Saturday, 14th December 2024

ಹೃದಯಾಂತರಾಳದಲ್ಲಿ ದೇವರನ್ನು ಪ್ರತಿಷ್ಠಾಪಿಸುವ ದಿನ ಶಿವರಾತ್ರಿ

ತನ್ನಿಮಿತ್ತ

ಶ್ರೀ ಗಣೇಶ  ಭಟ್ಟ

ಶ್ರಾವಣಮಾಸದಲ್ಲಿ ಪರಶಿವನನ್ನು ಒಂದು ಮಾಸ ಪೂರ್ತಿ ಆರಾಧಿಸಿದ, ಶಿವಭಕ್ತರು ಆ ಪರಮೇಶ್ವರನು ಶಿವಲಿಂಗದಿಂದ ಸ್ವಯಂ ಆಗಿ ಉದ್ಭಸಿದ, ಸಮುದ್ರ ಮಥನಕಾಲದಲ್ಲಿ ಹಾಲಾಹಲವನ್ನು ಕುಡಿದ, ಕೈಲಾಸಗಿರಿಯಲ್ಲಿ ತಾಂಡವನೃತ್ಯಗೈದ ದಿನವಾದ,
‘ಶಿವರಾತ್ರಿ’ಯನ್ನು ಅಷ್ಟೇ ಶ್ರದ್ಧಾ – ಭಕ್ತಿಯಿಂದ ಆಚರಿಸುವರು.

ಮಾಘಕೃಷ್ಣ ಚತುರ್ದಶ್ಯಾಂ ಆದಿದೇವೋ
ಮಹಾನಿಶಿ |
ಶಿವಲಿಂಗತಯೋದ್ಭೂತಃ ಕೋಟಿಸೂರ್ಯ
ಸಮಪ್ರಭ ||
ತತ್ಕಾಲವ್ಯಾಪಿನೀಗ್ರಾಹ್ಯಾ ಶಿವರಾತ್ರಿ ವ್ರತೇ ತಿಥಿ
||(ನಿರ್ಣಯಸಿಂಧು) ಎನ್ನುವಂತೆ, ಮಾಘ – ಮಾಸದ ಕೃಷ್ಣಪಕ್ಷದ ಚತುರ್ದಶಿ, ಅಂದರೆ ‘ಶಿವರಾತ್ರಿ’ ಯಂದು ಕೋಟಿಸೂರ‍್ಯನಿಗೆ ಸಮನಾದ ಕಾಂತಿ ಹೊಂದಿದ, ಶಿವಲಿಂಗದಿಂದ ಉದ್ಭಸಿದ ‘ಮಹಾದೇವ’ ನನ್ನು ಪೂಜಿಸಲು ಪ್ರಶಸ್ತವಾದ ದಿನವಾಗಿದೆ.

ಶಿವನು ಪಂಚಮುಖನು, ಶುದ್ಧ ಸ್ಪಟಿಕದ ಮೈಬಣ್ಣದವನು, ಶಂಖದಂತೆ ಪ್ರಭೆಯುಳ್ಳವನು, ಗಂಗಾಧರ, ಚಂದ್ರಶೇಖರ, ಮುಕ್ಕಣ್ಣ, ವಿಷಕಂಠ, ನಾಗಾಭರಣ, ಮೃತ್ಯುಂಜಯ, ಭೂತನಾಥನು, ನಂದಿಯನ್ನು ವಾಹನವಾಗಿ ಮಾಡಿಕೊಂಡ ಪಶುಪತಿ
ಯು, ಜಗದಂಬೇ ಪಾರ್ವತಿಗೆ ತನ್ನ ದೇಹದ ಅರ್ಧಭಾಗವನ್ನು ನೀಡಿ ಅರ್ಧನಾರೀಶ್ವರನು, ಪರಶಿವನು ತ್ರಿಶೂಲವನ್ನು ಕೈಯಲ್ಲಿ ಹಿಡಿದಿದ್ದಾನೆ.

ಶಿವನ ಈ ನಾನಾ ರೂಪಗಳು ನಮ್ಮ ಜೀವನದ ಭಿನ್ನ ಸ್ಥಿತಿಗತಿಗೆ ನಿದರ್ಶನವಾಗಿದೆ.

‘ಶಿವ’ನೆಂದರೆ ‘ಶಿವಾಃ ಶೋಭನಾಃ ಗುಣಾಃ ಅಸ್ಯ
ಸಂತೀತಿ ಶಿವಃ| ಮಂಗಲವನ್ನು ಉಂಟುಮಾಡು
ವವನು ‘ಶಿವ’ನೆಂದರ್ಥ. ಇಂತಹ ಮಂಗಲಮಯ
ನಾದ ಶಿವನು, ರುದ್ರನಾಗುವುದು ಯಾವಾಗ?
ಅಘೋರನಾದ ಆತನು ಘೋರಸ್ವರೂಪವನ್ನು ತಾಳುವುದು ಯಾವಾಗ? ಅಭಯಂಕರನಾದ ಆತ ಭಯಂಕರನಾಗುವುದು ಯಾವಾಗ? ಯಾವಾಗ ಮನುಷ್ಯನು ಆಸುರೀ ಪ್ರವೃತ್ತಿಯನ್ನು ಹೊಂದುತ್ತಾನೋ, ಧರ್ಮದ ಎಲ್ಲೆಮೀರಿ, ದುರ್ಮಾಗಿಯಾಗು ತ್ತಾನೋ, ಮರ್ಯಾದೆಯ ಸೀಮೆಯನ್ನು ಬಿಟ್ಟು, ಇನ್ನೊಬ್ಬರಿಗೆ ದುಃಖವನ್ನು ಉಂಟುಮಾಡುತ್ತಾನೋ, ಅನೀತಿ ಅನ್ಯಾಯದ
ದಾರಿಯಲ್ಲಿ ಸಾಗುತ್ತಾನೋ, ಆವಾಗ ಶಿವ, ರುದ್ರನಾಗುವುದು, ಘೋರಸ್ವರೂಪ ತಾಳುತ್ತಾನೆ, ಭಯಂಕರನಾಗುವನು.

ಆಗ ಶಿವನ ದಮನ – ಶಾಸನ ಜಾರಿಯಾಗುವುದು. ಅನ್ಯಾಯ – ಅನೀತಿ ಮಾರ್ಗ ತುಳಿದವರಿಗೆ ಶಿವನ ಕಠಿಣ ಶಾಸನ ಶಿಕ್ಷಿಸದೆ ಬಿಡದು. ಪರಶಿವನಷ್ಟು ದಯಾಳು, ಕರುಣಾಮೂರ್ತಿ ಮತ್ತೊಬ್ಬರಿಲ್ಲ. ಭಕ್ತರ ಯಾವುದೇ ಚಿಕ್ಕ ಸ್ತುತಿಗೂ, ಪೂಜೆ ಪುನಸ್ಕಾರಕ್ಕೂ ಆಶುತೋಷನಾಗಿ ಆಗಮಿಸಿ, ಅವರ ಕಷ್ಟ – ನಷ್ಟಗಳನ್ನು ಪರಿಹರಿಸುವವನು.

ಅಭಿಷೇಕ ಪ್ರಿಯ ಶಿವ: ಸಮುದ್ರಮಥನಕಾಲದಲ್ಲಿ ‘ಹಾಲಾಹಲವಿಷ’ವು ಹೊರಬಂತು, ಜಗತ್ತನ್ನು ನಾಶಪಡಿಸಬಹುದಾದ ಅದನ್ನು ಶಿವ ಕುಡಿದ. ಪಾರ್ವತಿ ಅದನ್ನು ಕೊರಳಲ್ಲೇ ತಡೆದಳು, ಇದರಿಂದ ಶಿವ ವಿಷಕಂಠ, ನೀಲಕಂಠನಾಗಿ ನಾಗಾಭರಣನಾದ
ಶಿವನು ಸೇವಿಸಿದ ಆ ವಿಷದ ಉರಿಯನ್ನು ಕಡಿಮೆಮಾಡಲು, ದೇವಾನುದೇವತೆಗಳು ಜಲದಿಂದ ಅಭಿಷೇಕ ಮಾಡಿದರು. ಅದಕ್ಕಾಗಿಯೇ ಶಿವಲಿಂಗದ ಮೇಲೆ, ಜಲಾಭೀಷೇಕಕ್ಕೆ ಅತ್ಯಂತ ಮಹತ್ವವಿದೆ.

ಶಿವರಾತ್ರಿಯಂದು ರುದ್ರಮಂತ್ರಗಳಿಂದಾಗಲಿ, ‘ಓಂನಮಃ ಶಿವಾಯ’ ಎನ್ನುವ ಶಿವಪಂಚಾಕ್ಷರ ಮಂತ್ರದಿಂದಾಗಲಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ, ಬಿಲ್ವಪತ್ರೆ, ಕರಿಯಳ್ಳಿನಿಂದ ಶಿವ ಸಹಸ್ರನಾಮ ಅಥವಾ ತ್ರಿಶತಿಗಳಿಂದ ಅರ್ಚಿಸುವುದಕ್ಕೆ ವಿಶೇಷ ಬಲವಿದೆ.
ಶಿವಮಹಾಪುರಾಣ ಶಿವರಾತ್ರಿ ಕುರಿತು: ಶಿವಮಹಾಪುರಾಣದ ನಲವತ್ತನೇ ಅಧ್ಯಾಯದಲ್ಲಿ ‘ಶಿವರಾತ್ರಿ’ಯ ಕುರಿತಾದ ಕಥೆ ಹೀಗಿದೆ.ಹಿಂದೆ ದಟ್ಟ ಕಾಡಿನಲ್ಲಿ ‘ಗುರುದ್ರುಹ’ ಎಂಬ ಬೇಡ ತನ್ನ ಪರಿವಾರದೊಂದಿಗೆ ವಾಸವಾಗಿದ್ದ, ಪ್ರತಿನಿತ್ಯ ವನದಲ್ಲಿ
ಸಂಚರಿಸುತ್ತಾ, ಪಶುಗಳನ್ನು ಕೊಲ್ಲುತ್ತಾ ಜೀವಿಸುತ್ತಿದ್ದ.

ಬಾಲ್ಯದಿಂದಾರಂಭಿಸಿ ಯಾವುದೇ ಶುಭವಾದ ಕಾರ್ಯಮಾಡಿದವನಲ್ಲ. ಹೀಗಿರುವಾಗ ‘ಶಿವರಾತ್ರಿ’ ದಿನ ಬಂತು, ಆ ಕುರಿತು ವಿಶಾಲವಾದ ಕಾಡಿನಲ್ಲಿ ವಾಸಿಸುವ ಆತನಿಗೆ ಯಾವುದೇ ಜ್ಞಾನವಿರಲಿಲ್ಲ, ಹಸಿವಿನಿಂದ ಕಂಗೆಟ್ಟ ತಂದೆ – ತಾಯಿ, ಹೆಂಡತಿ –
ಮಕ್ಕಳು ಹೇಳಿದರು – ಪ್ರಾಣಿಯನ್ನು ಕೊಂದುತಾ, ಆಹಾರಕ್ಕಾದೀತು ಎಂದರು. ಅದರಂತೆ ಆ ಬೇಡ ಧನುರ್ಭಾಣಗಳನ್ನು ಧರಿಸಿ ವನದಲ್ಲಿ ಸಂಚರಿಸಿದ, ದುರ್ದೈವದಿಂದ ಯಾವುದೇ ಪ್ರಾಣಿಸಿಗಲಿಲ್ಲ.

ಸೂರ್ಯಾಸ್ತವಾಯಿತು. ಆಹಾರವಿಲ್ಲದೇ ಹಿಂತಿರುಗಿದರೆ ಮಕ್ಕಳು – ವೃದ್ಧ – ತಂದೆ – ತಾಯಿಗಳಿಗೆ ಏನೆಂದು ಉತ್ತರಿಸಲಿ? ಬೇಡ ದುಃಖಿತನಾದ ಯಾವುದಾದರೂ ಮೃಗವನ್ನು ಕೊಲ್ಲದೇ ಮನೆಗೆ ಹಿಂತಿರುಗಲಾರೆ, ಎಂದು ದೃಢನಿರ್ಧಾರಕ್ಕೆ ಬಂದ, ಆಕಾಡಿನಲ್ಲಿ ಹರಿಯುವ ನೀರಿನಿಂದ ಆವರಿಸಿದ ಚಿಕ್ಕ ಪ್ರದೇಶವಿತ್ತು. ಅಲ್ಲಿಗೆ ಈಜಿ ತೆರಳಿ, ಒಂದು ಬಿಲ್ವವೃಕ್ಷವನ್ನು ಏರಿ ಕುಳಿತ. ಆಚೆ ದಡಕ್ಕೆ ಯಾವುದಾದರೂ ಪ್ರಾಣಿ ನೀರು ಕುಡಿಯಲು ಬರುವುದು ಆಗ ಕೊಲ್ಲಬಹುದೆಂದು ಯೋಚಿಸುತ್ತಿರುವಾಗಲೇ ಗರ್ಭಿಣಿ ಜಿಂಕೆ ಯೊಂದು ನೀರು ಕುಡಿಯಲು ಬಂತು.

ಬೇಡ ಧನುರ್ಭಾಣಗಳನ್ನು ಹೂಡಲು ಸನ್ನದ್ಧನಾದ, ಆಗ ಆತನಿಗೆ ಅಡ್ಡಿಯಾದ ಬಿಲ್ವಪತ್ರೆಗಳನ್ನು ಕಿತ್ತು ಬೀಳಿಸಿದ. ಆವೃಕ್ಷದ ಕೆಳಗಡೆ ಶಿವಲಿಂಗವಿತ್ತು, ಅದೃಷ್ಠವಶಾತ್ ಅವು ಅಲ್ಲಿಯೇ ಬಿದ್ದವು. ಬೇಡನ ಸಕಲ ಪಾಪಗಳು ದೂರವಾದವು. ತನ್ನತ್ತ ಬಾಣ ದಿಂದ ಗುರಿಯಿಟ್ಟ ಬೇಡನಿಗೆ ಗರ್ಭಿಣಿ ಜಿಂಕೆ ಹೇಳಿತು – ತುಂಬು ಗರ್ಭಿಣಿಯಾದ ನನ್ನನ್ನು ನೀ ಕೊಂದು ಪಾಪಕ್ಕೆ ಗುರಿಯಾಗ ಬೇಡ, ಪ್ರಸವದ ನಂತರ ಬರುವೆ, ವ್ಯಾಧನಿಗೆ ಕರುಣೆ ಉಕ್ಕಿ ಅದನ್ನು ಬಿಟ್ಟನು. ಸಮಯಕಳೆಯಲು ತನ್ನ ಅಕ್ಕಪಕ್ಕದ ಬಿಲ್ವಪತ್ರ ಗಳನ್ನು ಕೆಳಕ್ಕೆ ಎಸೆಯುತ್ತ ಇದ್ದ.

ಪ್ರಥಮಯಾಮ ಕಳೆದು, ಎರಡನೇ ಯಾಮದಲ್ಲಿ ಚಿಕ್ಕ ಚಿಕ್ಕ ಮರಿಗಳನ್ನು ಹೊಂದಿದ ಜಿಂಕೆ ಬಂದಿತು. ಬೇಡ ಗುರಿಯಿಟ್ಟು ಸಾಯಿಸಲು ಮುಂದಾದಾಗ, ಅದು ಹೇಳಿತು – ಈ ಚಿಕ್ಕ ಮರಿಗಳನ್ನು ಗಂಡು ಜಿಂಕೆಯ ಸಮೀಪ ಬಿಟ್ಟು ಖಂಡಿತ ಬರುವೆ,
ದಯಟ್ಟು ಬಿಟ್ಟುಬಿಡು. ಎಂದು ಪ್ರಾರ್ಥಿಸಿದಾಗ, ಬೇಡ ಹಿಂದಿನಂತೆ ಬಿಟ್ಟನು, ಬೇಡ ಅರಿವಿಲ್ಲದೇ ಬಿಲ್ವಪತ್ರೆಗಳನ್ನು ಬೀಳಿಸುತ್ತಾ ಪ್ರಾಣಿಗಳ ನಿರೀಕ್ಷೆಯಲ್ಲಿ ಇದ್ದ, ಮೂರನೆ ಯಾಮದಲ್ಲಿ- ದಷ್ಟಪುಷ್ಟವಾದ ಗಂಡು ಜಿಂಕೆಯೊಂದು ಬಾಯಾರಿ ನೀರು ಕುಡಿಯಲು ಅಲ್ಲಿಗೆ ಬಂತು.

ಬೇಡ ಕೊಲ್ಲಲು ಮುಂದಾದಾಗ, ನನ್ನ ವಶದಲ್ಲಿರುವ ಮರಿಗಳನ್ನು ತಾಯಿ ಜಿಂಕೆಗೆ ಮುಟ್ಟಿಸಿಬರುವೆ ಎಂದಾಗ, ಬೇಡ ಹೇಳಿದ, ಹಿಂದೆ ಹೋದವರೂ, ಹೀಗೆಯೇ ಹೇಳಿ ಹೋದವರು ಹಿಂತಿರುಗಲಿಲ್ಲ, ನಿನ್ನನ್ನು ಹೇಗೆ ನಂಬಲಿ? ಕೊನೆಗೆ ಶಿವಕೃಪೆಯಿಂದ ಆತನಲ್ಲಿ ಸಾತ್ವಿಕಭಾವ ಜಾಗ್ರತವಾಗಿ ಅದನ್ನು ಕರುಣೆಯಿಂದ ಬಿಟ್ಟ. ನಂತರ ರಾತ್ರಿ ನಾಲ್ಕನೇ ಯಾಮದಲ್ಲಿ ಆ ಜಿಂಕೆಗಳು ಮರಿಗಳಿಗೆ, ತನ್ನವರಿಗೆ ಧೈರ್ಯ ತುಂಬಿ, ಸತ್ಯವಚನಕ್ಕೆ ಬದ್ಧರಾಗಿ ಬೇಡನತ್ತ ಹಿಂತಿರುಗಿದವು.

ಇತ್ತ ಬೇಡ ಬಿಲ್ವಪತ್ರೆಗಳನ್ನು ಕೆಳಕ್ಕೆ ಬೀಳಿಸುತ್ತಲೇ ಇದ್ದ, ಜಿಂಕೆಗಳು ತನ್ನತ್ತ ಬಂದದ್ದಕ್ಕಾಗಿ ಬೇಡನಿಗೆ ಸಂತೋಷವಾಯಿತು. ಶಿವನಿಗೂ ಸಂತೋಷ ವಾಯಿತು. ಶಿವರಾತ್ರಿ ದಿನ ಉಪವಾಸವಿದ್ದು, ನದಿ ಜಲದಲ್ಲಿ ಮುಳುಗೆದ್ದು, ರಾತ್ರಿಪೂರ್ತಿ ಎಚ್ಚರವಿದ್ದು ಬಿಲ್ವಪತ್ರೆಗಳನ್ನು ಅರಿವಿಲ್ಲದೇ ಇದ್ದರೂ ನಾಲ್ಕು ಯಾಮಕ್ಕೂ ಶಿವಲಿಂಗದ ಮೇಲೆ ಹಾಕಿದ ಕಾರಣಕ್ಕೆ ಅರಿವಿಲ್ಲದೇ ಶಿವಪೂಜೆ ಸಂಪನ್ನವಾದ ಕಾರಣ ಆ ಬೇಡನ ಸಮಸ್ತ ಪಾಪಗಳೂ ದೂರವಾದವು. ಸುಜ್ಞಾನ ಮೂಡಿತು.

ಮೃಗಗಳ ಕೊಲ್ಲುವುದು ಪಾಪ ಎಂಬ ಭಾವನೆ ಮೂಡಿತು. ಜಿಂಕೆಗಳ ಸತ್ಯನಡೆ-ನುಡಿಗೆ ಹೆಮ್ಮೆ ಅನಿಸಿತು. ತನ್ನ ಕಾರ್ಯಕ್ಕೆ ಪಶ್ಚಾತ್ತಾಪ ಪಟ್ಟ. ಶಿವ ಪ್ರತ್ಯಕ್ಷನಾಗಿ – ನಿನ್ನ ಪೂಜೆಗೆ ಪ್ರಸನ್ನನಾಗಿರುವೆ, ವರಬೇಡು ಎಂದಾಗ ಸಂತೋಷದಿಂದ ಬೇಡನಿಗೆ
ಮಾತೆ ಹೊರಡಲಿಲ್ಲ, ಶಿವನ ಪಾದಕ್ಕೆರಗಿದ. ಧನ್ಯತೆ ಅನುಭವಿಸಿದ. ಶಿವ ಆ ಬೇಡನಿಗೆ ‘ಗುಹ’ ಎಂದ ನಾಮಕರಣ ಮಾಡಿ ಶೃಂಗಬೇರಪುರ ಎಂದು ಈ ಪ್ರದೇಶಕ್ಕೆ ರಾಜಧಾನಿಯಾಗಿ ಮಾಡಿ, ಬಹಳಕಾಲ ಸುಖವಾಗಿ ಬಾಳು.

ನನ್ನನ್ನು ಪ್ರಸನ್ನಗೊಳಿಸಿರುವುದರಿಂದ ದೇವತೆಗಳಿಗೂ ನೀನು ಪ್ರಿಯನಾಗುವೆ. ನಿನ್ನ ಮನೆಗೆ ಸಾಕ್ಷಾತ್ ಶ್ರೀರಾಮಚಂದ್ರ ಬರುವನು, ರಾಮಾನುಗ್ರಹ – ದರ್ಶನ – ಭಾಗ್ಯ ನಿನಗಾಗುವುದು ಮೋಕ್ಷವನ್ನು ಹೊಂದುವೆ ಎಂದು ಹರಿಸಿದನು. ಹೀಗೆ ತಿಳಿಯದೇ ಶಿವಪೂಜೆ ಮಾಡಿಯೂ ಬೇಡನಿಗೆ ರಾಮಕೃಪೆ – ಶಿವಸಾಯಜ್ಯ ದೊರೆಯಿತು. ಇನ್ನು ತಿಳಿದು ಶ್ರದ್ಧಾ – ಭಕ್ತಿಯಿಂದ ಈ ‘ಶಿವರಾತ್ರಿ
ವ್ರತ’ ವನ್ನು ಆಚರಿಸಿದರೆ ಖಂಡಿತವಾಗಿಯೂ ಶಿವನ ದಿವ್ಯಾನುಗ್ರಹಕ್ಕೆ ಪಾತ್ರನಾಗುವರು.

ಶಿವರಾತ್ರಿ ಆಚರಣೆಯ ವಿಧಾನ: ಶಿವರಾತ್ರಿ ದಿನದಂದು, ಪ್ರಾತಃಕಾಲದಲ್ಲಿ ಸ್ನಾನಮಾಡಿ, ಮಡಿವಸಧರಿಸಿ, ಸಕಲ ಒಳಿತಿಗಾಗಿ ಶ್ರೀಶಿವ ಪ್ರೀತ್ಯರ್ಥಂ ಶಿವರಾತ್ರೌ ಶಿವಪೂಜಾಂ ಕರಿಷ್ಯೆ||
ಎಂದು ಸಂಕಲ್ಪಮಾಡಿ ಉಪವಾಸದಿಂದಿದ್ದು ಸದಾ ಶಿವನ ಸ್ಮರಣೆ ಮಾಡುತ್ತಾ, ನಾಲ್ಕು ಯಾಮಗಳಲ್ಲೂ ಶಿವನನ್ನು ಪೂಜಿಸಿ, ಜಾಗರಣೆ ಮಾಡಿ ಮರುದಿನ ಅಮಾವಾಸ್ಯೆದಿನ ಪಾರಣೆ ಮಾಡುವುದು ಒಂದು ವಿಧಾನವಾದರೆ, ಇದು ಸಾಧ್ಯವಿಲ್ಲದೇ ಇದ್ದವರು,
ನೀರು – ಫಲಾಹಾರ ಸ್ವೀಕರಿಸಿ, ಉಪವಾಸದಿಂದಿದ್ದು, ಮನೆಯಲ್ಲಿಯ ಶಿವಲಿಂಗವನ್ನೋ ಅಥವಾ ಸಮೀಪದ ಶಿವಾಲಯಕ್ಕೆ ತೆರಳಿ ಶಿವನನ್ನು ರುದ್ರಭಿಷೇಕ, ಶಿವಸಹಸ್ರನಾಮಗಳಿಂದ ತಿಲಾರ್ಚನೆ, ಬಿಲ್ವಾರ್ಚನೆ ಮಾಡಿ, ಲಿಂಗಾಷ್ಟಕ ಮುಂತಾದ
ಸ್ತುತಿಗಳಿಂದ ಸ್ತುತಿಸಿ,

ಬದ್ಧೋಹಂ ಧೈಃ ಪಾಪೈಃ ಸಂಸಾರಭವ ಬಂಧನೈಃ|

ಪತಿತಂ ಮೋಹಜಾಲೇ
ಮಾಂತ್ವಂ ಸಮುದ್ಧರ ಶಂಕರ||

ಎಲೈ ಶಂಕರನೇ ಜನನ ಮರಣ, ಮುಪ್ಪು – ರೋಗಗಳಿಂದ ಕೂಡಿದ ಸಂಸಾರ ಬಂಧನದಿಂದ ನನ್ನನ್ನು ಬಿಡುಗಡೆಗೊಳಿಸು.

ಅನೇಕ ಪಾಪಗಳನ್ನು ಮಾಡಿ, ಮೋಹ ಜಾಲದಲ್ಲಿ ಪತಿತನಾಗಿದ್ದೇನೆ, ನನ್ನನ್ನು ಉದ್ಧರಿಸಿ ಸುಖ – ಶಾಂತಿ ಗಳನ್ನು ನೀಡು ಎಂದು ಪ್ರಾರ್ಥಿಸುವುದು. ಸಮಸ್ತಶಾಸಗಳನ್ನು, ಧರ್ಮಾಚರಣೆಗಳನ್ನು ಚಿಂತಿಸಿ, ‘ಶಿವರಾತ್ರಿವ್ರತ’ವನ್ನು ಸಿದ್ಧಗೊಳಿಸಲಾಗಿದೆ. ಇದು ಸರ್ವೋತ್ಕೃಷ್ಟವಾದುದು, ಅನೇಕ ಪ್ರಕಾರ ವ್ರತ, ವಿವಿಧ ತೀರ್ಥಸ್ನಾನ, ಬಗೆಬಗೆಯ ದಾನ, ಹಲವು ಯಜ್ಞ, ನಾನಾ ಪ್ರಕಾರದ ಜಪ – ತಪಗಳಿಂದ ಉಂಟಾದ ಪುಣ್ಯಗಳೂ ‘ಶಿವರಾತ್ರಿ ವ್ರತ’ಕ್ಕೆ ಸಮವಲ್ಲ.

ಶಿವರಾತ್ರಿವ್ರತದ ಪುಣ್ಯ ಅದಕ್ಕೂ ಮಿಗಿಲಾದದ್ದು, ನಮ್ಮ ಭಾರತೀಯ ಪರಂಪರೆಯಲ್ಲಿ ಶಿವನ ಪೂಜೆಗೆಂದೆ ಪುರಾಣ ಪ್ರಸಿದ್ಧ ವಾದ ಶ್ರೀಸೋಮನಾಥ, ಕಾಶಿ ಮುಂತಾದ ಹನ್ನೆರಡು (ದ್ವಾದಶ) ಜೋತಿರ್ಲಿಂಗ ಗಳು, ಗೋಕರ್ಣವೇ ಮೊದಲಾದ ಪಂಚಕ್ಷೇತ್ರ ಗಳೂ, ಕೂಡಲಸಂಗಮ – ನಂಜುಂಡೇಶ್ವರ, ಸಹಸ್ರಲಿಂಗ, ಯಾಣ ಮುಂತಾದ ಕ್ಷೇತ್ರಗಳಲ್ಲದೇ, ಪ್ರತಿ ಊರಿನಲ್ಲೂ ಶಿವನ ದೇವಾಲಯಗಳಿವೆ.

ಶಿವಾಲಯಗಳಿಲ್ಲದ ಊರೇ ಇಲ್ಲ. ಶಿವನ ಪೂಜೆಗೆ ಯಾವುದೇ ಸಂಪತ್ತು ಬೇಡ, ನಿರ್ಮಲ ಜಲ, ಬಿಲ್ವಪತ್ರೆ, ಸುಲಭದಲ್ಲಿ
ದೊರಕುವ ಎಕ್ಕೆಹೂವು, ಶುದ್ಧ ಭಕ್ತಿಯೊಂದೇ ಸಾಕು. ತನ್ನ ಹಿತಬಯಸುವ, ಕುಟುಂಬದ ಹಿತಕಾಪಾಡುವ ವ್ಯಕ್ತಿ, ಕೊನೇಪಕ್ಷ ‘ಶಿವರಾತ್ರಿ’ ದಿನವಾದರೂ ಶಿವನನ್ನು ಸಂದರ್ಶಿಸಿ, ಶುಭ – ದಿವ್ಯ – ಭೋಗ ಹಾಗೂ ಮೋಕ್ಷ ನೀಡೆಂದು ಆ ಪರಮೇಶ್ವರನಲ್ಲಿ ಪ್ರಾರ್ಥಿಸಿದವನಿಗೆ ಒಳಿತೇ ಆಗುವುದು.