Saturday, 14th December 2024

ಶಿವಾಜಿಗಿಂತ ಮಹಾನ್ ನಾಯಕ ಇದ್ದಾರೆಯೇ ?

ತನ್ನಿಮಿತ್ತ

ಕಿರಣಕುಮಾರ ವಿವೇಕವಂಶಿ

ಶಿವಾಜಿಗಿಂತ ಮಹಾನ್ ನಾಯಕ, ಶ್ರೇಷ್ಠ ಸಂತ, ಅದ್ಭುತ ಭಕ್ತ ಹಾಗೂ ದೊಡ್ಡ ರಾಜ ಯಾರಾದರೂ ಇದ್ದಾರೆಯೇ? ನಮ್ಮ ಮಹಾಕಾವ್ಯಗಳಲ್ಲಿ ಹೇಳಿದ ಹುಟ್ಟುನಾಯಕನ ಎಲ್ಲ ಗುಣಗಳೂ ಮೂರ್ತಿವೆತ್ತಂತೆ ಅವನಿದ್ದ.

ದೇಶದ ನಿಜವಾದ ಅಂತರಾಳವನ್ನು ಪ್ರತಿನಿಧಿಸುವ ಆದರ್ಶ ಪುತ್ರನೀತ. ಒಂದು ಸೂರಿನಡಿ ನಿಂತಿರುವ ಹಲವು ಸ್ವತಂತ್ರ ಘಟಕಗಳು ಒಂದೇ ಸರ್ವೋಚ್ಛ ರಾಜಛತ್ರದಡಿ ಮುನ್ನಡೆಯಬೇಕಾದ ವ್ಯವಸ್ಥೆಯಿರುವ ಭಾರತ ಒಕ್ಕೂಟದ ಭವಿಷ್ಯ ಏನಾಗುತ್ತದೆ ಎಂಬುದನ್ನು ನಮಗೆಲ್ಲ ಅಂದೇ ಮನವರಿಕೆ ಮಾಡಿಸಿದ್ದು ಶಿವಾಜಿ ಎಂದು ಹೇಳುತ್ತಾರೆ ಸ್ವಾಮಿ ವಿವೇಕಾನಂದರು. ಇದು ಸತ್ಯಸ್ಯ ಸತ್ಯ. ದೇಶದ ಎಲ್ಲ ದಳ – ವರ್ಗಗಳ ಚಿಂತನೆ ಹಾಗೂ ಅದರಿಂದ ಹೊರಹೊಮ್ಮುವ ಕೃತಿಗೆ ಶಿವಾಜಿಯು ಇಂದಿಗೂ ಸುಸಂಗತ ಹಾಗೂ ಸುಸಂದರ್ಭಿತ.

ಪ್ರಕೃತಿ ಪುಳಕಿತವಾಯಿತು ಭೂಮಿಯೂ ಧನ್ಯವಾಯಿತು ಸಂತಸದ ಗೀತ ಸಮುದ್ರದಲ್ಲಿ ಸ್ವರಾಜ್ಯದ ಕಹಳೆ ಮೊಳಗಿತು.
ಎಂಬಂತೆ 19ನೇ ಫೆಬ್ರವರಿ 1630ರ ಪಲ್ಗುಣ ಮಾಸದ ತೃತೀಯಾ ರಾತ್ರಿಯ ಮೊದಲ ಭಾಗದಲ್ಲಿ ಶಿವನೇರಿ ದುರ್ಗದಲ್ಲಿ ಜೀಜಾ ಬಾಯಿಯ ಉದರದಿಂದ ಹಸುಳೆಯೊಂದು ಜನಿಸಿತು. ನಂತರ ಬೆಳೆಯುತ್ತಾ ತನ್ನ 12ನೇ ವಯಸ್ಸಿನವರೆಗೆ ಬೆಂಗಳೂರಿನ ವಾಸ ವಿದ್ದ ಶಿವಾಜಿಗೆ ಆರಂಭಿಕ ಶಿಕ್ಷಣವನ್ನು ಕೊಟ್ಟವರು ಅಣ್ಣ ಸಂಬಾಜಿ. ನಂತರ ಶಿವನೇರಿ ದುರ್ಗಕ್ಕೆ ಹಿಂತಿರುಗಿದ ಶಿವಾಜಿಗೆ
ಪೂರ್ಣಪ್ರಮಾಣದ ಯುದ್ಧ ಕೌಶಲವನ್ನು ಧಾರೆ ಎರೆದವರು ದಾದಾಜಿ ಕೊಂಡದೇವ.

ಕತ್ತಿವರಸೆ, ಕುದುರೆ ಸವಾರಿ, ಯುದ್ಧಕಲೆಗಳನ್ನು ಕರಗತ ಮಾಡಿಕೊಂಡ ಶಿವಾಜಿ ಮಹತ್ವಾಕಾಂಕ್ಷೆಯ ಹೆಜ್ಜೆಗಳನ್ನು ಇಡಲು ಆರಂಭಿಸಿದ್ದರು. ಎಳೆಯ ವಯಸ್ಸಿನಿಂದಲೇ ತಾಯಿ ಜೀಜಾಬಾಯಿಯಿಂದ ಜೀವನ ಮೌಲ್ಯಗಳ ಶಿಕ್ಷಣ ಪಡೆದಿದ್ದ ಶಿವಾಜಿ ಸಂತ ಸಮರ್ಥ ರಾಮದಾಸರ ಪರಮಭಕ್ತರಾಗಿದ್ದರು. ಮಹಾನ್ ನಾಯಕನೊಬ್ಬ ಬಹಳ ಕಷ್ಟದ ಪರಿಸ್ಥಿತಿಯ ನಡುವೆಯೇ ಹುಟ್ಟಿ ಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ.

ಶಿವಾಜಿಯ ವಿಷಯದಲ್ಲೂ ಹಾಗೇ ಆಯಿತು. ಅವನು ಬಾಲ್ಯದಿಂದಲೇ ತನ್ನ ಮಾತೃಭೂಮಿಯನ್ನು ಸ್ವತಂತ್ರಗೊಳಿಸುವ ಕನಸು ಕಂಡಿದ್ದ. 16 ವರ್ಷದಷ್ಟು ಸಣ್ಣ ವಯಸ್ಸಿನಲ್ಲಿಯೇ ತನ್ನ ಮೊದಲ ಯುದ್ಧದಲ್ಲಿ ಭಾಗವಹಿಸಿ ತೋರಣ ದುರ್ಗವನ್ನು ಗೆದ್ದಿದ್ದ. ಈ ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿತು. ನಂತರ ಒಂದಾದ ಮೇಲೊಂದು ಕೋಟೆಗಳನ್ನು ಗೆಲ್ಲುತ್ತ ಹೋದ. ಅಫಜಲ್ ಖಾನನಂಥ ಅದೆಷ್ಟೋ ಸೇನಾಽಪತಿಗಳನ್ನು ಸೋಲಿಸಿ ಮರಾಠಾ ಸಾಮ್ರಾಜ್ಯದ ತಳಪಾಯವನ್ನು ಗಟ್ಟಿಯಾಗಿಸಿದ.

ನಿರಂತರವಾಗಿ ಬಿಜಾಪುರದ ಆದಿಲ್ ಷಾಹಿಹಳೊಂದಿಗೆ, ಮೊಘಲರೊಂದಿಗೆ ಸೆಣಸಾಡಿ ವಿಶಾಲ ಸಾಮ್ರಾಜ್ಯದ ನಿರ್ಮಾತೃ
ವಾದನು. ಗೆರಿ ಯುದ್ಧ ತಂತ್ರವನ್ನು ಪರಿಚಯಿಸಿದ ಖ್ಯಾತಿಯೂ ಶಿವಾಜಿಗೆ ಸಲ್ಲುತ್ತದೆ. 1674ರ ಜೂನ್ 6ರಂದು ರಾಯಗಢ ಕೋಟೆಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಮರಾಠಾ ಸ್ವರಾಜ್ ರಾಜನಾಗಿ ಕಿರೀಟಧಾರಣೆ ಮಾಡಿದ ಅನಂತರದಲ್ಲಿ 1680ರ ಏಪ್ರಿಲ್ 3ರಂದು ಹನುಮಾನ್ ಜಯಂತಿಯವರೆಗೆ ಆಳ್ವಿಕೆ ಮಾಡಿದ ಶಿವಾಜಿ ಆ ದಿನಮಧ್ಯಾಹ್ನದ ವೇಳೆಗೆ ರಾಯಗಢ ದುರ್ಗದಲ್ಲಿ ಲೀನವಾದರು.

ಸಾವಿನ ಸಮಯದಲ್ಲಿ ಶಿವಾಜಿಯು 300 ಕೋಟೆಗಳು, 50000 ಸೈನಿಕರನ್ನು ಹೊಂದಿದ್ದ. ಮತ್ತೆ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಒಂದು ನೌಕಾ ನೆಲೆಯನ್ನು ಹೊಂದಿದ್ದ. ಅವನು ಮಾಡಿದ ಕೆಲಸಗಳ ನಿಜವಾದ ಪರೀಕ್ಷೆ ಅವನು ಹೋದಮೇಲೆ ಆಗುತ್ತದೆ. ಶಿವಾಜಿ ಮರಣಾನಂತರ ಔರಂಗಜೇಬನು ದಕ್ಷಿಣ ವಿಜಯಕ್ಕೆ ಮಹದಾಸೆಯೊಂದಿಗೆ ಆಗ್ರಾದಿಂದ 1681ರಲ್ಲಿ ಹೊರಡುತ್ತಾನೆ. ಸಾಧ್ಯವಾಗದೆ ತನ್ನ ಬದುಕಿನ 27 ವಸಂತಗಳನ್ನು ದಕ್ಷಿಣದಲ್ಲಿ ಕಳೆದು 1707ರಲ್ಲಿ ಮಹಾರಾಷ್ಟ್ರದ ಅಹಮದ್‌ನಗರದಲ್ಲಿ ಕಾಲವಾಗುತ್ತಾನೆ.

ಸ್ವರಾಜ್ಯವನ್ನು ವಶಪಡಿಸಿಕೊಳ್ಳಬೇಕು ಎಂಬ ಮಹದಾಸೆಯನ್ನು ಈಡೇರಿಸಿಕೊಳ್ಳಲಾಗದೇ ಅತೃಪ್ತಿಯಿಂದ ಸಾಯಬೇಕಾಯಿತು.
ಶಿವಾಜಿ ಸಾರ್ವಜನಿಕ ಜೀವನ ಬರೊಬ್ಬರಿ 36 ವರ್ಷಗಳದು. ಅಭಿಯಾನ, ಯುದ್ಧ ಮತ್ತು ಕಾಡಿನಲ್ಲಿ ಕಳೆದ ದಿನಗಳನ್ನು ಒಟ್ಟು ಗೂಡಿಸಿದರೆ ಆರೂವರೆ ವರ್ಷವಾದೀತು. ಉಳಿದ 30 ವರ್ಷಗಳನ್ನು ಅವನು ಸ್ವರಾಜ್ಯದ ಆಡಳಿತ ತಂತ್ರಗಳನ್ನು ರೂಪಿಸು ವಲ್ಲಿಯೇ ಕಳೆದ. ಇಂದು ಶಿವಾಜಿಯನ್ನು ಒಬ್ಬ ರಾಷ್ಟ್ರೀಯವಾದಿ ಹಾಗೂ ಧರ್ಮ ರಕ್ಷಣೆಗಾಗಿ ಹೋರಾಡಿದ ರಾಜ ಎಂಬಂತೆ ಸೀಮಿತ ಚೌಕಟ್ಟಿನಲ್ಲಿ ನಿಲ್ಲಿಸಿ ನೋಡುವ ಹುನ್ನಾರ ನಡೆದಿದೆ.

ಆದರೆ, ಶಿವಾಜಿ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಆಡಳಿತ ನಡೆಸಿದವರಲ್ಲ. ಆತ ಅತ್ಯಂತ ಜಾತ್ಯಾತೀತ ವ್ಯಕ್ತಿಯಾಗಿದ್ದ. ಆದರೆ ಆ ಅವಸರದಲ್ಲಿ ತನ್ನ ಧಾರ್ಮಿಕ ಬೇರುಗಳು ಸಡಿಲವಾಗಲು ಬಿಡಲಿಲ್ಲ. ಎಲ್ಲಾ ರಾಜರೂ ತಮ್ಮ ತಮ್ಮ ರಾಜ್ಯದ ರಕ್ಷಣೆಗೆ
ಸೀಮಿತವಾಗಿ ಆಡಳಿತ ನಡೆಸುತ್ತಿದ್ದರೆ ಶಿವಾಜಿ ಆ ಕಾಲದ ದೇಶ ಮೊದಲು ಎನ್ನುತ್ತಿದ್ದ. ವಿದೇಶಿ ದಾಳಿಕೋರರಿಂದ ದೇಶವನ್ನು ರಕ್ಷಿಸುವುದು ಆತನ ಮೊದಲ ಆದ್ಯತೆಯಾಗಿತ್ತು.

ವಿದೇಶಿ ದಾಳಿಕೋರರಿಂದ ಭಾರತವನ್ನು ರಕ್ಷಿಸಿಕೊಳ್ಳಲು ಸಮುದ್ರದ ಗಡಿಯನ್ನು ಭದ್ರಪಡಿಸಿಕೊಳ್ಳಬೇಕೆಂದು ಮನಗಂಡು ದೇಶದ ಮೊದಲ ನೌಕಾಪಡೆ ಸ್ಥಾಪಿಸಿದ ಕೀರ್ತಿ ಶಿವಾಜಿಯದ್ದು. ಇದಕ್ಕಾಗಿ ಆತ ಸಮದ್ರದಲ್ಲೂ ಕೋಟೆ ನಿರ್ಮಿಸಿದ್ದ. ಕೋಟೆಯ ವಿಷಯಕ್ಕೆ ಬಂದರೆ ಶಿವಾಜಿಯಂಥ ವ್ಯೂಹಾತ್ಮಕ ತಂತ್ರಗಾರರು ಇನ್ನೆಲ್ಲೂ ಕಾಣಸಿಗಲಾರರು. ಕೋಟೆಗಳ ರಾಜ ಎಂದೇ ಶಿವಾಜಿಗೆ ಬಿರುದಿತ್ತು. 350 ವರ್ಷಗಳ ಪರಾಧೀನತೆಯಿಂದ ಹುಟ್ಟಿದ ಪರಕೀಯ ಮಾನಸಿಕತೆಯ ಪ್ರಭಾವ ಎಡೆ ಹರಡಿತ್ತು.

ಸಮಾಜದ ಎಲ್ಲ ಜನರು ಇನ್ನೊಬ್ಬರ ಅಧೀನದಲ್ಲಿದ್ದಂತೆಯೇ ಇದ್ದರು. ಇಂತಹ ನಿರಾಷಾದಾಯಕ ಪ್ರತಿಕೂಲ ಅವಸ್ಥೆಯಲ್ಲಿ ಶಿವಾಜಿ ಮಹಾರಾಜರು ತಮ್ಮ ಕಾರ್ಯಕರ್ತರು ಮತ್ತು ಸಮಾಜದಲ್ಲಿ ಉತ್ಕೃಷ್ಟವಾದ ಸದ್ಗುಣಗಳು, ಕೌಶಲ, ಪುರುಷಾರ್ಥಗಳು ಮತ್ತು ಗೆಲ್ಲುವ ಇಚ್ಛೆಯನ್ನು ನಿರ್ಮಾಣ ಮಾಡಿ ಏಕೈಕ ಸ್ವ – ಆಧಾರಿತ ಯಶಸ್ವಿ ರಾಜಕೀಯ ವಾತಾವರಣವನ್ನು ನಿರ್ಮಿಸಿ, ಅವುಗಳನ್ನು ಗೆಲ್ಲಿಸಿ, ಜಾರಿಗೆ ತಂದರು.

ಇಂದಿನ ಪರಿಸ್ಥಿತಿಯಲ್ಲಿ ಸಾಮಾನ್ಯನಿಂದ ಹಿಡಿದು ಚಿಂತಕರವರೆಗೆ ಇಂತಹ ಪರಿವರ್ತನೆ ಅವಶ್ಯವಾಗಿ ಬರಬೇಕಿದೆ. ಇಂದು ನಾವೆಲ್ಲರೂ ನವ ಸಮಾಜವನ್ನು ನಿರ್ಮಾಣ ಮಾಡುವ ಮಾತನಾಡುತ್ತಿದ್ದೇವೆ. ಅದು ಸಾಧ್ಯವಾಗಬೇಕಾದರೆ ಶಿವಾಜಿ ಮಹಾರಾಜ ರಿಂದ ನಿರ್ಮಿತವಾದ ಸಮಾಜದ ವಿಶೇಷ ಗುಣಗಳನ್ನು ಗಮನದಲ್ಲಿಟ್ಟುಕೊಂಡು, ಅವರ ಆದರ್ಶ ಮಾರ್ಗದಲ್ಲಿ ಮುನ್ನಡೆಯ ಬೇಕಿದೆ. ಆಗ ಶಿವಾಜಿ ಕನಸಿನ ಹಿಂದವಿ ಸ್ವರಾಜ್ಯ ಸ್ಥಾಪನೆಯಾಗಲು ಸಾಧ್ಯ.