಾಮಾನ್ಯವಾಗಿ ಒಬ್ಬ ಬರಹಗಾರನ ಮೆಚ್ಚಿನ ಶೈಲಿ ಓದುಗರಿಗೆ ಅಭ್ಯಾಸವಾಗಿರುತ್ತದೆ. ಆ ಶೈಲಿಗೆ ಭಿನ್ನವಾಗಿ ಬರೆಯುವ ಶಕ್ತಿ ಬರಹಗಾರನಲ್ಲಿರುತ್ತದೆ.

ಆದರೆ ಓದುಗರು ಇಂಥ ಬದಲಾವಣೆಯನ್ನು ಮೆಚ್ಚುವುದಿಲ್ಲ. ಬರಹಗಾರನಿಗೆ ಒಂದಕ್ಕಿಂತ ಹೆಚ್ಚಿನ ಭಿನ್ನಶೈಲಿ ಸಾಧ್ಯವಾದಲ್ಲಿ ಬೇರೆ ಹೆಸರಿನಡಿ ಯಲ್ಲಿ ಬರೆಯುವುದಿದೆ. ಆದರೆ ನಾನು ಹೇಳುತ್ತಿರುವುದು ನಾಮಾಂಕಿತವಿಟ್ಟು ಬರೆಯುವವರ ಬಗ್ಗೆ ಅಲ್ಲ. Ghost Writer- ಹೊರ ಪ್ರಪಂಚಕ್ಕೆ ಪರಿಚಯವೇ ಇಲ್ಲದ ವೃತ್ತಿಪರ ಬರಹಗಾರರ ಬಗ್ಗೆ. ‘ಲುಲೇ’- ‘ಲುಪ್ತಲೇಖಕರು’ ಎಂದರೆ ಕಸುಬಿ ಬರಹಗಾರರು. ಅವರನ್ನು ಬಾಡಿಗೆಗೆ ಪಡೆಯಬಹುದು. ಅವರು ನಿಮಗಾಗಿ ಬರೆದುಕೊಡುತ್ತಾರೆ. ನಂತರದಲ್ಲಿ ನಿಮ್ಮ ಹೆಸರಿನಲ್ಲಿ ಆ ಪುಸ್ತಕವನ್ನು ಪ್ರಕಟಿಸಬಹುದು. ಅವರು ಎಲ್ಲ ಭಾಷೆಯಲ್ಲೂ ಇzರೆ, ಕನ್ನಡದಲ್ಲಿಯೂ. ಅವರು ಪರಕಾಯ ಪ್ರವೇಶ ಮಾಡಿ ಬರೆಯಬಲ್ಲರು. ಬರವಣಿಗೆಯ ಶೈಲಿಯನ್ನೂ ಅನುಕರಿಸಬಲ್ಲರು. ಅವರು ಎಂದೂ ಅದನ್ನು ತಮ್ಮ ಸೃಷ್ಟಿಯೆಂದು ಕರೆದುಕೊಳ್ಳುವುದಿಲ್ಲ.

ಇದುವೇ ಒಡಂಬಡಿಕೆ. ಹಾಗಂತ ಇವರು ಕೇವಲ ಬಾಡಿಗೆ ಬರಹಗಾರೆಂಬ ಅಗ್ಗದವರಲ್ಲ. ನಿಜವಾಗಿಯೂ ಅದ್ಭುತವಾಗಿ ಬರೆಯಬಲ್ಲ
ಸಾಮರ್ಥ್ಯದವರು. ಅವರಿಗೆ ಬರೆಯುವುದು ವ್ಯಾವಹಾರಿಕ ಎಂಬುದಕ್ಕಿಂತ ಅದೊಂದು ಕೆಲಸ ಮಾತ್ರ. ಜನಪ್ರಿಯ ವ್ಯಕ್ತಿಗಳು ‘ಲುಲೇ’ಗಳನ್ನು ಬಳಸಿಕೊಳ್ಳುವುದು ಅಂದುಕೊಂಡದ್ದಕ್ಕಿಂತ ಸಾಮಾನ್ಯ. ಅದೆಷ್ಟೋ ಸಾಧಕರು ಆತ್ಮಚರಿತ್ರೆಯನ್ನು ಖುದ್ದು ವಾಕ್ಯ ಜೋಡಿಸಿ ಬರೆಯುವುದು
ತೀರಾ ಅಪರೂಪ. ಸಮಯ, ಭಾಷೆ ಎಲ್ಲವೂ ಸವಾಲು. ಬರವಣಿಗೆ ಬಲ್ಲವರನ್ನು ಬಿಟ್ಟರೆ ಉಳಿದವರ ಆತ್ಮಚರಿತ್ರೆಗಳನ್ನು ಬರೆದಿರುವುದು ‘ಲುಲೇ’ಗಳೇ ಆಗಿರುತ್ತಾರೆ. ಅದೆಷ್ಟೋ ಬಾರಿ ಇಂಥ ಆತ್ಮಕಥನಗಳಲ್ಲಿ ಈ ‘ಲುಲೇ’ಗಳ ಹೆಸರನ್ನು ಬಹಿರಂಗಪಡಿಸುವುದೂ ಇದೆ! ಉದಾಹರಣೆಗೆ ‘I Am Malala’ by Malala Yousafzai (with Christina Lamb), ‘Long Walk to Freedom’ by Nelson Mandela (with Richard Stengel), ‘Spare’ by Prince Harry (with J.R. Moehringer). ಇಲ್ಲಿ ‘with’ ಜತೆಯಲ್ಲಿರುವ ಹೆಸರು ಅದನ್ನು ಬರೆದವರದ್ದು. ಬರವಣಿಗೆ ಇವರದ್ದು- ವಿಚಾರ, ವಿಷಯ ಎಲ್ಲವೂ ಅವರದ್ದು.

ಓದುಗ ಮಾತ್ರ ಇದನ್ನು ಮೂಲವ್ಯಕ್ತಿಯ ಆತ್ಮಚರಿತ್ರೆ, ಆತನೇ ಹೇಳಿದ್ದು ಎಂದೇ ಓದಿಕೊಳ್ಳುವುದು. ಏಳನೇ ಶತಮಾನದ ಬಾಣಭಟ್ಟನ ‘ಹರ್ಷಚರಿತೆ’ಯೂ ಹಾಗೆಯೇ ಅಲ್ಲವೇ? ಬಾಣಭಟ್ಟ ಭಾರತದ ಹಳ್ಳಿಗಳ ಸ್ಥಿತಿಯನ್ನು ವಿವರಿಸುತ್ತಿದ್ದರೆ ಅದು ರಾಜ ಹರ್ಷವರ್ಧನನ ಧ್ವನಿಯಾಗಿಯೇ ಗ್ರಾಹ್ಯವಾಗುವುದು. ಮೊಘಲರ ಕಾಲದಲ್ಲಿ ಆಸ್ಥಾನ ಚರಿತ್ರಕಾರರಿದ್ದರಲ್ಲ, ‘ಅಕ್ಬರ್ ನಾಮಾ’ ಅವರಬ್ಬ ಬರೆದದ್ದು.
ಹೀಗೆ ಇತಿಹಾಸದಲ್ಲಿಯೂ ಬೇಕಾದಷ್ಟು ಉದಾಹರಣೆಗಳಿವೆ.

ಮಹಾತ್ಮ ಗಾಂಽಯವರ ಪರಮಾಪ್ತರಲ್ಲಿ ಒಬ್ಬರಾಗಿ ದ್ದವರು ಮಹದೇವ್ ದೇಸಾಯಿ. ಇವರು ಗಾಂಧೀಜಿಯ ಸಹಾಯಕರಾಗಿದ್ದರು. ಇವರು ಬರವಣಿಗೆಯಲ್ಲಿ ಎತ್ತಿದ ಕೈ. ಇವರು ಇಂಗ್ಲಿಷ್-ಗುಜರಾತಿ ಅನುವಾದಿತ ಕೃತಿಯೊಂದನ್ನು ಪ್ರಕಟಿಸುವುದು ಹೇಗೆ ಎಂದು ಗಾಂಽಯವರಲ್ಲಿ ಕೇಳಲು ಮೊದಲು ಬಂದದ್ದು. ನಂತರ ಗಾಂಽಜಿಯ ಜತೆಯಾದವರು, ಧ್ವನಿ ಮತ್ತು ಅಕ್ಷರವಾದವರು. ಅವರ ಇಂಗ್ಲಿಷ್, ಗುಜರಾತಿ ಮತ್ತು ಬೆಂಗಾಲಿ ಪ್ರಾವೀಣ್ಯ ಎಷ್ಟಿತ್ತೆಂದರೆ ಗಾಂಧೀಜಿಯ ಬಹುತೇಕ ಲೇಖನ, ಪುಸ್ತಕಗಳನ್ನು ಇವರೇ ಸಂಪಾದಿಸುತ್ತಿದ್ದರು.

ಇವರನ್ನು ‘ಗಾಂಧಿಯ ಸಾಕ್ರೆಟಿಸ್’ ಎಂದು ಕರೆಯುತ್ತಿದ್ದರು. ಗಾಂಧೀಜಿಗೆ ಬಹುಕಾಲ ಭಾಷಣ ಬರೆದುಕೊಡುತ್ತಿದ್ದುದು ಇವರೇ. ಅಲ್ಲದೆ ‘ಯಂಗ್
ಇಂಡಿಯಾ’ ಮತ್ತು ‘ಹರಿಜನ್’ ಪತ್ರಿಕೆಗಳಲ್ಲಿ ಗಾಂಧೀಜಿಗೆ ‘ಲುಲೇ’ಯಾಗಿ ದೇಸಾಯಿ ಬರೆಯುತ್ತಿದ್ದರು. ಇನ್ನು ನೆಹರುರವರಿಗೆ ಭಾಷಣ, ಲೇಖನ ಗಳನ್ನು ಬರೆದುಕೊಡುತ್ತಿದ್ದ ಹುಮಾಯುನ್ ಕಬೀರ್, The Discovery Of India ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಅಷ್ಟಾಗಿ ಯಾರಿಗೂ ಗೊತ್ತಿಲ್ಲ.

‘ಆಂಡ್ರೂ ಕ್ರೋಫ್ಟ್ಸ್’ ಎಂಬ ಬರಹಗಾರನಿದ್ದಾನೆ. ಈ ಪುಣ್ಯಾತ್ಮ ಸುಮಾರು ‌80 ಪುಸ್ತಕ ಬರೆದಿದ್ದಾನೆ. ಅದರಲ್ಲಿ ಎಷ್ಟೋ ಪುಸ್ತಕಗಳು ಜಾಗತಿಕ best sold ಪುಸ್ತಕಗಳು. ಅದರಲ್ಲಿ ಹಲವಾರು ಶ್ರೀಮಂತರ, ರಾಜಕಾರಣಿಗಳ ಆತ್ಮಕಥನಗಳೂ ಇವೆ. ಇನ್ನೊಂದಿಷ್ಟು ಜನಸಾಮಾನ್ಯರ
ರೋಚಕ ಕಥೆಯನ್ನು ಬರೆದು, ಅದು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ. ಪುಸ್ತಕದ ಮೇಲೆಲ್ಲಿಯೂ ಇವನ ಹೆಸರಿಲ್ಲ. ಒಮ್ಮೆಯಂತೂ ಶ್ರೀಮಂತ ಕುಟುಂಬವೊಂದರ ಸದಸ್ಯರು ಸತ್ತುಹೋದ ತಮ್ಮ ತಂದೆಯ ಆತ್ಮಕಥನವನ್ನು ಇವನ ಹತ್ತಿರ ಬರೆಸಿದ್ದರಂತೆ! ಈಗ ಅವನೇ ‘ಆತ್ಮಕಥನ’ ಬರೆದುಕೊಂಡಿದ್ದಾನೆ.

‘Confession of Ghost Writer’ ಎಂದು ಆ ಪುಸ್ತಕದ ಹೆಸರು. ಇದರಲ್ಲಿ ಇವೆಲ್ಲವನ್ನೂ ಹೇಳಿಕೊಂಡಿದ್ದಾನೆ. ಆ ಪುಸ್ತಕಗಳು ಅವನೇ ಬರೆದದ್ದು ಎಂದು ಈಗ ಸಾಬೀತೂ ಆಗಿದೆ. ಬರೆಸಿಕೊಂಡು ಹೆಸರು ಹಾಕಿಕೊಂಡವರ ಸ್ಥಿತಿ ಕೇಳಬೇಡಿ!

ಇತ್ತೀಚೆಗೆ ಹಿಲರಿ ಕ್ಲಿಂಟನ್ ಬರೆದ ಅಥವಾ ಬರೆದಳೆನ್ನಲಾದ “It Takes a Village’ ಪುಸ್ತಕವನ್ನು ‘ನಾನು ಬರೆದದ್ದು, ನನಗೆ ಈ ಪುಸ್ತಕದಲ್ಲಿ
ಕ್ರೆಡಿಟ್ ಕೊಟ್ಟಿಲ್ಲ’ ಎಂದು ಒಬ್ಬ ಜನಪ್ರಿಯ ಬರಹಗಾರ್ತಿ ಗಲಾಟೆಯೆಬ್ಬಿಸಿದ್ದಳು. ಅದು ಅವರ ನಡುವಿನ ಒಡಂಬಡಿಕೆಯದ ಎಡವಟ್ಟಿರಬೇಕು; ಬಹಿರಂಗವಾಗಿ ಹಿಲರಿ ಕ್ಲಿಂಟನ್‌ಗೆ ಒಂದಿಷ್ಟು ಮುಖಭಂಗವಂತೂ ಆಯಿತು. ರಾಜಕಾರಣಿಗಳಿಗೆ, ಅಂದರೆ ಎಂಎಲ್ಎ ಇಂದ ಹಿಡಿದು
ನರೇಂದ್ರ ಮೋದಿ, ಬರಾಕ್ ಒಬಾಮಾ, ಡೊನಾಲ್ಡ್ ಟ್ರಂಪ್ ಇವರೆಲ್ಲರಿಗೂ ಭಾಷಣ ಬರೆದುಕೊಡುವವರಿದ್ದಾರೆ.

ಇದನ್ನೂ ಓದಿ: Shishir Hegde Column: ನಂಬಿಕೆ- ಎರಡು ಕಥೆಗಳು